My Blog List

Saturday, January 31, 2009

ಆರೋಗ್ಯಕ್ಕಾಗಿ ಸೂರ್ಯ ನಮಸ್ಕಾರಕ್ಕೆ ಬನ್ನಿ...!

ಆರೋಗ್ಯಕ್ಕಾಗಿ ಸೂರ್ಯ ನಮಸ್ಕಾರ



ಮಂತ್ರ ಸಹಿತವಾಗಿ ಸೂರ್ಯನುದಯಿಸುವ ಹೊತ್ತಿನಲ್ಲಿ 108 ಬಾರಿ ಸಹಸ್ರಾರು ಮಂದಿ ಒಟ್ಟಿಗೆ ಸಾಮೂಹಿಕವಾಗಿ ಮಾಡುವ ಈ 'ಭಾಸ್ಕರ ನಮನ' ನೋಡುಗರ ಕಣ್ಣಿಗೂ ಒಂದು ಹಬ್ಬ. 
 
ನೆತ್ರಕೆರೆ ಉದಯಶಂಕರ

ಒಂದು ವರ್ಷದ ಹಿಂದೆ ನವದೆಹಲಿಯ ವೈದ್ಯರ ತಂಡವೊಂದು ಚಳಿಗಾಲದಲ್ಲಿ ಹೃದಯಾಘಾತದ ಪ್ರಮಾಣ ಹೆಚ್ಚು ಎಂಬ ಸಂಗತಿಯನ್ನು ಬಹಿರಂಗಪಡಿಸಿತು. ಈ ವೈದ್ಯರ ತಂಡದ ಅಧ್ಯಯನದ ಪ್ರಕಾರ ಡಿಸೆಂಬರ್ - ಜನವರಿ ತಿಂಗಳ ಚಳಿ
ಗಾಲ ಹೃದ್ರೋಗಿಗಳಿಗೆ ತುಂಬಾ ಅಪಾಯಕಾರಿಯಂತೆ. ರಕ್ತನಾಳಗಳು  ದೇಹದ ಬಿಸಿ ಕಾಯ್ದುಕೊಳ್ಳಲು ಅಸಮರ್ಥವಾಗುವುದರಿಂದ ಈ ಅವಧಿಯಲ್ಲಿ ಹೃದ್ರೋಗ ಪ್ರಮಾಣ ಹೆಚ್ಚು. ದೇಹದ ಬಿಸಿ ಕಾಯ್ದುಕೊಳ್ಳಲು ರಕ್ತನಾಳಗಳು ಸಂಕುಚಿತಗೊಳ್ಳುವುದರಿಂದ ಹೃದಯದ ಮೇಲಿನ ಹೊರೆ ಹೆಚ್ಚಿ ಅಸ್ತಮಾ,  ಫ್ಲೂನಂತಹ ಕಾಯ್ದೆಗಳು ಹೆಚ್ಚುತ್ತವೆ ಎಂಬುದು ಅವರ ವಿಶ್ಲೇಷಣೆ.

ಈ ಋತುವಿನಲ್ಲಿನ ಸದಾ ಮೋಡ ಕವಿದ ವಾತಾವರಣ ಹಾಗೂ ಸೂರ್ಯನ ಬಿಸಿಲು ದೇಹಕ್ಕೆ ಬೀಳದೇ ಇರುವುದು ಕೂಡಾ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ ಈ ಸಮಯದಲ್ಲಿ ಮಧ್ಯಾಹ್ನದ ವೇಳೆಗಾದರೂ ಬಿಸಿಲಿಗೆ ಮೈ ಒಡ್ಡುವುದರಿಂದ ಖಿನ್ನತೆಯಂತಹ ಸಮಸ್ಯೆಯಿಂದ ಪಾರಾಗಬಹುದು ಎಂಬುದು ಅವರ ಸಲಹೆ.

ಇದು ಹೊಸ ಸಂಶೋಧನೆ ಏನಲ್ಲ. 19ನೆಯ ಶತಮಾನದಲ್ಲೇ  ಡಾ. ನೀಲ್ಸ್ ಫಿನ್ಸನ್ ಎಂಬ ವ್ಯಕ್ತಿ ತನ್ನ ವಿದ್ಯಾರ್ಥಿದೆಸೆಯಿಂದಲೇ ಸೂರ್ಯನ ಬೆಳಕಿನಲ್ಲಿ ಇರುವ ಶಕ್ತಿ ಕ್ಷಯರೋಗದ ಕ್ರಿಮಿಗಳನ್ನು ನಾಶಮಾಡಬಲ್ಲುದು ಎಂದು ಪ್ರಾಯೋಗಿಕವಾಗಿ ತೋರಿಸಿ ನೊಬೆಲ್ ಪ್ರಶಸ್ತಿಯನ್ನೇ ಪಡೆದಿದ್ದರು.

ವಿಜ್ಞಾನಿಗಳು ವಿವಿಧ ಅಧ್ಯಯನಗಳನ್ನು ಮಾಡಿ ಸೂರ್ಯನ ಬಿಸಿಲಿಗೆ ಎಂತೆಂತಹ ಶಕ್ತಿ ಉಂಟು ಎಂಬ ದೊಡ್ಡ ಪಟ್ಟಿಯನ್ನೇ ಮಾಡಿಟ್ಟಿದ್ದಾರೆ. ಅದರ ಪ್ರಕಾರ ದೇಹಕ್ಕೆ ಅತ್ಯಗತ್ಯವಾದ ವಿಟಮಿನ್ 'ಡಿ'ಯನ್ನು ಚರ್ಮದಲ್ಲಿ ತಯಾ
ರಿಸುವ ಕೆಲಸವನ್ನು ಮಾಡುವುದು ಸೂರ್ಯನ ಬೆಳಕೇ ಹೊರತು ಬೇರಾವುದೂ ಅಲ್ಲ.

ಎಲುಬಿನ ಕಾಯಿಲೆಗಳಾದ ರಿಕೆಟ್ಸ್, ಎಲುಬಿನ ನಿತ್ರಾಣ, ಸಕ್ಕರೆ ಸಮಸ್ಯೆಗಳನ್ನು ಸೂರ್ಯನ ಬಿಸಿಲು ನಿವಾರಿಸುತ್ತದೆ. ದೂಳಿನಲ್ಲಿರುವ ರೋಗಾಣುಗಳನ್ನು ಕೊಲ್ಲುತ್ತದೆ. ದೇಹದಲ್ಲಿ ಬಿಳಿ ಹಾಗೂ ಕೆಂಪು 
ರಕ್ತ ಕಣಗಳು ಹುಟ್ಟುವಂತೆ ಮಾಡಿ ಹಲವು ಬಗೆಯ ಕ್ಯಾನ್ಸರ್ ನಿವಾರಣೆಗೆ ಸಹಕರಿಸುತ್ತದೆ, ರಕ್ತದ ಒತ್ತಡ ನಿವಾರಿಸುತ್ತದೆ, 
ಗಾಯಗಳನ್ನು ಬೇಗನೆ ಗುಣಗೊಳಿಸುತ್ತದೆ...

ಹೀಗೆ ಸೂರ್ಯನ ಬೆಳಕಿನ ಉಪಯೋಗದ ಪಟ್ಟಿ ಒಂದೆರಡಲ್ಲ, ಬೇಗನೆ ಮುಗಿಯಲಾಗದಂತಹುದು. ಸೂರ್ಯ ಉದಯಿಸದೇ ಇದ್ದರೆ ಜಗತ್ತಿನ ಯಾವ ಜೀವಿಯಾಗಲೀ, ಗಿಡಮರಗಳಾಗಲೀ ತಮ್ಮ ಚಟುವಟಿಕೆಗಳನ್ನು ಮಾಡುವಂತೆಯೇ ಇಲ್ಲ. ಭೂಮಿಯ ಸಕಲ ಚೈತನ್ಯಕ್ಕೆ ಈ ಸೂರ್ಯನೇ ಮೂಲ.


ಇದನ್ನು ಕಂಡುಕೊಂಡೇ ನಮ್ಮ ಹಿರಿಯರು ಮುಂಜಾನೆಯ ವೇಳೆಯಲ್ಲಿ ಸೂರ್ಯನಿಗೆ ಅಭಿಮುಖವಾಗಿ ನಿಂತು ಅರ್ಘ್ಯ ಕೊಡುವ ಹಾಗೂ ಸುಮಾರು 13 ಬಗೆಯ ಯೋಗಾಸನಗಳನ್ನು ಒಳಗೊಂಡ ಸೂರ್ಯ ನಮಸ್ಕಾರವನ್ನು ಮುಂಜಾನೆ ಹಾಗೂ ಸಂಜೆ ಸೂರ್ಯೋದಯ, ಸೂರ್ಯಾಸ್ತದ ವೇಳೆಯಲ್ಲಿ ಮಾಡುವುದನ್ನು ರೂಢಿ ಮಾಡಿಕೊಂಡರು.

ಇದರಿಂದ ದೇಹ- ಮನಸ್ಸುಗಳಿಗೂ ಉಲ್ಲಾಸ, ಬಡವರ ಆರೋಗ್ಯಕ್ಕೂ ಒಂದು ರಕ್ಷಾ ಕವಚ! ಈ ವೇಳೆಯ ಎಳೆ ಬಿಸಿಲಂತೂ ಅತ್ಯಂತ ಅದ್ಭುತವಾದ ಶಕ್ತಿಯನ್ನು ಪಡೆದಿದೆ ಎಂಬುದನ್ನು ಅವರು ಅರ್ಥ ಮಾಡಿಕೊಂಡಿದ್ದರು.

ಬೆಂಗಳೂರಿನ ಕಲ್ಯಾಣನಗರದ ಎಚ್.ಬಿ.ಆರ್. ಬಡಾವಣೆಯ ಸತ್ಸಂಗ ಫೌಂಡೇಷನ್ ಆರೋಗ್ಯ ರಕ್ಷಣೆ ಹಾಗೂ ಲೋಕಶಾಂತಿಗಾಗಿ ಸೂರ್ಯ ನಮಸ್ಕಾರವನ್ನು ಜನಪ್ರಿಯಗೊಳಿಸುವ ಕೆಲಸವನ್ನು ಹಲವಾರು ವರ್ಷಗಳಿಂದ ಮಾಡುತ್ತಿದ್ದು, ಸಾಮೂಹಿಕ ಸೂರ್ಯ ನಮಸ್ಕಾರ ಮತ್ತು ಸೂರ್ಯ ಯಜ್ಞ ಅವುಗಳಲ್ಲಿ ಒಂದು.

ಪ್ರತಿವರ್ಷ ರಥ ಸಪ್ತಮಿಯ ಸಂದರ್ಭದಲ್ಲಿ ಈ ಸೂರ್ಯ ನಮಸ್ಕಾರ- ಸೂರ್ಯ ಯಜ್ಞವನ್ನು ಸತ್ಸಂಗ ಫೌಂಡೇಷನ್ ಸಂಘಟಿಸುತ್ತದೆ. ಮಂತ್ರ ಸಹಿತವಾಗಿ ಸೂರ್ಯನುದಯಿಸುವ ಹೊತ್ತಿನ
ಲ್ಲಿ 108 ಬಾರಿ ಸಹಸ್ರಾರು ಮಂದಿ ಒಟ್ಟಿಗೆ ಸಾಮೂಹಿಕವಾಗಿ ಮಾಡುವ ಈ 'ಭಾಸ್ಕರ ನಮನ' ನೋಡುಗರ ಕಣ್ಣಿಗೂ ಒಂದು ಹಬ್ಬ. ಹತ್ತು ವರ್ಷ ಮೇಲ್ಪಟ್ಟ ಎಲ್ಲ ಪುರುಷರು, ಮಹಿಳೆಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು.

ಈ ವರ್ಷ ಫೆಬ್ರುವರಿ 1ರ ಭಾನುವಾರ ಮುಂಜಾನೆ 6.30 ಗಂಟೆಗೆ ಕಲ್ಯಾಣ ನಗರ ಎಚ್.ಬಿ.ಆರ್. ಬಡಾವಣೆಯ ಸಿ.ಎಂ.ಆರ್. ನ್ಯಾಷನಲ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಸೂರ್ಯ ನಮಸ್ಕಾರ- ಸೂರ್ಯ ಯಜ್ಞ ನಡೆಯುತ್ತದೆ.

ಆಸಕ್ತರು ಡಾ. ಶ್ಯಾಮ್ ಪ್ರಸಾದ್ (ಫೋನ್: 25443636), ನಾಗಮಣಿ (9449853341), ಸೀತಾರಾಮ (9945188081),  ಸೌಮ್ಯ (9902326728) ಅವರನ್ನು ಸಂಪರ್ಕಿಸಬಹುದು 



ಇಂದಿನ ಇತಿಹಾಸ History Today ಜನವರಿ 29

ಇಂದಿನ ಇತಿಹಾಸ

ಜನವರಿ 29

ಮಲೇಷ್ಯಾ ರಾಜಧಾನಿ ಕ್ವಾಲಾಲಂಪುರದ ಹೊರವಲಯದಲ್ಲಿ ಇರುವ ಬಟು ಗುಹಾ ದೇವಾಲಯದ ಬಳಿ 2.4 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಿರುವ ವಿಶ್ವದ ಅತಿ ಎತ್ತರದ ಸುಬ್ರಹ್ಮಣ್ಯ ಸ್ವಾಮಿಯ ಬೃಹತ್ ಪ್ರತಿಮೆಯನ್ನು  ಸಾವಿರಾರು ಹಿಂದೂ ಮತ್ತು ಇತರ ಧರ್ಮೀಯರ ಸಂಭ್ರಮೋತ್ಸಾಹದ ಮಧ್ಯೆ ಅನಾವರಣಗೊಳಿಸಲಾಯಿತು. 

2008: ಭಾರತ ಕ್ರಿಕೆಟ್ ತಂಡದ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ವಿರುದ್ಧ ಆಸ್ಟ್ರೇಲಿಯಾ ತಂಡದವರು ಮಾಡಿದ್ದ ಜನಾಂಗೀಯ ನಿಂದನೆ ಆರೋಪ ಸಾಬೀತಾಗಲಿಲ್ಲ. ಹೀಗಾಗಿ ಅವರ ಮೇಲೆ ಹೇರಲಾಗಿದ್ದ ಮೂರು ಪಂದ್ಯಗಳ ನಿಷೇಧ ಶಿಕ್ಷೆ ರದ್ದಾಯಿತು. ಆದರೆ ಸಿಡ್ನಿ ಟೆಸ್ಟ್ ಸಂದರ್ಭದಲ್ಲಿ ಆತಿಥೇಯ ತಂಡದ ಆಂಡ್ರ್ಯೂ ಸೈಮಂಡ್ಸ್ ಜೊತೆಗೆ ಮಾತಿನ ಚಕಮಕಿ ನಡೆಸಿದ್ದ `ಭಜ್ಜಿ' ಮೇಲೆ ಪಂದ್ಯ ಸಂಭಾವನೆಯ ಅರ್ಧದಷ್ಟು ಮೊತ್ತವನ್ನು ದಂಡವಾಗಿ ವಿಧಿಸಲಾಯಿತು. ಅಡಿಲೇಡಿನಲ್ಲಿ ನಡೆದ ಮೇಲ್ಮನವಿ ವಿಚಾರಣೆ ಕಾಲದಲ್ಲಿ ಟೀಮ್ ಇಂಡಿಯಾ ಮ್ಯಾನೇಜರ್ ಎಂ.ವಿ. ಶ್ರೀಧರ್ ಜೊತೆಗೆ  ಹರಭಜನ್ ಸಿಂಗ್ ಹಾಗೂ ಸಚಿನ್ ತೆಂಡೂಲ್ಕರ್ ಹಾಜರಿದ್ದರು. (`ಭಜ್ಜಿ' ಜನಾಂಗೀಯ ನಿಂದನೆ `ಪ್ರಹಸನ'ದ ಘಟನಾವಳಿಗಳು: * ಜನವರಿ 4: ಆಕ್ಷೇಪಾರ್ಹ ವರ್ತನೆ ಹಾಗೂ ಜನಾಂಗೀಯ ನಿಂದನೆ ದೂರು. * ಜ.5: ವಿಚಾರಣೆ ಮುಂದೂಡಿದ ಐಸಿಸಿ ಮ್ಯಾಚ್ ರೆಫರಿ ಮೈಕ್ ಪ್ರಾಕ್ಟರ್. * ಜ.6: ಮ್ಯಾಚ್ ರೆಫರಿಯಿಂದ `ಭಜ್ಜಿ'ಗೆ ಮೂರು ಪಂದ್ಯಗಳ ನಿಷೇಧ ಶಿಕ್ಷೆ. * ಜ.7: ತೀರ್ಪು ಬದಲಿಸುವುದಿಲ್ಲ-ಪ್ರಾಕ್ಟರ್ ಸ್ಪಷ್ಟನೆ; ಬಿಸಿಸಿಐಯಿಂದ ಮೇಲ್ಮನವಿ. * ಜ.8: ಪ್ರವಾಸ ರದ್ದು ಬೆದರಿಕೆ ತಾತ್ಕಾಲಿಕವಾಗಿ ಕೈಬಿಟ್ಟ ಬಿಸಿಸಿಐ. * ಜ.9: ಐಸಿಸಿಯಿಂದ ಮೇಲ್ಮನವಿ ಆಯುಕ್ತರ ನೇಮಕ. * ಜ.10: ಸೈಮಂಡ್ಸ್ ಕೆಣಕಿದ್ದೇ ಹರಭಜನ್ ಪ್ರತ್ತ್ಯುತ್ತರ ನೀಡಲು ಕಾರಣ: ಭಾರತದ ವಾದ. * ಜ.11: ಪ್ರವಾಸ ರದ್ದು ತೀರ್ಮಾನದ ಅಧಿಕಾರ ಬಿಸಿಸಿಐ ಅಧ್ಯಕ್ಷ ಶರದ್ ಪವಾರ್ ಅವರಿಗೆ. * ಜ.12: ಸರಣಿಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ಪವಾರ್ ಹೇಳಿಕೆ. * ಜ.13: ಕುಂಬ್ಳೆ ಹಾಗೂ ಪಾಂಟಿಂಗ್ ನಡುವೆ ಸಂಧಾನಕ್ಕೆ ರಂಜನ್ ಮದುಗಲೆ ಮಧ್ಯಸ್ಥಿಕೆ. * ಜ.14: ಟೆಸ್ಟ್ ಸರಣಿಯ ನಂತರ ಮೇಲ್ಮನವಿ ವಿಚಾರಣೆಗೆ ಪ್ರಸ್ತಾವ. * ಜ.25: ಆಸ್ಟ್ರೇಲಿಯಾದವರ ವಾದವನ್ನು ಪರಾಮರ್ಶಿಸದೆ ಒಪ್ಪಿಕೊಂಡ ಪ್ರಾಕ್ಟರ್ ವಿರುದ್ಧ ಕಿಡಿ. * ಜ.26: ಸಿಡ್ನಿ ಟೆಸ್ಟಿನಲ್ಲಿ ಮ್ಯಾಚ್ ರೆಫರಿಗೆ ಭಾರಿ ಸವಾಲು: ಪ್ರಾಕ್ಟರ್ ಅಭಿಪ್ರಾಯ. * ಜ.28: ಹೊಸ ಸಾಕ್ಷಿ ಪರಿಗಣಿಸುವ ನಿರ್ಧಾರಕ್ಕೆ ಬಿಸಿಸಿಐ ಆಕ್ಷೇಪ. * ಜ. 29: ಮೇಲ್ಮನವಿ ವಿಚಾರಣೆ ನಂತರ ಜನಾಂಗೀಯ ನಿಂದನೆ ಆರೋಪ ತಿರಸ್ಕೃತ.) 
2008: ಕರ್ನಾಟಕದ ಆಳಂದ ತಾಲ್ಲೂಕಿನ ಭೂಸನೂರು ಸಕ್ಕರೆ ಕಾರ್ಖಾನೆ ಬಳಿ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ ಆರು ವರ್ಷದ ಬಾಲಕ ನವನಾಥ ಕಾಶಪ್ಪ ಕಾಂಬಳೆಯನ್ನು ಸತತ ಎಂಟು ಗಂಟೆಗಳ ಕಾಲ ಕಾರ್ಯಚರಣೆ ನಡೆಸಿ ಸುರಕ್ಷಿತವಾಗಿ ಹೊರತರಲಾಯಿತು. ಬೆಳಗ್ಗೆ ಸುಮಾರು 11ಗಂಟೆಗೆ ಆಟವಾಡುವ ವೇಳೆ, ತೆರೆದ ಕೊಳವೆ ಬಾವಿಗೆ ಬಿದ್ದ ಕಾಂಬಳೆಯನ್ನು ಸಂಜೆ 7.30ಕ್ಕೆ ಹಗ್ಗದ ಸಹಾಯದಿಂದ ಹೊರತರಲಾಯಿತು.

2008: ಜೀವ್ ಮಿಲ್ಕಾಸಿಂಗ್ ಅವರನ್ನು ಹಿಂದಿಕ್ಕಿದ ಜ್ಯೋತಿ ರಾಂಧವ ಭಾರತದ ನಂಬರ್ 1 ಗಾಲ್ಫ್ ಆಟಗಾರ ಎಂಬ ಹೆಗ್ಗಳಿಕೆಗೆ ಭಾಜನರಾದರು. ಈದಿನ ನವದೆಹಲಿಯಲ್ಲಿ ಬಿಡುಗಡೆಯಾದ ವಿಶ್ವ ರ್ಯಾಂಕಿಂಗ್ ಪಟ್ಟಿಯಲ್ಲಿ ರಾಂಧವ 84ನೇ ಸ್ಥಾನ ಪಡೆದರೆ, ಜೀವ್ 86ನೇ ಸ್ಥಾನ ತಮ್ಮದಾಗಿಸಿಕೊಂಡರು. ಯುರೋಪಿಯನ್ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ರಾಂಧವ ಕತಾರ್ ಮಾಸ್ಟರ್ಸಿನಲ್ಲಿ ಜಂಟಿ ಏಳನೇ ಸ್ಥಾನ ಪಡೆದಿದ್ದರು.

2008:  ಕಾಂಗ್ರೆಸ್ ಮುಖಂಡ ಎಚ್. ವಿಶ್ವನಾಥ್ ಅವರ ಆತ್ಮಕಥನ `ಹಳ್ಳಿ ಹಕ್ಕಿಯ ಹಾಡು' ಬಿಗಿ ಪೊಲೀಸ್ ಬಂದೋಬಸ್ತ್ ಮಧ್ಯೆ ಮೈಸೂರು ಪತ್ರಕರ್ತರ ಸಂಘದಲ್ಲಿ ಬಿಡುಗಡೆಯಾಯಿತು. ಹಿಂದಿನ ದಿನ ಸಮಾರಂಭದಲ್ಲಿ ಗದ್ದಲ ನಡೆದು ಪುಸ್ತಕ ಬಿಡುಗಡೆ ತಡೆ ಹಿಡಿಯಲ್ಪಟ್ಟಿತ್ತು. 

2008: ಸೇತುಸಮುದ್ರಂ ವಿವಾದದ ಬಳಿಕ ರಾಮೇಶ್ವರಂನ ಪುರಾತನ ಸ್ಥಳಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಯಿತು. ಅವರನ್ನು ಸೇತುವೆ ಸಮೀಪ ಕೊಂಡೊಯ್ಯುವುದು ವ್ಯವಹಾರದ ರೂಪ ಪಡೆಯಿತು. ಸೂಕ್ತ ಅನುಮತಿಯಿಲ್ಲದೆ ಯಾತ್ರಾರ್ಥಿಗಳನ್ನು ಹೊತ್ತು ರಾಮೇಶ್ವರಂ ಸೇತುವೆಗೆ ಆಗಮಿಸಿದ  ನಾಲ್ಕು ಮೀನುಗಾರಿಕೆ ದೋಣಿಗಳನ್ನು ಪೊಲೀಸರು ವಶಪಡಿಸಿಕೊಂಡರು.

2008: ವಿಶ್ವದ ಅತ್ಯಂತ ಶ್ರೀಮಂತ ಹತ್ತು ಉದ್ಯಮಿಗಳ ಪಟ್ಟಿಯಲ್ಲಿ ಕರ್ನಾಟಕದವರಾದ ವಿಪ್ರೋ ಮುಖ್ಯಸ್ಥ ಅಜೀಮ್ ಪ್ರೇಮ್ ಜಿ ಸೇರಿದಂತೆ ನಾಲ್ವರು ಭಾರತೀಯರು ಸ್ಥಾನ ಗಿಟ್ಟಿಸಿದರು. ಅಮೆರಿಕದ ಪ್ರಸಿದ್ಧ ವಾಣಿಜ್ಯ ನಿಯತಕಾಲಿಕ ಫೋಬ್ಸ್ ತಯಾರಿಸಿದ ಈ ಪಟ್ಟಿಯಲ್ಲಿ ಭಾರತೀಯ ಮುಂಚೂಣಿ ಉದ್ಯಮ ಸಂಸ್ಥೆಗಳ ಮುಖ್ಯಸ್ಥರಾದ ಉಕ್ಕು ಉದ್ಯಮಿ ಲಕ್ಷ್ಮಿ ಮಿತ್ತಲ್, ಅಂಬಾನಿ ಸೋದರರಾದ ಮುಖೇಶ್ ಅಂಬಾನಿ ಮತ್ತು ಅನಿಲ್ ಅಂಬಾನಿ ಹಾಗೂ ಐಟಿ ಉದ್ಯಮಿ ಅಜೀಮ್ ಪ್ರೇಮ್ ಜಿ ಸೇರಿದರು.

2007: ಭಾರತೀಯ ಅಣುಶಕ್ತಿ ಆಯೋಗದ ಸದಸ್ಯ ಸಿ.ಎನ್.ಆರ್. ರಾವ್ ಅವರಿಗೆ ಪಶ್ಚಿಮ ಬಂಗಾಳದ ವಿಶ್ವ ಭಾರತಿ ವಿಶ್ವ ವಿದ್ಯಾನಿಲಯದ ಕುಲಪತಿ ರಜತ್ ಕಾಂತ ರೇ ಅವರು ಅತ್ಯುನ್ನತ ಪದವಿಯಾದ ದೇಶಿಕೋತ್ತಮ (ಡಿ.ಲಿಟ್) ಪದವಿಯನ್ನು ಪ್ರದಾನ ಮಾಡಿದರು. ದೇಶ ವಿದೇಶಗಳಲ್ಲಿ ಅತ್ಯುನ್ನತ ಹುದ್ದೆಗಳನ್ನು ಹೊಂದಿರುವ ರಾವ್ ಅವರು 34 ವಿಶ್ವ ವಿದ್ಯಾಲಯಗಳ ಡಾಕ್ಟರೇಟ್ ಗೆ ಪಾತ್ರರಾಗಿದ್ದಾರೆ.

2007: ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯವು ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಹಾಗೂ ಖ್ಯಾತ ಸಾಹಿತಿ ನಾ.ಡಿಸೋಜಾ ಅವರಿಗೆ ಕುವೆಂಪು ವಿಶ್ವವಿದ್ಯಾಲಯವು 17ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಿತು.

2006: ಮಲೇಷ್ಯಾ ರಾಜಧಾನಿ ಕ್ವಾಲಾಲಂಪುರದ ಹೊರವಲಯದಲ್ಲಿ ಇರುವ ಬಟು ಗುಹಾ ದೇವಾಲಯದ ಬಳಿ 2.4 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಿರುವ ವಿಶ್ವದ ಅತಿ ಎತ್ತರದ ಸುಬ್ರಹ್ಮಣ್ಯ ಸ್ವಾಮಿಯ ಬೃಹತ್ ಪ್ರತಿಮೆಯನ್ನು  ಸಾವಿರಾರು ಹಿಂದೂ ಮತ್ತು ಇತರ ಧರ್ಮೀಯರ ಸಂಭ್ರಮೋತ್ಸಾಹದ ಮಧ್ಯೆ ಅನಾವರಣಗೊಳಿಸಲಾಯಿತು. ಬಟು ಗುಹೆಯ ಸುಬ್ರಹ್ಮಣ್ಯ ದೇವಾಲಯದ ಹೊರಭಾಗದಲ್ಲಿ ಭಾರತೀಯ ವಾಸ್ತುಶಿಲ್ಪಿಗಳು ಕೆತ್ತನೆ ಮಾಡಿರುವ ಈ ವಿಗ್ರಹದ ಎತ್ತರ 42.7 ಮೀಟರುಗಳು. ಇದನ್ನು ನಿರ್ಮಿಸಲು 250 ಟನ್ ಉಕ್ಕು ಹಾಗೂ 300 ಲೀಟರ್ ಚಿನ್ನದ ದ್ರಾವಣ ಬಳಸಲಾಗಿದ್ದು, 15 ಮಂದಿ ಭಾರತೀಯ ಶಿಲ್ಪಿಗಳು ಸತತ 3 ವರ್ಷಕಾಲ ಶ್ರಮಿಸಿದರು. ಈ ಪ್ರತಿಮೆಗೆ ಹೆಲಿಕಾಪ್ಟರುಗಳಿಂದ ಪುಷ್ಪಾರ್ಪಣೆ ಮಾಡಲಾಯಿತು. ಈ ಪ್ರತಿಮೆ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಯಿತು.

2006: ಹಾಲೆಂಡಿನ ವಿಕ್ ಆನ್ ಜೀಯಲ್ಲಿ ಮುಕ್ತಾಯಗೊಂಡ ಕೋರಸ್ ಚೆಸ್ ಪಂದ್ಯದಲ್ಲಿ ಭಾರತದ ವಿಶ್ವನಾಥನ್ ಆನಂದ್ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ವಿಶ್ವದಾಖಲೆ ನಿರ್ಮಿಸಿದರು. ಐದನೇ ಬಾರಿಗೆ ಈ ಪ್ರಶಸ್ತಿ ಗೆದ್ದು ವಿಶ್ವದಾಖಲೆ ನಿರ್ಮಿಸಿದ ಅವರು ಈ ಬಾರಿ ಮಾತ್ರ ಪ್ರಶಸ್ತಿಯನ್ನು ಆನಂದ್ ವಸಿಲಿನ್ ಟೊಪಲೊವ್ ಅವರ ಜೊತೆಗೆ ಹಂಚಿಕೊಳ್ಳಬೇಕಾಯಿತು.

2006: ಪೋಲೆಂಡಿನ ಕಟೋವೈಸ್ ನಗರದಲ್ಲಿ ಪಾರಿವಾಳ ಹಾರಾಟ ಸ್ಪರ್ಧೆಯ ಸಂದರ್ಭದಲ್ಲಿ ಪ್ರದರ್ಶನ ಕಟ್ಟಡ ಒಂದರ ಛಾವಣಿ ಕುಸಿದು ಕನಿಷ್ಠ 65 ಮಂದಿ ಮೃತರಾಗಿ 160ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

2006: ಭಾರತ ತಂಡದ ಎಡಗೈ ಮಧ್ಯಮ ವೇಗದ ಬೌಲರ್ ಇರ್ಫಾನ್ ಪಠಾಣ್ ಕರಾಚಿಯಲ್ಲಿ ನಡೆದ ಮೂರನೇ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ಥಾನ ತಂಡದ ವಿರುದ್ಧ ಹ್ಯಾಟ್ರಿಕ್ ಸಾಧಿಸಿ ಐತಿಹಾಸಿಕ ದಾಖಲೆ ನಿರ್ಮಿಸಿದರು. ಟೆಸ್ಟ್ ಇತಿಹಾಸದಲ್ಲೇ ಪಂದ್ಯದ ಮೊದಲ ಓವರಿನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಮೊದಲ ಬೌಲರ್ ಎಂಬ ಗೌರವಕ್ಕೂ ಪಠಾಣ್ ಪಾತ್ರರಾದರು. ಇದಕ್ಕೆ ಮುನ್ನ ಶ್ರೀಲಂಕಾದ ನುವಾನ್ ಜೋಯ್ಸಾ 2000-01ರಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಟೆಸ್ಟ್ ಪಂದ್ಯದ ಎರಡನೇ ಓವರಿನಲ್ಲಿ ಹ್ಯಾಟ್ರಿಕ್ ಸಂಪಾದಿಸಿದ್ದು ಈವರೆಗಿನ ದಾಖಲೆಯಾಗಿತ್ತು.

1970: ಕಲಾವಿದ ಮಧು ಪ್ಯಾಟಿ ಜನನ.

1955: ಅಂತಾರಾಷ್ಟ್ರೀಯ ಮಟ್ಟದ ಖ್ಯಾತ ನೃತ್ಯ ಕಲಾವಿದೆ ಪ್ರತಿಭಾ ಪ್ರಹ್ಲಾದ್ ಅವರು ಪ್ರಹ್ಲಾದ್- ಪ್ರೇಮಾ ದಂಪತಿಯ ಮಗಳಾಗಿ ಬೆಂಗಳೂರಿನಲ್ಲಿ ಜನಿಸಿದರು.

1954: ಕಲಾವಿದ ಮೋಹನ ಸೋನ ಜನನ.

1930: ಕಲಾವಿದ ಕೆ.ಜೆ. ರಾವ್ ಜನನ.

1886: ಮೊತ್ತ ಮೊದಲ `ಪೆಟ್ರೋಲಿನಿಂದ ಚಲಿಸುವ ವಾಹನ'ಕ್ಕೆ ಕಾರ್ಲ್ ಬೆಂಝ್ ಪೇಟೆಂಟ್ ಪಡೆದ. ಮೂರು ಚಕ್ರದ ವಾಹನ ಮೂಲ `ಬೆಂಝ್ ಕಾರು' 1885ರಲ್ಲೇ ಮೊದಲ ಬಾರಿಗೆ ಚಲಿಸಿದ್ದರೂ ಅದರ ವಿನ್ಯಾಸಕ್ಕೆ 1886ರ ವರೆಗೂ ಪೇಟೆಂಟ್ ಲಭಿಸಿರಲಿಲ್ಲ.

1866: ನೊಬೆಲ್ ಪ್ರಶಸ್ತಿ ವಿಜೇತ ಕಾದಂಬರಿಕಾರ, ನಾಟಕಕಾರ, ಪ್ರಬಂಧಕಾರ ರೊಮೈನ್ ರೋಲ್ಲಂಡ್(1866-1944) ಹುಟ್ಟಿದ. ಈತ ಮಹಾತ್ಮಾ ಗಾಂಧಿ ಹಾಗೂ ರಾಮಕೃಷ್ಣ ಪರಮಹಂಸ ಅವರ ಜೀವನಚರಿತ್ರೆಗಳನ್ನೂ ಬರೆದ ವ್ಯಕ್ತಿ.

1856: ಬ್ರಿಟನ್ನಿನ ಅತ್ಯುನ್ನತ ಸೇನಾ ಗೌರವ `ವಿಕ್ಟೋರಿಯಾ ಕ್ರಾಸ್' ರಾಣಿ ವಿಕ್ಟೋರಿಯಾ ಅವರಿಂದ ಆರಂಭಗೊಂಡಿತು.

