My Blog List

Saturday, June 12, 2010

ಇಂದಿನ ಇತಿಹಾಸ History Today ಜೂನ್ 07

ಇಂದಿನ ಇತಿಹಾಸ

ಜೂನ್ 07

ಗೂಗಲ್‌ನಂತಹ ಸಂಸ್ಥೆಯ ಸಹಸಂಸ್ಥಾಪಕರ ಅಚ್ಚುಮೆಚ್ಚಿನ ಗುರುಗಳಾಗಿದ್ದ ರಾಜೀವ್ ಮೊಟ್ವಾನಿ  (47)  ತಮ್ಮ  ಕ್ಯಾಲಿಫೋರ್ನಿಯಾ ನಿವಾಸದ ಈಜುಕೊಳದಲ್ಲಿ ಮುಳುಗಿ ವಿಲಕ್ಷಣ ರೀತಿಯಲ್ಲಿ ಸಾವನ್ನಪ್ಪಿದರು. ಸ್ಟಾನ್‌ಫೊರ್ಡ್ ಯೂನಿವರ್ಸಿಟಿಯ  ಇಂಡಿಯನ್-ಅಮೆರಿಕನ್ ಕಂಪ್ಯೂಟರ್ ಸೈನ್ಸ್ ಪ್ರೊಫೆಸರ್ ಆಗಿದ್ದ ಮೊಟ್ವಾನಿ ಗೂಗಲ್ ಸಂಸ್ಥಾಪಕರು ಪದವಿ ವಿದ್ಯಾರ್ಥಿಗಳಾಗಿದ್ದಾಗ ಅವರ ಗುರುಗಳಾಗಿದ್ದರು.

2009: ಆಸ್ಕರ್ ವಿಜೇತ ಭಾರತೀಯ ಸಂಗೀತಕಾರ ಎ. ಆರ್. ರಹಮಾನ್ ಅವರಿಗೆ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯವು ಡಿ.ಲಿಟ್ ಗೌರವ ಪದವಿ ಪ್ರದಾನ ಮಾಡಿತು.

2009: ಗೂಗಲ್‌ನಂತಹ ಸಂಸ್ಥೆಯ ಸಹಸಂಸ್ಥಾಪಕರ ಅಚ್ಚುಮೆಚ್ಚಿನ ಗುರುಗಳಾಗಿದ್ದ ರಾಜೀವ್ ಮೊಟ್ವಾನಿ  (47)  ತಮ್ಮ  ಕ್ಯಾಲಿಫೋರ್ನಿಯಾ ನಿವಾಸದ ಈಜುಕೊಳದಲ್ಲಿ ಮುಳುಗಿ ವಿಲಕ್ಷಣ ರೀತಿಯಲ್ಲಿ ಸಾವನ್ನಪ್ಪಿದರು. ಸ್ಟಾನ್‌ಫೊರ್ಡ್ ಯೂನಿವರ್ಸಿಟಿಯ  ಇಂಡಿಯನ್-ಅಮೆರಿಕನ್ ಕಂಪ್ಯೂಟರ್ ಸೈನ್ಸ್ ಪ್ರೊಫೆಸರ್ ಆಗಿದ್ದ ಮೊಟ್ವಾನಿ ಗೂಗಲ್ ಸಂಸ್ಥಾಪಕರು ಪದವಿ ವಿದ್ಯಾರ್ಥಿಗಳಾಗಿದ್ದಾಗ ಅವರ ಗುರುಗಳಾಗಿದ್ದರು. ಕೇವಲ ಮೂರು ವರ್ಷಗಳ ಹಿಂದಷ್ಟೇ ಖರೀದಿಸಿದ್ದ ಮನೆಯ ಹಿಂಭಾಗದ ಈಜುಕೊಳದಲ್ಲಿ ಅವರು ಜಲಸಮಾಧಿಯಾಗಿದ್ದಾರೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿದವು. ಮಾಹಿತಿ ಆಳಶೋಧದತ್ತ ತಮ್ಮ ಆಸಕ್ತಿ ಹರಿದಾಗ ಈ ವಿಷಯದಲ್ಲಿ ಪರಿಣತಿ ಪಡೆದಿದ್ದ ರಾಜೀವ್ ಈ ವಿಷಯದಲ್ಲಿ ನಿಯಮಿತ ಸಭೆ ಸಂಯೋಜನೆಗೆ ನೆರವಾಗಿದ್ದರು. 'ನಂತರ ನಾನು ಮತ್ತು ಲ್ಯಾರಿ ಗೂಗಲ್‌ಗೆ ದಾರಿಯಾದ ಸಂಶೋಧನೆಗೆ ಒಟ್ಟಾಗಿ ಕೆಲಸ ಮಾಡತೊಡಗಿದಾಗ ನಮ್ಮನ್ನು ಬೆಂಬಲಿಸಲು ರಾಜೀವ್ ಸದಾ ಜೊತೆಗಿದ್ದರು. ತಾಂತ್ರಿಕ ಹಾಗೂ ಸಂಘಟನಾತ್ಮಕ ಸವಾಲುಗಳನ್ನು ಎದುರಿಸಲು ಅವರು ಮಾರ್ಗದರ್ಶಕರಾಗಿದ್ದರು' ಎಂದೂ ಬ್ರಿನ್ ವಿವರಿಸಿದರು. ಜಮ್ಮುವಿನಲ್ಲಿ ಮಾರ್ಚ್ 26, 1962 ರಂದು ಜನಿಸಿದ್ದ ರಾಜೀವ್ ದೆಹಲಿಯ ಶಾಲೆ ಕಾಲೇಜುಗಳಲ್ಲಿ ಓದಿ ಕಾನ್ಪುರದ ಐಐಟಿ ಯಿಂದ 1983ರಲ್ಲಿ ಕಂಪ್ಯೂಟರ್ ಸೈನ್ಸ್  ಪದವಿ ಪಡೆದಿದ್ದರು. 1988ರಲ್ಲಿ ಕ್ಯಾಲಿಫೋರ್ನಿಯಾ-ಬರ್ಕ್‌ಲಿ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿದ್ದರು. ಸ್ಟಾನ್‌ಫೊರ್ಡ್  ಪ್ರೊಫೆಸರ್ ಆಗಿ ಕಂಪ್ಯೂಟರ್ ವಿಜ್ಞಾನ ಇಲಾಖೆಯ  ಪದವಿ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ 'ಮೈನಿಂಗ್ ಡಾಟಾ ಅಟ್ ಸ್ಟಾನ್‌ಫೋರ್ಡ್ ಪ್ರಾಜೆಕ್ಟ್'  (ಮಿದಾಸ್) ಸ್ಥಾಪಿಸಿದ್ದರು.

