My Blog List

Monday, August 31, 2009

ಇಂದಿನ ಇತಿಹಾಸ History Today ಆಗಸ್ಟ್ 28


ಇಂದಿನ ಇತಿಹಾಸ

ಆಗಸ್ಟ್ 28

ಅಮೆರಿಕದ ಈಜುಗಾರ್ತಿ ಜಾನೆಟ್ ಇವಾನ್ಸ್ ಜನ್ಮದಿನ. ನಾಲ್ಕು ಒಲಿಂಪಿಕ್ ಸ್ವರ್ಣ ಪದಕಗಳನ್ನು ಗೆದ್ದ ಈಕೆ ಈಜುಗಾರಿಕೆಯಲ್ಲಿನ ತನ್ನ ವೇಗದಿಂದಾಗಿ ಖ್ಯಾತಿ ಪಡೆದವರು. 
 2015: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ನವದೆಹಲಿಯಲ್ಲಿ 1965ರ ಭಾರತ- ಪಾಕಿಸ್ತಾನ ಸಮರದ 50ನೇ ವರ್ಷಾಚರಣೆ ಸಂದರ್ಭದಲ್ಲಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ‘1965ನೇ ವರ್ಷದ ಸಮರದ 50ನೇ ವರ್ಷಾಚರಣೆ ಸಂದರ್ಭದಲ್ಲಿ ನಾನು ನಮ್ಮ ತಾಯ್ನಾಡಿಗಾಗಿ ಹೋರಾಡಿದ ಎಲ್ಲಾ ಧೈರ್ಯಶಾಲಿ ಯೋಧರಿಗೂ ತಲೆಬಾಗುತ್ತೇನೆ’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದರು. ‘ನಮ್ಮ ಸಶಸ್ತ್ರ ಯೋಧರ ಧೈರ್ಯ ಮತ್ತು ಶೌರ್ಯ ಸ್ಪೂರ್ತಿದಾಯಕ. ಪ್ರತಿಯೊಂದು ಅಡ್ಡಿ ಆತಂಕ ಎದುರಾದಾಗಲೂ ಅವರು ಭಾರತದ ಏಕತೆ ಮತ್ತು ಸಮಗ್ರತೆಯನ್ನು ರಕ್ಷಿಸಿದ್ದಾರೆ’ ಎಂದು ಪ್ರಧಾನಿ ಹೇಳಿದರು. ಈ ಮಧ್ಯೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಅಮರ ಜ್ಯೋತಿ ಜವಾನ್​ಗೆ ತೆರಳಿ ಹುತಾತ್ಮ ಯೋಧರ ಸ್ಮಾರಕದಲ್ಲಿ ತಮ್ಮ ಶ್ರದ್ಧಾಂಜಲಿ ಸಲ್ಲಿಸಿದರು.
2015: ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ಮತ್ತೆ ನಡೆಸಿದ ಕದನ ವಿರಾಮ ಉಲ್ಲಂಘನೆಗೆ ಮೂವರು ನಾಗರಿಕರು ಹತರಾಗಿ, ಇತರ 16 ಮಂದಿ ಗಾಯಗೊಂಡರು.  ಆರ್.ಎಸ್.ಪುರ ವಿಭಾಗದಲ್ಲಿ ಪಾಕಿಸ್ತಾನಿ ಪಡೆಗಳು ಭಾರಿ ಪ್ರಮಾಣದಲ್ಲಿ ಅಪ್ರಚೋದಿತ ಗುಂಡುದಾಳಿ ಮತ್ತು ಫಿರಂಗಿ ದಾಳಿ ನಡೆಸಿದವು. ಪಾಕಿಸ್ತಾನದ ಕಡೆಯ ಫಿರಂಗಿದಾಳಿಗೆ ಭಾರತೀಯ ಗಡಿ ಭದ್ರತಾ ಪಡೆಗಳು (ಬಿಎಸ್​ಎಫ್) ಸೂಕ್ತ ಉತ್ತರ ನೀಡಿದವು. ಈಮಧ್ಯೆ, ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿಯು ಭಾರತದ ಹೈಕಮೀಷನರ್ ಅವರನ್ನು ಕರೆಸಿ ಕದನ ವಿರಾಮ ಉಲ್ಲಂಘನೆಗಾಗಿ ಪ್ರತಿಭಟನೆ ಸಲ್ಲಿಸಿದರು. ಸಿಯಾಲ್ ಕೋಟ್ ವರದಿಯ ಪ್ರಕಾರ ಕಾಶ್ಮೀರದ ಭಾರತ ಮತ್ತು ಪಾಕಿಸ್ತಾನ ಗಡಿ ನಿಯಂತ್ರಣ ರೇಖೆಯಲ್ಲಿ ಸಂಭವಿಸಿದ ಗುಂಡಿನ ಘರ್ಷಣೆಗಳಲ್ಲಿ ಪಾಕಿಸ್ತಾನದ  ಕನಿಷ್ಠ 9 ನಾಗರಿಕರು ಮೃತರಾಗಿ, ಇತರ ಹಲವರು ಗಾಯಗೊಂಡರು ಎಂದು ಪಾಕಿಸ್ತಾನದ ‘ಡಾನ್’ ವರದಿ ಮಾಡಿತು.

2015: ನವದೆಹಲಿ: ಜಾಗತಿಕ ಮಟ್ಟದಲ್ಲಿ ತೈಲ ಹಾಗೂ ವಸ್ತುಗಳ ಬೆಲೆ ಕುಸಿತವು ಭಾರತಕ್ಕೆ ಲಾಭದಾಯಕ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ನವದೆಹಲಿಯಲ್ಲಿ ಹೇಳಿದರು. ಜಾಗತಿಕ ತೈಲ ಹಾಗೂ ಸಾಮಗ್ರಿಗಳ ಬೆಲೆ ಕುಸಿತವು ಸಾರ್ವಜನಿಕ ವೆಚ್ಚಕ್ಕಾಗಿ ಹಣ ಉಳಿತಾಯ ಮಾಡುವುದು ಎಂದು ಅವರು ಹೇಳಿದರು..

2015: ಮುಂಬೈ: ಪ್ರಮುಖ ಬೆಳವಣಿಗೆಯೊಂದರಲ್ಲಿ ಮುಂಬೈ ಪೊಲೀಸರು ಶೀನಾ ಬೋರಾ ದೇಹವನ್ನು ಹುಗಿಯಲಾಗಿದ್ದ ಜಾಗದಲ್ಲಿ ಅಗೆದು ಕೆಲವು ಎಲುಬುಗಳು, ತಲೆಬುರುಡೆ ಮತ್ತು ಸೂಟ್​ಕೇಸ್ ಪತ್ತೆ ಮಾಡಿದರು. ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿನ ಪೆನ್​ನಲ್ಲಿ ಠಿಕಾಣಿ ಹೂಡಿದ  ಪೊಲೀಸರು ಇನ್ನಷ್ಟು ಅವಶೇಷಗಳಿಗಾಗಿ ಶೋಧ ನಡೆಸಲು ಕಾದರು. 2012ರ ಮೇ ತಿಂಗಳಲ್ಲಿ ರಾಯಗಢ ಪೊಲೀಸರು ತಲೆಗೂದಲು, ಹಲ್ಲು ಮತ್ತು ಕೆಲವು ಎಲುಬು ಮಾದರಿಗಳನ್ನು ಮುಂಬೈಯ ಜೆಜೆ ಆಸ್ಪತ್ರೆಗೆ ಕಳುಹಿಸಿದ್ದರು. 2013ರ ಡಿಸೆಂಬರ್​ನಲ್ಲಿ ಆಸ್ಪತ್ರೆಯು ಮೃತ ವ್ಯಕ್ತಿಯ ವಯಸ್ಸು ಮತ್ತು ಲಿಂಗ ಮತ್ತು ಸಾವಿನ ಕಾರಣ ಪತ್ತೆಗೆ ಈ ಅವಶೇಷಗಳು ಸಾಕಾಗುವುದಿಲ್ಲ ಎಂದು ಪೊಲೀಸರಿಗೆ ತಿಳಿಸಿತ್ತು. ರಾಯಗಢ ಪೊಲೀಸರು ಬಳಿಕ
ಆಸ್ಪತ್ರೆಯ ಪತ್ರಕ್ಕೆ ಉತ್ತರಿಸಿರಲೇ ಇಲ್ಲ. ಶುಕ್ರವಾರ ಅವಶೇಷಗಳನ್ನು ಮುಂಬೈ ಪೊಲೀಸರಿಗೆ ಹಸ್ತಾಂತರಿಸಲಾಯಿತು.  ಈ ಮಧ್ಯೆ ಇಂದ್ರಾಣಿಯ ಮಾಜಿ ಗಂಡನ ಪೊಲೀಸ್ ಕಸ್ಟಡಿಯನ್ನು ಆಗಸ್ಟ್ 31ರವರೆಗೆ ನ್ಯಾಯಾಲಯವು ವಿಸ್ತರಿಸಿತು.

2015: ರಾಯಪುರ: ಮಾವೋವಾದಿ ನಕ್ಸಲೀಯರ ಸಂದೇಶ ವಾಹಕರಾಗಿ ಕೆಲಸ ಮಾಡುತ್ತಾ ಅವರಿಗೆ ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡು ಪೂರೈಸುತ್ತಿದ್ದುದಕ್ಕಾಗಿ ಇಬ್ಬರು ವ್ಯಾಪಾರಿಗಳು ಸೇರಿದಂತೆ 13 ಮಂದಿಗೆ ವಿಶೇಷ ನ್ಯಾಯಾಲಯವೊಂದು 7 ವರ್ಷಗಳ ಕಠಿಣ ಸಜೆ ವಿಧಿಸಿತು. ವ್ಯಾಪಾರಿ ನೀರಜ್ ಛೋಪ್ರಾ, ಸಂಬಂಧಿ ಧರ್ಮೇಂದ್ರ ಛೋಪ್ರಾ, ಮೊಹ್​ಪಾಲ್ ಯಾನೆ ಸಂತೋಷ ಧ್ರುವ, ಬಲಿರಾಮ್ ಉಸೆಂಡಿ, ಚೈತ್ರಂ ದರ್ರೊ, ಫೋಲ್​ಸಿಂಗ್ ನಾಗ್, ಸುಖನಾಥ್ ನರೇಟಿ, ಬದ್ರಿ ಗವಡೆ, ಮೋಹನ್ ಸಿಂಗ್ ಧ್ರುವ, ರಾಮ್ ಕುಮಾರ್ ಮಾಂಡವಿ, ದಶರಥ ಮಾಂಡವಿ, ಲಕ್ಷ್ಮಣ್ ಉಸೆಂಡಿ ಮತ್ತು ರವಿ ಕಡಿಯಂ ಅವರಿಗೆ ವಿಶೇಷ ನ್ಯಾಯಾಧೀಶ ಅಬ್ದುಲ್ ಝುಹೀದ್ ಖುರೇಷಿ ಶಿಕ್ಷೆ ವಿಧಿಸಿದ್ದಾರೆ ಎಂದು ಪಬ್ಲಿಕ್ ಪ್ರಾಸೆಕ್ಯೂಟರ್ ಸುರೇಶ ಪ್ರಸಾದ್ ಶರ್ಮಾ ಹೇಳಿದರು. ಎಲ್ಲಾ ಆರೋಪಿಗಳೂ ಮಾವೋವಾದಿ ಸಂದೇಶವಾಹಕರಾಗಿ ಕೆಲಸ ಮಾಡುತ್ತಾ ಅವರಿಗಾಗಿ ಶಸ್ತ್ರಾಸ್ತ್ರ, ಮದ್ದುಗುಂಡು ಸರಬರಾಜು ಸರಬರಾಜು ಮಾಡುತ್ತಿದ್ದುದು ಸಾಬೀತಾಗಿದೆ ಎಂದು ಅವರು ಹೇಳಿದರು. ರಾಜ್ಯ ಗುಪ್ತಚರ ಶಾಖೆ ಮತ್ತು ಪೊಲೀಸರು ಕಳೆದ ವರ್ಷ ಜನವರಿ ಮತ್ತು ಫೆಬ್ರುವರಿಯಲ್ಲಿ ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಗೆ ರಾಯಪುರ ಮತ್ತು ಬಸ್ತಾರ್ ಪ್ರದೇಶದ ಪ್ರತ್ಯೇಕ ಸ್ಥಳಗಳಿಂದ ಸಾಗಣೆ ಮತ್ತು ಹಣಕಾಸು ಬೆಂಬಲ ನೀಡುತ್ತಿದ್ದುದಕ್ಕಾಗಿ 13 ಜನರನ್ನು ಬಂಧಿಸಿದ್ದರು. 2014ರ ಜನವರಿ 15ರಂದು ಮೊಹ್​ಪಾಲ್, ಬಲಿರಾಂ ಮತ್ತು ಚೈತ್ರಮ್ ಅವರನ್ನು ರಾಯಪುರದಿಂದ ಕಂಕೇರ್​ಗೆ ನಕ್ಸಲೀಯರಿಗಾಗಿ ಶಸ್ತ್ರಾಸ್ತ್ರಗಳನ್ನು ಒಯ್ಯತ್ತಿದ್ದಾಗ ಅಭಂಪುರ್ ಪ್ರದೇಶದಲ್ಲಿ ಬಂಧಿಸಿದ್ದರು.

2015: ನವದೆಹಲಿ: ಟೋಲ್ ಅಡೆತಡೆಗಳನ್ನು ತೆಗೆದುಹಾಕಬೇಕೆಂಬ ತಮ್ಮ ಬೇಡಿಕೆಯನ್ನು ಸರ್ಕಾರವು ಅಂಗೀಕರಿಸದ ಕಾರಣಕ್ಕಾಗಿ ಅಕ್ಟೋಬರ್ 1ರಿಂದ ಅನಿರ್ದಿಷ್ಟ ಕಾಲ ರಾಷ್ಟ್ರವ್ಯಾಪಿ ಲಾರಿ ಮುಷ್ಕರ ಆರಂಭಿಸಲಾಗುವುದು ಎಂದು ಟ್ರಕ್ ಚಾಲಕ - ಮಾಲೀಕರು ಪ್ರಕಟಿಸಿದರು.
2015: ನವದೆಹಲಿ: ತಮ್ಮ ವಿರುದ್ಧ ಹೂಡಲಾಗಿದ್ದ ಅತ್ಯಾಚಾರ ಪ್ರಕರಣ ಸುಳ್ಳೆಂದು ಸಾಬೀತಾದ ಕಾರಣ, ದೂರುದಾರರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಆರೋಪಿತರಿಗೆ ನ್ಯಾಯಾಲಯ ಅನುವು ಮಾಡಿಕೊಟ್ಟಿತು. ಇತ್ತೀಚಿನ ದಿನಗಳಲ್ಲಿ ಅತ್ಯಾಚಾರದ ಸುಳ್ಳು ಆರೋಪಗಳು ದಾಖಲಾಗುತ್ತಿರುವ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ನ್ಯಾಯಾಲಯದ ಈ ತೀರ್ಮಾನ ಹೆಚ್ಚಿನ ಮಹತ್ವಪಡೆದುಕೊಂಡಿತು. ಮದುವೆಯಾಗುವುದಾಗಿ ನಂಬಿಸಿ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆಂದು ಆರೋಪಿಸಿ ಮಹಿಳೆಯೊಬ್ಬರು ದೆಹಲಿಯ ಮುಖರ್ಜಿ ನಗರದ ನಿವಾಸಿಯೊಬ್ಬರ ವಿರುದ್ಧ ದೂರು ದಾಖಲಿಸಿದ್ದರು. ಆದರೆ ಪ್ರಕರಣದ ವಿಚಾರಣೆ ವೇಳೆ ತಮ್ಮ ಸಮ್ಮತಿಯ ಮೇಲೆಯೇ ತಮ್ಮಿಬ್ಬರ ನಡುವೆ ಲೈಂಗಿಕ ಸಂಬಂಧ ಬೆಳೆದಿದ್ದಾಗಿ ಮಹಿಳೆ ಹೇಳಿಕೆ ನೀಡಿದ್ದರು. ಅವರ ಈ ಹೇಳಿಕೆಯನ್ನು ಪರಿಗಣಿಸಿದ ನ್ಯಾಯಾಲಯ, ಆರೋಪಿಯನ್ನು ಖುಲಾಸೆಗೊಳಿಸಿ ಆದೇಶಿಸಿತು. ಇದೇ ವೇಳೆ ಅತ್ಯಾಚಾರದ ಸುಳ್ಳು ಆರೋಪದಿಂದಾಗಿ ಆ ವ್ಯಕ್ತಿ ಸಾಕಷ್ಟು ಮಾನಸಿಕ ಹಿಂಸೆ ಅನುಭವಿಸಿದ್ದಾನೆ. ಜತೆಗೆ ಸಾರ್ವಜನಿಕವಾಗಿ ಅವಮಾನಿತನಾಗಿದ್ದಾನೆ. ಈ ಎಲ್ಲಾ ಕಾರಣಗಳಿಂದಾಗಿ ಮಹಿಳೆಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಆ ವ್ಯಕ್ತಿಗೆ ಅವಕಾಶ ಮಾಡಿಕೊಡುತ್ತಿರುವುದಾಗಿ ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ತಿಳಿಸಿದರು. ಪ್ರಕರಣದ ವಿಚಾರಣೆ ವೇಳೆ ದೂರುದಾರರೇ ತಟಸ್ಥರಾಗಿ, ಆರೋಪಿಯನ್ನು ಖುಲಾಸೆಗೊಳಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಇದರಿಂದಾಗಿ ಗೌರವಪೂರ್ಣವಾಗಿ ಆರೋಪದಿಂದ ಖುಲಾಸೆಗೊಳ್ಳಲು ಆರೋಪಿತರಿಗೆ ಅವಕಾಶ ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೂರುದಾರರ ನಡತೆಯನ್ನು ಗಂಭೀರವಾಗಿ ಪರಿಗಣಿಸುವುದು ಅನಿವಾರ್ಯವಾಗಿದೆ. ಆದ್ದರಿಂದ, ದೂರುದಾರರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಆರೋಪಿತರಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದರು.

2015: ನವದೆಹಲಿ: ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಪ್ರಕರಣದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಹೆಚ್ಚುವರಿ ಆಪಾದಿತರನ್ನಾಗಿ ಕರೆಸಲು ಸಮನ್ಸ್ ಹೊರಡಿಸುವಂತೆ ಕೋರಿ ಜಾರ್ಖಂಡ್​ನ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಅವರು ಮಾಡಿರುವ ಮನವಿಯ ವಿಚಾರಣೆಯನ್ನು ವಿಶೇಷ ನ್ಯಾಯಾಲಯ ಸೆಪ್ಟೆಂಬರ್ 2ರಂದು ನಡೆಸುವುದಾಗಿ ಪ್ರಕರಣದ ವಿಚಾರಣೆ ಕಾಲದಲ್ಲಿ ನ್ಯಾಯಾಲಯ ತಿಳಿಸಿತು. ಉದ್ಯಮಿ, ಮಾಜಿ ಸಂಸತ್ ಸದಸ್ಯ ನವೀನ್ ಜಿಂದಾಲ್, ಮಧುಕೋಡಾ ಮತ್ತು ಇತರ 13 ಮಂದಿ ವಿರುದ್ಧ ಹೊರಿಸಲಾಗಿರುವ ಆಪಾದನೆಗಳಿಗೆ ಸಂಬಂಧಿಸಿದಂತೆ ವಾದಗಳ ಆರಂಭಕ್ಕೆ ವಿಶೇಷ ನ್ಯಾಯಾಲಯವು ಅಕ್ಟೋಬರ್ 15ನೇ ದಿನಾಂಕವನ್ನು ನಿಗದಿ ಪಡಿಸಿತು.

2015: ಟ್ರಿಪೋಲಿ:: ಆಫ್ರಿಕಾದ ವಲಸಿಗರಿದ್ದ ದೋಣಿಯೊಂದು ಮುಳುಗಿದ ಪರಿಣಾಮ 200 ಮಂದಿ ಮೃತರಾದರು.  ವಲಸಿಗರು ಇಟಲಿಯತ್ತ ಪ್ರಯಾಣಿಸುತ್ತಿದ್ದ ವೇಳೆ ಲಿಬಿಯಾದ ಸಮುದ್ರದಲ್ಲಿ ಮುಳುಗಿದ್ದಾಗಿ ಲಿಬಿಯಾದ ಅಧಿಕಾರಿಗಳು ತಿಳಿಸಿದರು. ದೋಣಿಯಲ್ಲಿ ಸುಮಾರು 400 ಮಂದಿ ಪ್ರಯಾಣಿಸುತ್ತಿದ್ದರು. ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರು ತುಂಬಿಕೊಂಡಿದ್ದೇ ದೋಣಿ ಮುಳುಗಲು ಕಾರಣವೆಂದು ಹೇಳಲಾಯಿತು. ಸುಮಾರು 200 ಜನರನ್ನು ರಕ್ಷಿಸಲಾಯಿತು. ಇವರ ಪೈಕಿ 147 ಮಂದಿಯನ್ನು ಅಕ್ರಮ ವಲಸಿಗರ ಆಶ್ರಯ ತಾಣದಲ್ಲಿ ಇರಿಸಿ, ಸೂಕ್ತ ಚಿಕಿತ್ಸೆ ಕೊಡಿಸಲಾಯಿತು ಎಂದು ಟ್ರಿಪೋಲಿಯ  ಅಧಿಕಾರಿಗಳು ಹೇಳಿದರು.

