My Blog List

Sunday, November 28, 2010

ಬೀದಿಗಿಳಿದ ಅರಣ್ಯ ವಿದ್ಯಾರ್ಥಿಗಳು..! ಧುರೀಣರೇ ಕಣ್ತೆರೆಯುತ್ತೀರಾ...?

ಬೀದಿಗಿಳಿದ ಅರಣ್ಯ ವಿದ್ಯಾರ್ಥಿಗಳು..!

ಧುರೀಣರೇ ಕಣ್ತೆರೆಯುತ್ತೀರಾ...?



ಕಡೆಗೂ ರಸ್ತೆಗಿಳಿಯುವುದು ಅವರಿಗೆ ಅನಿವಾರ್ಯವಾಯಿತು. ಮುಷ್ಕರ ಆರಂಭಿಸಿದ 63ನೇ ದಿನ, 27 ನವೆಂಬರ್ 2010ರ ಶನಿವಾರ ಶಿರಸಿ ಹಳೆ ಬಸ್ ನಿಲ್ದಾಣ ವೃತ್ತಕ್ಕೆ ಬಂದ ಅವರು ರಸ್ತೆಯ ಮಧ್ಯದಲ್ಲೇ ಕುಳಿತು ಪ್ರತಿಭಟಿಸಿದರು. ಭ್ಯಾನರ್, ಫಲಕಗಳನ್ನು ಪ್ರದರ್ಶಿಸಿದರು. ನ್ಯಾಯಕೊಡಿ ಎಂದು ಮೊರೆ ಇಟ್ಟರು. ಕಡೆಗೂ ಅಲ್ಲಿಂದ ತೆರವುಗೊಳಿಸಲು ಪೊಲೀಸರು ಅವರನ್ನು ಬಂಧಿಸಿ ಕರೆದೊಯ್ಯಬೇಕಾಯಿತು.

ಶಾಂತಿಯುತವಾಗಿ ತಮ್ಮ ಸ್ವಭೂತ ದಹನ, ಮುಖ್ಯಮಂತ್ರಿ, ಮಂತ್ರಿಗಳಿಗೆ ಸ್ವಂತ ನೆತ್ತರ ಪತ್ರ ಬರೆಯುವುದರ ಜೊತೆಗೆ ತಮ್ಮ ತಮ್ಮ ಕಾಲೇಜುಗಳ ಆವರಣದ ಸಮೀಪ ಕುಳಿತು ದಿನಗಟ್ಟಲೆ ನಡೆಸಿದ ಧರಣಿ ಸರ್ಕಾರದ, ಮಂತ್ರಿಗಳ ಕಣ್ಣು ತೆರೆಸಲಿಲ್ಲ.


ದೂರದ ವಿಧಾನಸೌಧದಲ್ಲಿ ತಮ್ಮ ಕುರ್ಚಿಗಳ ಭದ್ರತೆಯನ್ನೇ ಚಿಂತಿಸುತ್ತಾ ಕಾಲ ಕಳೆಯುತ್ತಿದ್ದ ಆಳುವ ಪಕ್ಷದ ಮಂತ್ರಿ- ಶಾಸಕರಿಗಾಗಲೀ, ಸರ್ಕಾರವನ್ನು ಬೀಳಿಸುವುದೊಂದೇ ತಮ್ಮ ಪರಮ ಕರ್ತವ್ಯ ಎಂದು ಭಾವಿಸಿಕೊಂಡು ಅದಕ್ಕಾಗಿಯೇ ಹಗಲಿರುಳು 'ಕಾರಸ್ತಾನ' ಹೆಣೆಯುತ್ತಾ ಶಾಸಕರನ್ನು ರೆಸಾರ್ಟುಗಳಿಗೆ ಒಯ್ಯುತ್ತಾ ಕಾಲ ಕಳೆದ ವಿರೋಧ ಪಕ್ಷಗಳ ಧುರೀಣರಿಗಾಗಲೇ ರಾಜಧಾನಿಗೆ ದೂರದಲ್ಲಿರುವ ಶಿರಸಿ, ಪೊನ್ನಂಪೇಟೆ ಎಂಬ ಪುಟ್ಟ ಪೇಟೆಗಳಲ್ಲಿ 60ಕ್ಕೂ ಹೆಚ್ಚು ದಿನಗಳಿಂದ ತಾವು ಕಲಿತ ವಿದ್ಯೆಗೆ ಮನ್ನಣೆ ಕೊಡಿ ಎಂಬುದಾಗಿ ಈ ಮಕ್ಕಳು ಇಟ್ಟ ಮೊರೆ ಕೇಳಿಸಲಿಲ್ಲ.