2009: ಬಹುಕಾಲದಿಂದ ಎಟುಕದೇ ಉಳಿದಿದ್ದ ಫ್ರೆಂಚ್ ಓಪನ್ ಗ್ರ್ಯಾಂಡ್ ಸ್ಲಾಮ್ ಟೆನಿಸ್ ಟೂರ್ನಿಯ ಪ್ರಶಸ್ತಿಯನ್ನು ಗೆದ್ದುಕೊಂಡ ಸ್ವಿಜರ್ಲೆಂಡಿನ ರೋಜರ್ ಫೆಡರರ್ ಅವರು ಪ್ಯಾರಿಸ್ಸಿನ ರೋಲಂಡ್ ಗ್ಯಾರೋಸ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಿದರು. ಚೊಚ್ಚಲ ಫ್ರೆಂಚ್ ಓಪನ್ ಗೆಲ್ಲುವ ಮೂಲಕ ಫೆಡರರ್ ಅವರು ತಮ್ಮ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳ ಸಂಖ್ಯೆಯನ್ನು 14ಕ್ಕೆ ಹೆಚ್ಚಿಸಿಕೊಂಡರು. ಮಾತ್ರವಲ್ಲ ಇಷ್ಟೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಜಯಿಸಿರುವ ಅಮೆರಿಕದ ಪೀಟ್ ಸಾಂಪ್ರಾಸ್ ಅವರ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಸರಿಗಟ್ಟಿದರು. ರೋಲಂಡ್ ಗ್ಯಾರೋಸ್‌ನ ಫಿಲಿಪ್ ಚಾಟ್ರಿಯರ್ ಅಂಗಳದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಫೆಡರರ್ 6-1, 7-6, 6-4 ರಲ್ಲಿ ಸ್ವೀಡನ್‌ನ ರಾಬಿನ್ ಸೊಡೆರ್‌ಲಿಂಗ್ ಅವರನ್ನು ಪರಾಭವಗೊಳಿಸಿ ತಮ್ಮ ಬಹುಕಾಲದ ಕನಸನ್ನು ಈಡೇರಿಸಿಕೊಂಡರು. ವಿಶ್ವದ ಎರಡನೇ ರಾಂಕಿಂಗ್‌ನ ಆಟಗಾರ ಇದರೊಂದಿಗೆ ಎಲ್ಲ ನಾಲ್ಕು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಜಯಿಸಿದ ವಿಶ್ವದ ಆರನೇ ಆಟಗಾರ ಎನಿಸಿಕೊಂಡರು. ಫ್ರೆಡ್ ಪೆರ್ರಿ, ಡಾನ್ ಬಡ್ಜ್, ರಾಡ್ ಲೇವರ್, ರಾಯ್ ಎಮರ್ಸನ್ ಮತ್ತು ಆಂಡ್ರೆ ಅಗಾಸ್ಸಿ ಅವರು ಈ ಸಾಧನೆ ಮಾಡಿದ ಇತರ ಆಟಗಾರರು.

2009: ಮಹಾರಾಷ್ಟ್ರ ಕಾಂಗ್ರೆಸ್ ಘಟಕದ ಮುಖಂಡ ಪವನ್‌ರಾಜೇ ನಿಂಬಾಳ್ಕರ್ ಮತ್ತು ಅವರ ಕಾರು ಚಾಲಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಪಿಯ ಹಿರಿಯ ನಾಯಕ ಹಾಗೂ ಸಂಸದ ಪದಮ್‌ಸಿನ್ಹಾ ಪಾಟೀಲ್ ಅವರನ್ನು ಸಿಬಿಐ ಬಂಧಿಸಿತು. 69 ವರ್ಷದ ಸಂಸದ ಪದಮ್ ಸಿನ್ಹಾ ಪಾಟೀಲ್ ಅವರನ್ನು ರಾತ್ರಿ ಬಂಧಿಸಿದ ನಂತರ ನವಿ ಮುಂಬೈನ ಪನವೇಲ್ ಕೋರ್ಟಿನಲ್ಲಿ ಹಾಜರು ಪಡಿಸಲಾಯಿತು. ಹೆಚ್ಚಿನ ವಿಚಾರಣೆಗಾಗಿ ಅವರನ್ನು ಜೂನ್ 14ರವರೆಗೆ ಸಿಬಿಯ ವಶಕ್ಕೆ ನೀಡಲು ಕೋರ್ಟ್ ಆದೇಶಿಸಿತು. ನವಿ ಮುಂಬೈನ ಕಲಂಬೋಲಿ ಪ್ರದೇಶದಲ್ಲಿ 2006ರ ಜೂನ್ 3ರಂದು ಕಾಂಗ್ರೆಸ್ ಮುಖಂಡ ನಿಂಬಾಳ್ಕರ್ ಮತ್ತು ಅವರ ಕಾರು ಚಾಲಕನನ್ನು ಗುಂಡಿಟ್ಟು ಕೊಲೆ ಮಾಡಲಾಗಿತ್ತು. ಈ ಸಂಬಂಧ ಪಾರಸ್‌ ಮಲ್ ಜೈನ್ ಹಾಗೂ ಮೋಹನ್ ಶುಕ್ಲಾ ಎಂಬ ಇಬ್ಬರು ಆರೋಪಿಗಳನ್ನು ಈ ಮೊದಲೇ ಬಂಧಿಸಲಾಗಿತ್ತು. ನಿಂಬಾಳ್ಕರ್ ಅವರನ್ನು ಕೊಲೆ ಮಾಡಲು ತಮಗೆ ಸಂಸದ ಪಾಟೀಲ್ ಅವರು 30 ಲಕ್ಷ ರೂಪಾಯಿಗಳ ಸುಪಾರಿ ನೀಡಿದ್ದರು ಎಂಬ ಅಂಶವನ್ನು ಈ ಆರೋಪಿಗಳು ವಿಚಾರಣೆ ವೇಳೆ ಬಹಿರಂಗ ಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸಂಸದ ಪಾಟೀಲ್ ಅವರನ್ನು ಬಂಧಿಸಲಾಯಿತು ಎಂದು ಸಿಬಿಐ ವಕೀಲರು ತಿಳಿಸಿದರು.