2015: ಇಸ್ಲಾಮಾಬಾದ್: ಪಾಕಿಸ್ತಾನಕ್ಕೆ ಯಾವುದಾದರೂ ಬಾಹ್ಯ ಬೆದರಿಕೆ ಇದ್ದರೆ ಅದು ಭಾರತದಿಂದ ಮಾತ್ರ ಎಂದು ಪಾಕಿಸ್ತಾನದ ಸಂಸದೀಯ ರಕ್ಷಣಾ ಸಮಿತಿ ಹೇಳಿರುವುದಾಗಿ ಡಾನ್ ಪತ್ರಿಕೆ ವರದಿ ಮಾಡಿತು. ಇತ್ತೀಚೆಗೆ ಪಾಕ್​ನ ಸೇನಾಪಡೆಯ ಜಾಯಿಂಟ್ ಸ್ಟಾಫ್ ಕೇಂದ್ರ ಸ್ಥಾನಕ್ಕೆ ಸಂಸದೀಯ ರಕ್ಷಣಾ ಸಮಿತಿ ಸದಸ್ಯರು ಭೇಟಿ ಕೊಟ್ಟ ಸಂದರ್ಭದಲ್ಲಿ ಭಾರತದಿಂದ ಪಾಕಿಸ್ತಾನಕ್ಕೆ ಅಪಾಯ ಇರುವ ಬಗ್ಗೆ ಸೇನಾಧಿಕಾರಿಗಳು ಆತಂಕವನ್ನು ಹಂಚಿಕೊಂಡರು. ಪಾಕಿಸ್ತಾನದ ರಕ್ಷಣಾ ವ್ಯವಸ್ಥೆಯಲ್ಲಿ ಜಾಯಿಂಟ್ ಸ್ಟಾಫ್ ಉನ್ನತ ರಕ್ಷಣಾ ಸಂಸ್ಥೆಯಾಗಿ ಕಾರ್ಯನಿರ್ವಹಿಸುವುದರ ಜತೆಗೆ ಅಣ್ವಸ್ತ್ರಗಳ ಭದ್ರತೆ ಹಾಗೂ ನಿರ್ವಹಣೆಯ ಹೊಣೆಯನ್ನು ನಿಭಾಯಿಸುತ್ತಿರುವುದಾಗಿ ಮುಷಾಯಿದ್ ಹುಸೇನ್ ನೇತೃತ್ವದ ಸಂಸದೀಯ ಸಮಿತಿಗೆ ಲೆಫ್ಟಿನೆಂಟ್ ಜನರಲ್ ರಶದ್ ಮೆಹಮೂದ್ ಮಾಹಿತಿ ನೀಡಿದರು. ಕಳೆದ ಕೆಲವಾರು ವರ್ಷಗಳಲ್ಲಿ ಭಾರತ ಸುಮಾರು 100 ಶತಕೋಟಿ ಡಾಲರ್ ಮೊತ್ತದ ಶಸ್ತ್ರಾಸ್ತ್ರಗಳನ್ನು ಖರೀದಿಸಿದೆ. ಇವುಗಳ ಪೈಕಿ ಶೇ.80ರಷ್ಟು ಶಸ್ತ್ರಾಸ್ತ್ರಗಳು ಪಾಕಿಸ್ತಾನವನ್ನು ಗುರಿಯಾಗಿಟ್ಟುಕೊಂಡು ದಾಳಿ ಮಾಡಲೆಂದೇ ಮೀಸಲಾಗಿದೆ. ಇದರ ಜತೆಗೆ ಮುಂದಿನ 5 ವರ್ಷಗಳ ಅವಧಿಯಲ್ಲಿ ಶಸ್ತ್ರಾಸ್ತ್ರಗಳ ಖರೀದಿಗಾಗಿ ಭಾರತ ಈಗಾಗಲೆ ಸಾಕಷ್ಟು ಹಣವನ್ನು ವ್ಯಯಿಸುತ್ತಿರುವುದಾಗಿ ಹೇಳಿದರು. ಈ ಮಧ್ಯೆ ಮುಂದಿನ ಹತ್ತು ವರ್ಷಗಳ ಅವಧಿಯಲ್ಲಿ ಪಾಕಿಸ್ತಾನ 3ನೇ ಅತಿದೊಡ್ಡ ಅಣ್ವಸ್ತ್ರಗಳ ದಾಸ್ತಾನು ಹೊಂದಿರುವ ರಾಷ್ಟ್ರವಾಗಲಿರುವುದಾಗಿ ಅಮೆರಿಕದ ತಜ್ಞರು ವರದಿ ನೀಡಿದರು. ಈ ವರದಿಯ ಪ್ರಕಾರ ಪ್ರತಿ ವರ್ಷ 20 ಅಣ್ವಸ್ತ್ರಗಳನ್ನು ಖರೀದಿಸಿ, ದಾಸ್ತಾನು ಮಾಡಿಕೊಳ್ಳುತ್ತಿದೆ. ಭಾರತ ಕೂಡ ಅಣ್ವಸ್ತ್ರ ಬಲಾಢ್ಯ ರಾಷ್ಟ್ರವಾಗಿರುವುದು ಇದಕ್ಕೆ ಕಾರಣ. ಪಾಕಿಸ್ತಾನದ ಬಳಿ ಸಂಸ್ಕರಿತ ಯುರೇನಿಯಂ ದಾಸ್ತಾನು ಹೆಚ್ಚಾಗಲಿರುವ ಕಾರಣ ಮುಂಬರುವ ದಿನಗಳಲ್ಲಿ ಪಾಕಿಸ್ತಾನದ ಅಣ್ವಸ್ತ್ರ ಬಲ ಮತ್ತಷ್ಟು ವೃದ್ಧಿಸುವುದು ನಿಶ್ಚಿತವೆಂದು ತಜ್ಞರು ಅಭಿಪ್ರಾಯಪಟ್ಟರು..

2015: ಬ್ಯಾಂಕಾಕ್: ಸಮುದ್ರದ ತೆರೆ ಬಂದು ಅಪ್ಪಳಿಸುವಾಗಲೇ ಒಂದು ರೀತಿಯ ಭಯ ಸಾಮಾನ್ಯ. ಅದೇ ರೀತಿ ಭಯ ಹುಟ್ಟಿಸುವ ಮಾಹಿತಿಯನ್ನು ಇದೀಗ ನಾಸಾ ಹೊರಗೆಡವಿದೆ. ಅದೇನೆಂದರೆ, ಸಮುದ್ರ ನೀರಿನ ಮಟ್ಟ ದಿನದಿಂದ ದಿನಕ್ಕೆ ಹೆಚ್ಚುತ್ತಿದೆಯಂತೆ. ಕಳೆದ ನೂರು ವರ್ಷಗಳ ಅವಧಿಯಲ್ಲಿ ಒಂದು ಮೀಟರ್​ನಷ್ಟು ಹೆಚ್ಚಿದೆ ಎಂದು ಹೇಳಿದೆ. ಈ ಕುರಿತು ಪ್ರತಿಕ್ರಿಯಿಸಿರುವ ವಿಜ್ಞಾನಿ ಚಾರ್ಲೆಸ್ ಬೊಲ್ಡೆನ್ ಇದು ಪ್ರಕೃತಿಯ ಸಾಮಾನ್ಯ ಪ್ರಕ್ರಿಯೆ ಎಂದು ಹೇಳಿದರು. ಇದಾದ ಬಳಿಕ ನಾಸಾ ವಿಜ್ಞಾನಿಗಳು ಇದಕ್ಕೆ ಪ್ರತಿಯಾಗಿ ಮತ್ತೆ ವಾದ ಮಂಡಿಸಿದ್ದು, 1992ರಿಂದ ಈಚೆ ಸಾಗರ ನೀರಿನ ಮಟ್ಟ ಹೆಚ್ಚೂಕಡಿಮೆ 8 ಸೆಂ.ಮೀ.ನಷ್ಟು ಹೆಚ್ಚಿದೆ. ಇದಕ್ಕೆ ಕಾರಣ ತಿಳಿದುಕೊಳ್ಳುವ ನಿಟ್ಟಿನಲ್ಲಿ ನಡೆಸಿದ ಅಧ್ಯಯನದಿಂದ ಬಿಸಿ ನೀರು ಹೆಚ್ಚುತ್ತಿರುವುದು ಮತ್ತು ಹಿಮ ಕರಗುತ್ತಿರುವುದು ಎನ್ನುವುದು ತಿಳಿದಿದೆ ಎಂದರು. ಏಷ್ಯಾದ ಸಮುದ್ರ ತೀರದಲ್ಲಿ ಹೆಚ್ಚೂಕಡಿಮೆ 150 ಮಿಲಿಯನ್ ಜನರು ಸಮುದ್ರ ನೀರಿನ ಮಟ್ಟದಿಂದ ಕೇವಲ ಒಂದು ಮೀಟರ್ ಎತ್ತರದಲ್ಲಿ ವಾಸವಿದ್ದಾರೆ. ಇದು ಮುಂಬರುವ ದಿನಗಳಲ್ಲಿ ಅಪಾಯ ತಂದೊಡ್ಡುವ ಸಾಧ್ಯತೆ ಇದೆ ಎನ್ನುವುದು ಎಚ್ಚರಿಕೆಯ ಸಂದೇಶ ಎನ್ನಲಾಯಿತು.

2008: ಪುದುಚೇರಿಯ ಕೈಗಾರಿಕೆ ಹಾಗೂ ವಿದ್ಯುತ್ ಖಾತೆ ಸಚಿವ ವೈದ್ಯಲಿಂಗಂ ಅವರನ್ನು ಪುದುಚೇರಿಯ ನೂತನ ಮುಖ್ಯಮಂತ್ರಿಯಾಗಿ ರಾಜ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷವು ಆಯ್ಕೆ ಮಾಡಿತು. ರಂಗಸ್ವಾಮಿ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ಕೆಲವೇ ಕ್ಷಣಗಳಲ್ಲಿ ಸಭೆ ಸೇರಿದ ಶಾಸಕರು ವೈದ್ಯಲಿಂಗಂ ಅವರನ್ನು ಮುಖ್ಯಮಂತ್ರಿಯಾಗಿ ಒಮ್ಮತದಿಂದ ಆರಿಸಿದರು.

2007: ಕ್ರೋಯೇಷಿಯಾದಲ್ಲಿ ನಡೆದ ವಿಶ್ವಕಪ್ ಶೂಟಿಂಗ್ ಚಾಂಪಿಯನ್ ಶಿಪ್ ಕ್ರೀಡಾಕೂಟದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿ ಚಿನ್ನದ ಪದಕ ಗೆದ್ದ ಮಾನವ್ ಜಿತ್ ಸಿಂಗ್ ಸಂಧು ಅವರು ಪ್ರತಿಷ್ಠಿತ `ರಾಜೀವ್ ಗಾಂಧಿ ಖೇಲ್ ರತ್ನ' ಪ್ರಶಸ್ತಿಗೆ ಆಯ್ಕೆಯಾದರು. ಬೆಂಗಳೂರಿನ `ಟಾಟಾ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿ'ಯಲ್ಲಿ ತರಬೇತಿ ಪಡೆಯುತ್ತಿರುವ ಪಿಎಸ್ ಪಿಬಿ ಆಟಗಾರ ಚೇತನ್ ಆನಂದ್ ಅವರು ಬ್ಯಾಡ್ಮಿಂಟನ್ ರಂಗದಲ್ಲಿ ಈ ವರ್ಷ ತೋರಿದ ಸಾಧನೆಗಾಗಿ `ಅರ್ಜುನ' ಪ್ರಶಸ್ತಿಗೆ ಆಯ್ಕೆಯಾದರು.

2007: ಮಾತೆ ಮಹಾದೇವಿ ಅವರ `ಬಸವ ವಚನ ದೀಪ್ತಿ' ವಚನ ಸಂಗ್ರಹದ ಮೇಲೆ ರಾಜ್ಯ ಸರ್ಕಾರ ಹೇರಿದ ನಿಷೇಧವನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್ ವಚನಗಳ ಅಂಕಿತನಾಮ `ಕೂಡಲಸಂಗಮದೇವ' ವನ್ನು `ಲಿಂಗದೇವ' ಎಂದು ಬದಲಾಯಿಸುವ ಅಧಿಕಾರ ಲೇಖಕರಿಗಿಲ್ಲ ಎಂದು ಹೇಳಿತು. `ಬಸವಣ್ಣನವರು ಕನಸಿನಲ್ಲಿ ಬಂದು ವಚನಗಳ ಅಂಕಿತ ನಾಮವನ್ನು `ಲಿಂಗದೇವ' ಎಂದು ಬದಲಾಯಿಸುವಂತೆ ತಿಳಿಸಿದ್ದರು ಎಂಬ ಮಾತೆ ಮಹಾದೇವಿ ಅವರ ಹೇಳಿಕೆ ನಂಬಿಕೆಗೆ ಯೋಗ್ಯವಲ್ಲ' ಎಂದು ನ್ಯಾಯಮೂರ್ತಿಗಳಾದ ಸಿ.ಕೆ.ಠಕ್ಕರ್ ಮತ್ತು ಮಾರ್ಕಾಂಡೇಯ ಖಟ್ಜು ಅವರನ್ನೊಳಗೊಂಡ ನ್ಯಾಯಪೀಠ ಅಭಿಪ್ರಾಯಪಟ್ಟಿತು. ಮಾತೆಮಹಾದೇವಿ ಸಂಪಾದಿಸಿ 1995ರಲ್ಲಿ ಪ್ರಕಟಿಸಿದ್ದ ಪರಿಷ್ಕೃತ ವಚನಗಳ ಸಂಗ್ರಹವನ್ನು ರಾಜ್ಯ ಸರ್ಕಾರ ನಿಷೇಧಿಸಿತ್ತು. ರಾಜ್ಯ ಸರ್ಕಾರದ ನಿರ್ಧಾರವನ್ನು 1998ರಲ್ಲಿ ಎತ್ತಿಹಿಡಿದಿದ್ದ ಹೈಕೋರ್ಟ್ ` ಈ ರೀತಿ ಅಂಕಿತನಾಮದ ಬದಲಾವಣೆ ಸಮರ್ಥನಿಯ ಅಲ್ಲ' ಎಂದು ಹೇಳಿತ್ತು.

2007: ಬೆಂಗಳೂರು ನಗರದ ಪ್ರತಿಷ್ಠಿತ ಬಡಾವಣೆಯಾದ ಕೋರಮಂಗಲದ ಫೋರಂ ಸಮೀಪದಲ್ಲಿ ಬಿಗ್ ಬಜಾರ್ ಮಳಿಗೆ ಇರುವ ಕಟ್ಟಡ ಸೇರಿದಂತೆ ಹಲವು ಮಾಲ್ಗಳ ನಿರ್ಮಾಣಕ್ಕೆ 8.11 ಎಕರೆ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿರುವುದನ್ನು ಶಾಸಕ ಎ.ಟಿ. ರಾಮಸ್ವಾಮಿ ನೇತೃತ್ವದ ಜಂಟಿ ಸದನ ಸಮಿತಿ ಪತ್ತೆ ಹಚ್ಚಿತು. `ಇಲ್ಲಿನ ಪ್ರತಿಷ್ಠಿತ `ಮಾಲ್' ಗಳು ಸೇರಿ ಸುಮಾರು 325 ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಜಮೀನು ಒತ್ತುವರಿಯಾಗಿದೆ' ಎಂದು ರಾಮಸ್ವಾಮಿ ತಿಳಿಸಿದರು.

2007: ಸೇನಾ ಮುಖ್ಯಸ್ಥರಾಗಿದ್ದುಕೊಂಡೇ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಲು ಉದ್ದೇಶಿಸಿದ ಪಾಕಿಸ್ಥಾನ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ನಿಲುವನ್ನು ವಿರೋಧಿಸಿ ಮಾಹಿತಿ ತಂತ್ರಜ್ಞಾನ ಸಚಿವ ಇಷಾಕ್ ಖಾಕ್ವಾನಿ ರಾಜೀನಾಮೆ ನೀಡಿದರು.

2007: ದಕ್ಷಿಣ ಆಫ್ರಿಕಾದ ಮಾಜಿ ಟೆಸ್ಟ್ ಕ್ರಿಕೆಟಿಗ ರಾಯ್ ಮೆಕ್ ಲೀನ್ (77) ಜೋಹಾನ್ಸ್ ಬರ್ಗಿನಲ್ಲಿ ನಿಧನರಾದರು. ನಲವತ್ತು ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಗಳನ್ನು ಆಡಿದ್ದ ಮೆಕ್ ಲೀನ್ 30ಕ್ಕೂ ಹೆಚ್ಚು ಸರಾಸರಿಯಲ್ಲಿ ರನ್ ಗಿಟ್ಟಿಸಿದ್ದರು. 1955ರರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇನಿಂಗ್ಸ್ ಒಂದರಲ್ಲಿ ಅಜೇಯ 76 ರನ್ ಗಳಿಸುವ ಮೂಲಕ ತಮ್ಮ ತಂಡವನ್ನು ಅವರು ಗೆಲ್ಲಿಸಿಕೊಟ್ಟಿದ್ದರು. 1960ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡ ತಂಡದ ಪರವಾಗಿ ಉತ್ತಮ ಪ್ರದರ್ಶನನ ನೀಡಿದ ಮೆಕ್ ಲೀನ್ 1961ರಲ್ಲಿ ವಿಸ್ಡನ್ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿಗೂ ಭಾಜನರಾಗಿದ್ದರು. ರಗ್ಬಿ ಆಟಗಾರರಾಗಿಯೂ ಹೆಸರು ಮಾಡಿದ್ದರು.

2006: ಒರಿಸ್ಸಾ ರಾಜ್ಯದ ಅಂಗುಲ್ ಜಿಲ್ಲೆಯು ತಲ್ಚೇರಿನಲ್ಲಿ ಸ್ಥಾಪಿಸಲಾಗಿರುವ ದೇಶದ ಅತಿ ದೊಡ್ಡ ಉಷ್ಣವಿದ್ಯುತ್ ಸ್ಥಾವರವನ್ನು ಪ್ರಧಾನಿ ಮನಮೋಹನ್ ಸಿಂಗ್ ದೇಶಕ್ಕೆ ಸಮರ್ಪಿಸಿದರು. ಮಳೆಯ ಕಾರಣದಿಂದ ಸ್ಥಾವರ ಸ್ಥಳಕ್ಕೆ ತೆರಳಲು ಅಸಾಧ್ಯವಾದ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರನ್ಸ್ ಮೂಲಕ ಈ ಕಾರ್ಯವನ್ನು ಅವರು ರಾಜಧಾನಿ ಭುವನೇಶ್ವರದಿಂದಲೇ ನೆರವೇರಿಸಿದರು.

2006: ಹತ್ತನೇ ದಕ್ಷಿಣ ಏಷ್ಯಾ ಫೆಡರೇಷನ್ (ಎಸ್ ಎಎಫ್) ಕ್ರೀಡಾಕೂಟ ಮುಕ್ತಾಯ. 118 ಚಿನ್ನ, 69 ಬೆಳ್ಳಿ, 47 ಕಂಚಿನ ಪದಕ ಸೇರಿ ಒಟ್ಟು 234 ಪದಕಗಳನ್ನು ತಮ್ಮ ಉಡಿಗೆ ಹಾಕಿಕೊಳ್ಳುವ ಮೂಲಕ ಭಾರತ ಪದಕ ಪಟಿಯಲ್ಲಿ ಅಗ್ರಸ್ಥಾನ ಗಳಿಸಿತು. ಪಾಕಿಸ್ಥಾನವು 43 ಚಿನ್ನ, 44 ಬೆಳ್ಳಿ, 71 ಕಂಚು ಸೇರಿ 158 ಪದಕ ಗೆದ್ದರೆ, ಶ್ರೀಲಂಕೆಯು 37 ಚಿನ್ನ, 63 ಬೆಳ್ಳಿ, 78 ಕಂಚು ಸೇರಿ 178 ಪದಕ ಗೆದ್ದುಕೊಂಡಿತು.

2001: ಇಂಟೆಲ್ ಕಾರ್ಪೊರೇಷನ್ ತನ್ನ ಅತಿ ವೇಗದ `ಪೆಂಟಿಯಮ್ 4' ಮೈಕ್ರೊಪ್ರೊಸೆಸರನ್ನು ಬಿಡುಗಡೆ ಮಾಡಿತು. ಹೊಸ ಪೆಂಟಿಯಮ್ 4 ಸೆಕೆಂಡಿಗೆ ಎರಡು ಶತಕೋಟಿ ಸೈಕಲಿನಷ್ಟು ಅಂದರೆ ಎರಡು ಗಿಗ್ಹರ್ಟ್ ಸಾಮರ್ಥ್ಯ ಹೊಂದಿದೆ.

1996: ವಿಚ್ಛೇದನಾ ಡಿಕ್ರಿ ಜಾರಿಯೊಂದಿಗೆ ಬ್ರಿಟನ್ನಿನ ರಾಜಕುಮಾರ ಚಾರ್ಲ್ಸ್ ಮತ್ತು ರಾಜಕುಮಾರಿ ಡಯಾನಾ ಅವರ 15 ವರ್ಷಗಳ ದಾಂಪತ್ಯ ಕೊನೆಗೊಂಡಿತು.

1971: ಅಮೆರಿಕದ ಈಜುಗಾರ್ತಿ ಜಾನೆಟ್ ಇವಾನ್ಸ್ ಜನ್ಮದಿನ. ನಾಲ್ಕು ಒಲಿಂಪಿಕ್ ಸ್ವರ್ಣ ಪದಕಗಳನ್ನು ಗೆದ್ದ ಈಕೆ ಈಜುಗಾರಿಕೆಯಲ್ಲಿನ ತನ್ನ ವೇಗದಿಂದಾಗಿ ಖ್ಯಾತಿ ಪಡೆದವರು.

1963: ವಾಷಿಂಗ್ಟನ್ ಡಿ.ಸಿ.ಯಲ್ಲಿ ನಡೆದ ಶಾಂತಿಯುತ ನಾಗರಿಕ ಹಕ್ಕುಗಳ ರ್ಯಾಲಿಯಲ್ಲಿ 2 ಲಕ್ಷ ಮಂದಿ ಪಾಲ್ಗೊಂಡರು. ಲಿಂಕನ್ ಸ್ಮಾರಕದ ಎದುರು ನಡೆದ ರ್ಯಾಲಿಯನ್ನು ಉದ್ದೇಶಿಸಿ ಡಾ. ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಭಾಷಣ ಮಾಡಿದರು. ಅವರ ಭಾಷಣ `ನನಗೆ ಕನಸಿದೆ' ಭಾಷಣ ಎಂದೇ ಖ್ಯಾತಿ ಪಡೆಯಿತು.

1801: ಫ್ರೆಂಚ್ ಆರ್ಥಿಕ ತಜ್ಞ ಹಾಗೂ ಗಣಿತ ತಜ್ಞ ಆಂಟೋನಿ-ಆಗಸ್ಟಿನ್ ಕೊರ್ನೊ (1801-1877) ಜನ್ಮದಿನ. ಗಣಿತ-ಅರ್ಥಶಾಸ್ತ್ರವನ್ನು ರೂಪಿಸಿದ ಮೊದಲಿಗರಲ್ಲಿ ಈತನೂ ಒಬ್ಬ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Sunday, August 30, 2009

ಇಂದಿನ ಇತಿಹಾಸ History Today ಆಗಸ್ಟ್ 27


ಇಂದಿನ ಇತಿಹಾಸ

ಆಗಸ್ಟ್ 27

ತೆಲುಗುದೇಶಂ ಪಕ್ಷದ ಒಡಕಿನ ಹಿನ್ನೆಲೆಯಲ್ಲಿ ಆಗಸ್ಟ್ 31ರ ಒಳಗೆ ಬಹುಮತ ಸಾಬೀತು ಪಡಿಸುವಂತೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಟಿ. ರಾಮರಾವ್ ಅವರಿಗೆ ರಾಜ್ಯಪಾಲರು ಸೂಚಿಸಿದರು.