ವಲಯ ಅರಣ್ಯ ಅಧಿಕಾರಿ (ಆರ್ ಎಫ್ ಓ) ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಹುದ್ದೆಗಳಿಗೆ ಅರಣ್ಯಶಾಸ್ತ್ರ ಪದವಿಯಾದ ಬಿಎಸ್ಸಿ (ಫಾರೆಸ್ಟ್ರಿ) ಇದನ್ನು ಕನಿಷ್ಠ ವಿದ್ಯಾರ್ಹತೆಯನ್ನಾಗಿ ಮಾಡಬೇಕು ಎಂಬುದಷ್ಟೇ ಈ ವಿದ್ಯಾರ್ಥಿಗಳ ಬೇಡಿಕೆ.

ಇದನ್ನು ಈಡೇರಿಸುವಂತೆ ಆಗ್ರಹಿಸಿ 63 ದಿನಗಳಿಂದ ಧರಣಿ ನಡೆಸುತ್ತಿದ್ದ ಶಿರಸಿ ಅರಣ್ಯ ಕಾಲೇಜಿನ ವಿದ್ಯಾರ್ಥಿಗಳು 27ರಂದು ಶಿರಸಿ ಹಳೆ ಬಸ್‌ನಿಲ್ದಾಣ ವೃತ್ತದಲ್ಲಿ ರಸ್ತೆ ತಡೆ ನಡೆಸಿದರು. ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆಗೊಳಿಸಿದರು.

ಅರಣ್ಯ ಕಾಲೇಜಿನಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿದ ವಿದ್ಯಾರ್ಥಿಗಳು ಹಳೆ ಬಸ್ ನಿಲ್ದಾಣ ವೃತ್ತದಲ್ಲಿ ಮಾನವ ಸರಪಣಿ ನಿರ್ಮಿಸಿ ಬಸ್ ತಡೆದರು. ಬಸ್ ನಿಲ್ದಾಣದಿಂದ ಹೊರ ಬರುತ್ತಿದ್ದ ಬಸ್ಸಿಗೆ ಮುತ್ತಿಗೆ ಹಾಕಿದರು. ರಸ್ತೆಯ ಮೇಲೆ ಕುಳಿತು ನ್ಯಾಯಕ್ಕೆ ಆಗ್ರಹಿಸಿ ಘೋಷಣೆ ಕೂಗಿದರು. ಎಲ್ಲ ನಾಲ್ಕು ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಮಾಡಿದ ಸುಮಾರು ನೂರಕ್ಕೂ ಹೆಚ್ಚಿನ ವಿದ್ಯಾರ್ಥಿ- ವಿದ್ಯಾರ್ಥಿನಿಯರನ್ನು ಪೊಲೀಸರು ಬಂಧಿಸಿ, ಪ್ರತ್ಯೇಕ ಖಾಸಗಿ ವಾಹನದಲ್ಲಿ ಕರೆದೊಯ್ದರು.


ಅರಣ್ಯ ಇಲಾಖೆಯ ವಲಯ ಅರಣ್ಯ ಅಧಿಕಾರಿ ಮತ್ತು ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಹುದ್ದೆಗಳಿಗೆ ಅರಣ್ಯ ಪದವಿಯನ್ನು ಕನಿಷ್ಠ ವಿದ್ಯಾರ್ಹತೆಯಾಗಿ ನಿಗದಿಪಡಿಸಬೇಕು ಎಂದು ಒತ್ತಾಯಿಸಿ ರಾಜ್ಯದ ಶಿರಸಿ ಮತ್ತು ಪೊನ್ನಂಪೇಟೆ ಎರಡೂ ಅರಣ್ಯ ಕಾಲೇಜಿನ ವಿದ್ಯಾರ್ಥಿಗಳು ಧರಣಿ ನಡೆಸುತ್ತಿದ್ದಾರೆ.