2009: ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ನಾಯಕನ ಪಟ್ಟ ಕೊನೆಗೂ ಮಾಜಿ ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಲಿಯಿತು. ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗಲಿಲ್ಲ ಎಂಬ ಅಸಮಾಧಾನದಿಂದ ವದಂತಿಗೆ ಗ್ರಾಸ ಒದಗಿಸಿದ್ದ ಸಿದ್ದರಾಮಯ್ಯ ಅಂತಿಮವಾಗಿ ಸಿ.ಎಲ್.ಪಿ ನಾಯಕನ ಪಟ್ಟ ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಈದಿನ ಸಂಜೆ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ಅವರನ್ನು ನೂತನ ನಾಯಕನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಇವರು ಮೈಸೂರು ಜಿಲ್ಲೆಯ ವರುಣಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿ.

2009: ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ತುಂಬಿ ಹರಿಯುತ್ತಿದ್ದ ನದಿಗೆ ಮಿನಿ ಬಸ್ಸೊಂದು ಉರುಳಿ ಬಿದ್ದು ಕನಿಷ್ಠ 26 ಜನರು ಕಾಣೆಯಾದರು. ಇವರು ಬದುಕುಳಿದಿರುವ ಸಾಧ್ಯತೆ ತೀರಾ ಕಡಿಮೆ ಎಂದು ಪೊಲೀಸರು ಹೇಳಿದರು.

2009: ರಾಜಕೀಯವಾಗಿ ಅತ್ಯಂತ ಮಹತ್ವ ಪಡೆದ ಎಸ್‌ಎನ್‌ಸಿ ಲಾವಾಲಿನ್ ಲಂಚ ಪ್ರಕರಣ ಹೊಸ ತಿರುವು ಪಡೆದುಕೊಂಡಿತು. ಸಿಪಿಎಂ ರಾಜ್ಯ ಕಾರ್ಯದರ್ಶಿ ಪಿನರಾಯಿ ವಿಜಯನ್ ಅವರ ವಿರುದ್ಧ ಸಿಬಿಐ ತನಿಖೆ ನಡೆಸಲು ರಾಜ್ಯಪಾಲ ಆರ್. ಎಸ್. ಗವಾಯ್ ಸಮ್ಮತಿ ಸೂಚಿಸಿದರು. 1998ರಲ್ಲಿ ವಿಜಯನ್ ಅವರು ವಿದ್ಯುತ್ ಸಚಿವರಾಗಿದ್ದ ಸಮಯದಲ್ಲಿ ಮೂರು ಜಲವಿದ್ಯುತ್ ಯೋಜನೆಗಳಾದ ಪನ್ನಿಯಾರ್, ಚೆಂಕುಲಂ ಮತ್ತು ಪಲ್ಲಿವಸಾಲ್‌ಗಳಲ್ಲಿ ನವೀಕರಣ ಕಾರ್ಯಕ್ಕಾಗಿ ಕೆನಡಾದ ಎಸ್‌ಎನ್‌ಸಿ ಲಾವಾಲಿನ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು. ಆದರೆ ಈ ಗುತ್ತಿಗೆ ನೀಡಿಕೆಯಲ್ಲಿ ಭ್ರಷ್ಟಾಚಾರ ನಡೆದಿದೆ ಮತ್ತು ಅಕ್ರಮಗಳನ್ನು ಎಸಗಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಪ್ರಕರಣದ ತನಿಖೆ ನಡೆಸ್ದಿದ ಸಿಬಿಸಿದ್ದ ಸಿಬಿಐ ಈ ವ್ಯವಹಾರದಲ್ಲಿ ಅಕ್ರಮ ನಡೆದಿದ್ದುದನ್ನು ಕಂಡುಕೊಂಡಿತ್ತು ಹಾಗೂ ವಿಜಯನ್ ಅವರನ್ನು 9ನೇ ಆರೋಪಿಯನ್ನಾಗಿ ಪರಿಗಣಿಸಲು ಮುಂದಾಗಿತ್ತು. ಈ ಗುತ್ತಿಗೆಯಿಂದಾಗಿ ರಾಜ್ಯ ಬೊಕ್ಕಸಕ್ಕೆ ಭಾರಿ ಹಾನಿಯಾಗಿದೆ ಎಂದೂ ಸಿಬಿಐ ಹೇಳಿತ್ತು.

2009: 'ಇಂಗ್ಲಿಷ್ ಲ್ಯಾಂಗ್ವೇಜ್ ವರ್ಲ್ಡ್ ಕ್ಲಾಕ್' ಸಂಸ್ಥೆಯ ಪಟ್ಟಿಗೆ ಸೇರಲು ಅಂತಿಮ ಸುತ್ತಿಗೆ ಆಯ್ಕೆಯಾಗಿರುವ 73 ಶಬ್ದಗಳಲ್ಲಿ 'ಜೈಹೋ',  ಹಾಗೂ 'ಸ್ಲಮ್ ಡಾಗ್' ಶಬ್ದಗಳೂ ಸೇರಿದವು.
ಪ್ರಸ್ತುತ ಈ ಪಟ್ಟಿಯಲ್ಲಿ 999,927 ಶಬ್ದಗಳು ಇದ್ದು, ಅಂತಿಮ ಸುತ್ತಿನಲ್ಲಿರುವ ಈ 73 ಶಬ್ದಗಳು ಸೇರಿದರೆ  ಈ ಸಂಖ್ಯೆ 10 ಲಕ್ಷಕ್ಕೆ ಏರಿದಂತಾಗುತ್ತದೆ. ಟೆಕ್ಸಾಸ್ ಮೂಲದ ಜಾಗತಿಕ ಭಾಷಾ ಮೇಲ್ವಿಚಾರಣಾ ಸಂಸ್ಥೆ 'ಇಂಗ್ಲಿಷ್ ಲ್ಯಾಂಗ್ವೇಜ್ ವರ್ಲ್ಡ್ ಕ್ಲಾಕ್' ವಾಡಿಕೆಯಲ್ಲಿರುವ ಶಬ್ದಗಳ ಹೊಸ ಪ್ರವೃತ್ತಿಯನ್ನು ವಿಶ್ಲೇಷಿಸುತ್ತದೆ ಮತ್ತು  ಇಂಗ್ಲಿಷಿನಲ್ಲಿ ಒಂದು ನಿರ್ದಿಷ್ಟ ಮಹತ್ವವನ್ನು ಆಧರಿಸಿ ಶಬ್ದಗಳನ್ನು ಆಯ್ಕೆ ಮಾಡುತ್ತದೆ.

2009: ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರಿಗೆ ಅಲಿಗಢ ಮುಸ್ಲಿಮ್ ವಿಶ್ವವಿದ್ಯಾಲಯ ಗೌರವ ಡಿ.ಲಿಟ್ ನೀಡಿ ಗೌರವಿಸಿತು. ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಹಿರಿಯ ಉರ್ದು ಲೇಖಕ ಗೋಪಿ ಚಂದ್ ನಾರಂಗ್ ಅವರು ಪದವಿ ನೀಡಿದರು.