2015: ಶ್ರೀನಗರ: ಪಾಕಿಸ್ತಾನದ ಉಗ್ರ ಮಹಮ್ಮದ್ ನವೀದ್ ಯಾಕೂಬ್ ಸೆರೆ ಸಿಕ್ಕ 22 ದಿನಗಳ ಬಳಿಕ, ಕಾಶ್ಮೀರದಲ್ಲಿ ಮತ್ತೋರ್ವ ಪಾಕ್ ಉಗ್ರನನ್ನು ಭಾರತೀಯ ಸೇನಾಪಡೆ ಬಲೆಗೆ ಕೆಡವಿತು. ಬಾರಾಮುಲ್ಲಾ ಜಿಲ್ಲೆಯ ರಫಿಯಾಬಾದ್ ಪ್ರದೇಶದ ಗಡಿಯಲ್ಲಿ ಉಗ್ರರ ತಂಡವಿದೆ ಎಂಬ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಸೇನಾಪಡೆ ಬುಧವಾರವೇ ಜಮ್ಮು-
ಕಾಶ್ಮೀರ ಪೊಲೀಸರ ಸಹಯೋಗದಲ್ಲಿ ಜಂಟಿ ಕಾರ್ಯಾಚರಣೆ ಆರಂಭಿಸಿತ್ತು. ಓರ್ವ ಉಗ್ರನನ್ನು ಹತ್ಯೆಗೈದ ನಂತರ ಕಾರ್ಯಾಚರಣೆ ಸ್ಥಗಿತಗೊಳಿ ಸಲು ನಿರ್ಧರಿಸಿದಾಗ ಮತ್ತಷ್ಟು ಉಗ್ರರು ಅಡಗಿರುವ ಸುಳಿವು ಸಿಕ್ಕಿತ್ತು. ಈದಿನ ಅಲ್ಲಿನ ಗುಹೆಯೊಂದರ ಬಳಿ ಸೈನಿಕರು ತೆರಳುತ್ತಿದ್ದಾಗ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಸೇನಾಪಡೆ ಪ್ರತಿದಾಳಿ ನಡೆಸಿ ದಾಗ ಮೂವರು ಉಗ್ರರು ಬಲಿಯಾದರೆ, ಓರ್ವ ಉಗ್ರ ಸೆರೆಸಿಕ್ಕಿದ.. ಕಾರ್ಯಾಚರಣೆ ವೇಳೆ ಓರ್ವ ಯೋಧನಿಗೂ ಗಾಯವಾಯಿತು. ಶ್ರೀನಗರದಲ್ಲಿ ವಿಚಾರಣೆ: ಬಂಧಿತ ಉಗ್ರ ಸಜ್ಜದ್ ಅಹ್ಮದ್​ನನ್ನು ಶ್ರೀನಗರಕ್ಕೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾಗ. ಆತನಿಗೆ ಅಬು ಉಬೇದ್ ಉಲ್ಲಾ ಎಂಬ ಕೋಡ್​ನೇಮ್ ನೀಡಲಾಗಿತ್ತು ಎಂಬ ಮಾಹಿತಿ ಹೊರಬಿದ್ದಿತು.

2008: ಜಮ್ಮುವಿನಲ್ಲಿ ಮೂವರು ಪಾಕ್ ಉಗ್ರರು ಮನೆಯೊಂದಕ್ಕೆ ನುಗ್ಗಿ ನಾಲ್ಕು ಮಕ್ಕಳು ಹಾಗೂ ಅವರ ತಾಯಿ ಮತ್ತು ಇಬ್ಬರು ಮಹಿಳೆಯರು ಸೇರಿ 7 ಜನರನ್ನು ಒತ್ತೆಯಾಗಿಟ್ಟುಕೊಂಡಿದ್ದ ಪ್ರಕರಣ 16 ಗಂಟೆಗಳ ಗುಂಡಿನ ಚಕಮಕಿ ಬಳಿಕ ಅಂತ್ಯಗೊಂಡಿತು. ಅಟ್ಟಹಾಸ ಮೆರೆದ ಉಗ್ರರು ಗುಂಡಿನ ಘರ್ಷಣೆಯ ಬಳಿಕ ಭದ್ರತಾ ಪಡೆ ಸಿಬ್ಬಂದಿಗೆ ಮಣಿದರು. ಗುಂಡಿನ ಕಾಳಗದಲ್ಲಿ ಮೂವರು ಉಗ್ರರೂ ಹತರಾದರು.

2007: ಚೆನ್ನೈಯ 57 ವರ್ಷದ ಅಳಗಪ್ಪನ್ ಅವರ ಪತ್ನಿ ವೃಂದಾ ಅವರು 56ರ ಹರೆಯದಲ್ಲಿ ದಾಂಪತ್ಯದ ಸುದೀರ್ಘ 26 ವರ್ಷದ ಬಳಿಕ ಅವಳಿ ಮಕ್ಕಳಿಗೆ ಜನ್ಮ ನೀಡಿದರು. ಈಕೆಗೆ ಋತುಚಕ್ರ ನಿಂತು 11 ವರ್ಷಗಳಾಗಿದ್ದು ಚೆನ್ನೈಯ ಅಕ್ಷಯ ಫರ್ಟಿಲಿಟಿ ಸೆಂಟರ್ ನೀಡಿದ ಚಿಕಿತ್ಸೆಯಿಂದ ಗರ್ಭವತಿಯಾದರು. ಸತತ ಒಂದು ಗಂಟೆ ಸಿಸೇರಿಯನ್ ಮೂಲಕ ಮಕ್ಕಳನ್ನು ಹೊರತೆಗೆಯಲಾಯಿತು. ವೈದ್ಯ ವಿಜ್ಞಾನದಲ್ಲಿ ಮೈಲಿಗಲ್ಲು ಎನಿಸಿರುವ ಇಂತಹ ಪ್ರಕರಣ ರಾಷ್ಟ್ರದಲ್ಲಿಯೇ ಮೊತ್ತ ಮೊದಲನೆಯದು ಎನ್ನಲಾಗಿದೆ.

2007: ದೆಹಲಿ ಕುತುಬ್ ಮಿನಾರ್ ಆವರಣದಲ್ಲಿರುವ ಪುರಾತನ ಕಬ್ಬಿಣದ ಸ್ತಂಭದ ಮೇಲಿರುವ ಬ್ರಾಹ್ಮಿ ಲಿಪಿಯ ಬರಹಗಳು ಆ ಸ್ತಂಭದ ಮೇಲೆ ಕೆತ್ತಿದ್ದಲ್ಲ. ಬದಲಾಗಿ ಅದರ ಮೇಲೆ ಲೋಹವನ್ನು ಪಡಿಯಚ್ಚಿನ ನೆರವಿನಿಂದ ಎರಕ ಹೊಯ್ದು ನಿರ್ಮಿಸಿದ್ದು ಎಂದು ವಿಜ್ಞಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.ಈ ಬರಹ ಈವರೆಗೆ ದೊರೆತಿರುವ ಗುಪ್ತರ ಕಾಲದ ಶಾಸನಗಳಲ್ಲೇ ಅತಿ ಹಿಂದಿನದು. 1,600 ವರ್ಷಗಳಿಂದ ಮಳೆ, ಗಾಳಿ ಹೊಡೆತಕ್ಕೆ ಸಿಲುಕಿದರೂ ಒಂದಿನಿತೂ ಸವೆದಿಲ್ಲ. ಕಬ್ಬಿಣದ ಸ್ತಂಭದಲ್ಲಿ ಆರು ಸಾಲುಗಳಲ್ಲಿ ಬರೆಯಲಾದ 227 ಅಕ್ಷರಗಳನ್ನು ಅಧ್ಯಯನ ಮಾಡಿದ ಕಾನ್ಪುರ ಐಐಟಿ `ಮೆಟಲರ್ಜಿಕಲ್ ಎಂಜಿನಿಯರಿಂಗ್' (ಲೋಹಶಾಸ್ತ್ರ) ವಿಭಾಗದ ವಿಜ್ಞಾನಿಗಳು, ಐದನೇ ಶತಮಾನದ ಆರಂಭದಲ್ಲಿ ಕಬ್ಬಿಣದ ಸ್ತಂಭ ಲಂಬವಾಗಿ ನಿಂತ ಸ್ಥಿತಿಯಲ್ಲೇ ಬ್ರಾಹ್ಮಿ ಲಿಪಿಯ ಅಕ್ಷರಗಳನ್ನು ಎರಕ ಹೊಯ್ಯಲಾಗಿದೆ ಎಂದು ಹೇಳಿದರು. ಅಕ್ಷರಗಳನ್ನು ಕೆತ್ತಿದ್ದರೆ ಅವುಗಳ ತುದಿ ಮೊಂಡಾಗಿರುತ್ತಿತ್ತು. ಗುಪ್ತರ ಕಾಲದ ಲೋಹಶಾಸ್ತ್ರಜ್ಞರ ನೈಪುಣ್ಯಕ್ಕೆ ಇದು ಸಾಕ್ಷಿ ಎಂದು ಅಧ್ಯಯನದ ನೇತೃತ್ವ ವಹಿಸಿದ್ದ ಆರ್. ಬಾಲಸುಬ್ರಹ್ಮಣ್ಯಂ ಹೇಳಿದರು.

2007: ಪೂರ್ವ ಉಗಾಂಡದ ಕಪ್ ಚೊರ್ವಾ ಬಳಿ ಸುಮಾರು 100ಕ್ಕೂ ಮೇಲ್ಪಟ್ಟು ಸೇನಾ ಸಿಬ್ಬಂದಿ ಪ್ರಯಾಣಿಸುತ್ತಿದ ಟ್ರಕ್, ರಸ್ತೆ ತಡೆಗೋಡೆಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ಸಂಭವಿಸಿದ ಅಪಘಾತದಲ್ಲಿ 70 ಕ್ಕೂ ಹೆಚ್ಚು ಮಂದಿ ಮೃತರಾದರು. ಇವರಲ್ಲಿ ಅಂದಾಜು 57 ಮಂದಿ ಸೇನಾ ಯೋಧರು.

2007: ಅಮೆರಿಕದ ಟೆನಿಸ್ ಅಂಗಣಗಳಲ್ಲಿ ದಿನೇದಿನೇ ಪುಟಿದೆದ್ದ ಭಾರತದ ಸಾನಿಯಾ ಮಿರ್ಜಾ ಸಿಂಗಲ್ಸ್ ಹಾಗೂ ಡಬಲ್ಸ್ ವಿಶ್ವ ರ್ಯಾಂಕಿಂಗ್ ಪಟ್ಟಿಗಳಲ್ಲಿ ಮೇಲೇರಿದರು. ಅವರು ಸಿಂಗಲ್ಸ್ ನಲ್ಲಿ 27ನೇ ಸ್ಥಾನಕ್ಕೆ ಹಾಗೂ ಡಬಲ್ಸ್ ನಲ್ಲಿ 20ನೇ ಸ್ಥಾನಕ್ಕೆ ಜಿಗಿದರು. ಪೈಲಟ್ ಪೆನ್ ಓಪನ್ ಡಬಲ್ಸಿನಲ್ಲಿ ಸಾನಿಯಾ ಹಾಗೂ ಮಾರಾ ಸ್ಯಾಂಟೆಂಜಲೊ ಚಾಂಪಿಯನ್ ಆದ ಕಾರಣ ಭಾರತದ ಆಟಗಾರ್ತಿ ರ್ಯಾಂಕಿಂಗಿನಲ್ಲಿ ನಾಲ್ಕು ಸ್ಥಾನ ಮೇಲೇರಿದರು.

2006: ಖ್ಯಾತ ಚಿತ್ರ ನಿರ್ದೇಶಕ ಹೃಶಿಕೇಶ್ ಮುಖರ್ಜಿ (84) ಮುಂಬೈಯಲ್ಲಿ ನಿಧನರಾದರು. ನಲವತ್ತಕ್ಕೂ ಹೆಚ್ಚು ಚಿತ್ರಗಳನ್ನು ಅವರು ನಿರ್ದೇಶಿಸಿದ್ದರು. ಆನಂದ್, ಖೂಬ್ ಸೂರತ್, ಗೋಲ್ ಮಾಲ್, ಅನುಪಮಾ ಅವರಿಗೆ ಹೆಸರು ತಂದು ಕೊಟ್ಟ ಹಿಂದಿ ಚಿತ್ರಗಳ ಪೈಕಿ ಮುಖ್ಯವಾದವು. ಅವರ ಬಹುತೇಕ ಚಿತ್ರಗಳಿಗೆ ಎಸ್.ಡಿ. ಬರ್ಮನ್ ಸಂಗೀತ ಸಂಯೋಜನೆ ಮಾಡಿದ್ದರು. ಪಿ.ಲಂಕೇಶ್ ಅವರ `ಪಲ್ಲವಿ' ಚಿತ್ರದ ಸಂಕಲನದ ಸಂದರ್ಭದಲ್ಲಿ ಸಹಕಾರ ನೀಡುವ ಮೂಲಕ ಅವರು ಕನ್ನಡ ಚಿತ್ರರಂಗದ ನಂಟನ್ನು ಹೊಂದಿದ್ದರು. `ಝೂಟ್ ಬೋಲೆ ಕವ್ವಾ ಕಾಟೆ' ಅವರ ನಿರ್ದೇಶನದ ಕೊನೆಯ ಚಿತ್ರ. `ತಲಾಶ್' ಎಂಬ ಟೆಲಿವಿಷನ್ ಧಾರಾವಾಹಿಯನ್ನೂ ನಿರ್ದೇಶಿಸಿದ್ದ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಸೇರಿದಂತೆ ಪ್ರಮುಖ ಪ್ರಶಸ್ತಿಗಳು ಸಂದಿದ್ದವು.

2006: ಭೂಮಿ ಮೇಲಿನ ಅತ್ಯಂತ ಹಿರಿಯ ವ್ಯಕ್ತಿ ಎಂಬುದಾಗಿ ಗಿನ್ನೆಸ್ ದಾಖಲೆಗಳ ಪುಸ್ತಕದಲ್ಲಿ ಸ್ಥಾನ ಗಿಟ್ಟಿಸಿದ್ದ 116 ವರ್ಷದ ಮರಿಯಾ ಎಸ್ತರ್ ದೆ ಕಾಪೊವಿಲ್ಲಾ ಎಂಬ ಮಹಿಳೆ ಈಕ್ವಡೋರಿನ ಕ್ವೆಟ್ಟಾದಲ್ಲಿ ನಿಧನಳಾದಳು. ನ್ಯೂಮೋನಿಯಾ ಪರಿಣಾಮವಾಗಿ ಆಕೆ ಮೃತಳಾದಳು ಎಂದು ಆಕೆಯ ಮೊಮ್ಮಗಳು ಕ್ಯಾಥರೀನ್ ಕಾಪೊವ್ಲಿಲಾ ಹೇಳಿದಳು. ಈ ಅಜ್ಜಿ 1889ರ ಸೆಪ್ಟೆಂಬರ್ 14ರಂದು ಜನಿಸಿದ್ದಳು. ಇದೇ ವರ್ಷ ಚಾರ್ಲಿನ್ ಮತ್ತು ಅಡಾಲ್ಫ್ ಹಿಟ್ಲರ್ ಜನಿಸಿದ್ದರು.

1995: ತೆಲುಗುದೇಶಂ ಪಕ್ಷದ ಒಡಕಿನ ಹಿನ್ನೆಲೆಯಲ್ಲಿ ಆಗಸ್ಟ್ 31ರ ಒಳಗೆ ಬಹುಮತ ಸಾಬೀತು ಪಡಿಸುವಂತೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಟಿ. ರಾಮರಾವ್ ಅವರಿಗೆ ರಾಜ್ಯಪಾಲರು ಸೂಚಿಸಿದರು.

1982: `ಸೋಯುಜ್ ಟಿ-7' ಗಗನನೌಕೆ ಭೂಮಿಗೆ ವಾಪಸಾಯಿತು.

1979: ಭಾರತದ ಕೊನೆಯ ವೈಸ್ ರಾಯ್ ಲಾರ್ಡ್ ಲೂಯಿ ಮೌಂಟ್ ಬ್ಯಾಟನ್ ಐರ್ಲೆಂಡ್ ಕರಾವಳಿಯಲ್ಲಿ ಸಂಭವಿಸಿದ ದೋಣಿ ಸ್ಫೋಟವೊಂದರಲ್ಲಿ ಅಸು ನೀಗಿದರು. ಐರಿಷ್ ರಿಪಬ್ಲಿಕನ್ ಆರ್ಮಿ ಈ ಕೃತ್ಯಕ್ಕೆ ತಾನು ಹೊಣೆ ಎಂದು ಘೋಷಿಸಿತು.

1975: ಇಥಿಯೋಪಿಯಾದ ಪದಚ್ಯುತ ದೊರೆ ಹೈಲೆ ಸೆಲಾಸ್ಸೀ ತಮ್ಮ 83ನೇ ವಯಸ್ಸಿನಲ್ಲಿ ಅಡ್ಡಿಸ್ ಅಬಾಬಾದಲ್ಲಿ ಮೃತರಾದರು. ಅಧಿಕೃತ ಮೂಲಗಳ ಪ್ರಕಾರ ಅವರದ್ದು ಸಹಜ ಸಾವು. ಆದರೆ ನಂತರ ಲಭಿಸಿದ ಸಾಕ್ಷ್ಯಗಳು ಅವರನ್ನು ಸೇನಾ ಆಡಳಿತದ ಆದೇಶದ ಮೇರೆಗೆ ನೇಣುಹಾಕಲಾಯಿತು ಎಂಬುದನ್ನು ಬೆಳಕಿಗೆ ತಂದವು.

1955: `ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡಿಸಿಜರ್ಡ್ಸ್ ನ 198 ಪುಟಗಳ ಮೊದಲ ಪ್ರತಿ ಸಿದ್ಧಗೊಂಡಿತು. ನೊರ್ರಿಸ್ ಮತ್ತು ರೋಸ್ ಮೆಕ್ ರೈಟರ್ ಹೆಸರಿನ ಅವಳಿ-ಜವಳಿಗಳು ಸಂಪಾದಿಸಿದ ಈ ಪುಸ್ತಕ ಭಾರೀ ಜನಪ್ರಿಯತೆ ಗಳಿಸಿತು. ಇಂಗ್ಲಿಷ್ ಆವೃತ್ತಿ 70 ರಾಷ್ಟ್ರಗಳಲ್ಲಿ ವಿತರಣೆಗೊಂಡರೆ ಇತರ 22 ಆವೃತ್ತಿಗಳು ವಿದೇಶಿ ಭಾಷೆಗಳಲ್ಲಿ ಪ್ರಕಟಗೊಂಡವು.

1939: ಜಗತ್ತಿನ ಮೊತ್ತ ಮೊದಲ ಜೆಟ್ ಪ್ರೊಪೆಲ್ಲರ್ ಚಾಲಿತ ವಿಮಾನ (ಏರ್ ಪ್ಲೇನ್) `ಹೀನ್ ಕೆಲ್ 178' ಉತ್ತರ ಜರ್ಮನಿಯ ಮರೀನ್ಚೆಯಲ್ಲಿ ಚೊಚ್ಚಲ ಹಾರಾಟ ನಡೆಸಿತು.

1928: ಪ್ಯಾರಿಸ್ಸಿನಲ್ಲಿ ಕ್ಲ್ಲೆಲಾಗ್-ಬ್ರೈಂಡ್ ಒಪ್ಪಂದಕ್ಕೆ ಸಹಿ ಮಾಡಲಾಯಿತು. ಯುದ್ಧಗಳನ್ನು ನಿಷೇಧಿಸಿದ ಈ ಒಪ್ಪಂದ ವಿವಾದಗಳನ್ನು ಶಾಂತಿಯುತವಾಗಿ ಇತ್ಯರ್ಥಪಡಿಸಲು ಅವಕಾಶ ಕಲ್ಪಿಸಿತು.

1910: ಕಲ್ಕತ್ತದ (ಈಗಿನ ಕೋಲ್ಕತ್ತಾ) ಮದರ್ ತೆರೇಸಾ (1910-1997) ಎಂದೇ ಖ್ಯಾತರಾದ ಏಗ್ನೆಸ್ ಗೊಂಕ್ಷಾ ಬೊಜಾಕ್ಷ್ ಹಿಯು ಅವರ ಜನ್ಮದಿನ.

1859: ಅಮೆರಿಕದ ಪೆನ್ಸಿಲ್ವೇನಿಯಾದ ಟಿಟುಸ್ವಿಲೆ ಬಳಿ ಮೊತ್ತ ಮೊದಲ ಬಾರಿಗೆ ಕೊರೆದ ತೈಲ ಬಾವಿ ಯಶಸ್ವಿಯಾಯಿತು.

1783: ಮೊತ್ತ ಮೊದಲ ಮಾನವ ರಹಿತಯ ಜಲಜನಕ ಬಲೂನ್ ಹಾರಾಟ ಯಶಸ್ವಿಯಾಯಿತು.

1604: ಅಮೃತಸರದ ಸ್ವರ್ಣಮಂದಿರದಲ್ಲಿ ಸಿಖ್ಖರ ಧರ್ಮಗ್ರಂಥ `ಗುರು ಗ್ರಂಥ ಸಾಹಿಬ್' ಪ್ರತಿಷ್ಠಾಪನೆ ನಡೆಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Saturday, August 29, 2009

ಇಂದಿನ ಇತಿಹಾಸ History Today ಆಗಸ್ಟ್ 26

ಇಂದಿನ ಇತಿಹಾಸ

ಆಗಸ್ಟ್ 26


`ಎಚ್ಚೆಸ್ಕೆ' ಎಂದೇ ಖ್ಯಾತರಾದ ಎಚ್. ಎಸ್. ಕೃಷ್ಣಸ್ವಾಮಿ ಅಯ್ಯಂಗಾರರು ಎಚ್. ಶ್ರೀನಿವಾಸ ಅಯ್ಯಂಗಾರ್- ಅಲಮೇಲಮ್ಮ ದಂಪತಿಯ ಮಗನಾಗಿ ಮೈಸೂರು ಜಿಲ್ಲೆಯ ಕೃಷ್ಣರಾಜ ನಗರ ತಾಲ್ಲೂಕಿನ ಹಳೆಯೂರು ಗ್ರಾಮದಲ್ಲಿ ಜನಿಸಿದರು.

ಕಾದಂಬರಿ ಹಾಗೂ ಇತರ ಹಲವಾರು ಕೃತಿಗಳನ್ನು ರಚಿಸಿದ ಎಚ್ಚೆಸ್ಕೆ ಹಾ.ಮಾ.ನಾ. ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾದವರು.