1820: ಮೂರನೇ ಜಾರ್ಜ್ ವಿಂಡ್ಸರ್ ಕ್ಯಾಸಲಿನಲ್ಲಿ 81ನೇ ವಯಸ್ಸಿನಲ್ಲಿ ನಿಧನನಾದ. 59 ವರ್ಷಗಳ ಕಾಲ ಬ್ರಿಟನ್ನನ್ನು ಆಳಿದ ಈತ ದೀರ್ಘಕಾಲ ಆಡಳಿತ ನಡೆಸಿದ ಬ್ರಿಟಿಷ್ ದೊರೆ.

1803: ಇಂಗ್ಲಿಷ್ ಜನರಲ್ ಹಾಗೂ ಭಾರತೀಯ ರಾಜಕೀಯ ಅಧಿಕಾರಿ ಸರ್ ಜೇಮ್ಸ್ ಔಟ್ ರಾಮ್ (1803-1863) ಹುಟ್ಟಿದ.  ಈತ 1856ರಲ್ಲಿ ಅವಧ್ ರಾಜ್ಯವನ್ನು ಬ್ರಿಟಿಷ್ ಆಳ್ವಿಕೆಯ ಭಾರತಕ್ಕೆ ಸೇರ್ಪಡೆ ಮಾಡಿದ. 

1780: ಭಾರತದ ಮೊತ್ತ ಮೊದಲ ಪತ್ರಿಕೆ `ಹಿಕ್ಕೀಸ್ ಬೆಂಗಾಲ್ ಗಝೆಟ್' ಅಥವಾ `ಕಲ್ಕತ್ತಾ ಜನರಲ್ ಅಡ್ವರ್ ಟೈಸರ್' ಕಲ್ಕತ್ತಾದಲ್ಲಿ (ಈಗಿನ ಕೋಲ್ಕತ) ಇಂಗ್ಲಿಷಿನಲ್ಲಿ ಜೇಮ್ಸ್ ಆಗಸ್ಟಸ್ ಹಿಕ್ಕಿ ಅವರಿಂದ ಪ್ರಕಟಿತವಾಯಿತು. `ಹಿಕ್ಕೀಸ್ ಬೆಂಗಾಲ್ ಗಝೆಟ್' ನಲ್ಲಿ ಮೊತ್ತ ಮೊದಲ ಜಾಹೀರಾತು ಪ್ರಕಟಗೊಳ್ಳುವುದರೊಂದಿಗೆ ಭಾರತದಲ್ಲಿ ವಾಣಿಜ್ಯ ಜಾಹೀರಾತು ಆರಂಭಗೊಂಡಿತು.  

(ಸಂಗ್ರಹ: ನೆತ್ರಕೆರೆ ಉದಯಶಂಕರ)

ಇಂದಿನ ಇತಿಹಾಸ History Today ಜನವರಿ 30

ಇಂದಿನ ಇತಿಹಾಸ

ಜನವರಿ 30

ಪ್ರಸಿದ್ಧ ಕಾದಂಬರಿಕಾರ ವ್ಯಾಸರಾಯ ಬಲ್ಲಾಳ (85) ಅವರು ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯ ಸ್ವಂತ ಮನೆ 'ಉತ್ತರಾಯಣ'ದಲ್ಲಿ ಈದಿನ ರಾತ್ರಿ ನಿಧನರಾದರು. ಉಡುಪಿಯ ನಿಡಂಬೂರು ವ್ಯಾಸರಾಯ ಬಲ್ಲಾಳರು (ಜನನ: ಡಿ.1, 1923) ಕನ್ನಡ ಸಾರಸ್ವತ ಲೋಕದಲ್ಲಿ `ಬಂಡಾಯದ ಬಲ್ಲಾಳ' ಎಂದೇ ಪ್ರಸಿದ್ಧರು.

ಇಂದು `ಹುತಾತ್ಮದಿನ'. 1948ರಲ್ಲಿ ಈದಿನ ಸಂಜೆ 5.10 ಗಂಟೆಗೆ ನವದೆಹಲಿಯ ಬಿರ್ಲಾ ಹೌಸಿನಲ್ಲಿ ಮಹಾತ್ಮಾ ಗಾಂಧೀಜಿ ಅವರು ನಾಥೂರಾಂ ಗೋಡ್ಸೆಯ ಗುಂಡೇಟಿಗೆ ಬಲಿಯಾಗಿ ಅಸು ನೀಗಿದರು. ಭಾರತದಲ್ಲಿ ಈ ದಿನವನ್ನು `ಹುತಾತ್ಮ ದಿನ'ವಾಗಿ ಆಚರಿಸಲಾಗುತ್ತದೆ.

2008: ಪ್ರಸಿದ್ಧ ಕಾದಂಬರಿಕಾರ ವ್ಯಾಸರಾಯ ಬಲ್ಲಾಳ (85) ಅವರು ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯ ಸ್ವಂತ ಮನೆ 'ಉತ್ತರಾಯಣ'ದಲ್ಲಿ ಈದಿನ ರಾತ್ರಿ ನಿಧನರಾದರು. ಉಡುಪಿಯ ನಿಡಂಬೂರು ವ್ಯಾಸರಾಯ ಬಲ್ಲಾಳರು (ಜನನ: ಡಿ.1, 1923) ಕನ್ನಡ ಸಾರಸ್ವತ ಲೋಕದಲ್ಲಿ `ಬಂಡಾಯದ ಬಲ್ಲಾಳ' ಎಂದೇ ಪ್ರಸಿದ್ಧರು. ಕನ್ನಡ ಕಾದಂಬರಿ ಲೋಕಕ್ಕೆ ಹೊಸ ಜಗತ್ತು ಹಾಗೂ ಸಂವೇದನೆಗಳನ್ನು ಪರಿಚಯಿಸಿದ `ಬಂಡಾಯ' ಬಲ್ಲಾಳರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ ಕಾದಂಬರಿ. `ಆಕಾಶಕ್ಕೊಂದು ಕಂದೀಲು', `ಹೇಮಂತಗಾನ', `ವಾತ್ಸಲ್ಯ ಪಥ', `ಉತ್ತರಾಯಣ', `ಬಂಡಾಯ`, `ಅನುರಕ್ತೆ ', `ಹೆಜ್ಜೆ' (ಎರಡು ಭಾಗಗಳು) ಅವರ ಪ್ರಸಿದ್ಧ ಕಾದಂಬರಿಗಳು. ಬಲ್ಲಾಳರದ್ದು ಹೋರಾಟದ ಬದುಕು. ಅವರ ತಂದೆ ರಾಮದಾಸ ಸಂಸ್ಕೃತ ಹಾಗೂ ಕನ್ನಡದಲ್ಲಿ ವಿದ್ವಾಂಸರು. ಬಡತನ ಕಟ್ಟಿಕೊಟ್ಟ ನೋವಿನ ಬುತ್ತಿಯನ್ನು ಹೊತ್ತುಕೊಂಡೇ ಮುಂಬೈಗೆ ತೆರಳಿದ ಅವರು, ಆ ಮಹಾನಗರಿಯಲ್ಲಿ ಅನ್ನದ ಹಸಿವು ಹಾಗೂ ಸೃಜನಶೀಲತೆಯ ಹಸಿವನ್ನು ಇಂಗಿಸುವ ಮಾರ್ಗಗಳನ್ನು ಕಂಡುಕೊಂಡರು. ಮುಂಬೈಯ ತೈಲ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದುಕೊಂಡೇ ಮಹಾನಗರದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಮುಂಬೈ ನಗರದ ಜೀವಂತಿಕೆ ಹಾಗೂ ನಗರದ ಬದುಕಿನ ತಳಮಳಗಳನ್ನು ತಮ್ಮ ಕೃತಿಗಳಲ್ಲಿ ಕಲಾತ್ಮಕವಾಗಿ ಚಿತ್ರಿಸಿದರು. ನವೋದಯ, ಪ್ರಗತಿಶೀಲ, ನವ್ಯ- ಹೀಗೆ ಸಾಹಿತ್ಯ ಚಳವಳಿಗಳಿಗೆ ಮುಖಾಮುಖಿಯಾದರೂ ತಮ್ಮದೇ ಆದ `ವ್ಯಾಸ(ರಾಯ) ಮಾರ್ಗ' ರೂಪಿಸಿಕೊಂಡ ಹೆಗ್ಗಳಿಕೆ ಅವರದು. ಮುಂಬೈಯ `ಕರ್ನಾಟಕ ಸಂಘ', `ಸಾಹಿತ್ಯಕೂಟ', `ಕನ್ನಡ ಕಲಾ ಕೇಂದ್ರ'ಗಳ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ಅವರು, `ನುಡಿ' ಪತ್ರಿಕೆಯಲ್ಲಿ ಕೆಲಸ ಮಾಡುವ ಮೂಲಕ ಬರವಣಿಗೆಯ ಇನ್ನೊಂದು ಸಾಧ್ಯತೆಗೆ ತಮ್ಮನ್ನು ತೆರೆದುಕೊಂಡವರು. `ಸಂಪಿಗೆ', `ಮಂಜರಿ', `ಕಾಡು ಮಲ್ಲಿಗೆ' ಹಾಗೂ `ಸಮಗ್ರ ಕಥೆಗಳು' ಬಲ್ಲಾಳರಿಗೆ ಹೆಸರು ತಂದುಕೊಟ್ಟ ಕೃತಿಗಳು. ಇಬ್ಸನ್, ಬರ್ನಾಡ್ ಷಾ ನಾಟಕಗಳನ್ನು ಕನ್ನಡಕ್ಕೆ ರೂಪಾಂತರಿಸಿರುವ ಅವರ ಪ್ರವಾಸ ಕಥನ `ನಾನೊಬ್ಬ ಭಾರತೀಯ ಪ್ರವಾಸಿ'. ನಿವೃತ್ತಿಯ ನಂತರ ಬಲ್ಲಾಳರು ಬೆಂಗಳೂರಿನಲ್ಲಿ ನೆಲೆಸಿದ್ದರು.

2008: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಹುತಾತ್ಮರಾದ 60 ವರ್ಷಗಳ ಬಳಿಕ ಅವರ ಚಿತಾಭಸ್ಮವನ್ನು ಒಳಗೊಂಡ ಮತ್ತೊಂದು ಕಲಶವನ್ನು ಮುಂಬೈಯಲ್ಲಿ ಅರಬ್ಬಿ ಸಮುದ್ರದಲ್ಲಿ ವಿಸರ್ಜಿಸಲಾಯಿತು. ಗಾಂಧೀಜಿ ಅವರ ಚಿತಾಭಸ್ಮ ಒಳಗೊಂಡ ಕಲಶವನ್ನು 2006ರ ಆಗಸ್ಟಿನಲ್ಲಿ ದುಬೈ ಮೂಲದ ಉದ್ಯಮಿ ಭರತ್ ನಾರಾಯಣ್ ಅವರು ಮುಂಬೈಯ ಮಣಿ ಭವನಕ್ಕೆ ಹಸ್ತಾಂತರಿಸಿದ್ದರು. ಉದ್ಯಮಿಯ ಹೆತ್ತವರು 1948ರಿಂದೀಚೆಗೆ ಈ ಚಿತಾಭಸ್ಮವನ್ನು ತಮ್ಮ ಬಳಿ ಇಟ್ಟುಕೊಂಡಿದ್ದರು. ಚಿತಾಭಸ್ಮದ ಕಲಶವನ್ನು ವಿಸರ್ಜಿಸುವವರೆಗೂ ಗಾಂಧೀಜಿ ನಗರಕ್ಕೆ ಆಗಮಿಸುತ್ತಿದ್ದಾಗಲೆಲ್ಲಾ ತಂಗುತ್ತಿದ್ದ ಈ ಮಣಿ ಭವನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿತ್ತು. ಕೊನೆಯ ದಿನದ ತನಕವೂ ಪ್ರವಾಸಿಗರು ಭಾರಿ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸಿದ್ದರು. ಮಹಾತ್ಮನ ಚಿತಾಭಸ್ಮವನ್ನು 1948ರ ಫೆಬ್ರುವರಿ 12ರಂದು ದೇಶದ ವಿವಿಧ ನದಿಗಳಲ್ಲಿ ಮತ್ತು ಸಮುದ್ರಗಳಲ್ಲಿ ವಿಸರ್ಜಿಸಲಾಗಿತ್ತು. ಆದರೆ ಇನ್ನೂ ಕೆಲವು ಅಸ್ತಿಕಲಶಗಳನ್ನು ವಿಸರ್ಜಿಸದ ಅಭಿಮಾನಿಗಳು ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಕಳೆದ 60 ವರ್ಷಗಳಲ್ಲಿ ಹೀಗೆ ದೊರೆತ 2ನೇ ಚಿತಾಭಸ್ಮ ಇದು. 1997ರಲ್ಲಿ ಭುನವೇಶ್ವರದ ಬ್ಯಾಂಕ್ ಲಾಕರ್ ಒಂದರಲ್ಲಿ ಪತ್ತೆಯಾಗಿದ್ದ ಮಹಾತ್ಮ  ಅವರ ಚಿತಾಭಸ್ಮವನ್ನು ಬಳಿಕ ಅಲಹಾಬಾದಿನಲ್ಲಿ ವಿಸರ್ಜಿಸಲಾಗಿತ್ತು.

 2008: ಇಸ್ಲಾಮ್ ಅರ್ಥವನ್ನು ಅಪಾರ್ಥಗೊಳಿಸಿದ ಸಾಹಿತ್ಯ ಒಳಗೊಂಡಿದೆ ಎಂಬ ಆಪಾದನೆ ಮೇರೆಗೆ ಅಮೆರಿಕ ಪ್ರಕಟಣೆಯ 11 ಪುಸ್ತಕಗಳನ್ನು ಮಲೇಷ್ಯಾ ಸರ್ಕಾರ ನಿಷೇಧಿಸಿತು. ಮಲೇಷ್ಯಾದ ಆಂತರಿಕ ಭದ್ರತಾ ಸಚಿವಾಲಯ ಈ ಪುಸ್ತಕಗಳನ್ನು ನಿಷೇಧಿಸಿದ್ದು ಅವುಗಳಲ್ಲಿ 8 ಪುಸ್ತಕಗಳು ಇಂಗ್ಲಿಷಿನಲ್ಲಿ ಹಾಗೂ 3 ಸ್ಥಳೀಯ ಮಲಯ ಭಾಷೆಯಲ್ಲೂ ಇದ್ದವು. ಪುಸ್ತಕಗಳಲ್ಲಿ ಭಯೋತ್ಪಾದಕರ ಜೊತೆ ಮುಸ್ಲಿಮರನ್ನು ತಳಕು ಹಾಕಲಾಗಿದೆ ಹಾಗೂ ಇಸ್ಲಾಮ್ ಧರ್ಮ ಮಹಿಳೆಯರನ್ನು ಅನುಚಿತವಾಗಿ ನಡೆಸಿಕೊಳ್ಳುತ್ತದೆ ಎಂಬುದಾಗಿ ಮುದ್ರಿಸಲಾಗಿದೆ ಎಂದು ಮಲೇಷ್ಯಾ ಆಪಾದಿಸಿತು.

2008: ವೇಗದ ಬೌಲರುಗಳಾದ ಜಹೀರ್ ಖಾನ್, ಆರ್ ಪಿ ಸಿಂಗ್ ಮತ್ತು ಎಡಗೈ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಅವರು `ಕ್ರಿಕ್ ಇನ್ಫೋ' ಪ್ರಶಸ್ತಿಗೆ ಆಯ್ಕೆಯಾದರು. ಭಾರತದ ಈ ಮೂವರಲ್ಲದೆ ಶ್ರೀಲಂಕಾ ತಂಡದ ಕುಮಾರ ಸಂಗಕ್ಕಾರ ಮತ್ತು ಲಸಿತ್ ಮಾಲಿಂಗ ಹಾಗೂ ಆಸ್ಟ್ರೇಲಿಯಾ ತಂಡದ ಆಡಮ್ ಗಿಲ್ ಕ್ರಿಸ್ಟ್ ಅವರೂ ಇದೇ ಮೊದಲ ಬಾರಿ `ಕ್ರಿಕ್ ಇನ್ಫೋ' ಪ್ರಕಟಿಸಿದ ಪ್ರಶಸ್ತಿಗೆ ಭಾಜನರಾದರು.

2007: ಭೋಪಾಲ್ ರಂಗಮಂಡಲದ ಹಿರಿಯ ನಟಿ- ನಿದರ್ೆಶಕಿ ವಿಭಾ ಮಿಶ್ರ ನವದೆಹಲಿಯಲ್ಲಿ ನಿಧನರಾದರು. ರಾಷ್ಟ್ರೀಯ ನಾಟಕಶಾಲೆ ನಿರ್ದೇಶಕ ದೇವೇಂದ್ರ ಕುಮಾರ್ ಅಂಕುರ್ ಹಾಗೂ  ದೇಶದ ಹೆಸರಾಂತ ಕನ್ನಡದ ರಂಗ ನಿರ್ದೇಶಕ ಬಿ.ವಿ. ಕಾರಂತರ ಶಿಷ್ಯೆಯಾಗಿದ್ದ ವಿಭಾ ಮಿಶ್ರ ಎರಡು ವರ್ಷಗಳ ಹಿಂದೆ ಮೈಸೂರಿನ ರಂಗಾಯಣದಲ್ಲಿ ತಮ್ಮ ತಂಡದ ವತಿಯಿಂದ ನಾಟಕ ಪ್ರದರ್ಶಿಸಿದ್ದರು.

2007: ವಿಶ್ವದಲ್ಲೇ ಅತಿದೊಡ್ಡ ರಕ್ತದಾನ ಶಿಬಿರ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಿತು. 50ಕ್ಕೂ ಹೆಚ್ಚು ಸಂಸ್ಥೆಗಳು ಸಹಯೋಗ ನೀಡಿದ್ದ ಈ ಶಿಬಿರದಲ್ಲಿ 400ಕ್ಕೂ ಹೆಚ್ಚು ಹಾಸಿಗೆ ವ್ಯವಸ್ಥೆ ಮಾಡಲಾಗಿತ್ತು. 100ಕ್ಕೂ ಹೆಚ್ಚು ತಜ್ಞ ವೈದ್ಯರು, 500ಕ್ಕೂ ಹೆಚ್ಚು ದಾದಿಯರು, 1000ಕ್ಕೂ ಹೆಚ್ಚು ಸ್ವಯಂ ಸೇವಕರು ಪಾಲ್ಗೊಂಡ ಈ ಶಿಬಿರದಲ್ಲಿ 7000ಕ್ಕೂ ಹೆಚ್ಚು ಜನ ರಕ್ತದಾನ ಮಾಡಿ ಇತಿಹಾಸ ನಿರ್ಮಿಸಿದರು. 2003ರಲ್ಲಿ ಮುಂಬೈಯಲ್ಲಿ ನಡೆದ ಈ ಮಾದರಿ ಶಿಬಿರದಲ್ಲಿ 5600 ಜನ ರಕ್ತದಾನ ಮಾಡಿದ್ದರು.

2007: ಏರ್ ಮಾರ್ಷಲ್ ಫಾಲಿ ಹೋಮಿ ಮೇಜರ್ (59) ಅವರನ್ನು ಕೇಂದ್ರ ಸರ್ಕಾರವು ವಾಯುಪಡೆ ಮುಖ್ಯಸ್ಥರನ್ನಾಗಿ ನೇಮಕ ಮಾಡಿತು.

2006: ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ (ಎಎಸ್ಐ) ನೀಡುವ ಪ್ರತಿಷ್ಠಿತ ಆರ್ಯಭಟ ಪ್ರಶಸ್ತಿಗೆ ವಿಮಾನಶಾಸ್ತ್ರ ವಿಜ್ಞಾನಿ ಮತ್ತು ಬಾಹ್ಯಾಕಾಶ ಆಯೋಗದ ಸದಸ್ಯ ಪ್ರೊ. ರೊದ್ದಂ. ನರಸಿಂಹ ಆಯ್ಕೆಯಾದರು. ಈ ಪ್ರಶಸ್ತಿಯು 1 ಲಕ್ಷ ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. 

2006: ಲಾಹೋರಿಗೆ ತೆರಳುತ್ತಿದ್ದ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿ ಪ್ರಪಾತಕ್ಕೆ ಉರುಳಿದ ಪರಿಣಾಮ 46 ಮಂದಿ ಮೃತರಾದರು. ಪಾಕಿಸ್ಥಾನದ ಈ ರೈಲು ರಾವಲ್ಪಿಂಡಿಯಿಂದ ಲಾಹೋರಿಗೆ ತೆರಳುತ್ತಿತ್ತು.

1991: ಟ್ರಾನ್ಸಿಸ್ಟರಿನ ಜಂಟಿ ಸಂಶೋಧಕ ಜಾನ್ ಬರ್ಡೀನ್ (1908-1991) ತನ್ನ 82ನೇ ವಯಸ್ಸಿನಲ್ಲಿ ಮೃತನಾದ. 1956ರಲ್ಲಿ ಭೌತವಿಜ್ಞಾನಕ್ಕೆ ನೀಡಲಾಗುವ ನೊಬೆಲ್ ಪ್ರಶಸ್ತಿಯನ್ನು ಗೆದ್ದುಕೊಂಡ ಈತ ಸೂಪರ್ ಕಂಡಕ್ಟಿವಿಟಿ ಸಂಶೋಧನೆಯಲ್ಲೂ ಪಾತ್ರ ವಹಿಸಿದ ವ್ಯಕ್ತಿ. 

1965: ಸರ್ ವಿನ್ ಸ್ಟನ್ ಚರ್ಚಿಲ್ ಅಂತ್ಯಕ್ರಿಯೆ ನೆರವೇರಿತು. 90 ವರ್ಷಗಳ ಹಿಂದೆ ಅವರು ಹುಟ್ಟಿದ ಬೆನ್ಹೀಮ್ ಅರಮನೆಯ ಸಮೀಪದ ಬ್ಲಾಡನ್ ಚರ್ಚ್ ಯಾರ್ಡಿನಲ್ಲಿ ಅವರನ್ನು ಸಮಾಧಿ ಮಾಡಲಾಯಿತು.

1958: ಕಲಾವಿದೆ ಎಚ್.ಎಸ್. ಇಂದಿರಾ ಜನನ.

1933: ಅಡಾಲ್ಫ್ ಹಿಟ್ಲರ್ ಜರ್ಮನಿಯ ಚಾನ್ಸಲರ್ ಆದ. ಇದು ಜರ್ಮನಿಯ ಪ್ರಜಾತಾಂತ್ರಿಕ ಸಂಸದೀಯ ವ್ಯವಸ್ಥೆಯ ಶವ ಪೆಟ್ಟಿಗೆಗೆ ಹೊಡೆದ ಕೊನೆಯ ಮೊಳೆಯಾಯಿತು. ಕೆಲ ದಿನಗಳ ಒಳಗಾಗಿಯೇ ಹಿಟ್ಲರ್ ಎಲ್ಲ ಸಾರ್ವಜನಿಕ ಸಭೆಗಳನ್ನು ನಿಯಂತ್ರಿಸುವ ಹಾಗೂ ಪತ್ರಿಕೆಗಳನ್ನು ನಿಯಂತ್ರಿಸಲು ಬೇಕಾದ ಅಪರಿಮಿತ ಅಧಿಕಾರಗಳನ್ನು ಸರ್ಕಾರಕ್ಕೆ ನೀಡಿದ.

1927: ಈದಿನ ಹುಟ್ಟಿದ ಒಲೋಫ್ ಪಾಮೆ (Olof Palme)  (1927-1986) ಮುಂದೆ ಸ್ವೀಡನ್ನಿನ ಪ್ರಧಾನಿಯಾದರು. ಅವರು 1986 ರಲ್ಲಿ ಹತ್ಯೆಗೀಡಾದರು.

1913: ಹಂಗೆರಿ ಸಂಜಾತ ಭಾರತೀಯ ವರ್ಣಚಿತ್ರ್ರ ಕಲಾವಿದೆ ಅಮೃತಾ ಶೆರ್ಗಿಲ್ (1913-1956) ಹುಟ್ಟಿದ ದಿನ. ನಗ್ನ ಚಿತ್ರಗಳನ್ನು ರಚಿಸಿದ ಈಕೆ ಭಾರತೀಯ ಚಿತ್ರಕಲೆಗೆ ಆಧುನಿಕತೆಯ ಸ್ಪರ್ಶ ನೀಡಿದವರು.

1901: ತೈಲವರ್ಣ ಹಾಗೂ ಜಲವರ್ಣ ಚಿತ್ರ ರಚನಯಲ್ಲಿ ಸಿದ್ಧಹಸ್ತರಾಗಿದ್ದ ಮಡಿವಾಳಪ್ಪ ವೀರಪ್ಪ ಮಿಣಜಗಿ ಅವರು ವೀರಪ್ಪ- ಶರಣವ್ವ ದಂಪತಿಯ ಮಗನಾಗಿ ವಿಜಾಪುರದಲ್ಲಿ ಜನಿಸಿದರು.

1785: ಚಾರ್ಲ್ಸ್ ಥಿಯೋಫಿಲಸ್ ಮೆಟ್ಕಾಫ್ (1785-1846) ಹುಟ್ಟಿದ ದಿನ. ಬ್ರಿಟಿಷ್ ಆಡಳಿತಗಾರನಾದ ಈತ ಭಾರತದ ಹಂಗಾಮಿ ಗವರ್ನರ್ ಜನರಲ್ ಆಗಿ ಪತ್ರಿಕಾ ಸ್ವಾತಂತ್ರ್ಯ ಮತ್ತು ಇಂಗ್ಲಿಷನ್ನು ಅಧಿಕೃತ ಭಾಷೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರಮುಖ ಸುಧಾರಣೆಗಳನ್ನು ಜಾರಿಗೆ ತಂದ. 

(ಸಂಗ್ರಹ: ನೆತ್ರಕೆರೆ ಉದಯಶಂಕರ)

Friday, January 30, 2009

Tuntaragali in Kannada..!

Tuntaragali in Kannada..!



Prakash Shetty born on April Fools Day,1960 was addicted to cartooning at the age of fifteen [ 1975 ] He started his funny career with a kannada magazine called Santhosha. Then switched on to a English daily - The Times Of Deccan. Later with Mungaru daily and finally served The Week.

At present He is seriously into funny business. Spot caricaturing at parties..drawing huge cartoon murals... staff caricatures on 40ft wall...t-shirt cartoons...coloured family caricatures...Very recently Prakash Shetty PUNCH became instant hit on ETV. The latest misadventure is VAARE KORE,a humour magazine in kannada [printed magazine ] launched recently. (Click for larger view of report above)

Here is the report of function of Magazine Release held at Bagalore. Support him through warm wishes and subscription to Vaare Kore.  Call 9449500294 0r 080-280606030 email to: prakashetty@gmail.com

ಇಂದಿನ ಇತಿಹಾಸ History Today ಜನವರಿ 28


ಇಂದಿನ ಇತಿಹಾಸ

ಜನವರಿ 28

 ಭಾರತದ ಸುಪ್ರೀಂಕೋರ್ಟ್ ನವದೆಹಲಿಯಲ್ಲಿ ಅಸ್ತಿತ್ವಕ್ಕೆ ಬಂದಿತು. ಸಂಸತ್ ಕಟ್ಟಡದ ಚೇಂಬರ್ ಆಫ್ ಪ್ರಿನ್ಸಸ್ಸಿನಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು. ದಿ ಫೆಡರಲ್ ಕೋರ್ಟ್ ಆಫ್ ಇಂಡಿಯಾ ಈ ಸ್ಥಳದಲ್ಲೇ 1937ರಿಂದ 1950ರವರೆಗೆ 12 ವರ್ಷಗಳ ಕಾಲ ಕಾರ್ಯ ನಿರ್ವಹಿಸಿತ್ತು.

2008: ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ವಿಕೆಟ್ ಕೀಪರ್ `ಗಿಲಿ' ಈದಿನ ಮುಕ್ತಾಯಗೊಂಡ ಅಡಿಲೇಡ್ ಪಂದ್ಯದೊಂದಿಗೆ ಟೆಸ್ಟ್ ಕ್ರಿಕೆಟಿಗೆ ಗುಡ್ ಬೈ ಹೇಳಿದರು. ಪಂದ್ಯ ಡ್ರಾದಲ್ಲಿ ಕೊನೆಗೊಳ್ಳುತ್ತಿದ್ದಂತೆಯೇ ಆಸೀಸ್ ತಂಡದ ಪ್ರತಿಯೊಬ್ಬ ಸದಸ್ಯರೂ ಗಿಲ್ ಕ್ರಿಸ್ಟ್ ಅವರನ್ನು ತಬ್ಬಿಕೊಂಡು ವಿದಾಯ ಹೇಳಿದರು. ಈ ವೇಳೆ ಕ್ರೀಸ್ನಲ್ಲಿದ್ದ ಭಾರತ ತಂಡದ ನಾಯಕ ಅನಿಲ್ ಕುಂಬ್ಳೆ ಅವರೂ ಗಿಲ್ಕ್ರಿಸ್ಟ್ ಅವರನ್ನು ಅಪ್ಪಿಕೊಂಡರು. ಭಾರತ ತಂಡದ ಡ್ರೆಸಿಂಗ್ ಕೋಣೆಗೆ ತೆರಳಿ ಪ್ರತಿಯೊಬ್ಬ ಆಟಗಾರನಿಗೆ ಹಸ್ತಲಾಘವ ನೀಡಿದ `ಗಿಲಿ' ಎಲ್ಲರ ಕೇಂದ್ರಬಿಂದುವಾಗಿ ಬದಲಾದರು. ಕೆಲವೊಂದು ಭಾವಪೂರ್ಣ ಕ್ಷಣಗಳಿಗೆ ಅಡಿಲೇಡಿನಲ್ಲಿ ನೆರೆದ ಪ್ರೇಕ್ಷಕರು ಸಾಕ್ಷಿಯಾದರು. 

2008: ಹೈದರಾಬಾದಿನ 21ರ ಹರೆಯದ ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಈದಿನ ಮತ್ತೊಂದು ಮೈಲಿಗಲ್ಲು ನೆಟ್ಟು ಏಷ್ಯಾದ ನಂಬರ್ ಒನ್ ಟೆನಿಸ್ ಆಟಗಾರ್ತಿ ಎನಿಸಿದರು. ಸಾನಿಯಾ ಅವರು ಈದಿನ ಬಿಡುಗಡೆಯಾದ ಡಬ್ಲ್ಯುಟಿಎ ರ್ಯಾಂಕಿಂಗ್ ಪಟ್ಟಿಯಲ್ಲಿ 29ನೇ ಸ್ಥಾನ ಪಡೆದು  ಏಷ್ಯಾದ ಅಗ್ರ ರ್ಯಾಂಕಿಂಗಿನ ಅಟಗಾರ್ತಿ ಎಂಬ ಗೌರವ ಪಡೆದುಕೊಂಡರು. ಇದುವರೆಗೂ ಈ ಗೌರವ ಚೀನಾದ ನಾ ಲೀ ಅವರ ಹೆಸರಿನಲ್ಲಿ ಇತ್ತು. ಹೊಸ ಪಟ್ಟಿಯಲ್ಲಿ ಲೀ 32ನೇ ಸ್ಥಾನಕ್ಕೆ ಕುಸಿದರು.

2008: ಜಷ್ಪುರ ಜಿಲ್ಲೆಯ ಜೈಮಾರ್ಗ ಅರಣ್ಯದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರು ನಕ್ಸಲರನ್ನು ಬಂಧಿಸಿ, ಅವರಿಂದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಂಡರು. ರಾಜ್ಯ ಪೊಲೀಸ್ ಪ್ರಧಾನ ಕಚೇರಿಯ ಮಾಹಿತಿ ಆಧರಿಸಿ ಸಿ ಐ ಎಸ್ ಎಫ್ ಮತ್ತು ಪೊಲೀಸ್ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಪೊಲೀಸರು ಅಶೋಕ್ ಒರಾನ್, ವಿಶ್ವೇಶ್ವರ್ ಮತ್ತು ಜಾರ್ಜ್ ಮಿಂಜ್ ಎಂಬ ಮೂವರು ನಕ್ಸಲರನ್ನು ಬಂಧಿಸಿದರು.

2008: ಥಾಯ್ಲೆಂಡ್ ಸಂಸತ್ ಪುಗ್ನೇಸಿಯಸ್ ರೈಟ್-ವಿಂಗರ್ ಸಮಕ್ ಸುಂದರವೆಜ್ ಅವರನ್ನು ಹೊಸ ಪ್ರಧಾನಿಯಾಗಿ ಆಯ್ಕೆ ಮಾಡಿತು. ಇದರಿಂದಾಗಿ 2006ರ ರಕ್ತರಹಿತ ಕ್ರಾಂತಿಯ ಬಳಿಕ ದೇಶದಲ್ಲಿ ಮತ್ತೆ ಪ್ರಾತಿನಿಧಿಕ, ನಾಗರಿಕ ಸರ್ಕಾರ ಮರಳಿದಂತಾಯಿತು. 72 ವರ್ಷದ ಈ ಮಾಜಿ ಗವರ್ನರ್, ಗಡಿಪಾರಾಗಿರುವ ಪದಚ್ಯುತ ಪ್ರಧಾನಿ ಥಕ್ಸಿನ್ ಶಿನವಾತ್ರ ಅವರನ್ನು ಮರಳಿ ಸ್ವದೇಶಕ್ಕೆ ಕರೆತರುವ ಪಣತೊಟ್ಟು, ಸೇನೆ ಮತ್ತು ರಾಜಪ್ರಭುತ್ವದ ಪ್ರಮುಖರನ್ನು ದಂಗೆಯ ರೂವಾರಿಗಳೆಂದು ದೂಷಿಸಿ, ಸಂಘರ್ಷಕ್ಕೆ ನಾಂದಿ ಹಾಡಿದ್ದರು.