2009: ಉಗ್ರಗಾಮಿ ಸಂಘಟನೆ ಜೆಯುಡಿ ಮುಖ್ಯಸ್ಥ ಹಫೀಜ್ ಮಹಮ್ಮದ್ ಸಯೀದ್‌ಗೆ ಮುಂಬೈ ದಾಳಿಗೆ ಸಂಬಂಧಿಸಿದಂತೆ ಸಂಪರ್ಕ ಇರುವ ಬಗ್ಗೆ ಯಾವ ಸಾಕ್ಷ್ಯಾಧಾರವನ್ನೂ ಪಾಕ್ ಸರ್ಕಾರ ಸಲ್ಲಿಸಿರಲಿಲ್ಲ. ಹಾಗಾಗಿ ಆತನನ್ನು ಬಿಡುಗಡೆ ಮಾಡಲಾಗಿದೆ ಎಂದು ಲಾಹೋರ್ ಹೈಕೋರ್ಟ್ ತಿಳಿಸಿತು. ಸಯೀದನನ್ನು ಬಂಧಮುಕ್ತಗೊಳಿಸಿದ ಬೆನ್ನಲ್ಲೇ ಹೈಕೋರ್ಟ್ ತನ್ನ ತೀರ್ಪಿನ 29 ಪುಟಗಳ ವಿಸ್ತೃತ ವರದಿಯಲ್ಲಿ ಈ ವಿವರವನ್ನು ತಿಳಿಸಿತು. ಮುಂಬೈ ದಾಳಿಯ ಇನ್ನೊಬ್ಬ ಪ್ರಮುಖ ಆರೋಪಿ ನಿವೃತ್ತ ಕರ್ನಲ್  ನಜೀರ್ ಮೊಹಮ್ಮದನನ್ನೂ ಸಯೀದನ ಜತೆ ಬಿಡುಗಡೆ ಮಾಡಲಾಗಿತ್ತು. ಮುಂಬೈ ದಾಳಿಯ ಪ್ರಮುಖ ಆರೋಪಿಗಳೆಂದು ದಾಖಲಿಸಲಾಗಿದ್ದ ಇಬ್ಬರನ್ನೂ ನಿರ್ದೋಷಿಗಳೆಂದು ಬಿಡುಗಡೆ ಮಾಡಿರುವುದರ ವಿರುದ್ಧ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.

2009:  ಎಚ್‌ಐವಿ ಸೋಂಕು ನಿವಾರಣೆಗಾಗಿ ಇಟಲಿಯ ಸಂಶೋಧಕರು ಆಘಾತ ನೀಡು ಮತ್ತು ಕೊಲ್ಲು (ಶಾಕ್ ಅಂಡ್ ಕಿಲ್) ಎಂಬ ನೂತನ ವಿಧಾನ ಕಂಡು ಹಿಡಿದರು. ಇಟಲಿ ವೈದ್ಯಕೀಯ ಸಂಸ್ಥೆಯ ಅಧ್ಯಕ್ಷರಾಗಿರುವ ಎನ್ರಿಕೊ ಗರಸಿ ಮತ್ತವರ ಸಹೋದ್ಯೋಗಿ ಆಂಡ್ರಿಕೊ ಸವಾರಿನೊ ಜಂಟಿಯಾಗಿ ನಡೆಸಿದ ಈ ಚಿಕಿತ್ಸೆಗೆ 'ಬ್ಯಾರೊಯರ್ ಆಫ್ ಲೆಟೆನ್ಸಿ' ಎಂದು ಹೆಸರಿಸಲಾಯಿತು. ದೇಹದಿಂದ ಎಚ್‌ಐವಿ ಸೋಂಕು ನಿವಾರಿಸಲು ಇದು ಪರಿಣಾಮಕಾರಿ ಔಷಧ ಎಂದು ಅವರು ತಿಳಿಸಿದರು. ಎಚ್‌ಐವಿ-1 ಸೋಂಕು ಜೀವಕೋಶಗಳಲ್ಲಿ ಲೀನವಾಗಿ ಬಿಡುತ್ತದೆ. ಆದರೆ ಅಂತಹ ಕೋಶಗಳನ್ನು 'ಸುಟ್ಟರೆ' ಸೋಂಕು ಕೂಡ ತಾನೆ ತಾನಾಗಿ ನಾಶವಾಗುತ್ತದೆ ಎಂದು ಸಾವರಿನೋ ತಂಡ ತಿಳಿಸಿದೆ. ಈ ವಿಧಾನದ ಬಗ್ಗೆ ವಿಜ್ಞಾನ ವಲಯದಿಂದಲೂ ಉತ್ತಮ ಪ್ರತಿಕ್ರಿಯೆ ಬಂದಿದೆಯಂತೆ.  'ರೆಟ್ರಿವೈರಾಲಜಿ' ಪತ್ರಿಕೆಯಲ್ಲಿ ಈ ವೈದ್ಯ ವಿಧಾನದ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಯಿತು.

2009: ಸುತ್ತುವರೆದ ಪ್ರಾಸ್ಟೇಟ್ ಗ್ರಂಥಿಗೆ ತಗುಲುವ ಕ್ಯಾನ್ಸರ್ ತಡೆಗಟ್ಟಲು ಹಣ್ಣು, ತರಕಾರಿ, ಕುರಿ ಹಾಗೂ ದನದ ಮಾಂಸ ತಿನ್ನುವಂತೆ ಆಸ್ಟ್ರೇಲಿಯಾದ ತಜ್ಞರು ಸಲಹೆ ಮಾಡಿದರು. ಈ ಪದಾರ್ಥಗಳಲ್ಲಿ ಕೊಬ್ಬು ಕಡಿಮೆ ಇರುತ್ತದೆ ಎಂದೂ ಅವರು ಹೇಳಿದರು. ಪ್ರಾಸ್ಟೇಟ್ ಗ್ರಂಥಿಗೆ ಕ್ಯಾನ್ಸರ್ ತಗುಲಿದ ವ್ಯಕ್ತಿಗಳು ಅನುಸರಿಸಬೇಕಾದ ಪಥ್ಯ ಕುರಿತು ಅಧ್ಯಯನ ನಡೆಸಿರುವ ನ್ಯೂಸೌತ್ ವೇಲ್ಸ್‌ನ ರಾಬರ್ಟ್ ಮಾ ಮತ್ತು ಕೆ.ಚಂಪನ್ ಅವರನ್ನೊಳಗೊಂಡ ತಂಡವು ಈ  ಸಲಹೆ ಮಾಡಿತು. ಡೇರಿ ಉತ್ಪನ್ನಗಳನ್ನು ತಿನ್ನಬಾರದು. ವಿಟಮಿನ್ ಇ ಅಂಶವನ್ನು  ಒಳಗೊಂಡ ಹಸಿರು ಚಹಾ, ಹೂಕೋಸು ಸೇವನೆಯೂ ಒಳ್ಳೆಯದು ಎಂದು ತಂಡ ಹೇಳಿತು. ಈ ಅಧ್ಯಯನದ ವಿವರಗಳು 'ಹ್ಯೂಮನ್ ನ್ಯೂಟ್ರಿಷನ್ ಅಂಡ್ ಡಯೆಟಿಕ್ಸ್' ನಿಯತಕಾಲಿಕೆಯ ಜೂನ್ ತಿಂಗಳ ಸಂಚಿಕೆಯಲ್ಲಿ ಪ್ರಕಟಗೊಂಡವು.