2015:ಅಹಮದಾಬಾದ್: ಶಿಕ್ಷಣ ಹಾಗೂ ಸರ್ಕಾರಿ ಉದ್ಯೋಗಗಳಲ್ಲಿ ಪಟೇಲ್ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ, ಗಲಭೆಯಲ್ಲಿ ಒಟ್ಟು 6 ಜನರು ಮೃತರಾದರು. ಪಟೇಲ್ ಸಮುದಾಯದ ಮುಖಂಡ ಹಾರ್ದಿಕರ್​ನ್ನು 25ರ ರಾತ್ರಿಯೇ ಬಿಡುಗಡೆಗೊಳಿಸಿದ್ದರೂ ಹೋರಾಟ ತೀವ್ರ ರೂಪ ಪಡೆಯಿತು. ರಾಜ್ಯ ಸಾರಿಗೆ ಸಂಸ್ಥೆಯ ನೂರಕ್ಕೂ ಅಧಿಕ ಬಸ್​ಗಳಿಗೆ
ಬೆಂಕಿ ಹಚ್ಚಲಾಯಿತು..ಪರಿಸ್ಥಿತಿ ತಿಳಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಕ್ಷಿಪ್ರ ಕಾರ್ಯಾಚರಣಾ ಪಡೆ, ಸಿಆರ್​ಪಿಎಫ್, ಬಿಎಸ್​ಎಫ್ ಯೋಧರನ್ನು ಕಳುಹಿಸಿತು. ಈದಿನ ಸಂಭವಿಸಿದ ಗಲಭೆಗೆ 6 ಜನರು ಬಲಿಯಾದರು. ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ, ಸಿಎಂ ಆನಂದಿಬೆನ್ ಪಟೇಲ್ ಶಾಂತಿ ಕಾಪಾಡುವಂತೆ ಮನವಿ ಮಾಡಿದರು. ಹಿಂದಿನ ರಾತ್ರಿ ಹಾರ್ದಿಕ್ ಬಂಧನದ ಸುದ್ದಿ ಹರಡುತ್ತಿದ್ದಂತೆಯೇ, ಪ್ರತಿಭಟನಾ ಪ್ರದರ್ಶನದಲ್ಲಿ ಪಾಲ್ಗೊಂಡ ಸಾವಿರಾರು ಮಂದಿ ಅಹಮದಾಬಾದ್ ನಗರದಲ್ಲಿ 20 ಕಡೆಗಳಲ್ಲಿ ಪೊಲೀಸರ ಮೇಲೆ ಕಲ್ಲುತೂರಾಟ, ವಾಹನಗಳಿಗೆ ಬೆಂಕಿಹಚ್ಚಿ ಹಿಂಸಾಚಾರ ಆರಂಭಿಸಿದರು. ಪರಿಸ್ಥಿತಿ ನಿಯಂತ್ರಿಸಲು ಅಹಮದಾಬಾದ್ ವ್ಯಾಪ್ತಿಯ ರಾಮೊಲ್, ನಿಕೋಲ್, ಬಾಪೂನಗರ್, ಘಾಟ್ಲೋಡಿಯಾ, ನರನ್​ಪುರ, ಒಧವ್, ನರೋಡಾ, ಕೃಷ್ಣಾನಗರ ಹಾಗೂ ವಡಾಜ್ 9 ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕರ್ಫ್ಯೂ ಜಾರಿಗೊಳಿಸಿತು. ಈದಿನ ಮುಂಜಾನೆ 3 ಗಂಟೆ ವೇಳೆಗೆ ಪಟೇಲ್ ಸಮುದಾಯ ಬಹುಸಂಖ್ಯಾತರಾಗಿರುವ ವಡೋದರಾ, ಸೂರತ್, ರಾಜ್​ಕೋಟ್, ಭರೂಚ್, ಜಾಮ್ಗರ, ಭಾವನಗರ ಹಾಗೂ ವಲ್ಸಾಡ್​ಗಳಲ್ಲಿ ಸಾವಿರಾರು ಮಂದಿ ವಾಹನಗಳನ್ನು ತಡೆದು ಬೆಂಕಿ ಹಚ್ಚಿದರು. ಮತ್ತೊಂದೆಡೆ, ಬಿಜೆಪಿ ಸರ್ಕಾರದ ಪಟೇಲ್ ಸಮುದಾಯದ ಶಾಸಕರು, ಸಂಸದರು, ಸಚಿವರ ಮನೆ ಹಾಗೂ ಕಚೇರಿಗಳ ಮೇಲೂ ಕಲ್ಲುತೂರಾಟ ನಡೆಸಿದರು.


2015: ನವದೆಹಲಿ: ಶೀನಾ ಬೋರಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದ್ರಾಣಿ ಮುಖರ್ಜಿಯನ್ನು ಬಂಧಿಸಿದ ಬೆನ್ನಲ್ಲೇ ಇನ್ನೊಬ್ಬ ಆರೋಪಿ ಎಂದೇ ಹೇಳಲಾಗುತ್ತಿರುವ ಸಂಜೀವ್ ಖನ್ನಾರನ್ನೂ ಮುಂಬೈ ಪೊಲೀಸರು ಬಂಧಿಸಿದರು. ಸೋದರಿ ಹತ್ಯೆಗೆ ಇಂದ್ರಾಣಿಗೆ ಸಹಕರಿದ್ದ ಎನ್ನುವ ಹಿನ್ನೆಲೆಯಲ್ಲಿ ಸಂಜೀವ್ ಖನ್ನಾರನ್ನು ಕೋಲ್ಕತದಲ್ಲಿ ಬಂಧಿಸಲಾಯಿತು. ಪಶ್ಚಿಮ ಬಂಗಾಳ ಪೊಲೀಸರು ಖನ್ನಾ ಬಂಧನಕ್ಕೊಳಗಾಗಿರುವ ಮಾಹಿತಿಯನ್ನು ಖಚಿತಪಡಿಸಿದರು. ಅಷ್ಟಕ್ಕೂ ಸಂಜೀವ್ ಮತ್ಯಾರೂ ಅಲ್ಲ, ಇಂದ್ರಾಣಿ ಮೊದಲ ಪತಿ. ಕಳೆದ ಕೆಲ ದಿನಗಳಿಂದ ಆದ ಮಹತ್ವದ ಬೆಳವಣಿಗೆಯಲ್ಲಿ ಶೀನಾ ಬೋರಾ ಹತ್ಯೆ ಪ್ರಕರಣ ಹೊಸ ರೂಪ ಪಡೆದುಕೊಂಡಿತು. ಸ್ಟಾರ್ ಇಂಡಿಯಾದ ಮಾಜಿ ಸಿಇಒ ಪೀಟರ್ ಮುಖರ್ಜಿ ಪತ್ನಿಯಾಗಿರುವ ಇಂದ್ರಾಣಿಯವರನ್ನು ಹಿಂದಿನ ದಿನ ಬಲವಾದ ಪುರಾವೆಗಳು ದೊರೆತ ಹಿನ್ನೆಲೆಯಲ್ಲಿ ಬಂಧಿಸಲಾಗಿತ್ತು.
2008: ಜಗದ್ವಿಖ್ಯಾತ ತಿರುಪತಿ ತಿರುಮಲ ದೇವಾಲಯ ನಗರಿಯಲ್ಲಿ ಇತಿಹಾಸ ಮರುಕಳಿಸಿತು. ಅಲ್ಲಿನ ಅವಿಲಾಲ ಚೆರುವು ಮೈದಾನದಲ್ಲಿ ನಿರ್ಮಿಸಿದ್ದ ಬೃಹತ್ ವರ್ಣರಂಜಿತ ವೇದಿಕೆಯಲ್ಲಿ ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ತಮ್ಮ ನೂತನ `ಪ್ರಜಾ ರಾಜ್ಯಂ' ಪಕ್ಷಕ್ಕೆ ನಾಂದಿ ಹಾಡಿದರು. ಬಿಳಿ, ಹಸಿರು ವರ್ಣದ ನಡುವೆ ಉದಯಿಸುತ್ತಿರುವ ಸೂರ್ಯನ ಲಾಂಛನವಿರುವ ಪಕ್ಷದ ಪತಾಕೆ ಸೂರ್ಯಾಸ್ತದ ಸಮಯಕ್ಕೆ ಸರಿಯಾಗಿ ಆರೋಹಣಗೊಳ್ಳುತ್ತಿದ್ದಂತೆಯೇ, ಆಂಧ್ರ ಪ್ರದೇಶದ ರಾಜಕೀಯದಲ್ಲಿ ಸಂಚಲನವೊಂದು ಸೃಷ್ಟಿಯಾಯಿತು. 1982ರಲ್ಲಿ ಇದೇ ತಿರುಪತಿ ತಿಮ್ಮಪ್ಪನ ಸನ್ನಿದಿಯಲ್ಲೇ ದಿವಂಗತ ಎನ್. ಟಿ. ರಾಮರಾವ್ ಅವರು ಆರಂಭಿಸಿದ್ದ `ತೆಲುಗುದೇಶಂ' ಕಾಂಗ್ರೆಸ್ಸಿಗೆ ಸೆಡ್ಡು ಹೊಡೆದಿತ್ತು.

2008: ನೇಪಾಳದಲ್ಲಿ ಕೋಶಿ ನದಿ ತುಂಬಿ ಹರಿದು ಪ್ರವಾಹ ತಡೆಗೆ ನಿರ್ಮಿಸಿದ ಏರಿ ಒಡೆದ ಪರಿಣಾಮ ತಗ್ಗು ಪ್ರದೇಶವಾದ ಬಿಹಾರದಲ್ಲಿ ಭಾರಿ ಪ್ರವಾಹ ಉಂಟಾಗಿ 45 ಮಂದಿ ಮೃತರಾದರು. ಲಕ್ಷಾಂತರ ಜನರು ಅಪಾಯದಲ್ಲಿ ಸಿಲುಕಿದರು.

2007: `ಗೋವನ್ನು ನಾವೆಲ್ಲರೂ ಎರಡನೇ ಮಾತೆ ಎಂದು ಕರೆಯುತ್ತೇವೆ. ಆದರೆ ಗೋವು ತಾಯಿಗೆ- ತಾಯಿಯಾದ್ದರಿಂದ ನಮ್ಮೆಲ್ಲರ ಮೊದಲ ಮಾತೆ ಎಂದು ಕರೆಯಬೇಕು' ಎಂದು ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಬೆಂಗಳೂರಿನ ಆರ್.ಟಿ. ನಗರದ ಎಚ್. ಎಂ.ಟಿ ಬಡಾವಣೆಯಲ್ಲಿ 'ಗೋ ಸಂಧ್ಯಾ' ಕಾರ್ಯಕ್ರಮದಲ್ಲಿ ಪ್ರತಿಪಾದಿಸಿದರು. ದೇಶ ಮತ್ತು ಸಂಸ್ಕೃತಿಯನ್ನು ಉಳಿಸುವ ದೇಶೀಯ ಗೋತಳಿಗಳ ಸಂರಕ್ಷಣೆ ಮತ್ತು ಸಂವರ್ಧನೆಗೆ ರಾಮಚಂದ್ರಾಪುರ ಮಠ ನಿಂತಿದೆ. ಇದು ದೇಶದ ಎರಡನೇ ಸ್ವಾತಂತ್ರ್ಯ ಸಂಗ್ರಾಮ. ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದ 70 ಬಗೆಯ ದೇಶೀಯ ತಳಿಗಳ ಪೈಕಿ ಪ್ರಸ್ತುತ 32 ತಳಿಗಳು ಮಾತ್ರ ಉಳಿದಿವೆ. ಈ ಸಂಖ್ಯೆಯಲ್ಲಿ ಗೋತಳಿಗಳು ನಶಿಸಲು ಕಾರಣವೇನು ಎಂದು ದೇಶದ ಸಂಸತ್ತು ಹಾಗೂ ವಿಧಾನಸೌಧಗಳನ್ನು ಪ್ರಶ್ನಿಸಬೇಕಾಗಿದೆ ಎಂದು ಅವರು ಹೇಳಿದರು. ರಾಮಚಂದ್ರಾಪುರ ಮಠದಲ್ಲಿರುವ ಗೋವಿನ ಒಂದು ತಳಿಯನ್ನು ಸಂರಕ್ಷಿಸುವ ಸಂಪೂರ್ಣ ಜವಾಬ್ದಾರಿಯನ್ನು ಚಿತ್ರನಟ ವಿವೇಕ ಒಬೆರಾಯ್ ಕುಟುಂಬ ವಹಿಸಿಕೊಂಡಿದೆ ಎಂದು ಮಠವು ಈ ಸಂದರ್ಭದಲ್ಲಿ ಪ್ರಕಟಿಸಿತು.

2007: ``ಸುವರ್ಣ ವಿಧಾನಸೌಧ ಶಂಕುಸ್ಥಾಪನೆಯೊಂದಿಗೆ ಬೆಳಗಾವಿ ನಗರ ರಾಜ್ಯದ ಎರಡನೇ ರಾಜಧಾನಿಯಾಗಿ ಅಸ್ತಿತ್ವ ಪಡೆದಿದೆ'' ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಬೆಳಗಾವಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸುವರ್ಣ ವಿಧಾನಸೌಧ ಶಂಕುಸ್ಥಾಪನಾ ಸಮಾರಂಭದಲ್ಲಿ ಹೇಳಿದರು. ಇದು ಜೆಡಿ ಎಸ್- ಬಿಜೆಪಿ ಸಮ್ಮಿಶ್ರ ಸರ್ಕಾರದ ದೂರದೃಷ್ಟಿಯ ಫಲ. ಇದು ಸರ್ಕಾರದ ಸಾಧನೆ ಎಂದು ಅವರು ಬಣ್ಣಿಸಿದರು.

2007: ಹೈದರಾಬಾದಿನಲ್ಲಿ ಸಂಭವಿಸಿದ ಅವಳಿ ಬಾಂಬ್ ಸ್ಫೋಟಗಳಲ್ಲಿ ಸತ್ತವರ ಸಂಖ್ಯೆ 43ಕ್ಕೆ ಏರಿತು.

2007: ಅಂಡಮಾನ್ ದ್ವೀಪದ ವಿವಿಧ ಭಾಗಗಳಲ್ಲಿ ಈದಿನ ಮುಂಜಾನೆ ಮಧ್ಯಮ ಪ್ರಮಾಣದ ಭೂಕಂಪ ಸಂಭವಿಸಿತು. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 5.4ರಷ್ಟು ದಾಖಲಾಯಿತು.

2006: ಇರಾನಿನ ವಿವಾದಾತ್ಮಕ ಪರಮಾಣು ಕಾರ್ಯಕ್ರಮದ ಭಾಗವಾಗಿರುವ ಖೊಂಡಬ್ ಭಾರಜಲ ಘಟಕವನ್ನು ಅಧ್ಯಕ್ಷ ಮೊಹಮ್ಮದ್ ಅಹ್ಮದಿನೇಜಾದ್ ಉದ್ಘಾಟಿಸಿದರು.

2006: ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟ್ ಪಟು ಕ್ಲೈಡ್ ವಾಲ್ಕಾಟ್ (80) ಬ್ರಿಜ್ ಟೌನಿನಲ್ಲಿ ನಿಧನರಾದರು. ಐವತ್ತರ ದಶಕದಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ಟಿನ ವಿಖ್ಯಾತ ಮೂವರು ಡಬ್ಲ್ಯುಗಳು ಎಂದೇ ಖ್ಯಾತರಾಗಿದ್ದವರಲ್ಲಿ ವಾಲ್ಕಾಟ್ ಒಬ್ಬರಾಗಿದ್ದರು. ಫ್ರಾಂಕ್ ವೊರೆಲ್, ಎವರ್ಟನ್ ವೀಕ್ಸ್ ಇತರ ಇಬ್ಬರು ಖ್ಯಾತ ಡಬ್ಲ್ಯುಗಳು.

2006: ನೇಪಾಳದ ಕಠ್ಮಂಡುವಿನಲ್ಲಿ ಇದೇ ಪ್ರಥಮ ಬಾರಿಗೆ ಸಲಿಂಗಪ್ರೇಮಿಗಳ ಮದುವೆ ನಡೆಯಿತು. 29ರ ಹರೆಯದ ಅನಿಲ್ ಮಹಜು ಮತ್ತು 23ರ ಹರೆಯದ ದಿಯಾ ಮಹಜು ಇವರೇ ಮದುವೆಯಾದ ಸಲಿಂಗ ಪ್ರೇಮಿಗಳು.

2001: ಪೆಂಟ್ಯಾಲ ಹರಿಕೃಷ್ಣ ಅವರು 15ನೇ ವಯಸ್ಸಿನಲ್ಲಿ ಅತ್ಯಂತ ಕಿರಿಯ ಚೆಸ್ ಗ್ರ್ಯಾಂಡ್ ಮಾಸ್ಟರ್ ಎಂಬ ಕೀರ್ತಿಗೆ ಭಾಜನರಾದರು. 1987ರಲ್ಲಿ ವಿಶ್ವನಾಥನ್ ಆನಂದ್ ಅವರು ತಮ್ಮ 18ನೇ ವಯಸ್ಸಿನಲ್ಲಿ ಭಾರತದ ಮೊತ್ತ ಮೊದಲ ಗ್ರ್ಯಾಂಡ್ ಮಾಸ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ವಿಶ್ವನಾಥನ್ ಆನಂದ್ ಅವರ ದಾಖಲೆಯನ್ನು ಹರಿಕೃಷ್ಣ ಮೀರಿಸಿದರು.

1978: ರಷ್ಯದ ಸೋಯುಜ್ 31ರ ಮೂಲಕ ಗಗನಕ್ಕೆ ಏರಿದ ಸಿಗ್ಮಂಡ್ ಜಾನ್ ಅವರು ಬಾಹ್ಯಾಕಾಶಕ್ಕೆ ಏರಿದ ಪ್ರಥಮ ಜರ್ಮನ್ ಎಂಬ ಕೀರ್ತಿಗೆ ಭಾಜನರಾದರು.

1874: ತತ್ವಜ್ಞಾನಿ, ರಾಜಕಾರಣಿ, ಈಶ್ವರ ಶರಣ್ ಮುನ್ಷಿ ಜನನ.

1965: ಸಾಹಿತಿ ಎಂ.ಎಸ್. ವೇದಾ ಜನನ.

1959: ಸಾಹಿತಿ ರಹಮತ್ ತರೀಕೆರೆ ಜನನ.

1955: ಸಾಹಿತಿ ಟಿ.ಪಿ. ಅಶೋಕ ಜನನ.

1933: ಸಾಹಿತಿ ಟಿ.ವಿ. ವೆಂಕಟಾಚಲ ಶಾಸ್ತ್ರಿ ಜನನ.

1920: ಅಮೆರಿಕದಲ್ಲಿ ಈದಿನವನ್ನು `ಮಹಿಳಾ ಸಮಾನತಾ ದಿನ' ಎಂಬುದಾಗಿ ಆಚರಿಸಲಾಗುತ್ತದೆ. 72 ವರ್ಷಗಳ ಹೋರಾಟದ ಬಳಿಕ ಈದಿನ ಅಮೆರಿಕದ ಸಂವಿಧಾನಕ್ಕೆ 19ನೇ ತಿದ್ದುಪಡಿ ತಂದು ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಲಾಯಿತು.

1918: `ಎಚ್ಚೆಸ್ಕೆ' ಎಂದೇ ಖ್ಯಾತರಾದ ಎಚ್. ಎಸ್. ಕೃಷ್ಣಸ್ವಾಮಿ ಅಯ್ಯಂಗಾರರು ಎಚ್. ಶ್ರೀನಿವಾಸ ಅಯ್ಯಂಗಾರ್- ಅಲಮೇಲಮ್ಮ ದಂಪತಿಯ ಮಗನಾಗಿ ಮೈಸೂರು ಜಿಲ್ಲೆಯ ಕೃಷ್ಣರಾಜ ನಗರ ತಾಲ್ಲೂಕಿನ ಹಳೆಯೂರು ಗ್ರಾಮದಲ್ಲಿ ಜನಿಸಿದರು. ಕಾದಂಬರಿ ಹಾಗೂ ಇತರ ಹಲವಾರು ಕೃತಿಗಳನ್ನು ರಚಿಸಿದ ಎಚ್ಚೆಸ್ಕೆ ಹಾ.ಮಾ.ನಾ. ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾದವರು.

1883: ಕ್ರಾಕಟೋವಾ ಜ್ವಾಲಾಮುಖಿ ಭೀಕರವಾಗಿ ಬಾಯ್ದೆರೆದ ದಿನವಿದು. ಮಧ್ಯಾಹ್ನ 1 ಗಂಟೆಗೆ ಮೊದಲ ಬಾರಿಗೆ ಸ್ಫೋಟಗಳ ಸರಣಿ ಸಂಭವಿಸಿತು. 2 ಗಂಟೆಗೆ ಬೂದಿಯ ಕರಿಮೋಡ ಕ್ರಾಕಟೋವಾದ ಮೇಲೆ 17 ಮೈಲುಗಳಷ್ಟು ಎತ್ತರಕ್ಕೆ ಎದ್ದು ನಿಂತಿತು. ಮರುದಿನ ಬೆಳಿಗ್ಗೆ ಹತ್ತು ಗಂಟೆ ವೇಳೆಗೆ ಜ್ವಾಲಾಮುಖಿ ಕ್ಲೈಮ್ಯಾಕ್ಸ್ ಹಂತವನ್ನು ತಲುಪಿತು. ಆಗ ಸಂಭವಿಸಿದ ಸ್ಫೋಟದ ಸದ್ದು 2200 ಮೈಲು ದೂರದ ಆಸ್ಟ್ರೇಲಿಯಾಕ್ಕೂ ಕೇಳಿಸಿತು. ಐವತ್ತು ಮೈಲುಗಳಷ್ಟು ದೂರಕ್ಕೆ ಬೂದಿ ಚಿಮ್ಮಿತು.

Tuesday, August 25, 2009

ಇಂದಿನ ಇತಿಹಾಸ History Today ಆಗಸ್ಟ್ 25

ಇಂದಿನ ಇತಿಹಾಸ

ಆಗಸ್ಟ್ 25


ಕಂಧಮಲ್ ಜಿಲ್ಲೆಯ ಜಲಸ್ ಪೇಟಾ ಆಶ್ರಮದ ವಿಶ್ವಹಿಂದೂ ಪರಿಷತ್ತಿನ ಕೇಂದ್ರ ಸಲಹಾ ಸಮಿತಿಯ ಸದಸ್ಯ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಅವರನ್ನು ಆಗಸ್ಟ್ 23ರಂದು ಕೊಲೆ ಮಾಡಲಾದ ಹಿನ್ನೆಲೆಯಲ್ಲಿ ಒರಿಸ್ಸಾದ ಬರ್ಘರ್ ಜಿಲ್ಲೆಯ ಕುಂತಿಪಲಿ ಗ್ರಾಮದಲ್ಲಿ ಗಲಭೆಕೋರರು ಅನಾಥಾಶ್ರಮಕ್ಕೆ ಬೆಂಕಿ ಹಚ್ಚಿದ್ದರಿಂದ ಕ್ರೈಸ್ತ ಸನ್ಯಾಸಿನಿಯೊಬ್ಬಳು ಸಜೀವ ದಹನಗೊಂಡ ಘಟನೆ ನಡೆಯಿತು. ಘಟನೆಯಲ್ಲಿ ಕ್ರೈಸ್ತ ಪಾದ್ರಿಯೊಬ್ಬರು ತೀವ್ರವಾಗಿ ಗಾಯಗೊಂಡರು. ಅನಾಥಾಶ್ರಮವನ್ನು ಸುತ್ತುವರಿದ ದುಷ್ಕರ್ಮಿಗಳು ಅದರಲ್ಲಿ 22 ವಿದ್ಯಾರ್ಥಿಗಳನ್ನು ಹೊರಕ್ಕೆ ಕರೆಯಿಸಿ ಬೆಂಕಿ ಹಚ್ಚಿದ್ದರಿಂದ ಒಳಗಿದ್ದ ಸನ್ಯಾಸಿನಿ ಸಜೀವ ದಹನಗೊಂಡರು. ಕ್ರೈಸ್ತ ಪಾದರ್ ಕಷ್ಟಪಟ್ಟು ಹೊರ ಬರುವಲ್ಲಿ ಯಶಸ್ವಿಯಾದರು.