ತೋಟಗಾರಿಕೆ, ಕೃಷಿ, ರೇಷ್ಮೆ ಪದವೀಧರರಿಗೆ ಸಂಬಂಧಿಸಿದ ಇಲಾಖೆಯ ತಾಂತ್ರಿಕ ಹುದ್ದೆಗಳಿಗೆ ತತ್ಸಮ ಪದವಿ ನಿಗದಿಪಡಿಸಿದಂತೆ ಅರಣ್ಯ ಪದವೀಧರರಿಗೂ ಅವಕಾಶ ಕಲ್ಪಿಸಬೇಕು. ಜಾರ್ಖಂಡ್, ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಒರಿಸ್ಸಾ ರಾಜ್ಯಗಳಂತೆ ಕರ್ನಾಟಕದಲ್ಲೂ ಅರಣ್ಯ ಇಲಾಖೆಯ ತಾಂತ್ರಿಕ ಹುದ್ದೆಗಳಿಗೆ ಅರಣ್ಯ ಪದವಿಯನ್ನು ಕನಿಷ್ಠ ಮಾನದಂಡವಾಗಿ ಪರಿಗಣಿಸಬೇಕು ಎಂಬುದು ಈ ವಿದ್ಯಾರ್ಥಿಗಳ ಬಹು ವರ್ಷಗಳ ಬೇಡಿಕೆ.

ವಿದ್ಯಾರ್ಥಿಗಳ ಧರಣಿ ಹಿನ್ನೆಲೆಯಲ್ಲಿ ಅರಣ್ಯ ಸಚಿವ ವಿಜಯಶಂಕರ, ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳು, ಕೃಷಿ ವಿಶ್ವವಿದ್ಯಾಲಯಗಳ ಪ್ರಮುಖರು, ವಿದ್ಯಾರ್ಥಿ ಪ್ರತಿನಿಧಿಗಳ ಸಭೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು. ಸಭೆಯಲ್ಲಿ ವಿದ್ಯಾರ್ಥಿಗಳ ಪರ ನಿರ್ಣಯ ದೊರಕದ ಕಾರಣದ ವಿದ್ಯಾರ್ಥಿಗಳು ಧರಣಿ ಮುಂದುವರಿಸಿದ್ದಾರೆ.


ಆಶ್ವಾಸನೆ ಬೇಡ, ಸರ್ಕಾರ ಆದೇಶ ಹೊರಡಿಸಬೇಕು. ಅಲ್ಲಿಯ ತನಕ ಧರಣಿ ಹಿಂಪಡೆಯುವದಿಲ್ಲ ಎಂದು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಶಿವಾನಂದ ಇಂಚಲ ಹೇಳಿದರು. ಅರಣ್ಯ ಕಾಲೇಜಿನ ವಿದ್ಯಾರ್ಥಿಗಳ ಧರಣಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸ್ಥಳೀಯ ಘಟಕ ಬೆಂಬಲ ಸೂಚಿಸಿದೆ.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಷ್ಟ್ರೀಯ ಕಾರ್ಯದರ್ಶಿ ರವಿಕುಮಾರ್ ಅವರೂ ಅರಣ್ಯ ವಿದ್ಯಾರ್ಥಿಗಳನ್ನು ನ್ಯಾಯಯುತ ಬೇಡಿಕೆಯಾಗಿದ್ದು, ಅದನ್ನು ಪರಿಷತ್ ಬೆಂಬಲಿಸುವುದಾಗಿ ಹೇಳಿದ್ದಾರೆ.
ಸಮಿತಿಯ ವರದಿ ವಿದ್ಯಾರ್ಥಿಗಳಿಗೆ ವಿರುದ್ಧವಾಗಿ ಬಂದಲ್ಲಿ ವಿದ್ಯಾರ್ಥಿ ಪರಿಷತ್ ರಾಜ್ಯವ್ಯಾಪಿ ಚಳವಳಿ ನಡೆಸಬೇಕಾಗುತ್ತದೆ ಎಂದೂ ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.


ನೆತ್ರಕೆರೆ ಉದಯಶಂಕರ

(ಫೊಟೋಕೃಪೆ: ಅರಣ್ಯ ಕಾಲೇಜು ವಿದ್ಯಾರ್ಥಿಗಳು ಹಾಗೂ ಪ್ರಜಾವಾಣಿ)

Tuesday, November 2, 2010

ನೆತ್ತರ ಪತ್ರ, ಸ್ವಭೂತ ದಹನ, ಭಿಕ್ಷಾಟನೆ...!

ನೆತ್ತರ ಪತ್ರ, ಸ್ವಭೂತ ದಹನ, ಭಿಕ್ಷಾಟನೆ...!

ಅರಣ್ಯ ವಿದ್ಯಾರ್ಥಿಗಳ ಥರಾವರಿ ಮುಷ್ಕರ



ಈ ವಿದ್ಯಾರ್ಥಿಗಳು ಕಳೆದ 38 ದಿನಗಳಿಂದ ಮುಷ್ಕರ ನಡೆಸುತ್ತಿದ್ದಾರೆ. ಬಸ್ಸಿಗೆ ಕಲ್ಲು ಹೊಡೆದಿಲ್ಲ, ರಸ್ತೆ ತಡೆ ಮಾಡಿ ದಾರಿಹೋಕರಿಗೆ ಅಡ್ಡಿ ಪಡಿಸಿಲ್ಲ, ಇತರರ ಪ್ರತಿಕೃತಿ ಸುಟ್ಟಿಲ್ಲ...


ಬದಲಿಗೆ ಸೆಟ್ಟೆಂಬರ್ 27ರಿಂದ ತಮ್ಮ ಕಾಲೇಜುಗಳ ಎದುರು ಮೌನವಾಗಿ ಕುಳಿತಿದ್ದಾರೆ. ತರಗತಿಗಳನ್ನು ಬಹಿಷ್ಕರಿಸಿದ್ದಾರೆ. ಒಂದು ತಿಂಗಳಲ್ಲಿ ನಮ್ಮ ಸಮಸ್ಯೆ ಬಗೆ ಹರಿಸುತ್ತೇವೆ ಎಂದು ಹೇಳಿದ ಅರಣ್ಯ ಸಚಿವರು ತಮ್ಮ ಮಾತಿಗೆ ಬದ್ಧರಾದಾರು ಎಂದು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಆಗಿದ್ದರೆ ವಿದ್ಯಾರ್ಥಿಗಳ ಇಷ್ಟೊಂದು ಸುದೀರ್ಘ ಮುಷ್ಕರ ರಾಜ್ಯಮಟ್ಟದ ದೊಡ್ಡ ಸುದ್ದಿ ಆಗಿ ಬಿಟ್ಟಿರುತ್ತಿತ್ತು. ಪತ್ರಿಕೆಗಳಲ್ಲಿ ಪ್ರತಿದಿನ ಮುಖ ಪುಟಗಳಲ್ಲಿ ರಾರಾಜಿಸುತ್ತಿತ್ತು. ವಾಹಿನಿಗಳಲ್ಲಿ ದಿನಕ್ಕೆ ಇಪ್ಪತ್ತು ಸಲ ಪ್ರಸಾರ ಆಗಿರುತ್ತಿತ್ತು..!

ರಾಜಕಾರಣಿಗಳು ಈ ಮೊದಲೇ ಇವರ ಮುಷ್ಕರ ಶಿಬಿರಕ್ಕೆ ಎಡತಾಕಿ ಭರವಸೆಗಳ ಮಹಾಪೂರ ಹರಿಸಿ ಬಿಡುತ್ತಿದ್ದರು!

ಆದರೆ ಇವರ ಮುಷ್ಕರದ ಸುದ್ದಿ ಮಾತ್ರ 33 ದಿನಗಳು ಕಳೆದುಹೋಗಿದ್ದರೂ ಸುದ್ದಿಯಾಗುತ್ತಿಲ್ಲ. ತಮ್ಮದೇ ಕುರ್ಚಿ ಉಳಿಸಿಕೊಳ್ಳುವ, ರೆಸಾರ್ಟುಗಳಲ್ಲೇ ಹಗಲಿರುಳು ದಿನಕಳೆಯುತ್ತಿರುವ ಆಳುವ ಪಕ್ಷ ಪ್ರತಿಪಕ್ಷಗಳ ಶಾಸನ ಕರ್ತರಿಗೆ ಇವರ ಅಳಲು ಕೇಳುತ್ತಿಲ್ಲ..!

ಏಕೆಂದರೆ ಈ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಮುಷ್ಕರ ಕುಳಿತಿರುವುದು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಅಲ್ಲ. ದೂರದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮತ್ತು ಮಡಿಕೇರಿ ಜಿಲ್ಲೆಯ ಪೊನ್ನಂಪೇಟೆ ಎಂಬ ಪುಟ್ಟ ಪಟ್ಟಣಗಳಲ್ಲಿ.

ಆದರೆ ಇವರು ಕಲಿಯುತ್ತಿರುವ ಕಾಲೇಜುಗಳು ಎಲ್ಲೆಂದರಲ್ಲಿ ಇರುವ ಕಾಲೇಜುಗಳಲ್ಲ. ನಮ್ಮ ಬದುಕಿನ ಅಸ್ತಿತ್ವಕ್ಕೆ ಅಡಿಗಲ್ಲಾದ ಕೃಷಿಗೆ ಪೂರಕವಾದ ಅರಣ್ಯಗಳ ಸಂರಕ್ಷಣೆ- ಸಂವರ್ಧನೆಯ ಬಗ್ಗೆ ಹೇಳಿಕೊಡುತ್ತಿರುವ ಅರಣ್ಯ ಕಾಲೇಜುಗಳು. ನಮ್ಮ ರಾಜ್ಯದಲ್ಲಿ ಇರುವ ಎರಡೇ ಎರಡು ಕಾಲೇಜುಗಳು ಇವು.

ಈ ವಿದ್ಯಾರ್ಥಿಗಳ ತಮಗೆ ಸ್ವರ್ಗ ತಂದುಕೊಡಿ ಎಂದು ಕೇಳುತ್ತಿಲ್ಲ. ಅವರ ಬೇಡಿಕೆ ಅತ್ಯಂತ ಸರಳವಾದದ್ದು. ಸ್ವಾಮೀ ನಮ್ಮ ಶಿಕ್ಷಣಕ್ಕಾಗಿ ಲಕ್ಷಾಂತರ ರೂಪಾಯಿ, ಜನರ ತೆರಿಗೆ ಹಣವನ್ನು ಸರ್ಕಾರಿ ಅನುದಾನದ ಮೂಲಕ ವೆಚ್ಚ ಮಾಡುತ್ತಿದ್ದೀರಿ. ಅಷ್ಟೊಂದು ವೆಚ್ಚದಲ್ಲಿ ಕಲಿತ ವಿದ್ಯೆಗೆ ಮಾನ್ಯತೆ ಕೊಡಿ.

ಅರಣ್ಯ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುವ ವಲಯ ಪ್ರಾದೇಶಿಕ ಅಧಿಕಾರಿ (ಆರ್ ಎಫ್ ಓ) ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಹುದ್ದೆಗಳಿಗೆ ನೇಮಕಾತಿ ಮಾಡುವಾಗ ನಾವು ಕಲಿಯುತ್ತಿರುವ ಬಿಎಸ್ ಸಿ (ಫಾರೆಸ್ಟ್ರಿ) ಹುದ್ದೆಯನ್ನು ಕನಿಷ್ಠ ಮಾನದಂಡವನ್ನಾಗಿ ಮಾಡಿ ರಾಜ್ಯ ಪತ್ರ ಪ್ರಕಟಣೆ ಹೊರಡಿಸಿ ಅಂತ ಅಷ್ಟೇ.

ಈ ಎರಡು ಕಾಲೇಜುಗಳಿಂದ ಪ್ರತಿವರ್ಷ ಹೊರ ಬರುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯೇನೂ ಎಂಜಿನಿಯರ್, ವೈದ್ಯರ ಹಾಗೂ ಭಾರೀ ಪ್ರಮಾಣದ್ದಲ್ಲ. ಆದರೆ ಅಷ್ಟು ಮಂದಿ ಕನಿಷ್ಠ ಸಂಖ್ಯೆಯ ವಿದ್ಯಾರ್ಥಿಗಳಿಗೂ ಅವರು ಕಲಿತ ಕ್ಷೇತ್ರದಲ್ಲಿ ಕೆಲಸ ಸಿಗುತ್ತಿಲ್ಲ.

 ಅರಣ್ಯ ಇಲಾಖೆಯಲ್ಲಿ ಹುದ್ದೆಗಳು ಇಲ್ಲವೆಂದಲ್ಲ. ಇವರಿಗೆ ಸಿಗುವುದು ಶೇಕಡಾ 50ರಷ್ಟು ಮಾತ್ರ. ಉಳಿದ ಹುದ್ದೆಗಳಿಗೆ ಇಲಾಖಾ ಪ್ರಮೋಷನ್ ಮೂಲಕ ಭರ್ತಿ ಆಗುತ್ತದೆ. ಇಲ್ಲವೇ ಈ ಹುದ್ದೆಗಳಿಗಾಗಿ ಇತರ ಡಿಗ್ರಿ ಪಡೆದ ವಿದ್ಯಾರ್ಥಿಗಳ ಜೊತೆಗೆ ಸ್ಪರ್ಧೆಯಲ್ಲಿ ಈ ವಿದ್ಯಾರ್ಥಿಗಳು ಸೆಣಸಾಡಬೇಕು.

ಅವರಿಗೆ ಕೆಲಸಕ್ಕೆ ಅರಣ್ಯವೇ ಬೇಕಂತ ಏನೂ ಇಲ್ಲ. ಇತರ ಕಡೆಗಳಲ್ಲಿ ಅವರಿಗೆ ಮುಕ್ತ ಪ್ರವೇಶಕ್ಕೆ ಅವಕಾಶಗಳು ಉಂಟು. ಆದರೆ ಇವರಿಗೆ ಕಾಡು ಬಿಟ್ಟರೆ ಕೆಲಸಕ್ಕೆ ಬೇರೆ ದಾರಿಯೇ ಇಲ್ಲ. ಏಕೆಂದರೆ ನಾಲ್ಕು ವರ್ಷಗಳ ಕಾಲ ಇವರು ಕಲಿಯುವುದು ಇದನ್ನೇ- ಕಾಡು ಬೆಳೆಸುವುದು ಹೇಗೆ, ಅದನ್ನು ರಕ್ಷಿಸುವುದು ಹೇಗೆ, ಕಾಡು ಸಸಿಗಳು, ಕಾಡಿನಲ್ಲಿರುವ ಔಷಧದ ಸಸ್ಯಗಳು ಎಲ್ಲಿವೆ, ಅವುಗಳ ಸಂರಕ್ಷಣೆ ಹೇಗೆ, ಕಾಡು ಪ್ರಾಣಿಗಳ ರಕ್ಷಣೆ ಹೇಗೆ ಇತ್ಯಾದಿ. ಈ ಕೆಲಸಗಳನ್ನು ನಾಡಿನಲ್ಲಿ ಎಲ್ಲಾದರೂ ಮಾಡಲಿಕ್ಕೆ ಸಾಧ್ಯವುಂಟಾ ಹೇಳಿ ಸ್ವಾಮಿ?

ಈ ಮಕ್ಕಳು ಮುಷ್ಕರ ಅಂತ ಶಾಮಿಯಾನಾ ಹಾಕಿಕೊಂಡು ಸುಮ್ಮನೇ ಕುಳಿತುಕೊಂಡಿಲ್ಲ. ಶಿರಸಿ ಅರಣ್ಯ ಕಾಲೇಜಿನ ವಿದ್ಯಾರ್ಥಿ- ವಿದ್ಯಾರ್ಥಿನಿಯರು ತಮ್ಮ ರಕ್ತದಿಂದಲೇ ಹಸ್ತಾಕ್ಷರ- ಹೆಬ್ಬೆಟ್ಟಿನ ಗುರುತು ಹಾಕಿ 'ನೆತ್ತರ ಪತ್ರ'ವನ್ನು ಬರೆದು ಅರಣ್ಯ ಸಚಿವರಿಗೆ ರವಾನಿಸಿದ್ದಾರೆ.

ರಾಜಕಾರಣಿಗಳ ತರಹ ಇತರರ ಭೂತ ದಹನ ಮಾಡಿಲ್ಲ. ಬದಲಿಗೆ 'ಸ್ವ ಭೂತ ದಹನ' ಮಾಡಿದ್ದಾರೆ. 'ಬಿಎಸ್ಸ್ ಸಿ (ಅರಣ್ಯ) ಪದವೀಧರನ ಶವ'ಕ್ಕೆ ಅಲಂಕಾರ ಮಾಡಿ ಊರು ತುಂಬಾ ಮೆರವಣಿಗೆ ಮಾಡಿ ಶಾಸ್ತ್ರಕ್ತವಾಗಿ ಅಂತ್ಯಕ್ರಿಯೆ ಮಾಡಿದ್ದಾರೆ..!

ವಿಶ್ವ ವಿದ್ಯಾಲಯದ ಆಡಳಿತ ವರ್ಗ ಕಾಲೇಜಿನ 'ಮೆಸ್' ಬಂದ್ ಮಾಡಿದ್ದಕ್ಕಾಗಿ ಕಾಲೇಜಿನ ಆವರಣದಲ್ಲಿ ಇಲ್ಲವೇ ರಸ್ತೆ ಬದಿಯಲ್ಲೇ ಸೌದೆ ಉರಿಸಿ ಅಡಿಗೆ ಮಾಡಿಕೊಂಡು ಉಣ್ಣುತ್ತಿದ್ದಾರೆ. ಪೊನ್ನಂಪೇಟೆಯಲ್ಲಿ ಅರಣ್ಯ ಕಾಲೇಜಿನ ಮಕ್ಕಳು ಊರೊಳಗೆ ಭಿಕ್ಷಾಟನೆ ಮಾಡಿ ಅದರಿಂದ ಬಂದ ಹಣದಿಂದ ಊಟದ ಖರ್ಚು ನಿಭಾಯಿಸುತ್ತಿದ್ದಾರೆ.

ಇಷ್ಟಾದರೂ...

ಸರ್ಕಾರಕ್ಕೆ, ಸಚಿವರಿಗೆ ಇವರ ಕಷ್ಟ - ಬೇಡಿಕೆ ಅರ್ಥವಾಗಿಲ್ಲ. ಸರ್ಕಾರದ ದಾರಿ ತಪ್ಪಿಸುವ ಅಧಿಕಾರಿಗಳಿಗೆ ತಾವು ಸಮಾಜದಿಂದಲೇ ಇವರ ವಿದ್ಯಾಭ್ಯಾಸಕ್ಕಾಗಿ ವೆಚ್ಚ ಮಾಡುವ ಹಣ ನೀರ ಮೇಲಣ ಹೋಮವಾಗುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ..

ರಾಜಕೀಯ ಡೊಂಬರಾಟದ ಸಚಿತ್ರ ವರದಿ ನೀಡುವ ಮಾಧ್ಯಮಗಳಿಗೆ ಈ ಮಕ್ಕಳ 'ನ್ಯಾಯೋಚಿತ ಹೋರಾಟ'ಕ್ಕೆ ಮಹತ್ವ ನೀಡಿ ಸರ್ಕಾರದ ಕಣ್ಣು ತೆರೆಸಬೇಕೆಂಬ ಅರಿವಾಗಿಲ್ಲ.

ನಮ್ಮ ಸಮಾಜ ಕಣ್ತೆರೆಯುತ್ತದೆಯೇ?

ಇಲ್ಲಿ ಶಿರಸಿ ಅರಣ್ಯ ಕಾಲೇಜಿನ ಮಕ್ಕಳು ನಡೆಸಿದ 'ಸ್ವ ಭೂತ ದಹನ'ದ ಹಾಗೂ ಪೊನ್ನಂಪೇಟೆ ಅರಣ್ಯ ಕಾಲೇಜಿನ ಮಕ್ಕಳು ನಡೆಸಿದ 'ಭಿಕ್ಷಾಟನೆ'ಯ ಚಿತ್ರಗಳಿವೆ. ಚಿತ್ರಗಳನ್ನು ಕ್ಲಿಕ್ ಮಾಡಿದರೆ ಅವುಗಳ ಜೊತೆಗಿನ ಲಿಂಕ್ - ಲೇಖನಗಳು- ಬೇಡಿಕೆಗಳು - ದೊಡ್ಡ ಗಾತ್ರದ ಚಿತ್ರಗಳನ್ನು ನೋಡಬಹುದು.

ನೋಡಿ, ಓದಿ- ಪತ್ರ ಬರೆದು ಸರ್ಕಾರವನ್ನು, ಸಚಿವರನ್ನು ಎಚ್ಚರಿಸುವ ಕೆಲಸ ಮಾಡಿದರೆ ನಿಮ್ಮಿಂದ ನಾಡಿಗೆ ದೊಡ್ಡ  ಉಪಕಾರವಾಗಬಹುದು, ಅರಣ್ಯ ಸಂರಕ್ಷಣೆಯ ವಿದ್ಯೆ ಕಲಿಯಬೇಕೆಂದೇ ಹೊರಟ ವಿದ್ಯಾರ್ಥಿಗಳಿಗೆ ಕೆಲಸ ಸಿಗುವಂತಾಗಬಹುದು.

ನೆತ್ರಕೆರೆ ಉದಯಶಂಕರ



Advertisement