2009: ಹಂದಿ ಜ್ವರದ (ಎಚ್‌ಐಎನ್‌ಐ) ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಮೆಲ್ಬರ್ನ್ ನಗರವು ಜಗತ್ತಿನ ಹಂದಿ ಜ್ವರದ ರಾಜಧಾನಿ ಎಂಬ ಅಪಖ್ಯಾತಿಗೆ ಪಾತ್ರವಾಯಿತು. ಆಸ್ಟ್ರೇಲಿಯಾದಲ್ಲಿ ಒಟ್ಟು 1,006 ಹಂದಿಜ್ವರದ ಪ್ರಕರಣಗಳು ವರದಿಯಾದವು. ಮೆಲ್ಬರ್ನ್ ನಗರದ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿ 874 ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿದವು. ಅಮೆರಿಕದಲ್ಲಿ 11,131 ಪ್ರಕರಣಗಳು ಮತ್ತು ಮೆಕ್ಸಿಕೊದಲ್ಲಿ 5,029 ಪ್ರಕರಣಗಳು ವರದಿಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮೂಲಗಳು ಹೇಳಿದವು. ಮೆಕ್ಸಿಕೊಕ್ಕೆ ಹೋಲಿಸಿದರೆ ಮೆಲ್ಬರ್ನ್ ಪಟ್ಟಣ ಚಿಕ್ಕದು ಹಾಗೂ ಜನಸಂಖ್ಯೆಯೂ ಕಡಿಮೆ. ಆದರೆ ಪ್ರತಿ 9,139 ಜನರ ಪೈಕಿ ಒಬ್ಬರಿಗೆ ಹಂದಿ ಜ್ವರ ತಗುಲಿದೆ. ಹಾಗಾಗಿ ಮೆಲ್ಬೋರ್ನ್ ನಗರ ಹಂದಿಜ್ವರದ ರಾಜಧಾನಿ ಎಂಬ ಅಪಖ್ಯಾತಿಗೆ ಒಳಗಾಯಿತು.

2009: ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮರಿಗೆ ಚೆಂದದ ಸೂಟ್ ಹೊಲಿದು ಕೊಡುತ್ತಿದ್ದ ಶಿಕಾಗೋದ ಪ್ರತಿಷ್ಠಿತ ಕಂಪೆನಿ ಕದ ಮುಚ್ಚಿತು. ಪುರುಷರಿಗೆಂದೇ ವಿಶೇಷ ಸೂಟ್‌ಗಳನ್ನು ಹೊಲಿದು ಕೊಡುತ್ತಿದ್ದ ಹಾರ್ಟ್‌ಮ್ಯಾಕ್ಸ್ ಟುಕ್ಸೆಡೊ ಇನ್ನಿಲ್ಲದಂತೆ ದಿವಾಳಿಯಾಯಿತು. ಇದರ 137 ವರ್ಷಗಳ ಸೇವೆ ಅಂತ್ಯಗೊಂಡಿತು. ಬರಾಕ್ ಒಬಾಮ ಜನವರಿಯಲ್ಲಿ ಅಧ್ಯಕ್ಷ ಪದವಿ ಅಲಂಕರಿಸುವಾಗ ಇದೇ ಹಾರ್ಟ್‌ಮ್ಯಾಕ್ಸ್ ಕಂಪೆನಿ ಅವರಿಗೆ ಅಂದದ-ಸೊಬಗಿನ ಸೂಟು ಹೊಲಿದುಕೊಟ್ಟಿತ್ತು.

2009: ಸೀಸ ಲೇಪಿತ ಆಟಿಕೆಗಳನ್ನು ಚೀನಾದಿಂದ ಆಮದು ಮಾಡಿಕೊಂಡ ತಪ್ಪಿಗಾಗಿ ಅಮೆರಿಕದ ಆಟಿಕೆ ತಯಾರಿಕಾ ಕಂಪೆನಿ ಮೆಟ್ಟಲ್ ಇಂಕ್‌ಗೆ 2.3 ದಶಲಕ್ಷ ಡಾಲರ್ ದಂಡ ವಿಧಿಸಲಾಯಿತು. ಚೀನಾದಿಂದ ಅಪಾಯಕಾರಿ ಉತ್ಪನ್ನಗಳನ್ನು ಆಮದು ಮಾಡಿದ್ದ ಮೆಟ್ಟಲ್ ಮತ್ತು ಇದರ ಸಹವರ್ತಿ ಕಂಪೆನಿ ಫಿಶರ್ ಪ್ರೈಸ್‌ಗೆ ಅಮೆರಿಕದ ಗ್ರಾಹಕ ಉತ್ಪನ್ನ ರಕ್ಷಣಾ ಆಯೋಗ ದಂಡ ವಿಧಿಸಿತು. ಪ್ಲಾಸ್ಟಿಕ್, ಕಾರುಗಳು, ಬಾರ್ಬಿ ಬೊಂಬೆಗೆ ಬಳಸುವ ವಸ್ತುಗಳು ಸೇರಿದಂತೆ ಹಲವು ಆಟಿಕೆಗಳನ್ನು 2007 ರಲ್ಲಿ ಕಂಪೆನಿ ಚೀನಾದಿಂದ ಆಮದು ಮಾಡಿಕೊಂಡಿತ್ತು.