2015: ಬೆಂಗಳೂರು ಮಹಾನಗರ ಪಾಲಿಕೆಯ 198 ವಾರ್ಡ್​ಗಳಿಗೆ ಆಗಸ್ಟ್ 22ರಂದ ನಡೆದ ಚುನಾವಣೆಯಲ್ಲಿ 100 ಸ್ಥಾನಗಳಲ್ಲಿ ಗೆಲುವಿನೊಂದಿಗೆ ಬಿಜೆಪಿ ದೊಡ್ಡ ಪಕ್ಷವಾಗಿ ಮೂಡಿಬಂದು ಮತ್ತೆ ಮಹಾನಗರ ಪಾಲಿಕೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು. ಬಿಜೆಪಿಗೆ ತೀವ್ರ ಹಣಾಹಣಿ ಒಡ್ಡಿದ ಕಾಂಗ್ರೆಸ್ 76 ಸ್ಥಾನಗಳಲ್ಲಿ ಗೆಲುವಿನೊಂದಿಗೆ ಎರಡನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಜನತಾದಳ (ಎಸ್) 14 ಕಡೆ ಮತ್ತು ಇತರರು 08 ಕಡೆ ಗೆಲುವು ಸಾಧಿಸಿದರು. ಇಬ್ಬರು ಪಕ್ಷೇತರರು ಬೆಂಬಲ ನೀಡಲು ಮುಂದೆ ಬಂದದ್ದರಿಂದ ಬಿಜೆಪಿಗೆ ಅಧಿಕಾರ ಖಚಿತವಾಯಿತು. ಬಹುತೇಕ ಚುನಾವಣಾ ಸಮೀಕ್ಷೆಗಳನ್ನು ಫಲಿತಾಂಶ ತಲೆಕೆಳಗು ಮಾಡಿತು. ಚುನಾವಣೆಯ ಮತಗಳ ಎಣಿಕೆ ಈದಿನ ಬೆಳಗ್ಗೆ ಬೆಂಗಳೂರಿನ 27 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ 27 ಮತ ಎಣಿಕೆ ಕೇಂದ್ರಗಳಲ್ಲಿ ಆರಂಭವಾಗಿತ್ತು. ಪ್ರಧಾನಿ ನರೇಂದ್ರ ಮೋದಿ, ಹಣಕಾಸು ಸಚಿವ ಅರುಣ್ ಜೇಟ್ಲಿ, ಪಕ್ಷಾಧ್ಯಕ್ಷ ಅಮಿತ್ ಷಾ ಈ ವಿಜಯಕ್ಕಾಗಿ ಬಿಜೆಪಿ ಕರ್ನಾಟಕ ಘಟಕವನ್ನು ಅಭಿನಂದಿಸಿದರು..

2015: ನವದೆಹಲಿ: ಪಕ್ಷ ನಾಯಕತ್ವವನ್ನು ತಮ್ಮ ಹೇಳಿಕೆ ಮೂಲಕ ಮುಜುಗರಕ್ಕೆ ಈಡು ಮಾಡಿದ ಬಂಡಾಯ ಬಿಜೆಪಿ ಸಂಸತ್ ಸದಸ್ಯ ಶತ್ರುಘ್ನ ಸಿನ್ಹ ಅವರು ತಮ್ಮ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾಯಕತ್ವಕ್ಕೆ ಸವಾಲು ಹಾಕಿದರು. ಬಿಹಾರ ಚುನಾವಣೆಗಳ ಬಳಿಕ ಪಕ್ಷ ನಾಯಕತ್ವವು ಪಕ್ಷ ವಿರೋಧಿ ಹೇಳಿಕೆಗಾಗಿ ಸಿನ್ಹ ವಿರುದ್ಧ ಕ್ರಮ ಕೈಗೊಳ್ಳಲು ಯೋಜಿಸುತ್ತಿದೆ ಎಂಬ ವರದಿಗಳಿಗೆ ಪ್ರತಿಕ್ರಿಯಿಸಿ ಬಿಹಾರಿನ ಪಟ್ನಾ ಸಾಹಿಬ್ ಕ್ಷೇತ್ರದ ಸಂಸದ ಸಿನ್ಹ ಅವರು ಟ್ವಿಟ್ಟರ್​ನಲ್ಲಿ ಸರಣಿ ಟ್ವೀಟ್​ಗಳ ಮೂಲಕ ನಾಯಕತ್ವಕ್ಕೆ ಈ ಸವಾಲೆಸೆದರು. “ಸುದ್ದಿ ವಾಹಿನಿಯೊಂದರ ಅಧಿಕೃತವಲ್ಲದ ವರದಿಯ ಬಳಿಕ ಈ ಅನಧಿಕೃತ ವರದಿ ಬಗ್ಗೆ ಜನ ನನ್ನ ಪ್ರತಿಕ್ರಿಯೆ ಕೇಳುತ್ತಿದ್ದಾರೆ’ ಎಂದು ಸಿನ್ಹ ಹೇಳಿದರು. ‘ಸ್ಥಾಪಿತ ಹಿತಾಸಕ್ತಿಗಳು ಹರಡಿದ ಅನಧಿಕೃತ ವರದಿ ಬಗ್ಗೆ ನಾನು ಟೀಕಿಸುವುದಿಲ್ಲ. ಏನಿದ್ದರೂ ಪ್ರತಿಯೊಂದು ಕ್ರಿಯೆಗೂ ಸಮಬಲದ ಮತ್ತು ವಿರುದ್ಧವಾದ ಪ್ರತಿಕ್ರಿಯೆ ಇರುತ್ತದೆ ಎಂಬುದಾಗಿ ನ್ಯೂಟನ್ ಹೇಳಿದ ಮೂರನೇ ನಿಯಮವನ್ನು ನಾವು ಮರೆಯಲಾಗದು’ ಎಂದು ಪಕ್ಷ ಮತ್ತು ಸರ್ಕಾರದಿಂದ ಬದಿಗೊತ್ತಲ್ಪಟ್ಟಿರುವ ಸಿನ್ಹ ಟ್ವೀಟ್ನಲ್ಲಿ ತಿಳಿಸಿದರು. ಸಿನ್ಹ ವಿರುದ್ಧ ಬಿಹಾರ ಚುನಾವಣೆಗಳ ಮತಗಳ ಎಣಿಕೆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪಕ್ಷದ ಉನ್ನತ ನಾಯಕರೊಬ್ಬರು  ಹೇಳಿದ್ದರು. ಸಾರ್ವಜನಿಕ ಸಭೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಖಂಡತುಂಡವಾಗಿ ಟೀಕಿಸಿದ ಮರುದಿನ ಸಿನ್ಹ ಅವರು ನಿತೀಶ್ ಕುಮಾರ್ ಅವರನ್ನು ಹೊಗಳಿದ್ದರು.

2015: ಬೀಜಿಂಗ್: 1996ರಿಂದೀಚೆಗೆ ಅನುಭವಿಸುತ್ತಿರುವ ಅತ್ಯಂತ ದೊಡ್ಡ ಪ್ರಮಾಣದ ಷೇರು ಮಾರುಕಟ್ಟೆ ಕುಸಿತ ಮತ್ತು ತೀವ್ರಗೊಳ್ಳುತ್ತಿರುವ ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗುವ ಸಲುವಾಗಿ ಚೀನಾ ಸರ್ಕಾರವು ನವೆಂಬರ್ ಬಳಿಕ ಇದೀಗ 5ನೇ ಬಾರಿಗೆ ಬಡ್ಡಿ ದರಗಳನ್ನು ಇಳಿಸಿತು. ಜೊತೆಗೆ ತೆಗೆದಿಡಬೇಕಾದ ಬ್ಯಾಂಕ್​ಗಳ ನಗದು ಮೀಸಲು ಧನದ ಮೊತ್ತವನ್ನು ಕಡಿಮೆಗೊಳಿಸಿತು. ವಾರ್ಷಿಕ ಸಾಲದ ಬಡ್ಡಿದರವು 25 ಪಾಯಿಂಟ್​ನಷ್ಟು ಅಂದರೆ ಶೕಕಡಾ 4.6ಕ್ಕೆ ಇಳಿದಿದ್ದು ಆಗಸ್ಟ್ 26ರ ಬುಧವಾರದಿಂದಲೇ ಜಾರಿಯಾಗುವುದು ಎಂದು ಬೀಜಿಂಗ್​ನ ಪೀಪಲ್ಸ್ ಬ್ಯಾಂಕ್ ಆಫ್ ಚೀನಾ ತನ್ನ ವೆಬ್​ಸೈಟ್​ನಲ್ಲಿ ಪ್ರಕಟಿಸಿತು. ಇದೇ ವೇಳೆಗೆ ಒಂದು ವರ್ಷದ ಠೇವಣಿ ದರವೂ 25 ಪಾಯಿಂಟ್ ಅಂದರೆ ಶೇಕಡಾ 1.75ರಷ್ಟಕ್ಕೆ ಇಳಿಯುವುದು. ಜೊತೆಗೆ ಎಲ್ಲಾ ಬ್ಯಾಂಕ್​ಗಳ ಮೀಸಲು ಧನದ ಅನುಪಾತವನ್ನೂ 50 ಮೂಲ ಪಾಯಿಂಟ್​ನಷ್ಟು ಇಳಿಸಲಾಗಿದೆ ಎಂದು ಸರ್ಕಾರಿ ಪ್ರಕಟಣೆ ತಿಳಿಸಿತು.


2008: ಅಮರನಾಥ ದೇಗುಲಕ್ಕೆ ಭೂಮಿ ಹಸ್ತಾಂತರಿಸದಂತೆ ಆಗ್ರಹಿಸಿ ಕಾಶ್ಮೀರ ಕಣಿವೆಯಲ್ಲಿ ಕರ್ಫ್ಯೂ ಉಲ್ಲಂಘಿಸಿ, ಕಲ್ಲು ತೂರಾಟದೊಂದಿಗೆ ಹಿಂಸಾಚಾರಕ್ಕಿಳಿದ ಪ್ರತಿಭಟನಾಕಾರರನ್ನು ಚದುರಿಸಲು ಭದ್ರತಾಪಡೆಗಳು ಗೋಲಿಬಾರ್ ನಡೆಸಿದಾಗ ಐವರು ಮೃತರಾಗಿ, ಇತರ 70 ಮಂದಿ ಗಾಯಗೊಂಡರು.

2008: ಕಂಧಮಲ್ ಜಿಲ್ಲೆಯ ಜಲಸ್ ಪೇಟಾ ಆಶ್ರಮದ ವಿಶ್ವಹಿಂದೂ ಪರಿಷತ್ತಿನ ಕೇಂದ್ರ ಸಲಹಾ ಸಮಿತಿಯ ಸದಸ್ಯ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಅವರನ್ನು ಆಗಸ್ಟ್ 23ರಂದು ಕೊಲೆ ಮಾಡಲಾದ ಹಿನ್ನೆಲೆಯಲ್ಲಿ ಒರಿಸ್ಸಾದ ಬರ್ಘರ್ ಜಿಲ್ಲೆಯ ಕುಂತಿಪಲಿ ಗ್ರಾಮದಲ್ಲಿ ಗಲಭೆಕೋರರು ಅನಾಥಾಶ್ರಮಕ್ಕೆ ಬೆಂಕಿ ಹಚ್ಚಿದ್ದರಿಂದ ಕ್ರೈಸ್ತ ಸನ್ಯಾಸಿನಿಯೊಬ್ಬಳು ಸಜೀವ ದಹನಗೊಂಡ ಘಟನೆ ನಡೆಯಿತು. ಘಟನೆಯಲ್ಲಿ ಕ್ರೈಸ್ತ ಪಾದ್ರಿಯೊಬ್ಬರು ತೀವ್ರವಾಗಿ ಗಾಯಗೊಂಡರು. ಅನಾಥಾಶ್ರಮವನ್ನು ಸುತ್ತುವರಿದ ದುಷ್ಕರ್ಮಿಗಳು ಅದರಲ್ಲಿ 22 ವಿದ್ಯಾರ್ಥಿಗಳನ್ನು ಹೊರಕ್ಕೆ ಕರೆಯಿಸಿ ಬೆಂಕಿ ಹಚ್ಚಿದ್ದರಿಂದ ಒಳಗಿದ್ದ ಸನ್ಯಾಸಿನಿ ಸಜೀವ ದಹನಗೊಂಡರು. ಕ್ರೈಸ್ತ ಪಾದರ್ ಕಷ್ಟಪಟ್ಟು ಹೊರ ಬರುವಲ್ಲಿ ಯಶಸ್ವಿಯಾದರು.

2007: ಹೈದರಾಬಾದ್ ನಗರದ ಸಚಿವಾಲಯ ಸಮೀಪದ ಲುಂಬಿನಿ ಪಾರ್ಕ್ (ರಾತ್ರಿ 7.45) ಹಾಗೂ ಗೋಕುಲ್ ಚಾಟ್ ಶಾಪ್ ಬಳಿ ಈದಿನ (ರಾತ್ರಿ 7.50 ಗಂಟೆಗೆ) ಶಂಕಿತ ಭಯೋತ್ಪಾದಕರು ನಡೆಸಿದ ಸರಣಿ ಬಾಂಬ್ ಸ್ಫೋಟಗಳಲ್ಲಿ ಸುಮಾರು 32 ಮಂದಿ ಮೃತರಾಗಿ 60ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಮೊದಲ ಸ್ಫೋಟ ರಾತ್ರಿ 7.45ಕ್ಕೆ ಹುಸೇನ್ ಸಾಗರ್ ಎದುರಿಗೇ ಇರುವ ಲುಂಬಿನಿ ಪಾರ್ಕಿನಲ್ಲಿ ಸಂಭವಿಸಿ 6 ಮಂದಿ ಮೃತರಾದರು. ರಾತ್ರಿ 7.45ಕ್ಕೆ ಗೋಕುಲ್ ಚಾಟ್ ಬಳಿ ಸಂಭವಿಸಿದ ಸ್ಫೋಟದಲ್ಲಿ 26 ಮಂದಿ ಮೃತರಾಗಿ 25-30 ಜನ ಗಾಯಗೊಂಡರು.

2007: `ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಐದು ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಪೊಲೀಸರು ಜೋದಪುರ ವಿಮಾನ ನಿಲ್ದಾಣದಲ್ಲಿ ಬಂಧಿಸಿ ನಂತರ ಜೈಲಿಗೆ ಕಳುಹಿಸಿದರು. ಸ್ಥಳೀಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಶರಣಾಗಲು ಸಲ್ಮಾನ್ ಖಾನ್ ಅವರು ತಮ್ಮ ಸಹೋದರ ಸೋಹೆಲ್ ಹಾಗೂ ವಕೀಲ ದೀಪೆಶ್ ಮೆಹ್ತಾ ಅವರೊಂದಿಗೆ ಮುಂಬೈನಿಂದ ವಿಮಾನದ ಮೂಲಕ ಬಂದಿಳಿದಾಗ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸವಾಯ್ ಸಿಂಗ್ ಗೋಧರ್ ನೇತೃತ್ವದ ಪೊಲೀಸ್ ತಂಡ ಖಾನ್ ಅವರನ್ನು ಬಂಧಿಸಿತು. 41 ವರ್ಷದ ಸಲ್ಮಾನ್ ಅವರು 1998ರ ಸೆಪ್ಟೆಂಬರ್ 28ರಂದು ``ಹಮ್ ಸಾಥ್ ಸಾಥ್ ಹೈ'' ಚಲನಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಗೋಡಾ ಫಾರ್ಮ್ ಬಳಿಯ ಉಜಿಯಾಲ ಬಖಾರದಲ್ಲಿ ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿದ ಆರೋಪ ಹೊತ್ತಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಲ್ಮಾನ್ ಗೆ ಐದು ವರ್ಷಗಳ ಜೈಲುಶಿಕ್ಷೆ ಮತ್ತು ರೂ 25 ಸಾವಿರ ದಂಡ ವಿಧಿಸಿ ತೀರ್ಪು ನೀಡಿತ್ತು. ಈ ತೀರ್ಪನ್ನು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ವಿ.ಆರ್. ಸಿಂಘ್ವಿ ಎತ್ತಿಹಿಡಿದರು. ಸಲ್ಮಾನ್ ಬಂಧನದಿಂದ ಸುಮಾರು 70 ಕೋಟಿ ವೆಚ್ಚದ ಸಿನಿಮಾ ಯೋಜನೆಗಳ ಮೇಲೆ ಕರಿಮೋಡ ಆವರಿಸಿತು. 35 ಕೋಟಿ ವೆಚ್ಚದ ಅಫ್ಜಲ್ ಖಾನ್ ಅವರ `ಗಾಡ್ ತುಸ್ಸಿ ಗ್ರೇಟ್ ಹೊ', ಬೋನಿ ಕಪೂರ್ ನಿರ್ಮಾಣದ 35-40 ಕೋಟಿ ವೆಚ್ಚದ ಮತ್ತೊಂದು ಹೊಸ ಚಿತ್ರ ಹಾಗೂ ಇತರ ಚಿತ್ರಗಳ ಚಿತ್ರೀಕರಣಕ್ಕೆ ಧಕ್ಕೆ ಉಂಟಾಯಿತು.

2007: ಕೊಲೆ ಆರೋಪದಿಂದ ಮುಕ್ತರಾದ ನಾಲ್ಕು ದಿನಗಳ ಬಳಿಕ ಜೆಎಂಎಂ ಮುಖ್ಯಸ್ಥ, ಮಾಜಿ ಕೇಂದ್ರ ಸಚಿವ ಶಿಬು ಸೊರೇನ್ ಜಾರ್ಖಂಡಿನ ಡುಮ್ಕಾ ಸೆಂಟ್ರಲ್ ಜೈಲಿನಿಂದ ಬಿಡುಗಡೆಯಾದರು. ಆಪ್ತ ಕಾರ್ಯದರ್ಶಿ ಶಶಿನಾಥ್ ಝಾ ಕೊಲೆ ಆರೋಪ ಸೊರೇನ್ ಮೇಲಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ಸಾಕ್ಷ್ಯಾಧಾರಗಳನ್ನು ಒದಗಿಸಲು ಸಿಬಿಐ ವಿಫಲಗೊಂಡ ಹಿನ್ನೆಲೆಯಲ್ಲಿ ಹೈಕೋರ್ಟ್ ಅವರನ್ನು ಖುಲಾಸೆಗೊಳಿಸಿತ್ತು. ಒಂಬತ್ತು ತಿಂಗಳನ್ನು ಕಾರಾಗೃಹದಲ್ಲಿ ಕಳೆದ ಕೇಂದ್ರದ ಮಾಜಿ ಸಚಿವ ಸೊರೇನ್ ಅವರನ್ನು ಸ್ವಾಗತಿಸಲು ದೊಡ್ಡ ಸಂಖ್ಯೆಯ ಅಭಿಮಾನಿಗಳು ಜೈಲಿನ ಹೊರಗೆ ಸೇರಿದ್ದರು. 1994ರಲ್ಲಿ ನಡೆದ ಝಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕೆಳಹಂತದ ನ್ಯಾಯಾಲಯವು ಸೊರೇನ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. 2006ರ ನವೆಂಬರ್ 28 ರಂದು ಅವರು ಜೈಲು ಶಿಕ್ಷೆಗೆ ಒಳಗಾಗಿದ್ದರು.

2007: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯ ಆಡಳಿತಾಧಿಕಾರಿ ರಾಜಯೋಗಿನಿ ದಾದಿ ಪ್ರಕಾಶಮಣಿ (87) ಅವರು ಈದಿನ ಬೆಳಿಗ್ಗೆ ಮೌಂಟ್ ಅಬುವಿನಲ್ಲಿ ವಿಧಿವಶರಾದರು. ಪ್ರಕಾಶಮಣಿ ಈಗಿನ ಪಾಕಿಸ್ಥಾನದಲ್ಲಿರುವ ಸಿಂಧ್ ಪ್ರಾಂತದ ಹೈದರಾಬಾದಿನಲ್ಲಿ ಜನಿಸಿದವರು. ಇವರು 14ನೇ ವಯಸ್ಸಿನಲ್ಲೇ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸೇರಿದ್ದರು. 1937ರಲ್ಲಿ ಈ ಸಂಸ್ಥೆ ರೂಪುಗೊಂಡಾಗ 8 ಜನರ ಟ್ರಸ್ಟಿನಲ್ಲಿ ಇವರನ್ನೂ ಸಹ ಒಬ್ಬರನ್ನಾಗಿ ನೇಮಕ ಮಾಡಲಾಗಿತ್ತು. ಈ ಸಂಸ್ಥೆಯ ಸ್ಥಾಪಕರಾದ ಪ್ರಜಾಪಿತ ಬ್ರಹ್ಮ ಅವರು 1969ರ ಜನವರಿಯಲ್ಲಿ ಇಹಲೋಕ ತ್ಯಜಿಸಿದ ಬಳಿಕ ಪ್ರಕಾಶಮಣಿ ಅವರು ಮುಖ್ಯ ಆಡಳಿತಾಧಿಕಾರಿಯಾಗಿ ಸಂಸ್ಥೆಯನ್ನು ಮುನ್ನಡೆಸಿದ್ದರು. ಪ್ರಕಾಶಮಣಿ ಅವರ ಆಡಳಿತ ಅವಧಿಯಲ್ಲೇ ಈಶ್ವರೀಯ ವಿಶ್ವವಿದ್ಯಾಲಯಕ್ಕೆ ಯುನಿಸೆಫ್ ಸರಕಾರೇತರ ಸಂಸ್ಥೆ (ಎನ್.ಜಿ.ಓ) ಮಾನ್ಯತೆ ನೀಡಿದ್ದಲ್ಲದೆ ಇವರಿಗೆ ಏಳು ಶಾಂತಿ ಪಾರಿತೋಷಕಗಳನ್ನು ನೀಡಿ ಗೌರವಿಸಿತ್ತು. ಪ್ರಕಾಶಮಣಿ ಅವರು ಈ ಪಾರಿತೋಷಕ ಪಡೆದ ದೇಶದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

2007: ಆಲ್ಕೋಹಾಲ್ ಸೇವನೆಯಿಂದ ಕಿಡ್ನಿ ಕ್ಯಾನ್ಸರ್ ಉಲ್ಬಣದ ಮಟ್ಟವನ್ನು ಕಡಿಮೆಗೊಳಿಸಬಹುದು ಎಂದು ಬ್ರಿಟಿಷ್ ಪತ್ರಿಕೆಯ ಅಧ್ಯಯನ ವರದಿಯೊಂದು ಬಹಿರಂಗಪಡಿಸಿತು. ಎಲ್ಲಾ ರೀತಿಯ ಆಲ್ಕೋಹಾಲ್ ಅಂಶ ಇರುವ ಮದ್ಯಪಾನಗಳನ್ನು ಮತ್ತು ಆಲ್ಕೋಹಾಲ್ ಸೇವಿಸಿರುವ ವ್ಯಕ್ತಿಗಳನ್ನು ಪರೀಕ್ಷಿಸಿದ ಸ್ವೀಡನ್ನಿನ ಸ್ಟಾಕ್ ಹೋಮಿನಲ್ಲಿರುವ ಕರೊಲಿಂಸ್ಕ ಸಂಸ್ಥೆಯ ಡಾ.ಅಲಿಕ್ಜಾ ವೊಲ್ಕ್ ಮತ್ತು ಅವರ ಸಹೋದ್ಯೋಗಿಗಳು ಈ ವಿಷಯವನ್ನು ಪ್ರಕಟಿಸಿದರು. ಕಿಡ್ನಿ ಕ್ಯಾನ್ಸರ್ ಅಭಿವೃದ್ಧಿಯಾಗುತ್ತಿರುವ ವ್ಯಕ್ತಿ ಪ್ರತಿ ತಿಂಗಳು ಶೇ 620 ಜಿ ಎಥೆನಾಲ್ ಸೇವಿಸಿದರೆ ಶೇ 40ರಷ್ಟು ಕ್ಯಾನ್ಸರ್ ಅಭಿವೃದ್ಧಿಯನ್ನು ತಡೆಗಟ್ಟಬಹುದು. ಪ್ರತಿ ವಾರ ಎರಡೂ ಲೋಟಕ್ಕಿಂತ ಹೆಚ್ಚು ರೆಡ್ ವೈನ್ ಸೇವಿಸುವ ವ್ಯಕ್ತಿಯಲ್ಲೂ ಶೇ 40ರಷ್ಟು ಕ್ಯಾನ್ಸರ್ ನಿಯಂತ್ರಣವಾಗುತ್ತದೆ. ವೈಟ್ ವೈನ್ ಮತ್ತು ಆಲ್ಕೋಹಾಲ್ ಅಂಶ ಹೆಚ್ಚು ಇರುವ ಬಿಯರ್ ಸೇವನೆಯಿಂದಲೂ ಇದೇ ರೀತಿಯ ಪರಿಣಾಮವಾಗುತ್ತದೆ. ಆದರೆ, ಕಿಡ್ನಿ ಕ್ಯಾನ್ಸರ್ ತಡೆಗಟ್ಟುವಲ್ಲಿ ಆಲ್ಕೋಹಾಲ್ ಅಂಶ ಕಡಿಮೆ ಇರುವ ಬಿಯರ್, ಆಲ್ಕೋಹಾಲ್ ಮಧ್ಯಮ ಮಟ್ಟದ್ಲಲಿರುವ ಬಿಯರ್, ಆಲ್ಕೋಹಾಲ್ ಹೆಚ್ಚಿರುವ ವೈನ್ ಅಥವಾ ಇತರೆ ಮದ್ಯಪಾನಗಳು ಸಹಾಯ ಮಾಡುವುದಿಲ್ಲ ಎಂಬುದು ವರದಿಯ ಅಭಿಮತ.

2006: ಭಾರತೀಯ ಸಂಜಾತ ಜಲ ನಿರ್ಹಹಣಾ ತಜ್ಞ, ಕೆನಡಾ ಪ್ರಜೆ ಅಸಿತ್ ಕೆ. ಬಿಸ್ವಾಸ್ ಅವರಿಗೆ ಜಾಗತಿಕ ಜಲ ಸಂಪನ್ಮೂಲ ವಿಷಯಗಳಿಗೆ ಸಂಬಂಧಿಸಿದಂತೆ ಸಂಶೋಧನೆ, ಶಿಕ್ಷಣ ಮತ್ತು ಅಭಿವೃದ್ಧಿ ಹೊಂದಿದ ಹಾಗೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಜಾಗೃತಿ ಮೂಡಿಸಿದ್ದಕ್ಕಾಗಿನೀಡಲಾಗುವ 1.50 ಲಕ್ಷ ಅಮೆರಿಕನ್ ಡಾಲರ್ ಮೊತ್ತದ ಪ್ರತಿಷ್ಠಿತ `ಸ್ಟಾಕ್ ಹೋಮ್ ಜಲ ಪ್ರಶಸ್ತಿ'ಯನ್ನು ಸ್ವೀಡಿಷ್ ರಾಜಕುಮಾರಿ ವಿಕ್ಟೋರಿಯಾ ಅವರು ಸ್ಟಾಕ್ ಹೋಮಿನಲ್ಲಿ ಪ್ರದಾನ ಮಾಡಿದರು. ಸ್ವೀಡನ್ನಿನ ದೊರೆ 16ನೇ ಕಾಲ್ ಗುಸ್ತಾಫ್ ಜಲ ಪ್ರಶಸ್ತಿಯ ಪೋಷಕತ್ವದ `ಸ್ಟಾಕ್ ಹೋಮ್ ಜಲ ಪ್ರಶಸ್ತಿ'ಯು ಜಾಗತಿಕ ಪ್ರಶಸ್ತಿಯಾಗಿದ್ದು ಇದನ್ನು 1990ರಲ್ಲಿ ಸ್ಥಾಪಿಸಲಾಯಿತು. ಜಲ ಸಂಬಂಧಿ ಕ್ಷೇತ್ರಗಳಲ್ಲಿ ಅಸಾಮಾನ್ಯ ಸಾಧನೆ ಮಾಡಿದ ವ್ಯಕ್ತಿ, ಸಂಘಟನೆ ಅಥವಾ ಜಲ ಸಂಬಂಧಿ ಚಟುವಟಿಕೆ ನಿರತರಾಗಿರುವ ಸಂಸ್ಥೆಗಳಿಗೆ ಇದನ್ನು ನೀಡಲಾಗುತ್ತದೆ. ಶಿಕ್ಷಣ, ಮಾನವೀಯ ಅಥವಾ ಅಂತಾರಾಷ್ಟ್ರೀಯ ಬಾಂಧವ್ಯ, ಜಲ ನಿರ್ವಹಣೆ, ಜಲ ಸಂಬಂಧಿ ನೆರವು ಇತ್ಯಾದಿ ಕ್ಷೇತ್ರಗಳು ಈ ವ್ಯಾಪ್ತಿಗೆ ಬರುತ್ತದೆ.

2006: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇತರೆ ಹಿಂದುಳಿದ ಜಾತಿಗಳಿಗೆ (ಒಬಿಸಿ) ಶೇಕಡಾ 27 ಮೀಸಲಾತಿ ಕಲ್ಪಿಸುವ ವಿವಾದಾತ್ಮಕ ಮಸೂದೆಯನ್ನು ಲೋಕಸಭಯಲ್ಲಿ ಮಂಡಿಸಲಾಯಿತು. ಬೆಂಗಳೂರಿನ ಜವಾಹರಲಾಲ್ ನೆಹರೂ ಆಧುನಿಕ ವಿಜ್ಞಾನ ಸಂಶೋಧನಾ ಕೇಂದ್ರ, ಮುಂಬೈಯ ಹೋಮಿ ಬಾಬಾ ರಾಷ್ಟ್ರೀಯ ಸಂಸ್ಥೆ, ಬಾಬಾ ಪರಮಾಣು ಸಂಶೋಧನಾ ಕೇಂದ್ರ, ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ ಸೇರಿ 8 ಸಂಸ್ಥೆಗಳಿಗೆ ಈ ಮೀಸಲಾತಿ ಅನ್ವಯಿಸುವುದಿಲ್ಲ. ಅಲ್ಪಸಂಖ್ಯಾತರ ಸಂಸ್ಥೆಗಳಿಗೂ ಮೀಸಲಾತಿಯಿಂದ ವಿನಾಯ್ತಿ. ಮಾನವ ಸಂಪನ್ಮೂಲ ಸಚಿವ ಅರ್ಜುನ್ ಸಿಂಗ್ ಅವರು ಮಂಡಿಸಿದ ಈ ಮಸೂದೆಯನ್ನು ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ ಅವರು ಸಂಸದೀಯ ಸ್ಥಾಯಿ ಸಮಿತಿ ಪರಿಶೀಲನೆಗೆ ಒಪ್ಪಿಸಿದರು.

2006: ಲಾಭದಾಯಕ ಹುದ್ದೆ ಹೊಂದಿರುವ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಹಣಕಾಸು ಸಚಿವ ಪಿ. ಚಿದಂಬರಂ ಅವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಪರಿಶೀಲನೆಗಾಗಿ ಚುನಾವಣಾ ಆಯೋಗಕ್ಕೆ ಕಳುಹಿಸಿದರು. ಇವರಿಬ್ಬರೂ ರಾಜೀವ್ಗಾಂಧಿ ಪ್ರತಿಷ್ಠಾನದ ಟ್ರಸ್ಟಿಗಳಾಗಿದ್ದಾರೆ.

2006: ಸುಮಾರು 3200 ವರ್ಷಗಳಷ್ಟು ಹಳೆಯದಾದ 125 ಟನ್ ತೂಕದ ಪರ್ಹೋ 2ನೇ ರಾಮ್ಸೇಸ ಮೂರ್ತಿಯನ್ನು ಈಜಿಪ್ಟಿನ ಕೈರೋದ ರಾಮ್ಸೇಸ ಚೌಕದಿಂದ ಕೈರೋ ಹೊರವಲಯದ ಗಿಝಾದಲ್ಲಿನ ಪಿರಮಿಡ್ಡಿಗೆ ಸಾಗಿಸಲಾಯಿತು.

2004: ಈದ್ಗಾ ಮೈದಾನ ರಾಷ್ಟ್ರ ಧ್ವಜಾರೋಹಣ ವಿವಾದ ಸಂಬಂಧ ಹೊರಡಿಸಲಾದ ವಾರಂಟ್ ಹಿನ್ನೆಲೆಯಲ್ಲಿ ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾಭಾರತಿ ಹುಬ್ಬಳ್ಳಿಯ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಶರಣಾದರು.

2001: ಹೆಪಟೈಟಿಸ್, ಲಿವರ್ ಸಿರೋಸಿಸ್ ಮತ್ತು ಕ್ಯಾನ್ಸರಿಗೆ ಕಾರಣವಾಗುವ ಹೆಪಟೈಟಿಸ್ ಸಿ ವೈರಸ್ಸಿನ ಗುಣಾಣು ನಕ್ಷೆಯನ್ನು (ಜೆನೋಮ್) ಅನಿವಾಸಿ ಭಾರತೀಯ ವಿಜ್ಞಾನಿ ರಾಮರೆಡ್ಡಿ ಗುಂಟಕ ಅವರ ಸಹಯೋಗದೊಂದಿಗೆ ವಿಜ್ಞಾನಿಗಳು ಹೈದರಾಬಾದಿನ ಡೆಕ್ಕನ್ ಕಾಲೇಜ್ ಆಫ್ ಮೆಡಿಕಲ್ ಸೈನ್ಸಸ್ಸಿನಲ್ಲಿ ಗುರುತಿಸಿ ರೂಪಿಸಿದರು. ಸೂಕ್ಷ್ಮಜೀವಿಯೊಂದರ ಗುಣಾಣು ನಕ್ಷೆಯನ್ನು ಈ ರೀತಿ ಭಾರತದಲ್ಲಿ ಗುರುತಿಸಿದ್ದು ಇದೇ ಮೊದಲು.

2001: ಲಂಡನ್ನಿನ ಓವಲ್ಲಿನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಐದನೇ ಆ್ಯಷಸ್ ಟೆಸ್ಟ್ ಪಂದ್ಯದಲ್ಲಿ 400ನೇ ಟೆಸ್ಟ್ ವಿಕೆಟ್ ಪಡೆದ ಮೊದಲ ಆಸ್ಟ್ರೇಲಿಯನ್ ಎಂಬ ಹೆಗ್ಗಳಿಕೆಗೆ ಶೇನ್ ವಾರ್ನ್ ಪಾತ್ರರಾದರು.

1999: ಡೇವಿಸ್ ಕಪ್ ಮಾಜಿ ನಾಯಕ ನರೇಂದ್ರನಾಥ ನಿಧನ.

1996: ಸಮುದ್ರಮಟ್ಟದಿಂದ 3,888 ಮೀಟರ್ ಎತ್ತರದಲ್ಲಿರುವ ಹಿಮಾಲಯ ಪರ್ವತ ಶ್ರೇಣಿಯಲ್ಲಿ ಇರುವ ವಿಶ್ವ ವಿಖ್ಯಾತ ಅಮರನಾಥ ಹಿಮಲಿಂಗ ದರ್ಶನಕ್ಕ್ಕೆ ಹೊರಟಿದ್ದ 194 ಮಂದಿ ಯಾತ್ರಾರ್ಥಿಗಳು ಅಮರನಾಥ ಗುಹೆಗಳಲ್ಲಿ ಅತಿಯಾದ ಶೀತಕ್ಕೆ ಸಿಲುಕಿ ಮೃತರಾದರು.

1981: ಕರ್ನಾಟಕದ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಶುಲ್ಕ ವಿಧಿಸುವುದನ್ನು ಹಂತ, ಹಂತವಾಗಿ ರದ್ದು ಪಡಿಸಲು ಸಚಿವ ಸಂಪುಟ ನಿರ್ಧರಿಸಿತು.

1948: `ಜನ ಗಣ ಮನ'ವನ್ನು ತಾತ್ಕಾಲಿಕ ರಾಷ್ಟ್ರಗೀತೆಯಾಗಿ ಅಂಗೀಕರಿಸಲು ಭಾರತದ ಸಂವಿಧಾನ ಸಭೆ ಅಂತಿಮ ನಿರ್ಣಯ ಕೈಗೊಂಡಿತು.

1947: ಸಾಹಿತಿ ಶ್ರೀಧರ ರಾಯಸಂ ಜನನ.

1944: ನಾಲ್ಕು ವರ್ಷಗಳ ನಾಝಿ ಆಳ್ವಿಕೆಯಿಂದ ಪ್ಯಾರಿಸ್ಸನ್ನು ಮಿತ್ರ ಪಡೆಗಳು ವಿಮೋಚನೆಗೊಳಿಸಿದವು.

1919: ಬಿಹಾರದ ಮಾಜಿ ಮುಖ್ಯಮಂತ್ರಿ ಬಿಂದೇಶ್ವರಿ ಪ್ರಸಾದ್ ಮಂಡಲ್ ಜನನ.

1918: ಖ್ಯಾತ ಸಾಹಿತಿ ಹಾಗೂ ಸಮಾಜ ಸುಧಾರಕ ಮಿರ್ಜಿ ಅಣ್ಣಾರಾಯ (25-8-1919ರಿಂದ 23-12-1975) ಅವರು ಅಪ್ಪಣ್ಣ- ಚಂದ್ರವ್ವ ದಂಪತಿಯ ಮಗನಾಗಿ ಬೆಳಗಾವಿ ಜಿಲ್ಲೆಯ ಶೇಡಬಾಳದಲ್ಲಿ ಜನಿಸಿದರು. ಒಟ್ಟು 75ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುವ ಅಣ್ಣಾರಾಯ ಅವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ.

1890: ಸಾಹಿತಿ ಸುಬೋಧ ರಾಮರಾವ್ ಜನನ.

1888: ಭಾರತೀಯ ವಿದ್ವಾಂಸ ಹಾಗೂ ಆಡಳಿತಗಾರ ಅಲ್ಲಾಮಾ ಮಾಶ್ರಿಕಿ (1888-1963) ಜನ್ಮದಿನ. ಹೈದರಾಬಾದಿನಲ್ಲಿ ಖಕ್ಸಾರ್ ತೆಹ್ರಿಕಿ ಪಕ್ಷವನ್ನು ಹುಟ್ಟುಹಾಕಿದ ಇವರು ಕೋಮು ಆಧಾರದ ವಿಭಜನೆಯನ್ನು ಪ್ರತಿಪಾದಿಸಿದವರು.

1875: ಹಡಗೊಂದರ ಮಾಸ್ಟರ್ ಮ್ಯಾಥ್ಯೂ ವೆಬ್ ಅವರು 21 ಗಂಟೆ 45 ನಿಮಿಷಗಳ ಅವಧಿಯ್ಲಲಿ ಬ್ರೆಸ್ಟ್ ಸ್ಟ್ರೋಕ್ ವಿಧಾನದಲ್ಲಿ ಈಜುತ್ತಾ ಇಂಗ್ಲಿಷ್ ಕಡಲ್ಗಾಲುವೆಯನ್ನು ದಾಟಿದ ಮೊತ್ತ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

Monday, August 24, 2009

ಇಂದಿನ ಇತಿಹಾಸ History Today ಆಗಸ್ಟ್ 24

ಇಂದಿನ ಇತಿಹಾಸ

ಆಗಸ್ಟ್ 24

ಜೆಕ್ ಗಣರಾಜ್ಯದ ರಾಜಧಾನಿ ಪ್ಲೇಗ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಖಗೋಳ ವಿಜ್ಞಾನ ಸಂಘದ ಮಹಾಧಿವೇಶನದಲ್ಲಿ ವಿಜ್ಞಾನಿಗಳು ಒಂಬತ್ತು ಗ್ರಹಗಳ ಸಾಲಿನಿಂದ `ಪ್ಲೂಟೋ'ವನ್ನು ಕಿತ್ತು ಹಾಕಲು ತೀರ್ಮಾನಿಸಿದರು. ಗ್ರಹ ಎಂದು ಕರೆಸಿಕೊಳ್ಳಲು ನಿರ್ದಿಷ್ಟ ವ್ಯಾಖ್ಯಾನವ್ದಿದು, ಇದರ ಪ್ರಕಾರ `ಪ್ಲೂಟೋ' ಗ್ರಹಗಳ ಸಾಲಿಗೆ ಸೇರುವುದಿಲ್ಲ ಎಂಬುದು ವಿಜ್ಞಾನಿಗಳ ಪ್ರತಿಪಾದನೆ. ಸೌಮಂಡಲದ 9ನೇ ಗ್ರಹವಾಗಿದ್ದ ಪ್ಲೂಟೋ 1930ರಲ್ಲಿ ಪತ್ತೆಯಾಗಿತ್ತು.

2008: ಕಿರ್ಗಿಸ್ಥಾನ್ ರಾಜಧಾನಿ ಬಿಶ್ಕೇಕಿನಲ್ಲಿ ವಿಮಾನವೊಂದು ಅಪಘಾತಕ್ಕೀಡಾಗಿ 87 ಜನ ಮೃತರಾದರು. ಇರಾನಿಗೆ ತೆರಳುತ್ತಿದ್ದ ಈ ವಿಮಾನ ಬಿಶ್ಕೇಕಿನ ನಿಲ್ದಾಣದಿಂದ ಹಾರಾಟ ಆರಂಭಿಸಿದ ಕೆಲ ಕ್ಷಣಗಳಲ್ಲೇ ಅಪಘಾತಕ್ಕೆ ತುತ್ತಾಯಿತು. ವಿಮಾನದಲ್ಲಿ 123 ಪ್ರಯಾಣಿಕರಿದ್ದರು.

2007: ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ತಮ್ಮ ವಿರುದ್ಧ ಜೈಪುರ ಸ್ಥಳೀಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಿಧಿಸಿದ ಐದು ವರ್ಷಗಳ ಸೆರೆವಾಸದ ಶಿಕ್ಷೆಯನ್ನು ಪ್ರಶ್ನಿಸಿ ಬಾಲಿವುಡ್ ನಟ ಸಲ್ಮಾನ್ ಖಾನ್ ಸಲ್ಲಿಸಿದ್ದ ಅರ್ಜಿಯನ್ನು ಜೋಧ್ ಪುರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿತು. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸಲ್ಮಾನ್ ವಿರುದ್ಧ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಬಿ.ಕೆ. ಜೈನ್ ಅವರು 2006ರ ಏಪ್ರಿಲ್ 10ರಂದು ನೀಡಿದ್ದ ತೀರ್ಪನ್ನು ಎತ್ತಿಹಿಡಿದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕಮಲ್ ರಾಜ್ ಸಿಂಘ್ವಿ ಅವರು, ನಟನ ಬಂಧನಕ್ಕೆ ಜಾಮೀನುರಹಿತ ವಾರಂಟ್ ಹೊರಡಿಸಿದರು. ಆದರೆ ಇನ್ನೊಬ್ಬ ಆರೋಪಿ ಗೋವರ್ಧನ್ ಸಿಂಗ್ ನನ್ನು ಖುಲಾಸೆ ಮಾಡಿದರು. 41 ವರ್ಷದ ಸಲ್ಮಾನ್ ಅವರು 1998ರ ಸೆಪ್ಟೆಂಬರ್ 28ರಂದು ಸೂರಜ್ ಅವರ ``ಹಮ್ ಸಾಥ್ ಸಾಥ್ ಹೈ'' ಚಲನಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಗೋಡಾ ಫಾರ್ಮ್ ಬಳಿಯ ಉಜಿಯಾಲ ಬಖಾರದಲ್ಲಿ ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿದ್ದ ಆರೋಪಕ್ಕೆ ಗುರಿಯಾಗಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಲ್ಮಾನ್ ಗೆ ಐದು ವರ್ಷಗಳ ಜೈಲುಶಿಕ್ಷೆ ಮತ್ತು ರೂ 25 ಸಾವಿರ ದಂಡ ವಿಧಿಸಿ ತೀರ್ಪು ನೀಡಿತ್ತು.

2007: ಬಡತನ ರೇಖೆಗಿಂತ ಕೆಳಗಿನ ಕುಟುಂಬದ ಬಾಣಂತಿ ಹಾಗೂ ನವಜಾತ ಶಿಶುವಿನ ಆರೈಕೆಗೆ ಕರ್ನಾಟಕದ ಕುಟುಂಬ ಕಲ್ಯಾಣ ಇಲಾಖೆಯು `ಮಡಿಲು' ಎಂಬ ನೂತನ ಯೋಜನೆಯನ್ನು ಜಾರಿಗೆ ತಂದಿತು. ಸುರಕ್ಷಿತ ಹೆರಿಗೆ, ತಾಯಿ- ಮಗುವಿನ ಆರೋಗ್ಯ ರಕ್ಷಣೆಗಾಗಿ ವರಮಹಾಲಕ್ಷ್ಮಿ ಹಬ್ಬದಂದೇ ಈ ಯೋಜನೆಯನ್ನು ಜಾರಿಗೊಳಿಸಲಾಯಿತು ಎಂದು ಆರೋಗ್ಯ ಸಚಿವ ಆರ್.ಅಶೋಕ್ ಪ್ರಕಟಿಸಿದರು. ಯೋಜನೆಗಾಗಿ 18.38 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಯೋಜನೆಯು ಆಗಸ್ಟ್ 15ರಿಂದ ಪೂರ್ವಾನ್ವಯವಾಗಿ ಜಾರಿಯಾಗುವುದು.