2007: ಬ್ರಿಟನ್ನಿನ `ಚಾನೆಲ್ 4' ಟಿವಿ ವಾಹಿನಿ ಪ್ರಸಾರ ಮಾಡುತ್ತಿದ್ದ `ಸೆಲೆಬ್ರಿಟಿ ಬಿಗ್ ಬ್ರದರ್' ಕಾರ್ಯಕ್ರಮದಲ್ಲಿಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ  ಒಟ್ಟು ಮತಗಳ ಪೈಕಿ ಶೇ 67ರಷ್ಟು ಮತಗಳನ್ನು ಗಳಿಸಿ ಗೆಲುವಿನ ನಗೆ ಬೀರಿದರು. ಇದರಿಂದಾಗಿ 85 ಲಕ್ಷ ರೂಪಾಯಿಗಳಷ್ಟು (1 ಲಕ್ಷ ಪೌಂಡ್) ನಗದು ಬಹುಮಾನ ಅವರ ಮಡಿಲಿಗೆ ಬಿದ್ದಿತು. ಕಾರ್ಯಕ್ರಮದಲ್ಲಿ ಜನಾಂಗೀಯ ನಿಂದನೆ ಆರೋಪ ಹೊತ್ತಿದ್ದ ಮಾಜಿ ಭುವನ ಸುಂದರಿ ಡೇನಿಯೆಲಾ ಲಾಯ್ಡ್ ಮತ್ತು  ಜಾಕ್ ಟ್ವೀಡ್ ಅವರು ಅಂತಿಮ ಹಣಾಹಣಿಯ ಮೊದಲ ಸುತ್ತಿನಲ್ಲೇ ನಿರ್ಗಮಿಸಿದರು. ಡೇನಿಯ್ಲೆಲಾ ಈ ಮೊದಲು ಜನಾಂಗೀಯ ನಿಂದನೆ ಮಾಡಿದ್ದಕ್ಕಾಗಿ ಶಿಲ್ಪಾ ಅವರ ಕ್ಷಮೆ ಯಾಚಿಸಿದ್ದರು. ಇದಕ್ಕೂ ಮುನ್ನ ಜನಾಂಗೀಯ ನಿಂದನೆಗೈದ ಆರೋಪಕ್ಕೆ ಗುರಿಯಾದ ಜೇಡ್ ಗೂಡಿ ನಿರ್ಗಮಿಸಿದ್ದರು. ಜನವರಿ 2ರಂದು ಆರಂಭಗೊಂಡಿದ್ದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಸ್ಪರ್ಧಾಳುಗಳನ್ನು ಒಂದು ಮನೆಯಲ್ಲಿ ಇರುವಂತೆ ಮಾಡಿ, ಅವರ ನಡವಳಿಕೆಗಳನ್ನು ಹಾಗೂ ದೈನಂದಿನ ಕೆಲಸಗಳಲ್ಲಿ ಉದ್ಭವವಾಗುವ ಸಮಸ್ಯೆಗಳನ್ನು ಇವರೆಲ್ಲ ಹೇಗೆ ನಿಭಾಯಿಸುವರು ಎಂಬುದನ್ನೆಲ್ಲ ಚಿತ್ರೀಕರಿಸಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಸ್ಪರ್ಧಾಳುಗಳು ಶಿಲ್ಪಾ ವಿರುದ್ಧ ಮಾಡಲಾದ ಜನಾಂಗೀಯ ಟೀಕೆಗಳ ಬಗ್ಗೆ ಸುದ್ದಿ ಮಾಧ್ಯಮಗಳ ಕಣ್ಗಾವಲು ಸಂಸ್ಥೆಯಾದ `ಆಫ್ ಕಾಮ್'ಗೆ 40 ಸಾವಿರಕ್ಕೂ ಹೆಚ್ಚು ದೂರುಗಳು ಬಂದಿದ್ದವು. ವಿವಾದಕ್ಕೆ ಸಂಬಂಧಿಸಿದಂತೆ ಬ್ರಿಟಿಷ್ ಜನ ಪ್ರತಿನಿಧಿಗಳು ಸಹ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ ಬ್ರಿಟನ್ನಿನ ಸುದ್ದಿ ಮಾಧ್ಯಮಗಳೂ ಈ ಘಟನೆಯ ವಿರುದ್ಧ ದನಿ ಎತ್ತಿದ್ದವು.

2007: ಗಿನ್ನೆಸ್ ವಿಶ್ವದಾಖಲೆಗೆ ಸೇರ್ಪಡೆಯಾಗುವ ಸಲುವಾಗಿ `ಕರಾಟೆ ಭಾನುಮತಿ' ಎಂದೇ ಖ್ಯಾತರಾಗಿರುವ 47 ವರ್ಷದ ಮಹಿಳೆ ತಮಿಳುನಾಡಿನ ಚೆನ್ನೈಯಲ್ಲಿ ಗಾಜಿನ ಚೂರು ಹಾಗೂ 1525 ಮೊಳೆಗಳಿದ್ದ ಹಲಗೆಯಲ್ಲಿ ಪವಡಿಸಿ, ತನ್ನ ಮೈಮೇಲೆ 565 ಮೋಟಾರ್ ಸೈಕಲ್ಲುಗಳನ್ನು ಓಡಿಸಿಕೊಂಡರು. ಈ ದಾಖಲೆ ಸ್ಥಾಪನೆಯ ಒಂದು ಭಾಗವಾಗಿ ಹಲಗೆಯಲ್ಲಿ ಮಲಗಿದ್ದಾಗಲೇ ಆಕೆಯ ಮೇಲೆ 500 ಕಿ.ಗ್ರಾಂ. ತೂಕದ ಗ್ರಾನೈಟ್ ಕಲ್ಲನ್ನು ಇರಿಸಿ ಒಡೆದು ಹಾಕಲಾಯಿತು. ಈ ಸಾಹಸವನ್ನು ನಗರದ ಚಾಲೆಂಜರ್ಸ್ ಅಕಾಡೆಮಿ ಸಂಘಟಿಸಿತ್ತು. ಲಿಮ್ಕಾ ದಾಖಲೆ ಸ್ಥಾಪನೆ ಸಲುವಾಗಿ ಇನ್ನೊಂದು ಸಾಹಸದಲ್ಲಿ ಎಸ್. ರಾಜಾ ಅವರು 32 ಸೆಕೆಂಡುಗಳಲ್ಲಿ ತಮ್ಮ ಒಂದೇ ತೋಳನ್ನು 32 ಸಲ ಮೇಲಕ್ಕೆ ಬೀಸಿ ದಾಖಲೆ ನಿರ್ಮಿಸಿದರು. ಈ ಹಿಂದೆ ಮುಂಬೈಯ ನಾಯಕ್ ಅವರು 41.5 ಸೆಕೆಂಡಿನಲ್ಲಿ 27 ಸಲ ತಮ್ಮ ತೋಳನ್ನು ಮೇಲಕ್ಕೆ ಬೀಸಿ ದಾಖಲೆ  ಸ್ಥಾಪಿಸಿದ್ದರು.

2007: `ಜರಾ ಹೊಲ್ಲೆ ಹೊಲ್ಲೆ ಚಲೊ ಮೇರೆ ಸಾಜನಾ', `ಯೇ ಲೊ ಮೇ ಹಾರಿ ಪಿಯಾ'ದಂತಹ ಸುಮಧುರ ಗೀತೆಗಳಿಗೆ ಸಂಗೀತ ನೀಡಿದ್ದ ಖ್ಯಾತ ಸಂಗೀತ ನಿರ್ದೇಶಕ ಓಂಕಾರ್ ಪ್ರಸಾದ್ ನಯ್ಯರ್ (ಒ.ಪಿ.ನಯ್ಯರ್) (82) ಈದಿನ  ಮಧ್ಯಾಹ್ನ ಟಿ.ವಿ. ನೋಡುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದು ಆಸ್ಪತ್ರೆಗೆ ಒಯ್ಯುವ ದಾರಿಯಲ್ಲಿಯೇ ನಿಧನರಾದರು. ಕಳೆದ ಕೆಲ ವರ್ಷಗಳಿಂದ ತೆರೆಮರೆಯಲ್ಲಿಯೇ ಇದ್ದ ನಯ್ಯರ್ ತಮ್ಮ ಕುಟುಂಬದವರಿಂದ ದೂರವಾಗಿ ಆಪ್ತರಾಗಿದ್ದ ನಖ್ವಾ ಕುಟುಂಬದ ಜೊತೆ ಥಾಣೆಯಲ್ಲಿ ವಾಸಿಸುತ್ತಿದ್ದರು. ತಮ್ಮ ಪಂಜಾಬಿ ಸೊಗಡಿನ ಮಾಂತ್ರಿಕ ಸಂಗೀತದಿಂದ ನಯ್ಯರ್ ಅವರು ಸಂಗೀತ ಪ್ರೇಮಿಗಳು ಎಂದೂ ಮರೆಯಲಾರದ ಮಾಧುರ್ಯಭರಿತ ಚಿತ್ರಗೀತೆಗಳನ್ನು ನೀಡಿದ್ದರು. ತಮ್ಮ ಸಮಕಾಲೀನರಾದ ಭಾರತದ ಕೋಗಿಲೆ ಖ್ಯಾತಿಯ ಲತಾ ಮಂಗೇಶ್ಕರ್ ಜೊತೆ ಅವರು ಒಮ್ಮೆಯೂ ಕೆಲಸ ಮಾಡಿದವರಲ್ಲ. ಆದರೂ ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. 50-60 ದಶಕದಲ್ಲಿ ಗಾಯಕ ಮಹಮ್ಮದ್ ರಫಿ ಜೊತೆ ಮಧುರ ಗೀತೆಗಳನ್ನು ನೀಡಿದ ನಯ್ಯರ್, ಆಶಾ ಭೋಂಸ್ಲೆ ವೃತ್ತಿಜೀವನ ಉತ್ತಂಗಕ್ಕೆ ಏರಲು ಕಾರಣರಾಗಿದ್ದರು. `ಮೇರಾ ನಾಮ್ ಚಿನ್ ಚಿನ್ ಚೂ', `ಆಯಿಯೇ ಮೆಹರಬಾನ್ ಬೈಠಿಯೇ ಜಾನೆಜಾ' (ಹೌರಾ ಬ್ರಿಜ್), `ಮಾಂಗ್ ಕೆ ಸಾತ್ ತುಮ್ಹಾರಾ' (ನಯಾ ದೌರ್)ದಂತಹ ಗೀತೆಗಳು ನಯ್ಯರ್ ಪ್ರತಿಭೆಗೆ ಸಾಕ್ಷಿ. 1926ರಲ್ಲಿ ಅವಿಭಜಿತ ಲಾಹೋರಿನಲ್ಲಿ ಜನಿಸಿದ್ದ ನಯ್ಯರ್, ದೇಶ ವಿಭಜನೆಯ ಬಳಿಕ ಲಾಹೋರಿನಿಂದ ಅಮೃತಸರಕ್ಕೆ ಬಂದು ನೆಲೆಸಿದರು. ಸಂಗೀತದ ಹುಚ್ಚಿನಿಂದ 1949ರಲ್ಲಿ ಚಿತ್ರನಗರಿ ಮುಂಬೈಗೆ ಬಂದಿಳಿದರು. ಐದಾರು ವರ್ಷದ ಹೋರಾಟದ ನಂತರ ಗುರುದತ್ ಅವರ `ಆರ್ ಪಾರ್' ನಯ್ಯರ್ ಅವರಿಗೆ ಬ್ರೇಕ್ ನೀಡಿತು. ಅಲ್ಲಿಂದ ಹಿಂದಿರುಗಿ ನೋಡದ ನಯ್ಯರ್ 50-60 ದಶಕದಲ್ಲಿ ಹಿಂದಿ ಚಿತ್ರರಂಗವನ್ನು ಅಕ್ಷರಶಃ ಆಳಿದರು. `ಹೌರಾಬ್ರಿಜ್', `ಕಾಶ್ಮೀರ್ ಕಿ ಕಲಿ', ಮಿ. ಆ್ಯಂಡ್ ಮಿಸೆಸ್ 55', `ಬಾಜ್' ನಯ್ಯರ್ ಸಂಗೀತಕ್ಕೆ ಕನ್ನಡಿ. 1957ರಲ್ಲಿ `ನಯಾ ದೌರ್' ಚಿತ್ರಕ್ಕೆ ಫಿಲ್ಮ್ ಫೇರ್ ಪ್ರಶಸ್ತಿ ಪಡೆದ ನಯ್ಯರ್, ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದರು.

2007: ಬಾಲಾಪರಾಧಿ ಆಶ್ರಯಧಾಮದ ಸುಮಾರು 46 ಮಕ್ಕಳು ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸಿ, ಧಾಮದ ಕಟ್ಟಡದ ಗೋಡೆಯ ಒಂದು ಭಾಗವನ್ನು ಒಡೆದು ಪರಾರಿಯಾದ ಘಟನೆ ಬೆಂಗಳೂರು ನಗರದ ಮಡಿವಾಳದಲ್ಲಿ ನಡೆಯಿತು. ತಪ್ಪಿಸಿಕೊಂಡ ಬಾಲಕರಲ್ಲಿ ಕೆಲವರನ್ನು ಪೋಷಕರು ಆಶ್ರಯಧಾಮಕ್ಕೆ ಒಪ್ಪಿಸಿದರೆ, ಒಬ್ಬನನ್ನು ಕೋರಮಂಗಲದ ಫೋರಂ ವಾಣಿಜ್ಯ ಮಳಿಗೆ ಬಳಿ ಪೊಲೀಸರು ಬಂಧಿಸಿದರು. 

2007: ಖ್ಯಾತ ಹಿಂದಿ ಸಾಹಿತಿ, ಪತ್ರಕರ್ತ ಪದ್ಮ ಭೂಷಣ ಕಮಲೇಶ್ವರ್ (74) ಹೃದಯಾಘಾತದಿಂದ ನವದೆಹಲಿಯ ತಮ್ಮ ಮನೆಯಲ್ಲಿ ನಿಧನರಾದರು. ಕಮಲೇಶ್ವರ್ ಅವರು ಸುಮಾರು 30ಕ್ಕೂ ಹೆಚ್ಚು ಪುಸ್ತಕ ಬರೆದಿದ್ದಾರೆ. 100ಕ್ಕೂ ಹೆಚ್ಚು ಚಲನಚಿತ್ರಗಳಿಗೆ ಅವರು ಸ್ಕ್ರಿಪ್ಟ್ ರಚಿಸಿದ್ದಾರೆ.

2007: ಚೀನಾದ ಶಾಂಘಾಯಿ ದಕ್ಷಿಣ ರೈಲ್ವೆ ನಿಲ್ದಾಣದಿಂದ ಅತಿವೇಗದ ಬುಲೆಟ್ ರೈಲುಗಾಡಿಯು ಶಾಂಘಾಯಿಯಿಂದ ಪ್ರಯಾಣ ಹೊರಟಿತು. ಗಂಟೆಗೆ 250 ಕಿ.ಮೀ. ಪ್ರಯಾಣ ಮಾಡಬಲ್ಲ ಈ ರೈಲುಗಾಡಿ ಶಾಂಘಾಯಿ- ಬೀಜಿಂಗ್ ಮಧ್ಯೆ ಸಂಚರಿಸುವುದು.

2007: ಧರ್ಮಸ್ಥಳದ ರತ್ನ ಮಂಟಪದಲ್ಲಿ ಭಗವಾನ್ ಬಾಹುಬಲಿಯ ಮೂರನೇ ಮಹಾಮಸ್ತಕಾಭಿಷೇಕವನ್ನು ಉಪ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿದರು.

2007: ಬೆಂಗಳೂರಿನ ಅರಮನೆ ಮೈದಾನದಲ್ಲಿ ವೇದಾಂತ ಭಾರತಿ ಸಂಸ್ಥೆಯ ವತಿಯಿಂದ ಯಡತೊರೆ ಶ್ರೀ ಶಂಕರ ಭಾರತಿ ಸ್ವಾಮೀಜಿ ನೇತೃತ್ವದಲ್ಲಿ ಸುಮಾರು ಒಂದು ಲಕ್ಷ ಮಹಿಳೆಯರು ಶಂಕರಾಚಾರ್ಯರ `ಸೌಂದರ್ಯ ಲಹರಿ'ಯನ್ನು ಸಾಮೂಹಿಕವಾಗಿ ಪಾರಾಯಣ ಮಾಡಿ ಇತಿಹಾಸ ನಿರ್ಮಿಸಿದರು.

2006: ಕರ್ನಾಟಕದ ಮುಖ್ಯಮಂತ್ರಿ ಧರ್ಮಸಿಂಗ್ ರಾಜೀನಾಮೆ. ರಾಜ್ಯಪಾಲ ಟಿ.ಎನ್. ಚತುರ್ವೇದಿ ಅವರಿಂದ ಎಚ್.ಡಿ. ಕುಮಾರಸ್ವಾಮಿ ಅವರಿಗೆ ನೂತನ ಸರ್ಕಾರ ರಚನೆಗೆ ಅಧಿಕೃತ ಆಹ್ವಾನಪತ್ರ. ಫೆ.3ರಂದು ಎಚ್. ಡಿ. ಕುಮಾರಸ್ವಾಮಿ ನೇತೃತ್ವದ ಜನತಾದಳ (ಎಸ್) - ಬಿಜೆಪಿ ಪರ್ಯಾಯ ಸರ್ಕಾರದ ರಚನೆಗೆ ನಿರ್ಧಾರ.

2006: ಭೂಮಿಯ ಮೇಲ್ಮೈಯಿಂದ ಮೇಲ್ಮೈಗೆ ಜಿಗಿಯುವ ಆಕಾಶ್ ಕ್ಷಿಪಣಿಯನ್ನು ಬಾಲಸೂರ್ ಮಧ್ಯಂತರ ಪರೀಕ್ಷಾ ಕೇಂದ್ರದಲ್ಲಿ ಎರಡು ಬಾರಿ ಪರೀಕ್ಷಾರ್ಥವಾಗಿ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.

2006: ಸಂಸದರ ಪ್ರದೇಶಾಭಿವೃದ್ಧಿ ದುರ್ಬಳಕೆಯ ತನಿಖೆ ಕುರಿತ ಸಂಸದೀಯ ಸಮಿತಿಯ ಮುಖ್ಯಸ್ಥರಾಗಿ ಕಿಶೋರ್ ಚಂದ್ರ ಅವರನ್ನು ನೇಮಿಸಲಾಯಿತು.

1986: ಸ್ಪೇಸ್ ಷಟಲ್ ನೌಕೆ `ಚಾಲೆಂಜರ್' ಫ್ಲಾರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡ ಸ್ವಲ್ಪ ಹೊತ್ತಿನಲ್ಲೇ ಸ್ಫೋಟಗೊಂಡಿತು. ಶಾಲಾ ಶಿಕ್ಷಕಿ ಕ್ರಿಸ್ಟಾ ಮೆಕ್ಲಿಫ್ ಸೇರಿದಂತೆ ಅದರಲ್ಲಿದ್ದ ಎಲ್ಲ 7  ಮಂದಿ ಗಗನಯಾನಿಗಳೂ ದುರಂತದಲ್ಲಿ ಸಾವನ್ನಪ್ಪಿದರು.

1953: ಡಾ. ರಾಜೇಂದ್ರ ಪ್ರಸಾದ್ ಅವರು ಭಾರತದಲ್ಲಿ ಸಂಗೀತ, ನೃತ್ಯ, ನಾಟಕ ಅಭಿವೃದ್ಧಿಗಾಗಿ ನವದೆಹಲಿಯಲ್ಲಿ ಸಂಗೀತ ನಾಟಕ ಅಕಾಡೆಮಿಯನ್ನು ಉದ್ಘಾಟಿಸಿದರು.

1950: ಭಾರತದ ಸುಪ್ರೀಂಕೋರ್ಟ್ ನವದೆಹಲಿಯಲ್ಲಿ ಅಸ್ತಿತ್ವಕ್ಕೆ ಬಂದಿತು. ಸಂಸತ್ ಕಟ್ಟಡದ ಚೇಂಬರ್ ಆಫ್ ಪ್ರಿನ್ಸಸ್ಸಿನಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು. ದಿ ಫೆಡರಲ್ ಕೋರ್ಟ್ ಆಫ್ ಇಂಡಿಯಾ ಈ ಸ್ಥಳದಲ್ಲೇ 1937ರಿಂದ 1950ರವರೆಗೆ 12 ವರ್ಷಗಳ ಕಾಲ ಕಾರ್ಯ ನಿರ್ವಹಿಸಿತ್ತು. ಈಗಿನ ಕಟ್ಟಡಕ್ಕೆ ಸ್ಥಳಾಂತರಗೊಳ್ಳುವವರೆಗೆ ಸುಪ್ರೀಂಕೋರ್ಟ್ ಕೂಡಾ ಇದೇ ಸ್ಥಳದಿಂದ ಕಾರ್ಯ ನಿರ್ವಹಿಸಿತು.

1945: ರಂಗಭೂಮಿಯ ಪ್ರತಿಭಾನ್ವಿತ ನಟ, ಸಂಘಟಕ ರಾಜಶೇಖರ ಕದಂಬ ಅವರು ಕದಂಬರದಾಸಪ್ಪ- ವೆಂಕಟಮ್ಮ ದಂಪತಿಯ ಮಗನಾಗಿ ಬೆಂಗಳೂರು ಜಿಲ್ಲೆಯ ಗೊಟ್ಟಿಗೆರೆಯಲ್ಲಿ ಜನಿಸಿದರು.

1933: ಲಂಡನ್ನಿನ ವಾಲ್ ಡೋರ್ಫ್ ಹೋಟೆಲಿನಲ್ಲಿ ಕೇಂಬ್ರಿಜಿನ ಭಾರತೀಯ ಮುಸ್ಲಿಂ ಪದವೀಧರ ರಹಮತ್ ಅಲಿ ಚೌಧರಿ ಭಾರತದ ವಿಭಜನೆಯ ಪ್ರಸ್ತಾವವಿದ್ದ ಟಿಪ್ಪಣಿಯೊಂದನ್ನು ಓದಿದ. `ನೌ ಆರ್ ನೆವರ್' ಎಂಬ ಪುಟ್ಟ ಪುಸ್ತಕವೊಂದನ್ನು ಬರೆದಿದ್ದ ಆತ ಪಾಕಿಸ್ಥಾನಕ್ಕೆ ಈ ಹೆಸರು ಕೊಟ್ಟಿದ್ದ. (ಪಾಕಿಸ್ಥಾನ ಅಥವಾ `ಲ್ಯಾಂಡ್ ಆಫ್ ಪ್ಯೂರ್' ಪಂಜಾಬಿಗೆೆ ಪಿ, ಆಫ್ಘಾನಿಯಾಕ್ಕೆ ಎ, ವಾಯುವ್ಯ ಗಡಿ ಪ್ರಾಂತಕ್ಕೆ ರಹಮತ್ ಅಲಿ, ಕಾಶ್ಮೀರಕ್ಕೆ ಕೆ, ಸಿಂದ್ ಗೆ ಎಸ್, ಬಲೂಚಿಸ್ಥಾನಕ್ಕೆ ತಾನ್) 

1931: ಖ್ಯಾತ ಸಾಹಿತಿ ಸಾ.ಶಿ. ಮರುಳಯ್ಯ ಅವರು ಶಿವರುದ್ರಯ್ಯ- ಸಿದ್ದಮ್ಮ ದಂಪತಿಯ ಪುತ್ರನಾಗಿ ತುಮಕೂರು ಜಿಲ್ಲೆ ಚಿಕ್ಕನಾಯಕನ ಹಳ್ಳಿ ತಾಲ್ಲೂಕಿನ ಸಾಸಲು ಗ್ರಾಮದಲ್ಲಿ ಈದಿನ ಜನಿಸಿದರು.

1930: ಭಾರತದ ಖ್ಯಾತ ಸಂಗೀತಗಾರ ಮೋತಿರಾಮ್ ಜಸ್ ರಾಜ್ (1930) ಅವರು ಹುಟ್ಟಿದರು.

1925: ಭಾರತೀಯ ವಿಜ್ಞಾನಿ ಭಾರತೀಯ ಪರಮಾಣು ಶಕ್ತಿ ಆಯೋಗದ ಮಾಜಿ ಅಧ್ಯಕ್ಷ ರಾಜಾ ರಾಮಣ್ಣ (1925) ಹುಟ್ಟಿದ ದಿನ.

1899: ಭಾರತದ ಮೊತ್ತ ಮೊದಲ ಸೇನಾದಂಡನಾಯಕ ಫೀಲ್ಡ್ ಮಾರ್ಷಲ್ ಕೊಡಂದೇರ ಮಾದಪ್ಪ ಕಾರಿಯಪ್ಪ (1899-1993) ಅವರು ಜನಿಸಿದರು. 

1865: ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಲಾಲಾ ಲಜಪತ್ ರಾಯ್ (1865-1928) ಹುಟ್ಟಿದರು. 

1809: ಜರ್ಮನಿಯ ಸಂಸ್ಕೃತ ವಿದ್ವಾಂಸ ಥಿಯೋಡೋರ್ ಬೆನ್ ಫೇ (1809-1881) ಹುಟ್ಟಿದರು. ಪ್ರಾಣಿಗಳ ಕಥೆಗಳನ್ನು ಒಳಗೊಂಡ ಭಾರತದ `ಪಂಚತಂತ್ರ' ಸಂಗ್ರಹ ಇವರಿಗೆ ಅಪಾರ ಖ್ಯಾತಿ ತಂದು ಕೊಟ್ಟಿದೆ. 

(ಸಂಗ್ರಹ: ನೆತ್ರಕೆರೆ ಉದಯಶಂಕರ)

Thursday, January 29, 2009

ಸಮುದ್ರ ಮಥನ 20: ಮಾಹಿತಿ ನಿರ್ವಹಣೆ

ಸಮುದ್ರ ಮಥನ 20: ಮಾಹಿತಿ ನಿರ್ವಹಣೆ

ಶ್ರೀಕೃಷ್ಣ ಸಾಂದೀಪನೀ ಮುನಿಗಳಿಂದ ಅರವತ್ತನಾಲ್ಕು ದಿನಗಳಲ್ಲಿ ಅರವತ್ತನಾಲ್ಕು ವಿದ್ಯೆಗಳನ್ನೂ (ಅಷ್ಟೂ ವಿದ್ಯೆಗಳನ್ನು ಒಳಗೊಂಡಿದೆ) ಕಲಿತ ಎಂಬ ಮಹಾಭಾರತದ ಸಂಗತಿ ಎಲ್ಲರಿಗೂ ಗೊತ್ತಿರುವುದೇ. ಅದು ಹೇಗೆ ಸಾಧ್ಯ ಎಂಬುದರ ಕುರಿತು ಚಿಂತನೆ ನಡೆಸಿ. ಉತ್ತರಗಳು ಒಂದೊಂದಾಗಿ ಬಿಚ್ಚಿಕೊಳ್ಳುತ್ತವೆ.

 ಮನುಷ್ಯ ವಿದ್ಯಾರ್ಜನೆಗೆ ಹೆಚ್ಚಿನ ಮಹತ್ವ ನೀಡಬೇಕು. ಅದಕ್ಕೆ ಸಮರ್ಥ ಗುರುವಿರಬೇಕು. ಪ್ರಸ್ತುತ ಸನ್ನಿವೇಶದಲ್ಲಿ ವಿದ್ಯಾವಂತ ಎಂದು ಎನಿಸಿಕೊಳ್ಳಲು ಹೆಚ್ಹೆಚ್ಚು ಮಾಹಿತಿ ಸಂಗ್ರಹ ಮಾಡಿಕೊಳ್ಳಬೇಕು ಎಂಬ ಕಲ್ಪನೆ ಗಟ್ಟಿಯಾಗಿದೆ. ಹೀಗೇ ನೋಡಿದರೆ ಎಲ್ಲರೂ ಹೇಳುತ್ತಿರುವುದು ಹೌದು ಎನಿಸುತ್ತದೆ. ಸ್ವಲ್ಪ ಯೋಚನೆ ಮಾಡಿ. ನಮ್ಮ ವಿದ್ಯಾರ್ಜನೆ 
ಕೇವಲ ಮಾಹಿತಿ ಸಂಗ್ರಹಕ್ಕಷ್ಟೇ ಸೀಮಿತ ಎಂದಾದರೆ ಅದಕ್ಕೆ ಕೊನೆ, ಮೊದಲಿದೆಯೇ? ಕ್ಷಣಕ್ಷಣಕ್ಕೂ ಚಿತ್ರವಿಚಿತ್ರ ಸಂಶೋಧನೆಗಳು, ಹೊಸಹೊಸ ಘಟನೆಗಳು, ನವನವೀನ ಹೊಳಹುಗಳು, ಅನಿರೀಕ್ಷಿತ ಅವಘಡಗಳು ಹೀಗೇ ಏನೇನೋ ಜರುಗುತ್ತಿರುತ್ತದೆ. ಅದನ್ನೆಲ್ಲ ನಮ್ಮ ಬುದ್ಧಿಯಲ್ಲಿ ದಾಖಲಿಸಿಕೊಂಡರೆ ಹುಚ್ಚು ಹಿಡಿಯುವುದಂತೂ ಖಂಡಿತ. 

ಒಂದೊಮ್ಮೆ ಹಲವಾರು ಸಂಗತಿಗಳನ್ನು ನಮ್ಮ ಬುದ್ಧಿಯಲ್ಲಿ ದಾಖಲಿಸಿಕೊಳ್ಳಲು ಸಾಧ್ಯವಾಯಿತು ಎಂದೇ ಇಟ್ಟುಕೊಳ್ಳಿ. ದಾಖಲಿಸಿಕೊಂಡವರು, ತಮ್ಮ ಸಂಗ್ರಹವನ್ನು ಇನ್ನೊಬ್ಬರಿಗೆ ಪರಿಚಯಿಸಿ, ತಮ್ಮ ಹಿರಿಮೆಯನ್ನು ಮೆರೆಯಲು, ಸಂಗತಿಗಳ ಪ್ರಸ್ತಾಪಕ್ಕಾಗಿ ಅನಗತ್ಯ ಸನ್ನಿವೇಶಗಳನ್ನು ಸೃಷ್ಟಿಸಿಕೊಳ್ಳುತ್ತಾರೆ. ಕ್ರಮೇಣ ಅದು ಅವರ ಚಾಳಿಯಾಗುತ್ತದೆ.

ಒಬ್ಬ ಸಾಮಾನ್ಯನೂ ಯಾರೊಬ್ಬರೂ ಇಂತಹ ಕ್ಷುದ್ರರಾಗಬಾರದು ಎಂದು ಆಶಿಸುತ್ತಾನೆ. ಅದು ಯಾವುದೇ ಪೂರ್ವಾಗ್ರಹಗಳ ನಿಮಿತ್ತವಾಗಿ ತಳೆದ ಆಶಯವಾಗಿರುವುದಿಲ್ಲ. ಕೇವಲ ನೆಮ್ಮದಿಯ ಹಾರೈಕೆಯಿಂದ ಆಶಿಸಿದ್ದಾಗಿರುತ್ತದೆ.

ಸನಾತನ ದೃಷ್ಟಿ ಈ ಮನೋಭಾವದ ಮೇಲೆ ಬೆಳಕು ಚೆಲ್ಲುತ್ತಾ 'ಆಳವಾಗಿ ನೋಡುವುದನ್ನು ಕಲಿಯಬೇಕು. ಆಮೂಲಾಗ್ರವಾಗಿ ಗ್ರಹಿಸಬೇಕು. ಒಮ್ಮೆ ಗ್ರಹಿಸಿದ್ದರ ಬಗೆಗೆ ಸಂದೇಹ ಉಳಿಯದಂತೆ ಗ್ರಹಿಸಬೇಕು. ಹೀಗಾಗಬೇಕಾದರೆ ಬುದ್ಧಿಯಲ್ಲಿ ಸತ್ವ ಗುಣದ ಜಾಗೃತಿ ಆಗಬೇಕು. ಅದರ ಜಾಗೃತಿ ಆದರೆ ತಮೋ ಗುಣದ ಕಗ್ಗತ್ತಲು ಕಳೆಯುತ್ತದೆ. ರಜೋಗುಣದ ಚಾಂಚಲ್ಯ ದೂರಾಗುತ್ತದೆ. ವಿಷಯದಿಂದ ವಿಷಯಕ್ಕೆ ಹಾರುವ ಚಾಪಲ್ಯ ಕಡಿಮೆಯಾಗುತ್ತದೆ. ಕೂಲಂಕಷ ಗ್ರಹಿಕೆಯ ಹವ್ಯಾಸ ಬೆಳೆಯುತ್ತದೆ' ಎಂದು ವಿಸ್ತಾರವಾಗಿ ಎಷ್ಟೆಷ್ಟೋ ಉದಾಹರಣೆಗಳೊಂದಿಗೆ ಸಂದೇಶವನ್ನು ಪ್ರವಹಿಸುತ್ತದೆ.

ಆದ್ದರಿಂದ ಎಗ್ಗಿಲ್ಲದ ಮಾಹಿತಿ ಸಂಗ್ರಹ ಅಷ್ಟೇ ಅಲ್ಲ. ಮಾಹಿತಿ ನಿರ್ವಹಣೆಯೂ ಬೇಕು. ಅದಕ್ಕೆ ಸತ್ವ ಗುಣದ ಜಾಗೃತಿ ಆಗಬೇಕು. ಅದಕ್ಕಾಗಿ, ಗುರುವನ್ನು ಅರಸಿ ಮಾರ್ಗವನ್ನು ಕಂಡುಕೊಳ್ಳಬೇಕು.

ಮಾಹಿತಿಯ ನಾಡಿಯನ್ನು ಹಿಡಿಯಲು ಬಂದರೆ ಮಾಹಿತಿಯ ಒಂದಕ್ಷರ, ಒಂದು ಪದ, ಒಂದು ವಾಕ್ಯ ಎಂಬಂತಹ ಸಣ್ಣಸಣ್ಣ ತುಣುಕುಗಳಿಂದ ಮಾಹಿತಿಯ ಹರವಿನ ಜಾಡನ್ನು ಹಿಡಿಯಬಹುದು.

ಶ್ರೀಕೃಷ್ಣ ಸಾಂದೀಪನೀ ಮುನಿಗಳಿಂದ ಅರವತ್ತನಾಲ್ಕು ದಿನಗಳಲ್ಲಿ ಅರವತ್ತನಾಲ್ಕು ವಿದ್ಯೆಗಳನ್ನೂ (ಅಷ್ಟೂ ವಿದ್ಯೆಗಳನ್ನು ಒಳಗೊಂಡಿದೆ) ಕಲಿತ ಎಂಬ ಮಹಾಭಾರತದ ಸಂಗತಿ ಎಲ್ಲರಿಗೂ ಗೊತ್ತಿರುವುದೇ. ಅದು ಹೇಗೆ ಸಾಧ್ಯ ಎಂಬುದರ ಕುರಿತು ಚಿಂತನೆ ನಡೆಸಿ. ಉತ್ತರಗಳು ಒಂದೊಂದಾಗಿ ಬಿಚ್ಚಿಕೊಳ್ಳುತ್ತವೆ. ಉತ್ತರಗಳ ಹೊಳಹು ಸಿಗಲೆಂದು ಹಾರೈಸುತ್ತೇವೆ. ಎಲ್ಲರಿಗೂ ಒಳ್ಳೆಯದಾಗಲಿ.

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ

ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ

ಶ್ರೀರಾಮಚಂದ್ರಾಪುರಮಠ

ಸೂರ್ಯ ನಮಸ್ಕಾರ ಯಜ್ಞ

ಸೂರ್ಯ ನಮಸ್ಕಾರ ಯಜ್ಞ


ಬೆಂಗಳೂರು: ಬೆಂಗಳೂರು ಕಲ್ಯಾಣನಗರ ಎಚ್ಬಿಆರ್ ಬಡಾವಣೆಯ ಸತ್ಸಂಗ ಫೌಂಡೇಷನ್ ಫೆಬ್ರುವರಿ 1ರ ಭಾನುವಾರ ಬೆಳಗ್ಗೆ 6.30 ಗಂಟೆಗೆ ಬಡಾವಣೆಯ ಸಿ.ಎಂ.ಆರ್. ನ್ಯಾಷನಲ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರ ಮತ್ತು ಸೂರ್ಯ ಯಜ್ಞ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಆರೋಗ್ಯ ರಕ್ಷಣೆ ಹಾಗೂ ಲೋಕಕಲ್ಯಾಣಕ್ಕಾಗಿ ಸೂರ್ಯೋದಯದ ಹೊತ್ತಿನಲ್ಲಿ 108 ಬಾರಿ ಮಾಡುವ ಈ ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಪುರುಷರು ಹಾಗೂ ಮಹಿಳೆಯರು ಪಾಲ್ಗೊಳ್ಳಬಹುದು. ಆಸಕ್ತರು ವಿವರಗಳಿಗೆ ಆಸಕ್ತರು ಡಾ. ಶ್ಯಾಮ್ ಪ್ರಸಾದ್ (ಫೋನ್: 25443636), ನಾಗಮಣಿ (9449853341), ಸೀತಾರಾಮ (9945188081), ಸೌಮ್ಯ (9902326728) ಅವರನ್ನು ಸಂಪರ್ಕಿಸಬಹುದು 

ಇಂದಿನ ಇತಿಹಾಸ History Today ಜನವರಿ 27

ಇಂದಿನ ಇತಿಹಾಸ

ಜನವರಿ 27

 ಸಹಸ್ರಮಾನದ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರಿಗೆ ಫ್ರಾನ್ಸಿನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ `ಲೀಜನ್ ಡಿ' ಆನರ್'ನ್ನು  ಫ್ರೆಂಚ್ ರಾಯಭಾರಿ ಕಚೇರಿಯಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.

2008: ಪ್ರಸ್ತುತ ಸಾಲಿನ ಪದ್ಮಶ್ರೀ ವಿಜೇತರಲ್ಲಿ ಉತ್ತರ ಪ್ರದೇಶದ ಮಾವು ಬೆಳೆಗಾರರೊಬ್ಬರು ಸೇರಿದ್ದು ವಿಶೇಷವಾಗಿ ಗಮನ ಸೆಳೆಯಿತು. ಉತ್ತರ ಪ್ರದೇಶದ 
ಮಲಿಹಾಬಾದ್ ಪಟ್ಟಣದಲ್ಲಿ ವಾಸಿಸುವ ಮಾವು ಬೆಳೆಗಾರ ಕಲೀಮುಲ್ಲಾ ಖಾನ್ ಅವರಿಗೆ ಪದ್ಮಶ್ರೀ ಬಂದಿತು. ಇವರು ಒಂದೇ ಮಾವಿನ ಮರದಿಂದ 300 ಕ್ಕೂ ಹೆಚ್ಚು ಹೊಸ ತಳಿಗಳನ್ನು ಉತ್ಪಾದಿಸಿದ್ದಾರೆ. ಆರಂಭದಲ್ಲಿ ತಮ್ಮ ತಂದೆಯಿಂದ ಕಲಿತ ಈ ವಿದ್ಯೆಯನ್ನು ಹಾಗೇ ಬೆಳೆಸಿಕೊಂಡಿದ್ದಾರೆ. ಮೊದ ಮೊದಲು ನಾಟಿ ತಳಿಗಳನ್ನು ಬೆಳೆಸುತ್ತಿದ್ದರು. ನಂತರ ಹೈಬ್ರಿಡ್ ತಳಿಗಳನ್ನು ಪ್ರಯೋಗಗಳ ಮೂಲಕ ಬೆಳೆಯಲಾರಂಭಿಸಿದರು. ಕಲಿಮುಲ್ಲಾ ಪರಿಣತಿ ಅರಿತ ಇರಾನ್ ಸರ್ಕಾರ  ತಮ್ಮಲ್ಲೇ ಬಂದು ನೆಲಸುವಂತೆ ಆಹ್ವಾನ ನೀಡಿತು. ಈ ಆಹ್ವಾನವನ್ನು ತಿರಸ್ಕರಿಸಿದ ಖಾನ್, ತಮ್ಮ ಕುಟುಂಬದವರು ಮಾವು ಬೆಳೆಸುತ್ತಿದ್ದ ಮಲಿಹಾಬಾದ್ ಪ್ರದೇಶದಲ್ಲಿಯೇ ಇರಲು ಬಯಸಿದರು. 

2008: ಮೂರು ದಶಕಗಳ ಕಾಲ ಇಂಡೋನೇಷ್ಯಾವನ್ನು ತನ್ನ ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡು ಆಡಳಿತ ನಡೆಸಿದ್ದ, ದಶಲಕ್ಷಕ್ಕೂ ಅಧಿಕ ವಿರೋಧಿಗಳನ್ನು ಸಾಯಿಸಿದ್ದ ಆರೋಪ ಹೊತ್ತ ಸರ್ವಾಧಿಕಾರಿ ಎಚ್.ಎಂ.ಸುಹಾರ್ತೋ (86) ಈದಿನ ಜಕಾರ್ತದ ಆಸ್ಪತ್ರೆಯಲ್ಲಿ ನಿಧನರಾದರು. ಸುಹಾರ್ತೋ ಅವರ ನಿಧನವನ್ನು ಪೊಲೀಸ್ ಮುಖ್ಯಸ್ಥರು ಅಧಿಕೃತವಾಗಿ ಘೋಷಿಸಿದರು. ಹೃದಯ, ಮೂತ್ರಪಿಂಡ ಹಾಗೂ ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದ ಅವರನ್ನು ಮೂರು ವಾರಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. 1967ರಲ್ಲಿ ಇಂಡೋನೇಷ್ಯಾದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಸುಹಾರ್ತೋ, ನಿರ್ದಯಿ ಸರ್ವಾಧಿಕಾರಿಯಾಗಿದ್ದರು. ಕಮ್ಯೂನಿಸ್ಟ್ ಪಕ್ಷದ ಕಟ್ಟಾ ವಿರೋಧಿಯಾಗಿದ್ದ ಅವರ ಮೇಲೆ ಅಪಾರ ಪ್ರಮಾಣದ ಆಸ್ತಿ ಹೊಂದಿದ್ದಾರೆಂಬ ಆರೋಪವಿತ್ತು.  ಕಮ್ಯುನಿಸ್ಟ್ ವಿರೋಧಿ ನೀತಿ ಹಾಗೂ ಆಡಳಿತದ ವಿರುದ್ಧ ವಿದ್ಯಾರ್ಥಿ ಸಂಘಟನೆಗಳು ಸಮರ ಸಾರಿದ್ದವು.  ಜೊತೆಗೆ 1997ರಲ್ಲಿ ಏಷ್ಯಾದ ಆರ್ಥಿಕ ಬಿಕ್ಕಟ್ಟು  ಅವರು  ಅಧಿಕಾರದಿಂದ ಕೆಳಗಿಳಿಯುವಂತೆ ಮಾಡಿತು.  

2008: ಸೇತು ಸಮುದ್ರಂ ಯೋಜನೆಯಿಂದ ನೌಕಾದಳಕ್ಕಾಗಲೀ ಅಥವಾ ಅಂತಾರಾಷ್ಟ್ರೀಯ ನೌಕಾಯಾನ ಸಂಸ್ಥೆಗಳಿಗಾಗಲೀ ಯಾವುದೇ ಪ್ರಯೋಜನವಿಲ್ಲ. ಆದ್ದರಿಂದ ಈ ಯೋಜನೆಯನ್ನು ತತ್ ಕ್ಷಣವೇ ಕೈಬಿಡಬೇಕು ಎಂದು ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣಿಯನ್ ಸ್ವಾಮಿ ಚೆನ್ನೈಯಲ್ಲಿ ಆಗ್ರಹಿಸಿದರು. 

2008: ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಸೊಸೆ ಐಶ್ವರ್ಯ ರೈ ಬಚ್ಚನ್ ಹೆಸರಿನ ಮಹಿಳಾ ಕಾಲೇಜಿಗೆ ಬಚ್ಚನ್ ಕುಟುಂಬ ಅಡಿಗಲ್ಲು ಹಾಕಿತು. ಭೂ ವಿವಾದ ಕುರಿತು ಅಮಿತಾಬ್ ಬಚ್ಚನ್ ಮೇಲಿದ್ದ ಪ್ರಕರಣವನ್ನು ಎರಡು ತಿಂಗಳ ಹಿಂದೆಯೇ ಅಲ್ಲಿನ ಹೈಕೋರ್ಟ್ ಇತ್ಯರ್ಥ ಪಡಿಸಿತ್ತು.

2008: ದೇಶದಲ್ಲಿ ಭಾರಿ ಸಂಚಲನ ಮೂಡಿಸಿದ ಗುಡಗಾಂವ್ ಅಕ್ರಮ ಮೂತ್ರಪಿಂಡ (ಕಿಡ್ನಿ) ಕಸಿ ಹಗರಣ ತಡೆಗಟ್ಟುವಲ್ಲಿ ರಾಜ್ಯ ಪೊಲೀಸರು ವಿಫಲವಾದುದನ್ನು ಹರಿಯಾಣಾದ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಒಪ್ಪಿಕೊಂಡರು. ಇದು ರಾಜ್ಯ ಸರ್ಕಾರದ ದೊಡ್ಡ ವೈಫಲ್ಯ ಎಂದು ಹೂಡಾ ಹೇಳಿದರು. ಕಿಡ್ನಿ ಹಗರಣದ ಪ್ರಮುಖ ಆರೋಪಿಯ ಹೆಸರು ಡಾ. ಅಮಿತ್ ಕುಮಾರ್ ಹೌದೇ ಅಥವಾ ಡಾ. ಸಂತೋಷ್  ರಾವುತ್ ಎಂದೇ? ಎಂಬ ಗುಮಾನಿ ಪೊಲೀಸ್ ವಲಯದಲ್ಲಿ ಮನೆ ಮಾಡಿತು. ಮುಂಬೈ ವಿಮಾನ ನಿಲ್ದಾಣದಲ್ಲಿ 14 ವರ್ಷಗಳ ಹಿಂದೆ ಕೆಲವು ಶ್ರೀಮಂತ ಪ್ರಯಾಣಿಕರನ್ನು ಕರೆದೊಯ್ಯುವ ಸಲುವಾಗಿ ಟ್ಯಾಕ್ಸಿ ಚಾಲಕರು ಹಿಡಿದುಕೊಂಡಿದ್ದ ಫಲಕಗಳಲ್ಲಿ ಡಾ. ರಾವುತ್ ಹೆಸರು ಇತ್ತು. 1994ರಲ್ಲಿ ಡಾ. ರಾವುತ್ ನನ್ನು ಬಂಧಿಸಿ ಹಗರಣ ಬಯಲಿಗೆಳೆಯಲಾಗಿತ್ತು. ಬಳಿಕ ಜಾಮೀನಿನ ಮೇಲೆ ಹೊರ ಬಂದಿದ್ದ ಆತ ಮುಂಬೈಯಿಂದ ದೂರ ಹೋಗಿದ್ದರೂ, ಆತನ ಕುಟುಂಬ ಇನ್ನೂ ಮುಂಬೈಯಲ್ಲೇ ಇತ್ತು. ದೇಶದಲ್ಲೇ ಅತಿ ದೊಡ್ಡ ಕಿಡ್ನಿ ಹಗರಣ ನಡೆದದ್ದು ಡಾ. ರಾವುತ್ ನ ಕೌಶಲ್ಯ ನರ್ಸಿಂಗ್  ಹೋಮ್ ನಲ್ಲಿ. ಅದೊಂದು ಆಯುರ್ವೇದ ಆಸ್ಪತ್ರೆಯಾದರೂ ಭಾರಿ ಪ್ರಮಾಣದ ಅಕ್ರಮ ಕಿಡ್ನಿ ಕಸಿ ಅಲ್ಲಿ ನಡೆದಿತ್ತು. ಬಳಿಕ ಮಹಾರಾಷ್ಟ್ರ ರಾಜ್ಯ ಮಾನವ ಅಂಗಾಂಗ ದಾನಕ್ಕೆ ಕಠಿಣ ಶಾಸನ ರೂಪಿಸಿತು. ಆದರೂ ಡಾ. ರಾವುತನ ಜಾಲ ದೇಶದ ಇತರ 5 ಕಡೆಗಳಿಗೆ ವ್ಯಾಪಿಸಿತ್ತು.

2008: ಮಂಗಳೂರಿನ ಮಂಗಳಾ ಮ್ಯಾಜಿಕ್ ಸರ್ಕಲ್ ಆಶ್ರಯದಲ್ಲಿ ನಗರದ ಕದ್ರಿ ಶ್ರೀಗೋರಕ್ಷನಾಥ ಸಭಾಭವನದ ಸಂಸ್ಥಾಪಕ ದಿವಂಗತ ಪ್ರೊ. ಬಾಸ್ ವೇದಿಕೆಯಲ್ಲಿ ನಡೆದ `ಕಣ್ಕಟ್-2008' ಸಮ್ಮೇಳನವನ್ನು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಉದ್ಘಾಟಿಸಿದರು. ಕಾಸರಗೋಡಿನ ವಾಸುದೇವ ಕೋಟೂರು (ವಾಕೋ), ಉಡುಪಿ ಪ್ರಹ್ಲಾದ ಆಚಾರ್ಯ ಹಾಗೂ ಮಂಗಳೂರಿನ ಪ್ರದೀಪ್ ಸೂರಿ ಜಾದೂತಂತ್ರಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.  ರಾಜ್ಯಮಟ್ಟದ ಜಾದೂ ಸ್ಪರ್ಧೆಯಲ್ಲಿ ಬೆಂಗಳೂರಿನ ಕರುಣ್ ಕೃಷ್ಣ ಹಾಗೂ ಮಂಗಳೂರಿನ ಮಹೇಶ್ ಜಿ.ಎಸ್. ಪ್ರಶಸ್ತಿ ಗಳಿಸಿದರು.

2008: ಗುಲ್ಬರ್ಗ  ಜಿಲ್ಲೆ ಶಹಬಾದಿನಿಂದ ಮಹಾರಾಷ್ಟ್ರದ ಕರಾಡ ಪಟ್ಟಣಕ್ಕೆ ಪರಸಿ ಕಲ್ಲು ತುಂಬಿಕೊಂಡು ಹೊರಟಿದ್ದ ಲಾರಿ ನಗರದ ಹೊರವಲಯದ ಡೋಣಿ ನದಿ ಸೇತುವೆ ಬಳಿ ಮಗುಚಿ ಬಿದ್ದು 10 ಜನ ಕೂಲಿ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿ, 13 ಜನರು ಗಾಯಗೊಂಡರು.

2008: ಜಾಮೀನಿನ ಮೇಲೆ ಚಿತ್ರದುರ್ಗ ಕಾರಾಗೃಹದಿಂದ ಬಿಡುಗಡೆಯಾಗಿದ್ದ ರೌಡಿ ಕೊರಂಗು ಕೃಷ್ಣ (46) ಕಾರಿನಲ್ಲಿ ಆಂಧ್ರಪ್ರದೇಶದ ಚಿತ್ತೂರು ಬಳಿ ಪ್ರಯಾಣಿಸುತ್ತಿದ್ದಾಗ ಬಾಂಬ್ ಸ್ಫೋಟಿಸಿ ಗಾಯಗೊಂಡ.

2007: ಖ್ಯಾತ ಮಲಯಾಳಿ ಬರಹಗಾರ, ಸಾಹಿತ್ಯ ವಿಮರ್ಶಕ ಡಾ. ಸುಕುಮಾರ ಅಯಿಕ್ಕೋಡ್ ಅವರು ಗಣರಾಜ್ಯೋತ್ಸವ ಮುನ್ನಾದಿನ ತಮಗೆ ಘೋಷಿಸಲಾದ `ಪದ್ಮಶ್ರೀ' ಪ್ರಶಸ್ತಿಯನ್ನು ತಿರಸ್ಕರಿಸಿದರು. ಇಂತಹ ಪ್ರಶಸ್ತಿಗಳು, ಸಂವಿಧಾನವು ನೀಡಿರುವ ಎಲ್ಲ ನಾಗರಿಕರ ಸಮಾನತೆಯ ತತ್ವಕ್ಕೆ ವಿರುದ್ಧವಾದವುಗಳು ಎಂದು ಅಯಿಕ್ಕೋಡ್ ಹೇಳಿದರು. ಸರ್ಕಾರಗಳು ಆಯ್ದ ವ್ಯಕ್ತಿಗಳಿಗೆ ಈ ರೀತಿ ಪ್ರಶಸ್ತಿ ಪ್ರದಾನ ಮಾಡುವುದು ಸಂವಿಧಾನವು ಖಾತರಿ ಪಡಿಸಿರುವ ಎಲ್ಲ ನಾಗರಿಕರ ಸಮಾನತೆಯ ತತ್ವಕ್ಕೆ ವಿರುದ್ಧವಾದುದು ಎಂದು  ತಾವು ಸ್ಪಷ್ಟವಾಗಿ ಪರಿಗಣಿಸುವುದಾಗಿ ಅಯಿಕೋಡ್ ದೃಢಪಡಿಸಿದರು. ಕೇರಳದ ಸಾಂಸ್ಕೃತಿಕ ಪ್ರಪಂಚದಲ್ಲಿ ಪ್ರಮುಖ ಸ್ಥಾನ ಪಡೆದಿರುವ ಅಯಿಕ್ಕೋಡ್ ಖ್ಯಾತ ಸಾಹಿತ್ಯ ವಿಮರ್ಶಕ, ಭಾಷಣಕಾರ ಮತ್ತು ಸಾಮಾಜಿಕ ಕಾರ್ಯಕರ್ತರಾಗಿದ್ದು, ಸಾರ್ವಜನಿಕ ವಿಚಾರಗಳಿಗೆ ಸಂಬಂಧಿಸಿದಂತೆ ನೇರ ಅಭಿಪ್ರಾಯ ವ್ಯಕ್ತ ಪಡಿಸುವುದಕ್ಕೆ ಹೆಸರಾಗಿದ್ದಾರೆ. 

2007: ಭವಿಷ್ಯನಿಧಿಯ ಬಡ್ಡಿ ದರವನ್ನು ಪ್ರಸ್ತುತ ಹಣಕಾಸು ವರ್ಷದಲ್ಲಿ ಇಳಿಸುವುದಕ್ಕೆ ಸಂಬಂಧಿಸಿದ ವಿವಾದಾತ್ಮಕ ವಿಷಯ ಕುರಿತ ನಿರ್ಧಾರ ಕೈಗೊಳ್ಳಲು ನೌಕರರ ಭವಿಷ್ಯನಿಧಿ ಮಂಡಳಿಯ  ಸಭೆ ವಿಫಲಗೊಂಡಿದ್ದು, ಇ ಪಿ ಎಫ್ ನಿಧಿಯ ಶೇಕಡಾ 5ರಷ್ಟು ಹಣವನ್ನು ಈಕ್ವಿಟಿ ಮಾರುಕಟ್ಟೆಯಲ್ಲಿ ತೊಡಗಿಸುವ ಹಣಕಾಸು ಸಚಿವಾಲಯದ ಪ್ರಸ್ತಾವವನ್ನೂ ತಿರಸ್ಕರಿಸಿತು.

2007: ಸಹಸ್ರಮಾನದ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರಿಗೆ ಫ್ರಾನ್ಸಿನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ `ಲೀಜನ್ ಡಿ' ಆನರ್'ನ್ನು  ಫ್ರೆಂಚ್ ರಾಯಭಾರಿ ಕಚೇರಿಯಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಭಾರತೀಯ ಹಾಗೂ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಮಿತಾಭ್ ಅವರು ಸಲ್ಲಿಸಿದ ಸೇವೆಯನ್ನು ಗುರುತಿಸಿ ಫ್ರೆಂಚ್ ರಾಯಭಾರಿ ಡೊಮಿನಿಕ್ ಗಿರಾರ್ಡ್  ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಸಮಾರಂಭದಲ್ಲಿ ಅಮಿತಾಭ್ ಅವರ ಭಾವಿ ಸೊಸೆ ಐಶ್ವರ್ಯ ರೈ ಸೇರಿದಂತೆ  ಅವರು ಕುಟುಂಬದ ಸದಸ್ಯರು ಭಾಗವಹಿಸಿದ್ದರು.

2007: ಬಾಲಿವುಡ್ ನಟ ರಾಹುಲ್ ರಾಯ್ ಭಾರತದ ರಿಯಾಲಿಟಿ ಟಿವಿ ಶೋ `ಬಿಗ್ ಬಾಸ್' ಆಗಿ ಆಯ್ಕೆಯಾದರು.

2007: ಹಿರಿಯ ನೃತ್ಯ ಕಲಾವಿದೆ ಪದ್ಮಿನಿ ರಾವ್ (50) ಅವರು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಟುವಾಂಗ ನಡೆಸಿಕೊಡುತ್ತಿರುವಾಗಲೇ ತೀವ್ರ ಅಸ್ವಸ್ಥರಾಗಿ ನಿಧನರಾದರು. ತಮ್ಮ ಸಂಸ್ಥೆ ಪೊನ್ನಯ್ಯ ಲಲಿತಕಲಾ ಅಕಾಡೆಮಿ ವತಿಯಿಂದ ಇಡೀ ದಿನ `ಕರುನಾಡ ಪರಂಪರೆ' ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾಗ ಈ ಘಟನೆ ನಡೆಯಿತು.

2007: ದಕ್ಷಿಣ ಆಫ್ರಿಕಾದ ಇತಿಹಾಸ ತಜ್ಞ ಹಾಗೂ ಆಂಗ್ಲೊ-ಜುಲು ಯುದ್ಧದ ವಿವರ ನೀಡುವ ಪರಿಣತ ಡೇವಿಡ್ ರಾತ್ರೆ ಅವರು ತಮ್ಮ ವಸತಿ ಗೃಹದಲ್ಲೇ ಅಪರಿಚಿತ ದುಷ್ಕರ್ಮಿಗಳ ಗುಂಡಿಗೆ ಬಲಿಯಾದರು.  

2007; ಮೆಲ್ಬೋರ್ನಿನಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಸ್ಲಾಮ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ರಷ್ಯಾದ ಮಾರಿಯಾ ಶರಪೋವಾ ಅವರನ್ನು ಅಮೆರಿಕದ ಸೆರೆನಾ ಅವರು ಪರಾಭವಗೊಳಿಸಿದರು. ಈ ಮೂಲಕ 28 ವರ್ಷಗಳ ನಂತರ ಗೆದ್ದ ಶ್ರೇಯಾಂಕ ರಹಿತ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 1978ರಲ್ಲಿ ವಿಶ್ವದ 111ನೇ ರ್ಯಾಂಕ್ ಹೊಂದಿದ್ದ ಕ್ರಿಸ್ ಓನೆಲ್ ಈ ಸಾಧನೆ ಮಾಡಿದ್ದರು.

2006: ಕನ್ನಡದ ಪ್ರಪ್ರಥಮ ಹಾಸ್ಯ ಬರಹಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಟಿ. ಸುನಂದಮ್ಮ (89) ಬೆಂಗಳೂರಿನ ತಮ್ಮ ವೈಯಾಲಿಕಾವಲ್ ಮನೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಹಾಸ್ಯ ಸಾಹಿತ್ಯದಲ್ಲಿ ಸಾಕಷ್ಟು ಕೃಷಿ ಮಾಡಿದ್ದ ಸುನಂದಮ್ಮ `ಕೊರವಂಜಿ' ಹಾಸ್ಯಪತ್ರಿಕೆಯ  ಮೂಲಕ ಹೆಸರಾದರು. ಇವರ ಸಮಗ್ರ ಹಾಸ್ಯ ಕೃತಿ 1993ರಲ್ಲಿಪ್ರಕಟವಾಗಿತ್ತು. `ಭಂಜದ ಚೀಲ', `ಬಣ್ಣದ ಚಿಟ್ಟೆ' ಹಾಗೂ `ಪೆಪ್ಪರ್ ಮೆಂಟ್' ಇವರ ಇನ್ನಿತರ ಕೆಲವು ಕೃತಿಗಳು. `ರಾಜ್ಯೋತ್ಸವ ಪ್ರಶಸ್ತಿ', `ಕರ್ನಾಟಕ ಸಾಹಿತ್ಯ ಅಕಾಡೆಮಿ' ಪುರಸ್ಕಾರ, `ದಾನಚಿಂತಾಮಣಿ' ಪುರಸ್ಕಾರ ಹೀಗೆ ಹಲವಾರು ಪ್ರಶಸ್ತಿ-ಪುರಸ್ಕಾರಗಳಿಗೆ ಸುನಂದಮ್ಮ ಭಾಜನರಾಗಿದ್ದರು. ಕರ್ನಾಟಕದಲ್ಲಿ `ಲೇಖಕಿಯರ ಸಂಘ' ಕಟ್ಟುವುದಕ್ಕೆ ಕಾರಣಕರ್ತರಾಗಿದ್ದ ಸುನಂದಮ್ಮ, ಸಂಘದ ಸಂಘಟನೆಯಲ್ಲಿ ಕೊನೆಯವರೆಗೆ ಕ್ರಿಯಾಶೀಲವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. 

2006: ರಾಜ್ಯಪಾಲರ ಸೂಚನೆಯ ಪ್ರಕಾರ ಈದಿನ ಸದನದಲ್ಲಿ ಬಹುಮತ ಸಾಬೀತು ಪಡಿಸಬೇಕಾಗಿದ್ದ ಮುಖ್ಯಮಂತ್ರಿ ಧರ್ಮಸಿಂಗ್ ಅವರು ಸದನದಲ್ಲಿ ವಿಶ್ವಾಸಮತ ನಿರ್ಣಯ ಮಂಡಿಸಲು ಮುಂದಾಗದೇ ಇದ್ದುದರಿಂದ ಲೋಕಸಭಾಧ್ಯಕ್ಷ ಕೃಷ್ಣ ಅವರು ಅಧಿವೇಶನವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿ ರಾಜ್ಯಪಾಲರಿಗೆ ದಿನದ ಬೆಳವಣಿಗಳ ಬಗ್ಗೆ ವರದಿ ಸಲ್ಲಿಸಿದರು.

2006: ಖ್ಯಾತ ಸಂಗೀತ ನಿರ್ದೇಶಕ ಸರ್ದಾರ್ ಮಲ್ಲಿಕ್ (81) ಹೃದಯಾಘಾತದಿಂದ ನಿಧನರಾದರು. ಖ್ಯಾತ ಸಂಗೀತ ನಿರ್ದೇಶಕ ಅನು ಮಲ್ಲಿಕ್ ಅವರ ತಂದೆಯಾದ ಸರ್ದಾರ್ ಮಲ್ಲಿಕ್ ಕಳೆದ ಹಲವಾರು ವರ್ಷಗಳಿಂದ ಪಾರ್ಕಿನ್ಸನ್ ರೋಗದಿಂದ ಅಸ್ವಸ್ಥರಾಗಿದ್ದರು. ಸಾರಂಗ, ಬಚ್ ಪನ್ ಮುಂತಾದ ಚಿತ್ರಗಳಿಗೆ ಸರ್ದಾರ್ ಅವರು ಮಾಡಿದ್ದ ಸಂಗೀತ ಸಂಯೋಜನೆ ಭಾರಿ ಪ್ರಸಿದ್ಧಿ ಗಳಿಸಿತ್ತು.

2000: ಟೆನಿಸ್ ಆಟಗಾರ ಡೊನಾಲ್ಡ್ ಬಜ್ ಅವರು ತಮ್ಮ 84ನೇ ವಯಸ್ಸಿನಲ್ಲಿ ಮೃತರಾದರು. ಅವರು ಗ್ರ್ಯಾಂಡ್ ಸ್ಲಾಮನ್ನು ಮೊತ್ತ ಮೊದಲ ಬಾರಿಗೆ ಗೆದ್ದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

1974: ರಾಷ್ಟ್ರಪತಿ ವಿ.ವಿ. ಗಿರಿ ಅವರು ನವದೆಹಲಿಯ ತೀನ್ ಮೂರ್ತಿ ಭವನದಲ್ಲಿನ `ನೆಹರು ಸ್ಮಾರಕ ಮ್ಯೂಸಿಯಂ'ನ್ನು ರಾಷ್ಟ್ರಕ್ಕೆ ಅರ್ಪಿಸಿದರು.

1967: ಫ್ಲಾರಿಡಾದ ಕೇಪ್ ಕೆನಡಿಯಲ್ಲಿ ಅಪೋಲೋ 1 ಬಾಹ್ಯಾಕಾಶ ನೌಕೆಯಲ್ಲಿ ಹಠಾತ್ತನೆ ಅಗ್ನಿ ಅನಾಹುತ ಸಂಭವಿಸಿ  ಅದರಲ್ಲಿದ್ದ ಅಮೆರಿಕನ್ ಗಗನಯಾನಿಗಳಾದ ವರ್ಗಿಲ್ ಐ, `ಗಸ್' ಗ್ರಿಸ್ಸೋಮ್,  ಎಡ್ವರ್ಡ್ ಎಚ್. ವೈಟ್ ಮತ್ತು ರೋಗರ್ ಬಿ. ಚಾಫೀ ಅವರು ಅಸು ನೀಗಿದರು. 

1959: ಕಲಾವಿದ ರಾಮಧ್ಯಾನಿ ಜನನ.

1950: ಚಾರ್ಲ್ಸ್ ಫಿಜರ್ ಮತ್ತು ಕಂಪೆನಿಯು (Charles Pfzer and Company) ಹೊಸ ಆಂಟಿ ಬಯೋಟಿಕ್  ಟೆರ್ರಾಮೈಸಿನನ್ನು ಉತ್ಪಾದಿಸಿರುವುದಾಗಿ ಸೈನ್ಸ್ ಮ್ಯಾಗಜಿನ್ ಪ್ರಕಟಿಸಿತು. ಮಣ್ಣಿನಿಂದ ಅದನ್ನು ಪ್ರತ್ಯೇಕಿಸಲಾಗಿತ್ತು. ನ್ಯೂಮೋನಿಯಾ (pneumonia)   ಡೀಸೆಂಟ್ರಿ ಮತ್ತು ಇತರ ಸೋಂಕುಗಳಿಗೆ ಇದು ಪರಿಣಾಮಕಾರಿಯಾಗಿತ್ತು. ಫಿಜರ್ ವಿಜ್ಞಾನಿಗಳಿಂದ ಸಂಶೋಧನೆ ಹಾಗೂ ಅಭಿವೃದ್ಧಿಗೊಂಡ ಮೊತ್ತ ಮೊದಲ ಫಾರ್ಮಸ್ಯೂಟಿಕಲ್ ಇದು.

1945: ಗೀತರಚನೆಕಾರ, ಕವಿ, ಕಥೆಗಾರ, ಕಾದಂಬರಿಕಾರ ಎಂ.ಎನ್ ವ್ಯಾಸರಾವ್ ಅವರು ಈದಿನ ನರಸಿಂಗರಾವ್- ಸುಶೀಲಮ್ಮ ದಂಪತಿಯ ಪುತ್ರನಾಗಿ ಮೈಸೂರಿನಲ್ಲಿ ಜನಿಸಿದರು. ಬೆಂಗಳೂರು ಯುನೈಟೆಡ್ ಕಮರ್ಷಿಯಲ್ ಬ್ಯಾಂಕಿನಲ್ಲಿ 34 ವರ್ಷಗಳ ಸೇವೆ ಬಳಿಕ ಸ್ವಯಂ ನಿವೃತ್ತಿ ಪಡೆದು ನಿರಂತರ ಸಾಹಿತ್ಯ ರಚನೆ, ಸಿನಿಮಾ ಸಾಹಿತ್ಯದ ಬರಹದಲ್ಲಿ ತಲ್ಲೀನರಾಗಿದ್ದಾರೆ.

1927: ಖ್ಯಾತ ಹರಿಕಥೆದಾಸ ಬಿ.ಎನ್. ಭೀಮರಾವ್ ಅವರು ನರಸಪ್ಪ-ಲಕ್ಷ್ಮೀದೇವಿ ದಂಪತಿಯ ಮಗನಾಗಿ ಕೊರಟಗೆರೆ ತಾಲ್ಲೂಕಿನ ಸೋಂಪುರದಲ್ಲಿ ಜನಿಸಿದರು.

1926: ಜಾನ್ ಲಾಗೀ ಬೈರ್ಡ್ ಅವರು ತಮ್ಮ `ಹೊಸ ಟೆಲಿವಿಷನ್ ಯಂತ್ರ'ದ ಮೊತ್ತ ಮೊದಲ ಸಾರ್ವಜನಿಕ ಪ್ರದರ್ಶನ ನೀಡಿದರು. ಲಂಡನ್ನಿನ ರಾಯಲ್ ಇನ್ಸ್ಟಿಟ್ಯೂಷನ್ನಿನ ಸದಸ್ಯರಿಗೆ ಅವರು ಚಲಿಸುವ ವಸ್ತುಗಳನ್ನು ತಮ್ಮ ಯಂತ್ರದಲ್ಲಿ ತೋರಿಸಿದರು. 

1880: ಥಾಮಸ್ ಆಲ್ವಾ ಎಡಿಸನ್ ಅವರಿಗೆ `ಇನ್ ಕಾಂಡಿಸೆನ್ಸ್' ನಿಂದ ಬೆಳಕು ನೀಡುವ ಎಲೆಕ್ಟ್ರಿಕ್ ಲೈಟಿಗೆ ಪೇಟೆಂಟ್ (ನಂಬರ್ 223,898) ನೀಡಲಾಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Wednesday, January 28, 2009

ಬಲೆ ಚಾ ಪರ್ಕ..!

ಬಲೆ ಚಾ ಪರ್ಕ..!


ಹೀಗಂತ ಗೆಳೆಯ ಜಿ.ಎನ್. ಮೋಹನ್ ಆಹ್ವಾನಿಸಿ ಪತ್ರ ಬರೆದಿದ್ದಾರೆ. ಈ ಪತ್ರ ಅವರ ಪುಟ್ಟ ಕಾರ್ಯಕ್ರಮವೊಂದರ ಸುದ್ದಿಯೂ ಹೌದು..! ಹಾಗಾಗಿ ಈ ಪತ್ರವನ್ನೂ ಅವರು ಜೊತೆಗೇ ಕಳುಹಿಸಿದ ಆಮಂತ್ರಣವನ್ನೂ 'ಪರ್ಯಾಯ' ಹಾಗೆಯೇ ಭಟ್ಟಿ ಇಳಿಸಿದೆ. ಅದನ್ನು ಓದಿ ಕಾರ್ಯಕ್ರಮ ಯಶಸ್ವಿಗೊಳಿಸುವುದು ಸಹೃದಯ ಓದುಗರಿಗೆ ಬಿಟ್ಟದ್ದು...
 
ನಾನು ಧೈರ್ಯ ಮಾಡಿ ಷೇಕ್ಸ್ ಪಿಯರ್ ಗೆ ಎಸೆದ ಪ್ರಶ್ನೆಗಳಿಗೆ ಒಂದಿಷ್ಟು ಜವಾಬು ಸಿಕ್ಕಿದೆ.

ಡಾ ಪು ತಿ ನ ಟ್ರಸ್ಟ್ ನ ಹಿರಿಯರು ನನ್ನ ಭಂಡ ದೈರ್ಯ ನೋಡಿ ಮೆಚ್ಚಿ ಹಾರೈಸಿದ್ದಾರೆ.

ಡಾ ಜಿ ಎಸ್ ಶಿವರುದ್ರಪ್ಪ, ಎಚ್ ಎಸ್ ವೆಂಕಟೇಶ ಮೂರ್ತಿ, ಬಿ ಆರ್ ಲಕ್ಷ್ಮಣ ರಾವ್, ಜಿ ಪಿ ಬಸವರಾಜು ಹಾಗೂ ಬಸವರಾಜ ವಕ್ಕುಂದ ಇವರೆಲ್ಲರಿಗೂ ನನ್ನ ನಮನ ಸಲ್ಲಿಸುತ್ತಾ ಇದೇ ಬುಧವಾರ ಕಣಿ ಹೇಳದೆ ನೀವು ಅಲ್ಲಿರುತ್ತೀರಿ ಎಂದು ನಂಬಿ ಬಿಟ್ಟಿದ್ದೇನೆ.

ಸಮಾರಂಭಕ್ಕಲ್ಲವಾದರೂ ಅದಕ್ಕೂ ಮುಂಚಿನ ಚಾ ಕಾರ್ಯಕ್ರಮ ಮಿಸ್ ಮಾಡಿಕೊಳ್ಳುವುದು ಬುದ್ದಿವಂತಿಕೆ ಅಲ್ಲ.

ಹ್ವಾಯ್ ಮಾರಾಯರೇ, ಬಲೆ ಚಾ ಪಾರ್ಕ!  

Vande Mataram..!

Vande Mataram...!


Vande Mataram is the song of inspiration for Indians. It became the slogan of inspiration for the freedom struggle in India. How much melodioous and sweet is it? Have you heard this inspirative song in full?

To hear and view just click here...

ಇಂದಿನ ಇತಿಹಾಸ History Today ಜನವರಿ 26

ಇಂದಿನ ಇತಿಹಾಸ

ಜನವರಿ 26

ಇಂದು ಗಣರಾಜ್ಯದಿನ. 1950ರಲ್ಲಿ ಈದಿನ  ಸಂವಿಧಾನವು ಜಾರಿಗೆ ಬರುವುದರೊಂದಿಗೆ ಭಾರತವು ಸಾರ್ವಭೌಮ ಪ್ರಜಾತಾಂತ್ರಿಕ ಗಣರಾಜ್ಯವಾಯಿತು. ಸಾಮ್ರಾಟ ಅಶೋಕನ ಲಾಂಛನ `ಸಿಂಹ'ವನ್ನು ರಾಷ್ಟ್ರೀಯ ಲಾಂಛನವಾಗಿ ಅಂಗೀಕರಿಸಲಾಯಿತು. 1947ರ ಆಗಸ್ಟ್ 15ರಿಂದಲೇ ಜಾರಿಗೆ ಬರುವಂತೆ ಪರಮ ವೀರ ಚಕ್ರ, ಮಹಾ ವೀರ ಚಕ್ರ ಮತ್ತು ವೀರ ಚಕ್ರ ಪ್ರಶಸ್ತಿಗಳನ್ನು ಸ್ಥಾಪಿಸಲಾಯಿತು. 1965ರಲ್ಲಿ ಹಿಂದಿಯನ್ನು ರಾಷ್ಟ್ರಭಾಷೆಯಾಗಿ ಅಂಗೀಕರಿಸಲಾಯಿತು. 1930ರಲ್ಲಿ ಈದಿನವನ್ನು `ಪೂರ್ಣ ಸ್ವರಾಜ್' ದಿನವಾಗಿ ಆಚರಿಸಲಾಗಿತ್ತು. ಈ ದಿನವನ್ನು ಪೂರ್ಣ ಸ್ವರಾಜ್ ದಿನವಾಗಿ ಆಚರಿಸಲು 1930ರ ಜನವರಿ 17ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ನಿರ್ಧಾರ ಕೈಗೊಂಡಿತ್ತು. 

2008: ಚೀನಾದಲ್ಲಿ ದಶಕದಲ್ಲೇ ಕಂಡರಿಯದಂತಹ ಭಾರಿ ಹಿಮಪಾತ ಸಂಭವಿಸಿ, ದೇಶದ ಹಲವು ಭಾಗಗಳಲ್ಲಿ ಜನಜೀವನ  ತೀವ್ರ ಅಸ್ತವ್ಯಸ್ತಗೊಂಡಿತು. ಕೇಂದ್ರ ಭಾಗದ ಹುನಾನ್ ಪ್ರಾಂತದಲ್ಲಿ ಹಿಮಪಾತದಿಂದ ವಿದ್ಯುತ್ ಪೂರೈಕೆಗೆ ಧಕ್ಕೆ ಉಂಟಾಗಿ, 136 ವಿದ್ಯುತ್ ಚಾಲಿತ ಪ್ರಯಾಣಿಕ ರೈಲುಗಳು ಸ್ಥಗಿತಗೊಂಡವು ಇಲ್ಲವೇ ವಿಳಂಬವಾಗಿ ಚಲಿಸಿದವು. ಕೆಟ್ಟುಹೋದ ವಿದ್ಯುತ್  ಪೂರೈಕೆ ವ್ಯವಸ್ಥೆ ಸರಿಪಡಿಸಲು 10 ಸಾವಿರ ತಾಂತ್ರಿಕ ಸಿಬ್ಬಂದಿಯನ್ನು ನಿಯೋಜಿಸಲಾಯಿತು. ಬೀಜಿಂಗ್ ಮತ್ತು ಗ್ವಾಂಗ್ ಜುವಾ ನಗರಗಳನ್ನು ಸಂಪರ್ಕಿಸುವ ರೈಲು ಮಾರ್ಗದಲ್ಲೂ 40 ಸಾವಿರಕ್ಕೂ ಅಧಿಕ ಪ್ರಯಾಣಿಕರು ವಿವಿಧ ನಿಲ್ದಾಣಗಳಲ್ಲಿ ಸಿಕ್ಕಿ ಹಾಕಿಕೊಂಡರು.

2008: ಹಿರಿಯ ಕಾಂಗ್ರೆಸ್ಸಿಗ, ವಿಧಾನ ಪರಿಷತ್ ಸದಸ್ಯ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬ್ಲೇಸಿಯಸ್ ಎಂ. ಡಿಸೋಜ (69) ಅಲ್ಪಕಾಲದ ಅನಾರೋಗ್ಯದಿಂದ ಮಂಗಳೂರು ನಗರದ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾದರು. ಬ್ಲೇಸಿ ಪತ್ನಿ ಐರಿನ್ ಜಾಯ್ಸ್ ಡಿಸೋಜ 1979ರಲ್ಲೇ ನಿಧನರಾಗಿದ್ದರು. 1938ರ ಫೆಬ್ರವರಿ 22ರಂದು ಜನಿಸಿದ ಬ್ಲೇಸಿಯಸ್ ಡಿಸೋಜಾ ಅವರು ಬಿಕಾಂ, ಎಲ್ ಎಲ್ ಬಿ ಪದವೀಧರರು. 1980ರಿಂದ 1985ರ ತನಕ ವಿಧಾನ ಪರಿಷತ್ ಸದಸ್ಯ, 1985ರಿಂದ 1994ರ ತನಕ ವಿಧಾನಸಭೆ ಸದಸ್ಯ, ಎಂ.ವೀರಪ್ಪ ಮೊಯಿಲಿ ಅವರ ಮಂತ್ರಿ ಮಂಡಲದಲ್ಲಿ 1991-92ರಲ್ಲಿ ರಾಜ್ಯ ಕಾನೂನು ಸಚಿವ, 1992ರಿಂದ 1994ರ ತನಕ ರಾಜ್ಯ ಕಾರ್ಮಿಕ ಸಚಿವರಾಗಿ ಸೇವೆ ಸಲ್ಲಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ 1979ರಿಂದ 1992ರ ತನಕ ಹಾಗೂ 2001ರಿಂದ 2007ರ ತನಕ ಕರ್ತವ್ಯ ನಿರ್ವಹಿಸಿದ್ದರು. 1998ರಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಉಪಾಧ್ಯಕ್ಷರಾಗಿದ್ದರು. 2004ರಿಂದ ವಿಧಾನ ಪರಿಷತ್ ಸದಸ್ಯರಾಗಿದ್ದರು.

2008: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ ಟಿ ಟಿ ಇ ನಾಯಕ ಮುರುಳಿಧರನ್ ಅಲಿಯಾಸ್ ಕರ್ನಲ್ ಕರುಣಾ ಅವರಿಗೆ ಬ್ರಿಟನ್ ನ್ಯಾಯಾಲಯ ಒಂಬತ್ತು ತಿಂಗಳ ಸಜೆ ವಿಧಿಸಿತು. ನಕಲಿ ರಾಜತಾಂತ್ರಿಕ ಪಾಸ್ ಪೋರ್ಟ್ ಹೊಂದಿದ  ಆರೋಪದ ಮೇಲೆ ಇವರನ್ನು  ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಬಂಧಿಸಲಾಗಿತ್ತು.

2008: ಫ್ರಾನ್ಸ್ ಅಧ್ಯಕ್ಷ ನಿಕೊಲಸ್ ಸರ್ಕೋಜಿ ಅವರು ಆಗ್ರಾದ ಅಮರ ಪ್ರೇಮದ ಸಂಕೇತ ವಿಶ್ವವಿಖ್ಯಾತ ತಾಜ್ ಮಹಲಿಗೆ ಭೇಟಿ ನೀಡಿದರು. ಆದರೆ ಅವರ ಗೆಳತಿ ಹಾಗೂ ಖ್ಯಾತ ರೂಪದರ್ಶಿ ಕಾರ್ಲಾ ಬ್ರೂನಿ ಮಾತ್ರ  ಜೊತೆಗೆ ಇರಲಿಲ್ಲ.

2008: ಭಾರತ ದೇಶದ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿ ಶೀತಮಾರುತದ ತೀವ್ರತೆ ಹೆಚ್ಚಿತು. ಗುಜರಾತಿನ ಸಬರ್ ಕಾಂತ ಜಿಲ್ಲೆಯಲ್ಲಿ ಕೊರೆಯುವ ಚಳಿಯಿಂದಾಗಿ ಮೂವರು ಮೃತರಾದರು. ಕಳೆದ ಹತ್ತು ವರ್ಷಗಳಲ್ಲಿ ಗುಜರಾತಿನಲ್ಲಿ ಚಳಿ ಇಷ್ಟೊಂದು ತೀವ್ರತೆ ಪಡೆದದ್ದು ಇದೇ ಮೊದಲು.

2008: ರೈಲ್ವೆ ಅಪಘಾತ ತಪ್ಪಿಸಿದ ಚಿಕ್ಕಮಗಳೂರಿನ ಮಂಜುನಾಥ್, 200 ಮಂದಿ ಬಡ ಹೃದ್ರೋಗಿಗಳಿಗೆ ಧನ ಸಹಾಯ ಮಾಡಿದ ಬಿ.ಶಾಂತಿಲಾಲ್ ಕಂಕಾರಿಯಾ ಸೇರಿದಂತೆ 11 ಮಂದಿ ಸಾಧಕರಿಗೆ ಹಾಗೂ ಎರಡು ಸಂಸ್ಥೆಗಳಿಗೆ ಗಣರಾಜ್ಯೋತ್ಸವದ ಪ್ರಯುಕ್ತ ಬೆಂಗಳೂರಿನಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.

2008: ಅಡಿಲೇಡಿನಲ್ಲಿ ಒಂದು ದಿನ ಹಿಂದೆ ಅತಿ ಹೆಚ್ಚು ವಿಕೆಟ್ ಪತನಕ್ಕೆ ಕಾರಣರಾದ ವಿಕೆಟ್ ಕೀಪರ್ ಎನ್ನುವ ವಿಶ್ವ ದಾಖಲೆ ಶ್ರೇಯ ಪಡೆದ ಆಸ್ಟ್ರೇಲಿಯಾದ ಆಡಮ್ ಗಿಲ್ ಕ್ರಿಸ್ಟ್ ಈದಿನ ದಿಢೀರನೆ ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದರು. ಹಿಂದಿನ ದಿನವಷ್ಟೇ ದಕ್ಷಿಣ ಆಫ್ರಿಕಾದ ಮಾರ್ಕ್ ಬೌಷರ್ ಅವರನ್ನು ಹಿಂದೆ ಹಾಕಿ 414 `ಬಲಿ'ಗಳ ಸಾಧನೆಯೊಂದಿಗೆ ಶ್ರೇಷ್ಠ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದರು. ಭಾರತ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸಿನಲ್ಲಿಯೇ ಈ ವಿಶ್ವ ದಾಖಲೆ ನಿರ್ಮಿಸಿದ್ದರು.

 2008: ಇಷ್ಟಾರ್ಥ ಸಿದ್ಧಿಯಾದ ಮೇಲೆ ದೇವತೆಗೆ ಹರಕೆ ತೀರಿಸುವ ಸಲುವಾಗಿ 24 ಅಡಿ ಎತ್ತರದ ರಥದ ಮೇಲಿಂದ ಮಕ್ಕಳನ್ನು ಕೆಳಗೆ ಎಸೆಯುವ ವಿಶಿಷ್ಟ ಸಂಪ್ರದಾಯ ವಿಜಾಪುರ ಜಿಲ್ಲೆಯಲ್ಲಿ ಜೀವಂತವಾಗಿದ್ದು ಸಮೀಪದ ವಂದಾಲ ಗ್ರಾಮದಲ್ಲಿ ಈದಿನ ಜಾತ್ರೆಯಲ್ಲಿ 20ಕ್ಕೂ ಹೆಚ್ಚು ಮಕ್ಕಳನ್ನು ರಥದಿಂದ ಕೆಳಕ್ಕೆ ಎಸೆಯಲಾಯಿತು. ಜಿಲ್ಲಾ ಕೇಂದ್ರದಿಂದ 60 ಕಿಮೀ ದೂರದಲ್ಲಿನ ವಂದಾಲ ಗ್ರಾಮದಲ್ಲಿ ಕ್ರಿಸ್ತಶಕ 1825ರಿಂದ ಗ್ರಾಮ ದೇವತೆ ಬನಶಂಕರಿ ಜಾತ್ರಾ ಮಹೋತ್ಸವ ನಡೆಯುತ್ತ ಬಂದಿದ್ದು, ರಥೋತ್ಸವದ ದಿನದಂದು ಗ್ರಾಮಸ್ಥರು ತಮ್ಮ ಹರಕೆ ಈಡೇರಿದ್ದಕ್ಕಾಗಿ ಹಸುಗೂಸುಗಳನ್ನು ಎಸೆಯುವ ಸಂಪ್ರದಾಯ ಪೋಷಿಸಿಕೊಂಡು ಬಂದಿದ್ದರು.

2008: ಅದ್ಭುತ ಟೆನಿಸ್ ಆಟದ ಪ್ರದರ್ಶನ ನೀಡಿದ ರಷ್ಯಾದ ಮರಿಯಾ ಶರ್ಪೋವಾ ಮೆಲ್ಬೋರ್ನಿನಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಸ್ಲಾಮ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಚಾಂಪಿಯನ್ ಪಟ್ಟವನ್ನು ತಮ್ಮದಾಗಿಸಿದರು. ರಾಡ್ ಲೇವರ್ ಅರೆನಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ 5ನೇ ಶ್ರೇಯಾಂಕದ ಶರ್ಪೋವಾ 7-5, 6-3 ರಲ್ಲಿ ಸರ್ಬಿಯಾದ ಅನಾ ಇವನೋವಿಕ್ ಅವರನ್ನು ಮಣಿಸಿ ಇದೇ ಮೊದಲ ಬಾರಿಗೆ ಮೆಲ್ಬೋರ್ನ್ ಪಾರ್ಕಿನ `ರಾಣಿ' ಎನಿಸಿಕೊಂಡರು. 20ರ ಹರೆಯದ ರಷ್ಯನ್ ಚೆಲುವೆ ವೃತ್ತಿಜೀವನದಲ್ಲಿ ಪಡೆದ ಮೂರನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಇದು. ಈ ಹಿಂದೆ 2004ರಲ್ಲಿ ವಿಂಬಲ್ಡನ್ ಹಾಗೂ 2006ರಲ್ಲಿ ಅಮೆರಿಕ ಓಪನ್ನಿನಲ್ಲಿ ಅವರು ಪ್ರಶಸ್ತಿ ಜಯಿಸಿದ್ದರು.

2008: ಬೆಳಗಾವಿ ಹೋಟೆಲ್ ಉದ್ಯಮಿ ಕೆ. ಅಣ್ಣೆ ಭಂಡಾರಿ ಅವರಿಗೆ ಬೆಂಗಳೂರಿನಲ್ಲಿ ಮಹಾಕವಿ ರತ್ನಾಕರವರ್ಣಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ದಕ್ಷಿಣ ಕನ್ನಡ ಜೈನ ಮೈತ್ರಿ ಕೂಟವು ಬಸವನಗುಡಿ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲ್ಯಾಣಮಂಟಪದಲ್ಲಿ ಏರ್ಪಡಿಸಿದ್ದ ಕೂಟದ 23ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಕುಲಪತಿ ಡಾ.ಬಿ.ಎ. ವಿವೇಕ ರೈ ಪ್ರಶಸ್ತಿ ಪ್ರದಾನ ಮಾಡಿದರು.  

2008: ಗಣರಾಜ್ಯೋತ್ಸವದ ದಿನ ಬೆಳಗ್ಗೆ ಕೊಂಕಣಿ ಸಾಂಸ್ಕೃತಿಕ ಸಂಸ್ಥೆ ಮಾಂಡ್ ಸೊಭಾಣ್, ಮಂಗಳೂರಿನಲ್ಲಿ ನಿರಂತರ ಸಮೂಹ ಗಾಯನದ ಮೂಲಕ ವಿಶ್ವದಾಖಲೆ ಸ್ಥಾಪಿಸುವ ಸಾಹಸಕ್ಕೆ ಚಾಲನೆ ನೀಡಿತು. ಬೆಳಗಿನ ಚಳಿ ಕರಗುತ್ತಿದ್ದಂತೆಯೇ ಶಕ್ತಿನಗರ ಕಲಾಂಗಣದ ಆಂಫಿ ಥಿಯೇಟರಿನಲ್ಲಿ ಸರಿಯಾಗಿ ಆರು ಗಂಟೆಗೆ `ಕೊಂಕಣಿ ನಿರಂತರಿ' ಆರಂಭವಾಯಿತು. ವಿಶ್ವದಾಖಲೆಗೆ ಸೇರುವ ಯತ್ನವಾಗಿ ಸತತ 40 ಗಂಟೆಗಳ ಈ ನಿರಂತರ ಸಮೂಹ ಗಾಯನ ಕಾರ್ಯಕ್ರಮ `ಕೊಂಕಣಿ ನಿರಂತರಿ'ಗೆ ಬಿಷಪ್ ರೆ.ಡಾ. ಅಲೋಶಿಯಸ್ ಪಾವ್ಲ್ ಡಿ'ಸೋಜ ಶುಭ ಹಾರೈಸಿದರು.

2008: ಇನ್ಫೋಸಿಸ್ಸಿನ ಎನ್. ಆರ್. ನಾರಾಯಣ ಮೂರ್ತಿ ಅವರಿಗೆ  ಫ್ರಾನ್ಸ್ ಸರ್ಕಾರದ ಅತಿ ದೊಡ್ಡ ನಾಗರಿಕ ಗೌರವವಾದ `ಆಫೀಸರ್ ಆಫ್ ದಿ ಲೆಜನ್ ಆಫ್ ಆನರ್' ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

2008: ಪ್ರಜಾಕೋಟಿಗೆ ಸುಭದ್ರತೆಯ ಭರವಸೆ ನೀಡುವ ಸೇನಾ ಶಕ್ತಿಯ ಪ್ರದರ್ಶನ ಮತ್ತು ದೇಶದ ಬಹುಸಂಸ್ಕೃತಿಯ ಪರಂಪರೆಯನ್ನು ಬಿಂಬಿಸುವ ವರ್ಣರಂಜಿತ ಸ್ಥಬ್ಧಚಿತ್ರಗಳ ಮೆರವಣಿಗೆಯೊಂದಿಗೆ ನಡೆದ 59ನೇ ಗಣರಾಜ್ಯೋತ್ಸವ ಪೆರೇಡಿಗೆ ದೇಶ ಸಾಕ್ಷಿಯಾಯಿತು. ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಸೇನೆಯಿಂದ ಗೌರವವಂದನೆ ಸ್ವೀಕರಿಸುವ ಮೂಲಕ ಈ ಗೌರವ ಪಡೆದ ಮೊದಲ ಮಹಿಳೆ ಎಂಬ ದಾಖಲೆಯೂ ಈ ಬಾರಿಯ ಗಣರಾಜ್ಯೋತ್ಸವ ಇತಿಹಾಸಕ್ಕೆ ಸೇರ್ಪಡೆಯಾಯಿತು.

2007: ಬೆಂಗಳೂರು ನಗರದ ಕರ್ನಾಟಕ ಸಾಬೂನು ಕಾರ್ಖಾನೆ ಮುಂಭಾಗದ ಜಯಚಾಮರಾಜ ಒಡೆಯರ್ ವೃತ್ತದಲ್ಲಿ ಸ್ವಾತಂತ್ರ್ಯ ಯೋಧೆ ರಾಣಿ ಅಬ್ಬಕ್ಕೆ ದೇವಿ ಅವರ ಪ್ರತಿಮೆಯನ್ನು ಆರೋಗ್ಯ ಸಚಿವ ಆರ್. ಅಶೋಕ ಅನಾವರಣಗೊಳಿಸಿದರು.

2007: ಹುದ್ದೆಯ ಸೃಷ್ಟಿ ಅಥವಾ ಮಂಜೂರಾತಿ ಕಾರ್ಯಾಂಗದ ವಿಶೇಷ ಅಧಿಕಾರ. ನ್ಯಾಯಾಲಯಗಳು ಇಂತಹ ವಿಚಾರಗಳಲ್ಲಿ ಮಧ್ಯಪ್ರವೇಶ ಮಾಡಲಾಗದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು. ಮಹಿಳೆಯೊಬ್ಬಳು ಯೋಜನೆಯೊಂದರ ಒಂದೇ ಹುದ್ದೆಯಲ್ಲಿ 29 ವರ್ಷಗಳ ಕಾಲ ದುಡಿದಿದ್ದರೂ, ಕೆಲಸದ ಕಾಯಮಾತಿ ಪಡೆಯುವ ಯಾವುದೇ ಹಕ್ಕನ್ನು ಆಕೆ ಹೊಂದುವುದಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟ ಪಡಿಸಿತು. ಪ್ರತಿವಾದಿ ಕೆ. ರಾಜ್ಯಲಕ್ಷ್ಮಿ ಸಲ್ಲಿಸಿದ್ದ ಮನವಿಯನ್ನು ಅಂಗೀಕರಿಸಿ ಆಕೆಯ ನೇಮಕಾತಿಯನ್ನು ಕಾಯಂಗೊಳಿಸುವಂತೆ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ ಮತ್ತು ಚೆನ್ನೈ ಹೈಕೋರ್ಟ್ ನೀಡಿದ್ದ ತೀರ್ಪನ್ನು ತಳ್ಳಿಹಾಕುತ್ತಾ ಸುಪ್ರೀಂಕೋರ್ಟ್ ಈ ತೀರ್ಪು ನೀಡಿತು. ಕೆ. ರಾಜ್ಯಲಕ್ಷ್ಮಿ ಅವರು 1975ರ ಏಪ್ರಿಲ್ 1ರಂದು ಒಂದು ವರ್ಷದ ಯೋಜನೆಗಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಿಂದ (ಐಸಿಎಂಆರ್) ನೇಮಕಗೊಂಡಿದ್ದರು. ಕೇಂದ್ರ ಸರ್ಕಾರದಿಂದ ಲಭಿಸುವ ಅನುದಾನವನ್ನು ಅನುಸರಿಸಿ ವರ್ಷದಿಂದ ವರ್ಷಕ್ಕೆ ಈ ನೇಮಕಾತಿಯನ್ನು ವಿಸ್ತರಿಸಬಹುದು ಎಂಬುದು ನೇಮಕಾತಿಯ ಷರತ್ತಾಗಿತ್ತು. ಈ ಯೋಜನೆ ಹಲವಾರು ವರ್ಷಗಳವರೆಗೆ ಮುಂದುವರೆಯುತ್ತಾ ಸಾಗಿತು. ಹೀಗಾಗಿ ರಾಜ್ಯಲಕ್ಷ್ಮಿ ತನ್ನ ಸೇವೆಯನ್ನು ಕಾಯಂಗೊಳಿಸಬೇಕು ಎಂದು ಮನವಿ ಸಲ್ಲಿಸಿದರು. ಆದರೆ ಐಸಿಎಂಆರ್ ಆಕೆಯ ಮನವಿಯನ್ನು ತಳ್ಳಿಹಾಕಿತು. ರಾಜ್ಯಲಕ್ಷ್ಮಿ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದರು. 1998ರ ಫೆಬ್ರವರಿ 25ರಂದು ನ್ಯಾಯಮಂಡಳಿಯು ಆಕೆಯ ಸೇವೆಯನ್ನು ಕಾಯಂಗೊಳಿಸುವಂತೆ ಆದೇಶ ನೀಡಿತು. ಐಸಿಎಂಆರ್ ಈ ತೀರ್ಪನ್ನು ಚೆನ್ನೈ ಹೈಕೋರ್ಟಿನಲ್ಲಿ ಪ್ರಶ್ನಿಸಿತು. ರಾಜ್ಯಲಕ್ಷ್ಮಿ ಕೂಡಾ 1975ರ ಏಪ್ರಿಲ್ 1ರಿಂದ ಅನ್ವಯವಾಗುವಂತೆಯೇ ತನ್ನ ಸೇವೆಯನ್ನು ಕಾಯಂಗೊಳಿಸಬೇಕು ಎಂದು ಕೋರಿ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದರು. ನ್ಯಾಯದ ಆಧಾರದಲ್ಲಿ ರಾಜ್ಯಲಕ್ಷ್ಮಿ ಅವರ ಸೇವೆಯನ್ನು ನೇಮಕಾತಿ ದಿನದಿಂದಲೇ ಕಾಯಂಗೊಳಿಸಬೇಕು ಎಂದು ಆಕೆ ಪರ ವಕೀಲರು ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಎರಡೂ ಕಡೆ ವಾದಿಸಿದ್ದರು. ಸೇವಾ ನ್ಯಾಯಶಾಸ್ತ್ರದ ಪ್ರಕಾರ ಯಾವುದೇ ಒಂದು ಹುದ್ದೆಯ ಸೃಷ್ಟಿ ಅಥವಾ ಮಂಜೂರಾತಿ ಕಾರ್ಯಾಂಗದ ವಿಶೇಷ ಅಧಿಕಾರ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿದ ಸುಪ್ರೀಂಕೋರ್ಟ್ ಮಂಡಳಿಯ ಮನವಿಯನ್ನು ಎತ್ತಿ ಹಿಡಿಯಿತು.  

2007: ಒರಿಸ್ಸಾದ ದಕ್ಷಿಣ ಮಲ್ಕಾನ್ ಗಿರಿ ಜಿಲ್ಲೆಯ ಎಂವಿ-126 ಗ್ರಾಮದ ಬಳಿ ರಾಜ್ಯ ಹೆದ್ದಾರಿಯಲ್ಲಿ ಮಾವೋವಾದಿ ಉಗ್ರಗಾಮಿಗಳು ಹುದುಗಿಸಿ ಇಟ್ಟಿದ್ದ ಭೂಸ್ಫೋಟಕ ಸ್ಫೋಟಗೊಂಡ ಪರಿಣಾಮವಾಗಿ ಒಬ್ಬ ಸಿ ಆರ್ ಪಿ ಎಫ್ ಯೋಧ ಮೃತನಾಗಿ ಇತರ ಇಬ್ಬರು ಯೋಧರು ಗಾಯಗೊಂಡರು. ಸಿ ಆರ್ ಪಿ ಎಫ್ ಮತ್ತು ಪೊಲೀಸ್ ಪಡೆಗಳು ತೆಲರಾಯ್ ಮತ್ತು ಎಂವಿ-126 ಗ್ರಾಮದ ನಡುವೆ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ಈ ಸ್ಫೋಟ ಸಂಭವಿಸಿತು. ಗಣರಾಜ್ಯ ದಿನೋತ್ಸವವನ್ನು ವಿರೋಧಿಸಿ ಮಾವೋವಾದಿಗಳು ಹೆದ್ದಾರಿಯಲ್ಲಿ ಕಡಿದುರುಳಿಸಿದ್ದ ಅಸಂಖ್ಯಾತ ಮರಗಳನ್ನು ತೆರವುಗೊಳಿಸುವ ಸಲುವಾಗಿ ಸಿ ಆರ್ ಪಿ ಎಫ್ ಮತ್ತು ಪೊಲೀಸರು ಹೊರಟಿದ್ದಾಗ ಈ ಘಟನೆ ನಡೆಯಿತು.

2007: ವಿದ್ಯಾರ್ಥಿಗಳಲ್ಲಿನ ಪರೀಕ್ಷೆ ಒತ್ತಡ ಭಯವನ್ನು ತಗ್ಗಿಸಲು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು `ಸಾಕ್ಷಾತ್' ಎಂಬ ಆನ್ ಲೈನ್ ಸಂವಾದ ಶಿಕ್ಷಣ ಯೋಜನೆಯನ್ನು ಆರಂಭಿಸಿತು. ಈ ಸೌಲಭ್ಯವನ್ನು 2006ರ ಅಕ್ಟೋಬರ್ 30ರಂದು ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ  ಅವರು ರಾಷ್ಟ್ರಕ್ಕೆ ಸಮರ್ಪಿಸಿದ್ದರು. ವಿದ್ಯಾರ್ಥಿಗಳು ಈ ಅಂತರ್ಜಾಲ ವಿಳಾಸಗಳಲ್ಲಿನ "ಟಿಣಜಡಿಚಿಛಿಣ'  ಪದವನ್ನು ಒತ್ತಿ ನಂತರ "ಣಚಿಟಞ ಣಠ ಣಜಚಿಛಿಜಡಿ'  ಆಯ್ಕೆಯನ್ನು ಒತ್ತುವ ಮೂಲಕ ಆನ್ ಲೈನ್ ಸಂವಾದದಲ್ಲಿ ಪಾಲ್ಗೊಳ್ಳಬಹುದು. ವಿದ್ಯಾರ್ಥಿಗಳು ಕೇಳುವ ವಿವಿಧ ವಿಷಯಗಳಿಗೆ ಅಂತರ್ಜಾಲದ ಮೂಲಕ ತಜ್ಞರು ಉತ್ತರ ನೀಡುವ ವ್ಯವಸ್ಥೆ ಇದು. ಅಂತರ್ಜಾಲದ ವಿಳಾಸ: "www.sakshat.ac.in  ಅಥವಾ http.sakshat.ignou.ac.in/sakshat/index.aspx ಅಥವಾ  http/www.sakshat.gov.in'.

2006: ಕರ್ನಾಟಕದ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ಮುಂದುವರೆಸುವ ಬಗ್ಗೆ ಜನತಾದಳ (ಎಸ್) ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ. ದೇವೇಗೌಡ ಮತ್ತು ಅವರ ಪುತ್ರ ಎಚ್. ಡಿ. ಕುಮಾರಸ್ವಾಮಿ ನಡುವಣ ಮಾತುಕತೆ ಮುರಿದು ಬಿದ್ದು, ಇಬ್ಬರೂ ಕವಲುದಾರಿಯಲ್ಲಿ ಸಾಗಿದರು. ಇದರಿಂದ ಜೆಡಿ(ಎಸ್) - ಬಿಜೆಪಿ ಪರ್ಯಾಯ ಸರ್ಕಾರ ರಚನೆಗೆ ಇದ್ದ ತೊಡಕು ಬಗೆಹರಿದಂತಾಯಿತು.

2006: ಬಿಹಾರಿನ ಹಿಂದಿನ ವಿಧಾನಸಭೆ ವಿಸರ್ಜನೆಗೆ ಶಿಫಾರಸು ಮಾಡಿ ವಿವಾದಕ್ಕೆ ಸಿಲುಕಿಕೊಂಡು ಸುಪ್ರೀಂಕೋರ್ಟಿನಿಂದ ಛೀಮಾರಿಗೆ ಒಳಗಾಗಿದ್ದ ಬಿಹಾರ ರಾಜ್ಯಪಾಲ ಬೂಟಾಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಪಟ್ನಾದ ಚಾರಿತ್ರಿಕ ಗಾಂಧಿ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜವಂದನೆ ಸ್ವೀಕರಿಸಿದ ಕೆಲವು ಗಂಟೆಗಳ ಬಳಿಕ ಈ ದಿಢೀರ್ ಬೆಳವಣಿಗೆ ಸಂಭವಿಸಿತು.

2006: ಪ್ಯಾಲೆಸ್ಟೈನ್ ಸಂಸದೀಯ ಚುನಾವಣೆಯಲ್ಲಿ ಇಸ್ಲಾಮಿಕ್ ಉಗ್ರಗಾಮಿ ಸಂಘಟನೆ ಹಮಾಸ್ ಬಹುತೇಕ ಸ್ಥಾನಗಳನ್ನು ಗೆದ್ದು ಸರ್ಕಾರ ರಚನೆಯ ಹಾದಿಯಲ್ಲಿ ಮುನ್ನಡೆಯಿತು. ಒಂದು ದಶಕದಿಂದ ಆಡಳಿತದಲ್ಲಿರುವ ಫತಾಹ್ ಪಕ್ಷದ ಎಲ್ಲ ಸಚಿವರು ಸಂಪುಟಕ್ಕೆ ರಾಜೀನಾಮೆ ಸಲ್ಲಿಸಿದರು.

2006: ಗಡಿನಾಡ ಗಾಂಧಿ ಖಾನ್ ಅಬ್ದುಲ್ ಗಫಾರ್ ಖಾನ್ ಅವರ ಮಗ , ಭಾರತದ ಪರಮಾಪ್ತ ಮಿತ್ರ ಖಾನ್ ಅಬ್ದುಲ್ ವಲೀಖಾನ್ (89) ಪಾಕಿಸ್ಥಾನದ ಪೇಶಾವರದಲ್ಲಿ ನಿಧನರಾದರು.

2006: ಖ್ಯಾತ ವಿಜ್ಞಾನಿ ಡಾ. ವಿ.ಪಿ. ನಾರಾಯಣನ್ ನಂಬಿಯಾರ್ ತಮಿಳುನಾಡಿದ ಚೆನ್ನೈಯಲ್ಲಿ ನಿಧನರಾದರು. ಫೊಟೋಗ್ರಫಿಗೆ ಸಂಬಂಧಿಸಿದ ರಸೆಲ್ ಎಫೆಕ್ಟ್ ಮೇಲಿನ ಸಂಶೋಧನೆಗಾಗಿ ಅವರು ವಿಶ್ವದಾದ್ಯಂತ ವಿಜ್ಞಾನಿಗಳ ಪ್ರಶಂಸೆಗೆ ಪಾತ್ರರಾಗಿದ್ದರು. ರಸೆಲ್ ಎಫೆಕ್ಟ್ ಮೇಲೆ ಈ ಹಿಂದೆ ರಸೆಲ್ ಹಾಗೂ ಅಮೆರಿಕ ವಿಜ್ಞಾನಿ ಎಚ್.ಡಿ. ಟೈಮನ್ ಅವರು ಕೈಗೊಂಡಿದ್ದ ಸಂಶೋಧನೆ ಸರಿಯಿಲ್ಲ ಎಂದು ನಾರಾಯಣನ್ ತಮ್ಮ ಪ್ರಯೋಗಗಳ ಮೂಲಕ ಸಾಧಿಸಿ ತೋರಿಸಿದ್ದರು.

1944: ಕಲಾವಿದ ಶ್ರೀನಿವಾಸ ಕೆ.ಆರ್. ಜನನ.

1920: ಗುಡಿಕಾರ ಚಿತ್ರಕಲೆಯಲ್ಲಿ ಅಪೂರ್ವ ಸಾಧನೆ ಮಾಡಿದ ಜಡೆ ಮಂಜುನಾಥಪ್ಪ ಅವರು ಪಾಂಡಪ್ಪ- ವರದಮ್ಮ ದಂಪತಿಯ ಮಗನಾಗಿ ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಜಡೆ ಗ್ರಾಮದಲ್ಲಿ ಜನಿಸಿದರು.

1918: ನಿಕೊಲಾಯಿ ಸಿಯಾಸೆಸ್ಕು (1918-1989) ಹುಟ್ಟಿದ ದಿನ. ಈತ 1965ರಿಂದ 1989ರಲ್ಲಿ ನಡೆದ ಕ್ರಾಂತಿಯಲ್ಲಿ ಪದಚ್ಯುತಿಗೊಂಡು ಕೊಲೆಗೀಡಾಗುವವರೆಗೆ ರೊಮೇನಿಯಾದ ಸರ್ವಾಧಿಕಾರಿಯಾಗಿದ್ದ.

1915: ಹೆಸರಾಂತ ಕವಿ ಕೆ.ಎಸ್. ನರಸಿಂಹಸ್ವಾಮಿ (1915-2003) ಹುಟ್ಟಿದ ದಿನ.

1912: ಕಲಾವಿದ ಎಲ್. ನಾಗೇಶ ರಾಯರ ಜನನ.

1905: ಜಗತ್ತಿನಲ್ಲೇ ಅತ್ಯಂತ ದೊಡ್ಡದೆಂದು ಹೇಳಲಾದ ಗುಲಿನನ್ ವಜ್ರವು ದಕ್ಷಿಣ ಆಫ್ರಿಕಾದ ಟ್ರಾನ್ಸ್ ವಾಲಿನ ಪ್ರೀಮಿಯರ್ ಗಣಿಯಲ್ಲಿ ಪತ್ತೆಯಾಯಿತು. ಕ್ಯಾಪ್ಟನ್ ವೆಲ್ಸ್ ಕಂಡು ಹಿಡಿದ ಈ ವಜ್ರದ ಕಚ್ಚಾ ರೂಪದ ತೂಕ 3,106 ಕ್ಯಾರೆಟ್ಟುಗಳು. ಮೂರು ವರ್ಷಗಳ ಹಿಂದೆ ಈ ಗಣಿಯನ್ನು ಪತ್ತೆ ಹಚ್ಚಿದ ಸರ್ ಥಾಮಸ್ ಗುಲಿನಿನ್ ಹೆಸರನ್ನೇ ಈ ವಜ್ರಕ್ಕೆ ಇಡಲಾಯಿತು. 

1556: ಪಾವಟಿಗೆಗಳಿಂದ ಬಿದ್ದು ತಲೆಗೆ ಆದ ತೀವ್ರ ಗಾಯಗಳ ಪರಿಣಾಮವಾಗಿ ಮೊಘಲ್ ಚಕ್ರವರ್ತಿ ಹುಮಾಯೂನ್ ತನ್ನ 48ನೇ  ವಯಸ್ಸಿನಲ್ಲ್ಲಿಲಿ ಮೃತನಾದ. 

(ಸಂಗ್ರಹ: ನೆತ್ರಕೆರೆ ಉದಯಶಂಕರ)

Tuesday, January 27, 2009

ಇಂದಿನ ಇತಿಹಾಸ History Today ಜನವರಿ 25

ಇಂದಿನ ಇತಿಹಾಸ

ಜನವರಿ 25

ವಿಶ್ವದ ಹಿರಿಯಜ್ಜ ಎಂದು ಪರಿಗಣಿಸಲಾಗಿದ್ದ ಸಾನ್ ಜುವಾನಾದ (ಪೋರ್ಟೊರಿಕೊ) ಎಮಿಲಿಯಾನೊ ಮರ್ಕೆಡೊ ಡೆಲ್ ಟೊರೊ ಅವರು ತಮ್ಮ 115ನೇ ವರ್ಷದಲ್ಲಿ ನಿಧನರಾದರು. ಈ ಅಜ್ಜ ಹುಟ್ಟಿದಾಗ ಪೊರ್ಟೊರಿಕೊ ಸ್ಪೇನಿನ ವಸಾಹತಾಗಿತ್ತು. `ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ' ಎಂಬುದಾಗಿ ಗಿನ್ನೆಸ್ ಪುಸ್ತಕದಲ್ಲಿ ಈ ಅಜ್ಜನ ಹೆಸರು ದಾಖಲಾದಾಗ ಕರಾವಳಿ ನಗರ ಇಸಬೆಲ್ಲಾದಲ್ಲಿ ಜನ ಹಬ್ಬ ಆಚರಿಸಿ ಸಂಭ್ರಮಿಸಿದ್ದರು.

2008: ಜಗತ್ತಿನಲ್ಲಿಯೇ ಅತಿ ಉದ್ದದ ರಂಗೋಲಿ ಬಿಡಿಸಿ, ದಾಖಲೆ ನಿರ್ಮಿಸಲು ಹೊರಟ ಬೆಂಗಳೂರಿನ `ಸುವರ್ಣ ಜ್ಯೋತಿ ಟ್ರಸ್ಟ್' ಜೊತೆಗೆ ಒಂದು ಸಾವಿರ ಜನರು ಕೈಜೋಡಿಸಿ ಅರಮನೆ ಮೈದಾನದಲ್ಲಿ 1.50 ಲಕ್ಷ ಚದರ ಅಡಿಯಲ್ಲಿ ದೇವತೆಗಳು, ಸೈನಿಕರು, ಸ್ವಾತಂತ್ರ್ಯ ಯೋಧರ ಚಿತ್ರಗಳನ್ನು ಒಳಗೊಂಡ 'ಅಖಂಡ ಭಾರತ'ದ ಬೃಹತ್ ರಂಗೋಲಿ ಬಿಡಿಸಲು ಆರಂಭಿಸಿದರು. ಈ ಹಿಂದೆ ದಾಖಲೆ ನಿರ್ಮಿಸಿದ್ದ 48 ಸಾವಿರ ಚದರ ಅಡಿಯ ರಂಗೋಲಿಯನ್ನು ಬದಿಗೆ ತಳ್ಳಿ ನೂತನ ಇತಿಹಾಸ ಸೃಷ್ಟಿಸುವ ಸಲುವಾಗಿ ಈ ರಂಗೋಲಿ ಬಿಡಿಸುವ ಕಾರ್ಯ ಶುರುವಾಯಿತು.

2008: ಆಸ್ಟ್ರೇಲಿಯಾದ 15ರ ಹರೆಯದ ಹುಡುಗಿ ಡೆಮಿ ಲಿ ಬ್ರೆನನ್ ಎಂಬಾಕೆ ಯಕೃತ್ ಕಸಿ ಮಾಡಿಸಿಕೊಂಡ ಬಳಿಕ ತನ್ನ ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನೇ ಸಂಪೂರ್ಣವಾಗಿ ಬದಲಿಸಿಕೊಂಡು ವೈದ್ಯ ಲೋಕದಲ್ಲಿ ಅಚ್ಚರಿ ಮೂಡಿಸಿದಳು. ಜೊತೆಗೇ ಇದು ಜಗತ್ತಿನಲ್ಲಿ ದಾಖಲಾದ ಇಂತಹ ಮೊದಲ ಪ್ರಕರಣ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಬ್ರೆನನ್ 9 ವರ್ಷದವಳಿದ್ದಾಗ ದಾನಿಯೊಬ್ಬರ ಯಕೃತ್ತನ್ನು ಕಸಿ ಮಾಡಿಸಿಕೊಂಡಿದ್ದಳು. ಬಳಿಕ ದಾನಿಯ ರೋಗ ನಿರೋಧಕ ಶಕ್ತಿಯೇ (ಬಿಳಿ ರಕ್ತ ಕಣ) ಅವಳ ದೇಹವನ್ನು ಸಂಪೂರ್ಣವಾಗಿ ಆವರಿಸಲು ಆರಂಭಿಸಿತು. ಇದರಿಂದಾಗಿ ಆಕೆಯ ದೇಹದಲ್ಲಿನ ರಕ್ತದ ಗುಂಪು `ಒ ನೆಗೆಟಿವ್'ನಿಂದ  `ಒ ಪಾಸಿಟಿವ್'ಗೆ ಬದಲಾಯಿತು. ಸಿಡ್ನಿಯ ವೆಸ್ಟ್ ಮೆಡ್ ಮಕ್ಕಳ ಆಸ್ಪತ್ರೆಯ ವೈದ್ಯರಿಗೆ ಅಚ್ಚರಿ ಮೂಡಲು ಇನ್ನೂ ಹಲವು ಕಾರಣಗಳು ಇದ್ದವು. ಬದಲಿ ಅಂಗ ದೇಹಕ್ಕೆ ಹೊಂದಿಕೊಳ್ಳುವ ಸಲುವಾಗಿ ನೀಡಿದ್ದ ಔಷಧವನ್ನು ದೇಹ ಸ್ವೀಕರಿಸದೇ ಇದ್ದಾಗ ದೇಹದಲ್ಲಿ ಏನೋ ಎಡವಟ್ಟು ಆಗಿರುವುದು ಗೊತ್ತಾಯಿತು. ಇದು ಅವಳಿಗೆ ಪೂರಕವಾಯಿತೇ ಹೊರತು ಮಾರಕವಾಗಲಿಲ್ಲ. ಬಹುಶಃ ಹುಡುಗಿಯ ಮೂಲ ರಕ್ತದಲ್ಲಿನ ಬಿಳಿ ರಕ್ತ ಕಣಗಳ ಸಂಖ್ಯೆ ತೀರಾ ಕಡಿಮೆ ಇದ್ದುದರಿಂದ ಆಕೆಯ ದೇಹ ದಾನಿಯ ಯಕೃತ್ತಿನ ಪ್ರಭಾವಕ್ಕೆ ಒಳಗಾಗಿರಬೇಕು ಎಂಬ ತೀರ್ಮಾನಕ್ಕೆ ವೈದ್ಯರು ಬಂದರು. ಅಂತೂ ಇದರಿಂದಾಗಿ ಬ್ರೆನನ್ ಗೆ ಮರು ಜನ್ಮ ಲಭಿಸಿದಂತಾಯಿತು. 

2008: ಇನ್ಫೊಸಿಸ್ ಸ್ಥಾಪಕ ಎನ್. ಆರ್. ನಾರಾಯಣಮೂರ್ತಿ, ಗಾಯಕಿ ಆಶಾ ಭೋಂಸ್ಲೆ, ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಉದ್ಯಮಿ ರತನ್ ಟಾಟಾ ಸೇರಿದಂತೆ ಹದಿಮೂರು ಗಣ್ಯರಿಗೆ ಪದ್ಮ ವಿಭೂಷಣ, ಐಸಿಐಸಿಐ ಆಡಳಿತ ನಿರ್ದೇಶಕ ಕುಂದಾಪುರ ವಾಮನ ಕಾಮತ್, ಗಾಯಕಿ ಪಿ.ಸುಶೀಲಾ, ಬಾಹ್ಯಾಕಾಶಯಾನಿ ಸುನೀತಾ ವಿಲಿಯಮ್ಸ್ ಸೇರಿದಂತೆ 35 ಗಣ್ಯರಿಗೆ ಪದ್ಮಭೂಷಣ ಹಾಗೂ ಕವಿ ಕೆ.ಎಸ್. ನಿಸಾರ್ ಅಹಮದ್, ಶೃಂಗೇರಿಯ ಸಾಮಾಜಿಕ ಕಾರ್ಯಕರ್ತ ವಿ.ಆರ್. ಗೌರಿಶಂಕರ್ ಸೇರಿದಂತೆ 71 ಗಣ್ಯರಿಗೆ ಪದ್ಮಶ್ರೀ ಪ್ರಶಸ್ತಿಗಳನ್ನು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಘೋಷಿಸಿದರು. ಕೊಂಕಣ್ ಮತ್ತು ಮೆಟ್ರೋ ರೈಲಿನ ಶಿಲ್ಪಿ ಈ. ಶ್ರೀಧರನ್, ವಿಶ್ವಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದನ್, ರಕ್ಷಣಾ ಸಚಿವ ಪ್ರಣವ್ ಮುಖರ್ಜಿ, ಪರಿಸರವಾದಿ ಡಾ.ಆರ್. ಕೆ. ಪಚೂರಿ, ನಿವೃತ್ತ ಸುಪ್ರೀಂಕೋರ್ಟ್ ಮುಖ್ಯನ್ಯಾಯಾಧೀಶ ಎ.ಎಸ್.ಆನಂದ್, ಎವರೆಸ್ಟ್ ಪರ್ವತಾರೋಹಿ ದಿವಂಗತ ಎಡ್ಮಂಡ್ ಹಿಲೆರಿ, ರಾಜತಾಂತ್ರಿಕ ಪಿ.ಎನ್. ಧರ್ ಹಾಗೂ ಉದ್ಯಮಿಗಳಾದ ಎಲ್.ಎನ್. ಮಿತ್ತಲ್ ಮತ್ತು ಪಿ. ಆರ್. ಎಸ್. ಒಬೆರಾಯ್ ಪದ್ಮವಿಭೂಷಣ ಪ್ರಶಸ್ತಿ ಪಡೆದ ಇತರ ಗಣ್ಯರು. ಪದ್ಮಭೂಷಣ ಪಡೆದವರಲ್ಲಿ ಎಚ್ ಸಿ ಎಲ್ ಸ್ಥಾಪಕ ಶಿವನಾಡರ್, ಸಿಟಿಬ್ಯಾಂಕ್ ಅಧ್ಯಕ್ಷ ವಿಕ್ರಮ್ ಪಂಡಿತ್ ಸೇರಿದರೆ, ಹಿಂದಿ ಚಿತ್ರನಟಿ ಮಾಧುರಿ ದೀಕ್ಷಿತ್, ನಟ ಟಾಮ್ ಆಲ್ಟರ್,  ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾದರು.

2008: ತಿರುಮಲದ ತಿಮ್ಮಪ್ಪನಿಗೆ ನಂದಮುರಿ ಲತಾ ಎಂಬ ಭಕ್ತರೊಬ್ಬರು 5 ಲಕ್ಷ ರೂಪಾಯಿ ಮೌಲ್ಯದ 5 ತಂಜಾವೂರು ಪೇಂಟಿಂಗುಗಳನ್ನು ದಾನವಾಗಿ ನೀಡಿದರು. ಈ ಚಿತ್ರಗಳು ಬ್ರಹ್ಮೋತ್ಸವಕ್ಕೆ ಸಂಬಂದಿಸಿದವುಗಳು. ಹಿಂದಿನ ಬ್ರಹ್ಮೋತ್ಸವದ ಸಂದರ್ಭದಲ್ಲೂ ಅವರು ತಮ್ಮ ಪೇಂಟಿಂಗುಗಳನ್ನು ತಿಮ್ಮಪ್ಪನಿಗೆ ದಾನ ಮಾಡಿದ್ದರು.

2008: ಸಿಗರೇಟ್ ಪೊಟ್ಟಣಗಳ ಮೇಲೆ `ಧೂಮಪಾನ ಆರೋಗ್ಯಕ್ಕೆ ಹಾನಿಕರ' ಎಂಬ ಸಚಿತ್ರ ಸಂದೇಶವನ್ನು 2007ರ ಫೆಬ್ರುವರಿ 1ರಿಂದ ಮುದ್ರಿಸುವುದು ಕಡ್ಡಾಯ ಎಂದು 2006ರ ಜುಲೈ ತಿಂಗಳಲ್ಲಿಯೇ ಆದೇಶ ಹೊರಡಿಸಿ ಅದನ್ನು ಜಾರಿ ಮಾಡದ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿತು. ತಂಬಾಕು ಲಾಬಿಗೆ ಮಣಿದಿರುವ ಸರ್ಕಾರ ತನ್ನದೇ ನಿರ್ಧಾರವನ್ನು ಜಾರಿ ಮಾಡುತ್ತಿಲ್ಲ ಎಂದು ದೂರಿ ವಕೀಲರಾದ ನರಿಂದರ್ ಶಮಾ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಕೆ. ಜಿ. ಬಾಲಕೃಷ್ಣನ್ ಮತ್ತು ಆರ್. ವಿ. ರವೀಂದ್ರನ್ ಅವರನ್ನು ಒಳಗೊಂಡ ನ್ಯಾಯಪೀಠವು  ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿತು. 2007ರ ಫೆಬ್ರುವರಿ 1ರಂದು ಜಾರಿಯಾಗಬೇಕಾಗಿದ್ದ ನಿರ್ಧಾರವನ್ನು ಸರ್ಕಾರ ಡಿಸೆಂಬರ್ ತಿಂಗಳಿಗೆ ಮುಂದೂಡಿ ನಂತರ ಅದನ್ನು ಜಾರಿ ಮಾಡಿಲ್ಲ ಎಂದು ಅರ್ಜಿದಾರರು ದೂರಿದರು.

2008: ಪಶ್ಚಿಮ ಬಂಗಾಳದ 19 ಜಿಲ್ಲೆಗಳ ಪೈಕಿ 11 ಜಿಲ್ಲೆಗಳಿಗೆ ಪಕ್ಷಿಜ್ವರ (ಕೋಳಿಜ್ವರ) ಸೋಂಕು ಹರಡಿದ ಹಿನ್ನೆಲೆಯಲ್ಲಿ ಅಲ್ಲಿನ ಪರಿಸ್ಥಿತಿ ಬಿಗಡಾಯಿಸದಂತೆ ತಡೆಯಲು ಪಶ್ಚಿಮ ಬಂಗಾಳ ಸರ್ಕಾರ ಸೋಂಕು ಪೀಡಿತ ಕೋಳಿಗಳ ಸಾಮೂಹಿಕ ನಾಶಕ್ಕೆ ಸಮರೋಪಾದಿ ಯತ್ನ ಕೈಗೊಂಡಿತು. ಪುರೂಲಿಯಾ ಮತ್ತು ಹೌರಾ ಜಿಲ್ಲೆಗಳನ್ನು ಸೋಂಕು ಪೀಡಿತ ಎಂದು  ಘೋಷಿಸಲಾಯಿತು. ಕೂಚ್ ಬಿಹಾರ ಜಿಲ್ಲೆಯಲ್ಲಿ ಕೋಳಿಗಳ ಹತ್ಯೆ ಕಾರ್ಯ ಆರಂಭವಾಯಿತು.

2008: ತಮಿಳುನಾಡಿನ ತೆಂಕಾಸಿಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಚೇರಿ ಮೇಲೆ ಅಪರಿಚಿತರು ರಾತ್ರಿ ಬಾಂಬ್ ಎಸೆದರು. ಪರಿಣಾಮವಾಗಿ ಪಟ್ಟಣದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣಗೊಂಡಿತು. 

2008: ಅಕ್ರಮವಾಗಿ ಕಿಡ್ನಿ ಕಸಿ ಮಾಡಿ ಬಡವರನ್ನು ವಂಚಿಸುತ್ತಿದ್ದ ಹಾಗೂ ಕೋಟ್ಯಂತರ ರೂಪಾಯಿಗಳ ವ್ಯವಹಾರ ನಡೆಸುತ್ತಿದ್ದ ಐವರು ವಿದೇಶಿಯರು ಹಾಗೂ ನಾಲ್ವರು ಸ್ಥಳೀಯ ವೈದ್ಯರನ್ನು ಗುಡಗಾಂವಿನ ಪೊಲೀಸರು ಬಂಧಿಸಿ, ಅಕ್ರಮ ಕಿಡ್ನಿ ಮಾರಾಟದ ಬೃಹತ್ ಜಾಲವೊಂದನ್ನು ಭೇದಿಸಿದರು. ಹರಿಯಾಣ ಮತ್ತು ಉತ್ತರ ಪ್ರದೇಶ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಗುಡಗಾಂವಿನ ಎರಡು ಮನೆಗಳ ಮೇಲೆ ದಾಳಿ ನಡೆಸಿ ಈ ಜಾಲ ಪತ್ತೆ ಹಚ್ಚಲಾಯಿತು. ಬಂಧಿತರನ್ನು ಜಾಯ್ ಮೆಹತಬ್ (53), ಸೋನಮ್ ಜಾಯ್ (52), ಲಿಯೊನಿಡಾ ದಯಾಸಿ (56), ಲಿಯೊನಿದಾಸ್ ದಯಾಸಿಸ್ (63) ಮತ್ತು ಹೆಲೆನಿ ಕಿತ್ಕೊಸಿ (53) ಎಂದು ಗುರುತಿಸಲಾಯಿತು. ಇವರೆಲ್ಲರೂ ಗ್ರೀಸ್ ದೇಶದ ಪ್ರಜೆಗಳು. ವಲ್ಲಭಗಢ ಹಾಗೂ ಇತರೆಡೆಯ ಮೂವರು ವೈದ್ಯರನ್ನೂ ಬಂಧಿಸಲಾಯಿತು. ಜಾಲದ ಪ್ರಮುಖ ಸೂತ್ರಧಾರ ಎನ್ನಲಾದ ಡಾ.ಅಮಿತ್ ಸಿಂಗ್ ಹಾಗೂ ಆತನ ಸಹೋದರ ಜೀವನ್ ಮತ್ತು ಅರೆವಳಿಕೆ ತಜ್ಞ ಸರೋಜ್ ಕುಮಾರ್ ತಲೆಮರೆಸಿಕೊಂಡರು.

2008: ಬೆಂಗಳೂರಿನ ಭಾರತೀಯ ವಾಯುಪಡೆ (ಐಎಎಫ್) ತರಬೇತಿ ಕೇಂದ್ರದ ಮುಖ್ಯಸ್ಥ ಏರ್ ಮಾರ್ಷಲ್ ಗುರುನಾಮ್ ಸಿಂಗ್ ಚೌಧರಿ ಅವರಿಗೆ ಪರಮ ವಿಶಿಷ್ಟ ಸೇವಾ ಪದಕ (ಪಿವಿಎಸ್ಎಂ) ಲಭಿಸಿತು.

2008: ಅಡಿಲೇಡಿನಲ್ಲಿ ಆಸ್ಟ್ರೇಲಿಯಾ - ಟೀಮ್ ಇಂಡಿಯಾ ನಡುವಣ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಕ್ರಿಕೆಟ್ ಪಂದ್ಯದ ಮೊದಲ ಇನ್ನಿಂಗ್ಸಿನಲ್ಲಿ ಮಿಚೆಲ್ ಜಾನ್ಸನ್ ಬೌಲಿಂಗಿನಲ್ಲಿ ಅನಿಲ್ ಕುಂಬ್ಳೆ ನೀಡಿದ ಕ್ಯಾಚ್ ಪಡೆದ ಆಡಮ್ ಗಿಲ್ ಕ್ರಿಸ್ಟ್ ವಿಕೆಟ್ ಹಿಂಬದಿ ಹೆಚ್ಚು ಬಲಿ ಪಡೆದ ವಿಕೆಟ್ ಕೀಪರ್ ಎಂಬ ಹೆಗ್ಗಳಿಗೆ ಪಾತ್ರರಾಗಿ ವಿಶ್ವದಾಖಲೆ ನಿರ್ಮಿಸಿದರು. ಅವರು ದಕ್ಷಿಣ ಆಫ್ರಿಕಾದ ಮಾರ್ಕ್ ಬೌಷರ್ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ಅಳಿಸಿ ಹಾಕಿದರು. ಇದರಿಂದಾಗಿ `ಗಿಲಿ' ವಿಕೆಟ್ ಹಿಂಬದಿ ಒಟ್ಟು 414 ಬಲಿ ಪಡೆದಂತಾಯಿತು. ಅದರಲ್ಲಿ 377 ಕ್ಯಾಚ್ ಹಾಗೂ 37 ಸ್ಟಂಪಿಂಗ್ ಸೇರಿವೆ. ಬೌಷರ್ 413 (394 ಕ್ಯಾಚ್, 19 ಸ್ಟಂಪಿಂಗ್) ಬಲಿ ಪಡೆದರು.

2008: ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಪ್ರತಿಷ್ಠಿತ ಐಷಾರಾಮಿ ಸುವರ್ಣ ರಥ ರೈಲು ಈದಿನ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಹೊರವಲಯದ ವೈಟ್ಫೀಲ್ಡ್ ರೈಲು ನಿಲ್ದಾಣಕ್ಕೆ ಆಗಮಿಸಿತು. ಮುಂದಿನ ಒಂದು ವಾರದಲ್ಲಿ ರೈಲಿನ ಒಳಾಂಗಣ ವಿನ್ಯಾಸ, ನೆಲಹಾಸು, ಸೂಕ್ಷ್ಮ ಮರಗೆಲಸ, ಹಾಸಿಗೆ ಮತ್ತು ಹೊದಿಕೆ ಹಾಕುವ ಕೆಲಸ ನಡೆಸಲಾಯಿತು. ಇದು ದಕ್ಷಿಣ ಭಾರತದ ಪ್ರಥಮ ಪ್ರವಾಸಿ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

2007: ಆರ್ಥಿಕ ಸಂಕಷ್ಟದಿಂದ ಬೇಸತ್ತು ಹಾಸನ ನಗರದ ವ್ಯಾಪಾರಿ ಕೀರ್ತಿ ಗುಪ್ತ ಅವರು ತಮ್ಮ ಮೂವರು ಮಕ್ಕಳು ಸೇರಿದಂತೆ ಕುಟುಂಬದ 6 ಜನ ಸದಸ್ಯರನ್ನು ಕ್ಲೋರೋಫಾರಂ ಬಳಸಿ ಕೊಲೆಗೈದು, ತಾವೂ ಆತ್ಮಹತ್ಯೆ ಮಾಡಿಕೊಂಡರು.

2007: ವಿಶ್ವದ ಹಿರಿಯಜ್ಜ ಎಂದು ಪರಿಗಣಿಸಲಾಗಿದ್ದ ಸಾನ್ ಜುವಾನಾದ (ಪೋರ್ಟೊರಿಕೊ) ಎಮಿಲಿಯಾನೊ ಮರ್ಕೆಡೊ ಡೆಲ್ ಟೊರೊ ಅವರು ತಮ್ಮ 115ನೇ ವರ್ಷದಲ್ಲಿ ನಿಧನರಾದರು. ಈ ಅಜ್ಜ ಹುಟ್ಟಿದಾಗ ಪೊರ್ಟೊರಿಕೊ ಸ್ಪೇನಿನ ವಸಾಹತಾಗಿತ್ತು. `ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ' ಎಂಬುದಾಗಿ ಗಿನ್ನೆಸ್ ಪುಸ್ತಕದಲ್ಲಿ ಈ ಅಜ್ಜನ ಹೆಸರು ದಾಖಲಾದಾಗ ಕರಾವಳಿ ನಗರ ಇಸಬೆಲ್ಲಾದಲ್ಲಿ ಜನ ಹಬ್ಬ ಆಚರಿಸಿ ಸಂಭ್ರಮಿಸಿದ್ದರು. 1891ರ ಆಗಸ್ಟ್ 21ರಂದು ಜನಿಸಿದ್ದ ಎಮಿಲಿಯಾನೊ ಮೆರ್ಕಡೊ ಡೆಲ್ ಟೊರೊ ಅವಿವಾಹಿತರಾಗಿದ್ದರು. 1892ರ ನವೆಂಬರ್ 22ರಂದು ಜನಿಸಿದ ಕನೆಕ್ಟಿಕಟ್ ಮಹಿಳೆ ಎಮ್ಮಾ ಫಾಸ್ಟ್ ಟಿಲ್ ಮ್ಯಾನ್ (114) ಈತನ ಬಳಿಕ ಬದುಕುಳಿದ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ.

2007: ಕರ್ನಾಟಕದ ದಿವಂಗತ ಸಾಹಿತಿ `ಕಾಂತಾಪುರ' ಖ್ಯಾತಿಯ ಹಾಸನ ರಾಜಾರಾವ್ ಅವರಿಗೆ ಮರಣೋತ್ತರ ಪದ್ಮವಿಭೂಷಣ, ಕರ್ನಾಟಕದ ಸೊಸೆ ಮತ್ತು ಪೆಪ್ಸೆ ಕಂಪೆನಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಇಂದ್ರಾ ನೂಯಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ಸೇರಿದಂತೆ ಒಟ್ಟು 10 ಗಣ್ಯರಿಗೆ ಪದ್ಮವಿಭೂಷಣ, 32 ಮಂದಿಗೆ ಪದ್ಮಭೂಷಣ ಮತ್ತು 79 ಮಂದಿ ಪದ್ಮಶ್ರೀ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರವು ಪ್ರಕಟಿಸಿತು.

2007: ಕಾಶ್ಮೀರದಲ್ಲಿ ಶರಣಾಗತರಾದ ಉಗ್ರರಿಗೆ ಆರ್ಥಿಕ ಸಹಾಯ ಮತ್ತು ಮಾಸಿಕ ವೇತನ ನೀಡುವುದನ್ನು  ಪ್ರಶ್ನಿಸಿ ಮಾನವ ಹಕ್ಕು ಇಲಾಖೆಯು ಸುಪ್ರೀಂಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿತು. ನ್ಯಾಯಮೂರ್ತಿ ಜಿ.ಪಿ.ಮಾಥೂರ್ ಮತ್ತು ಆರ್. ವಿ. ರವೀಂದ್ರನ್ ಅವರನ್ನು ಒಳಗೊಂಡ ಪೀಠವು  ಈ ಅರ್ಜಿಯನ್ನು ದಾಖಲು ಮಾಡಿಕೊಂಡು, `ಗಂಭೀರವಾದ ವಿಷಯಗಳನ್ನು ಈ ಅರ್ಜಿಯು ಎತ್ತಿದ್ದು, ವಿವರವಾಗಿ ಪರಿಶೀಲಿಸಬೇಕಾದ ಅಗತ್ಯ ಇದೆ' ಎಂದು ಹೇಳಿತು. ಶಸ್ತ್ರಾಸ್ತ್ರಗಳನ್ನು ಕೆಳಗಿಳಿಸಿ ಸರ್ಕಾರಕ್ಕೆ ಶರಣಾದ ಉಗ್ರರಿಗೆ ಮರುಪಾವತಿ ಮಾಡದಂಥ 3 ಲಕ್ಷ ರೂಪಾಯಿಗಳ ಸಾಲ ನೀಡುವುದಲ್ಲದೆ ಮಾಸಿಕ 3000 ರೂಪಾಯಿಗಳ ಸ್ಟೈಪೆಂಡ್ ನೀಡುವ ಕ್ರಮವೂ ಇದೆ. ಇದು ದೇಶದ ಯುವ ಜನಾಂಗಕ್ಕೆ ತಪ್ಪು ಸಂದೇಶ ರವಾನಿಸುವುದರ ಜೊತೆಗೆ ದೇಶದ ಇತರ ಕಡೆಗಳಲ್ಲಿ ಭಯೋತ್ಪಾದನೆಯ ಮಾರ್ಗ ಅನುಸರಿಸಲು ಪ್ರೋತ್ಸಾಹಿಸುವಂತಿದೆ ಎಂದು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ದೂರಿದ್ದರು.

2007: ತಮಿಳುನಾಡಿನ ಕುದಂಕುಲಮ್ ವಿದ್ಯುತ್ ಯೋಜನೆ ಹಾಗೂ ಇತರ ಹೊಸ ಪ್ರದೇಶಗಳಲ್ಲಿ ಇನ್ನಷ್ಟು ಅಣುಸ್ಥಾವರಗಳನ್ನು ನಿರ್ಮಿಸುವ ಸಲುವಾಗಿ ಭಾರತ ಮತ್ತು ರಷ್ಯ ಒಪ್ಪಂದಕ್ಕೆ ಸಹಿ ಹಾಕಿದವು.

2006: ಕರ್ನಾಟಕ ಸಂಗೀತದ ಖ್ಯಾತ ವಯೋಲಿನ್ ವಾದಕ ನೆಲ್ಲೈ ಕೃಷ್ಣಮೂರ್ತಿ (85) ಕೇರಳದ ತಿರುವನಂತಪುರದಲ್ಲಿ ನಿಧನರಾದರು.

2006: ಸ್ವಿಟ್ಜರ್ ಲ್ಯಾಂಡಿನ ದಾವೋಸಿನಲ್ಲಿ ಆರಂಭವಾದ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಮ್ಮೇಳನದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಮುಖೇಶ ಅಂಬಾನಿ ಅವರನ್ನು ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯೂಇಎಫ್) ಉಪಾಧ್ಯಕ್ಷರನ್ನಾಗಿ ನೇಮಿಸಲಾಯಿತು. ಈ ಹುದ್ದೆಗೆ ನೇಮಕಗೊಂಡಿರುವ ಭಾರತದ ಅತ್ಯಂತ ಕಿರಿಯ ಉದ್ಯಮಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾದರು.

2006: ಸಾಫ್ಟವೇರ್ ಸಂಸ್ಥೆ ಇನ್ಫೋಸಿಸ್ಸಿನ ಸಿಇಒ ನಂದನ್ ನೀಲೇಕಣಿ (ಪದ್ಮಭೂಷಣ), ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಮತ್ತು ಯುವ ಟೆನಿಸ್ ತಾರೆ ಸಾನಿಯಾ ಮಿರ್ಜಾ (ಪದ್ಮಶ್ರೀ) ಸೇರಿದಂತೆ 106 ಮಂದಿ ಗಣ್ಯರು 2006ನೇ ಸಾಲಿನ ಪದ್ಮ ಪ್ರಶಸ್ತಿಗಳಿಗೆ ಭಾಜನರಾದರು. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಅಡೂರು ಗೋಪಾಲಕೃಷ್ಣ, ಸಮಾಜಸೇವಕಿ ಗಾಂಧಿವಾದಿ ನಿರ್ಮಲಾ ದೇಶಪಾಂಡೆ, ಲೇಖಕಿ ಮಹಾಶ್ವೇತಾದೇವಿ ಸೇರಿದಂತೆ 9 ಗಣ್ಯರು ಪದ್ಮಿವಿಭೂಷಣ ಪ್ರಶಸ್ತಿಗೆ ಭಾಜನರಾದರು.

2006: ಎವರೆಸ್ಟ್ ಆರೋಹಣದ ಸಂದರ್ಭದಲ್ಲಿ ಹಿಮಶೃಂಗದಲ್ಲೇ ಜೀವತೆತ್ತ ಕನ್ನಡಿಗ ಸ್ಕ್ವಾಡ್ರನ್ ಲೀಡರ್ ಎಸ್. ಎಸ್. ಚೈತನ್ಯ ಮತ್ತು ದೇಶದ ಪ್ರಥಮ ಮಹಿಳಾ ಏರ್ ಮಾರ್ಷಲ್ ಪದ್ಮಾ ಬಂಡೋಪಾಧ್ಯಾಯ ಸಹಿತ 311 ಯೋಧರು 2006ನೇ ಸಾಲಿನ ರಾಷ್ಟ್ರಪತಿ ಪುರಸ್ಕಾರಕ್ಕೆ ಪಾತ್ರರಾದರು.

2002: ರಷ್ಯಾದ ರಸ್ಲನ್ ಪೊನೊಮರಿವ್ ಅವರು ಮಾಸ್ಕೊದಲ್ಲಿ ವಸಿಲಿ ಇವಾಂಚುಕ್ ಅವರನ್ನು 4.5-2.5 ಅಂತರದಲ್ಲಿ ಪರಾಭವಗೊಳಿಸುವ ಮೂಲಕ ಫಿಡೆ ವಿಶ್ವ ಚೆಸ್ ಚಾಂಪಿಯನ್ ಎನಿಸಿಕೊಂಡ ಮೊತ್ತ ಮೊದಲ ಕಿರಿಯ ಆಟಗಾರರಾದರು. ಆಗ ಅವರ ವಯಸ್ಸು: 18 ವರ್ಷ, 104 ದಿನಗಳು.

1971: ಸೇನಾದಂಗೆಯೊಂದರಲ್ಲಿ ಮಿಲ್ಟನ್ ಒಬೊಟೆ ಅವರನ್ನು ಪದಚ್ಯುತಿಗೊಳಿಸಿ ಇದಿ ಅಮಿನ್ ಉಗಾಂಡಾದ ಅಧ್ಯಕ್ಷರಾದರು.

1971: ಹಿಮಾಚಲ ಪ್ರದೇಶ ಭಾರತದ ಒಂದು ರಾಜ್ಯವಾಯಿತು. 1948ರಿಂದ ಇಲ್ಲಿವರೆಗೆ ಇದು ಕೇಂದ್ರಾಡಳಿತ ಪ್ರದೇಶವಾಗಿತ್ತು.

1950: ಭಾರತದ ಚುನಾವಣಾ ಆಯೋಗ ಸ್ಥಾಪನೆಗೊಂಡಿತು. ಪ್ರಾರಂಭದಲ್ಲಿ ಮುಖ್ಯ ಚುನಾವಣಾ ಕಮೀಷನರ್ ಒಬ್ಬರೇ ಅದರ ಮುಖ್ಯಸ್ಥರಾಗಿದ್ದರು. ನಂತರ ಇಬ್ಬರು ಹೆಚ್ಚುವರಿ ಕಮೀಷನರುಗಳನ್ನು ನೇಮಿಸಲಾಯಿತು.

1939: ರಂಗಭೂಮಿಯ ಖ್ಯಾತ ನಟ, ಚಲನಚಿತ್ರ ರಂಗದ ಖಳನಾಯಕ ದಿನೇಶ್ (25-1-1939ರಿಂದ 20-12-1990) ಅವರು ಬೆಂಗಳೂರಿನಲ್ಲಿ ಈದಿನ ಜನಿಸಿದರು.

1933: ಫಿಲಿಪ್ಪೈನ್ಸಿನ ನಾಯಕಿ ಕೊರಜಾನ್ ಅಕ್ವಿನೊ ಹುಟ್ಟಿದರು. ದಿವಂಗತ ಬೆನಿಗ್ನೊ ಅಕ್ವಿನೊ ಅವರ ಕೈಹಿಡಿದ ಅವರು 1983ರಿಂದ ಪಿಲಿಪ್ಪೈನ್ಸಿನ ರಾಜಕೀಯ ನಾಯಕಿಯಾದರು. 1986-1992ರ ಅವಧಿಯಲ್ಲಿ ಅಲ್ಲಿನ ಅಧ್ಯಕ್ಷರಾದರು.

1924: ಫ್ರೆಂಚ್ ಆಲ್ಫ್ ನ ಚಾಮೊನಿಕ್ಸಿನಲ್ಲಿ ಮೊದಲ ಚಳಿಗಾಲದ ಒಲಿಂಪಿಕ್ಸ್ ಆರಂಭವಾಯಿತು. 

1921: ಖ್ಯಾತ ಸಾಹಿತಿ, ಹಿರಿಯ ಪತ್ರಕರ್ತ ನಾಡಿಗ ಕೃಷ್ಣಮೂರ್ತಿ (1921-1983) ಅವರು ಶಿವಮೊಗ್ಗ ಜಿಲ್ಲೆಯ ಅನವಟ್ಟಿ ಗ್ರಾಮದಲ್ಲಿ ನರಸಿಂಗರಾವ್ ನಾಡಿಗ -ಕಮಲಾಬಾಯಿ ದಂಪತಿಯ ಪುತ್ರನಾಗಿ ಜನಿಸಿದರು. ಪತ್ರಿಕೋದ್ಯಮ ಇತಿಹಾಸ ಮಹಾಪ್ರಬಂಧ ಮಂಡಿಸಿ ಮೈಸೂರು ವಿಶ್ವವಿದ್ಯಾಲಯದಿಂದ ಪಿ ಎಚ್ ಡಿ ಪದವಿ ಗಳಿಸಿದ ನಾಡಿಗ ಕೃಷ್ಣಮೂರ್ತಿ ಅವರು ರಚಿಸಿದ ಕೃತಿಗಳು 40ಕ್ಕೂ ಹೆಚ್ಚು. ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್ ಸೇರಿದಂತೆ ಅವರು ಸಂದರ್ಶಿಸಿದ ರಾಷ್ಟ್ರಗಳು ಹತ್ತಕ್ಕೂ ಹೆಚ್ಚು. ಅಖಿಲ ಭಾರತ ಪತ್ರಿಕೋದ್ಯಮ ಶಿಕ್ಷಣ ಸಂಘ ಸ್ಥಾಪಿಸಿದ ನಾಡಿಗ ಕೃಷ್ಣಮೂರ್ತಿ ಅಂದಿನ ರಾಜ್ಯ ಪತ್ರಿಕಾ ಅಕಾಡೆಮಿಯ ಪ್ರಥಮ ಅಧ್ಯಕ್ಷರಾಗಿದ್ದರು (16-3-1982ರಿಂದ 1-5-1983ರವರೆಗೆ). ಕೇಂದ್ರ, ರಾಜ್ಯಮಟ್ಟದ ಹಲವಾರು ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದರು.

1915: ಟೆಲಿಫೋನ್ ಸಂಶೋಧಕ ಅಲೆಗ್ಸಾಂಡರ್ ಗ್ರಹಾಂಬೆಲ್ ಅಮೆರಿಕದ ಖಂಡಾಂತರ (ಟ್ರಾನ್ಸ್ ಕಾಂಟಿನೆಂಟಲ್) ಟೆಲಿಫೋನ್ ಸೇವೆ ಉದ್ಘಾಟಿಸಿದರು. ಬೆಲ್ ಅವರು ತಮ್ಮ ಮಾಜಿ ಸಹಯೋಗಿ ವಾಟ್ಸನ್ ಅವರ ಜೊತೆ ನ್ಯೂಯಾರ್ಕ್ ಮತ್ತು ಸಾನ್ ಫ್ರಾನ್ಸಿಸ್ಕೊ ನಡುವಣ 3400 ಮೈಲು ಉದ್ದದ ತಂತಿ ಮೂಲಕ ಸಂಪರ್ಕಿಸಲಾದ ಟೆಲಿಫೋನಿನಲ್ಲಿ ಮಾತನಾಡಿದರು.

1824: ಮೈಕೆಲ್ ಮಧುಸೂದನ ದತ್ (1824-1873) ಹುಟ್ಟಿದ ದಿನ. ಇವರು ಕವಿ ಹಾಗೂ ನಾಟಕಕಾರರಾಗಿ ಆಧುನಿಕ ಬಂಗಾಳಿ ಸಾಹಿತ್ಯದ ಮಹಾನ್ ಕವಿ ಎಂದು ಖ್ಯಾತರಾಗಿದ್ದಾರೆ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

ಇಂದಿನ ಇತಿಹಾಸ History Today ಜನವರಿ 24

ಇಂದಿನ ಇತಿಹಾಸ

ಜನವರಿ 24

ಆಸ್ಟ್ರೇಲಿಯಾದ ಅತ್ಯಂತ ಹಳೆಯ ಪತ್ರಿಕೆಯಾದ `ದಿ ಬುಲೆಟಿನ್'  ತನ್ನ ಕೊನೆಯ ಸಂಚಿಕೆಯನ್ನು ಪ್ರಕಟಿಸಿತು. ಈ ಮೂಲಕ 127ವರ್ಷಗಳಷ್ಟು ಹಳೆಯದಾದ ಈ ಪತ್ರಿಕೆ ಅಧಿಕೃತವಾಗಿ ಮುಚ್ಚಿಹೋಯಿತು. ಪತ್ರಿಕೆಯ ಪ್ರಸಾರದಲ್ಲಿ ಕುಸಿತ ಕಂಡದ್ದರಿಂದ ಪತ್ರಿಕೆಯನ್ನು ಮುಚ್ಚ ಬೇಕಾಯಿತು. ವೇಗವಾಗಿ ಬೆಳೆಯುತ್ತಿರುವ ಅಂತರ್ಜಾಲ ಪತ್ರಿಕೋದ್ಯಮದೊಂದಿಗೆ ಸ್ಪರ್ಧಿಸಲಾಗದೇ ಇದ್ದುದರಿಂದ `ದಿ ಬುಲೆಟಿನ್' ಕೊನೆಯುಸಿರು ಎಳೆಯಬೇಕಾಯಿತು 

2008: ಆಸ್ಟ್ರೇಲಿಯಾದ ಅತ್ಯಂತ ಹಳೆಯ ಪತ್ರಿಕೆಯಾದ `ದಿ ಬುಲೆಟಿನ್'  ತನ್ನ ಕೊನೆಯ ಸಂಚಿಕೆಯನ್ನು ಪ್ರಕಟಿಸಿತು. ಈ ಮೂಲಕ 127ವರ್ಷಗಳಷ್ಟು ಹಳೆಯದಾದ ಈ ಪತ್ರಿಕೆ ಅಧಿಕೃತವಾಗಿ ಮುಚ್ಚಿಹೋಯಿತು. ಪತ್ರಿಕೆಯ ಪ್ರಸಾರದಲ್ಲಿ ಕುಸಿತ ಕಂಡದ್ದರಿಂದ ಪತ್ರಿಕೆಯನ್ನು ಮುಚ್ಚಬೇಕಾಯಿತು. ಈ ಪ್ರಸಿದ್ಧ ಪತ್ರಿಕೆಯಲ್ಲಿ ಹಲವು ಖ್ಯಾತನಾಮರ ಆರಂಭಿಕ ಲೇಖನಗಳು ಪ್ರಕಟವಾಗಿದ್ದವು. ಉತ್ತಮ ಗುಣಮಟ್ಟ, ನಿಷ್ಪಕ್ಷಪಾತ ವರದಿಗಳು, ಪ್ರಚಲಿತ ವಿಷಯಗಳ ವಿಶ್ಲೇಷಣೆಗೆ ಹೆಸರಾಗಿದ್ದ `ದಿ ಬುಲೆಟಿನ್' ಪತ್ರಿಕಾ ರಂಗದ ಹಲವು ಪ್ರಶಸ್ತಿಗಳನ್ನು ಗಳಿಸಿತ್ತು. ವೇಗವಾಗಿ ಬೆಳೆಯುತ್ತಿರುವ ಅಂತರ್ಜಾಲ ಪತ್ರಿಕೋದ್ಯಮದೊಂದಿಗೆ ಸ್ಪರ್ಧಿಸಲಾಗದೇ ಇದ್ದುದರಿಂದ `ದಿ ಬುಲೆಟಿನ್' ಕೊನೆಯುಸಿರು ಎಳೆಯಬೇಕಾಯಿತು ಎಂದು ಮಾಧ್ಯಮ ವಿಶ್ಲೇಷಕ ಹರೊಲ್ಡ್ ಮಿಚೆಲ್ ವಿಶ್ಲೇಷಿಸಿದರು.

2008: ಜಪಾನಿನ ಪರ್ವತಾರೋಹಿ ಸುಮಿಯೊ ತ್ಸುಜುಕಿ (40) ಹಿಮಹಾವುಗೆ ತೊಟ್ಟು(ಸ್ಕೀ) ಹಿಮದ ಮೇಲೆ ಜಾರುತ್ತಾ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ಮಹಿಳೆ ಎಂಬ ಖ್ಯಾತಿಗೆ ಭಾಜನರಾದರು. ಸ್ಥಳೀಯ ಕಾಲಮಾನ ಬೆಳಗಿನ ಜಾವ 7.45ಕ್ಕೆ ಅವರು ದಕ್ಷಿಣ ಧ್ರುವ ಪ್ರದೇಶವನ್ನು ತಲುಪಿದರು. ನವೆಂಬರ್ 2007ರಿಂದಲೇ ದಕ್ಷಿಣ ಧ್ರುವಕ್ಕೆ (ಅಂಟಾರ್ಟಿಕಾ) ಸುಮಿಯೊ ಪ್ರಯಾಣ ಆರಂಬಿಸಿದ್ದರು.

2008: ಫ್ರಾನ್ಸಿನ ಪ್ರತಿಷ್ಠಿತ `ಆಫೀಸರ್ ಆಫ್ ದ ಆರ್ಡರ್ ಆಫ್ ಆರ್ಟ್ಸ್ ಅಂಡ್ ಲೆಟರ್ಸ್' ಸಾಂಸ್ಕೃತಿಕ ಪ್ರಶಸ್ತಿಗೆ ಬಾಲಿವುಡ್ಡಿನ ಖ್ಯಾತ  ನಟ ಶಾರುಖ್ ಖಾನ್ ಆಯ್ಕೆಯಾದರು. ವೃತ್ತಿ ಜೀವನದ ಉತ್ತಮ ಸಾಧನೆ ಮತ್ತು ಸಿನಿಮಾದ ಮೂಲಕ ಭಾರತ-ಫ್ರಾನ್ಸ್ ಮಧ್ಯೆ ಸಹಕಾರ ಮೂಡಿಸಿರುವ ಕಾರ್ಯವನ್ನು ಗುರುತಿಸಿ ಖಾನ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು ಎಂದು ಎಂದು ಫ್ರಾನ್ಸ್ ರಾಯಭಾರ ಕಚೇರಿಯ ಪ್ರಕಟಣೆ ತಿಳಿಸಿತು. ಶಾರುಖ್ ಜತೆಗೆ ಜಾರ್ಜ್ ಕ್ಲೂನಿ, ಕ್ಲಿಂಟ್ ಈಸ್ಟ್ ವುಡ್, ಮೆರಿ ಸ್ಟ್ರೀಟ್, ಬ್ರ್ಯೂಸ್ ವಿಲ್ಸ್, ಜುಡೆ ಲಾ ಹಾಗೂ ಅರುಂಧತಿ ರಾಯ್ ಅವರನ್ನೂ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆ ತಿಳಿಸಿತು.

2008: ವಿಜಾಪುರ ಮಹಿಳಾ ವಿವಿ ಕುಲಪತಿಯಾಗಿ ಬೆಂಗಳೂರು ವಿ.ವಿಯ ಸೂಕ್ಷ್ಮ ಜೀವಾಣು ವಿಜ್ಞಾನ ವಿಭಾಗದ ಪ್ರಾಧ್ಯಾಪಕಿ ಡಾ. ಗೀತಾ ಬಾಲಿ ಅವರನ್ನು ನೇಮಕ ಮಾಡಲಾಯಿತು.

2008: `ಹೆವೆನ್ ಸೆಂಟ್ ಬ್ರಾಂಡಿ' - ಇದು ಜಗತ್ತಿನ ಅತ್ಯಂತ ಪುಟ್ಟ ನಾಯಿ. ಈ ಪುಟ್ಟ ಹೆಣ್ಣು ನಾಯಿಯ ಹೆಸರು ಚಿಚೌಹುವಾ. ಬೊಗಳಲು ಬಾರದ ಈ ನಾಯಿಯ ಕಾಲುಗಳು ಲಾಲಿ ಪಪ್ಪನ್ನು ಹೋಲುತ್ತವೆ. ಮೂಗಿನಿಂದ ಬಾಲದವರೆಗೆ ಅಳೆದರೆ, ಅದರ ಉದ್ದ ಆರು ಅಂಗುಲ. ಒಟ್ಟಾರೆ ತನ್ನ ಆಕಾರವನ್ನೇ ಬಂಡವಾಳವಾಗಿಸಿಕೊಂಡಿರುವ ಈ ಬ್ರಾಂಡಿ ನಾಯಿ, `ಉದ್ದದಲ್ಲಿ ಅತಿ ಪುಟ್ಟ ನಾಯಿ' ಎಂದು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡಿನಿಂದ 2005ರಲ್ಲಿ ಸರ್ಟಿಫಿಕೇಟ್ ಪಡೆದಿತ್ತು ಎಂದು ಲಂಡನ್ನಿನಲ್ಲಿ ಈ ದಿನ ಪ್ರಕಟಿಸಲಾಯಿತು. 

2007: ಕನ್ನಡವೂ ಸೇರಿದಂತೆ ಏಳು ಭಾಷೆಗಳ ಪ್ರತ್ಯೇಕ ಸಾಫ್ಟ್ ವೇರ್ ಸಾಧನ ಮತ್ತು ಫಾಂಟ್ ಗಳ ಸಿಡಿಗಳನ್ನು ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆ ಬಿಡುಗಡೆ ಮಾಡಿತು. ಕನ್ನಡ, ಉರ್ದು, ಪಂಜಾಬಿ, ಮರಾಠಿ, ಮಲೆಯಾಳಂ, ಒರಿಯಾ ಮತ್ತು ಅಸ್ಸಾಮಿ ಭಾಷೆಗಳ ಫಾಂಟ್ಸ್, ಇಮೇಲ್ ಗೆ ನೆರವಾಗುವ ಮೆಜೆಂಜರ್ ಬ್ರೌಸರ್, ಲಿಪಿ ಸಂಸ್ಕಾರಕ, ಸ್ಪೆಲ್ ಚೆಕ್, ಬಹುಭಾಷಾ ಶಬ್ಧಕೋಶದ ಸಿಡಿಯನ್ನು ಸಿ-ಡಾಕ್ ವಿವಿಧ ತಜ್ಞರ ನೆರವಿನಿಂದ ತಯಾರಿಸಿದೆ.

2007: ಹಿರಿಯ ಪತ್ರಕರ್ತ ವೈ.ಕೆ. ರಾಜಗೋಪಾಲ್ (86) ಅವರು ಬೆಂಗಳೂರಿನಲ್ಲಿ ನಿಧನರಾದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದ ರಾಜಗೋಪಾಲ್ `ಡೆಕ್ಕನ್ ಹೆರಾಲ್ಡ್' ಪತ್ರಿಕೆಯ ಮುಖ್ಯ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ಅವಿವಾಹಿತರಾಗಿದ್ದು `ಮದರ್ ಲ್ಯಾಂಡ್' `ಇನ್ಫಾ' ಸುದ್ದಿ ಸಂಸ್ಥೆಗಳಲ್ಲೂ ಸೇವೆ ಸಲ್ಲಿಸಿದ್ದರು. ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ರಚಿಸಲಾಗಿದ್ದ ಮಹಾಜನ್ ವರದಿಯ ಶಿಫಾರಸುಗಳನ್ನು `ಸ್ಕೂಪ್' ಮಾಡಿದ ಕೀರ್ತಿ ಇವರದು.

2007: ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಕಬ್ಬಿಗೆರೆಯಲ್ಲಿ ನಿರ್ಮಿಸಿರುವ 500 ಕೆ.ವಿ. ಸಾಮರ್ಥ್ಯದ ದೇಶದ ಮೊತ್ತ ಮೊದಲ ಬಯೋಮಾಸ್ ಗ್ಯಾಸಿಫೈಯರ್ ಘಟಕವನ್ನು ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಸಿ.ಎಂ. ಉದಾಸಿ ರಾಷ್ಟ್ರಕೆ ಸಮರ್ಪಿಸಿದರು.

2006: ಬಿಹಾರದ ಈ ಮೊದಲಿನ ವಿಧಾನಸಭೆ ವಿಸರ್ಜನೆಗೆ ಶಿಫಾರಸು ಮಾಡಿದ್ದ ರಾಜ್ಯಪಾಲ ಬೂಟಾಸಿಂಗ್ ಅವರಿಗೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿತು. ರಾಜ್ಯಪಾಲರು ಕೇಂದ್ರ ಸರ್ಕಾರವನ್ನು ಹಾದಿ ತಪ್ಪಿಸಿದ್ದಾರೆ ಎಂದೂ ಮುಖ್ಯನ್ಯಾಯಮೂರ್ತಿ ವೈ.ಕೆ. ಸಭರ್ ವಾಲ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನಪೀಠವು 3-2ರ ಬಹುಮತದ ತೀರ್ಪಿನಲ್ಲಿ ಹೇಳಿತು. ಜನತಾದಳ (ಯು) ಅಧಿಕಾರಕ್ಕೆ ಬರದಂತೆ ತಡೆಯುವ ಏಕಮಾತ್ರ ಉದ್ದೇಶದ ರಾಜ್ಯಪಾಲರ ಕ್ರಮದ ಸತ್ಯಾಸತ್ಯತೆಯನ್ನು ಕೇಂದ್ರ ಸರ್ಕಾರವೂ ಪರಾಮರ್ಶಿಸಿ ರಾಜ್ಯಪಾಲರ ವರದಿಯ ಅಂಶವನ್ನು ದೃಢಪಡಿಸಿಕೊಳ್ಳಬೇಕಿತ್ತು ಎಂದು ನ್ಯಾಯಾಲಯ ಹೇಳಿತು.

2006: ಕುವೈತಿನ ಅಸ್ವಸ್ಥ ದೊರೆ ಶೇಖ್ ಸಾದ್ ಅಲ್ ಅಬ್ದ್ಲುಲಾ ಅವರು ಆಳುವ ಕುಟುಂಬದ ಒಳಗಿನ ಒಪ್ಪಂದಕ್ಕೆ ಅನುಗುಣವಾಗಿ ಅರಸೊತ್ತಿಗೆ ತ್ಯಜಿಸಿದರು. ಇದರಿಂದಾಗಿ ರಾಜಕುಟುಂಬದೊಳಗಿನ ಬಿಕ್ಕಟ್ಟು ಬಗೆಹರಿದು, ದೀರ್ಘಕಾಲದಿಂದ ಅಧಿಕಾರ ಇಲ್ಲದೆ ನಾಮಮಾತ್ರ ಆಳ್ವಿಕೆ ನಡೆಸುತ್ತಿದ್ದ ಪ್ರಧಾನಿ ಶೇಕ್ ಅಲ್ ಸಭಾ ಅಲ್ ಅಹಮದ್ ಅಲ್ ಸಭಾ ಅವರಿಗೆ ನೂತನ ದೊರೆಯಾಗಿ ಅಧಿಕಾರ ವಹಿಸಿಕೊಳ್ಳಲು ದಾರಿ ಸುಗಮಗೊಂಡಿತು.

2006: ಕರ್ನಾಟಕದ ರಾಜಕೀಯ ಬಿಕ್ಕಟ್ಟು ಇತ್ಯರ್ಥದ ನಿಟ್ಟಿನಲ್ಲಿ ಕಾಂಗ್ರೆಸ್ ಮುಖ್ಯಸ್ಥ ಸೋನಿಯಾಗಾಂಧಿ ಮತ್ತು ಜನತಾದಳ (ಎಸ್) ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ. ದೇವೇಗೌಡ ಅವರ ಮಧ್ಯೆ ನವದೆಹಲಿಯಲ್ಲಿ ನಡೆದ ಮಾತುಕತೆ ಅಪೂರ್ಣಗೊಂಡಿತು.

1966: ಏರ್ ಇಂಡಿಯಾ ಬೋಯಿಂಗ್ 707 ಸ್ವಿಟ್ಜರ್ ಲ್ಯಾಂಡಿನ ಆಲ್ಫ್ ನಲ್ಲಿ ಅಪಘಾತಕ್ಕೆ ಈಡಾಗಿ 144 ಮಂದಿ ಅಸು ನೀಗಿದರು. ಭಾರತದ ಖ್ಯಾತ ಪರಮಾಣು ವಿಜ್ಞಾನಿ ಹೋಮಿ ಜಹಾಂಗೀರ್ ಬಾಬಾ ಅವರು ಈ ಅಪಘಾತದಲ್ಲಿ ಅಸುನೀಗಿದರು.

1966: ಇಂದಿರಾ ಗಾಂಧಿಯವರು ಭಾರತದ ಮೂರನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. 

1963: ಸಾಹಿತಿ ರವೀಂದ್ರ ಶರ್ಮ ಟಿ. ಜನನ.

1950: `ಜನ ಗಣ ಮನ' ಹಾಡನ್ನು ಭಾರತದ ರಾಷ್ಟ್ರಗೀತೆಯಾಗಿ ಅಂಗೀಕರಿಸಲಾಯಿತು. ರಾಜೇಂದ್ರ  ಪ್ರಸಾದ್ ಅವರು ಭಾರತದ ಪ್ರಥಮ ರಾಷ್ಟ್ರಪತಿಯಾಗಿ ಆಯ್ಕೆಯಾದರು.

1944: ಕಲಾವಿದ ಶೇಷಚಂದ್ರ ಎಚ್. ಎಲ್. ಜನನ.

1936: ಕಲಾವಿದೆ ಶಾಂತಾ ಪೋಟಿ ಜನನ.

1895: ಲಾರ್ಡ್ ರಾಂಡೋಲ್ಫ್  ಚರ್ಚಿಲ್ (1849-1895) ತಮ್ಮ 37ನೇ ವಯಸಿನಲ್ಲಿ ನಿಧನರಾದರು. ಬ್ರಿಟಿಷ್ ರಾಜಕಾರಣಿಯಾದ ಇವರು ಹೌಸ್ ಆಫ್ ಕಾಮನ್ಸ್ ನ ನಾಯಕರೂ, ಚಾನ್ಸಲರ್ ಆಫ್ ಎಕ್ಸ್ ಚೆಕರ್ ಆಗಿಯೂ ಖ್ಯಾತಿ ಗಳಿಸಿದರು. ಇವರ ಪುತ್ರ ವಿನ್ ಸ್ಟನ್ ಚರ್ಚಿಲ್ (1874-1965) 1965ರಲ್ಲಿ ಇದೇ ದಿನ ಮೃತರಾದರು. ಬ್ರಿಟನ್ನಿನ ಪ್ರಧಾನಿಯಾಗಿ ಯುದ್ಧಕಾಲದಲ್ಲಿ ಗ್ರೇಟ್ ಬ್ರಿಟನ್ನನ್ನು ವಿಜಯದತ್ತ ಮುನ್ನಡೆಸಿದ ಚರ್ಚಿಲ್ ತಾನು ಅಪ್ಪ ಸತ್ತ ದಿನವೇ ಸಾಯುವುದಾಗಿ ಹೇಳಿದ್ದರು.!

1877: ಕಾವ್ಯವಾಚನದಲ್ಲಿ ಹೆಸರುವಾಸಿಯಾಗಿದ್ದ ಸಂ.ಗೋ. ಬಿಂದೂರಾಯರು (24-1-1877ರಿಂದ 6-9-1966) ಗೋವಿಂದ ರಾಯರು- ರಮಾಭಾಯಿ ದಂಪತಿಯ ಮಗನಾಗಿ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ತಳುಕಿನಲ್ಲಿ ಜನಿಸಿದರು.

1870: ಮುದ್ದಣ ಹೆಸರಿನಿಂದಲೇ ಜನಪ್ರಿಯರಾಗಿದ್ದ ನಂದಳಿಕೆ ಲಕ್ಷ್ಮೀನಾರಣಪ್ಪ ಅವರು ಉಡುಪಿ ಮತ್ತು ಕಾರ್ಕಳ ನಡುವಣ ನಂದಳಿಕೆ ಗ್ರಾಮದಲ್ಲಿ ಪಾಠಾಳಿ ತಿಮ್ಮಪ್ಪಯ್ಯ ಮತ್ತು ಮಹಾಲಕ್ಷ್ಮಮ್ಮ ದಂಪತಿಯ ಪುತ್ರರಾಗಿ ಜನಿಸಿದರು. ಬಾಲ್ಯದಿಂದಲೇ ಯಕ್ಷಗಾನ ಕೃತಿಗಳ ರಚನೆಗೈದ ಮುದ್ದಣನ ಮೇರು ಕೃತಿ ರಾಮಾಶ್ವಮೇಧ. ಮುದ್ದಣ ಮನೋರಮೆಯರ ಸರಸ ಸಂಭಾಷಣೆಯೊಂದಿಗೆ ಆರಂಭವಾಗುವ ಈ ಕೃತಿ ವಿಶಿಷ್ಟವಾದುದು. ಕನ್ನಡ ನವೋದಯದ ಮುಂಜಾನೆ ಕೋಳಿ ಎಂಬ ಕೀರ್ತಿಗೆ ಭಾಜನರಾದ ಮುದ್ದಣ ಅವರನ್ನು ಸಾಮಾನ್ಯ ಚಿತ್ರಕ್ಕೆ ಸುವರ್ಣ ಚೌಕಟ್ಟು ಎಂದು ಎಸ್. ವಿ. ರಂಗಣ್ಣ ಪ್ರಶಂಸಿದ್ದರು. ಕ್ಷಯರೋಗ ತಗುಲಿ 32ನೇ ವಯಸ್ಸಿನಲ್ಲಿ 1901ರ ಫೆಬ್ರವರಿ 16ರಂದು ಮುದ್ದಣ ನಿಧನರಾದರು. 75 ವರ್ಷಗಳ ನಂತರ 1976ರಲ್ಲಿ ಅವರ ನೆನಪಿಗಾಗಿ ಮುದ್ದಣ ಪ್ರಶಸ್ತಿ ಗ್ರಂಥ ಪ್ರಕಟಿಸಲಾಯಿತು.

1826: ಜ್ಞಾನೇಂದ್ರ ಮೋಹನ್ ಟ್ಯಾಗೋರ್ (1826-1890) ಹುಟ್ಟಿದ ದಿನ. ಇವರು ಕಲ್ಕತ್ತಾ ಹೈಕೋರ್ಟಿನ ಬ್ಯಾರಿಸ್ಟರ್ ಆಗಿ ನೋಂದಣಿಯಾದ ಮೊದಲ ಭಾರತೀಯ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Monday, January 26, 2009

Vare Kore released

Vare Kore released 


Vare Kore released on 23 January 2008 Friday by Mr. H.D. Devegowda, former Prime Minister of India, at Press Club Bangalore.

Really, here is the proof of Vare Kore release. But, the sorry thing is that News Papers as well as News Channels didn't realised the importance of the function and almost failed to flash news to the world. 

There were very few magazines like Koravanji in Kannada which were devoted to lighter writings. Now Vare Kore under the able guidance of Prakash Shetty, cartoonist striked the market. You can get it at your doorsteps by subscribing it also.

PARYAYA wishes all success to the new venture.

ಇಂದಿನ ಇತಿಹಾಸ History Today ಜನವರಿ 23

ಇಂದಿನ ಇತಿಹಾಸ 

ಜನವರಿ 23

ಈದಿನ ಜನಿಸಿದ ಸುಭಾಸ್ ಚಂದ್ರ ಬೋಸ್ ಅವರು ಭಾರತೀಯ ಕ್ರಾಂತಿಕಾರಿ ನಾಯಕರಾಗಿ ಎರಡನೇ ಜಾಗತಿಕ ಸಮರ ಕಾಲದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಲು ಭಾರತ ರಾಷ್ಟ್ರೀಯ ಸೇನೆ (ಆಜಾದ್ ಹಿಂದ್ ಫೌಜ್/ ಇಂಡಿಯನ್ ನ್ಯಾಷನಲ್ ಆರ್ಮಿ) ಸ್ಥಾಪಿಸಿದರು. `ನೇತಾಜಿ' ಎಂದೇ ಜನಪ್ರಿಯರಾದ ಇವರು 1945ರಲ್ಲಿ ಸಂಭವಿಸಿದ ವಿಮಾನ ಅಪಘಾತವೊಂದರಲ್ಲಿ ಮೃತರಾದರು ಎಂಬುದಾಗಿ ಸುದ್ದಿ ಪ್ರಸಾರಗೊಂಡರೂ ಇತ್ತೀಚಿನವರೆಗೂ ಅವರು ಬದುಕಿದ್ದರು ಎಂದೇ ಬಹುತೇಕ ಭಾರತೀಯರು ನಂಬಿದ್ದರು.