2009: ರೇಡಿಯೊ, ಸೆಲ್ ಫೋನ್, ಇಂಟರ್‌ನೆಟ್ ಹಾಗೂ ಟಿ.ವಿಗಳ ಕಾರ್ಯನಿರ್ವಹಣೆಗೆ ಅತಿ ವೇಗವಾಗಿ ಸಂಕೇತಗಳನ್ನು ಸೆಳೆಯುವ ನಿಸ್ತಂತು ವಾಹಕದ ಅಲ್ಟ್ರಾ ಬ್ರಾಡ್‌ಬ್ಯಾಂಡ್ ಸಾಧನವೊಂದನ್ನು ಭಾರತೀಯ ಮೂಲದ ಅಮೆರಿಕ ವಾಸಿ ಎಂಜಿನಿಯರ್‌ಗಳು ಅಭಿವೃದ್ಧಿಪಡಿಸಿದರು. ಎಂಐಟಿಯ ಸಹಾಯಕ ಪ್ರಾಧ್ಯಾಪಕ ರಾಹುಲ್ ಸರ್ಪೇಶ್ಕರ್ ಹಾಗೂ ಅವರ ವಿದ್ಯಾರ್ಥಿ ಸೌಮ್ಯಜಿತ್ ಮಂಡಲ್ ಅವರು ಇದನ್ನು 'ಚಿಪ್' ರೂಪದಲ್ಲಿ ಅಭಿವೃದ್ಧಿಪಡಿಸಿದವರು. ಈ ಚಿಪ್‌ಗಳು ಈಗ ಲಭ್ಯವಿರುವ ಮಾನವ ನಿರ್ಮಿತ ರೇಡಿಯೊ ತರಂಗಾಂತರಗಳನ್ನು ಸೆಳೆಯುವ ಸಂಕೇತಗಳಿಗಿಂತಲೂ ವೇಗವಾಗಿ ಕಾರ್ಯ ನಿರ್ವಹಿಸುತ್ತವೆ. ಈ ತಂತ್ರಜ್ಞಾನವು ಶಬ್ದದ ಅಲೆಗಳನ್ನು ವಿದ್ಯುತ್ ಸಂಕೇತಗಳಾಗಿ ಪರಿವರ್ತಿಸಿ ಅವುಗಳನ್ನು ಮಿದುಳಿಗೆ ರವಾನಿಸುವ ರಸಾಯನಿಕ ಕ್ರಿಯೆಯ ತದ್ರೂಪ.

2008: ಸರ್ಬಿಯಾದ ಅನಾ ಇವನೋವಿಕ್ ಅವರು ತಮ್ಮ ವೃತ್ತಿ ಜೀವನದ ಚೊಚ್ಚಲ ಗ್ರ್ಯಾಂಡ್ ಸ್ಲಾಮ್ ಕಿರೀಟವನ್ನು ಮುಡಿಗೇರಿಸಲು ಯಶಸ್ವಿಯಾದರು. ಪ್ಯಾರಿಸ್ಸಿನಲ್ಲಿ ನಡೆದ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಅವರು ಹೊಸ ವಿಕ್ರಮ ಸಾಧಿಸಿದರು. ಈದಿನ ನಡೆದ ಫೈನಲ್ ಪಂದ್ಯದಲ್ಲಿ ಇವನೋವಿಕ್ 6-4, 6-3ರಲ್ಲಿ ರಷ್ಯಾದ ದಿನಾರ ಸಫಿನಾ ಅವರನ್ನು ಮಣಿಸಿದರು. ಕಳೆದ ಬಾರಿ ಇಲ್ಲಿ ಫೈನಲ್ನಲ್ಲಿ ಎಡವಿದ್ದ ಸರ್ಬಿಯನ್ ಚೆಲುವೆ ಈ ಬಾರಿ ಯಾವುದೇ ತಪ್ಪೆಸಗಲಿಲ್ಲ.

2007: ಕೊಲ್ಲಿ ರಾಷ್ಟ್ರಗಳಲ್ಲಿ ಅಪರೂಪವಾದ ಚಂಡಮಾರುತ ಓಮನ್ ಮೇಲೆ ಅಪ್ಪಳಿಸಿದ ಪರಿಣಾಮವಾಗಿ ಮೈಸೂರು ಜಿಲ್ಲೆ ಬಿಸಲವಾಡಿ ಗ್ರಾಮದ ರಂಗಸ್ವಾಮಿ ಅಲಿಯಾಸ್  ಪ್ರಕಾಶನ್ (26) ಸೇರಿ  15 ಜನ ಮೃತರಾಗಿ 8 ಭಾರತೀಯರು ಕಣ್ಮರೆಯಾದರು.

2007: ರಾಜಕೀಯ ಪ್ರಭಾವ ಹೊಂದಿದ ಕೆಲವು ವ್ಯಕ್ತಿಗಳು ಬೆಂಗಳೂರಿನ ಅನೇಕ ಕಡೆ 795 ಕೋಟಿ ರೂಪಾಯಿ ಮೌಲ್ಯದ 54.32 ಎಕರೆ ಸರ್ಕಾರಿ ಭೂಮಿ ಕಬಳಿಸಿರುವುದನ್ನು ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿನ ಸರ್ಕಾರಿ ಭೂಮಿ ಒತ್ತುವರಿ ಕುರಿತು ತನಿಖೆ ನಡೆಸಿದ ಜಂಟಿ ಸದನ ಸಮಿತಿ ಪತ್ತೆ ಹಚ್ಚಿತು.

2007: ಹಿಂದಿನ ರಾಣೆ ಸರ್ಕಾರದಲ್ಲಿ ವಿದ್ಯುತ್ ಸಚಿವರಾಗಿದ್ದ ದಿಗಂಬರ ಕಾಮತ್ ಅವರನ್ನು ಗೋವಾದ ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವ ಮೂಲಕ ಕಾಂಗ್ರೆಸ್ ಪಕ್ಷದ ಆಯ್ಕೆಯ ಕಸರತ್ತು ಈದಿನ ನಡುರಾತ್ರಿ ಕೊನೆಗೊಂಡಿತು.

2007: ಇಂಗ್ಲಿಷ್ ಹಾಗೂ ಭಾರತೀಯ ಭಾಷೆಗಳಾದ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂಗಳಲ್ಲಿ ಸರ್ಚ್ ಎಂಜಿನ್ ಸೇವಾ ಸೌಲಭ್ಯ ಹೊಂದಿರುವ ದೇಶದ ಪ್ರತಿಷ್ಠಿತ ಗುರೂಜಿ ಡಾಟ್ ಕಾಮ್ ಸಂಸ್ಥೆಯು ಕನ್ನಡ ಭಾಷೆಗೂ ತನ್ನ ಸೇವಾ ವ್ಯಾಪ್ತಿಯನ್ನು ವಿಸ್ತರಿಸಿತು.