2007: 30 ವರ್ಷಗಳ ಹಿಂದೆ ಮಂಗಳಯಾನ ಕೈಗೊಂಡಿದ್ದ ವೈಕಿಂಗ್ ಲ್ಯಾಂಡರಿನ ವರದಿಯನ್ನು ಈಗ ಜರ್ಮನಿಯ ಜಿಯೆಸ್ಸೆನ್ ವಿಶ್ವವಿದ್ಯಾನಿಲಯದ ಜೂಪ್ ಹೌಟ್ಕೂಪರ್ ಹೊಸದಾಗಿ ವಿಶ್ಲೇಷಿದ್ದು, ಮಂಗಳ ಗ್ರಹದ ಮಣ್ಣಿನಲ್ಲಿ ಸೂಕ್ಷ್ಮಾಣು ಜೀವಿಗಳು ಇರಬಹುದು, ಮಂಗಳನ ಮಣ್ಣಿನಲ್ಲಿ ಶೇಕಡಾ 0.1ರಷ್ಟು ಭಾಗದಲ್ಲಿ ಜೈವಿಕ ಅಂಶಗಳು ಇರಬಹುದು ಎಂದು ಹೇಳಿದರು. ಅಂಟಾರ್ಟಿಕಾದ ಅತಿಶೀತಲ ಪ್ರದೇಶದಲ್ಲಿ ಇರುವಷ್ಟೇ ಪ್ರಮಾಣದ ಜೀವ ಪಸೆ ಮಂಗಳನ ಮಣ್ಣಿನಲ್ಲೂ ಇದೆ. ಅಂಟಾರ್ಟಿಕಾದಲ್ಲಿ ಕೆಲ ವಿಶಿಷ್ಟ ಬ್ಯಾಕ್ಟೀರಿಯಾ ಹಾಗೂ ಶಿಲಾವಲ್ಕಗಳು ಜೀವಿಸುತ್ತಿವೆ. ಕೋಟ್ಯಂತರ ವರ್ಷಗಳ ಹಿಂದೆ ಭೂಮಿಯಿಂದ ಮಂಗಳಕ್ಕೆ ಅಥವಾ ಅಲ್ಲಿಂದ ಭೂಮಿಗೆ ಜೀವಾಣುಗಳು ಹಾರಿ ಬಂದಿರಬಹುದಾದ ಸಾಧ್ಯತೆಯಿದೆ ಎಂದು ಹೌಟ್ ಕೂಪರ್ ಅಭಿಪ್ರಾಯ ಪಟ್ಟರು. ದಶಕಗಳ ಹಿಂದೆ ಅಂಟಾರ್ಟಿಕಾದಲ್ಲಿ ಸಿಕ್ಕಿದ್ದ ಉಲ್ಕಾಶಿಲೆಯೊಂದು, ಮಂಗಳನಲ್ಲಿ ಜೀವ ಸೆಲೆ ಇದ್ದುದರ ಕುರುಹು ನೀಡಿತ್ತು.

2007: ನಕ್ಷತ್ರಗಂಗೆಗಳು, ನಕ್ಷತ್ರಗಳು ಹಾಗೂ ಕಪ್ಪು ದ್ರವ್ಯವೂ ಇಲ್ಲದ ದೈತ್ಯ ರಂಧ್ರವೊಂದು ಬ್ರಹ್ಮಾಂಡದಲ್ಲಿ ಪತ್ತೆಯಾಗಿದೆ ಎಂದು ಮಿನ್ನೆಸೊಟಾ ವಿಶ್ವವಿದ್ಯಾನಿಲಯದ ಖಗೋಳವಿಜ್ಞಾನಿಗಳ ತಂಡ ಈದಿನ ಪ್ರಕಟಿಸಿತು. ಈ ರಂಧ್ರ 100 ಕೋಟಿ ಜ್ಯೋತಿರ್ವರ್ಷಗಳಷ್ಟು ಅಗಲವಿದೆ. ಇಂತಹ ಬೃಹತ್ ರಂಧ್ರವನ್ನು ಈ ಹಿಂದೆ ಯಾರೂ ಪತ್ತೆ ಹಚ್ಚಿರಲಿಲ್ಲ. ನಾವು ಸಹ ಇದನ್ನು ನಿರೀಕ್ಷಿಸಿರಲಿಲ್ಲ. ಆದರೆ, ಆಕಾಶದ ಆ ಭಾಗದಲ್ಲಿ ವಿಶಿಷ್ಟವಾದುದು ಏನೋ ಇರಬಹುದು ಎಂದು ಅಂದುಕೊಂಡಿದ್ದೆವು ಎಂದು ಖಗೋಳಶಾಸ್ತ್ರ ಪ್ರಾಧ್ಯಾಪಕ ಲಾರೆನ್ಸ್ ರುಡ್ನಿಕ್ ಹೇಳಿದರು.

2007: ಪಾಕಿಸ್ಥಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಸ್ವದೇಶಕ್ಕೆ ಮರಳಲು ಪಾಕ್ ಸುಪ್ರೀಂಕೋರ್ಟ್ ಅನುಮತಿ ನೀಡಿದ್ದು, ಆ ದೇಶದಲ್ಲಿ ಕೋಲಾಹಲ ಹುಟ್ಟುಹಾಕಿತು. ಸುಪ್ರೀಂಕೋರ್ಟ್ ತೀರ್ಪಿನ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಸಂಸದೀಯ ವ್ಯವಹಾರ ಸಚಿವ ಶೇರ್ ಆಫ್ಘಾನ್ ನಿಯಾಜಿ ಅವರಿಗೆ ಸುಪ್ರೀಂಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿತು. ಟಿವಿ ವಾಹಿನಿಯೊಂದರಲ್ಲಿ ಕೋರ್ಟ್ ತೀರ್ಪನ್ನು ಟೀಕಿಸಿದ್ದ ಸಚಿವ ನಿಯಾಜಿ, ನ್ಯಾಯಾಂಗವೂ ಈಗ ರಾಜಕೀಯ ಪಕ್ಷದಂತೆ ವರ್ತಿಸುತ್ತಿದೆ. ತಾವು ಈ ತೀರ್ಪನ್ನು ಒಪ್ಪುವುದಿಲ್ಲ. ನ್ಯಾಯಾಂಗ ಸಂಘರ್ಷದ ಹಾದಿ ಹಿಡಿದಿದೆ ಎಂದು ಹೇಳಿದ್ದರು.

2007: ಕರ್ನಾಟಕ ರಾಜ್ಯ ಸರ್ಕಾರ ನೀಡುವ 2006-07ನೇ ಸಾಲಿನ ಬಸವ ಪ್ರಶಸ್ತಿಯನ್ನು ಮಾಜಿ ರಾಷ್ಟ್ರಪತಿ ಪ್ರೊ ಎ.ಪಿ.ಜೆ.ಅಬ್ದುಲ್ ಕಲಾಂ ಅವರಿಗೆ ನೀಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಎಚ್. ಎಸ್. ಮಹದೇವ ಪ್ರಸಾದ್ ಪ್ರಕಟಿಸಿದರು.

2007: ರಾಗ ಸಂಯೋಜನೆ ಸಂದರ್ಭದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಹಾಗೂ ಭಾರ್ತಿ ಎಂಟರ್ ಪ್ರೈಸಸ್ ಅಧ್ಯಕ್ಷ ಸುನೀಲ್ ಮಿತ್ತಲ್ ಅವರು ರಾಷ್ಟ್ರಗೀತೆಗೆ ಅಗೌರವ ಸಲ್ಲಿಸಿದ್ದಾರೆ ಎಂದು ಆರೋಪಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿತು. ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿ ಜೆ. ಮೋಹನ್ ರಾಜ್ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಪಿ. ಶಹಾ ಹಾಗೂ ನ್ಯಾಯಮೂರ್ತಿ ಪಿ. ಜೋತಿಮಣಿ ಅವರನ್ನು ಒಳಗೊಂಡ ವಿಭಾಗೀಯ ಪೀಠ ವಜಾ ಮಾಡಿತು. ರೆಹಮಾನ್ ಅವರು ರಾಷ್ಟ್ರಗೀತೆಯನ್ನು `ಮೊಟಕುಗೊಳಿಸಿ ಹಾಗೂ ವಿರೂಪಗೊಳಿಸಿ' ರಾಗಸಂಯೋಜನೆ ಮಾಡಿದ ಹಾಡನ್ನು ಪ್ರಸಾರ ಮಾಡುವುದು ಹಾಗೂ ಈ ಹಾಡಿನ ಕ್ಯಾಸೆಟ್ ಮಾರಾಟ ಮಾಡುವುದನ್ನು ಕಾನೂನು ಬಾಹಿರವೆಂದು ಘೋಷಿಸುವಂತೆ ಆಗ್ರಹಿಸಿ ಮೋಹನ್ ರಾಜ್ ಅರ್ಜಿ ಸಲ್ಲಿಸಿದ್ದರು. ಮಿತ್ತಲ್ ಮಾಲೀಕತ್ವದ ಭಾರ್ತಿ ಏರ್ಟೆಲ್ ಪ್ರಾಯೋಜಿಸಿದ ಈ ಕಾರ್ಯಕ್ರಮ ಹಲವು ಟಿ.ವಿ ಚಾನೆಲ್ಲುಗಳಲ್ಲಿ ಪ್ರಸಾರಗೊಂಡಿತ್ತು.

2006: ಜೆಕ್ ಗಣರಾಜ್ಯದ ರಾಜಧಾನಿ ಪ್ಲೇಗ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಖಗೋಳ ವಿಜ್ಞಾನ ಸಂಘದ ಮಹಾಧಿವೇಶನದಲ್ಲಿ ವಿಜ್ಞಾನಿಗಳು ಒಂಬತ್ತು ಗ್ರಹಗಳ ಸಾಲಿನಿಂದ `ಪ್ಲೂಟೋ'ವನ್ನು ಕಿತ್ತು ಹಾಕಲು ತೀರ್ಮಾನಿಸಿದರು. ಗ್ರಹ ಎಂದು ಕರೆಸಿಕೊಳ್ಳಲು ನಿರ್ದಿಷ್ಟ ವ್ಯಾಖ್ಯಾನವ್ದಿದು, ಇದರ ಪ್ರಕಾರ `ಪ್ಲೂಟೋ' ಗ್ರಹಗಳ ಸಾಲಿಗೆ ಸೇರುವುದಿಲ್ಲ ಎಂಬುದು ವಿಜ್ಞಾನಿಗಳ ಪ್ರತಿಪಾದನೆ. ಸೌಮಂಡಲದ 9ನೇ ಗ್ರಹವಾಗಿದ್ದ ಪ್ಲೂಟೋ 1930ರಲ್ಲಿ ಪತ್ತೆಯಾಗಿತ್ತು. ವಿಜ್ಞಾನಿಗಳ ತೀರ್ಮಾನದ ಪ್ರಕಾರ ಇನ್ನು ಮುಂದೆ ಸೌರಮಂಡಲದಲ್ಲಿ ಇರುವ ಗ್ರಹಗಳು ಎಂಟು ಮಾತ್ರ. ಅವುಗಳು ಯಾವುವು ಎಂದರೆ ಮಂಗಳ, ಬುಧ, ಭೂಮಿ, ಗುರು, ಶುಕ್ರ, ಶನಿ, ಯುರೇನಸ್ ಮತ್ತು ನೆಪ್ಚೂನ್.

2006: ಯುರೋಪಿನ ಅತ್ಯಂತ ದೊಡ್ಡ ಹಿಂದೂ ದೇವಾಲಯ ಎನ್ನಲಾದ `ವೆಂಕಟೇಶ್ವರ ದೇವಾಲಯ'ವನ್ನು ಬರ್ಮಿಂಗ್ ಹ್ಯಾಮ್ ಬಳಿ ಉದ್ಘಾಟಿಸಲಾಯಿತು. 57.3 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಈ ದೇವಾಲಯವನ್ನು ತಿರುಪತಿಯ ವೆಂಕಟೇಶ್ವರ ದೇವಾಲಯದ ಮಾದರಿಯಲ್ಲಿಯೇ ನಿರ್ಮಿಸಲಾಗಿದೆ. 6.6 ಮೀಟರ್ ಎತ್ತರದ ಕೃಷ್ಣನ ವಿಗ್ರಹವನ್ನು ಇಲ್ಲಿ ಸ್ಥಾಪಿಸಲಾಗಿದೆ.

2006: `ಆರ್ಟ್ ಆಫ್ ಲಿವಿಂಗ್' ಸಂಸ್ಥಾಪಕ ಶ್ರೀಶ್ರೀಶ್ರೀ ರವಿಶಂಕರ ಗುರೂಜಿ ಅವರಿಗೆ ಮಂಗೋಲಿಯಾ ಸರ್ಕಾರದ ಅತ್ಯುನ್ನತ ನಾಗರಿಕ ಪ್ರಶಸ್ತಿ `ಪೋಲ್ ಸ್ಟಾರ್' ಪ್ರದಾನ ಮಾಡಲಾಯಿತು. ಭಾರತ- ಮಂಗೋಲಿಯಾ ನಡುವಣ ಸ್ನೇಹವರ್ಧನೆಗೆೆ ನೀಡಿದ ಮೌಲಿಕ ಕಾಣಿಕೆಗಾಗಿ ಮಂಗೋಲಿಯಾದ ಉಲನ್ ಬತರಿನಲ್ಲಿ ರಾಷ್ಟ್ರಾಧ್ಯಕ್ಷರ ಕಚೇರಿಯಲ್ಲಿ ಈ ಪ್ರಶಸ್ತಿಯನ್ನು ಗುರೂಜಿ ಅವರಿಗೆ ನೀಡಲಾಯಿತು.

2006: ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಿರಿಯ ಸಾಹಿತಿ ಬಿ.ಆರ್. ವಾಡಪ್ಪಿ (92) ಧಾರವಾಡದಲ್ಲಿ ನಿಧನರಾದರು. ಸರ್ವೋದಯ ಸಾಹಿತ್ಯ ಆರಂಭದಲ್ಲಿ ಸಾಹಿತ್ಯ ಕೃಷಿ ಆರಂಭಿಸಿದ ವಾಡಪ್ಪಿ ಅವರು ವಿಮರ್ಶೆ, ನಾಟಕ, ಭಾಷಣ, ಹರಟೆ ಮುಂತಾದ ಹಲವಾರು ಪ್ರಕಾರಗಳಲ್ಲಿ ಮೌಲಿಕ ಕೃತಿಗಳನ್ನು ಹೊರತಂದವರು. 1991ರಲ್ಲಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು.

2006: ಸಂಗೀತಗಾರ ವಲ್ಲಾನ್ ಚಕ್ರವರ್ತಿಲು ಕೃಷ್ಣಮಾಚಾರುಲು (84) ವಿಜಯವಾಡದ ಸ್ವಗೃಹದಲ್ಲಿ ನಿಧನರಾದರು. 1923ರಲ್ಲಿ ಕೃಷ್ಣಾ ಜಿಲ್ಲೆ ಜಗ್ಗಯ್ಯ ಪೇಟೆಯಲ್ಲಿ ಜನಿಸಿದ ಅವರು ಆಕಾಶವಾಣಯಲ್ಲಿ ಮೂರೂವರೆ ದಶಕ ಕಾಲ ಅತ್ಯುನ್ನತ ಶ್ರೇಣಿಯ ಸಂಗೀತ ಕಲಾವಿದರಾಗಿ ಸೇವೆ ಸಲ್ಲಿಸಿದ್ದರು. ಸಂಸ್ಕೃತ, ತೆಲುಗು ಭಾಷೆಗಳಲ್ಲಿ ವಿದ್ವಾಂಸರಾಗಿದ್ದ ಅವರನ್ನು ಆಂಧ್ರಪ್ರದೇಶ ಸಂಗೀತ ನಾಟಕ ಅಕಾಡೆಮಿಯು `ಗಾನಕಲಾ ಪ್ರಪೂರ್ಣ' ಪ್ರಶಸ್ತಿ ನೀಡಿ ಗೌರವಿಸಿತ್ತು.

1995: ಮೈಕ್ರೋಸಾಫ್ಟ್ ಕಾರ್ಪೊರೇಷನ್ `ವಿಂಡೋಸ್ 95' ಅನ್ನು ನ್ಯೂಯಾರ್ಕಿನಲ್ಲಿ ಬಿಡುಗಡೆ ಮಾಡಿತು.

1974: ಫಕ್ರುದ್ದೀನ್ ಆಲಿ ಅಹಮದ್ ಅವರು ಭಾರತದ ಐದನೆಯ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

1971: ಅಜಿತ್ ವಾಡೇಕರ್ ನೇತೃತ್ವದಲ್ಲಿ ಭಾರತವು ಇಂಗ್ಲೆಂಡಿನಲ್ಲಿ ಇಂಗ್ಲೆಂಡ್ ವಿರುದ್ಧದ ಕ್ರಿಕೆಟ್ ಸರಣಿಯಲ್ಲಿ ತನ್ನ ಮೊತ್ತ ಮೊದಲ ಜಯವನ್ನು (1-0) ಗಳಿಸಿತು. ಲೆಗ್ ಸ್ಪಿನ್ನರ್ ಚಂದ್ರಶೇಖರ್ ಅವರು ಈ ಜಯದ `ಹೀರೋ' ಆಗ್ದಿದರು.

1969: ವರಾಹಗಿರಿ ವೆಂಕಟಗಿರಿ ಅವರು ಭಾರತದ ನಾಲ್ಕನೆಯ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

1968: ಖ್ಯಾತ ಭೂಗರ್ಭ ಶಾಸ್ತ್ರಜ್ಞ ರಾಧಾ ಕಮಲ್ ಮುಖರ್ಜಿ ನಿಧನರಾದರು.

1955: ಡಾ. ರಾಮಮನೋಹರ ಲೋಹಿಯಾ ಅವರು ಭಾರತೀಯ ಸಮಾಜವಾದಿ ಪಕ್ಷವನ್ನು ಸ್ಥಾಪಿಸಿದರು.

1952: ಸೋಷಿಯಲಿಸ್ಟ್ ಪಾರ್ಟಿ ಮತ್ತು ಕೃಷಿಕ್ ಮಜ್ದೂರ್ ಪಾರ್ಟಿ ವಿಲೀನ.

1932: ಅಮೇಲಿಯಾ ಈಯರ್ ಹಾರ್ಟ್ ಅವರು ಅಮೆರಿಕದ ಮೇಲಿನಿಂದ ನಿಲುಗಡೆ ರಹಿತವಾಗಿ ವಿಮಾನಯಾನ ಮಾಡಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು ಲಾಸ್ ಏಂಜೆಲಿಸ್ ನಿಂದ ನ್ಯೂಜೆರ್ಸಿಯನೆವಾರ್ಕಿಗೆ 19 ಗಂಟೆಗಳ ಕಾಲ ಪ್ರಯಾಣಿಸಿದರು.

1924: ಸಾಹಿತಿ ಕೆ.ಎಚ್. ಶ್ರೀನಿವಾಸ್ ಜನನ.

1911: ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ್ತಿ ವೀಣಾದಾಸ್ ಜನನ.

1903: ಕನ್ನಡ ಸಾಹಿತ್ಯಾರಾಧಕ, ಏಕೀಕರಣ ಹೋರಾಟಗಾರ , ಕರ್ನಾಟಕ ಹೈಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ ನಿಟ್ಟೂರು ಶ್ರೀನಿವಾಸರಾವ್ (1903-2004) ಅವರು ನಿಟ್ಟೂರು ಶಾಮಣ್ಣ- ಸೀತಮ್ಮ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು. ಹೈಕೋರ್ಟಿನ ಮುಖ್ಯನ್ಯಾಯಾಧೀಶರಾಗಿ 1963ರಲ್ಲಿ ನಿವೃತ್ತರಾದ ಬಳಿಕ ಅದೇ ವರ್ಷ ಹಂಗಾಮೀ ರಾಜ್ಯಪಾಲರಾಗಿ, ನಂತರ ಭಾರತ ಸರ್ಕಾರದ ಪ್ರಥಮ ವಿಜಿಲೆನ್ಸ್ ಕಮೀಷನರ್ ಆಗಿ ಸಾರ್ವಜನಿಕ ಆಡಳಿತದಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಸಂತಾನಂ ಸಮಿತಿ ರಚನೆಗೆ ಕಾರಣರಾಗಿ 1968ರಲ್ಲಿ ನಿವೃತ್ತರಾದರು. ಸತ್ಯಶೋಧನಾ ಪ್ರಕಟಣಾ ಮಂದಿರ ಸ್ಥಾಪಿಸಿ ಹಲವಾರು ಗ್ರಂಥಗಳನ್ನು ಪ್ರಕಟಿಸಿದ ಅವರು ಶಿವರಾಮ ಕಾರಂತರ `ಬಾಲ ಪ್ರಪಂಚ'ಕ್ಕೆ (ವಿಶ್ವಕೋಶ) ಪಡಿಯಚ್ಚನ್ನು ಜರ್ಮನಿಯಿಂದ ತರಿಸಿ, ಆ ದಿನಗಳಲ್ಲೇ ಅದರ ಮುದ್ರಣಕ್ಕೆ ಒಂದು ಲಕ್ಷ ರೂಪಾಯಿ ವೆಚ್ಚ ಮಾಡಿದ್ದರು. ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕೃತರಾದ ಅವರು 2004ರ ಆಗಸ್ಟ್ 12ರಂದು ನಿಧನರಾದರು.

1891: ಚಲನಚಿತ್ರ ಕ್ಯಾಮೆರಾ ಕಂಡು ಹಿಡಿದ ಥಾಮಸ್ ಆಲ್ವ ಎಡಿಸನ್ ಗೆ ಇದಕ್ಕೆ ಸಂಬಂಧಿಸಿದ ಹಕ್ಕುಸ್ವಾಮ್ಯ ನೀಡಲಾಯಿತು.

1690: ಜಾಬ್ ಚಾರ್ನಾಕ್ ಅವರು 1690ರಲ್ಲಿ ಈದಿನ ಕೋಲ್ಕತಾ (ಅಂದಿನ ಕಲ್ಕತ್ತಾ) ನಗರವನ್ನು ಸ್ಥಾಪಿಸಿದರು. ಹಾಗಾಗಿ ಈ ದಿನವನ್ನು ಕೋಲ್ಕತಾ ದಿನ ಎಂದು ಘೋಷಿಸಲಾಯಿತು. 2000ದಲ್ಲಿ ಇದೇ ದಿನ ಕೋಲ್ಕತಾ ಮುನಿಸಿಪಲ್ ಕಾರ್ಪೊರೇಷನ್ 310ನೇ ಕೋಲ್ಕತಾ ಜನ್ಮದಿನವನ್ನು ಆಚರಿಸಿತು. ಈ ಸಂದರ್ಭದಲ್ಲಿ ಕೋಲ್ಕತಾ ನಗರ ಕುರಿತ ವೆಬ್ಸೈಟ್ ಬಿಡುಗಡೆ ಮಾಡಲಾಯಿತು.

1608: ಮೊದಲ ಇಂಗ್ಲಿಷ್ ರಾಯಭಾರಿ ಸೂರತ್ ಗೆೆ ಆಗಮಿಸಿದ.

1600: ಈಸ್ಟ್ ಇಂಡಿಯಾ ಕಂಪೆನಿಯ ಮೊದಲ ಹಡಗು `ಹೆಕ್ಟರ್' ಸೂರತ್ ಬಂದರಿಗೆ ಆಗಮಿಸಿತು.

ಕ್ರಿ.ಶ.79: ವೆಸೂವಿಯಸ್ ಜ್ವಾಲಾಮುಖಿ ಬಾಯ್ದೆರೆದು ಪಾಂಪೆ ಮತ್ತು ಸ್ಟಾಬೀ ಪಟ್ಟಣಗಳನ್ನು ಬೂದಿಯ ಅಡಿಯಲ್ಲಿ ಮುಳುಗಿಸಿದರೆ, ಹರ್ಕ್ಯುಲೇನಿಯಮ್ ನಗರವನ್ನು ಲಾವಾರಸದ ಕೆಸರಿನಲ್ಲಿ ಮುಳುಗಿಸಿತು. 1631ರ ಡಿಸೆಂಬರ್ 16ರಂದು ಜ್ವಾಲಾಮುಖಿ ಮತ್ತೊಮ್ಮೆ ಭಾರೀ ಪ್ರಮಾಣದಲಿ ಬಾಯ್ದೆರೆದು 3000 ಜನರನ್ನು ಬಲಿ ತೆಗೆದುಕೊಂಡಿತು.

Sunday, August 23, 2009

Happy Ganesha Chaturti to all

Happy Ganesha Chaturti to All


anigif

ಇಂದಿನ ಇತಿಹಾಸ History Today ಆಗಸ್ಟ್ 23

ಇಂದಿನ ಇತಿಹಾಸ

ಆಗಸ್ಟ್ 23

ಹೆಸರಾಂತ ಮಲೆಯಾಳಿ ಕವಿ ಡಾ. ಕೆ. ಅಯ್ಯಪ್ಪ ಫಣಿಕ್ಕರ್ (76) ತಿರುವನಂತಪುರದಲ್ಲಿ ನಿಧನರಾದರು. ಕೇರಳ ವಿಶ್ವವಿದ್ಯಾಲಯ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದ ಅವರು ಭಾರತೀಯ ಸಾಹಿತ್ಯ, ಪಾಶ್ಚಾತ್ಯ ಸಾಹಿತ್ಯ, ಕಲೆ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ ವಿದ್ವಾಂಸರಾಗಿದ್ದರು.

2008: ಮುಖ್ಯಮಂತ್ರಿ ಮಧುಕೋಡಾ ನೇತೃತ್ವದ ಸರ್ಕಾರಕ್ಕೆ ಜಾರ್ಖಂಡ್ ಮುಕ್ತಿ ಮೋರ್ಚಾ ನೀಡಿದ್ದ ತನ್ನ ಬೆಂಬಲ ವಾಪಾಸು ಪಡೆದ ಹಿನ್ನೆಲೆಯಲ್ಲಿ ಮಧು ಕೋಡಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದರಿಂದಾಗಿ ಜಾರ್ಖಂಡಿನಲ್ಲಿ 12 ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಪ್ರಹಸನಕ್ಕೆ ತೆರೆಬಿದ್ದಿತು. ಈದಿನ ಬೆಳಿಗ್ಗೆ ನವದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾದ ಬೆನ್ನಲ್ಲೇ ರಾಂಚಿಗೆ ಆಗಮಿಸಿದ ಕೋಡಾ ರಾಜ್ಯಪಾಲ ಸೈಯದ್ ಸಿಬ್ತೆ ರಝಿ ಅವರನ್ನು ಭೇಟಿ ಮಾಡಿ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದರು.

2007: ಪಾಕಿಸ್ಥಾನ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಅವರಿಗೆ ಮುಖಭಂಗವಾಗುವಂತೆ ಪಾಕಿಸ್ಥಾನಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪಿನಲ್ಲಿ ಮಾಜಿ ಪ್ರಧಾನಿ ನವಾಜ್ ಷರೀಫ್ ಹಾಗೂ ಅವರ ಸಹೋದರ ಶಹಬಾಜ್ ಅವರಿಗೆ ಸ್ವದೇಶಕ್ಕೆ ಮರಳಲು ಅನುಮತಿ ನೀಡಿತು. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಚೌಧುರಿ ನೇತೃತ್ವದ ಏಳು ನ್ಯಾಯಮೂರ್ತಿಗಳನ್ನು ಒಳಗೊಂಡ ನ್ಯಾಯಪೀಠವು ಷರೀಫ್ ಸಹೋದರರ ಕುರಿತು ಒಮ್ಮತದ ತೀರ್ಪು ನೀಡಿ, ಸ್ವದೇಶಕ್ಕೆ ಮರಳುವುದು ಹಾಗೂ ವಾಸಿಸುವುದು ಅವರ ಜನ್ಮಸಿದ್ಧ ಹಕ್ಕಾಗಿದೆ ಎಂದು ಹೇಳಿತು. ಈ ತೀರ್ಪಿನಿಂದಾಗಿ ಈ ವರ್ಷದ ಅಂತ್ಯದಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಷರೀಫ್ ಸಹೋದರರು ಪಾಲ್ಗೊಳಲು ಅವಕಾಶ ಲಭಿಸಿದಂತಾಯಿತು. 1999ರ ಅಕ್ಟೋಬರಿನಲ್ಲಿ ನಡೆದ ಸೇನಾ ಕ್ರಾಂತಿಯಲ್ಲಿ ಸೇನಾಪಡೆಯ ಮುಖ್ಯಸ್ಥರಾಗಿದ್ದ ಮುಷರಫ್, ನವಾಜ್ ಷರೀಫ್ ಅವರನ್ನು ಪ್ರಧಾನಿ ಪಟ್ಟದಿಂದ ಪದಚ್ಯುತಗೊಳಿಸಿದ್ದರು. ಅಧಿಕಾರ ಕಳೆದುಕೊಂಡ ಒಂದು ವರ್ಷದ ಬಳಿಕ ಷರೀಫ್ ಸಹೋದರರು ದೇಶತ್ಯಾಗ ಮಾಡಿ, ಸೌದಿಅರೇಬಿಯಾದಲ್ಲಿ ಭೂಗತರಾಗಿ ವಾಸಿಸುತ್ತಿದ್ದರು. ಈ ವರ್ಷದ ಅಂತ್ಯದಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಪಾಲ್ಗೊಳ್ಳಲು ತಮಗೆ ಅನುವು ಮಾಡಿಕೊಡಬೇಕು ಹಾಗೂ ಸ್ವದೇಶಕ್ಕೆ ಮರಳಲು ಅವಕಾಶ ನೀಡಬೇಕು ಎಂದು ಶರೀಫ್ ಹಾಗೂ ಅವರ ಸಹೋದರ ಶಹಬಾಜ್ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು.

2007: ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಗೊಂದಲಕಾರಿ ಹೇಳಿಕೆಗಳ ಮೂಲಕ ತಮ್ಮನ್ನು ಛೇಡಿಸುತ್ತಿರುವ ಜೆಡಿಎಸ್ ಗೆ ಚುರುಕು ಮುಟ್ಟಿಸುವುದಕ್ಕಾಗಿ ಸಂಪುಟ ಸಭೆಗೆ ಬಹಿಷ್ಕಾರ ಹಾಕಲು ಬಿಜೆಪಿ ಸಚಿವರು ವಿಫಲ ಯತ್ನ ನಡೆಸಿದರು. ಇದಕ್ಕೆ ಪ್ರತಿಯಾಗಿ ಮಧ್ಯಂತರ ಚುನಾವಣೆಗೆ ಹೋಗೋಣ ಎನ್ನುವ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಅವರ ಧಮಕಿಗೆ, ಚುನಾವಣೆಗೆ ತಾವೂ ಸಿದ್ಧ ಎನ್ನುವ ಉಪಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿಸವಾಲು ಹಾಕಿದ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳು ಕೊನೆಗೆ ಸಂಧಾನಕ್ಕೆ ಶರಣಾದವು.

2007: ಕರ್ನಾಟಕ ರಾಜ್ಯ ಹೆದ್ದಾರಿಯ ಶಹಾಪುರ- ಜೇವರ್ಗಿ ರಸ್ತೆಯ ನಡುವೆ ಮೂಡಬೂಳ ಕ್ರಾಸ್ ಬಳಿ ಸಂಭವಿಸಿದ ಅಪಘಾತದಲ್ಲಿ ಗೂಡ್ಸ್ ಟೆಂಪೊ ಹಾಗೂ ಲಾರಿ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ 11 ಮಂದಿ ಮೃತರಾದರು.

2007: ಕರ್ನಾಟಕ ಏಕೀಕರಣವಾದ ಐವತ್ತು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಹೊಸ ತಾಲೂಕುಗಳ ರಚನೆಗೆ ರಾಜ್ಯ ಸರ್ಕಾರ ಮುಂದಾಯಿತು. ರಾಜ್ಯದಲ್ಲಿ ಎಲ್ಲೆಲ್ಲಿ ಹೊಸ ತಾಲೂಕುಗಳ ರಚನೆ ಆಗಬೇಕು ಎಂಬ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಅಧಿಕಾರಿಗಳ ಸಮಿತಿ ರಚಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿತು.

2007: ರಾಮನಗರದಲ್ಲಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಗೃಹ ಸಚಿವ ಎಂ. ಪಿ. ಪ್ರಕಾಶ್ ಮತ್ತು ಕಂದಾಯ ಸಚಿವ ಜಗದೀಶ ಶೆಟ್ಟರ್ ಅವರು ನೂತನ ರಾಮನಗರ ಜಿಲ್ಲೆಯನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಹೊಸದಾಗಿ ರಚನೆಯಾಗಿರುವ ರಾಮನಗರ ಜಿಲ್ಲೆಯ ಕೇಂದ್ರಸ್ಥಾನವಾಗಿರುವ ರಾಮನಗರ ವಿಧಾನಸಭಾ ಕ್ಷೇತ್ರ ರಾಜ್ಯಕ್ಕೆ ಮೂವರು ಮುಖ್ಯಮಂತ್ರಿಗಳನ್ನು ಮತ್ತು ದೇಶಕ್ಕೆ ಒಬ್ಬ ಪ್ರಧಾನಿಯನ್ನು ನೀಡಿದ ಹೆಗ್ಗಳಿಕೆ ಗಳಿಸಿಕೊಂಡಿದೆ. ಕೆಂಗಲ್ ಹನುಮಂತಯ್ಯನವರು, ಎಚ್.ಡಿ. ದೇವೇಗೌಡರು ಹಾಗೂ ಹಾಲಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಏರಿಸಿದ ಕ್ಷೇತ್ರವಿದು.

2006: ಭಾರತದ ಸಾಫ್ಟ್ ವೇರ್ ರಂಗದ ದೈತ್ಯ ಸಂಸ್ಥೆಯಾಗಿರುವ ವಿಪ್ರೋದ ಅಧ್ಯಕ್ಷ ಅಜೀಂ ಪ್ರೇಮ್ ಜಿ ಅವರು ಪೋರ್ಬ್ಸ್ ಪತ್ರಿಕೆ ನಡೆಸಿದ ಸಮೀಕ್ಷೆಯಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವದ ಆರನೇ ದೊಡ್ಡ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಒಟ್ಟು 13.3 ಶತಕೋಟಿ ಅಮೆರಿಕ ಡಾಲರ್ ಆದಾಯದೊಂದಿಗೆ ಆರನೇ ಸ್ಥಾನ ಪಡೆದಿರುವ ಪ್ರೇಮ್ ಜಿ ಗೂಗಲ್ ಸ್ಥಾಪಕ ಸರ್ಜೀ ಬ್ರಿನ್ ಮತ್ತು ಲ್ಯಾರಿ ಪೇಜ್, ಇಬೇ ಸಂಸ್ಥಾಪಕ ಪಿರ್ರಿ ಒಮಿಡ್ಯಾರ್ ಮತ್ತು ಜರ್ಮನಿಯ ಸಾಫ್ಟ್ ವೇರ್ ಕಂಪೆನಿ `ಸ್ಯಾಪ್' ಸಂಸ್ಥಾಪಕ ಹ್ಯಾಸ್ಸೋ ಪ್ಲಾಟೆನರ್ ಅವರನ್ನು ಹಿಂದೆ ಹಾಕಿದರು. 50 ಶತಕೋಟಿ ಡಾಲರ್ ನಿವ್ವಳ ಆದಾಯದ ಮೈಕ್ರೋಸಾಫ್ಟ್ ಅಧ್ಯಕ್ಷ ಬಿಲ್ ಗೇಟ್ಸ್ ಸತತ 12ನೇ ಬಾರಿ ನಂಬರ್ 1 ಶ್ರೀಮಂತ ಸ್ಥಾನ ಪಡೆದರು.

2006: ಕಾರ್ಕಳ - ಶೃಂಗೇರಿ ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಕೆರೆಕಟ್ಟೆ ವನ್ಯಜೀವಿ ವಿಭಾಗದ ಕಚೇರಿ ಮೇಲೆ ದಾಳಿ ನಡೆಸಿದ ನಕ್ಸಲೀಯರ ಗುಂಪೊಂದು ದಾಖಲೆಪತ್ರಗಳು ಮತ್ತು ಜೀಪಿಗೆ ಬೆಂಕಿ ಹಚ್ಚಿತು. ನಸುಕಿನ 1.30ರ ವೇಳೆಯಲ್ಲಿ ಈ ಘಟನೆ ನಡೆಯಿತು.

2006: ಮಾಜಿ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಕರ್ನಾಟಕದ ಪಂಕಜ್ ಅಡ್ವಾಣಿ ಅವರು ಪ್ರತಿಷ್ಠಿತ ರಾಜೀವ್ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆಯಾದರು.

2006: ಹೆಸರಾಂತ ಮಲೆಯಾಳಿ ಕವಿ ಡಾ. ಕೆ. ಅಯ್ಯಪ್ಪ ಫಣಿಕ್ಕರ್ (76) ತಿರುವನಂತಪುರದಲ್ಲಿ ನಿಧನರಾದರು. ಕೇರಳ ವಿಶ್ವವಿದ್ಯಾಲಯ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದ ಅವರು ಭಾರತೀಯ ಸಾಹಿತ್ಯ, ಪಾಶ್ಚಾತ್ಯ ಸಾಹಿತ್ಯ, ಕಲೆ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ ವಿದ್ವಾಂಸರಾಗಿದ್ದರು. ಮಲೆಯಾಳಿ ಸಾಹಿತ್ಯದ ಮೇಲೆ ಅಚ್ಚಳಿಯದ ಪ್ರಭಾವ ಬೀರಿದ್ದ ಫಣಿಕ್ಕರ್ ಅವರ `ಕುರುಕ್ಷೇತ್ರಂ' ಕಾವ್ಯ ಮಲೆಯಾಳಿ ಸಾಹಿತ್ಯಕ್ಕೆ ತಿರುವು ತಂದ ಕೃತಿ.

2006: ಪಾಕಿಸ್ಥಾನದ ಮಾಜಿ ಕ್ರಿಕೆಟ್ ಪಟು ವಾಸಿಂ ರಾಜಾ (54) ಅವರು ಲಂಡನ್ನಿನಲ್ಲಿ ಪ್ರದರ್ಶನ ಕ್ರಿಕೆಟ್ ಪಂದ್ಯವೊಂದರಲ್ಲಿ ಆಡುತ್ತಿದ್ದಾಗ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಮೈದಾನದಲ್ಲೇ ಕುಸಿದು ಬಿದ್ದು ಮೃತರಾದರು.

1949: ಸಾಹಿತಿ ಎಂ.ವಿ. ಶರ್ಮ ತದ್ದಲಸೆ ಜನನ.

1947: ಸರ್ದಾರ ವಲ್ಲಭಭಾಯಿ ಪಟೇಲ್ ಅವರು ಜವಾಹರಲಾಲ್ ನೆಹರೂ ಸಂಪುಟದಲ್ಲಿ ಉಪ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಭಾರತದ ಮೊದಲ ಉಪ ಪ್ರಧಾನಿಯಾಗಿ ಹಾಗೂ ಗೃಹ ಸಚಿವರಾಗಿ, ಹರಿದು ಹಂಚಿಹೋಗಿದ್ದ ಭಾರತದ ರಾಜ್ಯಗಳನ್ನು ಒಂದುಗೂಡಿಸಿ `ಉಕ್ಕಿನ ಮನುಷ್ಯ' ಎಂಬ ಖ್ಯಾತಿಗೆ ಪಾತ್ರರಾದ ಸರ್ದಾರ್ ಪಟೇಲ್ ಅವರು ಭಾರತದ ಸ್ವಾತಂತ್ರ್ಯ ಹೋರಾಟದ ಅಗ್ರಗಣ್ಯ ನಾಯಕರಲ್ಲಿ ಒಬ್ಬರು.

1947: ಭಾರತೀಯ ಚಿತ್ರನಟಿ ಸಾಯಿರಾಬಾನು ಜನ್ಮದಿನ. ಈಕೆಯ ಮದುವೆ ಬಾಲಿವುಡ್ ನಟ ದಿಲೀಪ್ ಕುಮಾರ್ ಜೊತೆ ನಡೆಯಿತು.

1943: ಇತಿಹಾಸದಲ್ಲೇ ಅತಿದೊಡ್ಡ `ಟ್ಯಾಂಕ್ ಸಮರ' ಎಂದೇ ಖ್ಯಾತಿ ಪಡೆದ `ಕರ್ಸ್ಕ್ ಕದನ' ಕೊನೆಗೊಂಡಿತು. 6000 ಟ್ಯಾಂಕುಗಳು, 2 ಲಕ್ಷ ಪಡೆಗಳು ಮತ್ತು 4000 ಯುದ್ಧ ವಿಮಾನಗಳನ್ನು ಈ ಕದನದಲ್ಲಿ ಬಳಸಲಾಗಿತ್ತು. ಜುಲೈ 5ರಂದು ಆರಂಭವಾದ ಈ ಕದನ ಎರಡನೇ ಜಾಗತಿಕ ಸಮರ ಕಾಲದಲ್ಲಿ ರಷ್ಯದ ಪಶ್ಚಿಮ ಭಾಗದಲ್ಲಿ ಜರ್ಮನಿ ನಡೆಸಿದ ಅಯಶಸ್ವಿ ದಾಳಿ ಎನಿಸಿತು. ಕರ್ಸ್ಕ್ ನಗರಕ್ಕಾಗಿ ನಡೆದ ಈ ಕದನದ ಸೋಲು ಜರ್ಮನಿಯ ದಾಳಿ ಸಾಮರ್ಥ್ಯವನ್ನು ಕುಗ್ಗಿಸಿ, ಅದರ ಪೂರ್ವ ಭಾಗದ ಮೇಲಿನ 1944-45ರ ಸೋವಿಯತ್ ದಾಳಿಗಳಿಗೆ ದಾರಿ ಸುಗಮಗೊಳಿಸಿತು.

1944: ರೊಮೇನಿಯಾದ ರಾಜ ಮೈಕೆಲ್ ಅವರು ಪ್ರಧಾನಿ ಅಯೋನ್ ಅಂಟೋನೆಸ್ಕ್ ಅವರನ್ನು ಅಧಿಕಾರದಿಂದ ಪದಚ್ಯುತಗೊಳಿಸಿದರು.

1930: ಸಾಹಿತಿ ಕೆ.ಎಸ್. ಆಮೂರ ಜನನ.

1930: ಸಾಹಿತಿ ಲಲಿತಾ ವೃಷಭೇಂದ್ರ ಸ್ವಾಮಿ ಜನನ.

1926: ಇಟಲಿ ಸಂಜಾತ ಅಮೆರಿಕನ್ ಚಲನಚಿತ್ರ ನಟ ರುಡಾಲ್ಫ್ ವ್ಯಾಲೆಂಟಿನೊ ತಮ್ಮ 31ನೇ ವಯಸ್ಸಿನಲ್ಲಿ ಅಲ್ಸರ್ ಪರಿಣಾಮವಾಗಿ ಮೃತರಾದರು. ಆ ಕಾಲದ `ಗ್ರೇಟ್ ಲವರ್' ಎಂದೇ ಖ್ಯಾತಿ ಪಡೆದಿದ್ದ ಇವರ ಸಾವು ಸಾಮೂಹಿಕ ಹಿಸ್ಟೀರಿಯಾ ಮತ್ತು ಹಲವಾರು ಮಂದಿಯ ಆತ್ಮಹತ್ಯೆಗಳಿಗೆ ಕಾರಣವಾಯಿತು.

1913: ನಿಘಂಟು ತಜ್ಞ ಪ್ರೊ.ಜಿ. ವೆಂಕಟಸುಬ್ಬಯ್ಯ ಅವರು ಅರಮನೆ ವಿದ್ವಾಂಸ ಗಂಜಾಂ ತಿಮ್ಮಣ್ಣಯ್ಯ- ಸುಬ್ಬಮ್ಮ ದಂಪತಿಯ ಮಗನಾಗಿ ಮಂಡ್ಯ ಜಿಲ್ಲೆಯ ಕೈಗೋನಹಳ್ಳಿಯಲ್ಲಿ ಜನಿಸಿದರು. ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಜೊತೆಗೇ ಹಲವಾರು ಕೃತಿಗಳನ್ನು ರಚಿಸಿದ ವೆಂಕಟಸುಬ್ಬಯ್ಯ ಭಾಷಾಂತರ ಪಾಠಗಳು, ಕಾಲೇಜು ಭಾಷಾಂತರ, ಇಗೋ ಕನ್ನಡ ಸಾಮಾಜಿಕ ನಿಘಂಟು ಸೇರಿದಂತೆ 60ಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಶಂಬಾ ಪ್ರಶಸ್ತಿ, ಸೇಡಿಯಾಪು ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ಮುದ್ದಣ ಪುರಸ್ಕಾರ, ರಾಜ್ಯ ಪತ್ರಿಕಾ ಅಕಾಡೆಮಿ ವಿಶೇಷ ಪ್ರಶಸ್ತಿ, ಅಂಕಣ ಶ್ರೀ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಗೋರೂರು ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ಅವರಿಗೆ ಲಭಿಸಿವೆ.

1879: ನವರೋಜಿ ವಾಡಿಯಾ ಅವರು ಮುಂಬೈಯಲ್ಲಿ ಬಾಂಬೆ ಡೈಯಿಂಗ್ ಅಂಡ್ ಮ್ಯಾನುಫ್ಯಾಕ್ಚರಿಂಗ್ ಕಂಪೆನಿ ಲಿಮಿಟೆಡ್ ನ್ನು ಸ್ಥಾಪಿಸಿದರು.

1573: ಅಕ್ಬರನು ರಾಜ್ಯದಲ್ಲಿ ವ್ಯಾಪಿಸಿದ ದಂಗೆಯ ಸುದ್ದಿ ಕೇಳಿ ಆಗ್ರಾವನ್ನು ಬಿಟ್ಟು ಅಹಮದಾಬಾದಿಗೆ ಹೊರಟ. 11 ದಿನಗಳ ಬಳಿಕ ಆತ ಅಹಮದಾಬಾದ್ ತಲುಪಿದ.

1305: ಮೊದಲ ವರ್ಷಗಳಲ್ಲಿ ಸ್ಕಾಟಿಷ್ ರೆಸಿಸ್ಟೆನ್ಸ್ ಪಡೆಗಳನ್ನು ಮುನ್ನಡೆಸಿದ ನಾಯಕ ಸ್ಕಾಟಿಷ್ ದೇಶಪ್ರೇಮಿ ಸರ್. ವಿಲಿಯಂ ವಾಲೇಸ್ ನನ್ನು ಲಂಡನ್ನಿನಲ್ಲಿ ಗಲ್ಲಿಗೇರಿಸಿ ನಂತರ ಸೀಳಿ, ತಲೆ ಕಡಿದು ಉಳಿದ ದೇಹವನ್ನು ನಾಲ್ಕು ಭಾಗಗಳಾಗಿ ಕತ್ತರಿಸಲಾಯಿತು. ಮರುವರ್ಷವೇ 1306ರಲ್ಲಿ ರಾಬರ್ಟ್ ಬ್ರೂಸ್ ದಂಗೆಯೆದ್ದು ಸ್ಕಾಟ್ ಲ್ಯಾಂಡಿಗೆ ಸ್ವಾತಂತ್ರ್ಯ ತಂದುಕೊಟ್ಟ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Advertisement