Sunday, February 28, 2010

ಇಂದಿನ ಇತಿಹಾಸ History Today ಜನವರಿ 26

ಇಂದಿನ ಇತಿಹಾಸ

ಜನವರಿ 26

ಹಿರಿಯ ಕಲಾವಿದ ಮತ್ತು ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬಿಜಿಎಂ ಕಲಾಶಾಲೆಯ ಸ್ಥಾಪಕ ಬೋಳಾರ್ ಗುಲಾಂ ಮೊಹಮ್ಮದ್ (ಬಿ.ಜಿ. ಮೊಹಮ್ಮದ್) (89) ಈದಿನ ಮಧ್ಯಾಹ್ನ ಮಂಗಳೂರಿನ ಸ್ವಗೃಹದಲ್ಲಿ ನಿಧನರಾದರು. ಕರ್ನಾಟಕ ಲಲಿತಕಲಾ ಅಕಾಡೆಮಿಯ ಪ್ರಶಸ್ತಿ, ಜಿಲ್ಲಾ ಪ್ರಶಸ್ತಿ, ಪ್ರಸಾದ್ ಆರ್ಟ್ ಗ್ಯಾಲರಿ ಪ್ರಶಸ್ತಿ ಹಾಗೂ ಅನೇಕ ಪ್ರಶಸ್ತಿಗಳು ಅವರಿಗೆ ಲಭಿಸಿತ್ತು. ಬರೇ ಮೂವರು ವಿದ್ಯಾರ್ಥಿಗಳಿಂದ ನಗರದಲ್ಲಿ 1953ರಲ್ಲಿ ಸ್ಥಾಪಿಸಿದ ಬಿಜಿಎಂ ಕಲಾಶಾಲೆ ಸಹಸ್ರಾರು ಕಲಾವಿದರು ರೂಪುಗೊಳ್ಳಲು ಕಾರಣವಾಗಿದೆ. ಮೃತರು ಚಿತ್ರಕಲಾವಿದೆ ಪತ್ನಿ ಅಖ್ತರ್ ಬೇಗಂ, ಮೂವರು ಚಿತ್ರ ಕಲಾವಿದ ಪುತ್ರರನ್ನು ಅಗಲಿದರು.


ಇಂದು ಗಣರಾಜ್ಯದಿನ. 1950ರಲ್ಲಿ ಈದಿನ ಸಂವಿಧಾನವು ಜಾರಿಗೆ ಬರುವುದರೊಂದಿಗೆ ಭಾರತವು ಸಾರ್ವಭೌಮ ಪ್ರಜಾತಾಂತ್ರಿಕ ಗಣರಾಜ್ಯವಾಯಿತು. ಸಾಮ್ರಾಟ ಅಶೋಕನ ಲಾಂಛನ `ಸಿಂಹ'ವನ್ನು ರಾಷ್ಟ್ರೀಯ ಲಾಂಛನವಾಗಿ ಅಂಗೀಕರಿಸಲಾಯಿತು. 1947ರ ಆಗಸ್ಟ್ 15ರಿಂದಲೇ ಜಾರಿಗೆ ಬರುವಂತೆ ಪರಮ ವೀರ ಚಕ್ರ, ಮಹಾ ವೀರ ಚಕ್ರ ಮತ್ತು ವೀರ ಚಕ್ರ ಪ್ರಶಸ್ತಿಗಳನ್ನು ಸ್ಥಾಪಿಸಲಾಯಿತು. 1965ರಲ್ಲಿ ಹಿಂದಿಯನ್ನು ರಾಷ್ಟ್ರಭಾಷೆಯಾಗಿ ಅಂಗೀಕರಿಸಲಾಯಿತು. 1930ರಲ್ಲಿ ಈದಿನವನ್ನು `ಪೂರ್ಣ ಸ್ವರಾಜ್' ದಿನವಾಗಿ ಆಚರಿಸಲಾಗಿತ್ತು. ಈ ದಿನವನ್ನು ಪೂರ್ಣ ಸ್ವರಾಜ್ ದಿನವಾಗಿ ಆಚರಿಸಲು 1930ರ ಜನವರಿ 17ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ನಿರ್ಧಾರ ಕೈಗೊಂಡಿತ್ತು.

2009: 'ಸಾವಯವ ಕೃಷಿಗೆ ಸರ್ಕಾರ ಹೆಚ್ಚಿನ ಉತ್ತೇಜನ ನೀಡಲಿದ್ದು ಮುಂದಿನ ಬಜೆಟಿನಲ್ಲಿ 200 ಕೋಟಿ ರೂಪಾಯಿ ಮೀಸಲಿಡಲಾಗುವುದು' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಂಗಳೂರಿನಲ್ಲಿ ಘೋಷಿಸಿದರು. ಕೃಷಿ ಇಲಾಖೆ ಮತ್ತು ರಾಜ್ಯ ಸಾವಯವ ಕೃಷಿ ಮಿಷನ್ ವತಿಯಿಂದ ವಿಧಾನಸೌಧದ ಮುಂಭಾಗದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಬೃಹತ್ 'ಕೃಷಿ ಚೈತನ್ಯ ಸಮಾವೇಶ' ಮತ್ತು 'ನೇಗಿಲ ಯೋಗಿಯ ಪ್ರತಿಜ್ಞಾ ಸ್ವೀಕಾರ' ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾವಯವ ಕೃಷಿಗೆ ಉತ್ತೇಜನ ನೀಡಲು ಕಳೆದ ಬಾರಿ ಬಜೆಟ್‌ನಲ್ಲಿ 200 ಕೋಟಿ ರೂಪಾಯಿ ಅನುದಾನ ನೀಡಲಾಗಿತ್ತು. ಆದರೆ ಈ ಬಾರಿ ಬಜೆಟಿನಲ್ಲಿ ಅನುದಾನವನ್ನು ಹೆಚ್ಚಿಸಿ ಇಡೀ ರಾಜ್ಯವನ್ನು ಸಾವಯವ ಕೃಷಿಯತ್ತ ಕೊಂಡೊಯ್ಯಲಾಗುವುದು ಎಂದರು. 'ಸಾವಯವ ಕೃಷಿ ಮಿಷನ್' ವೆಬ್‌ಸೈಟಿಗೆ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ.ಅಬ್ದುಲ್ ಕಲಾಂ ಚಾಲನೆ ನೀಡಿ 'ಇಂದಿನ ಆರ್ಥಿಕ ಹಿಂಜರಿತದ ಸ್ಥಿತಿಯಲ್ಲಿ ಕೃಷಿ ಹಾಗೂ ಕೃಷಿಯೇತರ ಉತ್ಪನ್ನಗಳಿಗೆ ಸರ್ಕಾರ ಹೆಚ್ಚು ಪ್ರೋತ್ಸಾಹ ನೀಡಬೇಕು' ಎಂದು ಹೇಳಿದರು. ದೇಶದ ವಿವಿಧ ರಾಜ್ಯಗಳಲ್ಲಿ ಸಾವಯವ ಕೃಷಿಯಿಂದ ಯಶಸ್ಸು ಗಳಿಸಿದ ಯಶೋಗಾಥೆಯನ್ನು ಕಲಾಂ ವಿವಿರಿಸಿದರು. ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ, ಗುಜರಾತ್, ಸಿಕ್ಕಿಂ, ರಾಜಸ್ಥಾನ, ಈಗ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ರಾಸಾಯನಿಕ ಕೃಷಿಯನ್ನು ಬಿಟ್ಟು ಸಾವಯವ ಕೃಷಿಯತ್ತ ಹೊರಳಿದ್ದಾರೆ ಹಾಗೂ ಈ ಕೃಷಿಯಿಂದ ಅವರೆಲ್ಲ ಕಡಿಮೆ ಖರ್ಚಿನಲ್ಲಿ ಸಾಕಷ್ಟು ಲಾಭವನ್ನು ಪಡೆಯುತ್ತಿದ್ದಾರೆ ಎಂದು ವಿವರಿಸಿದರು.

2009: ಮುಂಬೈ ಮೇಲಿನ ನವೆಂಬರ 26 ಉಗ್ರಗಾಮಿ ದಾಳಿಯಲ್ಲಿ ಹುತಾತ್ಮರಾದ ಬೆಂಗಳೂರಿನ ಎನ್‌ಎಸ್‌ಜಿ ಕಮಾಂಡೋ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ರಾಷ್ಟ್ರಕ್ಕಾಗಿ ಬಲಿದಾನ ಮಾಡಿದ 11 ಮಂದಿ ಭದ್ರತಾ ಸಿಬ್ಬಂದಿಯನ್ನು ರಾಷ್ಟ್ರವು ಗಣರಾಜ್ಯೋತ್ಸವ ಸಂದರ್ಭದಲ್ಲಿ ಮರಣೋತ್ತರ ಅಶೋಕ ಚಕ್ರ ಪ್ರಶಸ್ತಿ ನೀಡಿ ಗೌರವಿಸಿತು. ಮುಂಬೈ ದಾಳಿ ಕಾಲದಲ್ಲಿ ಹುತಾತ್ಮರಾದ ಮಹಾರಾಷ್ಟ್ರ ಪೊಲೀಸ್ ಎಟಿಎಸ್ ಮುಖ್ಯಸ್ಥ ಹೇಮಂತ ಕರ್ಕರೆ, ಅಡಿಷನಲ್ ಕಮೀಷನರ್ ಅಶೋಕ ಕಮ್ತೆ, ಮುಂಬೈ ಪೊಲೀಸ್ ಇನ್‌ಸ್ಪೆಕ್ಟರ್ ವಿಜಯ ಸಾಲಸ್ಕರ್, ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್ ತುಕಾರಾಮ್ ಓಂಬಳೆ ಮತ್ತು ಹವಿಲ್ದಾರ್ ಗಜೇಂದರ್ ಸಿಂಗ್ ಶಾಂತಿಕಾಲದ ಉನ್ನತ ಶೌರ್ಯ ಪದಕಕ್ಕೆ ಭಾಜನರಾದ ಮುಂಬೈ ದಾಳಿ ಕಾಲದ ಇತರ ಹುತಾತ್ಮ ಯೋಧರು. ಕರ್ಕರೆ, ಸಾಲಸ್ಕರ್ ಮತ್ತು ಓಂಬಳೆ ಅವರಿಗೆ ನೀಡಲಾದ ಪ್ರಶಸ್ತಿಯನ್ನು ಅವರ ಪತ್ನಿಯರು ಸ್ವೀಕರಿಸಿದರೆ, ಮೇಜರ್ ಸಂದೀಪ್ ಉನ್ನಿಕೃಷ್ಣನ್‌ಗೆ ನೀಡಲಾದ ಪ್ರಶಸ್ತಿಯನ್ನು ಕಂಬನಿದುಂಬಿದ ಅವರ ತಾಯಿ ಸ್ವೀಕರಿಸಿದರು. ರಾಜಧಾನಿಯಲ್ಲಿ ಕಳೆದ ವರ್ಷ ಸೆಪ್ಟೆಂಬರಿನಲ್ಲಿ ಬಟಾಲಾ ಹೌಸಿನಲ್ಲಿ ಭಯೋತ್ಪಾದಕರ ಜೊತೆಗಿನ ಕಾಳಗದಲ್ಲಿ ಮೃತರಾದ ದೆಹಲಿ ಪೊಲೀಸ್ ಇನ್‌ಸ್ಪೆಕ್ಟರ್ ಮೋಹನ್ ಚಂದ್ ಅವರಿಗೂ ಮರಣೋತ್ತರ ಪ್ರಶಸ್ತಿ ಪ್ರದಾನ ಮಾಡಲಾಯಿತು.

2009: ಪಶ್ಚಿಮ ದೇಶಗಳಲ್ಲಿ 'ನೌಕರಿ ಕಡಿತ ಶಿಕ್ಷೆ' ಮುಂದುವರಿಯಿತು. ಡಚ್ ಬ್ಯಾಂಕಿಂಗ್-ವಿಮಾ ಕಂಪೆನಿ 'ಐಎನ್‌ಜಿ' 7 ಸಾವಿರ ಸಿಬ್ಬಂದಿ ಕೈಬಿಡುವುದಾಗಿ ಪ್ರಕಟಿಸಿತು. ಸಿಇಒ ಮೈಕೆಲ್ ಟಿಲ್ಮಂಟ್‌ಗೆ ಹುದ್ದೆ ತೊರೆಯಲು ಸೂಚಿಸಿತು. ಐಎನ್‌ಜಿ ಬ್ಯಾಂಕ್ ಅಲ್ಪ ಲಾಭ ಗಳಿಸಿದ್ದರೆ, ವಿಮಾ ವಿಭಾಗ 90 ಕೋಟಿ ಯೂರೋ ನಷ್ಟ ಕಂಡಿತು. ದ ಹೇಗ್ ನೆಲೆಯ ಎಲೆಕ್ಟ್ರಾನಿಕ್ಸ್ ಕಂಪೆನಿ 'ಪಿಲಿಪ್ಸ್' 24.20 ಕೋಟಿ ಡಾಲರ್ ನಷ್ಟ ಅನುಭವಿಸಿ, 6 ಸಾವಿರ ನೌಕರರಿಗೆ ಪಿಂಕ್ ಸ್ಲಿಪ್ ನೀಡಲು ನಿರ್ಧರಿಸಿತು.

2009: ಉಸಿರಾಟ ಮತ್ತು ನಡೆದಾಡಲು ತೊಂದರೆ ಉಂಟು ಮಾಡುತ್ತಿದ್ದ ಹೃದಯದ ಎಡ ಭಾಗದ ಕವಾಟವನ್ನು ತೆಗೆದು ಬದಲಿ ಕವಾಟವನ್ನು ಅಳವಡಿಸಿ ಬೆಂಗಳೂರು ಸೇಂಟ್ ಜಾನ್ಸ್ ಆಸ್ಪತ್ರೆಯ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿರುವುದಾಗಿ ಪ್ರಕಟಿಸಿದರು. ಹೃದಯ ಬಡಿತವನ್ನು ಕ್ಷಣ ಮಾತ್ರವೂ ನಿಲ್ಲಿಸದೇ ನಡೆಸಲಾದ ವಿಶಿಷ್ಟ ರೀತಿಯ ಶಸ್ತ್ರಚಿಕಿತ್ಸೆಯಿಂದ ತಮಿಳುನಾಡು ಮೂಲದ ದೇವಿಕಾ (32) ಅವರು ಗುಣಮುಖರಾಗಿದ್ದು, ಸಹಜ ಜೀವನ ನಡೆಸಬಹುದು. ಎಲ್ಲವೂ ಮುಗಿಯಿತು ಎಂಬ ನಿರಾಶೆಯಲ್ಲಿದ್ದ ದೇವಿಕಾ ಈಗ ದೀರ್ಘ ಕಾಲ ಜೀವನ ನಡೆಸಬಹುದು. ಕಡಿಮೆ ಖರ್ಚಿನಲ್ಲಿ ಶಸ್ತ್ರಚಿಕಿತ್ಸೆ ನಡೆದದ್ದು, ದೇವಿಕಾ ಅವರ ಕುಟುಂಬ ಸದಸ್ಯರಲ್ಲಿ ಸಂತಸ ಮೂಡಿಸಿದೆ ಎಂದು ವೈದ್ಯರು ಹೇಳಿದರು.

2009: ಹಿರಿಯ ಕಲಾವಿದ ಮತ್ತು ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬಿಜಿಎಂ ಕಲಾಶಾಲೆಯ ಸ್ಥಾಪಕ ಬೋಳಾರ್ ಗುಲಾಂ ಮೊಹಮ್ಮದ್ (ಬಿ.ಜಿ. ಮೊಹಮ್ಮದ್) (89) ಈದಿನ ಮಧ್ಯಾಹ್ನ ಮಂಗಳೂರಿನ ಸ್ವಗೃಹದಲ್ಲಿ ನಿಧನರಾದರು. ಕರ್ನಾಟಕ ಲಲಿತಕಲಾ ಅಕಾಡೆಮಿಯ ಪ್ರಶಸ್ತಿ, ಜಿಲ್ಲಾ ಪ್ರಶಸ್ತಿ, ಪ್ರಸಾದ್ ಆರ್ಟ್ ಗ್ಯಾಲರಿ ಪ್ರಶಸ್ತಿ ಹಾಗೂ ಅನೇಕ ಪ್ರಶಸ್ತಿಗಳು ಅವರಿಗೆ ಲಭಿಸಿತ್ತು. ಬರೇ ಮೂವರು ವಿದ್ಯಾರ್ಥಿಗಳಿಂದ ನಗರದಲ್ಲಿ 1953ರಲ್ಲಿ ಸ್ಥಾಪಿಸಿದ ಬಿಜಿಎಂ ಕಲಾಶಾಲೆ ಸಹಸ್ರಾರು ಕಲಾವಿದರು ರೂಪುಗೊಳ್ಳಲು ಕಾರಣವಾಗಿದೆ. ಮೃತರು ಚಿತ್ರಕಲಾವಿದೆ ಪತ್ನಿ ಅಖ್ತರ್ ಬೇಗಂ, ಮೂವರು ಚಿತ್ರ ಕಲಾವಿದ ಪುತ್ರರನ್ನು ಅಗಲಿದರು.

2009: ಹಿಂದು ಧಾರ್ಮಿಕ ಸಂಪ್ರದಾಯ ಆಚರಣೆ ಇರುವಂತಹ ಯೋಗ ಅಭ್ಯಾಸಕ್ಕೆ ಮುಸ್ಲಿಮರಿಗೆ ಇಂಡೋನೇಷ್ಯಾದ ಹಿರಿಯ ಇಸಾಮ್ಲಿಕ್ ಸಂಘಟನೆಯೊಂದು ಆಡಳಿತಾತ್ಮಕ ನಿಷೇಧ ಹೇರಿತು. ಪೂರ್ವ ಸುಮಾತ್ರದಲ್ಲಿ ನಡೆದ ಮೂರು ದಿನಗಳ ಸಭೆಯಲ್ಲಿ ಭಾಗವಹಿಸಿದ್ದ ಇಂಡೋನೇಷ್ಯಾ ಕೌನ್ಸಿಲ್ ಆಫ್ ಉಲೇಮಾಸ್ (ಎಂಯುಐ) ಸಂಘಟನೆ ಮುಖಂಡರು ಯೋಗ ಮಾಡುವುದರ ವಿರುದ್ಧ ಫತ್ವಾ ಹೊರಡಿಸಿದರು. ಮುಸ್ಲಿಮರ ನಂಬಿಕೆಯನ್ನು ದುರ್ಬಲಗೊಳಿಸುವುದರಿಂದ ಮಂತ್ರಗಳ ಉಚ್ಚಾರವನ್ನು ಇಸ್ಲಾಮಿನಲ್ಲಿ ನಿಷೇಧಿಸಲಾಗಿದೆ ಎಂದು ಮುಖಂಡರು ಹೇಳಿದರು. 'ಮುಸ್ಲಿಮರು ಸಹ ಯೋಗ ಮಾಡಬಹುದು. ಆದರೆ ಅದು ಕೇವಲ ದೈಹಿಕ ವ್ಯಾಯಾಮವಾಗಿರಬೇಕು. ಆದರೆ ಅದು ಮಂತ್ರಗಳ ಉಚ್ಚಾರ ಇಲ್ಲವೇ ಧ್ಯಾನವನ್ನು ಒಳಗೊಂಡಿರಬಾರದು' ಎಂದು ಎಂಯುಐ ಅಧ್ಯಕ್ಷ ಮಾರುಫ್ ಅಮಿನ್ ಹೇಳಿದರು.

2009: ಸುಮಾರು 5,500 ವರ್ಷಗಳಿಗೂ ಹಳೆಯದಾದ ನವಶಿಲಾಯುಗಕ್ಕೆ ಸೇರಿದ್ದ ಮಾನವ ನಿರ್ಮಿತ ಗುಹೆ ಮತ್ತು ಮಡಿಕೆ ಮಾಡುವ ಸ್ಥಳಗಳನ್ನು ಪತ್ತೆ ಹಚ್ಚಿರುವುದಾಗಿ ಚೀನೀ ಪ್ರಾಕ್ತನ ತಜ್ಞರು ಪ್ರಕಟಿಸಿದರು. ವಾಯವ್ಯ ಚೀನಾದ ಶಾಂನ್ಷಿ ಪ್ರಾಂತದ ನದಿಯೊಂದರ ಕಡಿದಾದ ಪ್ರದೇಶದಲ್ಲಿ 17 ಗುಹಾಂತರ ಮನೆಗಳು ಕಂಡು ಬಂದಿವೆ ಎಂದು ಪ್ರಾಚ್ಯಶಾಸ್ತ್ರಜ್ಞ ವಾಂಗ್ ವೇಲಿನ್ ಹೇಳಿದರು. ಕ್ರಿ.ಪೂ. 35,00 ಮತ್ತು 3000 ರ ಅವಧಿಯಲ್ಲಿ ಮನೆಗಳು ನಿರ್ಮಾಣವಾಗಿವೆ ಎಂದು ನಂಬಲಾಯಿತು.

2008: ಚೀನಾದಲ್ಲಿ ದಶಕದಲ್ಲೇ ಕಂಡರಿಯದಂತಹ ಭಾರಿ ಹಿಮಪಾತ ಸಂಭವಿಸಿ, ದೇಶದ ಹಲವು ಭಾಗಗಳಲ್ಲಿ ಜನಜೀವನ ತೀವ್ರ ಅಸ್ತವ್ಯಸ್ತಗೊಂಡಿತು. ಕೇಂದ್ರ ಭಾಗದ ಹುನಾನ್ ಪ್ರಾಂತದಲ್ಲಿ ಹಿಮಪಾತದಿಂದ ವಿದ್ಯುತ್ ಪೂರೈಕೆಗೆ ಧಕ್ಕೆ ಉಂಟಾಗಿ, 136 ವಿದ್ಯುತ್ ಚಾಲಿತ ಪ್ರಯಾಣಿಕ ರೈಲುಗಳು ಸ್ಥಗಿತಗೊಂಡವು ಇಲ್ಲವೇ ವಿಳಂಬವಾಗಿ ಚಲಿಸಿದವು. ಕೆಟ್ಟುಹೋದ ವಿದ್ಯುತ್ ಪೂರೈಕೆ ವ್ಯವಸ್ಥೆ ಸರಿಪಡಿಸಲು 10 ಸಾವಿರ ತಾಂತ್ರಿಕ ಸಿಬ್ಬಂದಿಯನ್ನು ನಿಯೋಜಿಸಲಾಯಿತು. ಬೀಜಿಂಗ್ ಮತ್ತು ಗ್ವಾಂಗ್ ಜುವಾ ನಗರಗಳನ್ನು ಸಂಪರ್ಕಿಸುವ ರೈಲು ಮಾರ್ಗದಲ್ಲೂ 40 ಸಾವಿರಕ್ಕೂ ಅಧಿಕ ಪ್ರಯಾಣಿಕರು ವಿವಿಧ ನಿಲ್ದಾಣಗಳಲ್ಲಿ ಸಿಕ್ಕಿ ಹಾಕಿಕೊಂಡರು.

2008: ಹಿರಿಯ ಕಾಂಗ್ರೆಸ್ಸಿಗ, ವಿಧಾನ ಪರಿಷತ್ ಸದಸ್ಯ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬ್ಲೇಸಿಯಸ್ ಎಂ. ಡಿಸೋಜ (69) ಅಲ್ಪಕಾಲದ ಅನಾರೋಗ್ಯದಿಂದ ಮಂಗಳೂರು ನಗರದ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾದರು. ಬ್ಲೇಸಿ ಪತ್ನಿ ಐರಿನ್ ಜಾಯ್ಸ್ ಡಿಸೋಜ 1979ರಲ್ಲೇ ನಿಧನರಾಗಿದ್ದರು. 1938ರ ಫೆಬ್ರವರಿ 22ರಂದು ಜನಿಸಿದ ಬ್ಲೇಸಿಯಸ್ ಡಿಸೋಜಾ ಅವರು ಬಿಕಾಂ, ಎಲ್ ಎಲ್ ಬಿ ಪದವೀಧರರು. 1980ರಿಂದ 1985ರ ತನಕ ವಿಧಾನ ಪರಿಷತ್ ಸದಸ್ಯ, 1985ರಿಂದ 1994ರ ತನಕ ವಿಧಾನಸಭೆ ಸದಸ್ಯ, ಎಂ.ವೀರಪ್ಪ ಮೊಯಿಲಿ ಅವರ ಮಂತ್ರಿ ಮಂಡಲದಲ್ಲಿ 1991-92ರಲ್ಲಿ ರಾಜ್ಯ ಕಾನೂನು ಸಚಿವ, 1992ರಿಂದ 1994ರ ತನಕ ರಾಜ್ಯ ಕಾರ್ಮಿಕ ಸಚಿವರಾಗಿ ಸೇವೆ ಸಲ್ಲಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ 1979ರಿಂದ 1992ರ ತನಕ ಹಾಗೂ 2001ರಿಂದ 2007ರ ತನಕ ಕರ್ತವ್ಯ ನಿರ್ವಹಿಸಿದ್ದರು. 1998ರಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಉಪಾಧ್ಯಕ್ಷರಾಗಿದ್ದರು. 2004ರಿಂದ ವಿಧಾನ ಪರಿಷತ್ ಸದಸ್ಯರಾಗಿದ್ದರು.

2008: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ ಟಿ ಟಿ ಇ ನಾಯಕ ಮುರುಳಿಧರನ್ ಅಲಿಯಾಸ್ ಕರ್ನಲ್ ಕರುಣಾ ಅವರಿಗೆ ಬ್ರಿಟನ್ ನ್ಯಾಯಾಲಯ ಒಂಬತ್ತು ತಿಂಗಳ ಸಜೆ ವಿಧಿಸಿತು. ನಕಲಿ ರಾಜತಾಂತ್ರಿಕ ಪಾಸ್ ಪೋರ್ಟ್ ಹೊಂದಿದ ಆರೋಪದ ಮೇಲೆ ಇವರನ್ನು ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಬಂಧಿಸಲಾಗಿತ್ತು.

2008: ಫ್ರಾನ್ಸ್ ಅಧ್ಯಕ್ಷ ನಿಕೊಲಸ್ ಸರ್ಕೋಜಿ ಅವರು ಆಗ್ರಾದ ಅಮರ ಪ್ರೇಮದ ಸಂಕೇತ ವಿಶ್ವವಿಖ್ಯಾತ ತಾಜ್ ಮಹಲಿಗೆ ಭೇಟಿ ನೀಡಿದರು. ಆದರೆ ಅವರ ಗೆಳತಿ ಹಾಗೂ ಖ್ಯಾತ ರೂಪದರ್ಶಿ ಕಾರ್ಲಾ ಬ್ರೂನಿ ಮಾತ್ರ ಜೊತೆಗೆ ಇರಲಿಲ್ಲ.

2008: ಭಾರತ ದೇಶದ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿ ಶೀತಮಾರುತದ ತೀವ್ರತೆ ಹೆಚ್ಚಿತು. ಗುಜರಾತಿನ ಸಬರ್ ಕಾಂತ ಜಿಲ್ಲೆಯಲ್ಲಿ ಕೊರೆಯುವ ಚಳಿಯಿಂದಾಗಿ ಮೂವರು ಮೃತರಾದರು. ಕಳೆದ ಹತ್ತು ವರ್ಷಗಳಲ್ಲಿ ಗುಜರಾತಿನಲ್ಲಿ ಚಳಿ ಇಷ್ಟೊಂದು ತೀವ್ರತೆ ಪಡೆದದ್ದು ಇದೇ ಮೊದಲು.

2008: ರೈಲ್ವೆ ಅಪಘಾತ ತಪ್ಪಿಸಿದ ಚಿಕ್ಕಮಗಳೂರಿನ ಮಂಜುನಾಥ್, 200 ಮಂದಿ ಬಡ ಹೃದ್ರೋಗಿಗಳಿಗೆ ಧನ ಸಹಾಯ ಮಾಡಿದ ಬಿ.ಶಾಂತಿಲಾಲ್ ಕಂಕಾರಿಯಾ ಸೇರಿದಂತೆ 11 ಮಂದಿ ಸಾಧಕರಿಗೆ ಹಾಗೂ ಎರಡು ಸಂಸ್ಥೆಗಳಿಗೆ ಗಣರಾಜ್ಯೋತ್ಸವದ ಪ್ರಯುಕ್ತ ಬೆಂಗಳೂರಿನಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.

2008: ಅಡಿಲೇಡಿನಲ್ಲಿ ಒಂದು ದಿನ ಹಿಂದೆ ಅತಿ ಹೆಚ್ಚು ವಿಕೆಟ್ ಪತನಕ್ಕೆ ಕಾರಣರಾದ ವಿಕೆಟ್ ಕೀಪರ್ ಎನ್ನುವ ವಿಶ್ವ ದಾಖಲೆ ಶ್ರೇಯ ಪಡೆದ ಆಸ್ಟ್ರೇಲಿಯಾದ ಆಡಮ್ ಗಿಲ್ ಕ್ರಿಸ್ಟ್ ಈದಿನ ದಿಢೀರನೆ ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದರು. ಹಿಂದಿನ ದಿನವಷ್ಟೇ ದಕ್ಷಿಣ ಆಫ್ರಿಕಾದ ಮಾರ್ಕ್ ಬೌಷರ್ ಅವರನ್ನು ಹಿಂದೆ ಹಾಕಿ 414 `ಬಲಿ'ಗಳ ಸಾಧನೆಯೊಂದಿಗೆ ಶ್ರೇಷ್ಠ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದರು. ಭಾರತ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸಿನಲ್ಲಿಯೇ ಈ ವಿಶ್ವ ದಾಖಲೆ ನಿರ್ಮಿಸಿದ್ದರು.

2008: ಇಷ್ಟಾರ್ಥ ಸಿದ್ಧಿಯಾದ ಮೇಲೆ ದೇವತೆಗೆ ಹರಕೆ ತೀರಿಸುವ ಸಲುವಾಗಿ 24 ಅಡಿ ಎತ್ತರದ ರಥದ ಮೇಲಿಂದ ಮಕ್ಕಳನ್ನು ಕೆಳಗೆ ಎಸೆಯುವ ವಿಶಿಷ್ಟ ಸಂಪ್ರದಾಯ ವಿಜಾಪುರ ಜಿಲ್ಲೆಯಲ್ಲಿ ಜೀವಂತವಾಗಿದ್ದು ಸಮೀಪದ ವಂದಾಲ ಗ್ರಾಮದಲ್ಲಿ ಈದಿನ ಜಾತ್ರೆಯಲ್ಲಿ 20ಕ್ಕೂ ಹೆಚ್ಚು ಮಕ್ಕಳನ್ನು ರಥದಿಂದ ಕೆಳಕ್ಕೆ ಎಸೆಯಲಾಯಿತು. ಜಿಲ್ಲಾ ಕೇಂದ್ರದಿಂದ 60 ಕಿಮೀ ದೂರದಲ್ಲಿನ ವಂದಾಲ ಗ್ರಾಮದಲ್ಲಿ ಕ್ರಿಸ್ತಶಕ 1825ರಿಂದ ಗ್ರಾಮ ದೇವತೆ ಬನಶಂಕರಿ ಜಾತ್ರಾ ಮಹೋತ್ಸವ ನಡೆಯುತ್ತ ಬಂದಿದ್ದು, ರಥೋತ್ಸವದ ದಿನದಂದು ಗ್ರಾಮಸ್ಥರು ತಮ್ಮ ಹರಕೆ ಈಡೇರಿದ್ದಕ್ಕಾಗಿ ಹಸುಗೂಸುಗಳನ್ನು ಎಸೆಯುವ ಸಂಪ್ರದಾಯ ಪೋಷಿಸಿಕೊಂಡು ಬಂದಿದ್ದರು.

2008: ಅದ್ಭುತ ಟೆನಿಸ್ ಆಟದ ಪ್ರದರ್ಶನ ನೀಡಿದ ರಷ್ಯಾದ ಮರಿಯಾ ಶರ್ಪೋವಾ ಮೆಲ್ಬೋರ್ನಿನಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಸ್ಲಾಮ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಚಾಂಪಿಯನ್ ಪಟ್ಟವನ್ನು ತಮ್ಮದಾಗಿಸಿದರು. ರಾಡ್ ಲೇವರ್ ಅರೆನಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ 5ನೇ ಶ್ರೇಯಾಂಕದ ಶರ್ಪೋವಾ 7-5, 6-3 ರಲ್ಲಿ ಸರ್ಬಿಯಾದ ಅನಾ ಇವನೋವಿಕ್ ಅವರನ್ನು ಮಣಿಸಿ ಇದೇ ಮೊದಲ ಬಾರಿಗೆ ಮೆಲ್ಬೋರ್ನ್ ಪಾರ್ಕಿನ `ರಾಣಿ' ಎನಿಸಿಕೊಂಡರು. 20ರ ಹರೆಯದ ರಷ್ಯನ್ ಚೆಲುವೆ ವೃತ್ತಿಜೀವನದಲ್ಲಿ ಪಡೆದ ಮೂರನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಇದು. ಈ ಹಿಂದೆ 2004ರಲ್ಲಿ ವಿಂಬಲ್ಡನ್ ಹಾಗೂ 2006ರಲ್ಲಿ ಅಮೆರಿಕ ಓಪನ್ನಿನಲ್ಲಿ ಅವರು ಪ್ರಶಸ್ತಿ ಜಯಿಸಿದ್ದರು.

2008: ಬೆಳಗಾವಿ ಹೋಟೆಲ್ ಉದ್ಯಮಿ ಕೆ. ಅಣ್ಣೆ ಭಂಡಾರಿ ಅವರಿಗೆ ಬೆಂಗಳೂರಿನಲ್ಲಿ ಮಹಾಕವಿ ರತ್ನಾಕರವರ್ಣಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ದಕ್ಷಿಣ ಕನ್ನಡ ಜೈನ ಮೈತ್ರಿ ಕೂಟವು ಬಸವನಗುಡಿ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲ್ಯಾಣಮಂಟಪದಲ್ಲಿ ಏರ್ಪಡಿಸಿದ್ದ ಕೂಟದ 23ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಕುಲಪತಿ ಡಾ.ಬಿ.ಎ. ವಿವೇಕ ರೈ ಪ್ರಶಸ್ತಿ ಪ್ರದಾನ ಮಾಡಿದರು.

2008: ಗಣರಾಜ್ಯೋತ್ಸವದ ದಿನ ಬೆಳಗ್ಗೆ ಕೊಂಕಣಿ ಸಾಂಸ್ಕೃತಿಕ ಸಂಸ್ಥೆ ಮಾಂಡ್ ಸೊಭಾಣ್, ಮಂಗಳೂರಿನಲ್ಲಿ ನಿರಂತರ ಸಮೂಹ ಗಾಯನದ ಮೂಲಕ ವಿಶ್ವದಾಖಲೆ ಸ್ಥಾಪಿಸುವ ಸಾಹಸಕ್ಕೆ ಚಾಲನೆ ನೀಡಿತು. ಬೆಳಗಿನ ಚಳಿ ಕರಗುತ್ತಿದ್ದಂತೆಯೇ ಶಕ್ತಿನಗರ ಕಲಾಂಗಣದ ಆಂಫಿ ಥಿಯೇಟರಿನಲ್ಲಿ ಸರಿಯಾಗಿ ಆರು ಗಂಟೆಗೆ `ಕೊಂಕಣಿ ನಿರಂತರಿ' ಆರಂಭವಾಯಿತು. ವಿಶ್ವದಾಖಲೆಗೆ ಸೇರುವ ಯತ್ನವಾಗಿ ಸತತ 40 ಗಂಟೆಗಳ ಈ ನಿರಂತರ ಸಮೂಹ ಗಾಯನ ಕಾರ್ಯಕ್ರಮ `ಕೊಂಕಣಿ ನಿರಂತರಿ'ಗೆ ಬಿಷಪ್ ರೆ.ಡಾ. ಅಲೋಶಿಯಸ್ ಪಾವ್ಲ್ ಡಿ'ಸೋಜ ಶುಭ ಹಾರೈಸಿದರು.

2008: ಇನ್ಫೋಸಿಸ್ಸಿನ ಎನ್. ಆರ್. ನಾರಾಯಣ ಮೂರ್ತಿ ಅವರಿಗೆ ಫ್ರಾನ್ಸ್ ಸರ್ಕಾರದ ಅತಿ ದೊಡ್ಡ ನಾಗರಿಕ ಗೌರವವಾದ `ಆಫೀಸರ್ ಆಫ್ ದಿ ಲೆಜನ್ ಆಫ್ ಆನರ್' ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

2008: ಪ್ರಜಾಕೋಟಿಗೆ ಸುಭದ್ರತೆಯ ಭರವಸೆ ನೀಡುವ ಸೇನಾ ಶಕ್ತಿಯ ಪ್ರದರ್ಶನ ಮತ್ತು ದೇಶದ ಬಹುಸಂಸ್ಕೃತಿಯ ಪರಂಪರೆಯನ್ನು ಬಿಂಬಿಸುವ ವರ್ಣರಂಜಿತ ಸ್ಥಬ್ಧಚಿತ್ರಗಳ ಮೆರವಣಿಗೆಯೊಂದಿಗೆ ನಡೆದ 59ನೇ ಗಣರಾಜ್ಯೋತ್ಸವ ಪೆರೇಡಿಗೆ ದೇಶ ಸಾಕ್ಷಿಯಾಯಿತು. ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಸೇನೆಯಿಂದ ಗೌರವವಂದನೆ ಸ್ವೀಕರಿಸುವ ಮೂಲಕ ಈ ಗೌರವ ಪಡೆದ ಮೊದಲ ಮಹಿಳೆ ಎಂಬ ದಾಖಲೆಯೂ ಈ ಬಾರಿಯ ಗಣರಾಜ್ಯೋತ್ಸವ ಇತಿಹಾಸಕ್ಕೆ ಸೇರ್ಪಡೆಯಾಯಿತು.

2007: ಬೆಂಗಳೂರು ನಗರದ ಕರ್ನಾಟಕ ಸಾಬೂನು ಕಾರ್ಖಾನೆ ಮುಂಭಾಗದ ಜಯಚಾಮರಾಜ ಒಡೆಯರ್ ವೃತ್ತದಲ್ಲಿ ಸ್ವಾತಂತ್ರ್ಯ ಯೋಧೆ ರಾಣಿ ಅಬ್ಬಕ್ಕೆ ದೇವಿ ಅವರ ಪ್ರತಿಮೆಯನ್ನು ಆರೋಗ್ಯ ಸಚಿವ ಆರ್. ಅಶೋಕ ಅನಾವರಣಗೊಳಿಸಿದರು.

2007: ಹುದ್ದೆಯ ಸೃಷ್ಟಿ ಅಥವಾ ಮಂಜೂರಾತಿ ಕಾರ್ಯಾಂಗದ ವಿಶೇಷ ಅಧಿಕಾರ. ನ್ಯಾಯಾಲಯಗಳು ಇಂತಹ ವಿಚಾರಗಳಲ್ಲಿ ಮಧ್ಯಪ್ರವೇಶ ಮಾಡಲಾಗದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು. ಮಹಿಳೆಯೊಬ್ಬಳು ಯೋಜನೆಯೊಂದರ ಒಂದೇ ಹುದ್ದೆಯಲ್ಲಿ 29 ವರ್ಷಗಳ ಕಾಲ ದುಡಿದಿದ್ದರೂ, ಕೆಲಸದ ಕಾಯಮಾತಿ ಪಡೆಯುವ ಯಾವುದೇ ಹಕ್ಕನ್ನು ಆಕೆ ಹೊಂದುವುದಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟ ಪಡಿಸಿತು. ಪ್ರತಿವಾದಿ ಕೆ. ರಾಜ್ಯಲಕ್ಷ್ಮಿ ಸಲ್ಲಿಸಿದ್ದ ಮನವಿಯನ್ನು ಅಂಗೀಕರಿಸಿ ಆಕೆಯ ನೇಮಕಾತಿಯನ್ನು ಕಾಯಂಗೊಳಿಸುವಂತೆ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ ಮತ್ತು ಚೆನ್ನೈ ಹೈಕೋರ್ಟ್ ನೀಡಿದ್ದ ತೀರ್ಪನ್ನು ತಳ್ಳಿಹಾಕುತ್ತಾ ಸುಪ್ರೀಂಕೋರ್ಟ್ ಈ ತೀರ್ಪು ನೀಡಿತು. ಕೆ. ರಾಜ್ಯಲಕ್ಷ್ಮಿ ಅವರು 1975ರ ಏಪ್ರಿಲ್ 1ರಂದು ಒಂದು ವರ್ಷದ ಯೋಜನೆಗಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಿಂದ (ಐಸಿಎಂಆರ್) ನೇಮಕಗೊಂಡಿದ್ದರು. ಕೇಂದ್ರ ಸರ್ಕಾರದಿಂದ ಲಭಿಸುವ ಅನುದಾನವನ್ನು ಅನುಸರಿಸಿ ವರ್ಷದಿಂದ ವರ್ಷಕ್ಕೆ ಈ ನೇಮಕಾತಿಯನ್ನು ವಿಸ್ತರಿಸಬಹುದು ಎಂಬುದು ನೇಮಕಾತಿಯ ಷರತ್ತಾಗಿತ್ತು. ಈ ಯೋಜನೆ ಹಲವಾರು ವರ್ಷಗಳವರೆಗೆ ಮುಂದುವರೆಯುತ್ತಾ ಸಾಗಿತು. ಹೀಗಾಗಿ ರಾಜ್ಯಲಕ್ಷ್ಮಿ ತನ್ನ ಸೇವೆಯನ್ನು ಕಾಯಂಗೊಳಿಸಬೇಕು ಎಂದು ಮನವಿ ಸಲ್ಲಿಸಿದರು. ಆದರೆ ಐಸಿಎಂಆರ್ ಆಕೆಯ ಮನವಿಯನ್ನು ತಳ್ಳಿಹಾಕಿತು. ರಾಜ್ಯಲಕ್ಷ್ಮಿ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದರು. 1998ರ ಫೆಬ್ರವರಿ 25ರಂದು ನ್ಯಾಯಮಂಡಳಿಯು ಆಕೆಯ ಸೇವೆಯನ್ನು ಕಾಯಂಗೊಳಿಸುವಂತೆ ಆದೇಶ ನೀಡಿತು. ಐಸಿಎಂಆರ್ ಈ ತೀರ್ಪನ್ನು ಚೆನ್ನೈ ಹೈಕೋರ್ಟಿನಲ್ಲಿ ಪ್ರಶ್ನಿಸಿತು. ರಾಜ್ಯಲಕ್ಷ್ಮಿ ಕೂಡಾ 1975ರ ಏಪ್ರಿಲ್ 1ರಿಂದ ಅನ್ವಯವಾಗುವಂತೆಯೇ ತನ್ನ ಸೇವೆಯನ್ನು ಕಾಯಂಗೊಳಿಸಬೇಕು ಎಂದು ಕೋರಿ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದರು. ನ್ಯಾಯದ ಆಧಾರದಲ್ಲಿ ರಾಜ್ಯಲಕ್ಷ್ಮಿ ಅವರ ಸೇವೆಯನ್ನು ನೇಮಕಾತಿ ದಿನದಿಂದಲೇ ಕಾಯಂಗೊಳಿಸಬೇಕು ಎಂದು ಆಕೆ ಪರ ವಕೀಲರು ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಎರಡೂ ಕಡೆ ವಾದಿಸಿದ್ದರು. ಸೇವಾ ನ್ಯಾಯಶಾಸ್ತ್ರದ ಪ್ರಕಾರ ಯಾವುದೇ ಒಂದು ಹುದ್ದೆಯ ಸೃಷ್ಟಿ ಅಥವಾ ಮಂಜೂರಾತಿ ಕಾರ್ಯಾಂಗದ ವಿಶೇಷ ಅಧಿಕಾರ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿದ ಸುಪ್ರೀಂಕೋರ್ಟ್ ಮಂಡಳಿಯ ಮನವಿಯನ್ನು ಎತ್ತಿ ಹಿಡಿಯಿತು.

2007: ಒರಿಸ್ಸಾದ ದಕ್ಷಿಣ ಮಲ್ಕಾನ್ ಗಿರಿ ಜಿಲ್ಲೆಯ ಎಂವಿ-126 ಗ್ರಾಮದ ಬಳಿ ರಾಜ್ಯ ಹೆದ್ದಾರಿಯಲ್ಲಿ ಮಾವೋವಾದಿ ಉಗ್ರಗಾಮಿಗಳು ಹುದುಗಿಸಿ ಇಟ್ಟಿದ್ದ ಭೂಸ್ಫೋಟಕ ಸ್ಫೋಟಗೊಂಡ ಪರಿಣಾಮವಾಗಿ ಒಬ್ಬ ಸಿ ಆರ್ ಪಿ ಎಫ್ ಯೋಧ ಮೃತನಾಗಿ ಇತರ ಇಬ್ಬರು ಯೋಧರು ಗಾಯಗೊಂಡರು. ಸಿ ಆರ್ ಪಿ ಎಫ್ ಮತ್ತು ಪೊಲೀಸ್ ಪಡೆಗಳು ತೆಲರಾಯ್ ಮತ್ತು ಎಂವಿ-126 ಗ್ರಾಮದ ನಡುವೆ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ಈ ಸ್ಫೋಟ ಸಂಭವಿಸಿತು. ಗಣರಾಜ್ಯ ದಿನೋತ್ಸವವನ್ನು ವಿರೋಧಿಸಿ ಮಾವೋವಾದಿಗಳು ಹೆದ್ದಾರಿಯಲ್ಲಿ ಕಡಿದುರುಳಿಸಿದ್ದ ಅಸಂಖ್ಯಾತ ಮರಗಳನ್ನು ತೆರವುಗೊಳಿಸುವ ಸಲುವಾಗಿ ಸಿ ಆರ್ ಪಿ ಎಫ್ ಮತ್ತು ಪೊಲೀಸರು ಹೊರಟಿದ್ದಾಗ ಈ ಘಟನೆ ನಡೆಯಿತು.

2007: ವಿದ್ಯಾರ್ಥಿಗಳಲ್ಲಿನ ಪರೀಕ್ಷೆ ಒತ್ತಡ ಭಯವನ್ನು ತಗ್ಗಿಸಲು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು `ಸಾಕ್ಷಾತ್' ಎಂಬ ಆನ್ ಲೈನ್ ಸಂವಾದ ಶಿಕ್ಷಣ ಯೋಜನೆಯನ್ನು ಆರಂಭಿಸಿತು. ಈ ಸೌಲಭ್ಯವನ್ನು 2006ರ ಅಕ್ಟೋಬರ್ 30ರಂದು ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ರಾಷ್ಟ್ರಕ್ಕೆ ಸಮರ್ಪಿಸಿದ್ದರು. ವಿದ್ಯಾರ್ಥಿಗಳು ಈ ಅಂತರ್ಜಾಲ ವಿಳಾಸಗಳಲ್ಲಿನ "ಟಿಣಜಡಿಚಿಛಿಣ' ಪದವನ್ನು ಒತ್ತಿ ನಂತರ "ಣಚಿಟಞ ಣಠ ಣಜಚಿಛಿಜಡಿ' ಆಯ್ಕೆಯನ್ನು ಒತ್ತುವ ಮೂಲಕ ಆನ್ ಲೈನ್ ಸಂವಾದದಲ್ಲಿ ಪಾಲ್ಗೊಳ್ಳಬಹುದು. ವಿದ್ಯಾರ್ಥಿಗಳು ಕೇಳುವ ವಿವಿಧ ವಿಷಯಗಳಿಗೆ ಅಂತರ್ಜಾಲದ ಮೂಲಕ ತಜ್ಞರು ಉತ್ತರ ನೀಡುವ ವ್ಯವಸ್ಥೆ ಇದು. ಅಂತರ್ಜಾಲದ ವಿಳಾಸ: "www.sakshat.ac.in ಅಥವಾ http.sakshat.ignou.ac.in/sakshat/index.aspx ಅಥವಾ http/www.sakshat.gov.in'.

2006: ಕರ್ನಾಟಕದ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ಮುಂದುವರೆಸುವ ಬಗ್ಗೆ ಜನತಾದಳ (ಎಸ್) ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ. ದೇವೇಗೌಡ ಮತ್ತು ಅವರ ಪುತ್ರ ಎಚ್. ಡಿ. ಕುಮಾರಸ್ವಾಮಿ ನಡುವಣ ಮಾತುಕತೆ ಮುರಿದು ಬಿದ್ದು, ಇಬ್ಬರೂ ಕವಲುದಾರಿಯಲ್ಲಿ ಸಾಗಿದರು. ಇದರಿಂದ ಜೆಡಿ(ಎಸ್) - ಬಿಜೆಪಿ ಪರ್ಯಾಯ ಸರ್ಕಾರ ರಚನೆಗೆ ಇದ್ದ ತೊಡಕು ಬಗೆಹರಿದಂತಾಯಿತು.

2006: ಬಿಹಾರಿನ ಹಿಂದಿನ ವಿಧಾನಸಭೆ ವಿಸರ್ಜನೆಗೆ ಶಿಫಾರಸು ಮಾಡಿ ವಿವಾದಕ್ಕೆ ಸಿಲುಕಿಕೊಂಡು ಸುಪ್ರೀಂಕೋರ್ಟಿನಿಂದ ಛೀಮಾರಿಗೆ ಒಳಗಾಗಿದ್ದ ಬಿಹಾರ ರಾಜ್ಯಪಾಲ ಬೂಟಾಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಪಟ್ನಾದ ಚಾರಿತ್ರಿಕ ಗಾಂಧಿ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜವಂದನೆ ಸ್ವೀಕರಿಸಿದ ಕೆಲವು ಗಂಟೆಗಳ ಬಳಿಕ ಈ ದಿಢೀರ್ ಬೆಳವಣಿಗೆ ಸಂಭವಿಸಿತು.

2006: ಪ್ಯಾಲೆಸ್ಟೈನ್ ಸಂಸದೀಯ ಚುನಾವಣೆಯಲ್ಲಿ ಇಸ್ಲಾಮಿಕ್ ಉಗ್ರಗಾಮಿ ಸಂಘಟನೆ ಹಮಾಸ್ ಬಹುತೇಕ ಸ್ಥಾನಗಳನ್ನು ಗೆದ್ದು ಸರ್ಕಾರ ರಚನೆಯ ಹಾದಿಯಲ್ಲಿ ಮುನ್ನಡೆಯಿತು. ಒಂದು ದಶಕದಿಂದ ಆಡಳಿತದಲ್ಲಿರುವ ಫತಾಹ್ ಪಕ್ಷದ ಎಲ್ಲ ಸಚಿವರು ಸಂಪುಟಕ್ಕೆ ರಾಜೀನಾಮೆ ಸಲ್ಲಿಸಿದರು.

2006: ಗಡಿನಾಡ ಗಾಂಧಿ ಖಾನ್ ಅಬ್ದುಲ್ ಗಫಾರ್ ಖಾನ್ ಅವರ ಮಗ , ಭಾರತದ ಪರಮಾಪ್ತ ಮಿತ್ರ ಖಾನ್ ಅಬ್ದುಲ್ ವಲೀಖಾನ್ (89) ಪಾಕಿಸ್ಥಾನದ ಪೇಶಾವರದಲ್ಲಿ ನಿಧನರಾದರು.

2006: ಖ್ಯಾತ ವಿಜ್ಞಾನಿ ಡಾ. ವಿ.ಪಿ. ನಾರಾಯಣನ್ ನಂಬಿಯಾರ್ ತಮಿಳುನಾಡಿದ ಚೆನ್ನೈಯಲ್ಲಿ ನಿಧನರಾದರು. ಫೊಟೋಗ್ರಫಿಗೆ ಸಂಬಂಧಿಸಿದ ರಸೆಲ್ ಎಫೆಕ್ಟ್ ಮೇಲಿನ ಸಂಶೋಧನೆಗಾಗಿ ಅವರು ವಿಶ್ವದಾದ್ಯಂತ ವಿಜ್ಞಾನಿಗಳ ಪ್ರಶಂಸೆಗೆ ಪಾತ್ರರಾಗಿದ್ದರು. ರಸೆಲ್ ಎಫೆಕ್ಟ್ ಮೇಲೆ ಈ ಹಿಂದೆ ರಸೆಲ್ ಹಾಗೂ ಅಮೆರಿಕ ವಿಜ್ಞಾನಿ ಎಚ್.ಡಿ. ಟೈಮನ್ ಅವರು ಕೈಗೊಂಡಿದ್ದ ಸಂಶೋಧನೆ ಸರಿಯಿಲ್ಲ ಎಂದು ನಾರಾಯಣನ್ ತಮ್ಮ ಪ್ರಯೋಗಗಳ ಮೂಲಕ ಸಾಧಿಸಿ ತೋರಿಸಿದ್ದರು.

1944: ಕಲಾವಿದ ಶ್ರೀನಿವಾಸ ಕೆ.ಆರ್. ಜನನ.

1920: ಗುಡಿಕಾರ ಚಿತ್ರಕಲೆಯಲ್ಲಿ ಅಪೂರ್ವ ಸಾಧನೆ ಮಾಡಿದ ಜಡೆ ಮಂಜುನಾಥಪ್ಪ ಅವರು ಪಾಂಡಪ್ಪ- ವರದಮ್ಮ ದಂಪತಿಯ ಮಗನಾಗಿ ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಜಡೆ ಗ್ರಾಮದಲ್ಲಿ ಜನಿಸಿದರು.

1918: ನಿಕೊಲಾಯಿ ಸಿಯಾಸೆಸ್ಕು (1918-1989) ಹುಟ್ಟಿದ ದಿನ. ಈತ 1965ರಿಂದ 1989ರಲ್ಲಿ ನಡೆದ ಕ್ರಾಂತಿಯಲ್ಲಿ ಪದಚ್ಯುತಿಗೊಂಡು ಕೊಲೆಗೀಡಾಗುವವರೆಗೆ ರೊಮೇನಿಯಾದ ಸರ್ವಾಧಿಕಾರಿಯಾಗಿದ್ದ.

1915: ಹೆಸರಾಂತ ಕವಿ ಕೆ.ಎಸ್. ನರಸಿಂಹಸ್ವಾಮಿ (1915-2003) ಹುಟ್ಟಿದ ದಿನ.

1912: ಕಲಾವಿದ ಎಲ್. ನಾಗೇಶ ರಾಯರ ಜನನ.

1905: ಜಗತ್ತಿನಲ್ಲೇ ಅತ್ಯಂತ ದೊಡ್ಡದೆಂದು ಹೇಳಲಾದ ಗುಲಿನನ್ ವಜ್ರವು ದಕ್ಷಿಣ ಆಫ್ರಿಕಾದ ಟ್ರಾನ್ಸ್ ವಾಲಿನ ಪ್ರೀಮಿಯರ್ ಗಣಿಯಲ್ಲಿ ಪತ್ತೆಯಾಯಿತು. ಕ್ಯಾಪ್ಟನ್ ವೆಲ್ಸ್ ಕಂಡು ಹಿಡಿದ ಈ ವಜ್ರದ ಕಚ್ಚಾ ರೂಪದ ತೂಕ 3,106 ಕ್ಯಾರೆಟ್ಟುಗಳು. ಮೂರು ವರ್ಷಗಳ ಹಿಂದೆ ಈ ಗಣಿಯನ್ನು ಪತ್ತೆ ಹಚ್ಚಿದ ಸರ್ ಥಾಮಸ್ ಗುಲಿನಿನ್ ಹೆಸರನ್ನೇ ಈ ವಜ್ರಕ್ಕೆ ಇಡಲಾಯಿತು.

1556: ಪಾವಟಿಗೆಗಳಿಂದ ಬಿದ್ದು ತಲೆಗೆ ಆದ ತೀವ್ರ ಗಾಯಗಳ ಪರಿಣಾಮವಾಗಿ ಮೊಘಲ್ ಚಕ್ರವರ್ತಿ ಹುಮಾಯೂನ್ ತನ್ನ 48ನೇ ವಯಸ್ಸಿನಲ್ಲ್ಲಿಲಿ ಮೃತನಾದ.

ಇಂದಿನ ಇತಿಹಾಸ History Today ಜನವರಿ 25


ಇಂದಿನ ಇತಿಹಾಸ

ಜನವರಿ 25

ಅಡಿಲೇಡಿನಲ್ಲಿ ಆಸ್ಟ್ರೇಲಿಯಾ - ಟೀಮ್ ಇಂಡಿಯಾ ನಡುವಣ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಕ್ರಿಕೆಟ್ ಪಂದ್ಯದ ಮೊದಲ ಇನ್ನಿಂಗ್ಸಿನಲ್ಲಿ ಮಿಚೆಲ್ ಜಾನ್ಸನ್ ಬೌಲಿಂಗಿನಲ್ಲಿ ಅನಿಲ್ ಕುಂಬ್ಳೆ ನೀಡಿದ ಕ್ಯಾಚ್ ಪಡೆದ ಆಡಮ್ ಗಿಲ್ ಕ್ರಿಸ್ಟ್ ವಿಕೆಟ್ ಹಿಂಬದಿ ಹೆಚ್ಚು ಬಲಿ ಪಡೆದ ವಿಕೆಟ್ ಕೀಪರ್ ಎಂಬ ಹೆಗ್ಗಳಿಗೆ ಪಾತ್ರರಾಗಿ ವಿಶ್ವದಾಖಲೆ ನಿರ್ಮಿಸಿದರು. ಅವರು ದಕ್ಷಿಣ ಆಫ್ರಿಕಾದ ಮಾರ್ಕ್ ಬೌಷರ್ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ಅಳಿಸಿ ಹಾಕಿದರು.

2009: ಹಲವು ಔಷಧೀಯ ಗುಣಗಳನ್ನು ಹೊಂದಿರುವ ಗೋಮೂತ್ರದ ಅಧಿಕ ಉತ್ಪಾದನೆಗಾಗಿ ಉತ್ತರಾಖಂಡ ಸರ್ಕಾರವು ರಾಜ್ಯದ ಎಲ್ಲೆಡೆ 100 ಗೋಮೂತ್ರ ಕೇಂದ್ರಗಳನ್ನು ಸ್ಥಾಪಿಸಲು ಮುಂದಾಯಿತು. ಇದರಿಂದ ಪಶುಸಂಗೋಪನೆಯಲ್ಲಿ ತೊಡಗಿದ ರೈತರು ಗೋಮೂತ್ರ ಮಾರಾಟ ಮಾಡಿ ಹಣ ಗಳಿಸಲು ಅವಕಾಶ ಲಭಿಸಿತು. 'ಗೋಮೂತ್ರದಿಂದ ಔಷಧ ತಯಾರಿ ಮಾಡುವ ಹಾಗೂ ಅವುಗಳನ್ನು ಇತರ ರಾಜ್ಯಗಳಿಗೆ ಕಳುಹಿಸಿಕೊಡುವ ಯೋಜನೆಗೆ ರಾಜ್ಯ ಸರ್ಕಾರ ಅಂತಿಮ ಸ್ಪರ್ಶ ನೀಡುತ್ತಿದೆ' ಎಂದು ಪಶುಸಂಗೋಪನೆ ಮತ್ತು ಕೃಷಿ ಸಚಿವ ತ್ರಿವೇಂದ್ರ ರಾವತ್ ಹೇಳಿದರು. ರಾಜ್ಯದ ಹಲವೆಡೆ ಈಗಾಗಲೇ ಇಂತಹ ಕೇಂದ್ರಗಳು ಆರಂಭವಾಗಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸರ್ಕಾರವು ಈ ನಿಟ್ಟಿನಲ್ಲಿ ಆಯುರ್ವೇದ ವೈದ್ಯರನ್ನೂ ಸಂಪರ್ಕಿಸಿ ಸೂಕ್ತ ಸಲಹೆ ಸೂಚನೆ ಪಡೆದು ಕೇಂದ್ರಗಳ ಸ್ಥಾಪನೆಗೆ ಗಂಭೀರ ಪ್ರಯತ್ನ ನಡೆಸಿದೆ ಎಂದು ಅವರು ತಿಳಿಸಿದರು.

2009: ನವದೆಹಲಿಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವ ಸಂಚು ರೂಪಿಸಿದ್ದ ಇಬ್ಬರು ಶಂಕಿತ ಪಾಕಿಸ್ಥಾನಿ ಉಗ್ರರು ನೊಯಿಡಾದಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಪೊಲೀಸರ ಗುಂಡಿಗೆ ಬಲಿಯಾದರು.

2009: ಲಾಹೋರಿನ ಮುರ್ದಿಕೆಯಲ್ಲಿ ಲಷ್ಕರ್ -ಎ-ತೊಯ್ಬಾದ ಧಾರ್ಮಿಕ ಘಟಕ ಜಮಾತ್ ಉದ್-ದಾವಾದ (ಜೆಯುಡಿ) ಪ್ರಧಾನ ಕಚೇರಿಯನ್ನು ಪಾಕಿಸ್ಥಾನ ಸರ್ಕಾರ ತನ್ನ ಅಧೀನಕ್ಕೆ ತೆಗೆದುಕೊಂಡಿತು. ಇತ್ತೀಚೆಗೆ ತಾನೆ ಪಾಕಿಸ್ಥಾನದ ಪಂಜಾಬಿನ ಪ್ರಾಂತೀಯ ಸರ್ಕಾರದಿಂದ ಮುಖ್ಯ ಆಡಳಿತಗಾರರಾಗಿ ನೇಮಕಗೊಂಡ ಖಕನ್ ಬಾಬರ್ ಅವರು ಜೆಯುಡಿ ಕೇಂದ್ರ ಕಚೇರಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ಲಾಹೋರ್ ಆಯುಕ್ತರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಧಾರ್ಮಿಕ ವ್ಯವಹಾರ ಖಾತೆ ಅಧಿಕಾರಿಯೊಬ್ಬರು ಹಾಗೂ ಪೊಲೀಸ್ ತಂಡದ ಸಮ್ಮುಖದಲ್ಲಿ ಜೆಯುಡಿ ಕಚೇರಿ ಸ್ವಾಧೀನ ಪ್ರಕ್ರಿಯೆ ನಡೆಯಿತು.

2009: ಹೃದಯದ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾದ ಪ್ರಧಾನಿ ಮನಮೋಹನ ಸಿಂಗ್ ನಿರೀಕ್ಷೆಗಿಂತ ತ್ವರಿತವಾಗಿ ಚೇತರಿಸಿಕೊಂಡರು. ಅವರಿಗೆ ಅಳವಡಿಸಿದ್ದ ಕೃತಕ ಉಸಿರಾಟದ ಸಾಧನವನ್ನು ಈದಿನ ತೆಗೆದು ಹಾಕಲಾಯಿತು.

2009: ಕರ್ನಾಟಕ ಮೂಲದ ಮಾಧವನ್ ನಾಯರ್ (ಪದ್ಮವಿಭೂಷಣ), ರಾಮಚಂದ್ರ ಗುಹಾ (ಪದ್ಮಭೂಷಣ) ಹಾಗೂ ಐಶ್ವರ್ಯಾ ರೈ ಬಚ್ಚನ್, ಬನ್ನಂಜೆ ಗೋವಿಂದಾಚಾರ್ಯ, ಮತ್ತೂರು ಕೃಷ್ಣಮೂರ್ತಿ, ಶಶಿ ದೇಶಪಾಂಡೆ, ಪಂಕಜ್ ಅಡ್ವಾಣಿ, ಬಿ. ಆರ್. ಶೆಟ್ಟಿ ಅವರಿಗೆ ಪದ್ಮಶ್ರೀ ಸಹಿತ 133 ಮಂದಿ ಈ ಬಾರಿಯ ಪದ್ಮ ಪ್ರಶಸ್ತಿಗಳಿಗೆ ಆಯ್ಕೆಯಾದರು. ದೇಶದ ಎರಡನೇ ಅತ್ಯುನ್ನತ ನಾಗರಿಕ ಸನ್ಮಾನ 'ಪದ್ಮವಿಭೂಷಣ'ಕ್ಕೆ ಖ್ಯಾತ ಪರಿಸರವಾದಿ ಸುಂದರಲಾಲ್ ಬಹುಗುಣ, ಯಶಸ್ವಿ 'ಚಂದ್ರಯಾನ'ದ ರೂವಾರಿ ಮಾಧವನ್ ನಾಯರ್, ಮಿಷನರಿ ಆಫ್ ಚಾರಿಟೀಸ್‌ನ ಮುಖ್ಯಸ್ಥೆ ಸಿಸ್ಟರ್ ನಿರ್ಮಲಾ, ಖ್ಯಾತ ಅಣು ವಿಜ್ಞಾನಿ ಅನಿಲ್ ಕಾಕೋಡ್ಕರ್ ಸಹಿತ 10 ಮಂದಿ ಪಾತ್ರರಾದರು. ದೇಶದ ಅತ್ಯುತ್ನತ ನಾಗರಿಕ ಪ್ರಶಸ್ತಿ 'ಭಾರತ ರತ್ನ'ಕ್ಕೆ ಪಂಡಿತ್ ಭೀಮಸೇನ್ ಜೋಶಿ ಅವರ ಹೆಸರನ್ನು ಕಳೆದ ನವೆಂಬರಿನಲ್ಲೇ ಪ್ರಕಟಿಸಲಾಗಿತ್ತು. ಪದ್ಮವಿಭೂಷಣಕ್ಕೆ ಪಾತ್ರರಾದ ಇತರರೆಂದರೆ ಸ್ವೀಡನ್ ಮೂಲದ ವಿಶ್ವ ಸಮುದ್ರಯಾನ ವಿಶ್ವವಿದ್ಯಾಲಯದ ಪ್ರಥಮ ಕುಲಪತಿ ಚಂದ್ರಿಕಾ ಪ್ರಸಾದ್ ಶ್ರೀವಾಸ್ತವ, ಖ್ಯಾತ ಇತಿಹಾಸಕಾರ ಡಿ. ಪಿ. ಚಟ್ಟೋಪಾಧ್ಯಾಯ, ವೈದ್ಯಕೀಯ ರಂಗದ ಜಸ್ಬೀರ್ ಸಿಂಗ್ ಬಜಾಜ್ ಮತ್ತು ಪುರುಷೋತ್ತಮ ಲಾಲ್, ಮಾಜಿ ರಾಜ್ಯಪಾಲ ಗೋವಿಂದ ನಾರಾಯಣ. ಮೂರನೇ ಅತ್ಯುನ್ನತ ಸನ್ಮಾನ 'ಪದ್ಮಭೂಷಣ'ಕ್ಕೆ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಬಂಗಾರದ ಪದಕ ವಿಜೇತ ಶೂಟರ್ ಅಭಿನವ್ ಬಿಂದ್ರಾ, ರಾಷ್ಟ್ರೀಯ ಜ್ಞಾನ ಆಯೋಗದ ಅಧ್ಯಕ್ಷ ಸ್ಯಾಮ್ ಪಿತ್ರೋಡಾ, ಅರ್ಥಶಾಸ್ತ್ರಜ್ಞ ಇಷಾರ್ ಜಜ್ ಅಹುವ್ಲಾಲಿಯಾ. ಹಿರಿಯ ಪತ್ರಕರ್ತ ಶೇಖರ್ ಗುಪ್ತಾ ಸಹಿತ 30 ಮಂದಿ ಪಾತ್ರರಾದರು.

2009: ಸಶಸ್ತ್ರ ಪಡೆ ಸಿಬ್ಬಂದಿಗೆ 9 ಮರಣೋತ್ತರ ಅಶೋಕ ಚಕ್ರ, 13 ಕೀರ್ತಿ ಚಕ್ರ ಪ್ರಶಸ್ತಿ ಸೇರಿದಂತೆ ಒಟ್ಟು 428 ಶೌರ್ಯ ಪ್ರಶಸ್ತಿಗಳಿಗೆ ರಾಷ್ಟ್ರಪತಿ ಅನುಮೋದನೆ ನೀಡಿದರು. ಮುಂಬೈ ಮೇಲಿನ ಉಗ್ರರ ದಾಳಿಯಲ್ಲಿ ಹುತಾತ್ಮರಾದ ರಾಷ್ಟ್ರೀಯ ಭದ್ರತಾ ಪಡೆಯ ಕಮಾಂಡೊ ಮೇಜರ್ ಸಂದೀಪ್ ಉನ್ನಿಕೃಷ್ಣನ್, ಮಹಾರಾಷ್ಟ್ರ ಪೊಲೀಸ್ ಅಧಿಕಾರಿಗಳಾದ ಹೇಮಂತ್ ಕರ್ಕರೆ, ಅಶೋಕ್ ಕಾಮಟೆ ಹಾಗೂ ವಿಜಯ್ ಸಾಲಸ್ಕರ್ ಅವರಿಗೆ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಮರಣೋತ್ತರ 'ಅಶೋಕ ಚಕ್ರ' ಪ್ರಶಸ್ತಿ ಘೋಷಿಸಲಾಯಿತು.

2009: ಭಾರತ ಮತ್ತು ಬ್ರಿಟನ್‌ನ ಜಂಟಿ ನಿರ್ಮಾಣದ 'ಸಮ್ಲ್‌ಡಾಗ್ ಮಿಲಿಯನೇರ್' ಚಲನಚಿತ್ರ, ಅಮೆರಿಕದ ನಿರ್ಮಾಪಕರ ವೇದಿಕೆ (ಪಿಜಿಎ)ಯ ಪುರಸ್ಕಾರಕ್ಕೂ ಪಾತ್ರವಾಯಿತು. ಚಿತ್ರದ ನಿರ್ಮಾಪಕ ಕ್ರಿಶ್ಚಿಯನ್ ಕೋಲ್ಸನ್ ಅವರಿಗೆ 'ಡ್ಯಾರಿಲ್ ಎಫ್ ಝಾನುಕ್ ವರ್ಷದ ನಿರ್ಮಾಪಕ' ಪ್ರಶಸ್ತಿ ದೊರೆಕಿತು, ಲಾಸ್ ಏಂಜೆಲಿಸಿನಲ್ಲಿ ನಡೆದ ಸಮಾರಂಭದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿದರು.

2009: ಗೃಹ ಸಚಿವ ಪಿ. ಚಿದಂಬರಮ್ ಅವರ ಆಂತರಿಕ ಭದ್ರತಾ ಸಲಹೆಗಾರ ಕೆ.ಸಿ.ವರ್ಮಾ ಅವರು ದೇಶದ ಅಗ್ರಮಾನ್ಯ ಗೂಢಚರ್ಯ ಸಂಸ್ಥೆ 'ರಾ' ಮುಖ್ಯಸ್ಥರಾಗಿ ನೇಮಕಗೊಂಡರು.

2009: ತಮಿಳು ಬಂಡುಕೋರರ (ಎಲ್‌ಟಿಟಿಇ) ಬಿಗಿ ಹಿಡಿತದಲ್ಲಿರುವ ಕಟ್ಟಕಡೆಯ ತಾಣವಾದ ಮುಲ್ಲೈತೀವು ಪಟ್ಟಣವನ್ನು ಸೇನಾ ಪಡೆಗಳು ಪ್ರವೇಶಿಸಿದವು.

2008: ಜಗತ್ತಿನಲ್ಲಿಯೇ ಅತಿ ಉದ್ದದ ರಂಗೋಲಿ ಬಿಡಿಸಿ, ದಾಖಲೆ ನಿರ್ಮಿಸಲು ಹೊರಟ ಬೆಂಗಳೂರಿನ `ಸುವರ್ಣ ಜ್ಯೋತಿ ಟ್ರಸ್ಟ್' ಜೊತೆಗೆ ಒಂದು ಸಾವಿರ ಜನರು ಕೈಜೋಡಿಸಿ ಅರಮನೆ ಮೈದಾನದಲ್ಲಿ 1.50 ಲಕ್ಷ ಚದರ ಅಡಿಯಲ್ಲಿ ದೇವತೆಗಳು, ಸೈನಿಕರು, ಸ್ವಾತಂತ್ರ್ಯ ಯೋಧರ ಚಿತ್ರಗಳನ್ನು ಒಳಗೊಂಡ 'ಅಖಂಡ ಭಾರತ'ದ ಬೃಹತ್ ರಂಗೋಲಿ ಬಿಡಿಸಲು ಆರಂಭಿಸಿದರು. ಈ ಹಿಂದೆ ದಾಖಲೆ ನಿರ್ಮಿಸಿದ್ದ 48 ಸಾವಿರ ಚದರ ಅಡಿಯ ರಂಗೋಲಿಯನ್ನು ಬದಿಗೆ ತಳ್ಳಿ ನೂತನ ಇತಿಹಾಸ ಸೃಷ್ಟಿಸುವ ಸಲುವಾಗಿ ಈ ರಂಗೋಲಿ ಬಿಡಿಸುವ ಕಾರ್ಯ ಶುರುವಾಯಿತು.

2008: ಆಸ್ಟ್ರೇಲಿಯಾದ 15ರ ಹರೆಯದ ಹುಡುಗಿ ಡೆಮಿ ಲಿ ಬ್ರೆನನ್ ಎಂಬಾಕೆ ಯಕೃತ್ ಕಸಿ ಮಾಡಿಸಿಕೊಂಡ ಬಳಿಕ ತನ್ನ ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನೇ ಸಂಪೂರ್ಣವಾಗಿ ಬದಲಿಸಿಕೊಂಡು ವೈದ್ಯ ಲೋಕದಲ್ಲಿ ಅಚ್ಚರಿ ಮೂಡಿಸಿದಳು. ಜೊತೆಗೇ ಇದು ಜಗತ್ತಿನಲ್ಲಿ ದಾಖಲಾದ ಇಂತಹ ಮೊದಲ ಪ್ರಕರಣ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಬ್ರೆನನ್ 9 ವರ್ಷದವಳಿದ್ದಾಗ ದಾನಿಯೊಬ್ಬರ ಯಕೃತ್ತನ್ನು ಕಸಿ ಮಾಡಿಸಿಕೊಂಡಿದ್ದಳು. ಬಳಿಕ ದಾನಿಯ ರೋಗ ನಿರೋಧಕ ಶಕ್ತಿಯೇ (ಬಿಳಿ ರಕ್ತ ಕಣ) ಅವಳ ದೇಹವನ್ನು ಸಂಪೂರ್ಣವಾಗಿ ಆವರಿಸಲು ಆರಂಭಿಸಿತು. ಇದರಿಂದಾಗಿ ಆಕೆಯ ದೇಹದಲ್ಲಿನ ರಕ್ತದ ಗುಂಪು `ಒ ನೆಗೆಟಿವ್'ನಿಂದ `ಒ ಪಾಸಿಟಿವ್'ಗೆ ಬದಲಾಯಿತು. ಸಿಡ್ನಿಯ ವೆಸ್ಟ್ ಮೆಡ್ ಮಕ್ಕಳ ಆಸ್ಪತ್ರೆಯ ವೈದ್ಯರಿಗೆ ಅಚ್ಚರಿ ಮೂಡಲು ಇನ್ನೂ ಹಲವು ಕಾರಣಗಳು ಇದ್ದವು. ಬದಲಿ ಅಂಗ ದೇಹಕ್ಕೆ ಹೊಂದಿಕೊಳ್ಳುವ ಸಲುವಾಗಿ ನೀಡಿದ್ದ ಔಷಧವನ್ನು ದೇಹ ಸ್ವೀಕರಿಸದೇ ಇದ್ದಾಗ ದೇಹದಲ್ಲಿ ಏನೋ ಎಡವಟ್ಟು ಆಗಿರುವುದು ಗೊತ್ತಾಯಿತು. ಇದು ಅವಳಿಗೆ ಪೂರಕವಾಯಿತೇ ಹೊರತು ಮಾರಕವಾಗಲಿಲ್ಲ. ಬಹುಶಃ ಹುಡುಗಿಯ ಮೂಲ ರಕ್ತದಲ್ಲಿನ ಬಿಳಿ ರಕ್ತ ಕಣಗಳ ಸಂಖ್ಯೆ ತೀರಾ ಕಡಿಮೆ ಇದ್ದುದರಿಂದ ಆಕೆಯ ದೇಹ ದಾನಿಯ ಯಕೃತ್ತಿನ ಪ್ರಭಾವಕ್ಕೆ ಒಳಗಾಗಿರಬೇಕು ಎಂಬ ತೀರ್ಮಾನಕ್ಕೆ ವೈದ್ಯರು ಬಂದರು. ಅಂತೂ ಇದರಿಂದಾಗಿ ಬ್ರೆನನ್ ಗೆ ಮರು ಜನ್ಮ ಲಭಿಸಿದಂತಾಯಿತು.

2008: ಇನ್ಫೊಸಿಸ್ ಸ್ಥಾಪಕ ಎನ್. ಆರ್. ನಾರಾಯಣಮೂರ್ತಿ, ಗಾಯಕಿ ಆಶಾ ಭೋಂಸ್ಲೆ, ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಉದ್ಯಮಿ ರತನ್ ಟಾಟಾ ಸೇರಿದಂತೆ ಹದಿಮೂರು ಗಣ್ಯರಿಗೆ ಪದ್ಮ ವಿಭೂಷಣ, ಐಸಿಐಸಿಐ ಆಡಳಿತ ನಿರ್ದೇಶಕ ಕುಂದಾಪುರ ವಾಮನ ಕಾಮತ್, ಗಾಯಕಿ ಪಿ.ಸುಶೀಲಾ, ಬಾಹ್ಯಾಕಾಶಯಾನಿ ಸುನೀತಾ ವಿಲಿಯಮ್ಸ್ ಸೇರಿದಂತೆ 35 ಗಣ್ಯರಿಗೆ ಪದ್ಮಭೂಷಣ ಹಾಗೂ ಕವಿ ಕೆ.ಎಸ್. ನಿಸಾರ್ ಅಹಮದ್, ಶೃಂಗೇರಿಯ ಸಾಮಾಜಿಕ ಕಾರ್ಯಕರ್ತ ವಿ.ಆರ್. ಗೌರಿಶಂಕರ್ ಸೇರಿದಂತೆ 71 ಗಣ್ಯರಿಗೆ ಪದ್ಮಶ್ರೀ ಪ್ರಶಸ್ತಿಗಳನ್ನು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಘೋಷಿಸಿದರು. ಕೊಂಕಣ್ ಮತ್ತು ಮೆಟ್ರೋ ರೈಲಿನ ಶಿಲ್ಪಿ ಈ. ಶ್ರೀಧರನ್, ವಿಶ್ವಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದನ್, ರಕ್ಷಣಾ ಸಚಿವ ಪ್ರಣವ್ ಮುಖರ್ಜಿ, ಪರಿಸರವಾದಿ ಡಾ.ಆರ್. ಕೆ. ಪಚೂರಿ, ನಿವೃತ್ತ ಸುಪ್ರೀಂಕೋರ್ಟ್ ಮುಖ್ಯನ್ಯಾಯಾಧೀಶ ಎ.ಎಸ್.ಆನಂದ್, ಎವರೆಸ್ಟ್ ಪರ್ವತಾರೋಹಿ ದಿವಂಗತ ಎಡ್ಮಂಡ್ ಹಿಲೆರಿ, ರಾಜತಾಂತ್ರಿಕ ಪಿ.ಎನ್. ಧರ್ ಹಾಗೂ ಉದ್ಯಮಿಗಳಾದ ಎಲ್.ಎನ್. ಮಿತ್ತಲ್ ಮತ್ತು ಪಿ. ಆರ್. ಎಸ್. ಒಬೆರಾಯ್ ಪದ್ಮವಿಭೂಷಣ ಪ್ರಶಸ್ತಿ ಪಡೆದ ಇತರ ಗಣ್ಯರು. ಪದ್ಮಭೂಷಣ ಪಡೆದವರಲ್ಲಿ ಎಚ್ ಸಿ ಎಲ್ ಸ್ಥಾಪಕ ಶಿವನಾಡರ್, ಸಿಟಿಬ್ಯಾಂಕ್ ಅಧ್ಯಕ್ಷ ವಿಕ್ರಮ್ ಪಂಡಿತ್ ಸೇರಿದರೆ, ಹಿಂದಿ ಚಿತ್ರನಟಿ ಮಾಧುರಿ ದೀಕ್ಷಿತ್, ನಟ ಟಾಮ್ ಆಲ್ಟರ್, ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾದರು.

2008: ತಿರುಮಲದ ತಿಮ್ಮಪ್ಪನಿಗೆ ನಂದಮುರಿ ಲತಾ ಎಂಬ ಭಕ್ತರೊಬ್ಬರು 5 ಲಕ್ಷ ರೂಪಾಯಿ ಮೌಲ್ಯದ 5 ತಂಜಾವೂರು ಪೇಂಟಿಂಗುಗಳನ್ನು ದಾನವಾಗಿ ನೀಡಿದರು. ಈ ಚಿತ್ರಗಳು ಬ್ರಹ್ಮೋತ್ಸವಕ್ಕೆ ಸಂಬಂದಿಸಿದವುಗಳು. ಹಿಂದಿನ ಬ್ರಹ್ಮೋತ್ಸವದ ಸಂದರ್ಭದಲ್ಲೂ ಅವರು ತಮ್ಮ ಪೇಂಟಿಂಗುಗಳನ್ನು ತಿಮ್ಮಪ್ಪನಿಗೆ ದಾನ ಮಾಡಿದ್ದರು.

2008: ಸಿಗರೇಟ್ ಪೊಟ್ಟಣಗಳ ಮೇಲೆ `ಧೂಮಪಾನ ಆರೋಗ್ಯಕ್ಕೆ ಹಾನಿಕರ' ಎಂಬ ಸಚಿತ್ರ ಸಂದೇಶವನ್ನು 2007ರ ಫೆಬ್ರುವರಿ 1ರಿಂದ ಮುದ್ರಿಸುವುದು ಕಡ್ಡಾಯ ಎಂದು 2006ರ ಜುಲೈ ತಿಂಗಳಲ್ಲಿಯೇ ಆದೇಶ ಹೊರಡಿಸಿ ಅದನ್ನು ಜಾರಿ ಮಾಡದ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿತು. ತಂಬಾಕು ಲಾಬಿಗೆ ಮಣಿದಿರುವ ಸರ್ಕಾರ ತನ್ನದೇ ನಿರ್ಧಾರವನ್ನು ಜಾರಿ ಮಾಡುತ್ತಿಲ್ಲ ಎಂದು ದೂರಿ ವಕೀಲರಾದ ನರಿಂದರ್ ಶಮಾ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಕೆ. ಜಿ. ಬಾಲಕೃಷ್ಣನ್ ಮತ್ತು ಆರ್. ವಿ. ರವೀಂದ್ರನ್ ಅವರನ್ನು ಒಳಗೊಂಡ ನ್ಯಾಯಪೀಠವು ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿತು. 2007ರ ಫೆಬ್ರುವರಿ 1ರಂದು ಜಾರಿಯಾಗಬೇಕಾಗಿದ್ದ ನಿರ್ಧಾರವನ್ನು ಸರ್ಕಾರ ಡಿಸೆಂಬರ್ ತಿಂಗಳಿಗೆ ಮುಂದೂಡಿ ನಂತರ ಅದನ್ನು ಜಾರಿ ಮಾಡಿಲ್ಲ ಎಂದು ಅರ್ಜಿದಾರರು ದೂರಿದರು.

2008: ಪಶ್ಚಿಮ ಬಂಗಾಳದ 19 ಜಿಲ್ಲೆಗಳ ಪೈಕಿ 11 ಜಿಲ್ಲೆಗಳಿಗೆ ಪಕ್ಷಿಜ್ವರ (ಕೋಳಿಜ್ವರ) ಸೋಂಕು ಹರಡಿದ ಹಿನ್ನೆಲೆಯಲ್ಲಿ ಅಲ್ಲಿನ ಪರಿಸ್ಥಿತಿ ಬಿಗಡಾಯಿಸದಂತೆ ತಡೆಯಲು ಪಶ್ಚಿಮ ಬಂಗಾಳ ಸರ್ಕಾರ ಸೋಂಕು ಪೀಡಿತ ಕೋಳಿಗಳ ಸಾಮೂಹಿಕ ನಾಶಕ್ಕೆ ಸಮರೋಪಾದಿ ಯತ್ನ ಕೈಗೊಂಡಿತು. ಪುರೂಲಿಯಾ ಮತ್ತು ಹೌರಾ ಜಿಲ್ಲೆಗಳನ್ನು ಸೋಂಕು ಪೀಡಿತ ಎಂದು ಘೋಷಿಸಲಾಯಿತು. ಕೂಚ್ ಬಿಹಾರ ಜಿಲ್ಲೆಯಲ್ಲಿ ಕೋಳಿಗಳ ಹತ್ಯೆ ಕಾರ್ಯ ಆರಂಭವಾಯಿತು.

2008: ತಮಿಳುನಾಡಿನ ತೆಂಕಾಸಿಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಚೇರಿ ಮೇಲೆ ಅಪರಿಚಿತರು ರಾತ್ರಿ ಬಾಂಬ್ ಎಸೆದರು. ಪರಿಣಾಮವಾಗಿ ಪಟ್ಟಣದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣಗೊಂಡಿತು.

2008: ಅಕ್ರಮವಾಗಿ ಕಿಡ್ನಿ ಕಸಿ ಮಾಡಿ ಬಡವರನ್ನು ವಂಚಿಸುತ್ತಿದ್ದ ಹಾಗೂ ಕೋಟ್ಯಂತರ ರೂಪಾಯಿಗಳ ವ್ಯವಹಾರ ನಡೆಸುತ್ತಿದ್ದ ಐವರು ವಿದೇಶಿಯರು ಹಾಗೂ ನಾಲ್ವರು ಸ್ಥಳೀಯ ವೈದ್ಯರನ್ನು ಗುಡಗಾಂವಿನ ಪೊಲೀಸರು ಬಂಧಿಸಿ, ಅಕ್ರಮ ಕಿಡ್ನಿ ಮಾರಾಟದ ಬೃಹತ್ ಜಾಲವೊಂದನ್ನು ಭೇದಿಸಿದರು. ಹರಿಯಾಣ ಮತ್ತು ಉತ್ತರ ಪ್ರದೇಶ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಗುಡಗಾಂವಿನ ಎರಡು ಮನೆಗಳ ಮೇಲೆ ದಾಳಿ ನಡೆಸಿ ಈ ಜಾಲ ಪತ್ತೆ ಹಚ್ಚಲಾಯಿತು. ಬಂಧಿತರನ್ನು ಜಾಯ್ ಮೆಹತಬ್ (53), ಸೋನಮ್ ಜಾಯ್ (52), ಲಿಯೊನಿಡಾ ದಯಾಸಿ (56), ಲಿಯೊನಿದಾಸ್ ದಯಾಸಿಸ್ (63) ಮತ್ತು ಹೆಲೆನಿ ಕಿತ್ಕೊಸಿ (53) ಎಂದು ಗುರುತಿಸಲಾಯಿತು. ಇವರೆಲ್ಲರೂ ಗ್ರೀಸ್ ದೇಶದ ಪ್ರಜೆಗಳು. ವಲ್ಲಭಗಢ ಹಾಗೂ ಇತರೆಡೆಯ ಮೂವರು ವೈದ್ಯರನ್ನೂ ಬಂಧಿಸಲಾಯಿತು. ಜಾಲದ ಪ್ರಮುಖ ಸೂತ್ರಧಾರ ಎನ್ನಲಾದ ಡಾ.ಅಮಿತ್ ಸಿಂಗ್ ಹಾಗೂ ಆತನ ಸಹೋದರ ಜೀವನ್ ಮತ್ತು ಅರೆವಳಿಕೆ ತಜ್ಞ ಸರೋಜ್ ಕುಮಾರ್ ತಲೆಮರೆಸಿಕೊಂಡರು.

2008: ಬೆಂಗಳೂರಿನ ಭಾರತೀಯ ವಾಯುಪಡೆ (ಐಎಎಫ್) ತರಬೇತಿ ಕೇಂದ್ರದ ಮುಖ್ಯಸ್ಥ ಏರ್ ಮಾರ್ಷಲ್ ಗುರುನಾಮ್ ಸಿಂಗ್ ಚೌಧರಿ ಅವರಿಗೆ ಪರಮ ವಿಶಿಷ್ಟ ಸೇವಾ ಪದಕ (ಪಿವಿಎಸ್ಎಂ) ಲಭಿಸಿತು.

2008: ಅಡಿಲೇಡಿನಲ್ಲಿ ಆಸ್ಟ್ರೇಲಿಯಾ - ಟೀಮ್ ಇಂಡಿಯಾ ನಡುವಣ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಕ್ರಿಕೆಟ್ ಪಂದ್ಯದ ಮೊದಲ ಇನ್ನಿಂಗ್ಸಿನಲ್ಲಿ ಮಿಚೆಲ್ ಜಾನ್ಸನ್ ಬೌಲಿಂಗಿನಲ್ಲಿ ಅನಿಲ್ ಕುಂಬ್ಳೆ ನೀಡಿದ ಕ್ಯಾಚ್ ಪಡೆದ ಆಡಮ್ ಗಿಲ್ ಕ್ರಿಸ್ಟ್ ವಿಕೆಟ್ ಹಿಂಬದಿ ಹೆಚ್ಚು ಬಲಿ ಪಡೆದ ವಿಕೆಟ್ ಕೀಪರ್ ಎಂಬ ಹೆಗ್ಗಳಿಗೆ ಪಾತ್ರರಾಗಿ ವಿಶ್ವದಾಖಲೆ ನಿರ್ಮಿಸಿದರು. ಅವರು ದಕ್ಷಿಣ ಆಫ್ರಿಕಾದ ಮಾರ್ಕ್ ಬೌಷರ್ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ಅಳಿಸಿ ಹಾಕಿದರು. ಇದರಿಂದಾಗಿ `ಗಿಲಿ' ವಿಕೆಟ್ ಹಿಂಬದಿ ಒಟ್ಟು 414 ಬಲಿ ಪಡೆದಂತಾಯಿತು. ಅದರಲ್ಲಿ 377 ಕ್ಯಾಚ್ ಹಾಗೂ 37 ಸ್ಟಂಪಿಂಗ್ ಸೇರಿವೆ. ಬೌಷರ್ 413 (394 ಕ್ಯಾಚ್, 19 ಸ್ಟಂಪಿಂಗ್) ಬಲಿ ಪಡೆದರು.

2008: ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಪ್ರತಿಷ್ಠಿತ ಐಷಾರಾಮಿ ಸುವರ್ಣ ರಥ ರೈಲು ಈದಿನ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಹೊರವಲಯದ ವೈಟ್ಫೀಲ್ಡ್ ರೈಲು ನಿಲ್ದಾಣಕ್ಕೆ ಆಗಮಿಸಿತು. ಮುಂದಿನ ಒಂದು ವಾರದಲ್ಲಿ ರೈಲಿನ ಒಳಾಂಗಣ ವಿನ್ಯಾಸ, ನೆಲಹಾಸು, ಸೂಕ್ಷ್ಮ ಮರಗೆಲಸ, ಹಾಸಿಗೆ ಮತ್ತು ಹೊದಿಕೆ ಹಾಕುವ ಕೆಲಸ ನಡೆಸಲಾಯಿತು. ಇದು ದಕ್ಷಿಣ ಭಾರತದ ಪ್ರಥಮ ಪ್ರವಾಸಿ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

2007: ಆರ್ಥಿಕ ಸಂಕಷ್ಟದಿಂದ ಬೇಸತ್ತು ಹಾಸನ ನಗರದ ವ್ಯಾಪಾರಿ ಕೀರ್ತಿ ಗುಪ್ತ ಅವರು ತಮ್ಮ ಮೂವರು ಮಕ್ಕಳು ಸೇರಿದಂತೆ ಕುಟುಂಬದ 6 ಜನ ಸದಸ್ಯರನ್ನು ಕ್ಲೋರೋಫಾರಂ ಬಳಸಿ ಕೊಲೆಗೈದು, ತಾವೂ ಆತ್ಮಹತ್ಯೆ ಮಾಡಿಕೊಂಡರು.

2007: ವಿಶ್ವದ ಹಿರಿಯಜ್ಜ ಎಂದು ಪರಿಗಣಿಸಲಾಗಿದ್ದ ಸಾನ್ ಜುವಾನಾದ (ಪೋರ್ಟೊರಿಕೊ) ಎಮಿಲಿಯಾನೊ ಮರ್ಕೆಡೊ ಡೆಲ್ ಟೊರೊ ಅವರು ತಮ್ಮ 115ನೇ ವರ್ಷದಲ್ಲಿ ನಿಧನರಾದರು. ಈ ಅಜ್ಜ ಹುಟ್ಟಿದಾಗ ಪೊರ್ಟೊರಿಕೊ ಸ್ಪೇನಿನ ವಸಾಹತಾಗಿತ್ತು. `ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ' ಎಂಬುದಾಗಿ ಗಿನ್ನೆಸ್ ಪುಸ್ತಕದಲ್ಲಿ ಈ ಅಜ್ಜನ ಹೆಸರು ದಾಖಲಾದಾಗ ಕರಾವಳಿ ನಗರ ಇಸಬೆಲ್ಲಾದಲ್ಲಿ ಜನ ಹಬ್ಬ ಆಚರಿಸಿ ಸಂಭ್ರಮಿಸಿದ್ದರು. 1891ರ ಆಗಸ್ಟ್ 21ರಂದು ಜನಿಸಿದ್ದ ಎಮಿಲಿಯಾನೊ ಮೆರ್ಕಡೊ ಡೆಲ್ ಟೊರೊ ಅವಿವಾಹಿತರಾಗಿದ್ದರು. 1892ರ ನವೆಂಬರ್ 22ರಂದು ಜನಿಸಿದ ಕನೆಕ್ಟಿಕಟ್ ಮಹಿಳೆ ಎಮ್ಮಾ ಫಾಸ್ಟ್ ಟಿಲ್ ಮ್ಯಾನ್ (114) ಈತನ ಬಳಿಕ ಬದುಕುಳಿದ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ.

2007: ಕರ್ನಾಟಕದ ದಿವಂಗತ ಸಾಹಿತಿ `ಕಾಂತಾಪುರ' ಖ್ಯಾತಿಯ ಹಾಸನ ರಾಜಾರಾವ್ ಅವರಿಗೆ ಮರಣೋತ್ತರ ಪದ್ಮವಿಭೂಷಣ, ಕರ್ನಾಟಕದ ಸೊಸೆ ಮತ್ತು ಪೆಪ್ಸೆ ಕಂಪೆನಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಇಂದ್ರಾ ನೂಯಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ಸೇರಿದಂತೆ ಒಟ್ಟು 10 ಗಣ್ಯರಿಗೆ ಪದ್ಮವಿಭೂಷಣ, 32 ಮಂದಿಗೆ ಪದ್ಮಭೂಷಣ ಮತ್ತು 79 ಮಂದಿ ಪದ್ಮಶ್ರೀ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರವು ಪ್ರಕಟಿಸಿತು.

2007: ಕಾಶ್ಮೀರದಲ್ಲಿ ಶರಣಾಗತರಾದ ಉಗ್ರರಿಗೆ ಆರ್ಥಿಕ ಸಹಾಯ ಮತ್ತು ಮಾಸಿಕ ವೇತನ ನೀಡುವುದನ್ನು ಪ್ರಶ್ನಿಸಿ ಮಾನವ ಹಕ್ಕು ಇಲಾಖೆಯು ಸುಪ್ರೀಂಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿತು. ನ್ಯಾಯಮೂರ್ತಿ ಜಿ.ಪಿ.ಮಾಥೂರ್ ಮತ್ತು ಆರ್. ವಿ. ರವೀಂದ್ರನ್ ಅವರನ್ನು ಒಳಗೊಂಡ ಪೀಠವು ಈ ಅರ್ಜಿಯನ್ನು ದಾಖಲು ಮಾಡಿಕೊಂಡು, `ಗಂಭೀರವಾದ ವಿಷಯಗಳನ್ನು ಈ ಅರ್ಜಿಯು ಎತ್ತಿದ್ದು, ವಿವರವಾಗಿ ಪರಿಶೀಲಿಸಬೇಕಾದ ಅಗತ್ಯ ಇದೆ' ಎಂದು ಹೇಳಿತು. ಶಸ್ತ್ರಾಸ್ತ್ರಗಳನ್ನು ಕೆಳಗಿಳಿಸಿ ಸರ್ಕಾರಕ್ಕೆ ಶರಣಾದ ಉಗ್ರರಿಗೆ ಮರುಪಾವತಿ ಮಾಡದಂಥ 3 ಲಕ್ಷ ರೂಪಾಯಿಗಳ ಸಾಲ ನೀಡುವುದಲ್ಲದೆ ಮಾಸಿಕ 3000 ರೂಪಾಯಿಗಳ ಸ್ಟೈಪೆಂಡ್ ನೀಡುವ ಕ್ರಮವೂ ಇದೆ. ಇದು ದೇಶದ ಯುವ ಜನಾಂಗಕ್ಕೆ ತಪ್ಪು ಸಂದೇಶ ರವಾನಿಸುವುದರ ಜೊತೆಗೆ ದೇಶದ ಇತರ ಕಡೆಗಳಲ್ಲಿ ಭಯೋತ್ಪಾದನೆಯ ಮಾರ್ಗ ಅನುಸರಿಸಲು ಪ್ರೋತ್ಸಾಹಿಸುವಂತಿದೆ ಎಂದು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ದೂರಿದ್ದರು.

2007: ತಮಿಳುನಾಡಿನ ಕುದಂಕುಲಮ್ ವಿದ್ಯುತ್ ಯೋಜನೆ ಹಾಗೂ ಇತರ ಹೊಸ ಪ್ರದೇಶಗಳಲ್ಲಿ ಇನ್ನಷ್ಟು ಅಣುಸ್ಥಾವರಗಳನ್ನು ನಿರ್ಮಿಸುವ ಸಲುವಾಗಿ ಭಾರತ ಮತ್ತು ರಷ್ಯ ಒಪ್ಪಂದಕ್ಕೆ ಸಹಿ ಹಾಕಿದವು.

2006: ಕರ್ನಾಟಕ ಸಂಗೀತದ ಖ್ಯಾತ ವಯೋಲಿನ್ ವಾದಕ ನೆಲ್ಲೈ ಕೃಷ್ಣಮೂರ್ತಿ (85) ಕೇರಳದ ತಿರುವನಂತಪುರದಲ್ಲಿ ನಿಧನರಾದರು.

2006: ಸ್ವಿಟ್ಜರ್ ಲ್ಯಾಂಡಿನ ದಾವೋಸಿನಲ್ಲಿ ಆರಂಭವಾದ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಮ್ಮೇಳನದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಮುಖೇಶ ಅಂಬಾನಿ ಅವರನ್ನು ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯೂಇಎಫ್) ಉಪಾಧ್ಯಕ್ಷರನ್ನಾಗಿ ನೇಮಿಸಲಾಯಿತು. ಈ ಹುದ್ದೆಗೆ ನೇಮಕಗೊಂಡಿರುವ ಭಾರತದ ಅತ್ಯಂತ ಕಿರಿಯ ಉದ್ಯಮಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾದರು.

2006: ಸಾಫ್ಟವೇರ್ ಸಂಸ್ಥೆ ಇನ್ಫೋಸಿಸ್ಸಿನ ಸಿಇಒ ನಂದನ್ ನೀಲೇಕಣಿ (ಪದ್ಮಭೂಷಣ), ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಮತ್ತು ಯುವ ಟೆನಿಸ್ ತಾರೆ ಸಾನಿಯಾ ಮಿರ್ಜಾ (ಪದ್ಮಶ್ರೀ) ಸೇರಿದಂತೆ 106 ಮಂದಿ ಗಣ್ಯರು 2006ನೇ ಸಾಲಿನ ಪದ್ಮ ಪ್ರಶಸ್ತಿಗಳಿಗೆ ಭಾಜನರಾದರು. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಅಡೂರು ಗೋಪಾಲಕೃಷ್ಣ, ಸಮಾಜಸೇವಕಿ ಗಾಂಧಿವಾದಿ ನಿರ್ಮಲಾ ದೇಶಪಾಂಡೆ, ಲೇಖಕಿ ಮಹಾಶ್ವೇತಾದೇವಿ ಸೇರಿದಂತೆ 9 ಗಣ್ಯರು ಪದ್ಮಿವಿಭೂಷಣ ಪ್ರಶಸ್ತಿಗೆ ಭಾಜನರಾದರು.

2006: ಎವರೆಸ್ಟ್ ಆರೋಹಣದ ಸಂದರ್ಭದಲ್ಲಿ ಹಿಮಶೃಂಗದಲ್ಲೇ ಜೀವತೆತ್ತ ಕನ್ನಡಿಗ ಸ್ಕ್ವಾಡ್ರನ್ ಲೀಡರ್ ಎಸ್. ಎಸ್. ಚೈತನ್ಯ ಮತ್ತು ದೇಶದ ಪ್ರಥಮ ಮಹಿಳಾ ಏರ್ ಮಾರ್ಷಲ್ ಪದ್ಮಾ ಬಂಡೋಪಾಧ್ಯಾಯ ಸಹಿತ 311 ಯೋಧರು 2006ನೇ ಸಾಲಿನ ರಾಷ್ಟ್ರಪತಿ ಪುರಸ್ಕಾರಕ್ಕೆ ಪಾತ್ರರಾದರು.

2002: ರಷ್ಯಾದ ರಸ್ಲನ್ ಪೊನೊಮರಿವ್ ಅವರು ಮಾಸ್ಕೊದಲ್ಲಿ ವಸಿಲಿ ಇವಾಂಚುಕ್ ಅವರನ್ನು 4.5-2.5 ಅಂತರದಲ್ಲಿ ಪರಾಭವಗೊಳಿಸುವ ಮೂಲಕ ಫಿಡೆ ವಿಶ್ವ ಚೆಸ್ ಚಾಂಪಿಯನ್ ಎನಿಸಿಕೊಂಡ ಮೊತ್ತ ಮೊದಲ ಕಿರಿಯ ಆಟಗಾರರಾದರು. ಆಗ ಅವರ ವಯಸ್ಸು: 18 ವರ್ಷ, 104 ದಿನಗಳು.

1971: ಸೇನಾದಂಗೆಯೊಂದರಲ್ಲಿ ಮಿಲ್ಟನ್ ಒಬೊಟೆ ಅವರನ್ನು ಪದಚ್ಯುತಿಗೊಳಿಸಿ ಇದಿ ಅಮಿನ್ ಉಗಾಂಡಾದ ಅಧ್ಯಕ್ಷರಾದರು.

1971: ಹಿಮಾಚಲ ಪ್ರದೇಶ ಭಾರತದ ಒಂದು ರಾಜ್ಯವಾಯಿತು. 1948ರಿಂದ ಇಲ್ಲಿವರೆಗೆ ಇದು ಕೇಂದ್ರಾಡಳಿತ ಪ್ರದೇಶವಾಗಿತ್ತು.

1950: ಭಾರತದ ಚುನಾವಣಾ ಆಯೋಗ ಸ್ಥಾಪನೆಗೊಂಡಿತು. ಪ್ರಾರಂಭದಲ್ಲಿ ಮುಖ್ಯ ಚುನಾವಣಾ ಕಮೀಷನರ್ ಒಬ್ಬರೇ ಅದರ ಮುಖ್ಯಸ್ಥರಾಗಿದ್ದರು. ನಂತರ ಇಬ್ಬರು ಹೆಚ್ಚುವರಿ ಕಮೀಷನರುಗಳನ್ನು ನೇಮಿಸಲಾಯಿತು.

1939: ರಂಗಭೂಮಿಯ ಖ್ಯಾತ ನಟ, ಚಲನಚಿತ್ರ ರಂಗದ ಖಳನಾಯಕ ದಿನೇಶ್ (25-1-1939ರಿಂದ 20-12-1990) ಅವರು ಬೆಂಗಳೂರಿನಲ್ಲಿ ಈದಿನ ಜನಿಸಿದರು.

1933: ಫಿಲಿಪ್ಪೈನ್ಸಿನ ನಾಯಕಿ ಕೊರಜಾನ್ ಅಕ್ವಿನೊ ಹುಟ್ಟಿದರು. ದಿವಂಗತ ಬೆನಿಗ್ನೊ ಅಕ್ವಿನೊ ಅವರ ಕೈಹಿಡಿದ ಅವರು 1983ರಿಂದ ಪಿಲಿಪ್ಪೈನ್ಸಿನ ರಾಜಕೀಯ ನಾಯಕಿಯಾದರು. 1986-1992ರ ಅವಧಿಯಲ್ಲಿ ಅಲ್ಲಿನ ಅಧ್ಯಕ್ಷರಾದರು.

1924: ಫ್ರೆಂಚ್ ಆಲ್ಫ್ ನ ಚಾಮೊನಿಕ್ಸಿನಲ್ಲಿ ಮೊದಲ ಚಳಿಗಾಲದ ಒಲಿಂಪಿಕ್ಸ್ ಆರಂಭವಾಯಿತು.

1921: ಖ್ಯಾತ ಸಾಹಿತಿ, ಹಿರಿಯ ಪತ್ರಕರ್ತ ನಾಡಿಗ ಕೃಷ್ಣಮೂರ್ತಿ (1921-1983) ಅವರು ಶಿವಮೊಗ್ಗ ಜಿಲ್ಲೆಯ ಅನವಟ್ಟಿ ಗ್ರಾಮದಲ್ಲಿ ನರಸಿಂಗರಾವ್ ನಾಡಿಗ -ಕಮಲಾಬಾಯಿ ದಂಪತಿಯ ಪುತ್ರನಾಗಿ ಜನಿಸಿದರು. ಪತ್ರಿಕೋದ್ಯಮ ಇತಿಹಾಸ ಮಹಾಪ್ರಬಂಧ ಮಂಡಿಸಿ ಮೈಸೂರು ವಿಶ್ವವಿದ್ಯಾಲಯದಿಂದ ಪಿ ಎಚ್ ಡಿ ಪದವಿ ಗಳಿಸಿದ ನಾಡಿಗ ಕೃಷ್ಣಮೂರ್ತಿ ಅವರು ರಚಿಸಿದ ಕೃತಿಗಳು 40ಕ್ಕೂ ಹೆಚ್ಚು. ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್ ಸೇರಿದಂತೆ ಅವರು ಸಂದರ್ಶಿಸಿದ ರಾಷ್ಟ್ರಗಳು ಹತ್ತಕ್ಕೂ ಹೆಚ್ಚು. ಅಖಿಲ ಭಾರತ ಪತ್ರಿಕೋದ್ಯಮ ಶಿಕ್ಷಣ ಸಂಘ ಸ್ಥಾಪಿಸಿದ ನಾಡಿಗ ಕೃಷ್ಣಮೂರ್ತಿ ಅಂದಿನ ರಾಜ್ಯ ಪತ್ರಿಕಾ ಅಕಾಡೆಮಿಯ ಪ್ರಥಮ ಅಧ್ಯಕ್ಷರಾಗಿದ್ದರು (16-3-1982ರಿಂದ 1-5-1983ರವರೆಗೆ). ಕೇಂದ್ರ, ರಾಜ್ಯಮಟ್ಟದ ಹಲವಾರು ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದರು.

1915: ಟೆಲಿಫೋನ್ ಸಂಶೋಧಕ ಅಲೆಗ್ಸಾಂಡರ್ ಗ್ರಹಾಂಬೆಲ್ ಅಮೆರಿಕದ ಖಂಡಾಂತರ (ಟ್ರಾನ್ಸ್ ಕಾಂಟಿನೆಂಟಲ್) ಟೆಲಿಫೋನ್ ಸೇವೆ ಉದ್ಘಾಟಿಸಿದರು. ಬೆಲ್ ಅವರು ತಮ್ಮ ಮಾಜಿ ಸಹಯೋಗಿ ವಾಟ್ಸನ್ ಅವರ ಜೊತೆ ನ್ಯೂಯಾರ್ಕ್ ಮತ್ತು ಸಾನ್ ಫ್ರಾನ್ಸಿಸ್ಕೊ ನಡುವಣ 3400 ಮೈಲು ಉದ್ದದ ತಂತಿ ಮೂಲಕ ಸಂಪರ್ಕಿಸಲಾದ ಟೆಲಿಫೋನಿನಲ್ಲಿ ಮಾತನಾಡಿದರು.

1824: ಮೈಕೆಲ್ ಮಧುಸೂದನ ದತ್ (1824-1873) ಹುಟ್ಟಿದ ದಿನ. ಇವರು ಕವಿ ಹಾಗೂ ನಾಟಕಕಾರರಾಗಿ ಆಧುನಿಕ ಬಂಗಾಳಿ ಸಾಹಿತ್ಯದ ಮಹಾನ್ ಕವಿ ಎಂದು ಖ್ಯಾತರಾಗಿದ್ದಾರೆ.

Friday, February 26, 2010

ಇಂದಿನ ಇತಿಹಾಸ History Today ಜನವರಿ 24

ಇಂದಿನ ಇತಿಹಾಸ

ಜನವರಿ 24

ಜಪಾನಿನ ಪರ್ವತಾರೋಹಿ ಸುಮಿಯೊ ತ್ಸುಜುಕಿ (40) ಹಿಮಹಾವುಗೆ ತೊಟ್ಟು(ಸ್ಕೀ) ಹಿಮದ ಮೇಲೆ ಜಾರುತ್ತಾ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ಮಹಿಳೆ ಎಂಬ ಖ್ಯಾತಿಗೆ ಭಾಜನರಾದರು. ಸ್ಥಳೀಯ ಕಾಲಮಾನ ಬೆಳಗಿನ ಜಾವ 7.45ಕ್ಕೆ ಅವರು ದಕ್ಷಿಣ ಧ್ರುವ ಪ್ರದೇಶವನ್ನು ತಲುಪಿದರು. ನವೆಂಬರ್ 2007ರಿಂದಲೇ ದಕ್ಷಿಣ ಧ್ರುವಕ್ಕೆ (ಅಂಟಾರ್ಟಿಕಾ) ಸುಮಿಯೊ ಪ್ರಯಾಣ ಆರಂಬಿಸಿದ್ದರು.

2009: ಪ್ರಧಾನಿ ಡಾ. ಮನಮೋಹನ ಸಿಂಗ್ ಅವರಿಗೆ ಈದಿನ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್) ಹೃದಯದ ಬೈಪಾಸ್ ಶಸ್ತ್ರಚಿಕಿತ್ಸೆ ನಡೆಸಲಾಯಿತು. 'ಅವರ ಆರೋಗ್ಯ ಸ್ಥಿರವಾಗಿದ್ದು, 11 ಗಂಟೆಗಳ ಶಸ್ತ್ರಚಿಕಿತ್ಸೆಯ ಬಳಿಕ ತೀವ್ರ ನಿಗಾ ಘಟಕ (ಐಸಿಸಿಯು)ಕ್ಕೆ ಸ್ಥಳಾಂತರಿಸಲಾಗಿದೆ. 1990ರಲ್ಲಿ ಬ್ರಿಟನ್ನಿನಲ್ಲಿ ಅವರಿಗೆ ನಡೆದಿದ್ದ ಬೈಪಾಸ್ ಸಂದರ್ಭದಲ್ಲಿ ಕಸಿ ಮಾಡಿದ್ದ ಅಂಗಾಂಶಗಳ ಬದಲಿ ಜೋಡಣೆಯನ್ನು ಸಹ ಇಂದಿನ ಶಸ್ತ್ರಚಿಕಿತ್ಸೆ ಒಳಗೊಂಡಿತ್ತು' ಎಂದು ಏಮ್ಸ್ ವೈದ್ಯರು ತಿಳಿಸಿದರು. ಮುಂಜಾನೆ 5.30ಕ್ಕೆ ಪ್ರಧಾನಿಯನ್ನು ಶಸ್ತ್ರಚಿಕಿತ್ಸಾ ಕೊಠಡಿಗೆ ಕರೆದೊಯ್ಯಲಾಯಿತಾದರೂ 7.15ಕ್ಕೆ ಚಿಕಿತ್ಸೆ ಆರಂಭವಾಯಿತು. ಮುಂಬೈನ ಏಷ್ಯನ್ ಹಾರ್ಟ್ ಇನ್ಸ್‌ಟಿಟ್ಯೂಟ್ (ಎಎಚ್‌ಐ)ನ ತಜ್ಞ ರಮಾಕಾಂತ ಪಾಂಡ ನೇತೃತ್ವದ 11 ವೈದ್ಯರ ತಂಡದೊಂದಿಗೆ ಏಮ್ಸ್‌ನ ಮೂವರು ವೈದ್ಯರು ಮತ್ತು ಸಿಬ್ಬಂದಿ ಸಹಕರಿಸಿದರು.

2009: ನಕಲಿ ವೀಸಾ, ಪಾಸ್‌ಪೋರ್ಟ್ ಮತ್ತಿತರ ದಾಖಲೆಗಳನ್ನು ಸೃಷ್ಟಿಸಿ ವಿದೇಶಕ್ಕೆ ಮಾನವ ಕಳ್ಳ ಸಾಗಣೆ ಮಾಡುತ್ತಿದ್ದ ಅಂತಾರಾಷ್ಟ್ರೀಯ ಮಟ್ಟದ ವಂಚಕರ ಜಾಲವನ್ನು ಭೇದಿಸಿದ ಬೆಂಗಳೂರು ಸಂಪಿಗೆಹಳ್ಳಿ ಪೊಲೀಸರು ಏಳು ಮಂದಿಯನ್ನು ಬಂಧಿಸಿದರು. ಆರ್.ಟಿ.ನಗರದ ಸೈಯದ್ ಇಕ್ಬಾಲ್ (28), ಇಲಿಯಾಜ್ (43), ವಸೀಂ ಪಾಷಾ (24), ಸೈಯದ್ ಗೌಸ್ (37), ಚಿಕ್ಕಪೇಟೆ ಡಾ.ಟಿ.ಸಿ.ಎಂ.ರಾಯನ್ ರಸ್ತೆಯ ಸೈಯದ್ ಅಕ್ರಂ (44), ನ್ಯೂಭಾರತಿ ನಗರದ ಸಿದ್ದಿಕ್ ಹುಸೇನ್ (37) ಮತ್ತು ಮಾರಪ್ಪ ಗಾರ್ಡನ್ ಮೂರನೇ ಅಡ್ಡರಸ್ತೆಯ ಇಕ್ಬಾಲ್ ಅಹಮ್ಮದ್ (44) ಬಂಧಿತರು. ಪ್ರಕರಣದ ಇತರೆ ಎಂಟು ಆರೋಪಿಗಳು ತಲೆಮರೆಸಿಕೊಂಡರು.

2009: ಕಾಂಗ್ರೆಸ್, ಜೆಡಿಎಸ್, ಜೆಡಿಯು ಸದಸ್ಯರ ಆಕ್ಷೇಪದ ನಡುವೆ ವಿಧಾನ ಪರಿಷತ್ತಿನಲ್ಲಿ ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ಧತಿ (ಎಸ್‌ಎಎಸ್) ಜಾರಿಗೆ ಅವಕಾಶ ಮಾಡಿಕೊಡುವ ಕರ್ನಾಟಕ ಪೌರನಿಗಮಗಳ (ತಿದ್ದುಪಡಿ) ಮಸೂದೆಗೆ ಅಂಗೀಕಾರ ನೀಡಲಾಯಿತು. ತೆರಿಗೆ ನಿಗದಿ ಮಾಡುವ ಹಾಗೂ ಅದನ್ನು ಪರಿಷ್ಕರಿಸುವ ಅಧಿಕಾರವನ್ನು ಆಯುಕ್ತರಿಗೆ ನೀಡಿದ್ದು ವ್ಯಾಪಕ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡುತ್ತದೆ ಎಂದು ವಿರೋಧ ಪಕ್ಷಗಳ ಸದಸ್ಯರು ಶಂಕೆ ವ್ಯಕ್ತಪಡಿಸಿದರು. ವಾಹನ ನಿಲುಗಡೆ ಬಾಡಿಗೆ ಮೇಲೂ ತೆರಿಗೆ ವಿಧಿಸುವ ಉದ್ದೇಶಿತ ಪ್ರಸ್ತಾವದಿಂದ ನಾಗರಿಕರಿಗೆ ತೊಂದರೆಯಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

2009: 2020ನೇ ವರ್ಷದ ವೇಳೆಗೆ ದೇಶದ ಎಲ್ಲ ಸರ್ಕಾರಿ ಕಚೇರಿಗಳನ್ನು ಕಂಪ್ಯೂಟರೀಕರಣಗೊಳಿಸಬೇಕೆಂದು ಎರಡನೇ ಆಡಳಿತ ಸುಧಾರಣಾ ಆಯೋಗ ಶಿಫಾರಸು ಮಾಡಿತು. ಕಂಪ್ಯೂಟರೀಕರಣಗೊಳಿಸುವ ಪ್ರಕ್ರಿಯೆಯಲ್ಲಿ ಪಾಸ್‌ಪೋರ್ಟ್, ವೀಸಾ ಮತ್ತು ಭೂದಾಖಲೆಗಳ ವಿತರಣೆಗೆ ಆದ್ಯತೆ ನೀಡಲಾಯಿತು. ಪ್ರಾಯೋಗಿಕವಾಗಿ ಬೆಂಗಳೂರು ಮತ್ತು ಚಂಡೀಗಡದಲ್ಲಿ ದೇಶದ ಮೊದಲ ಆನ್‌ಲೈನ್ ಪಾಸ್‌ಪೋರ್ಟ್ ಸೇವಾ ಕೇಂದ್ರಗಳು 2009ನೇ ಮಾರ್ಚ್ ತಿಂಗಳೊಳಗೆ ಕಾರ್ಯಾರಂಭ ಮಾಡುವುವು. ಈ ಶಿಫಾರಸುಗಳನ್ನೊಳಗೊಂಡ ಆಯೋಗದ ಹನ್ನೊಂದನೇ ವರದಿಯನ್ನು ಅಧ್ಯಕ್ಷ ಎಂ.ವೀರಪ್ಪ ಮೊಯಿಲಿ ಈದಿನ ನವದೆಹಲಿಯಲ್ಲಿ ಬಿಡುಗಡೆ ಮಾಡಿದರು. ದೇಶದಲ್ಲಿ ಈಗ 345 ಪಾಸ್‌ಪೋರ್ಟ್ ಕಚೇರಿಗಳಿದ್ದು ಅವುಗಳನ್ನು 1250ಕ್ಕೆ ಹೆಚ್ಚಿಸುವುದರ ಜೊತೆಗೆ ಅದರ ಸಂಪೂರ್ಣ ಕಾರ್ಯವನ್ನು ಆನ್‌ಲೈನ್ ಮಾಡಲು ವಿದೇಶಾಂಗ ವ್ಯವಹಾರ ಇಲಾಖೆ ನಿರ್ಧರಿಸಿದೆ ಎಂದು ವರದಿ ಹೇಳಿತು.

2009: ತಿಲಕರತ್ನೆ ದಿಲ್ಶನ್ ಅವರ ಅಜೇಯ ಶತಕ (137) ಹಾಗೂ ಬೌಲರುಗಳ ಮೊನಚಾದ ದಾಳಿಯ ನೆರವಿನಿಂದ ಲಾಹೋರಿನಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ತಂಡ ಪಾಕಿಸ್ಥಾನ ವಿರುದ್ಧ ಅಂತಿಮ ಏಕದಿನ ಕ್ರಿಕೆಟ್ ಪಂದ್ಯದಲ್ಲಿ 234 ರನ್ನುಗಳ ಭರ್ಜರಿ ಗೆಲುವು ಪಡೆಯಿತು. ಈ ಗೆಲುವಿನ ಮೂಲಕ ಮಾಹೇಲ ಜಯವರ್ಧನೆ ಬಳಗ ಮೂರು ಪಂದ್ಯಗಳ ಸರಣಿಯನ್ನು 2-1 ರಲ್ಲಿ ತನ್ನದಾಗಿಸಿತು. ಲಂಕಾ ತಂಡದ ವಿಶ್ವವಿಖ್ಯಾತ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಈ ಪಂದ್ಯದಲ್ಲಿ ಏಕದಿನ ಕ್ರಿಕೆಟಿನಲ್ಲಿ 500 ವಿಕೆಟ್ ಪಡೆದ ಸಾಧನೆ ಮಾಡಿ ಸಹ ಆಟಗಾರರ ಸಂಭ್ರಮ ಹೆಚ್ಚಿಸಿದರು.

2009: ಜಲಜನಕ ಉತ್ಪತ್ತಿಗೆ ವಿಜ್ಞಾನಿಗಳು ಹೊಸ ವಿಧಾನವೊಂದನ್ನು ಕಂಡುಹಿಡಿದರು. ಅಲ್ಯೂಮಿನಿಯಂ ಅಣುಗಳ ಆಯ್ದ ಗುಚ್ಛಗಳು ಹಾಗೂ ನೀರಿನ ನಡುವೆ ರಾಸಾಯನಿಕ ಕ್ರಿಯೆ ನಡೆಯುವಂತೆ ಮಾಡುವ ಮೂಲಕ ಈ ಹೊಸ ವಿಧಾನವನ್ನು ಕಂಡುಹಿಡಿದಿರುವುದಾಗಿ ಅವರು ವಾಷಿಂಗ್ಟನ್ನಿನಲ್ಲಿ ಪ್ರಕಟಿಸಿದರು. ಈ ಸಂಶೋಧನೆಯು ಕೇವಲ ನೀರಿನ ವಿಭಜನೆಯಲ್ಲಿ ಮಾತ್ರವಲ್ಲ; ಇತರ ಸಣ್ಣ ಕಣಗಳ ಬಂಧವನ್ನು ಬೇರ್ಪಡಿಸುವಲ್ಲಿಯೂ ಹೊಸ ಸಾಧ್ಯತೆಯನ್ನು ತೆರೆದಿಡಬಲ್ಲುದು ಎಂದು ಪೆನ್ ವಿಶ್ವವಿದ್ಯಾಲಯದ ವಿಜ್ಞಾನಿ ಇವಾನ್ ಪಗ್ ಅಭಿಪ್ರಾಯಪಟ್ಟರು.

2008: ಆಸ್ಟ್ರೇಲಿಯಾದ ಅತ್ಯಂತ ಹಳೆಯ ಪತ್ರಿಕೆಯಾದ `ದಿ ಬುಲೆಟಿನ್' ತನ್ನ ಕೊನೆಯ ಸಂಚಿಕೆಯನ್ನು ಪ್ರಕಟಿಸಿತು. ಈ ಮೂಲಕ 127ವರ್ಷಗಳಷ್ಟು ಹಳೆಯದಾದ ಈ ಪತ್ರಿಕೆ ಅಧಿಕೃತವಾಗಿ ಮುಚ್ಚಿಹೋಯಿತು. ಪತ್ರಿಕೆಯ ಪ್ರಸಾರದಲ್ಲಿ ಕುಸಿತ ಕಂಡದ್ದರಿಂದ ಪತ್ರಿಕೆಯನ್ನು ಮುಚ್ಚಬೇಕಾಯಿತು. ಈ ಪ್ರಸಿದ್ಧ ಪತ್ರಿಕೆಯಲ್ಲಿ ಹಲವು ಖ್ಯಾತನಾಮರ ಆರಂಭಿಕ ಲೇಖನಗಳು ಪ್ರಕಟವಾಗಿದ್ದವು. ಉತ್ತಮ ಗುಣಮಟ್ಟ, ನಿಷ್ಪಕ್ಷಪಾತ ವರದಿಗಳು, ಪ್ರಚಲಿತ ವಿಷಯಗಳ ವಿಶ್ಲೇಷಣೆಗೆ ಹೆಸರಾಗಿದ್ದ `ದಿ ಬುಲೆಟಿನ್' ಪತ್ರಿಕಾ ರಂಗದ ಹಲವು ಪ್ರಶಸ್ತಿಗಳನ್ನು ಗಳಿಸಿತ್ತು. ವೇಗವಾಗಿ ಬೆಳೆಯುತ್ತಿರುವ ಅಂತರ್ಜಾಲ ಪತ್ರಿಕೋದ್ಯಮದೊಂದಿಗೆ ಸ್ಪರ್ಧಿಸಲಾಗದೇ ಇದ್ದುದರಿಂದ `ದಿ ಬುಲೆಟಿನ್' ಕೊನೆಯುಸಿರು ಎಳೆಯಬೇಕಾಯಿತು ಎಂದು ಮಾಧ್ಯಮ ವಿಶ್ಲೇಷಕ ಹರೊಲ್ಡ್ ಮಿಚೆಲ್ ವಿಶ್ಲೇಷಿಸಿದರು.

2008: ಜಪಾನಿನ ಪರ್ವತಾರೋಹಿ ಸುಮಿಯೊ ತ್ಸುಜುಕಿ (40) ಹಿಮಹಾವುಗೆ ತೊಟ್ಟು(ಸ್ಕೀ) ಹಿಮದ ಮೇಲೆ ಜಾರುತ್ತಾ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ಮಹಿಳೆ ಎಂಬ ಖ್ಯಾತಿಗೆ ಭಾಜನರಾದರು. ಸ್ಥಳೀಯ ಕಾಲಮಾನ ಬೆಳಗಿನ ಜಾವ 7.45ಕ್ಕೆ ಅವರು ದಕ್ಷಿಣ ಧ್ರುವ ಪ್ರದೇಶವನ್ನು ತಲುಪಿದರು. ನವೆಂಬರ್ 2007ರಿಂದಲೇ ದಕ್ಷಿಣ ಧ್ರುವಕ್ಕೆ (ಅಂಟಾರ್ಟಿಕಾ) ಸುಮಿಯೊ ಪ್ರಯಾಣ ಆರಂಬಿಸಿದ್ದರು.

2008: ಫ್ರಾನ್ಸಿನ ಪ್ರತಿಷ್ಠಿತ `ಆಫೀಸರ್ ಆಫ್ ದ ಆರ್ಡರ್ ಆಫ್ ಆರ್ಟ್ಸ್ ಅಂಡ್ ಲೆಟರ್ಸ್' ಸಾಂಸ್ಕೃತಿಕ ಪ್ರಶಸ್ತಿಗೆ ಬಾಲಿವುಡ್ಡಿನ ಖ್ಯಾತ ನಟ ಶಾರುಖ್ ಖಾನ್ ಆಯ್ಕೆಯಾದರು. ವೃತ್ತಿ ಜೀವನದ ಉತ್ತಮ ಸಾಧನೆ ಮತ್ತು ಸಿನಿಮಾದ ಮೂಲಕ ಭಾರತ-ಫ್ರಾನ್ಸ್ ಮಧ್ಯೆ ಸಹಕಾರ ಮೂಡಿಸಿರುವ ಕಾರ್ಯವನ್ನು ಗುರುತಿಸಿ ಖಾನ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು ಎಂದು ಎಂದು ಫ್ರಾನ್ಸ್ ರಾಯಭಾರ ಕಚೇರಿಯ ಪ್ರಕಟಣೆ ತಿಳಿಸಿತು. ಶಾರುಖ್ ಜತೆಗೆ ಜಾರ್ಜ್ ಕ್ಲೂನಿ, ಕ್ಲಿಂಟ್ ಈಸ್ಟ್ ವುಡ್, ಮೆರಿ ಸ್ಟ್ರೀಟ್, ಬ್ರ್ಯೂಸ್ ವಿಲ್ಸ್, ಜುಡೆ ಲಾ ಹಾಗೂ ಅರುಂಧತಿ ರಾಯ್ ಅವರನ್ನೂ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆ ತಿಳಿಸಿತು.

2008: ವಿಜಾಪುರ ಮಹಿಳಾ ವಿವಿ ಕುಲಪತಿಯಾಗಿ ಬೆಂಗಳೂರು ವಿ.ವಿಯ ಸೂಕ್ಷ್ಮ ಜೀವಾಣು ವಿಜ್ಞಾನ ವಿಭಾಗದ ಪ್ರಾಧ್ಯಾಪಕಿ ಡಾ. ಗೀತಾ ಬಾಲಿ ಅವರನ್ನು ನೇಮಕ ಮಾಡಲಾಯಿತು.

2008: `ಹೆವೆನ್ ಸೆಂಟ್ ಬ್ರಾಂಡಿ' - ಇದು ಜಗತ್ತಿನ ಅತ್ಯಂತ ಪುಟ್ಟ ನಾಯಿ. ಈ ಪುಟ್ಟ ಹೆಣ್ಣು ನಾಯಿಯ ಹೆಸರು ಚಿಚೌಹುವಾ. ಬೊಗಳಲು ಬಾರದ ಈ ನಾಯಿಯ ಕಾಲುಗಳು ಲಾಲಿ ಪಪ್ಪನ್ನು ಹೋಲುತ್ತವೆ. ಮೂಗಿನಿಂದ ಬಾಲದವರೆಗೆ ಅಳೆದರೆ, ಅದರ ಉದ್ದ ಆರು ಅಂಗುಲ. ಒಟ್ಟಾರೆ ತನ್ನ ಆಕಾರವನ್ನೇ ಬಂಡವಾಳವಾಗಿಸಿಕೊಂಡಿರುವ ಈ ಬ್ರಾಂಡಿ ನಾಯಿ, `ಉದ್ದದಲ್ಲಿ ಅತಿ ಪುಟ್ಟ ನಾಯಿ' ಎಂದು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡಿನಿಂದ 2005ರಲ್ಲಿ ಸರ್ಟಿಫಿಕೇಟ್ ಪಡೆದಿತ್ತು ಎಂದು ಲಂಡನ್ನಿನಲ್ಲಿ ಈ ದಿನ ಪ್ರಕಟಿಸಲಾಯಿತು.

2007: ಕನ್ನಡವೂ ಸೇರಿದಂತೆ ಏಳು ಭಾಷೆಗಳ ಪ್ರತ್ಯೇಕ ಸಾಫ್ಟ್ ವೇರ್ ಸಾಧನ ಮತ್ತು ಫಾಂಟ್ ಗಳ ಸಿಡಿಗಳನ್ನು ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆ ಬಿಡುಗಡೆ ಮಾಡಿತು. ಕನ್ನಡ, ಉರ್ದು, ಪಂಜಾಬಿ, ಮರಾಠಿ, ಮಲೆಯಾಳಂ, ಒರಿಯಾ ಮತ್ತು ಅಸ್ಸಾಮಿ ಭಾಷೆಗಳ ಫಾಂಟ್ಸ್, ಇಮೇಲ್ ಗೆ ನೆರವಾಗುವ ಮೆಜೆಂಜರ್ ಬ್ರೌಸರ್, ಲಿಪಿ ಸಂಸ್ಕಾರಕ, ಸ್ಪೆಲ್ ಚೆಕ್, ಬಹುಭಾಷಾ ಶಬ್ಧಕೋಶದ ಸಿಡಿಯನ್ನು ಸಿ-ಡಾಕ್ ವಿವಿಧ ತಜ್ಞರ ನೆರವಿನಿಂದ ತಯಾರಿಸಿದೆ.

2007: ಹಿರಿಯ ಪತ್ರಕರ್ತ ವೈ.ಕೆ. ರಾಜಗೋಪಾಲ್ (86) ಅವರು ಬೆಂಗಳೂರಿನಲ್ಲಿ ನಿಧನರಾದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದ ರಾಜಗೋಪಾಲ್ `ಡೆಕ್ಕನ್ ಹೆರಾಲ್ಡ್' ಪತ್ರಿಕೆಯ ಮುಖ್ಯ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ಅವಿವಾಹಿತರಾಗಿದ್ದು `ಮದರ್ ಲ್ಯಾಂಡ್' `ಇನ್ಫಾ' ಸುದ್ದಿ ಸಂಸ್ಥೆಗಳಲ್ಲೂ ಸೇವೆ ಸಲ್ಲಿಸಿದ್ದರು. ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ರಚಿಸಲಾಗಿದ್ದ ಮಹಾಜನ್ ವರದಿಯ ಶಿಫಾರಸುಗಳನ್ನು `ಸ್ಕೂಪ್' ಮಾಡಿದ ಕೀರ್ತಿ ಇವರದು.

2007: ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಕಬ್ಬಿಗೆರೆಯಲ್ಲಿ ನಿರ್ಮಿಸಿರುವ 500 ಕೆ.ವಿ. ಸಾಮರ್ಥ್ಯದ ದೇಶದ ಮೊತ್ತ ಮೊದಲ ಬಯೋಮಾಸ್ ಗ್ಯಾಸಿಫೈಯರ್ ಘಟಕವನ್ನು ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಸಿ.ಎಂ. ಉದಾಸಿ ರಾಷ್ಟ್ರಕೆ ಸಮರ್ಪಿಸಿದರು.

2006: ಬಿಹಾರದ ಈ ಮೊದಲಿನ ವಿಧಾನಸಭೆ ವಿಸರ್ಜನೆಗೆ ಶಿಫಾರಸು ಮಾಡಿದ್ದ ರಾಜ್ಯಪಾಲ ಬೂಟಾಸಿಂಗ್ ಅವರಿಗೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿತು. ರಾಜ್ಯಪಾಲರು ಕೇಂದ್ರ ಸರ್ಕಾರವನ್ನು ಹಾದಿ ತಪ್ಪಿಸಿದ್ದಾರೆ ಎಂದೂ ಮುಖ್ಯನ್ಯಾಯಮೂರ್ತಿ ವೈ.ಕೆ. ಸಭರ್ ವಾಲ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನಪೀಠವು 3-2ರ ಬಹುಮತದ ತೀರ್ಪಿನಲ್ಲಿ ಹೇಳಿತು. ಜನತಾದಳ (ಯು) ಅಧಿಕಾರಕ್ಕೆ ಬರದಂತೆ ತಡೆಯುವ ಏಕಮಾತ್ರ ಉದ್ದೇಶದ ರಾಜ್ಯಪಾಲರ ಕ್ರಮದ ಸತ್ಯಾಸತ್ಯತೆಯನ್ನು ಕೇಂದ್ರ ಸರ್ಕಾರವೂ ಪರಾಮರ್ಶಿಸಿ ರಾಜ್ಯಪಾಲರ ವರದಿಯ ಅಂಶವನ್ನು ದೃಢಪಡಿಸಿಕೊಳ್ಳಬೇಕಿತ್ತು ಎಂದು ನ್ಯಾಯಾಲಯ ಹೇಳಿತು.

2006: ಕುವೈತಿನ ಅಸ್ವಸ್ಥ ದೊರೆ ಶೇಖ್ ಸಾದ್ ಅಲ್ ಅಬ್ದ್ಲುಲಾ ಅವರು ಆಳುವ ಕುಟುಂಬದ ಒಳಗಿನ ಒಪ್ಪಂದಕ್ಕೆ ಅನುಗುಣವಾಗಿ ಅರಸೊತ್ತಿಗೆ ತ್ಯಜಿಸಿದರು. ಇದರಿಂದಾಗಿ ರಾಜಕುಟುಂಬದೊಳಗಿನ ಬಿಕ್ಕಟ್ಟು ಬಗೆಹರಿದು, ದೀರ್ಘಕಾಲದಿಂದ ಅಧಿಕಾರ ಇಲ್ಲದೆ ನಾಮಮಾತ್ರ ಆಳ್ವಿಕೆ ನಡೆಸುತ್ತಿದ್ದ ಪ್ರಧಾನಿ ಶೇಕ್ ಅಲ್ ಸಭಾ ಅಲ್ ಅಹಮದ್ ಅಲ್ ಸಭಾ ಅವರಿಗೆ ನೂತನ ದೊರೆಯಾಗಿ ಅಧಿಕಾರ ವಹಿಸಿಕೊಳ್ಳಲು ದಾರಿ ಸುಗಮಗೊಂಡಿತು.

2006: ಕರ್ನಾಟಕದ ರಾಜಕೀಯ ಬಿಕ್ಕಟ್ಟು ಇತ್ಯರ್ಥದ ನಿಟ್ಟಿನಲ್ಲಿ ಕಾಂಗ್ರೆಸ್ ಮುಖ್ಯಸ್ಥ ಸೋನಿಯಾಗಾಂಧಿ ಮತ್ತು ಜನತಾದಳ (ಎಸ್) ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ. ದೇವೇಗೌಡ ಅವರ ಮಧ್ಯೆ ನವದೆಹಲಿಯಲ್ಲಿ ನಡೆದ ಮಾತುಕತೆ ಅಪೂರ್ಣಗೊಂಡಿತು.

1966: ಏರ್ ಇಂಡಿಯಾ ಬೋಯಿಂಗ್ 707 ಸ್ವಿಟ್ಜರ್ ಲ್ಯಾಂಡಿನ ಆಲ್ಫ್ ನಲ್ಲಿ ಅಪಘಾತಕ್ಕೆ ಈಡಾಗಿ 144 ಮಂದಿ ಅಸು ನೀಗಿದರು. ಭಾರತದ ಖ್ಯಾತ ಪರಮಾಣು ವಿಜ್ಞಾನಿ ಹೋಮಿ ಜಹಾಂಗೀರ್ ಬಾಬಾ ಅವರು ಈ ಅಪಘಾತದಲ್ಲಿ ಅಸುನೀಗಿದರು.

1966: ಇಂದಿರಾ ಗಾಂಧಿಯವರು ಭಾರತದ ಮೂರನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

1963: ಸಾಹಿತಿ ರವೀಂದ್ರ ಶರ್ಮ ಟಿ. ಜನನ.

1950: `ಜನ ಗಣ ಮನ' ಹಾಡನ್ನು ಭಾರತದ ರಾಷ್ಟ್ರಗೀತೆಯಾಗಿ ಅಂಗೀಕರಿಸಲಾಯಿತು. ರಾಜೇಂದ್ರ ಪ್ರಸಾದ್ ಅವರು ಭಾರತದ ಪ್ರಥಮ ರಾಷ್ಟ್ರಪತಿಯಾಗಿ ಆಯ್ಕೆಯಾದರು.

1944: ಕಲಾವಿದ ಶೇಷಚಂದ್ರ ಎಚ್. ಎಲ್. ಜನನ.

1936: ಕಲಾವಿದೆ ಶಾಂತಾ ಪೋಟಿ ಜನನ.

1895: ಲಾರ್ಡ್ ರಾಂಡೋಲ್ಫ್ ಚರ್ಚಿಲ್ (1849-1895) ತಮ್ಮ 37ನೇ ವಯಸಿನಲ್ಲಿ ನಿಧನರಾದರು. ಬ್ರಿಟಿಷ್ ರಾಜಕಾರಣಿಯಾದ ಇವರು ಹೌಸ್ ಆಫ್ ಕಾಮನ್ಸ್ ನ ನಾಯಕರೂ, ಚಾನ್ಸಲರ್ ಆಫ್ ಎಕ್ಸ್ ಚೆಕರ್ ಆಗಿಯೂ ಖ್ಯಾತಿ ಗಳಿಸಿದರು. ಇವರ ಪುತ್ರ ವಿನ್ ಸ್ಟನ್ ಚರ್ಚಿಲ್ (1874-1965) 1965ರಲ್ಲಿ ಇದೇ ದಿನ ಮೃತರಾದರು. ಬ್ರಿಟನ್ನಿನ ಪ್ರಧಾನಿಯಾಗಿ ಯುದ್ಧಕಾಲದಲ್ಲಿ ಗ್ರೇಟ್ ಬ್ರಿಟನ್ನನ್ನು ವಿಜಯದತ್ತ ಮುನ್ನಡೆಸಿದ ಚರ್ಚಿಲ್ ತಾನು ಅಪ್ಪ ಸತ್ತ ದಿನವೇ ಸಾಯುವುದಾಗಿ ಹೇಳಿದ್ದರು.!

1877: ಕಾವ್ಯವಾಚನದಲ್ಲಿ ಹೆಸರುವಾಸಿಯಾಗಿದ್ದ ಸಂ.ಗೋ. ಬಿಂದೂರಾಯರು (24-1-1877ರಿಂದ 6-9-1966) ಗೋವಿಂದ ರಾಯರು- ರಮಾಭಾಯಿ ದಂಪತಿಯ ಮಗನಾಗಿ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ತಳುಕಿನಲ್ಲಿ ಜನಿಸಿದರು.

1870: ಮುದ್ದಣ ಹೆಸರಿನಿಂದಲೇ ಜನಪ್ರಿಯರಾಗಿದ್ದ ನಂದಳಿಕೆ ಲಕ್ಷ್ಮೀನಾರಣಪ್ಪ ಅವರು ಉಡುಪಿ ಮತ್ತು ಕಾರ್ಕಳ ನಡುವಣ ನಂದಳಿಕೆ ಗ್ರಾಮದಲ್ಲಿ ಪಾಠಾಳಿ ತಿಮ್ಮಪ್ಪಯ್ಯ ಮತ್ತು ಮಹಾಲಕ್ಷ್ಮಮ್ಮ ದಂಪತಿಯ ಪುತ್ರರಾಗಿ ಜನಿಸಿದರು. ಬಾಲ್ಯದಿಂದಲೇ ಯಕ್ಷಗಾನ ಕೃತಿಗಳ ರಚನೆಗೈದ ಮುದ್ದಣನ ಮೇರು ಕೃತಿ ರಾಮಾಶ್ವಮೇಧ. ಮುದ್ದಣ ಮನೋರಮೆಯರ ಸರಸ ಸಂಭಾಷಣೆಯೊಂದಿಗೆ ಆರಂಭವಾಗುವ ಈ ಕೃತಿ ವಿಶಿಷ್ಟವಾದುದು. ಕನ್ನಡ ನವೋದಯದ ಮುಂಜಾನೆ ಕೋಳಿ ಎಂಬ ಕೀರ್ತಿಗೆ ಭಾಜನರಾದ ಮುದ್ದಣ ಅವರನ್ನು ಸಾಮಾನ್ಯ ಚಿತ್ರಕ್ಕೆ ಸುವರ್ಣ ಚೌಕಟ್ಟು ಎಂದು ಎಸ್. ವಿ. ರಂಗಣ್ಣ ಪ್ರಶಂಸಿದ್ದರು. ಕ್ಷಯರೋಗ ತಗುಲಿ 32ನೇ ವಯಸ್ಸಿನಲ್ಲಿ 1901ರ ಫೆಬ್ರವರಿ 16ರಂದು ಮುದ್ದಣ ನಿಧನರಾದರು. 75 ವರ್ಷಗಳ ನಂತರ 1976ರಲ್ಲಿ ಅವರ ನೆನಪಿಗಾಗಿ ಮುದ್ದಣ ಪ್ರಶಸ್ತಿ ಗ್ರಂಥ ಪ್ರಕಟಿಸಲಾಯಿತು.

1826: ಜ್ಞಾನೇಂದ್ರ ಮೋಹನ್ ಟ್ಯಾಗೋರ್ (1826-1890) ಹುಟ್ಟಿದ ದಿನ. ಇವರು ಕಲ್ಕತ್ತಾ ಹೈಕೋರ್ಟಿನ ಬ್ಯಾರಿಸ್ಟರ್ ಆಗಿ ನೋಂದಣಿಯಾದ ಮೊದಲ ಭಾರತೀಯ.

Thursday, February 25, 2010

ಇಂದಿನ ಇತಿಹಾಸ History Today ಜನವರಿ 23


ಇಂದಿನ ಇತಿಹಾಸ

ಜನವರಿ 23

ಲಾರ್ಡ್ ಇರ್ವಿನ್ ಮೊತ್ತ ಮೊದಲ ಬಾರಿಗೆ ನವದೆಹಲಿಯ `ವೈಸ್ ರಾಯ್ ಹೌಸ್' ನಲ್ಲಿ ವಾಸ್ತವ್ಯ ಹೂಡಿದರು. ಈ ಕಟ್ಟಡ ಈಗ `ರಾಷ್ಟ್ರಪತಿ ಭವನ' ಆಗಿದೆ. ಎಡ್ವಿನ್ ಲ್ಯುಟಿಯೆನ್ಸ್ ಈ ಕಟ್ಟಡದ ವಿನ್ಯಾಸಕಾರರಾಗಿದ್ದು, 1913ರಲ್ಲಿ ಕಟ್ಟಡ ನಿರ್ಮಾಣ ಆರಂಭವಾಯಿತು. 18,580 ಚದರ ಅಡಿಗಳಷ್ಟು ವ್ಯಾಪ್ತಿಯಲ್ಲಿ ನಿರ್ಮಾಣಗೊಂಡ ಈ ಕಟ್ಟಡದ ಒಟ್ಟು ವೆಚ್ಚ 1.40 ಕೋಟಿ ರೂಪಾಯಿಗಳು. ಲ್ಯೂಟಿಯನ್ಸನ ಶುಲ್ಕ 5000 ಪೌಂಡುಗಳು.

2009: ಮತ್ತೆ ಭ್ರಷ್ಟ ಅಧಿಕಾರಿಗಳ ಕೋಟೆಯನ್ನು ಬೇಧಿಸಿದ ಕರ್ನಾಟಕ ಲೋಕಾಯುಕ್ತ ಪೊಲೀಸರು ಇದೇ ಮೊದಲ ಬಾರಿಗೆ ಡಿಐಜಿ ದರ್ಜೆಯ ಐಪಿಎಸ್ ಅಧಿಕಾರಿಯೊಬ್ಬರನ್ನು ಬಲೆಗೆ ಕೆಡವಿದರು. ಅರಣ್ಯ ಇಲಾಖೆ ಸಿಐಡಿ ಘಟಕದ ಡಿಐಜಿ ಎಂ.ಸಿ. ನಾರಾಯಣಗೌಡ ಸೇರಿದಂತೆ ರಾಜ್ಯದ ವಿವಿಧೆಡೆ ಏಳು ಅಧಿಕಾರಿಗಳ ಮನೆ ಮೇಲೆ ದಾಳಿ ನಡೆದು, ಒಂಬತ್ತು ಕೋಟಿ ರೂಪಾಯಿಗೂ ಹೆಚ್ಚು ಅಕ್ರಮ ಆಸ್ತಿ ಪತ್ತೆಯಾಯಿತು. ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಆರೋಪದ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕ ಎಸ್.ಪಿ. ರಾಜು, ಬೆಂಗಳೂರು ಸಿಸಿಬಿ ಇನ್ಸ್‌ಪೆಕ್ಟರ್ ರೇವಣ್ಣ, ಬಿಬಿಎಂಪಿ ಸಹಾಯಕ ಎಂಜಿನಿಯರ್ ಶಿವರಾಂ, ಹೊಸಪೇಟೆಯ ವಾಣಿಜ್ಯ ತೆರಿಗೆ ಇನ್ಸ್‌ಪೆಕ್ಟರ್ ಷಣ್ಮುಖಪ್ಪ ಕೃಷ್ಣಪ್ಪ ದೊಂಬರ, ಗದಗಿನ ಆಹಾರ ಮತ್ತು ನಾಗರಿಕ ಸರ್ಗರಾಜು ಇಲಾಖೆ ವ್ಯವಸ್ಥಾಪಕ ಶಿವಪ್ಪ ಮಲ್ಲೇಶಪ್ಪ ಗಡ್ಡದವರ್ ಮತ್ತು ಪಂಚಾಯತ್ ರಾಜ್ ಇಲಾಖೆ ದೇವದುರ್ಗ ವಿಭಾಗದ ಕಿರಿಯ ಎಂಜಿನಿಯರ್ ಸೈಯದ್ ನಸರತ್ ಅಲಿ ಅವರ ಮನೆ ಮೇಲೂ ದಾಳಿ ನಡೆಯಿತು.

2009: ಎರಡನೇ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಸಾಹಿತಿ ಎಂ.ವೀರಪ್ಪ ಮೊಯಿಲಿ ಅವರು ಬರೆದ 'ರಾಮಾಯಣ ಮಹಾನ್ವೇಷಣಂ' ಕೃತಿಯ ಎರಡನೇ ಸಂಪುಟದ ಹಿಂದಿ ಅನುವಾದದ ಬಿಡುಗಡೆ ನವದೆಹಲಿಯಲ್ಲಿ ಈ ದಿನ ನಡೆಯಿತು. ಪ್ರಧಾನ ಗುರುದತ್ತ ಅವರು ಹಿಂದಿಗೆ ಅನುವಾದಿಸಿದ ಗ್ರಂಥವನ್ನು ಕರ್ನಾಟಕ ರಾಜ್ಯಪಾಲ ರಾಮೇಶ್ವರ ಠಾಕೂರ್ ಬಿಡುಗಡೆ ಮಾಡಿದರು.

2009: ಪ್ರಸಿದ್ಧ ರಂಗ ನಿರ್ದೇಶಕ ಹಾಗೂ ಹಾಸ್ಯ ಕಲಾವಿದ ಬಾಲಕೃಷ್ಣ ಪೈ (78) ಯಾನೆ ಕುಳ್ಳಪ್ಪು ಹೃದಯಾಘಾತದಿಂದ ಕುಂದಾಪುರದಲ್ಲಿ ನಿಧನರಾದರು. ರಾಜ್ಯನಾಟಕ ಆಕಾಡೆಮಿ, ಕೊಂಕಣಿ ನಾಟಕ ಆಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದ ಬಾಲಕೃಷ್ಣ ಪೈ ತಮ್ಮ ಕುಳ್ಳನೆ ದೇಹಕಾಯದಿಂದಾಗಿ ಕುಳ್ಳಪ್ಪು ಎಂದೇ ಜನಾನುರಾಗಿಯಾಗಿಯಾಗಿದ್ದರು. ಹಲವು ನಾಟಕಗಳನ್ನು ನಿರ್ದೇಶಿಸಿದ್ದ ಅವರು ಕೆಲವೊಂದು ನಾಟಕಗಳನ್ನು ರಚಿಸಿದ್ದರು. ನಟನೆಯಲ್ಲಿಯೂ ಸೈ ಎನಿಸಿಕೊಂಡಿದ್ದ ಅವರು ತಮ್ಮ ಹಾಸ್ಯಾಭಿನಯದಿಂದ ಆಪಾರ ಅಭಿಮಾನಿಗಳನ್ನು ಹೊಂದಿದ್ದರು. ಜಿಲ್ಲೆಯ ಪ್ರಸಿದ್ಧ ರಂಗ ಸಂಸ್ಥೆ ರೂಪಕಲಾ ನಾಟಕ ಸಂಸ್ಥೆ ಹಾಗೂ ಲಕ್ಷ್ಮೀ ವೆಂಕಟೇಶ ಕೊಂಕಣಿ ನಾಟಕ ಸಭಾದ ಸಂಸ್ಥಾಪಕರಾಗಿದ್ದ ಅವರು 70 ರ ದಶಕದಲ್ಲಿ ನಾಟಕ ಕಂಪೆನಿಯನ್ನು ಕಟ್ಟಿ ಅದರ ಉಳಿವಿಗಾಗಿ ಸಾಕಷ್ಟು ಹೋರಾಟ ನಡೆಸಿದ್ದರು. ಅವರ 'ಮೂರು ಮುತ್ತುಗಳು' ನಾಟಕ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಸೇರಿ ಒಟ್ಟು 600 ಕ್ಕಿಂತಲೂ ಹೆಚ್ಚಿನ ಪ್ರಯೋಗಗಳನ್ನು ಕಂಡಿತ್ತು..

2009: ಚಲನಚಿತ್ರಗಳಲ್ಲಿ ಧೂಮಪಾನ ದೃಶ್ಯಗಳನ್ನು ನಿಷೇಧಿಸಿ ಕೇಂದ್ರ ಸರ್ಕಾರ ಹೊರಡಿಸಿದ ಅಧಿಸೂಚನೆಯನ್ನು ದೆಹಲಿ ಹೈಕೋರ್ಟ್ ರದ್ದು ಪಡಿಸಿತು. 'ಸರ್ಕಾರದ ಇಂತಹ ಕ್ರಮ ಚಿತ್ರ ನಿರ್ಮಾಪಕರ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕಿಗೆ ಚುತ್ಯಿ ತರುತ್ತದೆ' ಎಂದು ಹೈಕೋರ್ಟ್ ಸಮನ್ವಯ ಪೀಠ ಹೇಳಿತು. 2006ರ ಅಕ್ಟೋಬರಿನಲ್ಲಿ ಕೇಂದ್ರ ಸರ್ಕಾರ ಹೊರಡಿಸಿದ್ದ 'ತೆರೆ ಮೇಲೆ ಧೂಮಪಾನ ಸಲ್ಲದು' ಎಂಬ ನಿಬಂಧನೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಸಮನ್ವಯ ಪೀಠದ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅವರು, ಸರ್ಕಾರದ ಈ ಕ್ರಮ ನಿರ್ದೇಶಕರು ಹಾಗೂ ನಿರ್ಮಾಪಕರ ಕತ್ತು ಹಿಸುಕುವ ಕೆಲಸವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದರು. ಹಿಂದಿನ ವರ್ಷ ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಅವರು ಸರ್ಕಾರದ ಕ್ರಮವನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಹೈಕೋರ್ಟ್ ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ಮುಕುಲ್ ಮುದ್ಗಲ್ ಹಾಗೂ ಸಂಜೀವ್ ಖನ್ನಾ ಅವರು ತೀರ್ಪಿನಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ ಕಾರಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರು ಸಮನ್ವಯ ನ್ಯಾಯಮೂರ್ತಿಯಾಗಿ ಸಂಜಯ್ ಕಿಶನ್ ಕೌಲ್ ಅವರನ್ನು ನೇಮಕ ಮಾಡಿದ್ದರು.

2009: ಚೀನಾದ ಆಟಿಕೆಗಳ ಆಮದು ಮೇಲೆ ಮುಂದಿನ 6 ತಿಂಗಳ ಅವಧಿಗೆ ಭಾರತ ನಿಷೇಧ ಹೇರಿತು. ಅಗ್ಗದ ದರದಲ್ಲಿ ಕೆಳ ದರ್ಜೆಯ ಆಟಿಕೆಗಳನ್ನು ರವಾನಿಸಿ ದೇಶೀಯ ಮಾರುಕಟ್ಟೆಗೆ ಕಂಟಕವಾಗಿದ್ದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಕೇಂದ್ರ ಸರ್ಕಾರ ಈ ಕಠಿಣ ಕ್ರಮ ಕೈಗೊಂಡಿತು. ನಿಷೇಧಕ್ಕೆ ಆಟಿಕೆ ಆಮದು ಹೆಚ್ಚಳದ ಕಾರಣವನ್ನಷ್ಟೇ ತೋರಲಾಯಿತು. ಈ ಮೊದಲೇ ಚೀನಾದ ಕ್ಷೀರ , ಕ್ಷೀರೋತ್ಪನ್ನಗಳಿಗೆ ನಿಷೇಧ ವಿಧಿಸಲಾಗಿತ್ತು.

2009: ಪಾಕಿಸ್ಥಾನದ ದಕ್ಷಿಣ ಸಿಂಧ್ ಪ್ರಾಂತ್ಯದಲ್ಲಿ ಪ್ರಾಚೀನ ಮೊಹೆಂಜೊದಾರೊಕ್ಕಿಂತಲೂ ಹಳೆಯದಾದ, ಸುಮಾರು 5,500 ವರ್ಷಗಳ ಇತಿಹಾಸವಿರುವ ನಾಗರಿಕತೆಯ ಕುರುಹು ಪತ್ತೆಯಾಯಿತು. 22 ಪುರಾತತ್ವಶಾಸ್ತ್ರಜ್ಞರನ್ನು ಒಳಗೊಂಡ ತಂಡವೊಂದು ಸಿಂಧ್ ಪ್ರಾಂತ್ಯದ ಸುಕ್ಕರ್ ಜಿಲ್ಲೆಯ ಲಖಿಯಾ ಜೊ ದರೊದಲ್ಲಿ ಕೈಗೊಂಡ ಉತ್ಖನನದ ವೇಳೆ ಅಮೂಲ್ಯ ಹರಳುಗಳು, ಗೃಹೋಪಯೋಗಿ ಮಡಕೆಗಳು, ತಾಮ್ರ ಮತ್ತು ಇತರ ಲೋಹಗಳು ಪತ್ತೆಯಾದವು. 'ಇದು ಮೊಹೆಂಜೊದಾರೊ ನಾಗರಿಕತೆಗಿಂತ ಹಳೆಯದು ಎಂದು ನಾವು ಸದ್ಯ ಹೇಳಬಲ್ಲೆವು' ಎಂದು ಲಖಿಯಾ ಜೊ ದರೊ ಉತ್ಖನನ ಯೋಜನೆ ನಿರ್ದೇಶಕ ಗುಲಾಂ ಮುಸ್ತಫಾ 'ಡಾನ್' ಪತ್ರಿಕೆಗೆ ತಿಳಿಸಿದರು. ಮಣ್ಣಿನ ಪಾತ್ರೆಗಳು ಅಥವಾ ತವರ ಲೇಪಿತ ಪಾತ್ರೆಗಳು ಈ ಸ್ಥಳದಲ್ಲಿ ಪತ್ತೆಯಾದವು.

2008: ತಳಿಸಂಕರದಿಂದ ನಿರ್ಮಾಣವಾದ ಅಂಗಗಳಿಂದ (ಜಿನಟಿಕಲೀ ಎಂಜಿನಿಯರ್ಡ್ ಆರ್ಗನ್ಸ್) ಮನುಷ್ಯ ಈಗಿನ ಜೀವಿತಾವಧಿಗಿಂತ 10 ಪಟ್ಟು ಅಧಿಕ ಎಂದರೆ ಸುಮಾರು 800 ವರ್ಷ ಬದುಕುವುದು ಸಾಧ್ಯವಿದೆ ಎಂದು ಖ್ಯಾತ ಸಂಶೋಧಕ ವಾಲ್ಟರ್ ಲಾಂಗೋ ಹೇಳಿದರು. ಸಂಶೋಧಕರು ಈ ಮಾತನ್ನು ಸಾಬೀತುಪಡಿಸುವುದಕ್ಕಾಗಿ ಸಾಮಾನ್ಯವಾಗಿ ಒಂದೇ ವಾರದಲ್ಲಿ ನಾಶವಾಗುವ ಕಿಣ್ವ ಪಾಚಿ (ಈಸ್ಟ್ ಫಂಗಸ್) 10 ವಾರ ಅಥವಾ ಅದಕ್ಕಿಂತಲೂ ಹೆಚ್ಚು ಸಮಯ ಬದುಕುಳಿಯುವುದನ್ನು ತೋರಿಸಿಕೊಟ್ಟರು. ಈಸ್ಟ್ ನಲ್ಲಿನ ಎರಡು ತಳಿಗಳನ್ನು ಹೊರತೆಗೆದು ಅದನ್ನು ಕ್ಯಾಲೊರಿ ನಿಷೇಧಿತ ವಲಯದಲ್ಲಿ ಇರಿಸಿದಾಗ ಈ ಬೆಳವಣಿಗೆ ಕಂಡುಬಂತು. ಮನುಷ್ಯನ ಆಯುಷ್ಯವನ್ನೂ ಇದೇ ರೀತಿಯಲ್ಲಿ ಹೆಚ್ಚಿಸುವುದು ಸಾಧ್ಯವಿದೆ, ಆದರೆ ಯುವ ಜನತೆಗೆ ಅವಕಾಶ ಮಾಡಿಕೊಡಲಿಕ್ಕಾಗಿ ವಯೋವೃದ್ಧರು ಸಾಯುವಂತೆ ನೋಡಿಕೊಳ್ಳುವ ತಳಿಗುಣ ಮನುಷ್ಯನಲ್ಲಿ ಸಹಜವಾಗಿ ಬೆಳೆದು ಬಂದಿರಬೇಕು ಎಂದು ಅವರು ಅಂದಾಜಿಸಿದರು.

2008: ನಕಲಿ ಛಾಪಾ ಕಾಗದದ ಪ್ರಮುಖ ಆರೋಪಿ ಅಬ್ದುಲ್ ಕರೀಂ ಲಾಲಾ ತೆಲಗಿಯು ಸರ್ಕಾರಕ್ಕೆ ಕೋಟಿಗಟ್ಟಲೆ ವಂಚನೆ ಮಾಡಿದ ಹಗರಣವನ್ನು ಮೊತ್ತ ಮೊದಲಿಗೆ ಬಯಲಿಗೆಳೆದ ತಮಗೆ ನಿಯಮದ ಪ್ರಕಾರ ಪತ್ತೆಯಾದ ಹಣದ ಪಾಲು ನೀಡಲು ಸರ್ಕಾರಕ್ಕೆ ಆದೇಶಿಸುವಂತೆ ಜಯಂತ್ ತಿನೇಕರ್ ಹೈಕೋರ್ಟ್ ಮೊರೆ ಹೊಕ್ಕರು. ಈ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಲು ಮುಖ್ಯ ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್ ಹಾಗೂ ನ್ಯಾಯಮೂರ್ತಿ ಬಿ. ಎಸ್. ಪಾಟೀಲ್ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಆದೇಶಿಸಿತು. ಬೆಳಗಾವಿ ಜಿಲ್ಲೆಯ ಖಾನಾಪುರದ ಬಸ್ ನಿಲ್ದಾಣದ ಬಳಿ ಹಲಸಿನ ಹಣ್ಣು ಮಾರಿಕೊಂಡಿದ್ದ ತೆಲಗಿ ಏಕಾಏಕಿ ಸಿರಿವಂತನಾದುದಕ್ಕೆ ಸಂದೇಹ ಬಂದ ಕಾರಣ, ಅದರ ಬೆನ್ನಟ್ಟಿ ಹೋದ ತಮಗೆ ಆತನ ಜಾಲದ ಬಗ್ಗೆ ತಿಳಿದುಬಂತು ಎಂದು ತಿನೇಕರ್ ಅರ್ಜಿಯಲ್ಲಿ ತಿಳಿಸಿದ್ದಾರೆ. ತೆಲಗಿಯ ಕಾರ್ಯದ ಬಗ್ಗೆ 1996ರಲ್ಲಿಯೇ ಪೊಲೀಸರಲ್ಲಿ ದೂರು ದಾಖಲಿಸಿದ್ದೆ. 1998ರಲ್ಲಿ ಅಂದಿನ ರಾಷ್ಟ್ರಪತಿಗಳಿಗೂ ಈ ಬಗ್ಗೆ ಪತ್ರ ಬರೆದಿದ್ದೆ. ತಾವು ಈ ರೀತಿ ಮಾಡಿದ ಕಾರಣವೇ ತನಿಖೆ ನಡೆಸಲಾಯಿತು. ಸರ್ಕಾರಕ್ಕೆ ಸುಮಾರು 121 ಕೋಟಿ ರೂಪಾಯಿ ತೆರಿಗೆ ವಂಚನೆ ಮಾಡಿರುವ ಹಗರಣ ತನಿಖೆ ನಂತರ ಬೆಳಕಿಗೆ ಬಂತು ಎಂದು ಅವರು ತಿಳಿಸಿದರು. ಇಂತಹ ಪ್ರಕರಣಗಳನ್ನು ಬಹಿರಂಗ ಪಡಿಸಿದರೆ ಆ ಮೊತ್ತದ ಇಂತಿಷ್ಟು ಪಾಲು ಬಹಿರಂಗ ಪಡಿಸಿದ ವ್ಯಕ್ತಿಗೆ ನೀಡಬೇಕು ಎಂದು ಆದಾಯ ತೆರಿಗೆ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಸರ್ಕಾರ ತಮಗೆ ಕೇವಲ ಎರಡು ಸಾವಿರ ರೂಪಾಯಿಗಳನ್ನು ನೀಡಿ ಕೈತೊಳೆದುಕೊಂಡಿದೆ ಎಂದು ತಿನೇಕರ್ ದೂರಿದರು. ತಮಗೆ ಕನಿಷ್ಠ ಒಂದು ಕೋಟಿ ರೂಪಾಯಿ ನೀಡಲು ಆದೇಶಿಸುವಂತೆ ಏಕಸದಸ್ಯಪೀಠದ ಮುಂದೆ ಅರ್ಜಿ ಸಲ್ಲಿಸಿದಾಗ, ಪೀಠವು 2006ರ ಆಗಸ್ಟಿನಲ್ಲಿ ಸಿವಿಲ್ ಕೋರ್ಟಿನಲ್ಲಿ ದಾವೆ ಹೂಡುವಂತೆ ಆದೇಶಿಸಿತು. ಈ ಆದೇಶವನ್ನು ರದ್ದು ಮಾಡಿ, ತಮಗೆ ಸೂಕ್ತ ಮೊತ್ತ ನೀಡಲು ಸರ್ಕಾರಕ್ಕೆ ಸೂಚಿಸಬೇಕು ಎಂದು ಅವರು ಕೋರಿದರು.

2008: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಲ್ಲಿ ಅವ್ಯವಹಾರ ನಡೆದಿರುವುದು ಪ್ರಾಥಮಿಕ ತನಿಖೆಯಿಂದ ದೃಢಪಟ್ಟ ಹಿನ್ನೆಲೆಯಲ್ಲಿ ಅಕಾಡೆಮಿಯ ಆಡಳಿತ ಮಂಡಳಿಯನ್ನು ರದ್ದು ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರ್ಕಾರಕ್ಕೆ ಶಿಫಾರಸು ಮಾಡಿತು. ವಿಶ್ವ ಕೊಡವ ಮೇಳದ ಹೆಸರಿನಲ್ಲಿ ಸರ್ಕಾರದ ಅನುಮತಿ ಪಡೆಯದೆ ಒಂದು ಸಾವಿರ ರೂಪಾಯಿ ಮುಖ ಬೆಲೆಯ ಲಾಟರಿ ಟಿಕೆಟುಗಳನ್ನು ಮುದ್ರಿಸಿ ಮಾರಾಟ ಮಾಡಿದ್ದಲ್ಲದೆ, ಗಣ್ಯರ ಹೆಸರಿನಲ್ಲಿ ನಕಲಿ ಸಹಿ ಸೃಷ್ಟಿಸಿ ಲಕ್ಷಾಂತರ ರೂಪಾಯಿ ದುರುಪಯೋಗಪಡಿಸಿಕೊಂಡಿರುವ ಆರೋಪಗಳ ಹಿನ್ನೆಲೆಯಲ್ಲಿ ಇಲಾಖೆ ಈ ಕ್ರಮ ಕೈಗೊಂಡಿತು.

2008: ವಿದ್ವಾಂಸರಾದ ಪಂಡಿತ ಸುಧಾಕರ ಚತುರ್ವೇದಿ, ಗುರುಮೂರ್ತಿ ಪೆಂಡಕೂರು, ಸಾಹಿತಿಗಳಾದ ಡಾ. ಬಿ.ನಂ.ಚಂದ್ರಯ್ಯ, ಪ್ರೊ.ಬಸವರಾಜ ಪುರಾಣಿಕ, ಡಾ.ಸರಜೂ ಕಾಟ್ಕರ್ ಅವರು ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯ 2007- 08ರ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ಆಯ್ಕೆಯಾದರು. ಈಶ್ವರ ಚಂದ್ರ, ಸ್ನೇಹಲತಾ ರೋಹಿಡೇಕರ್ ಸೇರಿದಂತೆ ಐವರ ಕೃತಿಗಳನ್ನು ಅಕಾಡೆಮಿಯ 2006ರ ಸಾಲಿನ ಪುಸ್ತಕ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ ಎಂದೂ ಅಕಾಡೆಮಿ ಅಧ್ಯಕ್ಷ ಡಾ.ಪ್ರಧಾನ್ ಗುರುದತ್ತ ಬೆಂಗಳೂರಿನಲ್ಲಿ ಪ್ರಕಟಿಸಿದರು.

2008: ಬೆಂಗಳೂರಿನ ಬಳಿಯ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮಾರ್ಚ್ 2008ರ 28ರಂದು ಪ್ರಧಾನಿ ಮನಮೋಹನ್ ಸಿಂಗ್ ಉದ್ಘಾಟಿಸುವರು ಎಂದು ರಾಜ್ಯಪಾಲ ರಾಮೇಶ್ವರ ಠಾಕೂರ್ ಪ್ರಕಟಿಸಿದರು.

2008: ಸತತ ಏಳು ವಹಿವಾಟಿನ ದಿನಗಳಲ್ಲಿ ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡು ಹೂಡಿಕೆದಾರರಲ್ಲಿ ತಲ್ಲಣ ಮೂಡಿಸಿದ್ದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು, ಈದಿನ ಚೇತರಿಕೆ ಹಾದಿಯಲ್ಲಿ ಸಾಗಿ ವಹಿವಾಟುದಾರರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿತು. ಏಳು ದಿನಗಳಲ್ಲಿ ಕೊಚ್ಚಿಕೊಂಡು ಹೋಗಿದ್ದ ಒಟ್ಟು ಮಾರುಕಟ್ಟೆ ಮೌಲ್ಯದ ಐದರಲ್ಲಿ ಒಂದು ಭಾಗದಷ್ಟು ಸಂಪತ್ತನ್ನು ಈದಿನ ಮರಳಿ ಪಡೆದಂತಾಗಿದ್ದು ಹೂಡಿಕೆದಾರರ ಮೊಗದಲ್ಲಿ ಮತ್ತೆ ಸಂತಸ ಅರಳಿತು. 7 ದಿನಗಳ ಕುಸಿತದ ಪರಿಣಾಮವಾಗಿ 15.58 ಲಕ್ಷ ಕೋಟಿ ರೂಪಾಯಿಗಳಷ್ಟು ಸಂಪತ್ತು, ಸೂಚ್ಯಂಕ ಕುಸಿತದ ಕಾರಣಕ್ಕೆ ಕೊಚ್ಚಿಕೊಂಡು ಹೋಗಿತ್ತು. ಪೇಟೆಯಲ್ಲಿ ವಹಿವಾಟು ನಡೆಸುವ ಎಲ್ಲ ಷೇರುಗಳ ಒಟ್ಟು ಮಾರುಕಟ್ಟೆ ಮೊತ್ತವು ಹಿಂದಿನ ದಿನ 55,56,177 ಕೋಟಿ ರೂಪಾಯಿಗಳಷ್ಟಿತ್ತು. ಅದು ಈದಿನ 58,92,706 ಕೋಟಿ ರೂಪಾಯಿಗಳಿಗೆ ಏರಿತು.

2008: ಯಾವುದೇ ಒತ್ತಡ ಅಥವಾ ವಾದಕ್ಕೆ ಮಣಿದು ಸೇತುಸಮುದ್ರಂ ಕಡಲು ಕಾಲುವೆ ಯೋಜನೆಯನ್ನು ನಿಲ್ಲಿಸಬಾರದು ಎಂದು ತಮಿಳುನಾಡು ಸರ್ಕಾರವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತು. ತಮಿಳುನಾಡು ವಿಧಾನಸಭೆಯಲ್ಲಿ ಸಾಂಪ್ರದಾಯಿಕ ಭಾಷಣ ಮಾಡಿದ ರಾಜ್ಯಪಾಲ ಎಸ್. ಎಸ್. ಬರ್ನಾಲಾ, ಈ ಯೋಜನೆ ತಮಿಳುನಾಡು ಜನರ ದೀರ್ಘಕಾಲೀನ ಕನಸಾಗಿದೆ. 1860ರಿಂದ ಈ ಯೋಜನೆ ಬಗ್ಗೆ ಅಧ್ಯಯನ ನಡೆದಿದೆ. ಎಂಜನಿಯರಿಂಗ್ ಕ್ಷೇತ್ರದ ದಿಗ್ಗಜರೆಲ್ಲ ಸೇತುಸಮುದ್ರಂ ಯೋಜನೆಯ ಕಾರ್ಯ ಸಾಧ್ಯತೆ ಬಗ್ಗೆ ಹೇಳಿದ್ದಾರೆ ಎಂದು ನುಡಿದರು.

2008: ಎಸ್ ಜಿ ಎಫ್ ಪ್ರಾದೇಶಿಕ ಪಕ್ಷವು ಈದಿನ ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನಗೊಂಡಿತು. ಈ ಬೆಳವಣಿಗೆಯಿಂದಾಗಿ 40 ಆಸನಗಳ ಗೋವಾ ವಿಧಾನ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರ ಸಂಖ್ಯೆ 16ರಿಂದ 18ಕ್ಕೆ ಏರಿದಂತಾಯಿತು. ಎಸ್ ಜಿ ಎಫ್ ವಿಲೀನ ಪ್ರಕ್ರಿಯೆಯಿಂದಾಗಿ ವಿಧಾನ ಸಭೆ ಸದಸ್ಯರಾದ ಚರ್ಚಿಲ್ ಅಲೆಮಾವೊ ಮತ್ತು ಅಲೆಕ್ಸೊ ರೆಜಿನಾಲ್ಡೊ ಲಾರೆನ್ಸ್ ಕಾಂಗ್ರೆಸ್ ಪಕ್ಷ ಸೇರಿದಂತಾಯಿತು.

2008: ದೇಶದಲ್ಲಿನ ಶೇಕಡಾವಾರು ಜನಸಂಖ್ಯೆಯ ಆಧಾರದ ಮೇಲೆ ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯದ ದಲಿತರಿಗೆ ಮೀಸಲಾತಿ ಸೌಲಭ್ಯ ನೀಡಬೇಕು ಎಂದು ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗವು ಶಿಫಾರಸ್ಸು ಮಾಡಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟಿಗೆ ತಿಳಿಸಿತು. ಪರಿಶಿಷ್ಟರಿಗೆ ಈಗ ನೀಡಲಾಗುತ್ತಿರುವ ಶೇಕಡಾ 15 ಕೋಟಾಕ್ಕೆ ಧಕ್ಕೆ ಬಾರದಂತೆ ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯದ ದಲಿತರಿಗೆ ಜನಸಂಖ್ಯೆಯ ಅಧಾರದ ಮೇಲೆ ಕೇಂದ್ರ ಸರ್ಕಾರ ಮೀಸಲಾತಿ ನೀಡಬಹುದು ಎಂದು ಆಯೋಗವು ಸರ್ಕಾರಕ್ಕೆ ಬರೆದ ಪತ್ರವನ್ನು ಸರ್ಕಾರದ ಪರ ವಕೀಲರು ನ್ಯಾಯಾಲಯದಲ್ಲಿ ಹಾಜರುಪಡಿಸಿದರು. ಸುಪ್ರೀಂ ಕೋರ್ಟಿನ ಆದೇಶದಂತೆ ಮೀಸಲಾತಿ ಶೇಕಡಾ 50ರಷ್ಟು ಮೀರದಂತೆ ನೋಡಿಕೊಂಡು ಆಯೋಗದ ಶಿಫಾರಸ್ಸುಗಳನ್ನು ಜಾರಿ ಮಾಡಬೇಕು ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಗೆ ತಿಳಿಸಲಾಗಿತ್ತು ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.

2008: ಮಾವೋವಾದಿಗಳ ಲೇಖನಗಳನ್ನು ಮುದ್ರಿಸುತ್ತಿದ್ದ ಮುದ್ರಣಾಲಯವನ್ನು ಪೊಲೀಸರು ಪತ್ತೆ ಹಚ್ಚಿ ಅದನ್ನು ಮುಟ್ಟುಗೋಲು ಹಾಕಿಕೊಂಡು ಅಪಾರ ಪ್ರಮಾಣದ ದೇಶೀಯ ಬಂದೂಕುಗಳನ್ನು ವಶಪಡಿಸಿಕೊಂಡರು. ಈ ಸಂಬಂಧ ಛತ್ತೀಸಗಢದಲ್ಲಿ ಹಲವರನ್ನು ವಶಕ್ಕೆ ತೆಗೆದುಕೊಂಡು ಡ ತೆಗೆದುಕೊಂಡು ವಿಚಾರಣೆ ನಡೆಸಲಾಯಿತು.

2007: ಬಾಗಲಕೋಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 2005-06ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ನಟಿ ಜಯಂತಿ ಅವರಿಗೆ ರಾಜ್ ಕುಮಾರ್ ಪ್ರಶಸ್ತಿ, ವಿ. ರವಿಚಂದ್ರನ್ ಅವರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, ಛಾಯಾಗ್ರಾಹಕ ಎಸ್. ರಾಮಚಂದ್ರ ಅವರಿಗೆ ಜೀವಮಾನದ ಸಾಧನೆಗಾಗಿ ನೀಡಲಾಗುವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

2007: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಎಂ.ಎಸ್. ಚಂದ್ರಶೇಖರ್ (83) ಬೆಂಗಳೂರಿನಲ್ಲಿ ನಿಧನರಾದರು. ಮೂಲತಃ ಮೈಸೂರಿನವರಾದ ಚಂದ್ರಶೇಖರ್ ಅವರು ಅಜಂತಾ ಗುಹೆಗಳಲ್ಲಿನ ಚಿತ್ರಕಲೆಗಳ ಪ್ರತಿಮಾಡುವಲ್ಲಿ ಖ್ಯಾತಿ ಗಳಿಸಿದ್ದರು. ಅವರ ಕಲಾಕೃತಿಗಳನ್ನು ವಿಧಾನಸೌಧ, ಸಂಸತ್ ಭವನ, ವೆಂಕಟಪ್ಪ ಕಲಾಭವನ ಹಾಗೂ ಅಮೆರಿಕದ ವಸ್ತುಸಂಗ್ರಹಾಲಯಗಳಲ್ಲಿ ಸಂಗ್ರಹಿಸಿ ಇಡಲಾಗಿದೆ.

2007: ಅಂತಾರಾಷ್ಟ್ರೀಯ ಕರೆ, ನಿಮಿಷಕ್ಕೆ ಕೇವಲ 95 ಪೈಸೆ. ಇದು ವರ್ಲ್ಡ್ ಫೋನ್ ಇಂಟರ್ನೆಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ಡಿನ ಕೊಡುಗೆ. ಯಾವುದೇ ಶಾಸನಬದ್ಧ ಇಂಟರ್ನೆಟ್ ಟೆಲಿಫೋನಿ ಜಾಲದಲ್ಲಿ ಇದು ಅತ್ಯಂತ ಅಗ್ಗ. ನಿಮಿಷಕ್ಕೆ ಕೇವಲ 95 ಪೈಸೆ ದರದ ಈ ಅಂತಾರಾಷ್ಟ್ರೀಯ ಕರೆ ಸೇವೆಯನ್ನು ವರ್ಲ್ಡ್ ಫೋನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಆರಂಭಿಸಿತು. ಈ ವ್ಯವಸ್ಥೆಯಡಿಯಲ್ಲಿ ಅಮೆರಿಕ, ಇಂಗ್ಲೆಂಡ್, ಕೆನಡಾ, ಫ್ರಾನ್ಸ್, ಜರ್ಮನಿ, ಹಾಂಕಾಂಗ್, ಇಟಲಿ, ಸಿಂಗಪುರ, ಸ್ವಿಟ್ಜರ್ ಲ್ಯಾಂಡ್ ಸೇರಿದಂತೆ 30 ರಾಷ್ಟ್ರಗಳಿಗೆ ಅಂತಾರಾಷ್ಟ್ರೀಯ ಕರೆಗಳನ್ನು ಮಾಡಬಹುದು. ವರ್ಲ್ಡ್ ಫೋನಿನ ವೆಬ್ ಸೈಟಿನಿಂದ (www.worldphone.in) ಡಯಲರನ್ನು ಡೌನ್ ಲೋಡ್ ಮಾಡಿಕೊಂಡು ಗ್ರಾಹಕರು ಈ ಅತೀ ಅಗ್ಗದ ಅಂತಾರಾಷ್ಟ್ರೀಯ ಕರೆಯ ಉಪಯೋಗ ಮಾಡಿಕೊಳ್ಳಬಹುದು. ಬ್ರಾಂಡೆಡ್ ಇಂಟರ್ನೆಟ್ ಪ್ರೊಟೊಕಾಲ್ ಫೋನ್ ಅಳವಡಿಸಿಕೊಳ್ಳುವ ಮೂಲಕವೂ ಈ ಕರೆ ಮಾಡಬಹುದು. ಕಂಪೆನಿಯ ಪೂರ್ವ ಪಾವತಿ ಇಂಟರ್ನೆಟ್ ಟೆಲಿಫೋನಿ ಕಾರ್ಡುಗಳನ್ನು ರೂ. 100, ರೂ. 250, ರೂ. 500 ಮತ್ತು ರೂ. 1000ದ ಮೊತ್ತಗಳಲ್ಲಿ ಒದಗಿಸುತ್ತದೆ. ಇವುಗಳ ಅವಧಿ 100 ದಿನಗಳು. ಕಾರ್ಡುಗಳನ್ನು ವರ್ಲ್ಡ್ ಟೆಲಿಫೋನ್ ವೆಬ್ ಸೈಟ್ ಅಥವಾ ಬಿಗ್ ಬಜಾರ್, ಆಕ್ಸಿಜನ್, ಇ ಪಿ ಆರ್ ಎಸ್ ಮತ್ತು ಪೇ ವರ್ಲ್ಡ್ ಸೇರಿದಂತೆ ಬಿಡಿ ಮಾರಾಟಗಾರರಿಂದ ಪಡೆಯಬಹುದು.

2006: ಬಾಲಿವುಡ್ಡಿನ ಖ್ಯಾತನಟಿ ಶಬಾನಾ ಆಜ್ಮಿ ಪ್ರತಿಷ್ಠಿತ ಕ್ರಿಸ್ಟಲ್ ಪ್ರಶಸ್ತಿಗೆ ಆಯ್ಕೆಯಾದರು. ವಿಶ್ವ ಆಥರ್ಿಕ ವೇದಿಕೆಯ ಈ ಪ್ರಶಸ್ತಿಯನ್ನು ಕಲಾಕ್ಷೇತ್ರದಲ್ಲಿ ಶಬಾನಾ ಅವರು ತೋರಿದ ಅಸಾಧಾರಣ ಸಾಧನೆಗಾಗಿ ನೀಡಲಾಯಿತು. ಹಾಲಿವುಡ್ ಸೂಪರ್ ಸ್ಟಾರ್ ಮೈಕೆಲ್ ಡಗ್ಲಾಸ್ ಅವರ ಜೊತೆಗೆ ಶಬಾನಾ ಈ ಪ್ರಶಸ್ತಿಯನ್ನು ಹಂಚಿಕೊಂಡರು.

2006: ಬೇರೆ ಪಕ್ಷಗಳ ಮುಖಂಡರು ಜೆಡಿ(ಎಸ್) ಒಡೆಯಲು ನಡೆಸಿದ ಸಂಚನ್ನು ವಿಫಲಗೊಳಿಸಿ ಪಕ್ಷದಲ್ಲಿ ಒಗ್ಗಟ್ಟು ಕಾಯ್ದುಕೊಳ್ಳಲು ಎಚ್. ಡಿ. ಕುಮಾರಸ್ವಾಮಿ ಮಾಡಿರುವ ಕೆಲಸವನ್ನು ಶ್ಲಾಘಿಸುವ ಮೂಲಕ ಜೆಡಿ(ಎಸ್) ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ. ದೇವೇಗೌಡ ತಮ್ಮ ಮಗನ ಕ್ಷಿಪ್ರಕ್ರಾಂತಿಯನ್ನು ಬೆಂಬಲಿಸಿದರು.

2006: ಕ್ಲೀವ್ ಲ್ಯಾಂಡಿನ ವೆಸ್ಟರ್ನ್ ರಿಸರ್ವ್ ಬಿಸಿನೆಸ್ ಸ್ಕೂಲನ್ನು 2003ರಲ್ಲಿ ಏಳೂವರೆ ಗಂಟೆಗಳ ಕಾಲ ಒತ್ತೆಸೆರೆ ಇಟ್ಟುಕೊಂಡು ಒಬ್ಬ ವಿದ್ಯಾರ್ಥಿಯನ್ನು ಕೊಂದು ಇನ್ನಿಬ್ಬರನ್ನು ಗಾಯಗೊಳಿಸಿದ್ದಕ್ಕಾಗಿ ಕೋಲ್ಕತ್ತಾದಲ್ಲಿ ಜನಿಸಿದ ಅಮೆರಿಕದ ನಿವಾಸಿ ಬಿಸ್ವನಾಥ ಹಲ್ದರ್ ಗೆ (65) ಓಹಿಯೋದ ನ್ಯಾಯಾಧೀಶರು ಜೀವಾವಧಿ ಸಜೆಗೆ ಶಿಫಾರಸು ಮಾಡಿದರು. 2003ರ ಮೇ 9ರಂದು ನಡೆದ ಘಟನೆಯಲ್ಲಿ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡಿನ ಜೊತೆಗೆ ಸ್ಕೂಲಿಗೆ ನುಗ್ಗಿದ್ದ ಹಲ್ದರ್ ಏಳೂವರೆ ಗಂಟೆ ಕಾಲ ಸ್ಕೂಲನ್ನು ವಶಕ್ಕೆ ತೆಗೆದುಕೊಂಡು ಯದ್ವಾತದ್ವ ಗುಂಡು ಹಾರಿಸಿ ನಾರ್ಮನ್ ವ್ಯಾಲೇಸ್ ಎಂಬಾತನನ್ನು ಕೊಂದು ಇನ್ನಿಬ್ಬರನ್ನು ಗಾಯಗೊಳಿಸಿದ್ದ. ಭಾರತದ ಉದ್ಯಮಿಗಳಿಗೆ ನೆರವಾಗುವ ಸಲುವಾಗಿ ತಾನು ರೂಪಿಸಿದ್ದ ವೆಬ್ ಸೈಟನ್ನು ಈ ಶಾಲೆಯ ಕಂಪ್ಯೂಟರ್ ಲ್ಯಾಬೋರೇಟರಿಯ ನೌಕರನೊಬ್ಬ ಹಾಳುಗಡೆವಿದ್ದಾನೆ ಎಂಬ ಶಂಕೆಯಿಂದ ಆತ ಈ ಕೃತ್ಯ ಎಸಗಿದ್ದ.

1977: ಭಾರತದಲ್ಲಿ ಜನತಾ ಪಕ್ಷದ ಉದಯವಾಯಿತು. ಆಳುವ ಕಾಂಗ್ರೆಸ್ ಮತ್ತು ತುರ್ತು ಪರಿಸ್ಥಿತಿಯ ವಿರುದ್ಧ ವಿರೋಧ ಪಕ್ಷಗಳು ಒಟ್ಟಾಗಿ ಜನತಾ ಪಕ್ಷವನ್ನು ಹುಟ್ಟು ಹಾಕಿದವು. ಕಾಂಗ್ರೆಸ್ (ಸಂಸ್ಥಾ), ಜನಸಂಘ, ಭಾರತೀಯ ಲೋಕದಳ ಮತ್ತು ಸಂಯುಕ್ತ ಸಮಾಜವಾದಿ ಪಕ್ಷಗಳು ಈ ಜನತಾ ಪಕ್ಷದಲ್ಲಿ ವಿಲೀನಗೊಂಡವು.

1931: ಲಾರ್ಡ್ ಇರ್ವಿನ್ ಮೊತ್ತ ಮೊದಲ ಬಾರಿಗೆ ನವದೆಹಲಿಯ `ವೈಸ್ ರಾಯ್ ಹೌಸ್' ನಲ್ಲಿ ವಾಸ್ತವ್ಯ ಹೂಡಿದರು. ಈ ಕಟ್ಟಡ ಈಗ `ರಾಷ್ಟ್ರಪತಿ ಭವನ' ಆಗಿದೆ. ಎಡ್ವಿನ್ ಲ್ಯುಟಿಯೆನ್ಸ್ ಈ ಕಟ್ಟಡದ ವಿನ್ಯಾಸಕಾರರಾಗಿದ್ದು, 1913ರಲ್ಲಿ ಕಟ್ಟಡ ನಿರ್ಮಾಣ ಆರಂಭವಾಯಿತು. 18,580 ಚದರ ಅಡಿಗಳಷ್ಟು ವ್ಯಾಪ್ತಿಯಲ್ಲಿ ನಿರ್ಮಾಣಗೊಂಡ ಈ ಕಟ್ಟಡದ ಒಟ್ಟು ವೆಚ್ಚ 1.40 ಕೋಟಿ ರೂಪಾಯಿಗಳು. ಲ್ಯೂಟಿಯನ್ಸನ ಶುಲ್ಕ 5000 ಪೌಂಡುಗಳು.

1927: ಬಾಳಾ ಕೇಶವ ಠಾಕ್ರೆ ಜನಿಸಿದರು. ಇವರು ವ್ಯಂಗ್ಯಚಿತ್ರಕಾರರಾಗಿ ವೃತ್ತಿ ಆರಂಭಿಸಿ ಮಹಾರಾಷ್ಟ್ರದ ಶಿವಸೇನೆ ಸ್ಥಾಪನೆ ಮೂಲಕ ಖ್ಯಾತಿ ಪಡೆದರು.

1897: ಈದಿನ ಜನಿಸಿದ ಸುಭಾಸ್ ಚಂದ್ರ ಬೋಸ್ ಅವರು ಭಾರತೀಯ ಕ್ರಾಂತಿಕಾರಿ ನಾಯಕರಾಗಿ ಎರಡನೇ ಜಾಗತಿಕ ಸಮರ ಕಾಲದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಲು ಭಾರತ ರಾಷ್ಟ್ರೀಯ ಸೇನೆ (ಆಜಾದ್ ಹಿಂದ್ ಫೌಜ್/ ಇಂಡಿಯನ್ ನ್ಯಾಷನಲ್ ಆರ್ಮಿ) ಸ್ಥಾಪಿಸಿದರು. `ನೇತಾಜಿ' ಎಂದೇ ಜನಪ್ರಿಯರಾದ ಇವರು 1945ರಲ್ಲಿ ಸಂಭವಿಸಿದ ವಿಮಾನ ಅಪಘಾತವೊಂದರಲ್ಲಿ ಮೃತರಾದರು ಎಂಬುದಾಗಿ ಸುದ್ದಿ ಪ್ರಸಾರಗೊಂಡರೂ ಇತ್ತೀಚಿನವರೆಗೂ ಅವರು ಬದುಕಿದ್ದರು ಎಂದೇ ಬಹುತೇಕ ಭಾರತೀಯರು ನಂಬಿದ್ದರು.

1893: ಸಂಗೀತ ತಜ್ಞ ರಾಳ್ಲಪಲ್ಲಿ ಅನಂತಕೃಷ್ಣ ಶರ್ಮ (23-1-1893ರಿಂದ 11-3-1979) ಅವರು ಕೃಷ್ಣಮಾಚಾರ್ಯ- ಅಲಮೇಲು ಮಂಗಮ್ಮ ದಂಪತಿಯ ಮಗನಾಗಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕಂಬದೂರು ತಾಲ್ಲೂಕಿಗೆ ಸೇರಿದ ರಾಳ್ಲಪಲ್ಲಿಯಲ್ಲಿ ಜನಿಸಿದರು.

1814: ಅಲೆಗ್ಸಾಂಡರ್ ಕನ್ನಿಂಗ್ ಹ್ಯಾಮ್ (1814-1893) ಹುಟ್ಟಿದ ದಿನ. ಬ್ರಿಟಿಷ್ ಸೇನಾಧಿಕಾರಿ ಹಾಗೂ ಪ್ರಾಕ್ತನ ತಜ್ಞನಾಗಿದ್ದ ಈತ ಸಾರಾನಾಥ, ಸಾಂಚಿ ಸೇರಿದಂತೆ ಭಾರತದ ಹಲವಾರು ಚಾರಿತ್ರಿಕ ಸ್ಥಳಗಳಲ್ಲಿ ಉತ್ಖನನ ನಡೆಸಿದ ವ್ಯಕ್ತಿ. ಭಾರತೀಯ ಪ್ರಾಚ್ಯವಸ್ತು ಸಮೀಕ್ಷಾ ಸಂಸ್ಥೆಯ ಮೊದಲ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದ.

ಇಂದಿನ ಇತಿಹಾಸ History Today ಜನವರಿ 22

ಇಂದಿನ ಇತಿಹಾಸ

ಜನವರಿ 22

ವಿಶ್ವ ಪರಂಪರೆ ಪಟ್ಟಿಯಲ್ಲಿರುವ ಐತಿಹಾಸಿಕ ಹಂಪಿಗೆ ಸಂಪರ್ಕ ಕಲ್ಪಿಸುವ ಬಹುಚರ್ಚಿತ ಚರ್ಚಿತ ಆನೆಗೊಂದಿ ತೂಗು ಸೇತುವೆ ಕುಸಿದು ಸುಮಾರು 7 ಮಂದಿ ಕಾಣೆಯಾಗಿ, 30ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ನಾಪತ್ತೆಯಾದವರನ್ನು ಕೇರಳದ ಭರತ್, ಹೈದರಾಬಾದಿನ ಪಾಟೀಲ್, ಆನೆಗೊಂದಿಯ ರಸೂಲ್, ಭೀಮಪ್ಪ ಹಾಗೂ ಹೊಸಪೇಟೆ ತಾಲ್ಲೂಕು ವೆಂಕಟಾಪುರ ಗ್ರಾಮದ ಹುಲಗೇಶಿ, ದುರ್ಗೇಶಿ ಮತ್ತು ಗಾದಿಲಿಂಗಪ್ಪ ಎಂದು ಗುರುತಿಸಲಾಯಿತು.

2009: ಬೆಂಗಳೂರು ನಗರದಲ್ಲಿ ಆಸ್ತಿ ತೆರಿಗೆ ಪಾವತಿಗೆ ಸಂಬಂಧಿಸಿದ ಅನಿಶ್ಚಿತತೆ ಕೊನೆಗೊಂಡಿತು. ಬೆಳಗಾವಿಯಲ್ಲಿ ನಡೆದ ವಿಧಾನಸಭೆ ಅಧಿವೇಶನದಲ್ಲಿ ಅಂಗೀಕೃತವಾದ ಮಸೂದೆ ಅನುಸಾರ ಫೆ. 1ರಿಂದಲೇ ತೆರಿಗೆ ಪಾವತಿಗೆ ಅವಕಾಶ ಕಲ್ಪಿಸಲಾಯಿತು. ಜತೆಗೆ ಉದ್ದೇಶಿತ ಶೇ 20ರಷ್ಟು ತೆರಿಗೆ ಹೆಚ್ಚಳ ಕೈ ಬಿಡಲಾಯಿತು. ರಾಜ್ಯದಲ್ಲೇ ಮೊತ್ತ ಮೊದಲ ಬಾರಿಗೆ ಘಟಕ ಪ್ರದೇಶ ಮೌಲ್ಯ (ಯುಎವಿ) ತೆರಿಗೆ ಪದ್ಧತಿಯನ್ನು ಬಿ.ಬಿ.ಎಂ.ಪಿ. ವ್ಯಾಪ್ತಿಯಲ್ಲಿ ಜಾರಿಗೆ ತರಲು ಅನುವು ಮಾಡಿಕೊಡುವ ಕರ್ನಾಟಕ ಪೌರನಿಗಮಗಳ (ತಿದ್ದುಪಡಿ) ಮಸೂದೆಯನ್ನು ವಿಧಾನಸಭೆ ಧ್ವನಿಮತದಿಂದ ಆಂಗೀಕರಿಸಿತು. ಇದರೊಂದಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 2003ರಿಂದ ಜಾರಿಯಲ್ಲಿದ್ದ ಸಿವಿಎಸ್ (ಕ್ಯಾಪಿಟಲ್ ವ್ಯಾಲ್ಯೂ ಸ್ಕೀಮ್) ತೆರಿಗೆ ಪದ್ಧತಿ ಬದಲಾಗಿ ತೆರಿಗೆ ಪಾವತಿದಾರರು ಸ್ವಯಂಘೋಷಿತ ಪದ್ಧತಿಯ ಮೂಲಕ ತಾವೇ ತೆರಿಗೆಯನ್ನು ನಿರ್ಧರಿಸಿಕೊಳ್ಳಬಹುದು.

2009: ಕುಂದಾನಗರ ಬೆಳಗಾವಿಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಸರ್ಕಾರವು ಉತ್ತರ ಕರ್ನಾಟಕ ಭಾಗದ ಜನರಿಗೆ ಭಾರಿ ಕೊಡುಗೆಗಳ ಮೂಲಕ 'ಸಿಹಿ' ಉಣಿಸಲು ತೀರ್ಮಾನಿಸಿತು. ಈ ಭಾಗದಲ್ಲಿ ಸುಮಾರು 500 ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು ಸಂಪುಟ ಅನುಮೋದನೆ ನೀಡಿತು. ಮಾಜಿ ದೇವದಾಸಿಯರಿಗೆ 2500 ಮನೆ ನಿರ್ಮಾಣ, ಗದಗದಲ್ಲಿ ಪಶುವೈದ್ಯಕೀಯ ಕಾಲೇಜು, ಉತ್ತರ ಕರ್ನಾಟಕದಲ್ಲಿ 1000 ಹಾಲು ಉತ್ಪಾದಕರ ಸಂಘಗಳ ರಚನೆ, ಬೆಳಗಾವಿಯಲ್ಲಿ ನೇಕಾರರಿಗೆ 'ಸೈಜಿಂಗ್ ಘಟಕ', ಬೀದರ್ ಮತ್ತು ಬೆಳಗಾವಿ ಸರ್ಕಾರಿ ಆಸ್ಪತ್ರೆಗಳು ಮೇಲ್ದರ್ಜೆಗೆ, ಕಿತ್ತೂರು ಹಾಗೂ ಗಡಿ ಅಭಿವೃದ್ಧಿ ಮತ್ತು ರೇಣುಕಾ ಯಲ್ಲಮ್ಮ ದೇವಾಲಯದ ಸಮಗ್ರ ಅಭಿವೃದ್ಧಿಗೆ ಪ್ರಾಧಿಕಾರಗಳ ರಚನೆ, ಹಿಡಕಲ್ಲಿನಲ್ಲಿ ಕೆ.ಆರ್.ಎಸ್. ಮಾದರಿಯ ಬೃಂದಾವನ, ಧಾರವಾಡದಲ್ಲಿರುವ ಮಾನಸಿಕ ಆಸ್ಪತ್ರೆಯನ್ನು ಬೆಂಗಳೂರಿನ 'ನಿಮ್ಹಾನ್ಸ್‌' ಮಾದರಿಯಲ್ಲಿ ಅಭಿವೃದ್ಧಿ, ಐನಾಪುರ, ಕರಿಮಸೂತಿಯಲ್ಲಿ ಎರಡು ಏತನೀರಾವರಿ ಯೋಜನೆಗಳು, ಶಹಾಪುರ ಉಪನಾಲೆಯ ಮೂಲಕ ನೀರು ತಲುಪದ ಪ್ರದೇಶಗಳಿಗೆ ಬೋನಾಳ್ ಕೆರೆ ಏತ ನೀರಾವರಿ, ಸುಮಾರು 5,500 ಕಿ.ಮೀ. ರಸ್ತೆ ಅಭಿವೃದ್ಧಿ ಸೇರಿದಂತೆ ಹಲವು ಯೋಜನೆಗಳಿಗೆ ಸಂಪುಟ ಅನುಮೋದನೆ ನೀಡಿತು.

2009: ಬೆಳಗಾವಿ ನಗರದ ಹೊರವಲಯ ಹಲಗಾ-ಬಸ್ತವಾಡ ಬಳಿ ಸುವರ್ಣ ಸೌಧ ಕಟ್ಟಡಕ್ಕಾಗಿ ಭೂಮಿ ಪೂಜೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈದಿನ ನೆರವೇರಿಸಿದರು. ಸುವರ್ಣ ಸೌಧದ ಭೂಮಿ ಸ್ವಾಧೀನಕ್ಕಾಗಿ 19.50 ಕೋಟಿ ರೂಪಾಯಿ ಕಾಯ್ದಿರಿಸಲಾಗಿದೆ. ಸೌಧದ ಒಂದು ಕಿ.ಮೀ. ಸುತ್ತ-ಮುತ್ತ ಹಸಿರು ವಲಯ ನಿರ್ಮಿಸಬೇಕು. ಕೂಡಲೇ ಕಾಮಗಾರಿ ಆರಂಭಿಸಬೇಕು ಎಂದು ಮುಖ್ಯಮಂತ್ರಿ ಅಧಿಕಾರಿಗಳಿಗೆ ಸೂಚಿಸಿದರು.

2009: ವಿಶ್ವ ಪರಂಪರೆ ಪಟ್ಟಿಯಲ್ಲಿರುವ ಐತಿಹಾಸಿಕ ಹಂಪಿಗೆ ಸಂಪರ್ಕ ಕಲ್ಪಿಸುವ ಬಹುಚರ್ಚಿತ ಚರ್ಚಿತ ಆನೆಗೊಂದಿ ತೂಗು ಸೇತುವೆ ಕುಸಿದು ಸುಮಾರು 7 ಮಂದಿ ಕಾಣೆಯಾಗಿ, 30ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ನಾಪತ್ತೆಯಾದವರನ್ನು ಕೇರಳದ ಭರತ್, ಹೈದರಾಬಾದಿನ ಪಾಟೀಲ್, ಆನೆಗೊಂದಿಯ ರಸೂಲ್, ಭೀಮಪ್ಪ ಹಾಗೂ ಹೊಸಪೇಟೆ ತಾಲ್ಲೂಕು ವೆಂಕಟಾಪುರ ಗ್ರಾಮದ ಹುಲಗೇಶಿ, ದುರ್ಗೇಶಿ ಮತ್ತು ಗಾದಿಲಿಂಗಪ್ಪ ಎಂದು ಗುರುತಿಸಲಾಯಿತು.

2009: ಮಾಣಿಕ್‌ಚಂದ್ ಗುಟ್ಕಾ ಪ್ರಿಯರಿಗೆ ಕಹಿ ಸುದ್ದಿಯೊಂದು ಬಂತು. ಈ ಗುಟ್ಕಾದ ತಯಾರಿ, ಮಾರಾಟ ಮತ್ತು ವಿತರಣೆಯನ್ನು ನಿಷೇಧ ಮಾಡಿ ಹೈಕೋರ್ಟ್ ಆದೇಶಿಸಿತು. ಈ ಗುಟ್ಕಾ ತಯಾರು ಮಾಡುವ ಪುಣೆ ಮೂಲದ 'ಧಾರಿವಾಲ್ ರಸಿಕ್‌ಲಾಲ್ ಮಾಣಿಕ್‌ಚಂದ್ ಕಂಪೆನಿ' ವಿರುದ್ಧ ಮಹಾರಾಷ್ಟ್ರ ಮೂಲದ ರಾಜು ಪಾಚ್ಚಾಪುರೆ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ಪಿ.ಡಿ.ದಿನಕರನ್ ಹಾಗೂ ನ್ಯಾಯಮೂರ್ತಿ ವಿ.ಜಿ.ಸಭಾಹಿತ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ಆದೇಶ ಹೊರಡಿಸಿತು. ಮನುಷ್ಯನ ಪ್ರಾಣಕ್ಕೆ ಸಂಚಕಾರ ತರುವಷ್ಟು ಪ್ರಮಾಣದಲ್ಲಿ ಈ ಗುಟ್ಕಾದಲ್ಲಿ ರಾಸಾಯನಿಕ ಬಳಕೆಯಾಗುತ್ತಿದೆ ಎಂದು ಅರ್ಜಿದಾರರು ಕೋರ್ಟಿನಲ್ಲಿ ದೂರಿದ್ದರು. ಈ ಆರೋಪದ ಹಿನ್ನೆಲೆಯಲ್ಲಿ ತನಿಖೆ ನಡೆಸುವಂತೆ ಕಳೆದ ಬಾರಿ ವಿಚಾರಣೆ ವೇಳೆ ಆಹಾರ ಮತ್ತು ನಾಗರಿಕ ಸರ್ಗರಾಜು ಇಲಾಖೆಗೆ ಹೈಕೋರ್ಟ್ ನಿರ್ದೇಶಿಸಿತ್ತು. ಕೋರ್ಟ್ ನಿರ್ದೇಶನದ ಮೇರೆಗೆ ತನಿಖೆ ನಡೆಸಿದ್ದ ಇಲಾಖೆ, ಇದರಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮೆಗ್ನೀಷಿಯಂ ಕಾರ್ಬೊನೇಟ್ ಬಳಕೆ ಆಗಿರುವ ಬಗ್ಗೆ 2008ರ ನವೆಂಬರ್ 24ರಂದು ಸಾರ್ವಜನಿಕ ಆರೋಗ್ಯ ಸಂಸ್ಥೆ ವರದಿ ನೀಡಿತ್ತು. ಗುಟ್ಕಾಕ್ಕೆ ಬಳಕೆ ಆಗುವ ಅಡಿಕೆ ಈ ರಾಸಾಯನಿಕ ಅಂಶವನ್ನು ಒಳಗೊಂಡಿಲ್ಲ. ಬದಲಿಗೆ ಪ್ಯಾಕೆಟಿನಲ್ಲಿ ಇರುವ ಗುಟ್ಕಾದ ಮಾದರಿಯನ್ನು ತಪಾಸಣೆಗೆ ಒಳಪಡಿಸಿದಾಗ, ಅದರಲ್ಲಿ ರಾಸಾಯನಿಕ ಬಳಕೆ ಆಗುವುದು ಕಂಡು ಬಂದಿದೆ. ಇದರ ಸೇವನೆ ಮಾಡುವವರ ಆರೋಗ್ಯಕ್ಕೆ ಅಪಾರ ಹಾನಿ ಉಂಟಾಗುತ್ತದೆ ಎಂದು ವರದಿ ತಿಳಿಸಿತ್ತು. 15 ವರ್ಷಕ್ಕಿಂತ ಹೆಚ್ಚಿನ ವಯೋಮಾನದ ಬೀದಿ ಮಕ್ಕಳು ಇದರ ಸೇವನೆ ಮಾಡುತ್ತಿರುವುದು ಕಂಡು ಬಂದಿದೆ. ತಮ್ಮ ದಿನದ ದುಡಿಮೆಯನ್ನು ಇದರ ಮೇಲೆಯೇ ಸುರಿಯುತ್ತಿದ್ದಾರೆ. ಇದರಿಂದ ಅವರ ಜೀವನ ಮಾತ್ರವಲ್ಲದೇ ಆರೋಗ್ಯದ ಮೇಲೂ ಈ ಗುಟ್ಕಾ ಕೆಟ್ಟ ಪರಿಣಾಮ ಬೀರುತ್ತದೆ ಎಂದು ವರದಿ ವಿವರಿಸಿತ್ತು. ಈ ವರದಿಯನ್ನು ಸರ್ಕಾರಿ ವಕೀಲರು ಈದಿನ ಹೈಕೋರ್ಟ್ ಗಮನಕ್ಕೆ ತಂದರು. ವರದಿಯನ್ನು ಗಮನಿಸಿದ ಪೀಠ, ಅದರ ತಯಾರಿ, ಮಾರಾಟ ಹಾಗೂ ವಿತರಣೆಗೆ ನಿಷೇಧ ಹೇರಿ ಆದೇಶಿಸಿತು.

2009: 125 ಗಂಟೆ ನಿರಂತರ ಪಾಠ ಮಾಡುವ ಮೂಲಕ ಮಧ್ಯಪ್ರದೇಶದ ಸಿಯೋನಿ ಜಿಲ್ಲೆ ಗ್ರಾಮವೊಂದರ ಗಣಿತ ಶಿಕ್ಷಕರೊಬ್ಬರು ವಿಶ್ವ ದಾಖಲೆ ನಿರ್ಮಿಸಿದರು. ದಿಲೀಪ್ ಕುಮಾರ್ ಚಾಂದೆಲ್ ಎಂಬ 23ರ ಹರೆಯದ ಗಣಿತ ಶಿಕ್ಷಕ ಈ ಸಾಧನೆ ಮಾಡಿದವರು. ಇವರು ಇಲ್ಲಿಯವರೆಗೂ ದಾಖಲಾಗಿದ್ದ ಹೈದರಾಬಾದಿನ ಜೈಸಿಂಗ್ ರವಿರಾಲ ಅವರ 120 ಗಂಟೆಗಳ ದಾಖಲೆಯನ್ನು ಮುರಿದು ಹೊಸ ದಾಖಲೆ ಸೃಷ್ಟಿಸ್ದಿದರು. ಮಧ್ಯಪ್ರದೇಶದ ಜಮ್ಮುನ್‌ಪಾಣಿ ಗ್ರಾಮದ ಪ್ರಾಥಮಿಕ ವಿದ್ಯಾಲಯದಲ್ಲಿ ಏರ್ಪಡಿಸಿದ್ದ ಈ ಕಾರ್ಯಕ್ರಮ ಇಂಡಿಯಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನ ವೀಕ್ಷಕರ ಸಮ್ಮುಖದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನ ಚೇತನ್ ಉಪಾಧ್ಯಾಯ್ ವೀಕ್ಷಕರಾಗಿ ಭಾಗವಹಿಸಿದ್ದರು. ಹೊಸ ದಾಖಲೆ ಸೃಷ್ಟಿಯಾದ ನಂತರ 2007ರ ಗಿನ್ನೆಸ್ ವಿಶ್ವದಾಖಲೆ ಪುಸ್ತಕದ ಪಟ್ಟಿಯಿಂದ ಜೈಸಿಂಗ್ ಹೆಸರನ್ನು ತೆಗೆಯಲಾಯಿತು. ಚಾಂದೇಲ್ ಅವರ ಪಾಠ ಜನವರಿ 16ರಂದು ಬೆಳಿಗ್ಗೆ 11.71ಕ್ಕೆ ಆರಂಭವಾಗಿ 21ರ ಮಧ್ಯಾಹ್ನ 12.17ರವರೆಗೂ ಮುಂದುವರೆಯಿತು. ನಿಯಮಾನುಸಾರ ಒಂದು ಗಂಟೆಗೊಮ್ಮೆ 5ನಿಮಿಷಗಳ ವಿಶ್ರಾಂತಿಯನ್ನು ಚಾಂದೇಲ್ ತೆಗೆದು ಕೊಂಡರು. ಈ ಕಾರ್ಯಕ್ರಮದಲ್ಲಿ ಮಧ್ಯಪ್ರದೇಶ ವಿಧಾನಸಭೆಯ ಉಪಸಭಾಪತಿ ಹರ್‌ವಂಶ್ ಸಿಂಗ್ ಹಾಜರಿದ್ದ, ಸಾಧಕ ಚಾಂದೇಲ್‌ಗೆ 5001 ರೂಪಾಯಿ ನಗದು ಬಹುಮಾನ ನೀಡಿದರು.

2009: ಬರಾಕ್ ಒಬಾಮ ಅವರು ಈದಿನ ಸಂಜೆ ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದರು. ಹೀಗೆ ಅತ್ಯುನ್ನತ ಹ್ದುದೆಯಲ್ಲಿ ಇರುವವರು ಎರಡನೇ ಬಾರಿ ಪ್ರಮಾಣ ವಚನ ಸ್ವೀಕರಿಸುವುದು ತೀರಾ ಅಪರೂಪ. ಅಮೆರಿಕದ ಯಾವೊಬ್ಬ ಹಿಂದಿನ ಅಧ್ಯಕ್ಷರಿಗೂ ಇಂತಹ ಪರಿಸ್ಥಿತಿ ಎದುರಾಗಿರಲಿಲ್ಲ. ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಪ್ರಮಾಣ ವಚನ ಬೋಧಿಸುವಾಗ ತೊದಲಿದ್ದೇ ಇದಕ್ಕೆ ಕಾರಣ. ಈ ತಪ್ಪನ್ನು ಸರಿಪಡಿಸುವ ಸಲುವಾಗಿ ತುಂಬಾ ಎಚ್ಚರಿಕೆ ವಹಿಸಿ ಈದಿನ ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕಾರ ವಿಧಿ ಪೂರೈಸಲಾಯಿತು ಎಂದು ಶ್ವೇತಭವನದ ಪ್ರಕಟಣೆ ಸ್ಪಷ್ಟಪಡಿಸಿತು. ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಏರುವವರಿಗೆ ಪ್ರಮಾಣ ವಚನದಲ್ಲಿ ಬೋಧನೆಯಾಗುವ ಒಕ್ಕಣೆ ಅಲ್ಲಿನ ಸಂವಿಧಾನದಲ್ಲೇ ಅಡಕವಾಗಿದೆ. ಅದು 35 ಪದಗಳನ್ನು ಒಳಗೊಂಡ ಒಕ್ಕಣೆ.

2008: ವಿಶ್ವದ ಅತ್ಯುನ್ನತ ಮೌಂಟ್ ಎವರೆಸ್ಟ್ ಶಿಖರವನ್ನು ಮೊದಲ ಬಾರಿಗೆ ಏರಿದ ಸಾಹಸಿ ಸರ್ ಎಡ್ಮಂಡ್ ಹಿಲೆರಿ ಅವರ ಪಾರ್ಥಿವ ಶರೀರಕ್ಕೆ ಈದಿನ ಆಕ್ಲೆಂಡಿನ ಸೈಂಟ್ ಮೇರಿ ಇಗರ್ಜಿಯಲ್ಲಿ (ಚರ್ಚ್) ಸಾವಿರಾರು ಜನರ ಗೌರವಾರ್ಪಣೆಯ ಮಧ್ಯೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಪ್ರಮುಖ ಬೀದಿಗಳಲ್ಲಿ ಶವಪೆಟ್ಟಿಗೆಯ ಮೆರವಣಿಗೆ ನಡೆದಂತೆಯೇ ಸಾವಿರಾರು ಮಂದಿ ತಮ್ಮ ಅಂತಿಮ ನಮನ ಸಲ್ಲಿಸಿದರು. ಪ್ರಧಾನಿ ಹೆಲೆನ್ ಕ್ಲರ್ಕ್ ಅವರೂ ಸಹ ಇದರಲ್ಲಿ ಸೇರಿದ್ದರು. ಜಗತ್ತಿನ ನಾನಾ ಭಾಗಗಳಲ್ಲಿ ಟಿವಿ ನೇರ ಪ್ರಸಾರದ ಮೂಲಕ ಅಂತಿಮ ಸಂಸ್ಕಾರವನ್ನು ತೋರಿಸಲಾಯಿತು. ಆದರೆ ಪ್ರಸಾರ ಸಮಯದಲ್ಲಿನ ವ್ಯತ್ಯಾಸದಿಂದಾಗಿ ನೇಪಾಳದಲ್ಲಿ ಮಾತ್ರ ಜನರು ಈ ಮಹಾನ್ ಸಾಹಸಿಯ ಅಂತಿಮ ಯಾತ್ರೆಯನ್ನು ನೋಡಲು ಸಾಧ್ಯವಾಗಲಿಲ್ಲ. ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಶೆರ್ಪಾ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಪರ್ವತಾರೋಹಣದ ಸಂಕೇತವನ್ನು ಗೌರವ ಸೂಚಕವಾಗಿ ತೋರಿಸಲಾಯಿತು. ಭಾರತ, ಆಸ್ಟ್ರೇಲಿಯಾ, ಬ್ರಿಟನ್, ಕೆನಡಾ, ಐರ್ಲೆಂಡ್, ಅಮೆರಿಕ ಸಹಿತ ಹಲವು ದೇಶಗಳ ಉನ್ನತ ಮಟ್ಟದ ಪ್ರತಿನಿಧಿಗಳು ಪಾಲ್ಗೊಂಡಿದ್ದರು. 2008ರ ಜನವರಿ 11ರಂದು ತಮ್ಮ 88ರ ಹರೆಯದಲ್ಲಿ ಕೊನೆಯುಸಿರೆಳೆದ ಹಿಲೆರಿ ಅವರಿಗೆ ನ್ಯೂಜಿಲೆಂಡ್ ಅತ್ಯಂತ ಉನ್ನತ ನಾಗರಿಕ ಸ್ಥಾನಮಾನ ನೀಡಿತ್ತು. ಆ ರಾಷ್ಟ್ರದ ಕರೆನ್ಸಿಯಲ್ಲಿ ಜೀವಿತ ವ್ಯಕ್ತಿಯೊಬ್ಬರ ಚಿತ್ರ ಅಚ್ಚು ಹಾಕಿಸಿದ ಏಕೈಕ ವ್ಯಕ್ತಿ ಎಂಬ ಗೌರವಕ್ಕೆ ಹಿಲೆರಿ ಪಾತ್ರರಾಗಿದ್ದರು.

2008: ಹಳೆಯ ವಾಹನಗಳಿಗೆ ವೇಗ ನಿಯಂತ್ರಕ ಅಳವಡಿಕೆ ಕಡ್ಡಾಯ ಮಾಡುವುದಿಲ್ಲ ಎಂದು ಕರ್ನಾಟಕ ಸರ್ಕಾರ ಲಿಖಿತ ಭರವಸೆ ನೀಡಿದ ಹಿನ್ನೆಲೆಯಲ್ಲಿ ವಾಣಿಜ್ಯ ಉದ್ದೇಶದ ವಾಹನಗಳ ಸಂಘಟನೆಗಳು ಎರಡು ದಿನಗಳಿಂದ ರಾಜ್ಯದಾದ್ಯಂತ ನಡೆಸಿದ ಮುಷ್ಕರ ಈದಿನ ರಾತ್ರಿ ಅಂತ್ಯಗೊಂಡಿತು. ಲಾರಿ, ಖಾಸಗಿ, ಬಸ್ಸು, ಟೂರಿಸ್ಟ್ ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬುಗಳುಗಳು ರಾತ್ರಿಯಿಂದಲೇ ಸಂಚಾರ ಆರಂಭಿಸಿದವು.

2008: ಎಲ್ಲ ಊಹಾಪೋಹಗಳಿಗೂ ತೆರೆ ಎಳೆಯುವಂತೆ ಮುಂದಿನ ಚುನಾವಣೆಯನ್ನು ಬಿಜೆಪಿಯ ಧುರೀಣ ಎಲ್. ಕೆ. ಅಡ್ವಾಣಿ ಅವರ ನಾಯಕತ್ವದಲ್ಲಿ ಎದುರಿಸಲು ಎನ್ ಡಿ ಎ (ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿರಂಗ) ನಿರ್ಧರಿಸಿತು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಎನ್ ಡಿ ಎ ಯ ಅಧ್ಯಕ್ಷರಾಗಿ ಮುಂದುವರಿಯುವರು. ಅಡ್ವಾಣಿ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಎನ್ ಡಿ ಎ ಸಂಚಾಲಕ ಜಾರ್ಜ್ ಫರ್ನಾಂಡಿಸ್ ಮೊದಲು ಗೊತ್ತುವಳಿ ಮಂಡಿಸಿದರು. ಎನ್ ಡಿ ಎ ಯ ಅಂಗಪಕ್ಷಗಳು ಈ ಗೊತ್ತುವಳಿಯನ್ನು ಒಕ್ಕೊರಲಿನಿಂದ ಅನುಮೋದಿಸಿದವು.

2008: ಮುಂಬೈ ಷೇರುಪೇಟೆ ವಹಿವಾಟು ಕುಸಿತವು ಈದಿನವೂ ಮುಂದುವರಿದು ತೀವ್ರ ಸ್ವರೂಪದ ಆತಂಕ ಸೃಷ್ಟಿಸಿತು. ಸಂವೇದಿ ಸೂಚ್ಯಂಕವು ದಿನವೊಂದರ ಅತಿ ಗರಿಷ್ಠ ಮಟ್ಟವಾದ 2,274 ಅಂಶಗಳಿಗೆ ಕುಸಿಯಿತು. ಷೇರು ವಹಿವಾಟುದಾರರ ಪಾಲಿಗೆ ಇನ್ನೊಂದು `ಕರಾಳ ಮಂಗಳವಾರ'ವು ಮಾರುಕಟ್ಟೆಯ ಇತಿಹಾಸದಲ್ಲಿ ದಾಖಲಾಯಿತು. ಸೂಚ್ಯಂಕವು ಹಿಂದಿನ ದಿನವಷ್ಟೇ ದಿನದ ಅತಿ ಹೆಚ್ಚು ದಾಖಲೆ (2,050 ಅಂಶಗಳಷ್ಟು) ಕುಸಿತ ಕಂಡಿತ್ತು.

2008: ಮುಂಬೈಯ ಚಿನಿವಾರ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಕುಸಿದವು. ಬೆಳ್ಳಿ ಪ್ರತಿ ಕೆಜಿಗೆ ರೂ 320 ರಷ್ಟು ಮತ್ತು ಚಿನ್ನ ಪ್ರತಿ 10 ಗ್ರಾಂಗಳಿಗೆ ರೂ 135 ರಷ್ಟು ಇಳಿಕೆ ದಾಖಲಿಸಿದವು. ಖರೀದಿ ಬೆಂಬಲ ಅಭಾವದಿಂದಾಗಿ ಈ ಬೆಲೆ ಇಳಿಕೆ ದಾಖಲಾಯಿತು.
2008: ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು 1945ರ ಆಗಸ್ಟ್ 18ರಂದು ತೈಪೆಯಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಮೃತರಾಗಿದ್ದಾರೆ ಎಂದು ನೇತಾಜಿ ಸಾವಿನ ಕುರಿತಂತೆ ಸರ್ಕಾರ ಸಂಗ್ರಹಿಸಿದ ಸಮಗ್ರ ದಾಖಲೆಗಳ ಅನುಸಾರ ಕೇಂದ್ರ ಗೃಹ ಸಚಿವಾಲಯ ನಿರ್ಧಾರಕ್ಕೆ ಬಂದಿರುವುಗಾಗಿ ಮಿಷನ್ ನೇತಾಜಿ ಸಂಸ್ಥೆಗೆ ನೀಡಲಾದ ಮಾಹಿತಿಯಲ್ಲಿ ಕೇಂದ್ರ ಸರ್ಕಾರ ತಿಳಿಸಿತು. ದೆಹಲಿ ಮೂಲದ ಮಿಷನ್ ನೇತಾಜಿ ಸಂಘಟನೆಯು ಮಾಹಿತಿ ಹಕ್ಕು ಕಾಯ್ದೆಯಡಿ ಕೇಂದ್ರ ಗೃಹ ಸಚಿವಾಲಯಕ್ಕೆ ನೇತಾಜಿ ಮರಣದ ಕುರಿತಂತೆ ವಿವರ ಕೇಳಿ ಮನವಿ ಸಲ್ಲಿಸಿತ್ತು. ಈ ಮನವಿಗೆ ಉತ್ತರಿಸಿದ ಸಚಿವಾಲಯ ಈ ವಿಚಾರವನ್ನು ಬಹಿರಂಗಪಡಿಸಿತು. ನೇತಾಜಿಯವರ ಸಮೀಪವರ್ತಿ ಹಾಗೂ ಅವರೊಟ್ಟಿಗೆ ಅಂದು ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಹಬೀಬ್ ಉರ್ ರಹಮಾನ್ ಅವರ ಹೇಳಿಕೆ ಅನುಸಾರ, ಅಂದು ತೈವಾನಿ ತೈಪೆಯಿಂದ ನೇತಾಜಿಯವರನ್ನು ಹೊತ್ತು ಮೇಲಕ್ಕೆ ಹಾರಿದ ಕೆ-21 ಯುದ್ಧ ವಿಮಾನ ಎತ್ತರಕ್ಕೆ ಹಾರಲೇ ಇಲ್ಲ. ಅದು ಕೆಲವೇ ಸಮಯದಲ್ಲಿ ಭಾರಿ ಶಬ್ದದೊಂದಿಗೆ ಸ್ಫೋಟಗೊಂಡಿತು. ವಿಮಾನ ಟೇಕ್ ಆಫ್ ತೆಗೆದುಕೊಂಡ ನಂತರ ಅದು ತನ್ನ ನಿಯಂತ್ರಣ ಕಳೆದುಕೊಂಡಿತು ಮತ್ತು ಜ್ವಾಲೆಗಳನ್ನು ಹೊರಸೂಸಲು ಆರಂಭಿಸಿತು ಎಂದು ರಹಮಾನ್ ನಂತರದಲ್ಲಿ ನೀಡಿದ ಹೇಳಿಕೆಯನ್ನು ದಾಖಲಿಸಲಾಗಿದೆ. ನೇತಾಜಿ ಕುಳಿತಿದ್ದ ಸೀಟಿನ ಪಕ್ಕದಲ್ಲೇ ಪೆಟ್ರೋಲ್ ಟ್ಯಾಂಕ್ ಇತ್ತು. ದುರಂತದಲ್ಲಿ ಅದು ಸ್ಫೋಟಗೊಂಡಿತು. ಅದರಿಂದ ಹೊರಬಂದ ಬೆಂಕಿಯ ಕಿಡಿಗಳು ಬೋಸ್ ಅವರ ಬಟ್ಟೆಗೆ ತಾಗಿ ಅದು ಹೊತ್ತಿಕೊಂಡಿತು ಎಂದು ಗುಪ್ತದಳ ಪೊಲೀಸರು ನೀಡಿರುವ ಹೇಳಿಕೆಯನ್ನೂ ನೇತಾಜಿ ಸಾವಿನ ಕುರಿತ ಪ್ರಮುಖ ದಾಖಲೆಯನ್ನಾಗಿ ಗೃಹ ಖಾತೆ ಪರಿಗಣಿಸಿದೆ. ಈ ದಾಖಲೆಗಳ ಅನುಸಾರ ನೇತಾಜಿಯವರ ಸಾವು ವಿಮಾನ ಅಪಘಾತದಲ್ಲೇ ಸಂಭವಿಸಿದೆ ಎಂದು ಈಗ ಸರ್ಕಾರ ದಾಖಲಿಸಿದೆ. ನೇತಾಜಿ ಅವರ ಸಾವಿನ ಕುರಿತಂತೆ ಒಟ್ಟು 91 ಪ್ರಮುಖ ದಾಖಲೆಗಳನ್ನು ಪರಿಗಣಿಸಲಾಗಿದೆ ಎಂದು ಸರ್ಕಾರ ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿತು.

2008: ಮೋಸದಾಟ ಆಡಲು ತಮಗೆ ಆಮಿಷ ಒಡ್ಡಲಾಗಿತ್ತೆಂದು ಮಹೇಶ್ ಭೂಪತಿ ನೀಡಿದ ಹೇಳಿಕೆಯ ಸತ್ಯಾಸತ್ಯತೆ ಅರಿಯಲು ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ನಿರ್ಧರಿಸಿತು. ತೊಂಬತ್ತರ ದಶಕದ ಮಧ್ಯ ಭಾಗದಲ್ಲಿ ತಮಗೆ ಪಂದ್ಯವನ್ನು ಸೋಲುವಂತೆ ದೂರವಾಣಿಯ ಮೂಲಕ ಕೇಳಿಕೊಳ್ಳಲಾಗಿತ್ತು ಎಂದು ಮಹೇಶ್ ಸಂದರ್ಶನವೊಂದೊರಲ್ಲಿ ಹೇಳಿದ್ದರು.

2008: ಜಗತ್ತಿನೆಲ್ಲೆಡೆ ಸಂಸ್ಕೃತಿ ತಿಳಿವಳಿಕೆಯನ್ನು ಸಮರ್ಥವಾಗಿ ಬೆಂಬಿಸುತ್ತಿರುವುದಕ್ಕಾಗಿ ಅಮೆರಿಕದ ನಾಗರಿಕ ರಾಜತಾಂತ್ರಿಕ ಕೇಂದ್ರವು ಪ್ರಕಟಿಸಿದ `ಸಿಟಿಜನ್ ಡಿಪ್ಲೊಮೆಸಿ' ಪ್ರಶಸ್ತಿಗೆ ಭಾರತೀಯ ಮೂಲದ ಅಂಜಲಿ ಭಾಟಿಯಾ (19) ಅವರೂ ಪಾತ್ರರಾದರು. ಒಟ್ಟು ಆರು ಮಂದಿ ಈ ಪ್ರಶಸ್ತಿ ಪಡೆದರು. ನ್ಯೂಜೆರ್ಸಿಯ ಕಿನ್ನೆಲೊನಿನಲ್ಲಿ ಇರುವ ಅಂಜಲಿ ತನ್ನ 16ನೇ ವಯಸ್ಸಿಗೇ `ಜಗತ್ತಿನ ಆವಿಷ್ಕಾರ' ಎಂಬ ಸಂಘಟನೆ ಸ್ಥಾಪಿಸಿದ್ದರು. ಅಮೆರಿಕ ಮತ್ತು ರುವಾಂಡಾ ನಡುವಿನ ಸಂಸ್ಕೃತಿ ಸಂಬಂಧ ಸುಧಾರಿಸುವುದು ಸಂಘಟನೆಯ ಮುಖ್ಯ ಉದ್ದೇಶವಾಗಿತ್ತು.

2008: ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನವು ಕೊಡುವ ಪ್ರಸಕ್ತ ಸಾಲಿನ `ಸಂದೇಶ' ಪ್ರಶಸ್ತಿಗೆ ಸುಳ್ಯದ ಸುಬ್ರಾಯ ಚೊಕ್ಕಾಡಿ (ಕನ್ನಡ ಸಾಹಿತ್ಯ), ಮಂಗಳೂರಿನ ಡೊಲ್ಫಿ ಲೋಬೊ ಕಾಸ್ಸಿಯಾ (ಕೊಂಕಣಿ ಸಾಹಿತ್ಯ), ಅಮ್ಮೆಂಬಳದ ಪ್ರೊ. ಎ.ವಿ.ನಾವಡ (ತುಳು ಸಾಹಿತ್ಯ), ಬೆಂಗಳೂರಿನ ಅರುಂಧತಿ ನಾಗ್ (ಕಲಾ), `ಪ್ರಜಾವಾಣಿ'ಯ ಲಕ್ಷ್ಮಣ ಕೊಡಸೆ (ಪತ್ರಿಕೋದ್ಯಮ), ಚಿತ್ರದುರ್ಗದ ಶಿವಸಂಚಾರ ನಾಟಕ ತಂಡ (ಮಾಧ್ಯಮ ಶಿಕ್ಷಣ), ಮೂಲ್ಕಿಯ ಫ್ರಾನ್ಸಿಸ್ ಡಿ'ಕುನ್ಹಾ (ಶಿಕ್ಷಣ) ಮತ್ತು ವಿಶೇಷ ಪ್ರಶಸ್ತಿಗೆ ಬಿಜೈಯ ಹ್ಯಾರಿ ಡಿ'ಸೋಜ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂದೇಶ ಪ್ರಶಸ್ತಿ ಆಯ್ಕೆ ಮಂಡಳಿ ಅಧ್ಯಕ್ಷ, ಸಾಹಿತಿ ನಾ. ಡಿಸೋಜ ಮಂಗಳೂರಿನಲ್ಲಿ ಪ್ರಕಟಿಸಿದರು.

2007: ಗಗನಕ್ಕೇರಿಸಿದ್ದ `ಎಸ್ ಆರ್ ಇ-1 ಮರುಬಳಕೆ ಉಪಗ್ರಹ'ವನ್ನು ಸುರಕ್ಷಿತವಾಗಿ ಭೂಮಿಗೆ ವಾಪಸ್ಸು ಕರೆಸಿಕೊಳ್ಳುವಲ್ಲಿ ಭಾರತದ ಬಾಹ್ಯಾಕಾಶ ಸಂಸ್ಥೆಯ ವಿಜ್ಞಾನಿಗಳು ಯಶಸ್ವಿಯಾದರು. ಇದರೊಂದಿಗೆ ಭಾರತ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಇನ್ನೊಂದು ಗರಿ ಮೂಡಿಸಿಕೊಂಡದ್ದಲ್ಲದೆ ಈ ಸಾಧನೆ ಗೈದ ಜಗತ್ತಿನ ನಾಲ್ಕನೇ ರಾಷ್ಟ್ರ ಎನಿಸಿಕೊಂಡಿತು. ಇಂಥ ಮರುಬಳಕೆ ಉಪಗ್ರಹವನ್ನು ಕಕ್ಷೆಗೆ ಅಮೆರಿಕ, ಚೀನಾ ಹಾಗೂ ರಷ್ಯಾದೇಶಗಳು ಮಾತ್ರ ಈ ಹಿಂದೆ ಗಗನಕ್ಕೆ ಏರಿಸಿ ವಾಪಸ್ ಕರೆಸಿಕೊಂಡಿದ್ದವು.
550 ಕೆಜಿ ತೂಕವಿರುವ ಮರುಬಳಕೆ ಉಪಗ್ರಹ, ಬಾಹ್ಯಾಕಾಶದಲ್ಲಿ ಹನ್ನೆರಡು ದಿನಗಳ ಕಾಲ ಹಾರಾಟ ನಡೆಸಿ, ಈದಿನ ಬೆಳಗ್ಗೆ 9.46ಕ್ಕೆ ಬಂಗಾಳ ಕೊಲ್ಲಿಗೆ ಬಂದು ಇಳಿಯಿತು. ಪೂರ್ವ ನಿರ್ಧರಿತ ಯೋಜನೆಯಂತೆ ಎಸ್ ಆರ್ ಇ ಉಪಗ್ರಹವನ್ನು ಭೂಮಿಗೆ ಹಿಂದಕ್ಕೆ ಕರೆಸಿಕೊಳ್ಳುವ ಕಾರ್ಯವನ್ನು ಭಾರತೀಯ ನೌಕಾಪಡೆಯ ಕರಾವಳಿ ರಕ್ಷಕ ಪಡೆಗೆ ವಹಿಸಲಾಗಿತ್ತು. ಈ ದಳದವರು ಉಪಗ್ರಹವನ್ನು ಇಳಿಸಿಕೊಳ್ಳಲು ಶ್ರೀಹರಿಕೋಟಾದ ಪಶ್ಚಿಮ ಭಾಗದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಉಪಗ್ರಹವು 140 ಕಿಮೀ ವೇಗದಲ್ಲಿ ಬಂದು ಬಂಗಾಳ ಕೊಲ್ಲಿಗೆ ಅಪ್ಪಳಿಸಿತು. ಇಳಿಯುವ ಮುನ್ನ ಉಪಗ್ರಹದ ವೇಗ ತಗ್ಗಿಸಲು ನಾಲ್ಕು ಚಿಕ್ಕ ರಾಕೆಟ್, ಪ್ಯಾರಾಚೂಟ್ಗಳನ್ನು ಜೋಡಿಸಲಾಗಿತ್ತು. ಇವೆಲ್ಲದರ ನೆರವಿನಿಂದ ಉಪಗ್ರಹ ತನ್ನ ವೇಗವನ್ನು ತಗ್ಗಿಸಿಕೊಂಡು ಭೂ ಪರಿಸರ ಪ್ರವೇಶಿಸುವಲ್ಲಿ ಯಶಸ್ವಿಯಾಯಿತು. ಬಂಗಾಳ ಉಪಸಾಗರದಲ್ಲಿ ತೇಲುತ್ತಿರುವ ಉಪಗ್ರಹವನ್ನು ರಾತ್ರಿ `ಸಾರಂಗ' ಹಡಗಿನಲ್ಲಿ ಶ್ರೀಹರಿಕೋಟಾ ಮುಖಾಂತರ ಎನ್ನೋರ್ ಬಂದರಿಗೆ ತರಲಾಯಿತು. ಜನವರಿ 10ರಂದು ಧ್ರುವಗಾಮಿ ಉಪಗ್ರಹ ಉಡಾವಣಾ ವಾಹನದ (ಪಿಎಸ್ಎಲ್ವಿ-ಸಿ7) ಮೂಲಕ ಭಾರತೀಯ ದೂರ ಸಂವೇದಿ ಉಪಗ್ರಹ `ಕಾರ್ಟೊಸ್ಯಾಟ್-2' ಜೊತೆಗೆ ಈ 550 ಕೆ.ಜಿ. ತೂಕದ ಮರು ಬಳಸಬಹುದಾದ ಉಪಗ್ರಹವನ್ನು ಶ್ರೀ ಹರಿಕೋಟ ಬಾಹ್ಯಾಕಾಶ ನಿಲ್ದಾಣದಿಂದ ಕಕ್ಷೆಗೆ ಹಾರಿಬಿಡಲಾಗಿತ್ತು. ಭಾರತದ ಈ ಪ್ರಯತ್ನವನ್ನು `ಎರಡನೆಯ ಸ್ಪೇಸ್ ರೇಸ್ ಆರಂಭ' ಎಂದು ಪಾಶ್ಚಾತ್ಯ ವಿಶ್ಲೇಷಕರು ಬಣ್ಣಿಸಿದ್ದರು. ಅವರ ವಿಶ್ಲೇಷಣೆಯಂತೆ ನಾಲ್ಕೂ ಉಪಗ್ರಹಗಳು ಯಶಸ್ವಿಯಾಗಿ ಕಕ್ಷೆಗೆ ಸೇರಿದ್ದವು.

2007: ಎಡಪಕ್ಷಗಳ ಆಳ್ವಿಕೆಯ ರಾಜ್ಯಗಳ ವಿರೋಧದ ಹೊರತಾಗಿಯೂ ಎನ್ ಡಿ ಎ ಆಡಳಿತ ಇರುವ ರಾಜ್ಯಗಳು ಸೇರಿದಂತೆ 19 ಇತರ ರಾಜ್ಯಗಳು ನೀಡಿದ ಬೆಂಬಲವನ್ನು ಅನುಸರಿಸಿ ಹೊಸ ಪಿಂಚಣಿ ಯೋಜನೆ ನಿಧಿಯನ್ನು ಷೇರು ಮಾರುಕಟೆಯಲ್ಲಿ ತೊಡಗಿಸಲು ಕೇಂದ್ರ ಸರ್ಕಾರ ನಿರ್ಧರಿಸಿತು. ಪಿಂಚಣಿ ಸುಧಾರಣೆಗಾಗಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮುಖ್ಯಮಂತ್ರಿಗಳ ಸಮಾವೇಶದಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಕೇಂದ್ರದ ಪ್ರಸ್ತಾವನೆಗೆ 19 ರಾಜ್ಯಗಳು ಬೆಂಬಲ ವ್ಯಕ್ತಪಡಿಸಿದವು. `ಹೊಸ ಪದ್ಧತಿಯ ಪ್ರಕಾರ ಪಿಂಚಣಿಯ ಶೇ 5ರಷ್ಟನ್ನು ಷೇರು ಮಾರುಕಟ್ಟೆಯಲ್ಲಿ ತೊಡಗಿಸಲು ಅಥವಾ ಪೂರ್ತಿ ನಿಧಿಯನ್ನು ಸರ್ಕಾರಿ ಬಾಂಡುಗಳಲ್ಲಿ ತೊಡಗಿಸಲು ಅವಕಾಶ ಇರುತ್ತದೆ' ಎಂದು ಸಭೆಯ ಬಳಿಕ ಹಣಕಾಸು ಸಚಿವ ಪಿ. ಚಿದಂಬರಂ ತಿಳಿಸಿದರು.

2007: ಅಂತಾರಾಷ್ಟ್ರೀಯ ಖ್ಯಾತಿಯ ಗುಜರಾತಿನ ಗೀತ್ ಸೇಥಿ ಎಂಟು ವರ್ಷಗಳ ನಂತರ ಮತ್ತೊಮ್ಮೆ ಬಿಲಿಯರ್ಡಿನಲ್ಲಿ ರಾಷ್ಟ್ರೀಯ ಚಾಂಪಿಯನ್ ಆದರು. ಕರ್ನಾಟಕದ ಸ್ನೂಕರ್ ಮತ್ತು ಬಿಲಿಯರ್ಡ್ಸ್ ಸಂಸ್ಥೆ ಆವರಣದಲ್ಲಿ ನಡೆದ ಫೈನಲ್ ಸುತ್ತಿನ ಮುಖಾಮುಖಿಯಲ್ಲಿ ಸೇಥಿ ಅವರು ಕರ್ನಾಟಕದ ಪಂಕಜ್ ಅಡ್ವಾಣಿ ಅವರನ್ನು ಸೋಲಿಸಿದರು.

2007: ಬಾಗ್ದಾದಿನ ಕೇಂದ್ರ ಭಾಗದಲ್ಲಿ ಶಿಯಾ ಮುಸ್ಲಿಮರು ಅಧಿಕವಿದ್ದ ವಾಣಿಜ್ಯ ಪ್ರದೇಶದಲ್ಲಿ ಎರಡು ಶಕ್ತಿಶಾಲಿ ಬಾಂಬುಗಳು ಸ್ಫೋಟಗೊಂಡು 72 ಮಂದಿ ಮೃತರಾಗಿ ಇತರ 113 ಮಂದಿ ಗಾಯಗೊಂಡರು.

2006: ಹಿರಿಯ ಹಿಂದಿ ಭಾಷಾ ವಿದ್ವಾಂಸ ಡಾ. ಮಂಡಗದ್ದೆ ಕಟ್ಟೆ ಭಾರತಿ ರಮಣಾರ್ಯ (86) ಅವರು ನಿಧನರಾದರು. ಅವರು ಬೆಂಗಳೂರು ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥರಾಗಿದ್ದರು. ಹಿಂದಿಯ ತುಳಸಿ ರಾಮಾಯಣವನ್ನು ಮಕರಂದ ವ್ಯಾಖ್ಯೆ ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದರು. ಐದು ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದ ಅವರು ಪೂರ್ಣಪ್ರಜ್ಞ ವಿದ್ಯಾಪೀಠದ ಸ್ಥಾಪಕ ಕಾರ್ಯದರ್ಶಿಯಾಗಿ 28 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.

2006: ಶ್ರವಣಬೆಳಗೊಳದಲ್ಲಿ 12 ವರ್ಷಕ್ಕೊಮ್ಮೆ ನಡೆಯುವ ಇತಿಹಾಸ ಪ್ರಸಿದ್ಧ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಚಾಲನೆ ನೀಡಿದರು.

2006: ಟೊರಾಂಟೋದ ಬಾಟಾ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದ, ಕ್ರಿ.ಶ. 1790ರಲ್ಲಿ ಹೈದರಾಬಾದಿನ ನಿಜಾಮ ಧರಿಸುತ್ತಿದ್ದ ಮುತ್ತು ರತ್ನ ಖಚಿತ ಪಾದರಕ್ಷೆಗಳ ಜೊತೆ ಕಳವಾಯಿತು. ಈ ಪಾದರಕ್ಷೆಗಳ ಮೌಲ್ಯ 1,40,000 ಅಮೆರಿಕನ್ ಡಾಲರುಗಳು. ವಸ್ತು ಸಂಗ್ರಹಾಲಯದಲ್ಲಿ ಕ್ರಿ.ಶ. 1500ರಷ್ಟು ಹಳೆಯ ಕಾಲದ 10,000 ಪಾದರಕ್ಷೆಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಸಂಜೆ ವಸ್ತುಸಂಗ್ರಹಾಲಯ ಮುಚ್ಚುವ ವೇಳೆಗೆ ಹೈದರಾಬಾದ್ ನಿಜಾಮನ ಪಾದರಕ್ಷೆಗಳು ಕಳುವಾದದ್ದು ಬೆಳಕಿಗೆ ಬಂತು.

2001: `ಐ ಎನ್ ಎಸ್ ಮುಂಬೈ' ಮತ್ತು `ಐ ಎನ್ ಎಸ್ ಕಿರ್ಕ್' ಸಮರನೌಕೆಗಳು ಏಕಕಾಲಕ್ಕೆ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡವು.

1995: ಜಾನ್ ಎಫ್. ಕೆನಡಿ ಅವರ ತಾಯಿ ರೋಸ್ ಫಿಟ್ಜೆರಾಲ್ಡ್ ಕೆನಡಿ ಅವರು ಮೆಸ್ಸಾಚ್ಯುಸೆಟ್ಸಿನ ಹಯಾನಿಸ್ ಬಂದರಿನಲ್ಲಿ ತಮ್ಮ 104ನೇ ವಯಸ್ಸಿನಲ್ಲಿ ಮೃತರಾದರು.

1909: ಈದಿನ ಜನಿಸಿದ ಉ-ಥಾಂಟ್ (1909-1974) ಅವರು ಮ್ಯಾನ್ಮಾರಿನ (ಆಗಿನ ಬರ್ಮಾ) ಅಧಿಕಾರಿಯಾಗಿ ನಂತರ, ವಿಶ್ವಸಂಸ್ಥೆಯ ಮೂರನೇ ಸೆಕ್ರೆಟರಿ ಜನರಲ್ ಆದರು. 1962ರಿಂದ 1971ರವರೆಗೆ ಅವರು ವಿಶ್ವಸಂಸ್ಥೆಯ ಈ ಹುದ್ದೆಯಲ್ಲಿ ಇದ್ದರು.

1905: ರಷ್ಯಾದ ಸೇಂಟ್ ಪೀಟರ್ಸ್ ಬರ್ಗಿನಲ್ಲಿ ಶಾಂತಿಯುತ ಪ್ರದರ್ಶನಕಾರರ ಹತ್ಯಾಕಾಂಡ ನಡೆಯಿತು. `ರಕ್ತಪಾತದ ರವಿವಾರ' (ಬ್ಲಡಿ ಸಂಡೆ) ಎಂದೇ ಹೆಸರಾದ ಈ ಘಟನೆ 1905ರ ರಷ್ಯಾ ಕ್ರಾಂತಿಯ ಹಿಂಸಾತ್ಮಕ ಸ್ವರೂಪಕ್ಕೆ ನಾಂದಿ ಹಾಡಿತು. ಫಾದರ್ ಗ್ಯಾಪನ್ ಎಂಬಾತನ ನೇತೃತ್ವದಲ್ಲಿ ಕಾರ್ಮಿಕರ ಗುಂಪೊಂದು ಗುಂಡು ಹಾರಿಸಿ 100ಕ್ಕೂ ಹೆಚ್ಚು ಜನರನ್ನು ಕೊಂದು ಹಲವರನ್ನು ಗಾಯಗೊಳಿಸಿತು. ಸರಣಿ ಮುಷ್ಕರಗಳು ಹಾಗೂ ರೈತ ಬಂಡಾಯಗಳು ತ್ಸಾರ್ ಆಡಳಿತಕ್ಕೆ ಗಂಭೀರ ಬೆದರಿಕೆ ಒಡ್ಡಿದವು. ಈ ಘಟನೆ 1905ರ ಕ್ರಾಂತಿ ಎಂದೇ ಹೆಸರು ಪಡೆಯಿತು.

1896: ಈದಿನ ಹುಟ್ಟಿದ ಸೂರ್ಯಕಾಂತ ತ್ರಿಪಾಠಿ (1896-1961) ಅವರು ಹಿಂದಿ ಕವಿ, ಕಾದಂಬರಿಕಾರ, ಪ್ರಬಂಧಕಾರರಾಗಿ `ನಿರಾಲಾ' ಹೆಸರಿನಲ್ಲಿ ಖ್ಯಾತರಾದರು.

1901: ಅರವತ್ತನಾಲ್ಕು ವರ್ಷಗಳ ಸುದೀರ್ಘ ಆಳ್ವಿಕೆಯ ಬಳಿಕ ರಾಣಿ ವಿಕ್ಟೋರಿಯಾ ತಮ್ಮ 82ನೇ ವಯಸ್ಸಿನಲ್ಲಿ ನಿಧನರಾದರು.

1760: ವಾಂಡಿವಾಶ್ ಕದನದಲ್ಲಿ ಬ್ರಿಟಿಷರು ಫ್ರೆಂಚರನ್ನು ಸೋಲಿಸಿದರು. ಇದರಿಂದಾಗಿ ಬ್ರಿಟಿಷರು ದಕ್ಷಿಣ ಭಾರತದ ವಿವಾದ ರಹಿತ ಆಡಳಿತಗಾರರೆನಿಸಿಕೊಂಡರು.

Tuesday, February 23, 2010

ಇಂದಿನ ಇತಿಹಾಸ History Today ಜನವರಿ 21

ಇಂದಿನ ಇತಿಹಾಸ

ಜನವರಿ 21

ಪ್ರಮುಖ ವೆಬ್‌ಸೈಟ್ 'ಆಸ್ಕ್ ಮೆನ್.ಕಾಮ್'' ಪ್ರಕಟಿಸಿದ ಸಮೀಕ್ಷೆಯೊಂದರಲ್ಲಿ 'ಪುರುಷರು ಇಷ್ಟಪಡುವ ವಿಶ್ವದ 50 ಮಹಿಳೆಯರು' ಪಟ್ಟಿಯಲ್ಲಿ ಮಾಜಿ ವಿಶ್ವ ಸುಂದರಿ ಭಾರತದ ಐಶ್ವರ್ಯ ರೈ ಸ್ಥಾನ ಪಡೆದರು. ಅಷ್ಟೇ ಅಲ್ಲ; ಈ ಪಟ್ಟಿಯಲ್ಲಿ 48ನೇ ಸ್ಥಾನ ಪಡೆಯುವ ಮೂಲಕ 50ನೇ ಸ್ಥಾನ ಪಡೆದಿರುವ ಅಮೆರಿಕದ ಗಾಯಕಿ ಬೆಯಾನ್ಸ್ ಅವರನ್ನೂ ಐಶ್ವರ್ಯ ಹಿಂದಿಕ್ಕಿದರು ಎಂದು ಆಸ್ಕ್ ಮೆನ್ ಡಾಟ್ ಕಾಮ್ ( www.askmen.com) ಪ್ರಕಟಿಸಿತು.

2009: ಒಬಾಮ ನೇತೃತ್ವದ ಅಮೆರಿಕದ ಹೊಸ ಸರ್ಕಾರವು ಪಾಕಿಸ್ಥಾನಕ್ಕೆ ಹೆಚ್ಚಿನ ನಾಗರಿಕ ಮೂಲ ಸೌಲಭ್ಯ ನೆರವು ನೀಡಲು ಉದ್ದೇಶಿಸಿದ್ದರೂ, ಅದರ ಪ್ರಮಾಣ ಆ ರಾಷ್ಟ್ರವು ಆಘ್ಘಾನಿಸ್ಥಾನದ ಗಡಿಯಲ್ಲಿ ಭಯೋತ್ಪಾದನೆ ತಗ್ಗಿಸಲು ಎಷ್ಟು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುತ್ತದೆ ಎಂಬುದನ್ನು ಆಧರಿಸಿರುತ್ತದೆ ಎಂದು ಸ್ಪಷ್ಟಪಡಿಸಲಾಯಿತು. ಒಬಾಮ ಅವರು ಅಧಿಕಾರ ಸ್ವೀಕರಿಸಿದ ನಂತರ ಶ್ವೇತಭವನವು ಪ್ರಕಟಿಸಿದ ತನ್ನ ವಿದೇಶಾಂಗ ನೀತಿ ಕಾರ್ಯಸೂಚಿಯಲ್ಲಿ ಈ ಅಂಶ ಬಹಿರಂಗಪಡಿಸಲಾಯಿತು. ಪಾಕಿಸ್ಥಾನಕ್ಕೆ ಸೇನಾ ನೆರವಿನಿಂದ ಹೊರತಾದ ಷರತ್ತು ಬದ್ಧ ನಾಗರಿಕ ಸಹಾಯ ಪ್ರಮಾಣ ಹೆಚ್ಚಿಸುವುದು ಅಮೆರಿಕದ ಉದ್ಧೇಶ. ಅದೇ ಸಮಯಕ್ಕೆ ಆಘ್ಘಾನಿಸ್ಥಾನದ ಗಡಿಯಲ್ಲಿನ ಸುರಕ್ಷತೆಗೆ ಆ ರಾಷ್ಟ್ರವನ್ನೇ ಹೊಣೆ ಮಾಡಲಾಗುವುದು ಎಂದು ಕಾರ್ಯಸೂಚಿ ವಿವರಿಸಿತು.

2009: ಅಮೆರಿಕದ ನೂತನ ಅಧ್ಯಕ್ಷರಾಗಿ 2009ರ ಜನವರಿ 20 ರಂದು ತಾವು ಅಧಿಕಾರ ಸ್ವೀಕರಿಸಿದ ದಿನವನ್ನು 'ರಾಷ್ಟ್ರೀಯ ಪುನರುಜ್ಜೀವನ ಹಾಗೂ ಸಾಮರಸ್ಯ ದಿವಸ' ಎಂದು ಬರಾಕ್ ಒಬಾಮ ಘೋಷಿಸಿದರು. ಅಧ್ಯಕ್ಷ ಪಟ್ಟಕ್ಕೆ ಏರಿದ ಮೊದಲ ಆಫ್ರಿಕಾ ಅಮೆರಿಕ ಸಂಜಾತ ಎಂಬ ಹೆಗ್ಗಳಿಕೆಗೆ ಪಾತ್ರರಾದ ಒಬಾಮ, ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾಡಿದ ಮೊಟ್ಟ ಮೊದಲ ಈ ಘೋಷಣೆ ದೇಶದ ಎಲ್ಲ ಟಿವಿ ವಾಹಿನಿಗಳಲ್ಲಿ ಪ್ರಸಾರವಾಯಿತು. ಇನ್ನೊಂದು ವಿಶೇಷವೆಂದರೆ ತಮ್ಮ ಅಧ್ಯಕ್ಷರು ಎಡಗೈಯಲ್ಲಿ ಈ ಘೋಷಣೆಗೆ ಸಹಿ ಮಾಡ್ದಿದನ್ನು ಜನರು ಕಣ್ಣಾರೆ ಕಂಡರು. ಈ ದೇಶ ಕಟ್ಟುವುದು ಎಲ್ಲರ ಗುರಿಯಾಗಬೇಕು. ನಾವು ಈಗ ಪರೀಕ್ಷೆಯ ಕಾಲದಲ್ಲಿ ಇದ್ದೇವೆ ಎಂದು ಒಬಾಮ ಹೇಳಿದರು.

2009: ಗಾಜಾ ಪಟ್ಟಿಯಿಂದ ಈದಿನ ಬೆಳಿಗ್ಗೆ ಇಸ್ರೇಲ್ ತನ್ನ ಕಟ್ಟ ಕಡೆಯ ಸೇನಾ ಪಡೆ ಹಿಂತೆಗೆದುಕೊಂಡಿತು. ಹಮಾಸ್ ಉಗ್ರರನ್ನು ದಮನ ಮಾಡುವ ಕಾರ್ಯಾಚರಣೆಯ ಅಂಗವಾಗಿ ಎರಡು ವಾರಗಳ ಹಿಂದೆ ಈ ಪಡೆ ಕಳುಹಿಸಲಾಗಿತ್ತು. ಏಕಪಕ್ಷೀಯ ಯುದ್ಧ ವಿರಾಮ ಘೋಷಿಸಿದ ಕೆಲ ಗಂಟೆಗಳ ಅಂತರದಲ್ಲಿ ಇಸ್ರೇಲ್ ತನ್ನ ಸೇನಾ ಪಡೆಗಳನ್ನು ಹಿಂತೆಗೆದುಕೊಳ್ಳಲು ಆರಂಭಿಸಿತು.

2009: ಪ್ರಮುಖ ವೆಬ್‌ಸೈಟ್ 'ಆಸ್ಕ್ ಮೆನ್.ಕಾಮ್'' ಪ್ರಕಟಿಸಿದ ಸಮೀಕ್ಷೆಯೊಂದರಲ್ಲಿ 'ಪುರುಷರು ಇಷ್ಟಪಡುವ ವಿಶ್ವದ 50 ಮಹಿಳೆಯರು' ಪಟ್ಟಿಯಲ್ಲಿ ಮಾಜಿ ವಿಶ್ವ ಸುಂದರಿ ಭಾರತದ ಐಶ್ವರ್ಯ ರೈ ಸ್ಥಾನ ಪಡೆದರು. ಅಷ್ಟೇ ಅಲ್ಲ; ಈ ಪಟ್ಟಿಯಲ್ಲಿ 48ನೇ ಸ್ಥಾನ ಪಡೆಯುವ ಮೂಲಕ 50ನೇ ಸ್ಥಾನ ಪಡೆದಿರುವ ಅಮೆರಿಕದ ಗಾಯಕಿ ಬೆಯಾನ್ಸ್ ಅವರನ್ನೂ ಐಶ್ವರ್ಯ ಹಿಂದಿಕ್ಕಿದರು ಎಂದು ಆಸ್ಕ್ ಮೆನ್ ಡಾಟ್ ಕಾಮ್ ( www.askmen.com) ಪ್ರಕಟಿಸಿತು. ಬುದ್ಧಿವಂತಿಕೆ, ವರ್ಚಸ್ಸು ಮತ್ತು ಮಹತ್ವಾಕಾಂಕ್ಷೆ ಆಧರಿಸಿ ತಮ್ಮ ಆದರ್ಶ ಸಂಗಾತಿ ಆಯ್ಕೆ ಮಾಡಿಕೊಳ್ಳಬೇಕೆಂದು ಸಮೀಕ್ಷೆಯ ಮಾರ್ಗದರ್ಶಿಯಲ್ಲಿ ಸೂಚಿಸಲಾಗಿತ್ತು. ಆ ಪ್ರಕಾರ ಸಿದ್ಧಪಡಿಸಿದ ಪಟ್ಟಿಯಲ್ಲಿ ಅಮೆರಿಕದ ನಟಿ ಇವಾ ಮೆಂಡೆಸ್ ಮೊತ್ತಮೊದಲ ರಾಂಕ್ (Rank) ಪಡೆದರು. ಹ್ಯಾಥ್‌ವೇ, ಸ್ಕಾರ್ಲೆಟ್ ಜೊಹಾನ್ಸನ್, ರಿಹನ್ನಾ, ಆಂಜಲೀನಾ ಜೋಲಿ, ಹೀದಿ ಕಮ್ಲ್, ಜೆಸ್ಸಿಕಾ ಅಲ್ಬಾ ಈ ಪಟ್ಟಿ ಸೇರಿದ ಇತರರು.

2009: ಶುಕ್ರದೆಸೆ ಇದ್ದರೆ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಪಂಜಾಬ್ ಸಾಕ್ಷಿಯಾಯಿತು. ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರ ಪುತ್ರ ಸುಖಬೀರ್ ಸಿಂಗ್ ಬಾದಲ್ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಮೂಲಕ ಸರ್ಕಾರದಲ್ಲಿ ಅಪ್ಪನಿಗೆ ಸಾಥ್ ನೀಡಿದರು. ಪಂಜಾಬ್ ಉಪ ಮುಖ್ಯಮಂತ್ರಿಯಾಗಿ ಅಮೃತಸರದಲ್ಲಿ ಪ್ರಮಾಣವಚನ ಸ್ವೀಕರಿಸಿದ ಸುಖ್‌ಬೀರ್ ಸಿಂಗ್ ಬಾದಲ್ ತತ್ ಕ್ಷಣವೇ ತಮ್ಮ ತಂದೆಯವರಾದ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರಿಂದ ಆಶೀರ್ವಾದ ಪಡೆದರು.

2008: ವಿಶ್ವದಲ್ಲಿನ ಸಮಸ್ತ ಗ್ರಹಗಳು, ನಕ್ಷತ್ರಗಳೆಲ್ಲ ಅಗೋಚರ ಮತ್ತು ಅನಂತ ದಾರವೊಂದರಿಂದ ಬಂಧಿಸಲ್ಪಟ್ಟಿವೆ ಹಾಗೂ ಆ ದಾರ ಬಿಡುಗಡೆ ಮಾಡುವ ಶಕ್ತಿಯನ್ನೇ ಬಳಸಿಕೊಳ್ಳುತ್ತಿವೆ ಎಂಬುದಾಗಿ ನ್ಯೂಯಾರ್ಕಿನ ಸಸೆಕ್ಸ್ ವಿಶ್ವವಿದ್ಯಾಲಯದ ಸಂಶೋಧನಾ ನಿರತ ವಿಜ್ಞಾನಿಗಳು ಪ್ರತಿಪಾದಿಸಿದರು. ಬ್ರಹ್ಮಾಂಡದಲ್ಲಿನ ಅಗೋಚರ ಶಕ್ತಿಯ ಬಲವನ್ನು ಸದ್ಯ ಅಳೆಯುತ್ತಿರುವ `ನಾಸಾ'ದ `ವಿಲ್ಕಿನ್ ಸನ್ ಮೈಕ್ರೊವೇವ್ ಅನಿಸೊಟ್ರೊಫಿ ಪ್ರೋಬ್' ಕಲೆಹಾಕಿದ ಮಾಹಿತಿ ಆಧಾರದಲ್ಲಿ ಈ ನಿರ್ಣಯಕ್ಕೆ ಬರಲಾಯಿತು. `ಈ ದಾರವನ್ನು ನಾವು ನೋಡಲು ಸಾಧ್ಯವಿಲ್ಲ, ಅದು ಎಷ್ಟೋ ಶತಕೋಟಿ ಜ್ಯೋತಿರ್ವರ್ಷಗಳಾಚೆ ಇದೆ. ಈ ವರ್ಷ ಹಾರಿಬಿಡಲಾಗುವ ಐರೋಪ್ಯ ಬಾಹ್ಯಾಕಾಶ ಏಜೆನ್ಸಿಯ ಪ್ಲಾಂಕ್ ಉಪಗ್ರಹ ಯಾನದ ಬಳಿಕ ಇದು ದೃಢಪಡಲಿದೆ' ಎಂದು ತಂಡದ ಮುಖ್ಯಸ್ಥ ಡಾ. ಮಾರ್ಕ್ ಹಿಂಡ್ ಮಾರ್ಷ್ ಹೇಳಿದ್ದನ್ನು `ಸೈನ್ಸ್ ಡೈಲಿ' ವರದಿ ಮಾಡಿತು.

2008: ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೇಲಿನ `ಬೇಹುಗಾರಿಕೆ' ಉಪಗ್ರಹವೊಂದನ್ನು ಧ್ರುವಗಾಮಿ ಕಕ್ಷೆಗೆ ಹಾರಿಬಿಡಲಾಯಿತು. ಇದರೊಂದಿಗೆ ವಾಣಿಜ್ಯ ಉದ್ದೇಶದ ಉಪಗ್ರಹ ಉಡಾವಣೆಯಲ್ಲಿ ಭಾರತ ಇನ್ನೊಂದು ಹೆಜ್ಜೆ ಕ್ರಮಿಸಿತು. ಇದರಿಂದಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಮತ್ತೊಂದು ಹಿರಿಮೆಯನ್ನು ತನ್ನದಾಗಿಸಿಕೊಂಡಿತು. ಸಂಪೂರ್ಣ ದೇಶೀಯವಾಗಿ ನಿರ್ಮಿಸಲಾದ ಈ ಧ್ರುವಗಾಮಿ ಉಪಗ್ರಹ ಉಡಾವಣಾ ವಾಹನ (ಪಿಎಸ್ಎಲ್ವಿ- ಸಿ10) 300 ಕೆ.ಜಿ. ತೂಕದ ಇಸ್ರೇಲಿನ ಟೆಕ್ಸಾರ್ (ಪೋಲಾರಿಸ್) ಉಪಗ್ರಹವನ್ನು ಉಡಾವಣೆಯಾದ 1185 ಸೆಕೆಂಡುಗಳ ನಂತರ (19.75 ನಿಮಿಷ) ನಿರ್ದಿಷ್ಟ ಕಕ್ಷೆಯಲ್ಲಿ ಕೂರಿಸಿತು. ಮೋಡ ಹಾಗೂ ಮಂಜು ಮುಸುಕಿದ ವಾತಾವರಣದ ಮಧ್ಯೆಯೂ ಭೂಮಿಯ ಚಿತ್ರಗಳನ್ನು ಸೆರೆಹಿಡಿಯುವ ಸಾಮರ್ಥ್ಯ `ಟೆಕ್ಸಾರ್' ಉಪಗ್ರಹಕ್ಕೆ ಇದ್ದು, ಹಗಲು, ರಾತ್ರಿ ಚಿತ್ರಗಳನ್ನು ಸೆರೆಹಿಡಿಯುವುದು.

2008: ಬ್ರಿಟನ್ ಪ್ರಧಾನಿ ಗಾರ್ಡನ್ ಬ್ರೌನ್ ಅವರು ಶೈಕ್ಷಣಿಕ ರಂಗಕ್ಕೆ ನೀಡಿರುವ ಕೊಡುಗೆ ಮತ್ತು ಸಾರ್ವಜನಿಕ ಸೇವೆಯನ್ನು ಪರಿಗಣಿಸಿ ಅವರಿಗೆ ದೆಹಲಿ ವಿಶ್ವವಿದ್ಯಾ ನಿಲಯವು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು. ಈದಿನ ನಡೆದ ವಿಶೇಷ ಘಟಿಕೋತ್ಸವದಲ್ಲಿ ವಿವಿಯ ಕುಲಪತಿಗಳೂ ಆದ ಉಪರಾಷ್ಟ್ರಪತಿ ಹಮೀದ್ ಅನ್ಸಾರಿಯವರು ಗಾರ್ಡನ್ ಅವರಿಗೆ ಈ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.

2008: ಅಂತಾರಾಷ್ಟ್ರೀಯ ಟೆನಿಸ್ ಕ್ಷೇತ್ರಕ್ಕೆ ಕಾಲಿಟ್ಟ ಹೊಸದರಲ್ಲಿ ಮೋಸದಾಟ ಆಡಲು ಆಮಿಷ ಒಡ್ಡಲಾಗಿತ್ತು ಎಂಬುದನ್ನು ಭಾರತದ ಖ್ಯಾತ ಡಬಲ್ಸ್ ಆಟಗಾರ ಮಹೇಶ್ ಭೂಪತಿ ಮೆಲ್ಬೋರ್ನಿನಲ್ಲಿ ಬಹಿರಂಗಪಡಿಸಿದರು.

2008: ದೇಶದ ಬಂಡವಾಳ ಪೇಟೆಯಲ್ಲಿ ಹಣ ತೊಡಗಿಸಿರುವ ಹೂಡಿಕೆದಾರರ ಪಾಲಿಗೆ ಸೋಮವಾರದ ಈದಿನವು ವಾರದ ವಹಿವಾಟಿಗೆ ಶುಭಾರಂಭದ ಶ್ರೀಕಾರ ಹಾಕದೇ ಭಯಾನಕ ದುಃಸ್ವಪ್ನವಾಗಿ ಕಾಡಿತು. ಒಂದು ಹಂತದಲ್ಲಿ ಬಿ ಎಸ್ ಇ ಸೂಚ್ಯಂಕವು 16,951.50 ಅಂಶಗಳಿಗೆ (17,000 ಅಡಿಗಿಂತ ಕೆಳಗೆ) ಕುಸಿದರೆ, ಎನ್ ಎಸ್ ಇ 5 ಸಾವಿರ ಅಂಶಗಳಿಗಿಂತ (4977) ಕೆಳಗೆ ಇಳಿದಿತ್ತು. ಈ ಕರಾಳ ಸೋಮವಾರ ಅನಿರೀಕ್ಷಿತವಾಗಿ ಆರು ಲಕ್ಷ ಕೋಟಿಗಳಷ್ಟು ಸಂಪತ್ತನ್ನು ಕರಗಿಸಿತು.

2008: ಕಾರ್ಗಿಲ್ ಕದನ ಸಮಯದಲ್ಲಿ ಪ್ರಚಾರ ಪಡೆದಿದ್ದ ಕಾಶ್ಮೀರದ ದ್ರಾಸ್ ಪ್ರದೇಶ ಸೈಬೀರಿಯಾ ಪ್ರಾಂತ್ಯದ ನಂತರದ ಅತ್ಯಂತ ಚಳಿಯುಕ್ತ ಪ್ರದೇಶ ಎಂದು ಹೆಸರಾಯಿತು. ದ್ರಾಸ್ ಪ್ರದೇಶ ಶೂನ್ಯಕ್ಕಿಂತ 27 ಡಿ.ಸೆ. ಕಡಿಮೆ ಉಷ್ಣಾಂಶ ಹೊಂದುವ ಮೂಲಕ ಈ ವರ್ಷದ ಅತ್ಯಂತ ಕಡಿಮೆ ಉಷ್ಣಾಂಶ ಹೊಂದಿದ ದಾಖಲೆಗೆ ಪಾತ್ರವಾಯಿತು. ಈದಿನ ಇಲ್ಲಿ ದಾಖಲಾದ ಗರಿಷ್ಠ ಉಷ್ಣಾಂಶ -13.5 ಡಿ.ಸೆ.!

2008: ಪಾಕಿಸ್ಥಾನದ `ನ್ಯೂಸ್ ಲೈನ್' ನಿಯತಕಾಲಿಕ ನೀಡುವ 2007ನೇ ಸಾಲಿನ ಕುಖ್ಯಾತರ ಪ್ರಶಸ್ತಿ `ಹಾಲ್ ಆಫ್ ಶೇಮ್' ಪಡೆದವರ ಪಟ್ಟಿಯಲ್ಲಿ ದೇಶದ ಅಧ್ಯಕ್ಷ ಪರ್ವೇಜ್ ಮುಷರಫ್ ಮತ್ತು ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಅವರ ಹೆಸರುಗಳೂ ಸೇರಿದವು.

2008: ಮ್ಯಾನ್ಮಾರಿನ ದಕ್ಷಿಣ ಭಾಗದಲ್ಲಿ ಭಾನುವಾರ ಬಸ್ಸೊಂದು ಹೆದ್ದಾರಿಯಿಂದ 10 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದುದರಿಂದ 27 ಪ್ರಯಾಣಿಕರು ಸತ್ತು ಇತರ 10 ಮಂದಿ ಗಾಯಗೊಂಡರು.

2008: ಪಾಕಿಸ್ಥಾನ ತಂಡದವರು ಕರಾಚಿಯಲ್ಲಿ ನಡೆದ ಜಿಂಬಾಬ್ವೆ ಎದುರಿನ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ 104 ರನ್ನುಗಳ ಗೆಲುವು ಸಾಧಿಸಿದರು. ಜೊತೆಗೆ ಐದು ಮಂದಿ ಬ್ಯಾಟ್ಸ್ ಮನ್ನರು ಅರ್ಧ ಶತಕ ದಾಖಲಿಸಿದ್ದು ಇದೊಂದು ವಿಶ್ವದಾಖಲೆಯಾಯಿತು.

2008: ಗುಜರಾತಿನಲ್ಲಿ 2002ರಲ್ಲಿ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವುದು ಹಾಗು ಕಗ್ಗೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಮುಂಬೈನ ಸಿಬಿಐ ವಿಶೇಷ ನ್ಯಾಯಾಲಯವು 11ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತು. ಈ 12 ಮಂದಿ ಆರೋಪಿಗಳ ಹೆಸರನ್ನು ಜನವರಿ 18ರಂದು ನ್ಯಾಯಾಲಯವು ಪ್ರಕಟಿಸಿತ್ತು. ಇತರ 7 ಮಂದಿಯನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಆರೋಪಮುಕ್ತರನ್ನಾಗಿಸಿ ತೀರ್ಪು ನೀಡಲಾಯಿತು. ಹನ್ನೆರಡನೇ ಆರೋಪಿಯೂ ಆಗಿರುವ ಪೊಲೀಸ್ ಸಿಬ್ಬಂದಿ ಸೋಮಾಬಾಯ್ ಗೋರಿಗೆ ಮೂರು ವರ್ಷಗಳ ಕಠಿಣ ಸಜೆಯ ಶಿಕ್ಷೆ ನೀಡಲಾಯಿತು. ಆರೋಪಿಗಳನ್ನು ರಕ್ಷಿಸಲು ಯತ್ನಿಸಿದನೆಂಬ ಆರೋಪ ಸೋಮಾಬಾಯ್ ಮೇಲಿತ್ತು. ವಿಚಾರಣೆಯನ್ನು ಎದುರಿಸುತ್ತಿದ್ದವರಲ್ಲಿ ನರೇಶ್ ಮೊರ್ಧಿಯ ವಿಚಾರಣೆಯ ಸಂದರ್ಭದಲ್ಲಿಯೇ ಸಾವನ್ನಪ್ಪಿದ್ದರು. ಜಸ್ವಂತಿಬಾಯ್ ನೈ, ಗೋವಿಂದಬಾಯ್ ನೈ, ಶೈಲೇಶ್ ಭಟ್, ರಾಧೇ ಶ್ಯಾಮ್ ಶಹಾ, ಬಿಪಿನ್ ಜೋಷಿ, ಕೇಸರ್ ಬಾಯ್ ವೊಹಾನಿಯ, ಪ್ರದೀಪ್ ಮೊರ್ಧಿಯ, ಬಾಕಾಬಾಯ್ ವೊಹಾನಿಯ, ರಾಜನ್ ಬಾಯ್ ಸೋನಿ, ನಿತೇಶ್ ಭಟ್, ರಮೇಶ್ ಚಂದನ ಅವರು ಜೀವಾವಧಿ ಶಿಕ್ಷೆಗೆ ಒಳಗಾದರು. 2002ರ ಮಾರ್ಚಿ 3ರಂದು ಚಪರ್ ವಾಡಾದಿಂದ ಪನಿವೇಲಾದತ್ತ 17ಜನರ ಗುಂಪು ಪ್ರಯಾಣಿಸುತಿತ್ತು. ಇದರಲ್ಲಿ ಬಿಲ್ಕಿಸ್ ಬಾನು ಕೂಡ ಇದ್ದರು. ಈ ಗುಂಪಿನ ಮೇಲೆ ನಡೆದ ಆಕ್ರಮಣದ ಸಂದರ್ಭದಲ್ಲಿ 8 ಮಂದಿ ಸತ್ತು, 6ಮಂದಿ ಕಾಣೆಯಾಗಿದ್ದರು. ಆಗ ಆರು ತಿಂಗಳ ಗರ್ಭಿಣಿಯಾಗಿದ್ದ ಬಿಲ್ಕಿಸ್ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಆ ಘಟನೆಯಲ್ಲಿ ಬಿಲ್ಕಿಸ್ ಮತ್ತು ಇಬ್ಬರು ಮಕ್ಕಳು ಮಾತ್ರ ಬದುಕುಳಿದಿದ್ದರು.

2007: ಮಲೇಷ್ಯಾದ ಕ್ವಾಲಾಲಂಪುರಕ್ಕೆ ಸಮೀಪದ ಕ್ಲಾಂಗಿನಲ್ಲಿರುವ ಶ್ರೀ ಸುಂದರರಾಜ ಪೆರುಮಾಳ್ ದೇವಾಲಯವು ತನ್ನ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಸೇವೆಯ ಸಾಧನೆಗಾಗಿ ವಿಶ್ವದಲ್ಲೇ ಪ್ರಪ್ರಥಮ ಬಾರಿಗೆ ಅಂತಾರಾಷ್ಟ್ರೀಯ ಗುಣಮಟ್ಟ ಸೇವಾ `ಐಎಸ್ ಓ 9001:2000' ಪ್ರಮಾಣಪತ್ರವನ್ನು ಪಡೆದುಕೊಂಡಿತು. 100 ವರ್ಷಗಳ ಹಿಂದೆ ನಿರ್ಮಿಸಲಾದ ಈ ವೈಷ್ಣವ ದೇವಾಲಯ `ಆಗ್ನೇಯ ಏಷ್ಯಾದ ತಿರುಪತಿ' ಎಂದೇ ಖ್ಯಾತಿ ಗಳಿಸಿದೆ. ಶಾಲೆಗಳು, ಅನಾಥಾಲಯಗಳು, ಧಾರ್ಮಿಕ ಸಂಸ್ಥೆಗಳು ಹಾಗೂ ಮಾನವೀಯ ಅಭಿವೃದ್ಧಿ ಕಾರ್ಯಗಳಿಗೆ ಈ ದೇವಾಲಯವು ನೆರವು ನೀಡುತ್ತಿದೆ.

2007: `ಪೈಲೆಟ್ ಬಾಬಾ' ಅವರ ಶಿಷ್ಯೆ ಜಪಾನಿನ ಕಿಕೊ ಅಜ- ಕಾವಾ (40) ಅವರು ಅಲಹಾಬಾದಿನ ಅರ್ಧ ಕುಂಭ ನಗರದಲ್ಲಿ ವಿಶ್ವಶಾಂತಿ ಹಾಗೂ ಜ್ಞಾನೋದಯಕ್ಕಾಗಿ ಕೈಗೊಂಡಿದ್ದ 72 ಗಂಟೆಗಳ ಸುದೀರ್ಘ ಸಮಾಧಿಯನ್ನು ಪೂರ್ಣಗೊಳಿಸಿ ಹೊರಬಂದರು. 9 ಅಡಿ ಆಳದ ಗುಂಡಿಯಲ್ಲಿ 3 ದಿನಗಳ ಕಾಲ ಧ್ಯಾನ ಕೈಗೊಂಡಿದ್ದ ಅವರನ್ನು ಮರಳಿನಿಂದ ಮುಚ್ಚಲಾಗಿದ್ದ ಗುಂಡಿಯ ಒಳಗಿಡಲಾದ ಪೆಟ್ಟಿಗೆಯಿಂದ ಹೊರತೆಗೆಯಲಾಯಿತು.

2007: ಇಂಡೋನೇಷ್ಯಾದ ಮೊಲುಕ್ಕಾ ಸಮುದ್ರದ ಅಡಿಯಲ್ಲಿ ಭಾರೀ ಭೂಕಂಪ ಸಂಭವಿಸಿತು. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.3ರಷ್ಟಿತ್ತು.

2006: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಕುತ್ತೂರಿನಲ್ಲಿ ಸಂಭವಿಸಿದ ಕಾರು ಮತ್ತು ಟೆಂಪೋ ಡಿಕ್ಕಿಯಲ್ಲಿ ಕಾರಿನಲ್ಲಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ತಾಯಿ ರತ್ನಮ್ಮ ಹೆಗ್ಗಡೆ (78) ಮತ್ತು ಕಾರಿನ ಚಾಲಕ ಸಂಸೆ ನಿರಂಜನಕುಮಾರ್ ನಿಧನರಾದರು. ಕಾರು ಧರ್ಮಸ್ಥಳದಿಂದ ಕಾರ್ಕಳಕ್ಕೆ ಹೊರಟಿತ್ತು.

2006: ಸರ್ಬಿಯಾ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಸುಮಾರು 2 ದಶಕಗಳ ಕಾಲ ಹೋರಾಟ ನಡೆಸಿ ಯಶಸ್ಸು ಪಡೆದ ಗಾಂಧಿವಾದಿ, ಕೊಸಾವೊ ಅಧ್ಯಕ್ಷ ಇಬ್ರಾಹಿಂ ರುಗ್ವೊ (61) ಸರ್ಬಿಯಾದ ಪ್ರಿಸ್ಟಿನಾದಲ್ಲಿ ನಿಧನರಾದರು.

2006: ಭಾರತೀಯ ವಿಜ್ಞಾನ ಮಂದಿರದ (ಐಐಎಸ್ಸಿ) ಮೇಲಿನ ದಾಳಿ ಪ್ರಕರಣದ ಸಂಬಂಧ ಬೆಂಗಳೂರಿನ ವಿಶೇಷ ಪೊಲೀಸ್ ತಂಡವು ಚಿಂತಾಮಣಿ ಸಮೀಪದ ನಿಗೂಢ ಸ್ಥಳದಲ್ಲಿ ಬಂಧಿತ ಉಗ್ರರು ಅಡಗಿಸಿ ಇಟ್ಟಿದ್ದ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ವಶ ಪಡಿಸಿಕೊಂಡಿತು. ಆರೋಪಿಗಳಾದ ಚಿಂತಾಮಣಿ ಮೂಲದ ಅಪ್ಸರ್ ಪಾಶ ಮತ್ತು ಉತ್ತರಪ್ರದೇಶ ಮೂಲದ ಮೌಲ್ವಿ ಮೊಹಮ್ಮದ್ ಇರ್ಫಾನ್ ಕೋಲಾರ ಜಿಲ್ಲೆ ಮುಳಬಾಗಿಲಿನಲ್ಲಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದರು.

1972: ಮಣಿಪುರ, ಮಿಜೋರಂ ಮತ್ತು ತ್ರಿಪುರಾ ಪೂರ್ಣ ಪ್ರಮಾಣದ ರಾಜ್ಯಗಳಾದವು.

1954: ಅಮೆರಿಕಾದ ಮೊತ್ತ ಮೊದಲ ಪರಮಾಣು ಚಾಲಿತ ಜಲಾಂತರ್ಗಾಮಿ 'ನಾಟಿಲಸ್' ಕನೆಕ್ಟಿಕಟ್ಟಿನ ನಾಟಿಲಸ್ನಲ್ಲಿ ಚಾಲನೆಗೊಂಡಿತು.

1952: ಬಾಂಬೆಯ ಮುಖ್ಯಮಂತ್ರಿ ಬಿ.ಜಿ .ಖೇರ್ ಅವರು ಜಹಾಂಗೀರ್ ಆರ್ಟ್ ಗ್ಯಾಲರಿಯನ್ನು ಬಾಂಬೆಯಲ್ಲಿ ಈಗಿನ ಮುಂಬೈಯಲ್ಲಿ ಉದ್ಘಾಟಿಸಿದರು. ಸರ್ ಗೋಸ್ವಾಜೀ ಜಹಾಂಗೀರ್ ಅವರು 7,04,112 ರೂಪಾಯಿಗಳನ್ನು ದೇಣಿಗೆ ನೀಡಿದ ಕಾರಣ ಈ ಆರ್ಟ್ ಗ್ಯಾಲರಿಗೆ ಅವರ ಹೆಸರನ್ನೇ ಇಡಲಾಯಿತು. ತಮ್ಮ ಮೃತಪುತ್ರ ಜಹಾಂಗೀರ್ ನೆನಪಿಗಾಗಿ ಈ ದೇಣಿಗೆಯನ್ನು ಗೋಸ್ವಾಜೀ ನೀಡಿದರು.

1951: ಕಲಾವಿದೆ ಲಕ್ಷ್ಮಿ ಎಂ. ಜನನ.

1950: ಬ್ರಿಟಿಷ್ ಬರಹಗಾರ ಜಾರ್ಜ್ ಆರ್ವೆಲ್ ಕ್ಷಯರೋಗದ ಪರಿಣಾಮವಾಗಿ ಲಂಡನ್ನಿನಲ್ಲಿ ತಮ್ಮ 47ನೇ ವಯಸ್ಸಿನಲ್ಲಿ ಮೃತರಾದರು.

1945: ಭಾರತದ ಕ್ರಾಂತಿಕಾರಿ ನಾಯಕ ರಾಸ್ ಬಿಹಾರಿ ಬೋಸ್ ಟೋಕಿಯೋದಲ್ಲಿ ಮೃತರಾದರು.

1942: ಅಂತಾರಾಷ್ಟ್ರೀಯ ಖ್ಯಾತಿಯ ಕ್ಲಾರಿಯೋನೆಟ್ ವಾದಕ ನರಸಿಂಹಲು ವಡವಾಟಿ ಅವರು ತಬಲಾವಾದಕ ಬುಡ್ಲಪ್ಪ- ಭಕ್ತಿಗೀತೆಗೆ ಗಾಯಕಿ ರಂಗಮ್ಮ ದಂಪತಿಯ ಮಗನಾಗಿ ರಾಯಚೂರು ಜಿಲ್ಲೆಯ ವಡವಾಟಿಯಲ್ಲಿ ಜನಿಸಿದರು.

1924: ಸೋವಿಯತ್ ಯೂನಿಯನ್ ಶಿಲ್ಪಿ, ನಿರ್ಮಾಪಕ ಹಾಗೂ ಮೊದಲ ಮುಖ್ಯಸ್ಥ ವ್ಲಾಡಿಮೀರ್ ಇಲಿಚ್ ಲೆನಿನ್ ತಮ್ಮ 53ನೇ ವಯಸ್ಸಿನಲ್ಲಿ ಮಾಸ್ಕೋ ಸಮೀಪದ ಗೋರ್ಕಿಯಲ್ಲಿ (ಈಗ ಗೋರ್ಕಿ ಲೆನಿನ್ ಸ್ಕೀ) ಪಾರ್ಶ್ವವಾಯುವಿಗೆ ತುತ್ತಾಗಿ ಅಸು ನೀಗಿದರು. ಮಹಾನ್ ಕ್ರಾಂತಿಕಾರಿ ಮುತ್ಸದ್ಧಿ ಎಂದು ಇವರು ಇತಿಹಾಸದಲ್ಲಿ ಪರಿಗಣಿತರಾಗಿದ್ದಾರೆ.

1924: ಹಿರಿಯ ರಾಜಕಾರಣಿ ಮಧು ದಂಡವತೆ ಈ ದಿನ ಜನಿಸಿದರು. ಲೋಕಸಭೆಗೆ ಐದು ಬಾರಿ ಆರಿಸಿ ಬಂದಿದ್ದ ದಂಡವತೆ ಇಂದಿರಾಗಾಂಧಿ ಮತ್ತು ರಾಜೀವಗಾಂಧಿ ಪ್ರಧಾನಿಯಾಗಿದ್ದಾಗ ವಿರೋಧ ಪಕ್ಷದ ಮುಖಂಡರಾಗಿದ್ದರು. ಮೊರಾರ್ಜಿ ದೇಸಾಯಿ ಸಂಪುಟದಲ್ಲಿ ರೈಲ್ವೆ ಸಚಿವರಾಗಿದ್ದ ಇವರು ಭಾರತೀಯ ರೈಲೆಯಲ್ಲಿ ಕಂಪ್ಯೂಟರ್ ಪ್ರಕ್ರಿಯೆಗೆ ಮೂಲ ಕಾರಣರಾದ ವ್ಯಕ್ತಿ. ವಿ.ಪಿ. ಸಿಂಗ್ ಸಂಪುಟದಲ್ಲಿ ಹಣಕಾಸು ಸಚಿವ, 1990ರಲ್ಲಿ ಹಾಗೂ 1996ರಿಂದ 1998ರವರೆಗೆ ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದರು. 2005ರ ನವೆಂಬರ್ 12ರಂದು ನಿಧನರಾದರು.

1793: ಹದಿನಾರನೇ ಲೂಯಿಯನ್ನು ಪ್ಯಾರಿಸ್ಸಿನಲ್ಲಿ ಗಿಲೊಟಿನ್ ಯಂತ್ರದ ಮೂಲಕ ಮರಣದಂಡನೆಗೆ ಗುರಿಪಡಿಸಲಾಯಿತು.

Monday, February 22, 2010

ಇಂದಿನ ಇತಿಹಾಸ History Today ಜನವರಿ 20

ಇಂದಿನ ಇತಿಹಾಸ

ಜನವರಿ 20

ಜಾರ್ಜ್ ಬುಶ್ ಅವರ ಎಂಟು ವರ್ಷಗಳ ಆಡಳಿತದ ಬಳಿಕ ಭಾರಿ ಬದಲಾವಣೆಗಾಗಿ ಹಪಹಪಿಸುತ್ತಿದ್ದ ಮತ್ತು ಆರ್ಥಿಕ ಮುಗ್ಗಟ್ಟಿನಿಂದ ಜರ್ಜರಿತವಾದ ಅಮೆರಿಕದಲ್ಲಿ, ಭರವಸೆಯ ಮಿಂಚು ಹರಿಸಿದ ಬರಾಕ್ ಒಬಾಮ ಅವರು ಈದಿನ ವಾಷಿಂಗ್ಟನ್ನಿನಲ್ಲಿ ದೇಶದ 44ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಹೊಸ ಇತಿಹಾಸ ಸೃಷ್ಟಿಸಿದರು. ಇಲ್ಲಿನ ಕ್ಯಾಪಿಟೊಲ್ ಹಿಲ್ಲಿನಲ್ಲಿ ಮಧ್ಯಾಹ್ನ 12.35 ಗಂಟೆಗೆ ಸರಿಯಾಗಿ (ಭಾರತದ ಕಾಲಮಾನ ರಾತ್ರಿ 10.35 ಗಂಟೆ) ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಅವರು ಒಬಾಮ ಅವರಿಗೆ ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣವಚನ ಬೋಧಿಸಿದರು.

2009: ಜಾರ್ಜ್ ಬುಶ್ ಅವರ ಎಂಟು ವರ್ಷಗಳ ಆಡಳಿತದ ಬಳಿಕ ಭಾರಿ ಬದಲಾವಣೆಗಾಗಿ ಹಪಹಪಿಸುತ್ತಿದ್ದ ಮತ್ತು ಆರ್ಥಿಕ ಮುಗ್ಗಟ್ಟಿನಿಂದ ಜರ್ಜರಿತವಾದ ಅಮೆರಿಕದಲ್ಲಿ, ಭರವಸೆಯ ಮಿಂಚು ಹರಿಸಿದ ಬರಾಕ್ ಒಬಾಮ ಅವರು ಈದಿನ ವಾಷಿಂಗ್ಟನ್ನಿನಲ್ಲಿ ದೇಶದ 44ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಹೊಸ ಇತಿಹಾಸ ಸೃಷ್ಟಿಸಿದರು. ಇಲ್ಲಿನ ಕ್ಯಾಪಿಟೊಲ್ ಹಿಲ್ಲಿನಲ್ಲಿ ಮಧ್ಯಾಹ್ನ 12.35 ಗಂಟೆಗೆ ಸರಿಯಾಗಿ (ಭಾರತದ ಕಾಲಮಾನ ರಾತ್ರಿ 10.35 ಗಂಟೆ) ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಅವರು ಒಬಾಮ ಅವರಿಗೆ ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣವಚನ ಬೋಧಿಸಿದರು. ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರು ಹಿಡಿದಿದ್ದ ಬೈಬಲ್ ಮುಟ್ಟಿ ಒಬಾಮ ಅಧಿಕಾರ ಸ್ವೀಕರಿಸಿದರು. ಇದಕ್ಕೆ ಸ್ವಲ್ಪ ಮೊದಲು ಉಪಾಧ್ಯಕ್ಷ ಜೋಯ್ ಬಿಡೆನ್ ಅಧಿಕಾರ ಸ್ವೀಕರಿಸಿದರು. ಇದೇ ಪ್ರಥಮ ಬಾರಿಗೆ, ಆಫ್ರಿಕನ್-ಅಮೆರಿಕಾ ಸಂಜಾತ ಪ್ರಜೆಯೊಬ್ಬರು ಜಗತ್ತಿನ ಅತ್ಯಂತ ಪ್ರಭಾವಶಾಲಿ ಅಧಿಕಾರ ಸ್ಥಾನವಾದ ಶ್ವೇತಭವನ ಪ್ರವೇಶಿಸಿದರು. ಕೊರೆಯುವ ಚಳಿಯಲ್ಲೂ ದೇಶದ ಮೂಲೆ ಮೂಲೆಗಳಿಂದ ಆಗಮಿಸಿದ 20 ಲಕ್ಷಕ್ಕೂ ಅಧಿಕ ಮಂದಿ ಈ ಐತಿಹಾಸಿಕ ಘಟನೆಗೆ ಪ್ರತ್ಯಕ್ಷ ಸಾಕ್ಷಿಗಳಾದರು.

2009: ಮಾಲೆಗಾಂವ್ ಸ್ಫೋಟ ಪ್ರಕರಣದ 11 ಆರೋಪಿಗಳ ವಿರುದ್ಧ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ದೋಷಾರೋಪ ಪಟ್ಟಿ ಸಲ್ಲಿಸುವ ಪ್ರಕ್ರಿಯೆಯನ್ನು ಆರಂಭಿಸಿತು. 2008ರ ಸೆಪ್ಟೆಂಬರ್ 29ರಂದು ನಡೆದಿದ್ದ ಈ ಸ್ಫೋಟಕ್ಕೆ ಏಳು ಮಂದಿ ಬಲಿಯಾಗಿ ಸುಮಾರು 70 ಜನ ಗಾಯಗೊಂಡಿದ್ದರು.

2009: 'ಚಿಂಗಾರಿ' ಹಾಗೂ 'ಚಿನಕುರುಳಿ' ಖ್ಯಾತಿಯ ಹಿರಿಯ ವ್ಯಂಗ್ಯಚಿತ್ರಕಾರ, ಲಲಿತಕಲಾ ಅಕಾಡೆಮಿ ಮಾಜಿ ಸದಸ್ಯ ಜಿ.ವೈ.ಹುಬ್ಳೀಕರ್ (68) ಅವರು ಕಿಡ್ನಿ ವೈಫಲ್ಯದಿಂದ ಬೆಂಗಳೂರಿನ ಸಂಜಯನಗರದ ನಾಗಶೆಟ್ಟಿಹಳ್ಳಿಯ ತಮ್ಮ ನಿವಾಸದಲ್ಲಿ ನಿಧನರಾದರು. ಅವರು 1964ರಿಂದ 1971ರವರೆಗೆ 'ಪ್ರಜಾವಾಣಿ' ಬಳಗದಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿದ್ದರು. 1994ರ ನಂತರ 'ಪ್ರಜಾವಾಣಿ' ದಿನಪತ್ರಿಕೆಯಲ್ಲಿ ಪ್ರತಿದಿನ 'ಚಿನಕುರುಳಿ' ವ್ಯಂಗ್ಯಚಿತ್ರವನ್ನು ಹಲವು ವರ್ಷಗಳ ಕಾಲ ನಿರಂತರವಾಗಿ ರಚಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿ, ಪತ್ರಿಕಾ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಹಲವು ಪ್ರಶಸ್ತಿಗಳು ಹುಬ್ಳೀಕರ್ ಅವರಿಗೆ ಬಂದಿದ್ದವು. ಮೃತರ ಅಂತ್ಯಕ್ರಿಯೆ ಸಂಜೆ ಹೆಬ್ಬಾಳದ ರುದ್ರಭೂಮಿಯಲ್ಲಿ ನಡೆಯಿತು.

2009: ಸ್ವ ಸಹಾಯ ಸಂಘಗಳ ಮೂಲಕ ರಾಜ್ಯದ ಗ್ರಾಮೀಣ ಪ್ರದೇಶದ ಆರ್ಥಿಕ ದುರ್ಬಲರಿಗೆ ಅತಿ ಹೆಚ್ಚು ಸಾಲ ವಿತರಿಸಿರುವ ವಿಜಯ ಬ್ಯಾಂಕ್‌ ನಬಾರ್ಡ್ ಪ್ರಶಸ್ತಿಗೆ ಆಯ್ಕೆಯಾಯಿತು. ರಾಜ್ಯದ 49344 ಸ್ವಸಹಾಯ ಗುಂಪು ಸೇರಿ ಒಟ್ಟು 67409 ಎಸ್‌ಎಚ್‌ಜಿ ಜತೆ ಸಂಪರ್ಕ ಹೊಂದಿ 355.82 ಕೋಟಿ ರೂ. ಸಾಲ ವಿತರಣೆಗೆ ನೆರವು ನೀಡಿರುವುದಕ್ಕಾಗಿ ವಿಜಯ ಬ್ಯಾಂಕ್ 2007-08ನೇ ಸಾಲಿನ ನಬಾರ್ಡ್ 3ನೇ ಹಾಗೂ ಧರ್ಮಸ್ಥಳ ಶಾಖೆ 2ನೇ ಬಹುಮಾನಕ್ಕೆ ಆಯ್ಕೆಯಾಯಿತು..

2008: ನವದೆಹಲಿಯ ವೈದ್ಯರ ತಂಡವೊಂದು ಚಳಿಗಾಲದಲ್ಲಿ ಹೃದಯಾಘಾತದ ಪ್ರಮಾಣ ಹೆಚ್ಚು ಎಂಬ ಸಂಗತಿಯನ್ನು ಬಹಿರಂಗಪಡಿಸಿತು. ಹೃದಯಾಘಾತಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 25ರಿಂದ ಜನವರಿ 25ರವರೆಗಿನ ಅವಧಿ ಅತಿ ಅಪಾಯಕಾರಿ, ಹಿಂದಿನ ವರ್ಷ ಈ ಅವಧಿಯಲ್ಲಿ ದೆಹಲಿಯ ಆಸ್ಪತ್ರೆಗಳಲ್ಲಿ ಹೃದ್ರೋಗಕ್ಕೆ ಸಂಬಂಧಿಸಿದ ರೋಗಿಗಳ ಪ್ರಮಾಣ ಶೇ 25ರಿಂದ 30ರಷ್ಟು ಹೆಚ್ಚಾಗಿತ್ತು ಎಂದು ವರದಿ ಹೇಳಿತು. ಚಳಿಗಾಲದಲ್ಲಿ ಹೃದಯ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಹೃದಯದ ಮೇಲಿನ ಹೊರೆ ಹೆಚ್ಚುತ್ತದೆ. ಏಕೆಂದರೆ ಈ ಅವಧಿಯಲ್ಲಿ ರಕ್ತನಾಳಗಳು ದೇಹದ ಬಿಸಿ ಕಾಯ್ದುಕೊಳ್ಳಲು ಸಂಕುಚಿತವಾಗುತ್ತವೆ. ಜೊತೆಗೆ ಆಸ್ತಮಾ, ಫ್ಲೂನಂತಹ ಕಾಯಿಲೆಗಳು ಇದೇ ಋತುವಿನಲ್ಲಿ ಹೆಚ್ಚುತ್ತವೆ ಎನ್ನುತ್ತಾರೆ ಉಮ್ಕಲ್ ಆಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞ ಉಮೇಶ್ ಗುಪ್ತಾ. ಚಳಿಗಾಲದಲ್ಲಿ ದೇಹ ಬೆಚ್ಚಗಿಟ್ಟುಕೊಳ್ಳಲು ಹಲವಾರು ಮಂದಿ ಹೆಚ್ಚು ಮದ್ಯ ಸೇವಿಸುತ್ತಾರೆ. ಇದು ಸಹ ಹೃದಯದ ಮೇಲಿನ ಒತ್ತಡ ಹೆಚ್ಚಿಸುತ್ತದೆ. ಹಾಗಾಗಿ ಚಳಿಗಾಲದಲ್ಲಿ ಹೃದ್ರೋಗಿಗಳು ಹೊರಗಿನ ಚಟುವಟಿಕೆಗಳು, ವ್ಯಾಯಾಮದ ಪ್ರಮಾಣ ಕಡಿಮೆ ಮಾಡಬೇಕು. ಮದ್ಯ ಸೇವಿಸುತ್ತಿದ್ದಲ್ಲಿ ಆ ಪ್ರಮಾಣವನ್ನೂ ಕಡಿಮೆಗೊಳಿಸಬೇಕು ಎಂಬುದು ಅವರ ಸಲಹೆ. ಚಳಿಗಾಲದಲ್ಲಿ ಸದಾ ಮೋಡ ಕವಿದ ವಾತಾವರಣ ಇರುವುದರಿಂದ ಅದು ಸಹ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಸೂರ್ಯನ ಕಿರಣಗಳು ಮೈಮೇಲೆ ಬೀಳದೇ ಇರುವುದರಿಂದ ಖಿನ್ನತೆ ಆವರಿಸುತ್ತದೆ. `ವಿಂಟರ್ ಬ್ಲೂ' ಎಂದು ಸಾಮಾನ್ಯವಾಗಿ ಕರೆಯುವ ಈ ಮಾನಸಿಕ ಸ್ಥಿತಿ ಹೃದ್ರೋಗಿಗಳ ಮೇಲೆ ಇನ್ನಷ್ಟು ದುಷ್ಪರಿಣಾಮ ಬೀರುತ್ತದೆ ಎನ್ನುತ್ತಾರೆ ಮ್ಯಾಕ್ಸ್ ಹೆಲ್ತ್ ಕೇರ್ ಮನಃಶಾಸ್ತ್ರಜ್ಞ ಸಮೀರ್ ಪಾರೀಖ್. ಮಧ್ಯಾಹ್ನದ ಸಮಯ ಸೂರ್ಯನ ಬಿಸಿಲಿಗೆ ಮೈ ಒಡ್ಡುವುದರಿಂದ, ಸ್ನೇಹಿತರ ಜೊತೆ ಬೆರೆಯುವುದರಿಂದ, ಲಘು ವ್ಯಾಯಾಮ ಮಾಡುವುದರಿಂದ ಈ ಖಿನ್ನತೆಯಿಂದ ಪಾರಾಗಬಹುದು ಎನ್ನುತ್ತಾರೆ ಡಾ. ಪಾರೀಖ್. ಮೊಣಕಾಲು, ಮೂಳೆಗಳ ಮೇಲೂ ಈ ಚಳಿ ದುಷ್ಪರಿಣಾಮ ಬೀರುತ್ತದೆ. ಕೀಲು ನೋವಿನಿಂದ ಬಳಲುತ್ತಿರುವವರು ಮಧ್ಯಾಹ್ನದ ಹೊತ್ತಿನಲ್ಲಿ ಸೂರ್ಯ ನೆತ್ತಿಯ ಮೇಲೆ ಬಂದಾಗಲಾದರೂ ವ್ಯಾಯಾಮ ಮಾಡಬೇಕು. ಬೆಚ್ಚನೆಯ ಕೊಠಡಿಗಳಲ್ಲಿ ಮಲಗಬೇಕು ಎನ್ನುತ್ತಾರೆ ಸರ್ ಗಂಗಾ ರಾಮ್ ಆಸ್ಪತ್ರೆಯ ಮೂಳೆ ತಜ್ಞ ಡಾ. ಸಂಜಯ್ ಸರೂಪ್. ಈ ಪ್ರಮುಖ ರೋಗಗಳ ಹೊರತಾಗಿ ಚಳಿಗಾಲದಲ್ಲಿ ಚರ್ಮ ಸಂಬಂಧಿ ರೋಗಗಳೂ ಸಾಕಷ್ಟು ಪೀಡಿಸುತ್ತವೆ ಎನ್ನುತ್ತಾರೆ ತಜ್ಞರು.

2008: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಲಾರಿ, ಖಾಸಗಿ ಬಸ್ಸು, ಟೂರಿಸ್ಟ್ ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಮಾಲೀಕರು ಮತ್ತು ಚಾಲಕರು ಕರೆ ನೀಡಿರುವ ಅನಿದರ್ಿಷ್ಟಾವಧಿ ಮುಷ್ಕರ ಈದಿನ ಮಧ್ಯರಾತ್ರಿಯಿಂದ ಕರ್ನಾಟಕದಾದ್ಯಂತ ಆರಂಭಗೊಂಡಿತು. ಕರ್ನಾಟಕ ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟರ ಒಕ್ಕೂಟದಲ್ಲಿರುವ 1.75 ಲಕ್ಷ ಲಾರಿಗಳು, 25 ಸಾವಿರ ಖಾಸಗಿ ಬಸ್ಸು, 75 ಸಾವಿರ ಮ್ಯಾಕ್ಸಿ ಕ್ಯಾಬ್ ಮತ್ತು ಟೂರಿಸ್ಟ್ ಟ್ಯಾಕ್ಸಿ ಸೇರಿದಂತೆ ಸುಮಾರು 2.75 ಲಕ್ಷ ವಾಹನಗಳ ಸಂಚಾರ ರಾತ್ರಿಯಿಂದಲೇ ಸ್ಥಗಿತಗೊಂಡಿತು.

2008: ಮಹಾರಾಷ್ಟ್ರದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಸಪ್ತಶೃಂಗಿಯಿಂದ ನಾಸಿಕಕ್ಕೆ ಹಿಂತಿರುಗುತ್ತಿದ್ದ ಖಾಸಗಿ ಐಷರಾಮಿ ಬಸ್ಸೊಂದು ಈದಿನ ರಾತ್ರಿ 10.30ಕ್ಕೆ ನಂದುರಿ ಎಂಬಲ್ಲಿ ಆಳ ಕಮರಿಗೆ ಬಿದ್ದುದರಿಂದ ಸುಮಾರು 38 ಜನ ಭಕ್ತರು ಮೃತರಾಗಿ, 40ಕ್ಕೂ ಹೆಚ್ಚು ಪ್ರಯಾಣಿಕರು ಗಾಯ ಗೊಂಡರು. ಬಸ್ಸಿನಲ್ಲಿ 81 ಜನ ಪ್ರಯಾಣಿಕರಿದ್ದರು. ಘಟ್ಟ ಪ್ರದೇಶದ ಹೇರ್ ಪಿನ್ ತಿರುವಿನಲ್ಲಿ ಸಾಗುತ್ತಿದ್ದ ಬಸ್ಸು ಚಾಲಕನ ನಿಯಂತ್ರಣ ತಪ್ಪಿ 600 ಅಡಿ ಆಳದ ಕಮರಿಗೆ ಬಿದ್ದು ಎರಡು ತುಂಡಾಯಿತು.

2008: ಮಲೇಷ್ಯಾ ಸರ್ಕಾರವು ಹಿಂದೂಗಳ ಹಬ್ಬವಾದ `ತೈಪೂಸಂ'ಗೆ ರಾಷ್ಟ್ರೀಯ ರಜಾ ದಿನ ಘೋಷಿಸಿತು. ಭಾರತೀಯ ಹಿಂದೂಗಳ ಮನವಿ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಪ್ರಧಾನ ಮಂತ್ರಿ ಅಬ್ದುಲ್ಲಾ ಬದಾವಿ ಪ್ರಕಟಿಸಿದರು. ಕ್ವಾಲಾಲಂಪುರದಲ್ಲಿ ಹಿಂದೂಗಳ ಪೊಂಗಲ್ ಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 20 ಸಾವಿರ ಭಾರತೀಯರ ಸಮ್ಮುಖದಲ್ಲಿ ಅವರು ಪ್ರಕಟಣೆ ಮಾಡಿದಾಗ ಹರ್ಷೋದ್ಘಾರವಾಯಿತು. ಇಲ್ಲಿ ನೆಲೆಸಿರುವ ಭಾರತೀಯ ಮೂಲದವರು ವಿಶೇಷವಾಗಿ ತಮಿಳುನಾಡಿನವರು ತೈಪೂಸಂ ಹಬ್ಬವನ್ನು ವ್ಯಾಪಕವಾಗಿ ಆಚರಿಸುತ್ತಾರೆ. ಪ್ರತಿವರ್ಷ ಈ ಹಬ್ಬದಂದು ಸಾವಿರಾರು ಜನರು ರಾಜಧಾನಿಯ ಹೊರಪ್ರದೇಶದಲ್ಲಿರುವ ಮುರುಘಾ ದೇವಸ್ಥಾನಕ್ಕೆ 172 ಮೆಟ್ಟಿಲು ಕ್ರಮಿಸಿ ತೆರಳುತ್ತಾರೆ.

2008: ಭಾರತದಲ್ಲಿ ಕೋಳಿಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭಾರತದಿಂದ ಕೋಳಿಗಳು ಮತ್ತು ಅವುಗಳ ಉತ್ಪನ್ನಗಳ ಆಮದು ನಿಷೇಧಿಸಿರುವುದಾಗಿ ದುಬೈ ಕೃಷಿ ಸಚಿವ ಶೇಖ್ ಸಲೀಮ್ ಬಿನ್ ಹಿಲಾಲ್ ಅಲ್ ಖಲೀಲಿ ಪ್ರಕಟಿಸಿದರು. ಪಶುಸಂಗೋಪನಾ ಇಲಾಖೆ ಅಧಿಕಾರಿಗಳ ಶಿಫಾರಸನ್ನು ಆಧರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು. ವಾರದ ಹಿಂದೆ ಪಶ್ಚಿಮ ಬಂಗಾಳದಲ್ಲಿ ಕೋಳಿಜ್ವರ ಹರಡಿರುವುದು ಖಚಿತವಾದ ಮೇಲೆ ಕೋಳಿ, ಕೋಳಿ ಮೊಟ್ಟೆ ಹಾಗೂ ಸಂಬಂಧಿತ ಉತ್ಪನ್ನಗಳನ್ನು ಭಾರತದಿಂದ ಆಮದುಮಾಡಿಕೊಳ್ಳುವುದನ್ನು ಖತಾರ್ ನಿಷೇಧಿಸಿತ್ತು.

2008: ಇರಾನಿನ ಮೊದಲ ಅಣುಶಕ್ತಿ ಯೋಜನೆಗೆ ರಷ್ಯಾದಿಂದ 4ನೇ ಬಾರಿ ಅಣು ಇಂಧನವನ್ನು ಸರಬರಾಜು ಮಾಡಲಾಯಿತು. ಈ ಯೋಜನೆ ಪೂರ್ಣಗೊಳ್ಳಲು ಇನ್ನೂ 4 ಬಾರಿ ಅಣು ಇಂಧನವನ್ನು ರಷ್ಯಾ ಸರಬರಾಜು ಮಾಡಲಿದೆ ಎಂದು ಇರಾನ್ ಸುದ್ದಿ ಸಂಸ್ಥೆಯ ಅಧಿಕಾರಿ ಹೇಳಿದರು.

2008: ಶ್ರೀಲಂಕಾ ಸೇನಾಪಡೆ ಐದು ಎಲ್ ಟಿ ಟಿ ಇ ದೋಣಿಗಳ ಮೇಲೆ ದಾಳಿ ನಡೆಸಿ 41 ಬಂಡುಕೋರರನ್ನು ಹತ್ಯೆ ಮಾಡಿತು. ಈ ಸಂದರ್ಭದಲ್ಲಿ ಒಬ್ಬ ಯೋಧ ಹತನಾದ. ಶ್ರೀಲಂಕಾ ಸರ್ಕಾರ ಮತ್ತು ಎಲ್ ಟಿ ಟಿ ಇ ನಡುವೆ ಇದ್ದ 6 ವರ್ಷಗಳ ಕದನ ವಿರಾಮ ಮೂರು ದಿನಗಳ ಹಿಂದೆ ಅಂತ್ಯಗೊಂಡಿದ್ದು, ಎಲ್ ಟಿ ಟಿ ಇ ಬಲವಾಗಿ ನೆಲೆಯೂರಿರುವ ಉತ್ತರ ಭಾಗದಲ್ಲಿ ಶ್ರೀಲಂಕಾ ಸೇನಾಪಡೆ ದಾಳಿ ನಡೆಸಿತು.

2008: ಅತಿಯಾದ ಮೊಬೈಲ್ ಫೋನ್ ಬಳಕೆಯಿಂದ ಕ್ಯಾನ್ಸರ್ ಬರುತ್ತದೆ ಎಂಬುದು ಹಳೆಯ ಸುದ್ದಿ. ಆದರೆ ಮೊಬೈಲ್ ಫೋನನ್ನು ಅತಿಯಾಗಿ ಬಳಸಿದರೆ ರಾತ್ರಿ ವೇಳೆ ನಿದ್ರೆಯಲ್ಲೂ ಏರುಪೇರಾಗುತ್ತದೆ ಎಂಬುದು ಹೊಸ ಸಂಶೋಧನೆಯ ಫಲಿತಾಂಶ. ಮೊಬೈಲ್ ಫೋನುಗಳಿಂದ ಹೊರಸೂಸುವ ಕಿರಣಗಳು ನಿದ್ರೆಯನ್ನು ಕಡಿಮೆ ಮಾಡುತ್ತವೆ ಎಂದು ಅಮೆರಿಕ ಮತ್ತು ಯುರೋಪಿನ ಸಂಶೋಧಕರ ತಂಡ ನಡೆಸಿದ ಅಧ್ಯಯನದಲ್ಲಿ ಬೆಳಕಿಗೆ ಬಂತು. ಇದರಿಂದ ತಲೆನೋವು, ಗೊಂದಲದ ಮನಸ್ಥಿತಿಯೂ ಉಂಟಾಗುತ್ತದೆ ಎಂದು ದಿ ಇಂಡಿಪೆಂಡೆಂಟ್ ಪತ್ರಿಕೆ ವರದಿ ಮಾಡಿತು. ಹಾಸಿಗೆಗೆ ಹೋಗುವ ಮುನ್ನ ನೀವು ಸೆಲ್ ಫೋನುಗಳನ್ನು ಬಳಸಿದ್ದೇ ಆದಲ್ಲಿ ಶಾಂತ ನಿದ್ರೆ ನಿಮ್ಮಿಂದ ದೂರವಾಗುತ್ತದೆ. ಇದರಿಂದ ಹಗಲು ಹೊತ್ತಿನಲ್ಲಿ ನಿಮ್ಮ ದೈಹಿಕ ಸುಸ್ಥಿತಿ ಅಸ್ತವ್ಯಸ್ತವಾಗುತ್ತದೆ. ಮೊಬೈಲ್ ಕಿರಣಗಳು ಮೆದುಳಿನ ಮೇಲೂ ಗಂಭೀರ ಪರಿಣಾಮ ಉಂಟು ಮಾಡುತ್ತವೆ, ಅಲ್ಲದೆ ಮೆದುಳಿನ ಒತ್ತಡವನ್ನು ಹೆಚ್ಚಿಸುತ್ತವೆ ಎಂಬುದು ಅಧ್ಯಯನಕಾರ ಪ್ರೊ. ಬೆಂಗ್ಟ್ ಆರ್ನೆಸ್ಟ್ ಅಭಿಪ್ರಾಯ.

2008: ಸರ್ಕಾರಿ ನೌಕರನ ಕಾನೂನು ಬಾಹಿರ ಕೆಲಸಕ್ಕೂ ಕರ್ತವ್ಯ ನಿರ್ವಹಣೆಗೂ ಸಂಬಂಧವಿಲ್ಲ, ಆದ್ದರಿಂದ ತಪ್ಪಿತಸ್ಥ ನೌಕರನ ವಿರುದ್ಧ ಪ್ರಕರಣ ದಾಖಲು ಮಾಡಲು ಅಪರಾಧ ಪ್ರಕ್ರಿಯಾ ಸಂಹಿತೆಯ ಕಲಂ 197ರ ಅನ್ವಯ ಪೂರ್ವಾನುಮತಿ ಪಡೆಯುವ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು. ನಾಗಪುರ ಸರ್ಕಾರಿ ಆಸ್ಪತ್ರೆಗೆ ಎಚ್ ಐ ವಿ ಸೋಂಕು ತಗುಲಿದ ರಕ್ತವನ್ನು ಪೂರೈಕೆ ಮಾಡಿದ ಹಗರಣಗಳ ಆಪಾದಿತರ ವಿಚಾರಣೆಯನ್ನು ಮುಂದುವರೆಸಬೇಕು ಎಂದು ನ್ಯಾಯಮೂರ್ತಿ ಜಿ. ಪಿ. ಮಾಥೂರ್ ಮತ್ತು ಅಲ್ತಾಬ್ ಅಲಂ ಅವರನ್ನು ಒಳಗೊಂಡ ನ್ಯಾಯಪೀಠವು ವಿಚಾರಣೆ ನಡೆಸುತ್ತಿರುವ ಕೆಳ ಹಂತದ ನ್ಯಾಯಾಲಯಕ್ಕೆ ಸೂಚಿಸಿತು. ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಎಚ್ ಐ ವಿ ಸೋಂಕು ತಗುಲಿದ ರಕ್ತವನ್ನು ಪೂರೈಕೆ ಮಾಡಿದ ಹಗರಣದಲ್ಲಿ ರಕ್ತ ನಿಧಿಯ ವೈದ್ಯರಾದ ಡಾ. ಪಿ. ಪಿ. ಸಂಚೇತಿ, ಡಾ. ಪ್ರಕಾಶ್ ಚಂದ್ರ ಅವರ ಜತೆ ಇನ್ನೂ ಐವರು ಶಾಮಿಲಾಗಿದ್ದು, ಇವರ್ಲೆಲರೂ ರಕ್ತ ನಿಧಿಯ ದಾಖಲೆಗಳನ್ನು ತಿದ್ದಿದ್ದಾರೆ ಎಂದು ಪೊಲೀಸರು ದೋಷಾರೋಪ ಹೊರಿಸಿದ್ದರು. ದಾಖಲೆಗಳನ್ನು ನಾಶ ಪಡಿಸಿದ ಸಾಕ್ಷಾಧಾರಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರೂ ಈ ಸರ್ಕಾರಿ ವೈದ್ಯರನ್ನು ವಿಚಾರಣೆಗೆ ಗುರಿಪಡಿಸಲು ಅಪರಾಧ ಪ್ರಕ್ರಿಯಾ ಸಂಹಿತೆ ಕಲಂ 197ರ ಪ್ರಕಾರ ಪೂರ್ವಾನುಮತಿ ಪಡೆಯಲಿಲ್ಲ ಎಂಬ ಕಾರಣಕ್ಕೆ ಹೆಚ್ಚುವರಿ ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಅವರು ಪ್ರಕರಣವನ್ನು ವಜಾಗೊಳಿಸಿದ್ದರು. ಆದರೆ ಸೆಷನ್ಸ್ ನ್ಯಾಯಾಲಯವು ಈ ಆದೇಶವನ್ನು ರದ್ದುಪಡಿಸಿತ್ತು. ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಅವರ ಆದೇಶವನ್ನು ಬಾಂಬೆ ಹೈಕೋರ್ಟ್ ಎತ್ತಿ ಹಿಡಿದದ್ದರಿಂದ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಪೀಠವು, ಕಾನೂನು ಬಾಹಿರ ಕೆಲಸ ಮಾಡಿದ ನೌಕರನ ನಿರ್ವಹಣೆಗೆ ಸಂಬಂಧ ಕಲ್ಪಿಸಿ ವಿಚಾರಣೆಗೆ ಪೂರ್ವಾನುಮತಿ ಪಡೆಯಬೇಕು ಎಂಬ ಕಾರಣ ನೀಡುವುದು ಸರಿಯಲ್ಲ ಎಂದು ತಿಳಿಸಿತು.

2008: ಇಥಿಯೋಪಿಯಾದ ಮುಲು ಸೆಬೊಕಾ ಅವರು ಮುಂಬೈಯಲ್ಲಿ ನಡೆದ ಸ್ಟ್ಯಾಂಡರ್ಡ್ ಚಾರ್ಟರ್ಡ್ ಮುಂಬೈ ಮ್ಯಾರಥಾನ್ ಸ್ಪರ್ಧೆಯ ಮಹಿಳೆಯರ ವಿಭಾಗದಲ್ಲಿ ಸತತ ಮೂರನೇ ಬಾರಿ ಪ್ರಶಸ್ತಿ ಗೆದ್ದು `ಹ್ಯಾಟ್ರಿಕ್' ಸಾಧಿಸಿದರು.

2008: ಬೆಂಗಳೂರಿನ ಕಾವೇರಿ ಜಂಕ್ಷನ್ನಿನಲ್ಲಿ `ಪ್ರೀಕಾಸ್ಟ್' ಅಂಡರ್ ಪಾಸ್ ಕಾಮಗಾರಿ ಚುರುಕುಗೊಂಡು, ಸಿಮೆಂಟ್ ಎಲಿಮೆಂಟ್ಗಳನ್ನು ಅಳವಡಿಸುವ ಕೆಲಸ ಪ್ರಾರಂಭವಾಯಿತು.

2007: ರಾಷ್ಟ್ರೀಯ ಲೋಕದಳ ಸದಸ್ಯೆಯಾಗಿ 2002ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದ ರಾಜ್ಯಸಭಾ ಸದಸ್ಯೆ, ಹರ್ಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಮಹಾಜನ್ ಅವರ ಪತ್ನಿ, ಸಾಮಾಜಿಕ ಕಾರ್ಯಕರ್ತೆ ಸುಮಿತ್ರಾ ಮಹಾಜನ್ ದೆಹಲಿಯಲ್ಲಿ ನಿಧನರಾದರು.

2007: ಹೃದಯಾಘಾತಕ್ಕೆ ಒಳಗಾದ ಕ್ಯಾನ್ಸರ್ ರೋಗಿಗಳಲ್ಲಿ `ಆಸ್ಪಿರಿನ್' ಜೀವರಕ್ಷಕವಾಗಿ ಕೆಲಸ ಮಾಡುತ್ತದೆ ಎಂಬುದು ವೈದ್ಯರು ಕೈಗೊಂಡ ಹೊಸ ಸಂಶೋಧನೆಯಿಂದ ಬೆಳಕಿಗೆ ಬಂದಿತು. ಈ ಮೊದಲು ಕ್ಯಾನ್ಸರ್ ರೋಗಿಗಳಿಗೆ ಆಸ್ಪಿರಿನ್ ಮಾತ್ರೆ ನೀಡುವುದು ಮಾರಕ ಎಂದು ತಿಳಿದಿದ್ದುದು ದೊಡ್ಡ ತಪ್ಪಾಗಿದೆ ಎಂದು ಟೆಕ್ಸಾಸ್ ವಿವಿ ಕ್ಯಾನ್ಸರ್ ಕೇಂದ್ರದ ಎಂ.ಡಿ.ಆ್ಯಂಡರ್ಸನ್ ಹೂಸ್ಟನ್ನಿನಲ್ಲಿ ಪ್ರಕಟಿಸಿದರು. ಆಸ್ಪಿರಿನ್ ರಕ್ತಸ್ರಾವಕ್ಕೆ ಕಾರಣವಾಗುತ್ತದೆ ಎಂದು ಈ ಮೊದಲು ಸಾಮಾನ್ಯ ವೈದ್ಯಕೀಯ ಅಧ್ಯಯನದಲ್ಲಿ ಕಂಡುಕೊಳ್ಳಲಾಗಿತ್ತು. ಆದರೆ, ಅದಕ್ಕೆ ವ್ಯತಿರಿಕ್ತವಾದ ಸತ್ಯವನ್ನು ಈಗ ಕಂಡುಕೊಳ್ಳಲಾಗಿದೆ. ಹತ್ತು ಕ್ಯಾನ್ಸರ್ ರೋಗಿಗಳು ಹೃದಯಾಘಾತಕ್ಕೊಳಗಾದ ಸಂದರ್ಭದಲ್ಲಿ ಆಸ್ಪಿರಿನ್ ಮಾತ್ರೆ ತೆಗೆದುಕೊಳ್ಳದೆ ಮೃತರಾಗಿದ್ದಾರೆ. ಆದರೆ, ಇದೇ ರೀತಿಯ 17 ರೋಗಿಗಳು ಆಸ್ಪಿರಿನ್ ಮಾತ್ರೆ ಸೇವಿಸಿದಾಗ ಅವರಲ್ಲಿ ಒಬ್ಬನೇ ಮೃತನಾದುದು ಸಂಶೋಧನೆ ಸಂದರ್ಭದಲ್ಲಿ ಬೆಳಕಿಗೆ ಬಂತು ಎಂದು ಆ್ಯಂಡರ್ಸನ್ ಹೇಳಿದರು.

2007: ಅತ್ಯಂತ ಹಳೆಯದಾದ, 1903ರಲ್ಲಿ ತಯಾರಾದ ಸುಸ್ಥಿತಿಯಲ್ಲಿರುವ ಫೋರ್ಡ್ ಕಾರು 630,000 ಫೋನಿಕ್ಸಿನಲ್ಲಿ ನಡೆದ ಹರಾಜಿನಲ್ಲಿ ಅಮೆರಿಕ ಡಾಲರುಗಳಿಗೆ ಮಾರಾಟವಾಯಿತು. ಅಮೆರಿಕದಲ್ಲಿ ತಯಾರಾದ ಈ ಕಾರು ಫೋರ್ಡ್ ಕಂಪೆನಿ ಮಾರಾಟ ಮಾಡಿದ ಮೊದಲು ಮೂರು ಕಾರುಗಳಲ್ಲಿ ಇದೂ ಒಂದು. ಹೂಸ್ಟನ್ನಿನ ಖ್ಯಾತ ವಕೀಲ ಜಾನ್ ಓ ಕ್ವಿನ್ ಈ ಕಾರಿನ ನೂತನ ಒಡೆಯರಾದರು.

2007: ಬ್ರಿಟನ್ನಿನ `ಚಾನೆಲ್ 4 ರಿಯಾಲಿಟಿ ಟಿವಿ ಷೋ ಸೆಲೆಬ್ರಿಟಿ ಬಿಗ್ ಬ್ರದರ್' ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರಿಗೆ ಜನಾಂಗೀಯ ನಿಂದನೆ ಮತ್ತು ಮಾನಸಿಕ ಕಿರುಕುಳ ನೀಡುವುದರ ಮೂಲಕ ಅಂತಾರಾಷ್ಟ್ರೀಯ ಚರ್ಚೆಗೆ ಗ್ರಾಸವಾಗಿದ್ದ ಬ್ರಿಟಿಷ್ ಟಿವಿ ನಟಿ ಜೇಡ್ ಗೂಡಿ ಅವರ ವಿರುದ್ಧ ಶೇ 82ರಷ್ಟು ಪ್ರೇಕ್ಷಕರು ಮತ ಚಲಾಯಿಸಿ ಮುಂದಿನ ಪ್ರದರ್ಶನದಿಂದ ಹೊರಹಾಕಿದರು. 25 ವರ್ಷದ ಮಾಜಿ ದಂತ ವೈದ್ಯಕೀಯ ದಾದಿಯಾದ ಜೇಡ್ ಗೂಡಿ ಅವರು 31 ವರ್ಷದ ಶಿಲ್ಪಾ ಶೆಟ್ಟಿ ಅವರನ್ನು ನಿಂದಿಸಿದ ಬಳಿಕ ಟಿವಿಯ ಕಾವಲುಸಂಸ್ಥೆ `ಆಫ್ ಕಾಮ್' ಗೆ ಪ್ರದರ್ಶನದ ಬಗ್ಗೆ ಪ್ರೇಕ್ಷಕರಿಂದ ಸುಮಾರು 40,000 ದೂರುಗಳು ಬಂದಿದ್ದವು. ಈ ಪ್ರಕರಣದ ನಂತರ 20 ಲಕ್ಷ ಹೆಚ್ಚುವರಿ ಪ್ರೇಕ್ಷಕರು ಟಿವಿ ಕಾರ್ಯಕ್ರಮ ವೀಕ್ಷಿಸಿದ್ದರು. ಶಿಲ್ಪಾ ಅವರಿಗೆ ವಿಶ್ವದ ನಾನಾ ಭಾಗಗಳಿಂದ ಅಂತರ್ಜಾಲದ ಮೂಲಕ ಭಾರಿ ಪ್ರಮಾಣದ ಅಭಿಮಾನಿಗಳ ಬೆಂಬಲ ಹರಿದುಬಂದಿತ್ತು. ಸುದ್ದಿ ವಾಹಕಗಳ ಪ್ರಸಾರ, ಅಂತರ್ಜಾಲದ ವಿಚಾರ ವಿನಿಮಯ ಹಾಗೂ ವೃತ್ತಪತ್ರಿಕೆಗಳ ಬರವಣಿಗೆಗಳಲ್ಲಿ ಜನಾಂಗೀಯ ನಿಂದನೆ ಮತ್ತು ಬಿಗ್ ಬ್ರದರ್ ಕಾರ್ಯಕ್ರಮ ಕುರಿತು ವ್ಯಾಪಕ ಚರ್ಚೆ ನಡೆದಿತ್ತು.

2007: ಕಂಪ್ಯೂಟರಿಗೆ ಯಾವುದೇ ರೀತಿಯ ವೈರಸ್ಗಳಿಂದ ಸಮಗ್ರ ರಕ್ಷಣೆ ನೀಡಬಲ್ಲಂತಹ `ರುದ್ರ ಪ್ರೊಟೆಕ್ಟರ್' ನ್ನು ಇಸ್ರೋ ಉಪಾಧ್ಯಕ್ಷ ಎಸ್. ರಮಣಿ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು. ಭಾರತೀಯ ಮೂಲದವರು ಅಭಿವೃದ್ಧಿ ಪಡಿಸಿರುವ ಈ ಪ್ರೊಟೆಕ್ಟರ್ ವಿಶ್ವದಲ್ಲೇ ಪ್ರಪ್ರಥಮ ಕಂಪ್ಯೂಟರ್ ಪ್ರೊಟೆಕ್ಟರ್ ಎನ್ನಲಾಗಿದೆ. ಸಿಂಗಾಪುರ ಮೂಲದ ರುದ್ರ ಟೆಕ್ನಾಲಜೀಸ್ ಸಂಸ್ಥೆಯು ಇಂಟೆನ್ಷನ್ ಬೇಸ್ಡ್ ಟೆಕ್ನಾಲಜಿ ಆಧರಿಸಿ ಇದನ್ನು ನಿರ್ಮಿಸಿದೆ.

2006: ಫಾರ್ಗೊಟ್ಟನ್ ಹೀರೋ (ಮರೆತ ನಾಯಕ) ಚಿತ್ರಕ್ಕಾಗಿ ಶ್ಯಾಮ್ ಬೆನೆಗಲ್ ಅವರಿಗೆ 2006ರ ಸಾಲಿನ ನೇತಾಜಿ ಪ್ರಶಸ್ತಿಯನ್ನು ಪ್ರಕಟಿಸಲಾಯಿತು. ನೇತಾಜಿ ಸುಭಾಶ್ ಚಂದ್ರ ಬೋಸ್ ಪಾತ್ರದಲ್ಲಿ ಅಸಾಧಾರಣ ಅಭಿನಯ ಮಾಡಿದ್ದಕ್ಕಾಗಿ ಸಚಿನ್ ಖೇಡೇಕರ್ ಅವರಿಗೂ ಈ ಪ್ರಶಸ್ತಿ ಲಭಿಸಿದೆ.

2006: ಕೊಂಕಣ ರೈಲ್ವೆಯು ಅಭಿವೃದ್ಧಿ ಪಡಿಸಿದ ಅಪಘಾತ ನಿಯಂತ್ರಣ ಸಾಧನ ರಕ್ಷಾ ಕವಚಕ್ಕೆ ಭಾರತ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಪೇಟೆಂಟ್ ಲಭಿಸಿತು. ರಕ್ಷಾ ಕವಚ ಪೇಟೆಂಟಿಗಾಗಿ ಕೊಂಕಣ ರೈಲ್ವೆಯು ಅಮೆರಿಕ, ಯುರೋಪ್ ಮತ್ತು ಏಷ್ಯಾದ ರಾಷ್ಟ್ರಗಳಿಗೂ ಅರ್ಜಿ ಸಲ್ಲಿಸಿತು.

2006: ಭಾರತ ಮತ್ತು ಪಾಕಿಸ್ತಾನದ ನಡುವಣ ಜನರ ಸಂಪರ್ಕ ವೃದ್ಧಿಯ ಯತ್ನವಾಗಿ ಉಭಯರಾಷ್ಟ್ರಗಳ ಮಧ್ಯೆ ಮೂರನೇ ಬಸ್ಸಿಗೆ ಚಾಲನೆ ನೀಡಲಾಯಿತು. ಲಾಹೋರ್- ಅಮೃತಸರ ನಡುವೆ ಇದೇ ಪ್ರಥಮ ಬಾರಿಗೆ ಬಸ್ ಸಂಚಾರ ಆರಂಭವಾಯಿತು.

2005: ಚಿತ್ರನಟಿ ಪರ್ವೀನ್ ಬಾಭಿ ನಿಧನ.

1988: `ಗಡಿನಾಡ ಗಾಂಧಿ' ಎಂದೇ ಖ್ಯಾತರಾಗಿದ್ದ ಖಾನ್ ಅಬ್ದುಲ್ ಗಫಾರ್ ಖಾನ್ (1890-1988) ಆಫ್ಘಾನಿಸ್ಥಾನದ ಪೇಷಾವರದ ಲೇಡಿ ರೀಡಿಂಗ್ ಆಸ್ಪತ್ರೆಯಲ್ಲಿ ತಮ್ಮ 98ನೇ ವಯಸ್ಸಿನಲ್ಲಿ ನಿಧನರಾದರು. ಮಹಾತ್ಮಾ ಗಾಂಧೀಜಿಯವರ ಅನುಯಾಯಿಯಾಗಿದ್ದ ಅವರು `ಖುದಾಯಿ ಖಿದ್ಮತ್ಗಾರ್' ನ (ರೆಡ್ ಶರ್ಟ್ ಮೂವ್ ಮೆಂಟ್) ಸ್ಥಾಪಕ.

1982: ಕುಖ್ಯಾತ ಕೊಲೆಗಾರರಾದ ಬಿಲ್ಲಾ ಮತ್ತು ರಂಗ ಅವರನ್ನು ಗಲ್ಲಿಗೇರಿಸುವುದಕ್ಕೆ ಸಂಬಂಧಿಸಿದಂತೆ ನೀಡಲಾಗಿದ್ದ ತಡೆಯಾಜ್ಞೆಯನ್ನು ಸುಪ್ರೀಂಕೋರ್ಟ್ ರದ್ದು ಪಡಿಸಿತು.

1982: ನಿಕೋಬಾರ್ ದ್ವೀಪದಲ್ಲಿ ಈದಿನ ಬೆಳಗ್ಗೆ ತೀವ್ರ ಭೂಕಂಪ ಸಂಭವಿಸಿ ನೌಕಾದಳದ ಹಡಗುಕಟ್ಟೆ ಮತ್ತು ಕ್ಯಾಂಪ್ ಬೆಲ್ ಬೇನಲ್ಲಿನ ಕೆಲವು ಕಟ್ಟಡಗಳಿಗೆ ಹಾನಿ ಉಂಟಾಯಿತು.

1981: ಅಮೆರಿಕಾದ ಅಧ್ಯಕ್ಷ ಪದವು ರೊನಾಲ್ಡ್ ರೇಗನ್ ಅವರಿಂದ ಜಿಮ್ಮಿ ಕಾರ್ಟರ್ ಅವರಿಗೆ ಹಸ್ತಾಂತರಗೊಂಡ ಕೆಲವೇ ನಿಮಿಷಗಳಲ್ಲಿ ತಾನು ಒತ್ತೆಸೆರೆಯಾಗಿ ಇಟ್ಟುಕೊಂಡಿದ್ದ 52 ಮಂದಿ ಅಮೆರಿಕನ್ನರನ್ನು ಇರಾನ್ ಬಿಡುಗಡೆ ಮಾಡಿತು. ಇವರನ್ನು ಅದು 444 ದಿನಗಳ ಕಾಲ ತನ್ನ ಸೆರಯಲ್ಲಿ ಇಟ್ಟುಕೊಂಡಿತ್ತು. 1980ರ ಏಪ್ರಿಲ್ 25ರಂದು ಅಮೆರಿಕಾವು `ಆಪರೇಷನ್ ಈಗಲ್ ಕ್ಲಾ' ಗುಪ್ತಸಂಕೇತದ ಕಾರ್ಯಾಚರಣೆಯನ್ನು ಈ ಒತ್ತೆಯಾಳುಗಳ ಬಿಡುಗಡೆಗಾಗಿ ಕೈಗೊಂಡಿತ್ತು. ಆದರೆ ಇದಕ್ಕಾಗಿ ನಿಯೋಜಿಸಲಾದ ನೌಕಾಪಡೆಗೆ ಸೇರಿದ 8 ಹೆಲಿಕಾಪ್ಟರುಗಳ ಪೈಕಿ ಮೂರು ಹೆಲಿಕಾಪ್ಟರುಗಳು ವ್ಯವಸ್ಥೆಯ ದೋಷದಿಂದಾಗಿ ವಿಫಲಗೊಂಡು ಈ ಕಾರ್ಯಾಚರಣೆಯೂ ಅಯಶಸ್ವಿಯಾಗಿತ್ತು.

1959: ಭಾರತೀಯ ನ್ಯಾಯವಾದಿ, ಮುತ್ಸದ್ಧಿ ಸರ್ ತೇಜ್ ಬಹಾದುರ್ ಸಪ್ರು (1875-1959) ತಮ್ಮ 73ನೇ ವಯಸ್ಸಿನಲ್ಲಿನಿಧನರಾದರು.

1957: ಟ್ರಾಂಬೆಯ ಪರಮಾಣು ಇಂಧನ ಸಂಸ್ಥೆ ಔಪಚಾರಿಕವಾಗಿ ಉದ್ಘಾಟನೆಗೊಂಡಿತು. 1967ರ ಜನವರಿಯಲ್ಲಿ ಅದಕ್ಕೆ ಭಾಭಾ ಪರಮಾಣು ಸಂಶೋಧನಾ ಕೇಂದ್ರ ಎಂದು ಪುನರ್ ನಾಮಕರಣ ಮಾಡಲಾಯಿತು. ಭಾರತದ ಅಣುಶಕ್ತಿ ಕಾರ್ಯಕ್ರಮಕ್ಕೆ ಬೆಂಬಲವಾಗಿ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸುವುದು ಈ ಕೇಂದ್ರದ ಉದ್ದೇಶ.

1972: ಮೇಘಾಲಯವು ರಾಜ್ಯವಾಯಿತು. ಮತ್ತು ಅರುಣಾಚಲ ಪ್ರದೇಶವು ಭಾರತದ ಕೇಂದ್ರಾಡಳಿತ ಪ್ರದೇಶವಾಯಿತು. ಅರುಣಾಚಲ ಪ್ರದೇಶವು 1987ರಲ್ಲಿ ರಾಜ್ಯವಾಯಿತು.

1934: ಸಮಕಾಲೀನ ಶಿಲ್ಪಕಲೆಯಲ್ಲಿ ನಿಷ್ಣಾತರಾದ ಧನಂಜಯಶಿಲ್ಪಿ ಅವರು ಶಿವಬಸಪ್ಪ- ಮಾಣಿಕ್ಕಮ್ಮ ದಂಪತಿಯ ಮಗನಾಗಿ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನಲ್ಲಿ ಜನಿಸಿದರು.

1929: ಕಲಾವಿದೆ ಆರ್. ಲೀಲಾಬಾಯಿ ಜನನ.

1892: ಕೆನಡಾದ ವೈದ್ಯ ಜೇಮ್ಸ್ ನೈಸ್ಮಿತ್ ಕಂಡು ಹಿಡಿದ `ಬಾಸ್ಕೆಟ್ ಬಾಲ್' ಆಟವನ್ನು ಮೊತ್ತ ಮೊದಲ ಬಾರಿಗೆ ಮೆಸಾಚ್ಯುಸೆಟ್ಸ್ ಸ್ಪ್ರಿಂಗ್ ಫೀಲ್ಡಿನ ವೈಎಂಸಿಎಯಲ್ಲಿ ಆಡಲಾಯಿತು.

1818: ಕಲ್ಕತ್ತಾದ (ಈಗಿನ ಕೋಲ್ಕತ) ಗಹ್ರನ್ ಹಟ್ಟಾದಲ್ಲಿ (ಮುಂದೆ ಇದು 304 ಚಿತ್ಪುರ್ ರಸ್ತೆ ಎಂಬುದಾಗಿ ಹೆಸರಾಯಿತು) ಹಿಂದು ಕಾಲೇಜ್ (ಈಗ ಪ್ರೆಸಿಡೆನ್ಸಿ ಕಾಲೇಜ್) ಸ್ಥಾಪನೆ. ರಾಜಾ ರಾಮ್ ಮೋಹನ್ ರಾಯ್ ಅವರು ಸಮಿತಿಯ ಮುಖ್ಯಸ್ಥರಾಗಿದ್ದರು. ಕಾಲೇಜು 1855ರ ಏಪ್ರಿಲ್ 15ರಂದು ಮುಚ್ಚಿತು. ಅದೇ ವರ್ಷ ಜೂನ್ 15ರಂದು ಪ್ರೆಸಿಡೆನ್ಸಿ ಕಾಲೇಜ್ ಆರಂಭವಾಯಿತು.

Advertisement