2007: ಅಸ್ಥಿಮಚ್ಚೆಯ ಕಸಿಗಿಂತ ಹೊಕ್ಕಳಬಳ್ಳಿ ಕಸಿಯಿಂದ ರಕ್ತದ ಕ್ಯಾನ್ಸರ್ ರೋಗಿಗಳು ಬದುಕಿ ಉಳಿಯುವ ಸಾಧ್ಯತೆಗಳು ಹೆಚ್ಚು ಎಂದು ಹ್ಯೂಸ್ಟನ್ ರಕ್ತ ಮತ್ತು ಅಸ್ಥಿ ಮಚ್ಚೆ (ಎಲುವಿನ ಕೊಬ್ಬು) ಕಸಿ ಸಂಶೋಧನಾ ಕೇಂದ್ರದ ಸಂಶೋಧನೆ ಬಹಿರಂಗಪಡಿಸಿತು.

2007: ಅಮೆರಿಕದ ವಿಜ್ಞಾನಿಗಳು ಮಹಿಳೆಯೊಬ್ಬರ ದೇಹದಲ್ಲಿ ಬರ್ಟೊನೆಲ್ಲಾ ರೊಚೆನಿಮೆ ಎಂಬ ಅತ್ಯಂತ ಅಪಾಯಕಾರಿ ಬ್ಯಾಕ್ಟೀರಿಯಾ ಪತ್ತೆ ಮಾಡಿದರು. ವೈದ್ಯ ವಿಜ್ಞಾನದಲ್ಲಿ ಈ ಬಗೆಯ ಸೂಕ್ಷ್ಮಜೀವಿ ಪತ್ತೆ ಮಾಡಿದ್ದು ಇದೇ ಮೊದಲು ಎನ್ನಲಾಗಿದೆ.

2007: ಜಗತ್ತಿನ ಶ್ರೀಮಂತ ರಾಷ್ಟ್ರಗಳು 2050ರ ಹೊತ್ತಿಗೆ ಹಸಿರು ಮನೆಗೆ ಹಾನಿ ಉಂಟು ಮಾಡುವ ಅನಿಲಗಳ ಪ್ರಮಾಣವನ್ನು ಅರ್ಧದಷ್ಟು ಕಡಿಮೆ ಮಾಡಲು ಬರ್ಲಿನ್ನಿನಲ್ಲಿ ನಡೆದ ಜಿ-8 ರಾಷ್ಟ್ರಗಳ ಸಭೆಯಲ್ಲಿ ನಿರ್ಧರಿಸಿದವು.

 2006: ಸುಪ್ರೀಂಕೋರ್ಟಿನಲ್ಲಿ ಮುಖಭಂಗ ಉಂಟು ಮಾಡಿರುವ ನೈಸ್ ಕಂಪೆನಿಗೆ `ಕರ್ನಾಟಕ ಮೂಲ ಸೌಲಭ್ಯ ಅಭಿವೃದ್ಧಿ ವಿಧೇಯಕ' ಮೂಲಕ ತಿರುಗೇಟು ನೀಡಲು ಮತ್ತು ಮಸೂದೆಯನ್ನು ಜೂನ್ 19ರಂದು ಆರಂಭವಾಗುವ ಮುಂಗಾರು ಅಧಿವೇಶನದಲ್ಲಿ ಮಂಡಿಸಲು ಸಚಿವ ಸಂಪುಟದ ತುರ್ತು ಸಭೆ ಒಪ್ಪಿಗೆ ನೀಡಿತು.

2006:  ರಾಯ್ ಬರೇಲಿ ಕ್ಷೇತ್ರದಿಂದ, ಲೋಕಸಭೆಗೆ ಸೋನಿಯಾ ಗಾಂಧಿ ಆಯ್ಕೆಯನ್ನು ಪ್ರಶ್ನಿಸಿ ಸಂತೋಷಕುಮಾರ್ ಶ್ರೀವಾತ್ಸವ ನೇತೃತ್ವದಲ್ಲಿ ವಾರಣಾಸಿಯ ಹತ್ತು ಜನ ವಕೀಲರು ಸುಪ್ರೀಂ ಕೋರ್ಟಿಗೆ ರಿಟ್ ಅರ್ಜಿ ಸಲ್ಲಿಸಿದರು. ಸಂವಿಧಾನದ 102 (1) (ಡಿ) ಕಲಂ ಪ್ರಕಾರ ಯಾವುದೇ ವ್ಯಕ್ತಿಯು ವಿದೇಶದೊಂದಿಗೆ ಸಂಬಂಧ ಹೊಂದಿದ್ದರೆ ಅಥವಾ ವಿದೇಶಕ್ಕೆ ನಿಷ್ಠರಾಗಿದ್ದರೆ ಅಂಥವರು ಸಂಸತ್ತಿನ ಯಾವುದೇ ಸದನದ ಸದಸ್ಯರಾಗಿ ಆಯ್ಕೆಯಾಗಲು ಅರ್ಹರಲ್ಲ; ಸೋನಿಯಾ ಗಾಂಧಿ ಅವರು ನಾಮಪತ್ರ ಸಲ್ಲಿಕೆಯ ಸಂದರ್ಭ ಇಟಲಿಯಲ್ಲಿ ತಮ್ಮ ಪೂರ್ವಜರ ಮನೆಯೊಂದು ತಮ್ಮ ಹೆಸರಿನಲ್ಲಿ ಇರುವುದಾಗಿ ತಿಳಿಸಿದ್ದಾರೆ. ಆದ್ದರಿಂದ ಅವರಿನ್ನೂ ಆ ದೇಶಕ್ಕೆ ಅಂಟಿಕೊಂಡವರು. ಹೀಗಾಗಿ ಅವರ ಆಯ್ಕೆಯನ್ನು ಅನೂರ್ಜಿತ ಗೊಳಿಸಬೇಕು  ಎಂದು ಅರ್ಜಿದಾರರು ಸುಪ್ರೀಂ ಕೋರ್ಟಿಗೆ ಮನವಿ ಮಾಡಿಕೊಂಡರು.

1998: ನಲ್ವತ್ತನಾಲ್ಕು ದಶಲಕ್ಷ ಡಾಲರ್ ಸಾಲದೊಂದಿಗೆ ಭಾರತ ವಿಶ್ವಬ್ಯಾಂಕಿನ ಅತಿ ಹೆಚ್ಚು ಸಾಲ ಪಡೆದ ರಾಷ್ಟ್ರಗಳ ಪಟ್ಟಿಗೆ ಸೇರಿತು.