2008:  ತಳಿಸಂಕರದಿಂದ ನಿರ್ಮಾಣವಾದ ಅಂಗಗಳಿಂದ (ಜಿನಟಿಕಲೀ ಎಂಜಿನಿಯರ್ಡ್ ಆರ್ಗನ್ಸ್) ಮನುಷ್ಯ ಈಗಿನ ಜೀವಿತಾವಧಿಗಿಂತ 10 ಪಟ್ಟು ಅಧಿಕ ಎಂದರೆ ಸುಮಾರು 800 ವರ್ಷ ಬದುಕುವುದು ಸಾಧ್ಯವಿದೆ ಎಂದು ಖ್ಯಾತ ಸಂಶೋಧಕ ವಾಲ್ಟರ್ ಲಾಂಗೋ ಹೇಳಿದರು. ಸಂಶೋಧಕರು ಈ ಮಾತನ್ನು ಸಾಬೀತುಪಡಿಸುವುದಕ್ಕಾಗಿ ಸಾಮಾನ್ಯವಾಗಿ ಒಂದೇ ವಾರದಲ್ಲಿ ನಾಶವಾಗುವ ಕಿಣ್ವ ಪಾಚಿ (ಈಸ್ಟ್ ಫಂಗಸ್) 10 ವಾರ ಅಥವಾ ಅದಕ್ಕಿಂತಲೂ ಹೆಚ್ಚು ಸಮಯ ಬದುಕುಳಿಯುವುದನ್ನು ತೋರಿಸಿಕೊಟ್ಟರು. ಈಸ್ಟ್ ನಲ್ಲಿನ ಎರಡು ತಳಿಗಳನ್ನು ಹೊರತೆಗೆದು ಅದನ್ನು ಕ್ಯಾಲೊರಿ ನಿಷೇಧಿತ ವಲಯದಲ್ಲಿ ಇರಿಸಿದಾಗ ಈ ಬೆಳವಣಿಗೆ ಕಂಡುಬಂತು. ಮನುಷ್ಯನ ಆಯುಷ್ಯವನ್ನೂ ಇದೇ ರೀತಿಯಲ್ಲಿ ಹೆಚ್ಚಿಸುವುದು ಸಾಧ್ಯವಿದೆ, ಆದರೆ ಯುವ ಜನತೆಗೆ ಅವಕಾಶ ಮಾಡಿಕೊಡಲಿಕ್ಕಾಗಿ ವಯೋವೃದ್ಧರು ಸಾಯುವಂತೆ ನೋಡಿಕೊಳ್ಳುವ ತಳಿಗುಣ ಮನುಷ್ಯನಲ್ಲಿ ಸಹಜವಾಗಿ ಬೆಳೆದು ಬಂದಿರಬೇಕು ಎಂದು ಅವರು ಅಂದಾಜಿಸಿದರು.

2008: ನಕಲಿ ಛಾಪಾ ಕಾಗದದ ಪ್ರಮುಖ ಆರೋಪಿ ಅಬ್ದುಲ್ ಕರೀಂ ಲಾಲಾ ತೆಲಗಿಯು ಸರ್ಕಾರಕ್ಕೆ ಕೋಟಿಗಟ್ಟಲೆ ವಂಚನೆ ಮಾಡಿದ ಹಗರಣವನ್ನು ಮೊತ್ತ ಮೊದಲಿಗೆ ಬಯಲಿಗೆಳೆದ ತಮಗೆ ನಿಯಮದ ಪ್ರಕಾರ ಪತ್ತೆಯಾದ ಹಣದ ಪಾಲು ನೀಡಲು ಸರ್ಕಾರಕ್ಕೆ ಆದೇಶಿಸುವಂತೆ ಜಯಂತ್ ತಿನೇಕರ್ ಹೈಕೋರ್ಟ್ ಮೊರೆ ಹೊಕ್ಕರು. ಈ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಲು ಮುಖ್ಯ ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್ ಹಾಗೂ ನ್ಯಾಯಮೂರ್ತಿ ಬಿ. ಎಸ್. ಪಾಟೀಲ್ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಆದೇಶಿಸಿತು. ಬೆಳಗಾವಿ ಜಿಲ್ಲೆಯ ಖಾನಾಪುರದ ಬಸ್ ನಿಲ್ದಾಣದ ಬಳಿ ಹಲಸಿನ ಹಣ್ಣು ಮಾರಿಕೊಂಡಿದ್ದ ತೆಲಗಿ ಏಕಾಏಕಿ ಸಿರಿವಂತನಾದುದಕ್ಕೆ ಸಂದೇಹ ಬಂದ ಕಾರಣ, ಅದರ ಬೆನ್ನಟ್ಟಿ ಹೋದ ತಮಗೆ ಆತನ ಜಾಲದ ಬಗ್ಗೆ ತಿಳಿದುಬಂತು ಎಂದು ತಿನೇಕರ್ ಅರ್ಜಿಯಲ್ಲಿ ತಿಳಿಸಿದ್ದಾರೆ. ತೆಲಗಿಯ ಕಾರ್ಯದ ಬಗ್ಗೆ 1996ರಲ್ಲಿಯೇ ಪೊಲೀಸರಲ್ಲಿ ದೂರು ದಾಖಲಿಸಿದ್ದೆ. 1998ರಲ್ಲಿ ಅಂದಿನ ರಾಷ್ಟ್ರಪತಿಗಳಿಗೂ ಈ ಬಗ್ಗೆ ಪತ್ರ ಬರೆದಿದ್ದೆ. ತಾವು ಈ ರೀತಿ ಮಾಡಿದ ಕಾರಣವೇ ತನಿಖೆ ನಡೆಸಲಾಯಿತು. ಸರ್ಕಾರಕ್ಕೆ ಸುಮಾರು 121 ಕೋಟಿ  ರೂಪಾಯಿ ತೆರಿಗೆ ವಂಚನೆ ಮಾಡಿರುವ ಹಗರಣ ತನಿಖೆ ನಂತರ ಬೆಳಕಿಗೆ ಬಂತು ಎಂದು ಅವರು ತಿಳಿಸಿದರು. ಇಂತಹ ಪ್ರಕರಣಗಳನ್ನು ಬಹಿರಂಗ ಪಡಿಸಿದರೆ ಆ ಮೊತ್ತದ ಇಂತಿಷ್ಟು ಪಾಲು ಬಹಿರಂಗ ಪಡಿಸಿದ ವ್ಯಕ್ತಿಗೆ ನೀಡಬೇಕು ಎಂದು ಆದಾಯ ತೆರಿಗೆ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಸರ್ಕಾರ ತಮಗೆ ಕೇವಲ ಎರಡು ಸಾವಿರ ರೂಪಾಯಿಗಳನ್ನು ನೀಡಿ ಕೈತೊಳೆದುಕೊಂಡಿದೆ ಎಂದು ತಿನೇಕರ್ ದೂರಿದರು. ತಮಗೆ ಕನಿಷ್ಠ ಒಂದು ಕೋಟಿ ರೂಪಾಯಿ ನೀಡಲು ಆದೇಶಿಸುವಂತೆ ಏಕಸದಸ್ಯಪೀಠದ ಮುಂದೆ ಅರ್ಜಿ ಸಲ್ಲಿಸಿದಾಗ, ಪೀಠವು 2006ರ ಆಗಸ್ಟಿನಲ್ಲಿ ಸಿವಿಲ್ ಕೋರ್ಟಿನಲ್ಲಿ ದಾವೆ ಹೂಡುವಂತೆ ಆದೇಶಿಸಿತು. ಈ ಆದೇಶವನ್ನು ರದ್ದು ಮಾಡಿ, ತಮಗೆ ಸೂಕ್ತ ಮೊತ್ತ ನೀಡಲು ಸರ್ಕಾರಕ್ಕೆ ಸೂಚಿಸಬೇಕು ಎಂದು ಅವರು ಕೋರಿದರು.

2008: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಲ್ಲಿ ಅವ್ಯವಹಾರ ನಡೆದಿರುವುದು ಪ್ರಾಥಮಿಕ ತನಿಖೆಯಿಂದ ದೃಢಪಟ್ಟ ಹಿನ್ನೆಲೆಯಲ್ಲಿ ಅಕಾಡೆಮಿಯ ಆಡಳಿತ ಮಂಡಳಿಯನ್ನು ರದ್ದು ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರ್ಕಾರಕ್ಕೆ ಶಿಫಾರಸು ಮಾಡಿತು. ವಿಶ್ವ ಕೊಡವ ಮೇಳದ ಹೆಸರಿನಲ್ಲಿ ಸರ್ಕಾರದ ಅನುಮತಿ ಪಡೆಯದೆ ಒಂದು ಸಾವಿರ ರೂಪಾಯಿ ಮುಖ ಬೆಲೆಯ ಲಾಟರಿ ಟಿಕೆಟುಗಳನ್ನು ಮುದ್ರಿಸಿ ಮಾರಾಟ ಮಾಡಿದ್ದಲ್ಲದೆ, ಗಣ್ಯರ ಹೆಸರಿನಲ್ಲಿ ನಕಲಿ ಸಹಿ ಸೃಷ್ಟಿಸಿ ಲಕ್ಷಾಂತರ ರೂಪಾಯಿ ದುರುಪಯೋಗಪಡಿಸಿಕೊಂಡಿರುವ ಆರೋಪಗಳ ಹಿನ್ನೆಲೆಯಲ್ಲಿ ಇಲಾಖೆ ಈ ಕ್ರಮ ಕೈಗೊಂಡಿತು. 

2008: ವಿದ್ವಾಂಸರಾದ ಪಂಡಿತ ಸುಧಾಕರ ಚತುರ್ವೇದಿ, ಗುರುಮೂರ್ತಿ ಪೆಂಡಕೂರು, ಸಾಹಿತಿಗಳಾದ ಡಾ. ಬಿ.ನಂ.ಚಂದ್ರಯ್ಯ, ಪ್ರೊ.ಬಸವರಾಜ ಪುರಾಣಿಕ, ಡಾ.ಸರಜೂ ಕಾಟ್ಕರ್ ಅವರು ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯ 2007- 08ರ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ಆಯ್ಕೆಯಾದರು. ಈಶ್ವರ ಚಂದ್ರ, ಸ್ನೇಹಲತಾ ರೋಹಿಡೇಕರ್ ಸೇರಿದಂತೆ ಐವರ ಕೃತಿಗಳನ್ನು ಅಕಾಡೆಮಿಯ 2006ರ ಸಾಲಿನ ಪುಸ್ತಕ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ ಎಂದೂ ಅಕಾಡೆಮಿ ಅಧ್ಯಕ್ಷ ಡಾ.ಪ್ರಧಾನ್ ಗುರುದತ್ತ ಬೆಂಗಳೂರಿನಲ್ಲಿ ಪ್ರಕಟಿಸಿದರು.

2008: ಬೆಂಗಳೂರಿನ ಬಳಿಯ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮಾರ್ಚ್ 2008ರ 28ರಂದು ಪ್ರಧಾನಿ ಮನಮೋಹನ್ ಸಿಂಗ್ ಉದ್ಘಾಟಿಸುವರು ಎಂದು ರಾಜ್ಯಪಾಲ ರಾಮೇಶ್ವರ ಠಾಕೂರ್ ಪ್ರಕಟಿಸಿದರು.

2008: ಸತತ ಏಳು ವಹಿವಾಟಿನ ದಿನಗಳಲ್ಲಿ ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡು ಹೂಡಿಕೆದಾರರಲ್ಲಿ ತಲ್ಲಣ ಮೂಡಿಸಿದ್ದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು, ಈದಿನ ಚೇತರಿಕೆ ಹಾದಿಯಲ್ಲಿ ಸಾಗಿ ವಹಿವಾಟುದಾರರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿತು. ಏಳು ದಿನಗಳಲ್ಲಿ ಕೊಚ್ಚಿಕೊಂಡು ಹೋಗಿದ್ದ ಒಟ್ಟು ಮಾರುಕಟ್ಟೆ ಮೌಲ್ಯದ ಐದರಲ್ಲಿ ಒಂದು ಭಾಗದಷ್ಟು ಸಂಪತ್ತನ್ನು ಈದಿನ ಮರಳಿ ಪಡೆದಂತಾಗಿದ್ದು ಹೂಡಿಕೆದಾರರ ಮೊಗದಲ್ಲಿ ಮತ್ತೆ ಸಂತಸ ಅರಳಿತು. 7 ದಿನಗಳ ಕುಸಿತದ ಪರಿಣಾಮವಾಗಿ 15.58 ಲಕ್ಷ ಕೋಟಿ ರೂಪಾಯಿಗಳಷ್ಟು ಸಂಪತ್ತು, ಸೂಚ್ಯಂಕ ಕುಸಿತದ ಕಾರಣಕ್ಕೆ ಕೊಚ್ಚಿಕೊಂಡು ಹೋಗಿತ್ತು. ಪೇಟೆಯಲ್ಲಿ ವಹಿವಾಟು ನಡೆಸುವ ಎಲ್ಲ ಷೇರುಗಳ ಒಟ್ಟು ಮಾರುಕಟ್ಟೆ ಮೊತ್ತವು ಹಿಂದಿನ ದಿನ 55,56,177 ಕೋಟಿ ರೂಪಾಯಿಗಳಷ್ಟಿತ್ತು. ಅದು ಈದಿನ 58,92,706 ಕೋಟಿ ರೂಪಾಯಿಗಳಿಗೆ ಏರಿತು.

2008: ಯಾವುದೇ ಒತ್ತಡ ಅಥವಾ ವಾದಕ್ಕೆ ಮಣಿದು ಸೇತುಸಮುದ್ರಂ ಕಡಲು ಕಾಲುವೆ ಯೋಜನೆಯನ್ನು ನಿಲ್ಲಿಸಬಾರದು ಎಂದು ತಮಿಳುನಾಡು ಸರ್ಕಾರವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತು. ತಮಿಳುನಾಡು ವಿಧಾನಸಭೆಯಲ್ಲಿ ಸಾಂಪ್ರದಾಯಿಕ ಭಾಷಣ ಮಾಡಿದ ರಾಜ್ಯಪಾಲ ಎಸ್. ಎಸ್. ಬರ್ನಾಲಾ, ಈ ಯೋಜನೆ ತಮಿಳುನಾಡು ಜನರ  ದೀರ್ಘಕಾಲೀನ ಕನಸಾಗಿದೆ. 1860ರಿಂದ ಈ ಯೋಜನೆ ಬಗ್ಗೆ ಅಧ್ಯಯನ ನಡೆದಿದೆ. ಎಂಜನಿಯರಿಂಗ್ ಕ್ಷೇತ್ರದ ದಿಗ್ಗಜರೆಲ್ಲ ಸೇತುಸಮುದ್ರಂ ಯೋಜನೆಯ ಕಾರ್ಯ ಸಾಧ್ಯತೆ ಬಗ್ಗೆ ಹೇಳಿದ್ದಾರೆ ಎಂದು ನುಡಿದರು.

2008: ಎಸ್ ಜಿ ಎಫ್ ಪ್ರಾದೇಶಿಕ ಪಕ್ಷವು ಈದಿನ ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನಗೊಂಡಿತು. ಈ ಬೆಳವಣಿಗೆಯಿಂದಾಗಿ 40 ಆಸನಗಳ ಗೋವಾ ವಿಧಾನ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರ ಸಂಖ್ಯೆ 16ರಿಂದ 18ಕ್ಕೆ ಏರಿದಂತಾಯಿತು. ಎಸ್ ಜಿ ಎಫ್ ವಿಲೀನ ಪ್ರಕ್ರಿಯೆಯಿಂದಾಗಿ ವಿಧಾನ ಸಭೆ ಸದಸ್ಯರಾದ ಚರ್ಚಿಲ್ ಅಲೆಮಾವೊ ಮತ್ತು ಅಲೆಕ್ಸೊ ರೆಜಿನಾಲ್ಡೊ ಲಾರೆನ್ಸ್ ಕಾಂಗ್ರೆಸ್ ಪಕ್ಷ ಸೇರಿದಂತಾಯಿತು.

2008: ದೇಶದಲ್ಲಿನ ಶೇಕಡಾವಾರು ಜನಸಂಖ್ಯೆಯ ಆಧಾರದ ಮೇಲೆ ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯದ ದಲಿತರಿಗೆ ಮೀಸಲಾತಿ ಸೌಲಭ್ಯ ನೀಡಬೇಕು ಎಂದು ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗವು ಶಿಫಾರಸ್ಸು ಮಾಡಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟಿಗೆ ತಿಳಿಸಿತು. ಪರಿಶಿಷ್ಟರಿಗೆ ಈಗ ನೀಡಲಾಗುತ್ತಿರುವ ಶೇಕಡಾ 15 ಕೋಟಾಕ್ಕೆ ಧಕ್ಕೆ ಬಾರದಂತೆ ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯದ ದಲಿತರಿಗೆ ಜನಸಂಖ್ಯೆಯ ಅಧಾರದ ಮೇಲೆ ಕೇಂದ್ರ ಸರ್ಕಾರ ಮೀಸಲಾತಿ ನೀಡಬಹುದು ಎಂದು ಆಯೋಗವು ಸರ್ಕಾರಕ್ಕೆ ಬರೆದ ಪತ್ರವನ್ನು ಸರ್ಕಾರದ ಪರ ವಕೀಲರು ನ್ಯಾಯಾಲಯದಲ್ಲಿ ಹಾಜರುಪಡಿಸಿದರು. ಸುಪ್ರೀಂ ಕೋರ್ಟಿನ ಆದೇಶದಂತೆ ಮೀಸಲಾತಿ ಶೇಕಡಾ 50ರಷ್ಟು ಮೀರದಂತೆ ನೋಡಿಕೊಂಡು ಆಯೋಗದ ಶಿಫಾರಸ್ಸುಗಳನ್ನು ಜಾರಿ ಮಾಡಬೇಕು ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಗೆ ತಿಳಿಸಲಾಗಿತ್ತು ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. 

2008: ಮಾವೋವಾದಿಗಳ ಲೇಖನಗಳನ್ನು ಮುದ್ರಿಸುತ್ತಿದ್ದ ಮುದ್ರಣಾಲಯವನ್ನು ಪೊಲೀಸರು ಪತ್ತೆ ಹಚ್ಚಿ ಅದನ್ನು ಮುಟ್ಟುಗೋಲು ಹಾಕಿಕೊಂಡು ಅಪಾರ ಪ್ರಮಾಣದ ದೇಶೀಯ ಬಂದೂಕುಗಳನ್ನು ವಶಪಡಿಸಿಕೊಂಡರು. ಈ ಸಂಬಂಧ ಛತ್ತೀಸಗಢದಲ್ಲಿ ಹಲವರನ್ನು ವಶಕ್ಕೆ ತೆಗೆದುಕೊಂಡು ಡ ತೆಗೆದುಕೊಂಡು ವಿಚಾರಣೆ ನಡೆಸಲಾಯಿತು.

2007: ಬಾಗಲಕೋಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 2005-06ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ನಟಿ ಜಯಂತಿ ಅವರಿಗೆ ರಾಜ್ ಕುಮಾರ್ ಪ್ರಶಸ್ತಿ, ವಿ. ರವಿಚಂದ್ರನ್ ಅವರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, ಛಾಯಾಗ್ರಾಹಕ ಎಸ್. ರಾಮಚಂದ್ರ ಅವರಿಗೆ ಜೀವಮಾನದ ಸಾಧನೆಗಾಗಿ ನೀಡಲಾಗುವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

2007: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಎಂ.ಎಸ್. ಚಂದ್ರಶೇಖರ್ (83) ಬೆಂಗಳೂರಿನಲ್ಲಿ ನಿಧನರಾದರು.  ಮೂಲತಃ ಮೈಸೂರಿನವರಾದ ಚಂದ್ರಶೇಖರ್ ಅವರು ಅಜಂತಾ ಗುಹೆಗಳಲ್ಲಿನ ಚಿತ್ರಕಲೆಗಳ ಪ್ರತಿಮಾಡುವಲ್ಲಿ ಖ್ಯಾತಿ ಗಳಿಸಿದ್ದರು. ಅವರ ಕಲಾಕೃತಿಗಳನ್ನು ವಿಧಾನಸೌಧ, ಸಂಸತ್ ಭವನ, ವೆಂಕಟಪ್ಪ ಕಲಾಭವನ ಹಾಗೂ ಅಮೆರಿಕದ ವಸ್ತುಸಂಗ್ರಹಾಲಯಗಳಲ್ಲಿ ಸಂಗ್ರಹಿಸಿ ಇಡಲಾಗಿದೆ.

2007: ಅಂತಾರಾಷ್ಟ್ರೀಯ ಕರೆ, ನಿಮಿಷಕ್ಕೆ ಕೇವಲ 95 ಪೈಸೆ. ಇದು ವರ್ಲ್ಡ್ ಫೋನ್ ಇಂಟರ್ನೆಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ಡಿನ ಕೊಡುಗೆ. ಯಾವುದೇ ಶಾಸನಬದ್ಧ ಇಂಟರ್ನೆಟ್ ಟೆಲಿಫೋನಿ ಜಾಲದಲ್ಲಿ ಇದು ಅತ್ಯಂತ ಅಗ್ಗ. ನಿಮಿಷಕ್ಕೆ ಕೇವಲ 95 ಪೈಸೆ ದರದ ಈ ಅಂತಾರಾಷ್ಟ್ರೀಯ ಕರೆ ಸೇವೆಯನ್ನು ವರ್ಲ್ಡ್ ಫೋನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಆರಂಭಿಸಿತು. ಈ ವ್ಯವಸ್ಥೆಯಡಿಯಲ್ಲಿ ಅಮೆರಿಕ, ಇಂಗ್ಲೆಂಡ್, ಕೆನಡಾ, ಫ್ರಾನ್ಸ್, ಜರ್ಮನಿ, ಹಾಂಕಾಂಗ್, ಇಟಲಿ, ಸಿಂಗಪುರ, ಸ್ವಿಟ್ಜರ್ ಲ್ಯಾಂಡ್ ಸೇರಿದಂತೆ 30 ರಾಷ್ಟ್ರಗಳಿಗೆ ಅಂತಾರಾಷ್ಟ್ರೀಯ ಕರೆಗಳನ್ನು ಮಾಡಬಹುದು. ವರ್ಲ್ಡ್ ಫೋನಿನ ವೆಬ್ ಸೈಟಿನಿಂದ (www.worldphone.in)  ಡಯಲರನ್ನು ಡೌನ್ ಲೋಡ್ ಮಾಡಿಕೊಂಡು ಗ್ರಾಹಕರು ಈ ಅತೀ ಅಗ್ಗದ ಅಂತಾರಾಷ್ಟ್ರೀಯ ಕರೆಯ ಉಪಯೋಗ ಮಾಡಿಕೊಳ್ಳಬಹುದು. ಬ್ರಾಂಡೆಡ್ ಇಂಟರ್ನೆಟ್ ಪ್ರೊಟೊಕಾಲ್ ಫೋನ್ ಅಳವಡಿಸಿಕೊಳ್ಳುವ ಮೂಲಕವೂ ಈ ಕರೆ ಮಾಡಬಹುದು. ಕಂಪೆನಿಯ ಪೂರ್ವ ಪಾವತಿ ಇಂಟರ್ನೆಟ್ ಟೆಲಿಫೋನಿ ಕಾರ್ಡುಗಳನ್ನು ರೂ. 100, ರೂ. 250, ರೂ. 500 ಮತ್ತು ರೂ. 1000ದ ಮೊತ್ತಗಳಲ್ಲಿ ಒದಗಿಸುತ್ತದೆ. ಇವುಗಳ ಅವಧಿ 100 ದಿನಗಳು. ಕಾರ್ಡುಗಳನ್ನು ವರ್ಲ್ಡ್ ಟೆಲಿಫೋನ್ ವೆಬ್ ಸೈಟ್ ಅಥವಾ ಬಿಗ್ ಬಜಾರ್, ಆಕ್ಸಿಜನ್, ಇ ಪಿ ಆರ್ ಎಸ್ ಮತ್ತು ಪೇ ವರ್ಲ್ಡ್ ಸೇರಿದಂತೆ ಬಿಡಿ ಮಾರಾಟಗಾರರಿಂದ ಪಡೆಯಬಹುದು. 

2006: ಬಾಲಿವುಡ್ಡಿನ ಖ್ಯಾತನಟಿ ಶಬಾನಾ ಆಜ್ಮಿ ಪ್ರತಿಷ್ಠಿತ ಕ್ರಿಸ್ಟಲ್ ಪ್ರಶಸ್ತಿಗೆ ಆಯ್ಕೆಯಾದರು. ವಿಶ್ವ ಆಥರ್ಿಕ ವೇದಿಕೆಯ ಈ ಪ್ರಶಸ್ತಿಯನ್ನು ಕಲಾಕ್ಷೇತ್ರದಲ್ಲಿ ಶಬಾನಾ ಅವರು ತೋರಿದ ಅಸಾಧಾರಣ ಸಾಧನೆಗಾಗಿ ನೀಡಲಾಯಿತು. ಹಾಲಿವುಡ್ ಸೂಪರ್ ಸ್ಟಾರ್ ಮೈಕೆಲ್ ಡಗ್ಲಾಸ್ ಅವರ ಜೊತೆಗೆ ಶಬಾನಾ ಈ ಪ್ರಶಸ್ತಿಯನ್ನು ಹಂಚಿಕೊಂಡರು.

2006: ಬೇರೆ ಪಕ್ಷಗಳ ಮುಖಂಡರು ಜೆಡಿ(ಎಸ್) ಒಡೆಯಲು ನಡೆಸಿದ ಸಂಚನ್ನು ವಿಫಲಗೊಳಿಸಿ ಪಕ್ಷದಲ್ಲಿ ಒಗ್ಗಟ್ಟು ಕಾಯ್ದುಕೊಳ್ಳಲು ಎಚ್. ಡಿ. ಕುಮಾರಸ್ವಾಮಿ ಮಾಡಿರುವ ಕೆಲಸವನ್ನು ಶ್ಲಾಘಿಸುವ ಮೂಲಕ ಜೆಡಿ(ಎಸ್) ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ. ದೇವೇಗೌಡ ತಮ್ಮ ಮಗನ ಕ್ಷಿಪ್ರಕ್ರಾಂತಿಯನ್ನು ಬೆಂಬಲಿಸಿದರು.

2006: ಕ್ಲೀವ್ ಲ್ಯಾಂಡಿನ ವೆಸ್ಟರ್ನ್ ರಿಸರ್ವ್ ಬಿಸಿನೆಸ್ ಸ್ಕೂಲನ್ನು 2003ರಲ್ಲಿ ಏಳೂವರೆ ಗಂಟೆಗಳ ಕಾಲ ಒತ್ತೆಸೆರೆ ಇಟ್ಟುಕೊಂಡು ಒಬ್ಬ ವಿದ್ಯಾರ್ಥಿಯನ್ನು ಕೊಂದು ಇನ್ನಿಬ್ಬರನ್ನು ಗಾಯಗೊಳಿಸಿದ್ದಕ್ಕಾಗಿ ಕೋಲ್ಕತ್ತಾದಲ್ಲಿ ಜನಿಸಿದ ಅಮೆರಿಕದ ನಿವಾಸಿ ಬಿಸ್ವನಾಥ ಹಲ್ದರ್ ಗೆ (65) ಓಹಿಯೋದ ನ್ಯಾಯಾಧೀಶರು ಜೀವಾವಧಿ ಸಜೆಗೆ ಶಿಫಾರಸು ಮಾಡಿದರು. 2003ರ ಮೇ 9ರಂದು ನಡೆದ ಘಟನೆಯಲ್ಲಿ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡಿನ ಜೊತೆಗೆ ಸ್ಕೂಲಿಗೆ ನುಗ್ಗಿದ್ದ ಹಲ್ದರ್ ಏಳೂವರೆ ಗಂಟೆ ಕಾಲ ಸ್ಕೂಲನ್ನು ವಶಕ್ಕೆ ತೆಗೆದುಕೊಂಡು ಯದ್ವಾತದ್ವ ಗುಂಡು ಹಾರಿಸಿ ನಾರ್ಮನ್ ವ್ಯಾಲೇಸ್ ಎಂಬಾತನನ್ನು ಕೊಂದು ಇನ್ನಿಬ್ಬರನ್ನು ಗಾಯಗೊಳಿಸಿದ್ದ. ಭಾರತದ ಉದ್ಯಮಿಗಳಿಗೆ ನೆರವಾಗುವ ಸಲುವಾಗಿ ತಾನು ರೂಪಿಸಿದ್ದ ವೆಬ್ ಸೈಟನ್ನು ಈ ಶಾಲೆಯ ಕಂಪ್ಯೂಟರ್ ಲ್ಯಾಬೋರೇಟರಿಯ ನೌಕರನೊಬ್ಬ ಹಾಳುಗಡೆವಿದ್ದಾನೆ ಎಂಬ ಶಂಕೆಯಿಂದ ಆತ ಈ ಕೃತ್ಯ ಎಸಗಿದ್ದ.

1977: ಭಾರತದಲ್ಲಿ ಜನತಾ ಪಕ್ಷದ ಉದಯವಾಯಿತು. ಆಳುವ ಕಾಂಗ್ರೆಸ್ ಮತ್ತು ತುರ್ತು ಪರಿಸ್ಥಿತಿಯ ವಿರುದ್ಧ ವಿರೋಧ ಪಕ್ಷಗಳು ಒಟ್ಟಾಗಿ ಜನತಾ ಪಕ್ಷವನ್ನು ಹುಟ್ಟು ಹಾಕಿದವು. ಕಾಂಗ್ರೆಸ್ (ಸಂಸ್ಥಾ), ಜನಸಂಘ, ಭಾರತೀಯ ಲೋಕದಳ ಮತ್ತು ಸಂಯುಕ್ತ ಸಮಾಜವಾದಿ ಪಕ್ಷಗಳು ಈ ಜನತಾ ಪಕ್ಷದಲ್ಲಿ ವಿಲೀನಗೊಂಡವು.

1931: ಲಾರ್ಡ್ ಇರ್ವಿನ್ ಮೊತ್ತ ಮೊದಲ ಬಾರಿಗೆ ನವದೆಹಲಿಯ `ವೈಸ್ ರಾಯ್ ಹೌಸ್' ನಲ್ಲಿ ವಾಸ್ತವ್ಯ ಹೂಡಿದರು. ಈ ಕಟ್ಟಡ ಈಗ `ರಾಷ್ಟ್ರಪತಿ ಭವನ' ಆಗಿದೆ. ಎಡ್ವಿನ್ ಲ್ಯುಟಿಯೆನ್ಸ್ ಈ ಕಟ್ಟಡದ ವಿನ್ಯಾಸಕಾರರಾಗಿದ್ದು, 1913ರಲ್ಲಿ ಕಟ್ಟಡ ನಿರ್ಮಾಣ ಆರಂಭವಾಯಿತು. 18,580 ಚದರ ಅಡಿಗಳಷ್ಟು ವ್ಯಾಪ್ತಿಯಲ್ಲಿ ನಿರ್ಮಾಣಗೊಂಡ ಈ ಕಟ್ಟಡದ ಒಟ್ಟು ವೆಚ್ಚ 1.40 ಕೋಟಿ ರೂಪಾಯಿಗಳು. ಲ್ಯೂಟಿಯನ್ಸನ ಶುಲ್ಕ 5000 ಪೌಂಡುಗಳು.

1927: ಬಾಳಾ ಕೇಶವ ಠಾಕ್ರೆ ಜನಿಸಿದರು. ಇವರು ವ್ಯಂಗ್ಯಚಿತ್ರಕಾರರಾಗಿ ವೃತ್ತಿ ಆರಂಭಿಸಿ ಮಹಾರಾಷ್ಟ್ರದ ಶಿವಸೇನೆ ಸ್ಥಾಪನೆ ಮೂಲಕ ಖ್ಯಾತಿ ಪಡೆದರು.

1897: ಈದಿನ ಜನಿಸಿದ ಸುಭಾಸ್ ಚಂದ್ರ ಬೋಸ್ ಅವರು ಭಾರತೀಯ ಕ್ರಾಂತಿಕಾರಿ ನಾಯಕರಾಗಿ ಎರಡನೇ ಜಾಗತಿಕ ಸಮರ ಕಾಲದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಲು ಭಾರತ ರಾಷ್ಟ್ರೀಯ ಸೇನೆ (ಆಜಾದ್ ಹಿಂದ್ ಫೌಜ್/ ಇಂಡಿಯನ್ ನ್ಯಾಷನಲ್ ಆರ್ಮಿ) ಸ್ಥಾಪಿಸಿದರು. `ನೇತಾಜಿ' ಎಂದೇ ಜನಪ್ರಿಯರಾದ ಇವರು 1945ರಲ್ಲಿ ಸಂಭವಿಸಿದ ವಿಮಾನ ಅಪಘಾತವೊಂದರಲ್ಲಿ ಮೃತರಾದರು ಎಂಬುದಾಗಿ ಸುದ್ದಿ ಪ್ರಸಾರಗೊಂಡರೂ ಇತ್ತೀಚಿನವರೆಗೂ ಅವರು ಬದುಕಿದ್ದರು ಎಂದೇ ಬಹುತೇಕ ಭಾರತೀಯರು ನಂಬಿದ್ದರು. 

1893: ಸಂಗೀತ ತಜ್ಞ ರಾಳ್ಲಪಲ್ಲಿ ಅನಂತಕೃಷ್ಣ ಶರ್ಮ (23-1-1893ರಿಂದ 11-3-1979) ಅವರು ಕೃಷ್ಣಮಾಚಾರ್ಯ- ಅಲಮೇಲು ಮಂಗಮ್ಮ ದಂಪತಿಯ ಮಗನಾಗಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕಂಬದೂರು ತಾಲ್ಲೂಕಿಗೆ ಸೇರಿದ ರಾಳ್ಲಪಲ್ಲಿಯಲ್ಲಿ ಜನಿಸಿದರು.

1814: ಅಲೆಗ್ಸಾಂಡರ್ ಕನ್ನಿಂಗ್ ಹ್ಯಾಮ್ (1814-1893) ಹುಟ್ಟಿದ ದಿನ. ಬ್ರಿಟಿಷ್ ಸೇನಾಧಿಕಾರಿ ಹಾಗೂ ಪ್ರಾಕ್ತನ ತಜ್ಞನಾಗಿದ್ದ ಈತ ಸಾರಾನಾಥ, ಸಾಂಚಿ ಸೇರಿದಂತೆ ಭಾರತದ ಹಲವಾರು ಚಾರಿತ್ರಿಕ ಸ್ಥಳಗಳಲ್ಲಿ ಉತ್ಖನನ ನಡೆಸಿದ ವ್ಯಕ್ತಿ. ಭಾರತೀಯ
ಪ್ರಾಚ್ಯವಸ್ತು ಸಮೀಕ್ಷಾ ಸಂಸ್ಥೆಯ ಮೊದಲ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Advertisement