1997: ತಂಜಾವೂರಿನ ದೇವಾಲಯದ ಯಾಗಶಾಲೆಯಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ 37 ಜನ ಮೃತರಾದರು.

1982: ದಕ್ಷಿಣ ಲೆಬನಾನಿನಲ್ಲಿ ಇರುವ ಪ್ಯಾಲೆಸ್ಟೈನಿನ ಭದ್ರಕೋಟೆ ಬಿವೋಪೋರ್ಟ್ ಕ್ಯಾಸೆಲ್ ನೆಲೆಯನ್ನು ಇಸ್ರೇಲಿ ಪಡೆಗಳು ತಮ್ಮ ಕೈವಶ ಪಡಿಸಿಕೊಂಡವು.

1974: ಭಾರತೀಯ ಟೆನಿಸ್ ಆಟಗಾರ ಮಹೇಶ ಭೂಪತಿ ಜನ್ಮದಿನ.  ಜಪಾನಿನ ರಿಕಾ ಹಿರಾಕಿ ಜೊತೆ 1999ರಲ್ಲಿ ನಡೆದ ಪಂದ್ಯದಲ್ಲಿ ಫ್ರೆಂಚ್ ಓಪನ್ ಮಿಕ್ಸೆಡ್ ಡಬಲ್ಸ್ ಕ್ರೌನ್ ಗೆದ್ದುಕೊಳ್ಳುವ ಮೂಲಕ ಗ್ರ್ಯಾಂಡ್ ಸ್ಲಾಮ್ ಟೈಟಲನ್ನು ಪಡೆದ ಪ್ರಪ್ರಥಮ ಭಾರತೀಯ ಟೆನಿಸ್ ಆಟಗಾರ ಇವರು.

1956: ಸಾಹಿತಿ ಬೊಳುವಾರು ಐ.ಕೆ. ಜನನ.

1940: ಪ್ರಾಣಿ, ಪಕ್ಷಿ, ಮರಗಿಡ, ಮಣ್ಣು- ಮುಗಿಲು ಮುಂತಾದ ಪ್ರಕೃತಿಯ ನೈಸರ್ಗಿಕ ದೃಶ್ಯಗಳನ್ನು ತಮ್ಮ ಕಲೆಯ ಮೂಲಕ ಅಭಿವ್ಯಕ್ತಿ ಪಡಿಸಿದ ಚಿತ್ರ ಕಲಾವಿದ ವಿಜಯ ಸಿಂಧೂರ ಅವರು ಗಂಗಪ್ಪ- ಬಸಮ್ಮ ದಂಪತಿಯ ಮಗನಾಗಿ ವಿಜಾಪುರ ಜಿಲ್ಲೆಯ ಬನಹಟ್ಟಿಯ ಶ್ರೀಮಂತ ಕುಟುಂಬದಲ್ಲಿ ಜನಿಸಿದರು.

1929: ರೋಮ್ ನಲ್ಲಿ ಲ್ಯಾಟರನ್ ಒಪ್ಪಂದದ ಪ್ರತಿಗಳ ವಿನಿಮಯದೊಂದಿಗೆ ಸಾರ್ವಭೌಮ ವ್ಯಾಟಿಕನ್ ಸಿಟಿ ರಾಷ್ಟ್ರ ಅಸ್ತಿತ್ವಕ್ಕೆ ಬಂದಿತು. ಈ ಒಪ್ಪಂದಕ್ಕೆ ಬೆನಿಟೋ ಮುಸ್ಸೋಲಿನಿ ಇಟಲಿ ಸರ್ಕಾರದ ಪರವಾಗಿ ಮತ್ತು ಪೋಪ್ ಅವರ ಪರವಾಗಿ ಕಾರ್ಡಿನಲ್ಲಿ ಸೆಕ್ರೆಟರಿ ಪೀಟ್ರೋ ಗ್ಯಾಸ್ಪರ್ರಿ ಫೆಬ್ರುವರಿ 11ರಂದು ಸಹಿ ಹಾಕಿದ್ದರು.

1928: ಸಾಹಿತಿ ಕುಲಕರ್ಣಿ ಬಿಂದು ಮಾಧವ ಜನನ.

1921: ಲಘು ಸಂಗೀತ, ಭಾವಗೀತೆಗಳ ಹಾಡುಗಾರಿಕೆಯನ್ನು ಖ್ಯಾತಿಗೆ ತಂದ ದೇವಂಗಿ ಚಂದ್ರಶೇಖರ ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ದೇವಂಗಿಯಲ್ಲಿ ಈದಿನ ಜನಿಸಿದರು.

1911: ಸಾಹಿತಿ ಕುಕ್ಕಿಲ ಕೃಷ್ಣಭಟ್ಟ ಜನನ.

1893: ದಕ್ಷಿಣ ಆಫ್ರಿಕದಲ್ಲಿ ಪ್ರಥಮ ದರ್ಜೆ ಬೋಗಿಯ ಟಿಕೆಟ್ ಪಡೆದುಕೊಂಡಿದ್ದ ಮಹಾತ್ಮ ಗಾಂಧಿಯವರನ್ನು (ಆಗ ಅವರು ಕೇವಲ ಮೋಹನದಾಸ ಕರಮಚಂದ ಗಾಂಧಿ) ರೈಲುಗಾಡಿಯಿಂದ ಹೊರತಳ್ಳಲಾಯಿತು. ಈ ಘಟನೆ ಅವರ ಬದುಕಿನ ಪ್ರಮುಖ ಘಟನೆಯಾಗಿ ಮಾರ್ಪಟ್ಟು `ಅಹಿಂಸಾತ್ಮಕ ಸತ್ಯಾಗ್ರಹ' ಸಿದ್ಧಾಂತದ ಹುಟ್ಟಿಗೆ ಕಾರಣವಾಯಿತು.

1868: ಚಾರ್ಲ್ಸ್ ರೆನ್ನೀ ಮೆಕಿಂತೋಶ್ (1868-1928) ಜನ್ಮದಿನ. ಸ್ಕಾಟ್ ಲ್ಯಾಂಡಿನ ಶಿಲ್ಪಿ ಹಾಗೂ ವಿನ್ಯಾಸಕಾರರಾದ ಇವರು ಗ್ರೇಟ್ ಬ್ರಿಟನ್ನಿನಲ್ಲಿ ಕಲೆ ಮತ್ತು ಕುಶಲ ಕಲೆಗಳ ಚಳವಳಿಯನ್ನು ಬೆಳೆಸಿದವರಲ್ಲಿ ಪ್ರಮುಖ ವ್ಯಕ್ತಿ.

(
ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement