Monday, June 30, 2008

ಇಂದಿನ ಇತಿಹಾಸ History Today ಜೂನ್ 26

ಇಂದಿನ ಇತಿಹಾಸ

ಜೂನ್ 26

ಭಾರತದ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹಮದ್ ಅವರು ಸಂವಿಧಾನದ 352ನೇ ವಿಧಿಯನ್ವಯ ದೇಶಾದ್ಯಂತ `ತುರ್ತು ಪರಿಸ್ಥಿತಿ' ಘೋಷಿಸಿದರು. ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದು ಅತ್ಯಂತ ಕೆಟ್ಟ ಘಳಿಗೆ ಎಂದು ಪರಿಗಣನೆಯಾಯಿತು.

2007: ತಮಿಳು ಚಿತ್ರರಂಗದ ಖ್ಯಾತ ಛಾಯಾಗ್ರಾಹಕ ಹಾಗೂ ನಿರ್ದೇಶಕ ಜೀವಾ (46) ಅವರು ಮಾಸ್ಕೋದಲ್ಲಿ ಹೃದಯಾಘಾತದಿಂದ ನಿಧನರಾದರು. ತಮಿಳು ಚಲನಚಿತ್ರ `ಧೂಮ್ ಧೂಮ್' ಚಿತ್ರೀಕರಣ ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿತು.

2007: ಗಾಯಗಳನ್ನು ಗುಣಪಡಿಸಬಲ್ಲಂತಹ ದೀರ್ಘಕಾಲ ಉಳಿಯಬಲ್ಲ `ಕೃತಕ ಚರ್ಮವನ್ನು' ತಾನು ಪ್ರಯೋಗಾಲಯದಲ್ಲಿ (ಲ್ಯಾಬೋರೇಟರಿ) ಸೃಷ್ಟಿಸಿರುವುದಾಗಿ ಬ್ರಿಟಿಷ್ ಜೈವಿಕ ತಂತ್ರಜ್ಞಾನ ಕಂಪೆನಿ ಇಂಟರ್ಸೆಟೆಕ್ಸ್ ಗ್ರೂಪಿನ ವಿಜ್ಞಾನಿಗಳು ಪ್ರಕಟಿಸಿದರು. ತಾವು ಮಾಡಿರುವ ಈ ಸಾಧನೆ ವೈದ್ಯಕೀಯ ಪ್ರಯೋಗದಲ್ಲಿ ಯಶಸ್ವಿಯಾಗಿದೆ ಎಂದು ಅವರು ಘೋಷಿಸಿದರು.
2007: ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಬೆಂಗಳೂರಿನ ಪದ್ಮನಾಭ ನಗರದ ನಿವಾಸದಲ್ಲಿ ರೈತ ಸೋಮಶೇಖರ (45) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು. ಇವರು ಹಾಸನ ಜಿಲ್ಲೆ ಹಿರೀಸಾವೆಯವರು.

2007: 1789 ರಲ್ಲಿ ಅಸ್ತಿತ್ವಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಅಮೆರಿಕದ ಸಂಸತ್ತಿನ ಮೇಲ್ಮನೆಯಾದ ಸೆನೆಟಿನಲ್ಲಿ ಜುಲೈ 12ರಂದು ಹಿಂದೂ ಪ್ರಾರ್ಥನೆ ಮೂಲಕ ಕಲಾಪಕ್ಕೆ ಚಾಲನೆ ನೀಡಲಾಗುವುದು. ಹಿಂದೂ ಪುರೋಹಿತ ರಾಜನ್ ಅವರು ಪ್ರಾರ್ಥನೆ ಸಲ್ಲಿಸಿ ಇತಿಹಾಸ ಸೃಷ್ಟಿಸುವರು ಓಂಕಾರದೊಂದಿಗೆ ಅವರ ಪ್ರಾರ್ಥನೆ ಆರಂಭವಾಗುವುದು ಎಂದು ಈದಿನ ಪ್ರಕಟಿಸಲಾಯಿತು.

2007: ಮಣಿಪಾಲ ವಿಶ್ವವಿದ್ಯಾಲಯವು ಬೆಂಗಳೂರಿನಲ್ಲಿ ಅನಿಮೇಶನ್ ಪದವಿ ಶಿಕ್ಷಣವನ್ನು ಆರಂಭಿಸಿತು.

2006: ಕೌಟುಂಬಿಕ ಜಗಳದ ಹಿನ್ನೆಲೆಯಲ್ಲಿ ತನ್ನ ಪತ್ನಿ, ಮಕ್ಕಳು ಸೇರಿದಂತೆ ಕುಟುಂಬದ ಎಲ್ಲ ನಾಲ್ವರು ಸದಸ್ಯರನ್ನೂ ಕಿಚ್ಚಿಟ್ಟು ಕೊಂದ ಮುಂಬೈ ನಗರದ ವರ್ತಕನಿಗೆ ಕೆಳಗಿನ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಎತ್ತಿಹಿಡಿದು ಮರಣ ದಂಡನೆಯನ್ನು ದೃಢ ಪಡಿಸಿತು. `ಇದು ಅಪರೂಪಗಳಲ್ಲೇ ಅಪರೂಪದ ಪ್ರಕರಣ' ಎಂದು ಹೈಕೋರ್ಟ್ ಬಣ್ಣಿಸಿತು. ತನ್ನ ಪತ್ನಿ ಕಮಲಜೀತ್, ಪುತ್ರ ಅಮನದೀಪ್, ಪುತ್ರಿಯರಾದ ನಿತಿ ಮತ್ತು ತಾನಿಯಾಳನ್ನು 2003ರ ಏಪ್ರಿಲ್ 10ರಂದು ಅಜಿತ್ ಸಿಂಗ್ ಗುಜ್ರಾಲ್ ಬೆಂಕಿ ಹಚ್ಚಿ ಕೊಂದಿದ್ದ.

2006: ಪ್ರಾರ್ಥನೆಯ ಮೂಲಕ 55 ವರ್ಷದ ವ್ಯಕ್ತಿಯ ಕ್ಯಾನ್ಸರ್ ಗುಣಪಡಿಸಿದ `ಪ್ರಾರ್ಥಿಸುವ ಮಾತೆ' ಎಂದೇ ಖ್ಯಾತಿ ಪಡೆದಿರುವ ಕೇರಳದ ತ್ರಿಶ್ಯೂರಿನ ಸಿಸ್ಟರ್ ಯುಫ್ರೇಸಿಯಾ ಅವರನ್ನು `ಪರಮಾನಂದ ನೀಡುವ' ವ್ಯಕ್ತಿಗಳ ಪಟ್ಟಿಗೆ ಸೇರಿಸುವ ಮೂಲಕ ಪೋಪ್ 16ನೇ ಬೆನೆಡಿಕ್ಟ್ ಆಕೆಯ `ಪವಾಡ'ಕ್ಕೆ ಮಾನ್ಯತೆಯ ಮುದ್ರೆ ಒತ್ತಿ ಪತ್ರ ಬರೆದರು. ಸಿಸ್ಟರ್ ಯುಫ್ರೇಸಿಯಾ ಅವರ `ಪ್ರಾರ್ಥನಾ ಪವಾಡ'ದ ಬಗ್ಗೆ ವೈದ್ಯಕೀಯ, ಸೈದ್ಧಾಂತಿಕ ಹಾಗೂ ಕಾರ್ಡಿನಲ್ ಗಳ ಸಮಾಲೋಚನಾ ವರದಿಗಳನ್ನು ಸಲ್ಲಿಸಲಾಗಿತ್ತು. ಸಮೀಪದ ಅಂಚೇರಿಯ ನಿವಾಸಿ ಕ್ಯಾನ್ಸರ್ ರೋಗಿ ಥರಕನ್ ಥಾಮಸ್ ಅವರ ಕಿರಿಹೊಟ್ಟೆಯ ತಟ್ಟೆಲುಬು ಅಥವಾ ಮೂತ್ರಪಿಂಡದ ಕುಳಿಯಲ್ಲಿ ಇದ್ದ ಕ್ಯಾನ್ಸರ್ ಗಡ್ಡೆ 1997ರ ಡಿಸೆಂಬರಿನಲ್ಲಿ ಸಿಸ್ಟರ್ ಯುಫ್ರೇಸಿಯಾ ಅವರ ಪ್ರಾರ್ಥನೆಯಿಂದ ಕ್ಯಾನ್ಸರ್ ವಾಸಿಯಾಯಿತು ಎಂದು ಜುಬಿಲಿ ವೈದ್ಯಕೀಯ ಆಸ್ಪತ್ರೆಯ ಮೂಳೆತಜ್ಞ ಡಾ. ಎಂ. ರಾಜೀವ ರಾವ್ ದೃಢಪಡಿಸಿದ್ದರು.

2006: ಈಕ್ವೆಡಾರ್ ವಿರುದ್ಧ ಫ್ರೀಕಿಕ್ ನಿಂದ ಗೋಲು ಗಳಿಸಿ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಾಯಕ ಡೇವಿಡ್ ಬೆಕಮ್ ಮೂರೂ ವಿಶ್ವಕಪ್ ನಲ್ಲಿ ಗೋಲು ಗಳಿಸಿದ ಇಂಗ್ಲೆಂಡಿನ ಏಕೈಕ ಆಟಗಾರ ಎಂಬ ಕೀರ್ತಿಗೆ ಪಾತ್ರರಾದರು. ಫ್ರಾನ್ಸಿನಲ್ಲಿನಡೆದ 1998ರ ವಿಶ್ವಕಪ್, 2002ರ ವಿಶ್ವಕಪ್ ಮತ್ತು 2006ರ ವಿಶ್ವಕಪ್ನಲ್ಲಿ ಬೆಕಮ್ ಗೋಲು ಗಳಿಸಿದ್ದರು.

1975: ಭಾರತದ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹಮದ್ ಅವರು ಸಂವಿಧಾನದ 352ನೇ ವಿಧಿಯನ್ವಯ ದೇಶಾದ್ಯಂತ `ತುರ್ತು ಪರಿಸ್ಥಿತಿ' ಘೋಷಿಸಿದರು. ಆಂತರಿಕ ತೊಂದರೆಗಳಿಂದಾಗಿ ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಧಕ್ಕೆ ಉಂಟಾಗಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು. ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದು ಅತ್ಯಂತ ಕೆಟ್ಟ ಘಳಿಗೆ ಎಂದು ಪರಿಗಣನೆಯಾಯಿತು.

1960: ಕಲಾವಿದ ಸುಗ್ಗನಹಳ್ಳಿ ಷಡಕ್ಷರಿ ಜನನ.

1957: ಕಲಾವಿದ ಕೃಷ್ಣಮೂರ್ತಿ ಎಚ್.ಎಸ್. ಜನನ.

1957: ಕಲಾವಿದೆ ಸುಶೀಲಾ ಮೆಹತಾ ಜನನ.

1945: ಜನಪದ ಗೀತೆ, ಸುಗಮ ಸಂಗೀತ ಕ್ಷೇತ್ರಗಳ ವಿಶಿಷ್ಟ ಗಾಯಕಿ ಜಯಶ್ರೀ ಗುತ್ತಲ ಅವರು ತಿರುಮಲರಾವ್ ದೇಶಪಾಂಡೆ- ಲಕ್ಷ್ಮೀಬಾಯಿ ದಂಪತಿಯ ಮಗಳಾಗಿ ವಿಜಾಪುರ ಜಿಲ್ಲೆಯ ಬದಾಮಿ ತಾಲ್ಲೂಕಿನ ಹುಲ್ಲಿಕೇರಿ ಗ್ರಾಮದಲ್ಲಿ ಜನಿಸಿದರು.

1944: ಐವತ್ತು ರಾಷ್ಟ್ರಗಳ ಪ್ರತಿನಿಧಿಗಳು ವಿಶ್ವಸಂಸ್ಥೆ ಚಾರ್ಟರಿಗೆ ಸಹಿ ಹಾಕಿ ಸರ್ವಾನುಮತದಿಂದ ಅದನ್ನು ಅಂಗೀಕರಿಸಿದರು. 1945ರ ಅಕ್ಟೋಬರಿನಲ್ಲಿ ಅದು ಅನುಷ್ಠಾನಗೊಂಡಿತು.

1928: ಜಪಾನೀ ಸಂಶೋಧಕ ಯೊಶಿರೊ ನಕಾಮತ್ಸ್ ಜನ್ಮದಿನ. 3000 ಪೇಟೆಂಟ್ ಗಳನ್ನು ಪಡೆದುಕೊಂಡು ಅವರು ಜಾಗತಿಕ ದಾಖಲೆಯನ್ನು ಸ್ಥಾಪಿಸಿದ್ದಾರೆ. 1950ರಲ್ಲಿ ಟೋಕಿಯೋದ ಇಂಪೀರಿಯಲ್ ಯುನಿವರ್ಸಿಟಿಯಲ್ಲಿ ಫ್ಲಾಪಿ ಡಿಸ್ಕನ್ನು ಸಂಶೋಧಿಸಿದ ಕೀರ್ತಿ ಕೂಡಾ ಇವರದೇ.

1902: ಅಮೆರಿಕದ ಎಲೆಕ್ಟ್ರಿಕಲ್ ಎಂಜಿನಿಯರ್ ಮತ್ತು ಕೈಗಾರಿಕೋದ್ಯಮಿ ವಿಲಿಯಂ ಪಿ. ಲೀಯರ್ (1902-78) ಜನ್ಮದಿನ. ಇವರ ಲೀಯರ್ ಜೆಟ್ ಕಾರ್ಪೊರೇಷನ್ ಜಗತ್ತಿನಲ್ಲಿ ಬೃಹತ್ ಪ್ರಮಾಣದಲ್ಲಿ ಬಿಸಿನೆಸ್ ಜೆಟ್ ಏರ್ ಕ್ರಾಫ್ಟ್ ಗಳನ್ನು ಮೊತ್ತ ಮೊದಲ ಬಾರಿಗೆ ನಿರ್ಮಾಣ ಮಾಡಿತು. ಆಟೋಮೊಬೈಲ್ ರೇಡಿಯೋ, ಎಂಟು ಟ್ರ್ಯಾಕಿನ ಸ್ಟೀರಿಯೋ ಟೇಪ್ ಪ್ಲೇಯರುಗಳನ್ನು ಆಟೋಮೊಬೈಲುಗಳಿಗಾಗಿ ಅಭಿವೃದ್ಧಿ ಪಡಿಸಿದ್ದು ಕೂಡಾ ಇವರ ಈ ಸಂಸ್ಥೆಯೇ.

1541: ಇನ್ಕಾ ಸಾಮ್ರಾಜ್ಯವನ್ನು ಪರಾಭವಗೊಳಿಸಿದ ಹಾಗೂ ಲಿಮಾ ನಗರವನ್ನು ಸ್ಥಾಪಿಸಿದ ಸ್ಪೇನಿನ ದೊರೆ ಫ್ರಾನ್ಸಿಸ್ಕೋ ಪಿಝಾರೋನನ್ನು (1475-1541) ಕೊಲೆಗೈಯಲಾಯಿತು.

1539: ಶೇರ್ ಶಹಾ ಚೌಸಾ ಕದನದಲ್ಲಿ ಹುಮಾಯೂನನನ್ನು ಸೋಲಿಸಿದನು. ಆಫ್ಘನ್ನರಿಂದ ಸಹಸ್ರಾರು ಮಂದಿ ಹತರಾದರು. ಪರಾರಿಯಾಗಲು ಯತ್ನಿಸಿದವರನ್ನು ಗಂಗಾನದಿಯಲ್ಲಿ ಮುಳುಗಿಸಿ ಸಾಯಿಸಲಾಯಿತು. ಹುಮಾಯೂನ್ ತಪ್ಪಿಸಿಕೊಂಡು ಪಾರಾದ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

ಇಂದಿನ ಇತಿಹಾಸ History Today ಜೂನ್ 25

ಇಂದಿನ ಇತಿಹಾಸ

ಜೂನ್ 25

ಲಾರ್ಡ್ಸ್ ಮೈದಾನದಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಡಿದ ಭಾರತ ಅದನ್ನು ಸೋಲಿಸುವ ಮೂಲಕ ಮೊತ್ತ ಮೊದಲ ಬಾರಿಗೆ ಕ್ರಿಕೆಟ್ ವಿಶ್ವ ಕಪ್ಪನ್ನು ತನ್ನ ಬಗಲಿಗೆ ಹಾಕಿಕೊಂಡಿತು.

2007: ಯಾವ ಮಾಧ್ಯಮದಲ್ಲಿ ಶಿಕ್ಷಣ ನೀಡುವುದಾಗಿ ಸರ್ಕಾರಕ್ಕೆ ಮುಚ್ಚಳಿಕೆ ಬರೆದುಕೊಟ್ಟದ್ದೀರೋ ಅದೇ ಮಾಧ್ಯಮದಲ್ಲಿಯೇ ಒಂದನೇ ತರಗತಿಗೆ ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಬೋಧನೆ ಮಾಡಬೇಕು' ಎಂದು ಕರ್ನಾಟಕ ಹೈಕೋರ್ಟ್ ಶಿಕ್ಷಣ ಸಂಸ್ಥೆಗಳಿಗೆ ನಿರ್ದೇಶಿಸಿತು. ಇದರಿಂದಾಗಿ ಕೆಲವು ತಿಂಗಳುಗಳಿಂದ ಸರ್ಕಾರ ಹಾಗೂ ಶಿಕ್ಷಣ ಸಂಸ್ಥೆಗಳ ಮಧ್ಯೆ ಸತತವಾಗಿ ಬಿಸಿ ವಾತಾವರಣ ಸೃಷ್ಟಿಸಿದ್ದ ಭಾಷಾ ಮಾಧ್ಯಮ ವಿವಾದ ತಕ್ಕ ಮಟ್ಟಿಗೆ ತಿಳಿಯಾಯಿತು.

2007: ಉಪ ರಾಷ್ಟ್ರಪತಿ ಭೈರೋನ್ ಸಿಂಗ್ ಶೆಖಾವತ್ ಅವರು ಎನ್ ಡಿಎ ಬೆಂಬಲಿತ ಅಭ್ಯರ್ಥಿಯಾಗಿ ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದರು.

2007: ಬಿಹಾರದ ಭೋಜಪುರ ಜಿಲ್ಲೆಯ ರಾಮಕರಣಿ ಗ್ರಾಮದ ಶಿವದತ್ತ ಯಾದವ್ ಅವರು ತಮ್ಮ ಆರು ಮಂದಿ ಹೆಣ್ಮಕ್ಕಳನ್ನು ಲಕ್ಷ್ಮೀಪುರಂನ ಕುಟುಂಬ ಒಂದರ 6 ಮಂದಿ ಸಹೋದರರಿಗೆ ಮದುವೆ ಮಾಡಿಕೊಟ್ಟರು. ಒಂದೇ ಮಂಟಪದಲ್ಲಿ ಹಿಂದೂ ಸಂಪ್ರದಾಯದಂತೆ ಮಂತ್ರಘೋಷದ ಮಧ್ಯೆ ನಡೆದ ಈ ಸರಳ ಮದುವೆಗೆ ನೆರೆದಿದ್ದ ಜನ ಸಾಕ್ಷಿಯಾದರು.

2007: ಸೆರೆವಾಸದಲ್ಲಿರುವ ಮಾಜಿ ಸಚಿವ, ಜಾರ್ಖಂಡ್ ಮುಕ್ತಿ ಮೋರ್ಚಾದ (ಜೆಎಂಎಂ) ಅಧ್ಯಕ್ಷ ಶಿಬು ಸೊರೇನ್ ಅವರನ್ನು ಗುರಿಯಾಗಿ ಇಟ್ಟುಕೊಂಡು ನಡೆದ ಬಾಂಬ್ ದಾಳಿಯಲ್ಲಿ ಸೊರೇನ್ ಅಪಾಯದಿಂದ ಪಾರಾದರು.

2007: ಇರಾಕಿನಲ್ಲಿ ನಡೆದ ಸರಣಿ ಮಾನವ ಬಾಂಬ್ ದಾಳಿಗಳಿಗೆ ಸಿಲುಕಿ 32ಕ್ಕೂ ಹೆಚ್ಚು ಮಂದಿ ಅಸು ನೀಗಿದರು.

2007: ಹಿರಿಯ ಬಿಜೆಪಿ ಮುಖಂಡ, ಗುಜರಾತ್ ಮಾಜಿ ಗೃಹ ಸಚಿವ ಹರೇನ್ ಪಾಂಡ್ಯ ಕೊಲೆ ಪ್ರಕರಣದಲ್ಲಿ ಒಂಬತ್ತು ಆರೋಪಿಗಳಿಗೆ ಪೋಟಾ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತು.

1991: ಒಕ್ಕೂಟ ರಚನೆಗೆ ಸಂಬಂಧಿಸಿದಂತೆ ಯುಗೋಸ್ಲಾವಿಯಾದ ಆರು ಗಣರಾಜ್ಯಗಳ ಮಧ್ಯೆ ನಡೆದ ಹಲವು ತಿಂಗಳುಗಳ ಮಾತುಕತೆ ವಿಫಲಗೊಂಡ ಬಳಿಕ ಪಶ್ಚಿಮದ ಗಣರಾಜ್ಯಗಳಾದ ಸ್ಲೊವೇನಿಯಾ ಮತ್ತು ಕ್ರೊವೇಷಿಯಾ ಸ್ವಾತಂತ್ರ್ಯ ಘೋಷಣೆ ಮಾಡಿಕೊಂಡವು.

1983: ಲಾರ್ಡ್ಸ್ ಮೈದಾನದಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಡಿದ ಭಾರತ ಅದನ್ನು ಸೋಲಿಸುವ ಮೂಲಕ ಮೊತ್ತ ಮೊದಲ ಬಾರಿಗೆ ಕ್ರಿಕೆಟ್ ವಿಶ್ವ ಕಪ್ಪನ್ನು ತನ್ನ ಬಗಲಿಗೆ ಹಾಕಿಕೊಂಡಿತು. ಇದು ಕ್ರಿಕೆಟ್ ಜಗತ್ತಿನಲ್ಲಿ ಭಾರತದ ಅತ್ಯಂತ ಸುಂದರ ಘಳಿಗೆಯಾಯಿತು. `ಭಾರತ ಸಾಧಿಸಬಲ್ಲುದು ಎಂಬುದೇ ನನ್ನ ಘೋಷಣೆ' ಎಂದು ಆಗಿನ ಪ್ರಧಾನಿ ಇಂದಿರಾಗಾಂಧಿಯವರು ಹೇಳಿದರು.

1957: ಕಾವ್ಯರಚನೆ, ಚಿತ್ರಕಲೆ, ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಕಲಾವಿದೆ ಪ್ರೇಮಾಪ್ರಭು ಹಂದಿಗೋಳ ಅವರು ವಿರೂಪಾಕ್ಷಯ್ಯ- ಶಾಂತಾದೇವಿ ದಂಪತಿಯ ಮಗನಾಗಿ ಗದಗ ಜಿಲ್ಲೆ ರೋಣ ತಾಲ್ಲೂಕಿನ ಹೊಳೆ ಆಲೂರಿನಲ್ಲಿ ಜನಿಸಿದರು.

1950: ದಕ್ಷಿಣ ಕೊರಿಯಾದ ಮೇಲೆ ಉತ್ತರ ಕೊರಿಯಾ ದಾಳಿ ಮಾಡಿತು. ಇದರೊಂದಿಗೆ ಉತ್ತರ ಮತ್ತು ದಕ್ಷಿಣ ಕೊರಿಯಾ ದೇಶಗಳ ಮಧ್ಯೆ ವೈರತ್ವ ಆರಂಭವಾಯಿತು.

1948: ಹೆವಿ ವೇಯ್ಟ್ ಬಾಕ್ಸರ್ ಜೋ ಲೂಯಿ ತನ್ನ ಎದುರಾಳಿ ಜೋ ವಾಲ್ಕೋಟ್ ಅವರನ್ನು ಸೋಲಿಸುವ ಮೂಲಕ 25ನೇ ಸಲಕ್ಕೆ ತಮ್ಮ ಹೆವಿ ವೇಯ್ಟ್ ಬಾಕ್ಸಿಂಗ್ ಪ್ರಶಸ್ತಿಯನ್ನು ರಕ್ಷಿಸಿಕೊಂಡರು. ಜೋ ಲೂಯಿ ಅವರಿಗೆ ಸವಾಲು ಹಾಕಿ ಈ ರೀತಿ ಪರಾಜಯಗೊಂಡ 22ನೇ ವ್ಯಕ್ತಿಯಾದರು ಜೋ ವಾಲ್ಕೋಟ್.

1932: ಇಂಗ್ಲೆಂಡಿನ ಲಾರ್ಡ್ಸ್ಸ್ ಮೈದಾನದಲ್ಲಿ ಇಂಗ್ಲೆಂಡಿನ ವಿರುದ್ಧ ಆಡುವ ಮೂಲಕ ಭಾರತ ಮೊತ್ತ ಮೊದಲ ಬಾರಿಗೆ ವಿದೇಶವೊಂದರ ಜೊತೆಗೆ ಟೆಸ್ಟ್ ಕ್ರಿಕೆಟಿನಲ್ಲಿ ಪಾಲ್ಗೊಂಡಿತು. ಈ ಪಂದ್ಯದಲ್ಲಿ ಭಾರತ 158 ರನ್ನುಗಳ ಅಂತರದಲ್ಲಿ ಸೋತಿತು.

1931: ಭಾರತದ ಮಾಜಿ ಪ್ರಧಾನಿ ವಿಶ್ವನಾಥ ಪ್ರತಾಪ್ ಸಿಂಗ್ ಜನನ.

Sunday, June 29, 2008

ಇಂದಿನ ಇತಿಹಾಸ History Today ಜೂನ್ 24

ಇಂದಿನ ಇತಿಹಾಸ

ಜೂನ್ 24

ಅಂದಾಜು 1.20 ಕೋಟಿ ಯೂರೋ ವೆಚ್ಚದಲ್ಲಿ ನವೀಕರಣಗೊಂಡ ಫ್ರಾನ್ಸಿನ ಪ್ಯಾರಿಸ್ ಸಮೀಪದ `ಹಾಲ್ ಆಫ ಮಿರರ್ಸ್' ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಂಡಿತು. ಫ್ರೆಂಚ್ ಕಲಾವಿದ ಚಾರ್ಲ್ಸ್ ಲೀ ಬ್ರುನ್ (1619-1690) ಕಲಾಕೃತಿಗಳು ಇಲ್ಲಿವೆ.

2007: ಕರ್ನಾಟಕ ಮತ್ತು ಮಹಾರಾಷ್ಟ್ರದ ಕೆಲವು ಭಾಗ ಸೇರಿದಂತೆ 4 ರಾಜ್ಯಗಳಲ್ಲಿ ಮುಂದುವರೆದ ಮಳೆಯ ಅಬ್ಬರಕ್ಕೆ ಒಟ್ಟು 130ಕ್ಕಿಂತಲೂ ಹೆಚ್ಚು ಮಂದಿ ಅಸು ನೀಗಿದರು. ಆಂಧ್ರಪ್ರದೇಶ, ಕೇರಳದಲ್ಲಿಪರಿಸ್ಥಿತಿ ಸ್ವಲ್ಪ ಸುಧಾರಿಸಿತು.

2007: ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ ಅವರಿಗೆ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ ಹೆಗ್ಡೆ ಅವರು ಬೆಂಗಳೂರಿನಲ್ಲಿ `ಮಾಸ್ತಿ' ಪ್ರಶಸ್ತಿ ಪ್ರದಾನ ಮಾಡಿದರು.

2007: 1980ರಲ್ಲಿ ತಮ್ಮ ವೈರಿಗಳನ್ನು ಕೊಲ್ಲುವ ಆಂದೋಲನದಲ್ಲಿ 1.80 ಲಕ್ಷ ಕುರ್ದ್ ಜನರನ್ನು ಕೊಂದ ಆರೋಪಕ್ಕೆ ಗುರಿಯಾಗಿದ್ದ `ಕೆಮಿಕಲ್ ಅಲಿ' ಎಂದೇ ಕುಖ್ಯಾತಿ ಪಡೆದ ಸದ್ದಾಂ ಹುಸೇನ್ ಸೋದರ ಸಂಬಂಧಿ ಅಲಿ ಹಸನ್ ಅಲ್ ಮಜಿದ್, ಸುಲ್ತಾನ್ ಹಷೀಮ್ ಅಹ್ಮದ್ ಮತ್ತು ಹುಸೇನ್ ರಷೀದ್ ಅಹ್ಮದ್ ಅವರಿಗೆ ನ್ಯಾಯಾಧೀಶ ಮಹಮ್ಮದ್ ಒರೈಬಿ ಅಲ್ - ಖಲೀಫ ಮರಣ ದಂಡನೆ ವಿಧಿಸಿದರು. 140 ಶಿಯಾ ಮುಸ್ಲಿಮರನ್ನು ಕೊಂದ ಮತ್ತು 1982ರ ಹತ್ಯೆಗಳ ಆರೋಪದಲ್ಲಿ ತಪ್ಪಿತಸ್ಥರೆಂದು ಘೋಷಿತರಾದ ಸದ್ದಾಂ ಹುಸೇನರನ್ನು 2006ರ ಡಿಸೆಂಬರ್ 30ರಂದು ಗಲ್ಲಿಗೇರಿಸಲಾಗಿತ್ತು.

2007: ಪಾಕಿಸ್ಥಾನದ ಬಂದರು ನಗರ ಕರಾಚಿ ಭಾರಿ ಮಳೆ ಹಾಗೂ ಬಿರುಗಾಳಿಯಿಂದ ತತ್ತರಿಸಿತು. ವಿವಿಧ ರೀತಿಯ ಅನಾಹುತಗಳಿಂದ ಒಟ್ಟು 220 ಮಂದಿ ಮೃತರಾಗಿ, ಹಲವರು ಗಾಯಗೊಂಡರು. ವಿದ್ಯುತ್ ವ್ಯವಸ್ಥೆ, ಜನಜೀವನ ಅಸ್ತವ್ಯಸ್ತಗೊಂಡಿತು.

2007: ಅಂದಾಜು 1.20 ಕೋಟಿ ಯೂರೋ ವೆಚ್ಚದಲ್ಲಿ ನವೀಕರಣಗೊಂಡ ಫ್ರಾನ್ಸಿನ ಪ್ಯಾರಿಸ್ ಸಮೀಪದ `ಹಾಲ್ ಆಫ ಮಿರರ್ಸ್' ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಂಡಿತು. ಫ್ರೆಂಚ್ ಕಲಾವಿದ ಚಾರ್ಲ್ಸ್ ಲೀ ಬ್ರುನ್ (1619-1690) ಕಲಾಕೃತಿಗಳು ಇಲ್ಲಿವೆ. ಸ್ಥಾಪನೆಯಾಗಿ 300 ವರ್ಷಗಳ ಬಳಿಕ ಫ್ರಾನ್ಸಿನ ಮುಂಚೂಣಿಯ ರಿಯಲ್ ಎಸ್ಟೇಟ್ ಕಂಪೆನಿ ಮಿಂಚಿ `ಹಾಲ್ ಆಫ್ ಮಿರರ್ಸ್' ನವೀಕರಣದ ಹೊಣೆ ಹೊತ್ತಿತ್ತು.

2007: ಕೆನಡಾದಲ್ಲಿ ನೆಲೆಸಿದ ಬೆಂಗಳೂರು ಮೂಲದ ವೈದ್ಯೆ ಡಾ.ಶೀಲಾ ಬಸ್ರೂರು ಅವರನ್ನು, ಸಾರ್ವಜನಿಕ ಕ್ಷೇತ್ರಕ್ಕೆ ಸಲ್ಲಿಸಿರುವ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ ಅಲ್ಲಿನ ಸರ್ಕಾರವು `ಕೆನಡಾ ಪ್ರಶಸ್ತಿ'ಗೆ ಆಯ್ಕೆ ಮಾಡಿತು.

2006: ಮಾನವ ಹಕ್ಕುಗಳ ಖ್ಯಾತ ಹೋರಾಟಗಾರ ಸ್ವಾಮಿ ಅಗ್ನಿವೇಶ್ ಅವರು `ವಿಜಿಲ್ ಇಂಡಿಯಾ ಮೂವ್ ಮೆಂಟ್' ಸಂಸ್ಥೆಯ `ಎಮ್. ಎ. ಥಾಮಸ್ ರಾಷ್ಟ್ರೀಯ ಮಾನವ ಹಕ್ಕು 2006' ಪ್ರಶಸ್ತಿಗೆ ಆಯ್ಕೆಯಾದರು. ನ್ಯಾಯಮೂರ್ತಿ ವಿ.ಆರ್. ಕೃಷ್ಣ ಅಯ್ಯರ್(1998), ಮೇಧಾ ಪಾಟ್ಕರ್(1999), ನ್ಯಾಯಮೂರ್ತಿ ವಿ. ಎಂ.ತಾರ್ಕುಂಡೆ (2000) ಇವರು ಈ ಹಿಂದೆ ಈ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರರಾಗಿದ್ದರು.

2006: ಬೆಂಗಳೂರಿನ ಬಹು ನಿರೀಕ್ಷಿತ, ಮಹತ್ವಾಕಾಂಕ್ಷೆಯ `ನಮ್ಮ ಮೆಟ್ರೋ' ಯೋಜನೆಗೆ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಈದಿನ ಬೆಂಗಳೂರಿನ ಪೆರೇಡ್ ಮೈದಾನದಲ್ಲಿ ಶಿಲಾನ್ಯಾಸ ನೆರವೇರಿಸಿದರು.

2002: ರಷ್ಯದ ವ್ಲಾಡಿಮೀರ್ ಕ್ರಾಮ್ನಿಕ್ ಅವರು ಲಿಯೋನಿನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾರತದ ವಿಶ್ವನಾಥನ್ ಆನಂದ್ ಅವರನ್ನು ಸೋಲಿಸುವ ಮೂಲಕ `ಅಡ್ವಾನ್ಸ್ಡ್ ಚೆಸ್' ಪ್ರಶಸ್ತಿಯನ್ನು ತಮ್ಮ ಬಗಲಿಗೆ ಹಾಕಿಕೊಂಡರು. `ಅಡ್ವಾನ್ಸ್ಡ್ ಚೆಸ್' ಎಂಬುದು ಗ್ಯಾರಿ ಕ್ಯಾಸ್ಪರೋವ್ ಅವರ ಸಂಶೋಧನೆಯಾಗಿದ್ದು ಇದರಲ್ಲಿ ಕಂಪ್ಯೂಟರ್ ನೆರವಿನೊಂದಿಗೆ `ಮೋಸ ಮಾಡಲು' ಅಧಿಕೃತವಾಗಿ ಅನುಮತಿ ನೀಡಲಾಗಿದೆ.

1980: ಭಾರತದ ಮಾಜಿ ರಾಷ್ಟ್ರಪತಿ ವಿ.ವಿ. ಗಿರಿ ಅವರು ತಮ್ಮ 85ನೇ ವಯಸ್ಸಿನಲ್ಲಿ ತಮಿಳ್ನಾಡಿನ ಮದ್ರಾಸಿನಲ್ಲಿ (ಈಗಿನ ಚೆನ್ನೈ) ನಿಧನರಾದರು.

1974: ಇಂಗ್ಲೆಂಡಿನ ಲಾರ್ಡ್ಸ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತವು ಎರಡನೇ ಇನ್ನಿಂಗ್ಸ್ ನಲ್ಲಿ 42 ರನ್ ಗಳಿಗೆ ಆಲೌಟ್ ಆಗಿ ಅತ್ಯಂತ ಹೀನಾಯ ಸೋಲು ಅನುಭವಿಸಿತು. ಇದು ಟೆಸ್ಟ್ ಕ್ರಿಕೆಟಿನಲ್ಲಿ ಭಾರತದ ಅತ್ಯಂತ ಕಡಿಮೆ ಮೊತ್ತದ ಇನ್ನಿಂಗ್ಸ್.

1966: ಕಲಾವಿದ ಪ್ರಕಾಶ ಕೆ. ನಾಯ್ಡು ಜನನ.1949: ಕಲಾವಿದ ಚಂದ್ರಕುಮಾರ ಸಿಂಗ್ ಜನನ.

1935: ಕಲಾವಿದ ಬಳ್ಳಾರಿ ಎಂ. ಶೇಷಗಿರಿ ಆಚಾರ್ಯ ಜನನ.

1924: ಕರ್ನಾಟಕದಲ್ಲಿ ನಶಿಸುತ್ತಿರುವ ರಥ ನಿರ್ಮಾಣ ಸಂತತಿಯ ನಾಲ್ಕೈದು ಕುಟುಂಬ ವರ್ಗದವರಲ್ಲಿ ಒಬ್ಬರಾದ ರಥ ಶಿಲ್ಪಿ ಪರಮೇಶ್ವರಾಚಾರ್ಯ ಅವರು ಮಾನಾಚಾರ್ಯರು- ವೀರಮ್ಮ ದಂಪತಿಯ ಮಗನಾಗಿ ಹೊಳಲ್ಕೆರೆ ತಾಲ್ಲೂಕಿನ ನೂಲೇನೂರಿನಲ್ಲಿ ಜನಿಸಿದರು.

1915: ಬ್ರಿಟಿಷ್ ಗಣಿತ ಹಾಗೂ ಖಗೋಳ ತಜ್ಞ ಸರ್ ಫ್ರೆಡ್ ಹೊಯ್ಲ್ ಜನ್ಮದಿನ. ಇವರು ತಮ್ಮ `ವಿಶ್ವ ವಿಕಸನ ಸಿದ್ಧಾಂತ'ಕ್ಕಾಗಿ ಖ್ಯಾತಿ ಪಡೆದಿದ್ದಾರೆ. ಇವರ ಸಿದ್ಧಾಂತದ ಪ್ರಕಾರ ವಿಶ್ವವು ವಿಕಸಿಸುತ್ತಿದೆ ಹಾಗೂ ಈ ವಿಕಸನದಿಂದ ಉಂಟಾಗುವ ಶೂನ್ಯವನ್ನು ತುಂಬಿ ಆಕಾಶದಲ್ಲಿನ ದ್ರವ್ಯದ ಸಾಂದ್ರತೆಯನ್ನು ನಿರಂತರವಾಗಿ ಇರಿಸಲು ಹೊಸ ದ್ರವ್ಯ ಸೃಷ್ಟಿಯಾಗುತ್ತಿರುತ್ತದೆ.

1885: ಅಕಾಲಿದಳದ ನಾಯಕ ಮಾಸ್ಟರ್ ತಾರಾಸಿಂಗ್ (1885-1967) ಜನ್ಮದಿನ. ಸಿಖ್ಖರ ರಾಜಕೀಯ ಹಾಗೂ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯಾಗದಂತಹ ಪಂಜಾಬಿ ಭಾಷಿಕರ ರಾಜ್ಯ ಸ್ಥಾಪನೆಯಾಗಬೇಕು ಎಂದು ಚಳವಳಿ ಹೂಡಿದ ಸಿಖ್ ಧುರೀಣರಿವರು. 1966ರಲ್ಲಿ ಈಗಿನ ಪಂಜಾಬ್ ರಾಜ್ಯ ರಚನೆಯೊಂದಿಗೆ ಅವರ ಕನಸು ನನಸಾಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

ಇಂದಿನ ಇತಿಹಾಸ History Today ಜೂನ್ 23

ಇಂದಿನ ಇತಿಹಾಸ

ಜೂನ್ 23

ಇಂದಿರಾ ಗಾಂಧಿ ಅವರ ಕಿರಿಯ ಪುತ್ರ ಸಂಜಯಗಾಂಧಿ ನವದೆಹಲಿಯಲ್ಲಿ ವಿಮಾನ ಅಪಘಾತದಲ್ಲಿ ನಿಧನರಾದರು.



2007: ಕರ್ನಾಟಕದಲ್ಲಿ ಉಗ್ರ ಸ್ವರೂಪ ತಾಳಿದ ಮಳೆ 35 ಜನರನ್ನು ಬಲಿ ತೆಗೆದುಕೊಂಡಿತು.

2007: ನವ ಮಂಗಳೂರು ಬಂದರಿನಿಂದ ಯುಎಇಗೆ ಕಬ್ಬಿಣದ ಅದಿರನ್ನು ಹೊತ್ತು ಹೊರಟ `ಡೆನ್ ಡೆನ್' ಆಫ್ರಿಕನ್ ಹಡಗು ತಾಂತ್ರಿಕ ದೋಷದ ಜೊತೆಗೆ ಭಾರಿ ಬಿರುಗಾಳಿ ಹೊಡೆತಕ್ಕೆ ಸಿಲುಕಿ ಮಂಗಳೂರು ಸಮೀಪದ ತಣ್ಣೀರು ಬಾವಿ ಸಮುದ್ರ ದಂಡೆ ಬಳಿ ಸಂಭವಿಸಿದ ದುರಂತದಲ್ಲಿ ಇಬ್ಬರು ಅಸು ನೀಗಿ ಒಬ್ಬರು ಕಣ್ಮರೆಯಾದರು.

2007: ರಾಷ್ಟ್ರಪತಿ ಸ್ಥಾನಕ್ಕೆ ಯುಪಿಎ - ಎಡಪಕ್ಷಗಳ ಅಭ್ಯರ್ಥಿಯಾಗಿ ಪ್ರತಿಭಾ ಪಾಟೀಲ್ ನಾಮಪತ್ರ ಸಲ್ಲಿಸಿದರು.

2007: ಬಾಹ್ಯಾಕಾಶದಲ್ಲಿ 195 ದಿನಗಳನ್ನು ಕಳೆದು ಭೂಮಿಗೆ ವಾಪಸಾದ ಭಾರತೀಯ ಸಂಜಾತ ಅಮೆರಿಕದ ಗಗನಯಾನಿ ಸುನೀತಾ ವಿಲಿಯಮ್ಸ್ (41) ಅವರನ್ನು ನ್ಯೂಯಾರ್ಕಿನ ಎಬಿಸಿ ಟೆಲಿವಿಷನ್ ನೆಟ್ ವರ್ಕ್ `ವಾರದ ವ್ಯಕ್ತಿ' ಎಂಬುದಾಗಿ ಆಯ್ಕೆ ಮಾಡಿತು.

2006: ವಿಶ್ವಸಂಸ್ಥೆ ಸಾರ್ವಜನಿಕ ಸೇವಾ ದಿನದ ಅಂಗವಾಗಿ ನೀಡಲಾಗುವ ಪ್ರತಿಷ್ಠಿತ `ವಿಶ್ವಸಂಸ್ಥೆ ಸಾರ್ವಜನಿಕ ಸೇವಾ ಪ್ರಶಸ್ತಿ'ಯು ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಗೆ ಲಭಿಸಿತು. ವಿಶ್ವಸಂಸ್ಥೆಯು ಜೂನ್ 23ರ ಈ ದಿನವನ್ನು `ವಿಶ್ವಸಂಸ್ಥೆ ಸಾರ್ವಜನಿಕ ಸೇವಾದಿನ'ವಾಗಿ ಘೋಷಿಸಿದೆ. ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ಸೇರಿದಂತೆ ಜಗತ್ತಿನ ವಿವಿಧ 11 ರಾಷ್ಟ್ರಗಳ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಸಾರ್ವಜನಿಕ ಸೇವಾ ಸಂಸ್ಥೆ(ಇಲಾಖೆ)ಗಳನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

2005: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಸ್ಥಾಪಕ ಸದಸ್ಯ ಸುಂದರಸಿಂಗ್ ಭಂಡಾರಿ ನಿಧನ.

1997: ಜೈನ ಧರ್ಮದ ತೇರಾಪಂಥದ ಸ್ಥಾಪಕ ಆಚಾರ್ಯ ತುಳಸಿ ನಿಧನ.

1995: ವೈದ್ಯಕೀಯ ತಜ್ಞ ಡಾ. ಜಾನ್ ಸಾಲ್ಕ್ ತಮ್ಮ 80ನೇ ವಯಸ್ಸಿನಲ್ಲಿ ಕ್ಯಾಲಿಫೋರ್ನಿಯಾದ ಲಾಜೊಲ್ಲಾದಲ್ಲಿ ನಿಧನರಾದರು. ಇವರು ಪೋಲಿಯೋ ವಿರುದ್ಧ ಮೊತ್ತ ಮೊದಲಿಗೆ ಲಸಿಕೆ ಅಭಿವೃದ್ಧಿ ಪಡಿಸಿದರು.

1985: ಏರ್ ಇಂಡಿಯಾ 747 `ಎಂಪರರ್ ಕನಿಷ್ಕ' ವಿಮಾನ ಐರಿಷ್ ಕರಾವಳಿಯಲ್ಲಿ ಸ್ಫೋಟಗೊಂಡು ಅದರಲ್ಲಿದ್ದ 329 ಜನ ಅಸುನೀಗಿದರು. ಈ ವಿಮಾನಸ್ಫೋಟಕ್ಕೆ ಸಿಖ್ ಭಯೋತ್ಪಾದಕರು ಕಾರಣ ಎಂದು ಶಂಕಿಸಿ ಖಟ್ಲೆ ಹೂಡಲಾಗಿತ್ತು. ಇದರ ವಿಚಾರಣೆ ಇತ್ತೀಚಿನವರೆಗೂ ನಡೆಯಿತು.

1981: ಪ್ರಮುಖ ಕಾಂಗೈ ನಾಯಕ, ಕೇಂದ್ರದ ಮಾಜಿ ಸಚಿವ ಎಸ್. ಕೆ. ಪಾಟೀಲ ಅವರು ಈದಿನ ನಿಧನರಾದರು.

1980: ಇಂದಿರಾ ಗಾಂಧಿ ಅವರ ಕಿರಿಯ ಪುತ್ರ ಸಂಜಯಗಾಂಧಿ ನವದೆಹಲಿಯಲ್ಲಿ ವಿಮಾನ ಅಪಘಾತದಲ್ಲಿ ನಿಧನರಾದರು.

1956: ಗಮೆಲ್ ಅಬ್ದುಲ್ ನಾಸ್ಸೇರ್ ಈಜಿಪ್ಟಿನ ಅಧ್ಯಕ್ಷರಾಗಿ ಆಯ್ಕೆಯಾದರು. ಈ ಚುನಾವಣೆಯಲ್ಲಿ ಮತದಾನವನ್ನು ಕಡ್ಡಾಯಗೊಳಿಸಲಾಗಿತ್ತು. ನಾಸ್ಸೇರ್ ಕಣದಲ್ಲಿ ಇದ್ದ ಏಕೈಕ ಅಭ್ಯರ್ಥಿ.

1955: ಕಲಾವಿದ ಪುಟ್ಟೇಗೌಡ ಎಚ್. ಬಿ. ಜನನ.

1953: ಭಾರತೀಯ ಜನಸಂಘದ ಸ್ಥಾಪಕ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಕಾಶ್ಮೀರದ ಸೆರೆಮನೆಯೊಂದರಲ್ಲಿ ಮೃತರಾದರು.

1953: ಕಲಾವಿದೆ ಇಂದೂ ವಿಶ್ವನಾಥ್ ಜನನ.

1941: ಕಲಾವಿದ ಪ್ರಭಾಶಂಕರ್ ಜನನ.

1932: ಕಲಾವಿದ ರಾಜಾರಾಮ್ ಗಿರಿಯನ್ ಜನನ.

1931: ಸಾಹಿತಿ ದೇವಕಿ ಮೂರ್ತಿ ಜನನ.

1920: ಜನತಾ ಪಕ್ಷದ ಹಿರಿಯ ಮುಖಂಡ ಜಗನ್ನಾಥರಾವ್ ಜೋಶಿ ಜನನ.

1912: ಸಾಹಿತಿ ಜಯದೇವಿ ತಾಯಿ ಲಿಗಾಡೆ ಜನನ.

1896: ಕನ್ನಡ ರಂಗಭೂಮಿಯ ಭೀಷ್ಮ ಪಿತಾಮಹರೆನಿಸಿದ್ದ ಆರ್. ನಾಗೇಂದ್ರರಾವ್ ಅವರು ರಟ್ಟಿಹಳ್ಳಿ ಕೃಷ್ಣರಾವ್ - ರುಕ್ಮಿಣಿದೇವಿ ದಂಪತಿಯ ಮಗನಾಗಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ಜನಿಸಿದರು. ಅಪೂರ್ವ ಸಹೋದರಗಳ್, ಸತಿ ಸುಲೋಚನಾ, ವಸಂತ ಸೇನಾ, ಗಾಳಿ ಗೋಪುರ, ವಿಜಯನಗರದ ವೀರಪುತ್ರ, ನಮ್ಮ ಮಕ್ಕಳು, ಹಣ್ಣೆಲೆ ಚಿಗುರಿದಾಗ, ಚಂದ್ರಹಾಸ, ಮದುವೆ ಮಾಡಿ ನೋಡು, ವೀರ ಕೇಸರಿ, ಕರುಳಿನ ಕರೆ ಮುಂತಾದ ಚಿತ್ರಗಳಲ್ಲಿ ತಮ್ಮ ಅಚ್ಚಳಿಯದ ಅಭಿನಯದಿಂದ ಜನಮನದಲ್ಲಿ ವಿರಾಜಮಾನರಾದವರು ನಾಗೇಂದ್ರರಾವ್. ರಾಜ್ಯ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ, ಶ್ರೇಷ್ಠ ನಟ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಅವರ ಮುಡಿಗೇರಿದ್ದವು.

1868: ಕ್ರಿಸ್ಟೋಫರ್ ಲಾಥಮ್ ಶೋಲ್ಸ್ ತಮ್ಮ ಸಂಶೋಧನೆ `ಟೈಪ್ ರೈಟರ್'ಗೆ ಪೇಟೆಂಟ್ ಪಡೆದರು.

1761: ಮರಾಠಾ ದೊರೆ ಪೇಶ್ವಾ ಬಾಲಾಜಿ ಬಾಜಿ ರಾವ್ ಮೂರನೇ ಪಾಣಿಪತ್ ಯುದ್ಧದಲ್ಲಿ ಸೋಲು ಅನುಭವಿಸಿದ ಬಳಿಕ ಅದೇ ದುಃಖದಲ್ಲಿ ಅಸುನೀಗಿದ.

1757: ರಾಬಟರ್್ ಕ್ಲೈವನು ಪ್ಲಾಸಿ ಕದನದಲ್ಲಿ ಬಂಗಾಳದ ನವಾಬ ಸಿರಾಜ್- ಉದ್- ದೌಲನನ್ನು ಸೋಲಿಸಿದ. ಈ ಜಯದಿಂದ ಬ್ರಿಟಿಷರಿಗೆ ಬಂಗಾಳವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಅನುಕೂಲವಾಯಿತು. ಇದು ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯ ಸ್ಥಾಪನೆಗೂ ಅಡಿಗಲ್ಲಾಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Sunday, June 22, 2008

ಇಂದಿನ ಇತಿಹಾಸ History Today ಜೂನ್ 22

ಇಂದಿನ ಇತಿಹಾಸ

ಜೂನ್ 22

ವರ್ಜೀನಿಯಾದಲ್ಲಿ ನಡೆದ ಆಕರ್ಷಣೀಯ ಸಮಾರಂಭದಲ್ಲಿ ಭಾರತೀಯ ನೌಕಾಪಡೆಗೆ ಯುದ್ಧವಿಮಾನಗಳನ್ನು ಇಳಿಸಬಹುದಾದ ಬೃಹತ್ ನೌಕೆ `ಐಎನ್ಎಸ್ ಜಲಾಶ್ವ'ವನ್ನು ಅಧಿಕೃತವಾಗಿ ಸೇರ್ಪಡೆ ಮಾಡಲಾಯಿತು.

2007: ಪ್ರತಿಕೂಲ ಹವಾಮಾನದಿಂದ ಮತ್ತೊಂದು ದಿನವನ್ನು ಬಾಹ್ಯಾಕಾಶದಲ್ಲೇ ಕಳೆದ ಅಟ್ಲಾಂಟಿಸ್ ನೌಕೆ ಕೊನೆಗೂ ಈದಿನ ನಸುಕಿನ 1.20ರ ಸುಮಾರಿಗೆ ಕ್ಯಾಲಿಫೋರ್ನಿಯಾದ ಎಡ್ವರ್ಡ್ ವಾಯುನೆಲೆಯಲ್ಲಿ ಸುರಕ್ಷಿತವಾಗಿ ಬಂದಿಳಿಯಿತು. ಅಟ್ಲಾಂಟಿಸ್ ನಭದಲ್ಲಿ ಕಾಣುತ್ತಿದ್ದಂತೆಯೇ ಎಲ್ಲರೂ ಉಸಿರು ಬಿಗಿಹಿಡಿದು ಸುರಕ್ಷಿತ ಭೂಸ್ಪರ್ಶಕ್ಕೆ ಪ್ರಾರ್ಥಿಸಿದರು. ಈ ಎಲ್ಲ ಪ್ರಕ್ರಿಯೆಯನ್ನು ವಿಶ್ವದ ಬಹುತೇಕ ಟೆಲಿವಿಷನ್ ಚಾನೆಲ್ಲುಗಳು ನೇರ ಪ್ರಸಾರ ಮಾಡಿದವು. ಆಕಾಶದಲ್ಲಿ ಎರಡು ಸುತ್ತು ಬಂದ ಅಟ್ಲಾಂಟಿಸ್ ನಿಗದಿತ ಸಮಯಕ್ಕಿಂತ ಒಂದು ನಿಮಿಷ ಮೊದಲೇ ತಾಣದಲ್ಲಿ ಬಂದು ನಿಂತಿತು. ಎಲ್ಲ ಗಗನಯಾತ್ರಿಗಳು ಸುರಕ್ಷಿತವಾಗಿರುವ ಸಂದೇಶ ನೌಕೆಯಿಂದ ಬಂತು. ಇದಕ್ಕೂ ಮುನ್ನ ಫ್ಲಾರಿಡಾದಲ್ಲಿಯೇ ಗಗನ ನೌಕೆಯನ್ನು ಇಳಿಸುವ ಪ್ರಯತ್ನವನ್ನು ನಾಸಾ ಕೈಬಿಟ್ಟಿತ್ತು. ಬದಲಿಗೆ ಕ್ಯಾಲಿಫೋರ್ನಿಯಾದಲ್ಲಿ ಈದಿನ ಬೆಳಗಿನ 1.20ಕ್ಕೆ ಇಳಿಸಲು ಅನುಮತಿ ನೀಡಿತು. ಫ್ಲಾರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದ ಸುತ್ತಲೂ ಕಾರ್ಮೋಡ ಕವಿದದ್ದರಿಂದ ಹಾಗೂ ಗುಡುಗಿನಿಂದ ಕೂಡಿದ ಬಿರುಗಾಳಿ ಬೀಸುವ ಸಾಧ್ಯತೆ ಇದ್ದುದರಿಂದ ಹಿಂದಿನ ದಿನ ಮಧ್ಯರಾತ್ರಿ 2 ಬಾರಿ ಭೂಸ್ಪರ್ಶ ಮುಂದೂಡಲಾಗಿತ್ತು. ಆ ನಂತರ ಕಮಾಂಡರ್ ಫ್ರೆಡರಿಕ್ ಸ್ಟ್ರಕೋವ್ ಎಡ್ವರ್ಡ್ ವಾಯುನೆಲೆಯಲ್ಲಿ ಶಟ್ಲ್ ನೌಕೆ ಇಳಿಯುವಂತೆಯೂ ನೌಕೆಯ ಕಕ್ಷೆಯನ್ನು ಸಿದ್ಧಪಡಿಸಿದರು. ಭೂಮಿಯ ವಾತಾವರಣ ಪ್ರವೇಶಿಸುವಾಗಿನ ಅಸಾಧ್ಯ ಉಷ್ಣಾಂಶ ತಡೆದುಕೊಳ್ಳಲು ಸಾಧ್ಯವಾಗುವಂತೆ ನೌಕೆಯ ಹೊರಮೈಯ್ಲಲಿ ಸಾವಿರಾರು ಸಂಖ್ಯೆಯಲ್ಲಿ ಅಳವಡಿಸಿರುವ ಸೆರಾಮಿಕ್ ಹೆಂಚುಗಳು ಹಾಳಾಗುವ ಸಾಧ್ಯತೆಯಿರುವುದರಿಂದ ಮಳೆಯ್ಲಲಿ ನೌಕೆ ಭೂಸ್ಪರ್ಶ ಮಾಡುವಂತಿರಲ್ಲಿಲ. ಆದರೂ ಹಿಂದಿನ ದಿನ ಮಧ್ಯರಾತ್ರಿ ಫ್ಲಾರಿಡಾದಲ್ಲೇ ನೌಕೆ ಇಳಿಸಲು ನಾಸಾ ಎರಡು ಬಾರಿ ಯತ್ನಿಸಿತ್ತು. ಈ ಪೈಕಿ ರಾತ್ರಿ 11.48ರ ಮೊದಲ ಯತ್ನ ಕೈಬಿಡಲಾಯಿತು. ಹವಾಮಾನ ಕೈಕೊಟ್ಟು ಈ ಪ್ರಯತ್ನಗಳು ವಿಫಲವಾದ ಬಳಿಕ ಕ್ಯಾಲಿಫೋರ್ನಿಯಾದ ಎಡ್ವರ್ಡ್ ವಾಯುನೆಲೆಯಲ್ಲಿ ಅಟ್ಲಾಂಟಿಸ್ ಇಳಿಸಲು ನಾಸಾ ಅನುಮತಿ ನೀಡಿತ್ತು. ಇಷ್ಟಾದ ಬಳಿಕ ಅಟ್ಲಾಂಟಿಸ್ ಕಮಾಂಡರ್ ಫ್ರೆಡರಿಕ್ ಸ್ಟ್ರಕೋವ್ ಮತ್ತು ಪೈಲಟ್ ಲೀ ಅವರು ಕಕ್ಷೆಯಿಂದ ಗಗನ ನೌಕೆಯನ್ನು ಭೂಮಿಯತ್ತ ತಿರುಗಿಸುವ ಸಾಧನ ಚಾಲು ಮಾಡಿದರು. ಅಟ್ಲಾಂಟಿಸ್ ಭೂಸ್ಪರ್ಶದ ಸುದ್ದಿ ಕೇಳಲು ವಿಶ್ವದಾದ್ಯಂತ ಕಾತರರಾಗಿದ್ದ ಜನ, ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಸೇರಿದಂತೆ ನೌಕೆಯಲ್ಲಿನ 7ಗಗನಯಾತ್ರಿಗಳ ಸುರಕ್ಷತೆಗಾಗಿ ಪ್ರಾರ್ಥಿಸಿದ್ದರು. ಈ ಗಗನಯಾತ್ರೆ ಕಾಲದಲ್ಲಿ ಸುನೀತಾ ವಿಲಿಯಮ್ಸ್ ಅವರು 195 ದಿನಗಳ ಕಾಲ ಬಾಹ್ಯಾಕಾಶದಲ್ಲಿದ್ದು ವಿಶ್ವದಾಖಲೆ ಸ್ಥಾಪಿಸಿದರು. 1996ರಲ್ಲಿ ರಷ್ಯಾ ಗಗನಯಾತ್ರಿ ಶಾನನ್ ಲುಸಿಡ್ 188 ದಿನಗಳ ಕಾಲ ಬಾಹ್ಯಾಕಾಶದಲ್ಲಿದ್ದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದು ಸುನಿತಾ ಅವರ ಮೊದಲ ಗಗನಯಾತ್ರೆಯಾಗಿದ್ದರೂ ನಾಲ್ಕು ಬಾರಿ ಬಾಹ್ಯಾಕಾಶದಲ್ಲಿ ನಡಿಗೆ ನಡೆಸಿದ ಅನುಭವಿ ಎಂಬ ಹೆಸರನ್ನೂ ಗಳಿಸಿಕೊಂಡರು.

2007: ರಾಷ್ಟ್ರಪತಿ ಸ್ಥಾನಕ್ಕೆ ಪುನಃ ಸ್ಪರ್ಧಿಸದಿರಲು ರಾಷ್ಟ್ರಪತಿ ಅಬ್ದುಲ್ ಕಲಾಂ ಕೊನೆಗೂ ನಿರ್ಧರಿಸಿದರು. ಇದರಿಂದಾಗಿ ಈ ಕುರಿತ ಅನುಮಾನಗಳಿಗೆಲ್ಲ ತೆರೆ ಬಿದ್ದಂತಾಯಿತು. ಈ ಬೆಳವಣಿಗೆಯಿಂದಾಗಿ ಎನ್ ಡಿಎ ಮತ್ತು ಯುಎನ್ ಪಿಎ (ತೃತೀಯ ರಂಗ) ತಾತ್ಕಾಲಿಕ ಹೊಂದಾಣಿಕೆಯೂ ಕೊನೆಗೊಂಡಿತು. ಗೆಲುವು ನಿಶ್ಚಿತವಾದರೆ ಮಾತ್ರ ಸ್ಪರ್ಧಿಸುವುದಾಗಿ ಸೂಚನೆ ನೀಡಿದ್ದ ಕಲಾಂ, ತಾವು ಎರಡನೇ ಬಾರಿ ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ ಎಂದು ಈದಿನ ಪ್ರಕಟಿಸಿದರು. ಈ ಹಿನ್ನೆಲೆಯಲ್ಲಿ ಎನ್ ಡಿಎ ಸ್ವತಂತ್ರ ಅಭ್ಯರ್ಥಿ ಭೈರೋನ್ ಸಿಂಗ್ ಶೆಖಾವತ್ ಅವರನ್ನು ಬೆಂಬಲಿಸುವುದಾಗಿ ತಿಳಿಸಿತು.

2007: ಎರಡು ವರ್ಷಗಳ ಹಿಂದೆ ನಡೆದ ತನ್ನ ಪತಿಯ ಹತ್ಯೆಯಲ್ಲಿ ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಿದ ಪ್ರತಿಭಾ ಪಾಟೀಲ್ ಸಹೋದರನ ಕೈವಾಡ ಇರುವುದಾಗಿ ಮಹಾರಾಷ್ಟ್ರದ ಜಲಗಾಂವ್ ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ ದಿವಂಗತ ವಿ.ಜಿ. ಪಾಟೀಲ್ ಅವರ ವಿಧವಾ ಪತ್ನಿ ಪ್ರೊ. ರಜನಿ ಪಾಟೀಲ್ ಆರೋಪಿಸಿದರು. ಆದರೆ ಕಾಂಗ್ರೆಸ್ ಪಕ್ಷ ಈ ಆರೋಪವನ್ನು ಖಡಾಖಂಡಿತವಾಗಿ ನಿರಾಕರಿಸಿತು. ಶಿರೋಮಣಿ ಅಕಾಲಿದಳ ಮುಖಂಡ ಸುಖ್ ದೇವ್ ಸಿಂಗ್ ಧಿಂಡ್ಸಾ ಅವರ ನಿವಾಸದಲ್ಲಿ ಬಿಜೆಪಿ ನಾಯಕರಾದ ಎ.ಬಿ. ವಾಜಪೇಯಿ ಮತ್ತು ಎಲ್.ಕೆ. ಅಡ್ವಾಣಿ ಅವರಿಗೆ ಆಪ್ತರಾದ ಸುಧೀಂದ್ರ ಕುಲಕರ್ಣಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಜಲಗಾಂವ್ ಕಾಲೇಜಿನ ಮರಾಠಿ ಪ್ರೊಫೆಸರ್ ರಜನಿ ಮಾತನಾಡಿದರು. ತಮ್ಮ ಪತಿಯ ಹತ್ಯೆಗೆ ಪ್ರತಿಭಾ ಸಹೋದರ ಜಿ.ಎನ್. ಪಾಟೀಲ್ ಮತ್ತು ಇನ್ನೊಬ್ಬ ಕಾಂಗ್ರೆಸ್ ಮುಖಂಡ ಸಂಚು ರೂಪಿಸಿದರು. ಅವರನ್ನು ಪ್ರತಿಭಾ ರಕ್ಷಿಸುತ್ತಿದ್ದಾರೆ. 2005ರ ಜಲಗಾಂವ್ ಜಿಲ್ಲಾ ಕಾಂಗ್ರೆಸ್ ಚುನಾವಣೆಯಲ್ಲಿ ಸೋಲನುಭವಿಸಿದ ಪ್ರತಿಭಾ ಅವರ ಸೋದರನ ಬೆಂಬಲಿಗರು ತನ್ನ ಪತಿಯನ್ನು ಹತ್ಯೆ ಮಾಡಿದ್ದಾರೆ. ಈ ಬಗೆಗಿನ ತನಿಖೆಯ ಮೇಲೆ ರಾಜಸ್ಥಾನದ ಮಾಜಿ ರಾಜ್ಯಪಾಲರೂ ಆದ ಪ್ರತಿಭಾ ಪ್ರಭಾವ ಬೀರಿ, ತಮ್ಮ ಸೋದರನಿಗೆ ರಕ್ಷಣೆ ನೀಡಿದ್ದಾರೆ. ಆದ್ದರಿಂದ ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಸಿಬಿಐ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಗೆ ಸಲ್ಲಿಸಲಾದ ದೂರಿನ ಪ್ರತಿಯನ್ನು ಮಾಧ್ಯಮಗಳಿಗೆ ಅವರು ಬಿಡುಗಡೆ ಮಾಡಿದರು.

2007: ಕರ್ನಾಟಕದ ವಿವಾದಾತ್ಮಕ ನಂದಗುಡಿ ವಿಶೇಷ ಆರ್ಥಿಕ ವಲಯ (ಎಸ್ ಇಜೆಡ್) ಸ್ಥಾಪನೆಗೆ ಅನುಮೋದನೆ ನೀಡುವುದನ್ನು ವಿಶೇಷ ಆರ್ಥಿಕ ವಲಯಕ್ಕೆ ಸಂಬಂಧಪಟ್ಟ ಮಂಡಳಿ ಮುಂದೂಡಿತು. ನವದೆಹಲಿಯಲ್ಲಿ ಸಭೆ ಸೇರಿದ್ದ ವಿಶೇಷ ಆರ್ಥಿಕ ವಲಯ ಮಂಜೂರಾತಿ ಮಂಡಳಿ (ಬಿಒಎ) ಈ ನಿರ್ಧಾರ ಕೈಗೊಂಡಿತು. ನಂದಗುಡಿ ಎಸ್ ಇಜೆಡ್ ಯೋಜನೆ ಮಂಜೂರಾತಿ ಮಂಡಳಿಯ ಪರಿಶೀಲನೆಗೆ ಬಂದರೂ ಈ ಕುರಿತಾದ ತೀರ್ಮಾನವನ್ನು ಮುಂದೂಡಲಾಯಿತು ಎಂದು ವಾಣಿಜ್ಯ ಇಲಾಖೆಯ ವಿಶೇಷ ಆರ್ಥಿಕ ವಲಯಕ್ಕೆ ಸಂಬಂಧಪಟ್ಟ ನಿರ್ದೇಶಕ ಯೋಗೇಂದ್ರ ಗಾರ್ಗ್ ತಿಳಿಸಿದರು. ಒಟ್ಟು 9 ಪ್ರಸ್ತಾವಗಳಿಗೆ ಮಂಡಳಿ ತಾತ್ವಿಕ ಒಪ್ಪಿಗೆ ನೀಡಿದೆ.

2007: ಬೆಂಗಳೂರು ಮೂಲದ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಾದ ಭಾರತ್ ಎಲೆಕ್ಟ್ರಾನಿಕ್ಸ್ ಲಿ.(ಬಿಇಎಲ್) ಹಾಗೂ ಹಿಂದೂಸ್ತಾನ್ ಏರೊನಾಟಿಕ್ಸ್ ಲಿ. (ಎಚ್ ಎಎಲ್)ಗೆ ಪ್ರತಿಷ್ಠಿತ ನವರತ್ನ ಉದ್ದಿಮೆಗಳ ಸ್ಥಾನಮಾನ ನೀಡಲಾಯಿತು. ಈ ಎರಡೂ ಸಂಸ್ಥೆಗಳು ಹಾಗೂ ದೆಹಲಿ ಮೂಲದ ಪವರ್ ಫೈನಾನ್ಸ್ ಕಾರ್ಪೊರೇಷವನ್ ಗಳಿಗೆ ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಈ ಸಂಬಂಧ ಅಧಿಕೃತ ಪತ್ರ ನೀಡಲಾಯಿತು. ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಮತ್ತು ಬೃಹತ್ ಕೈಗಾರಿಕಾ ಸಚಿವ ಸಂತೋಷ ಮೋಹನ್ ದೇವ್ ಸಮಾರಂಭದಲ್ಲಿ ಭಾಗವಹಿಸಿದ್ದರು. ಇದರೊಂದಿಗೆ ನವರತ್ನ ಸ್ಥಾನಮಾನ ಪಡೆದ ಕಂಪೆನಿಗಳ ಸಂಖ್ಯೆ 12ಕ್ಕೆ ಏರಿತು.

2007: ವರ್ಜೀನಿಯಾದಲ್ಲಿ ನಡೆದ ಆಕರ್ಷಣೀಯ ಸಮಾರಂಭದಲ್ಲಿ ಭಾರತೀಯ ನೌಕಾಪಡೆಗೆ ಯುದ್ಧವಿಮಾನಗಳನ್ನು ಇಳಿಸಬಹುದಾದ ಬೃಹತ್ ನೌಕೆ `ಐಎನ್ಎಸ್ ಜಲಾಶ್ವ'ವನ್ನು ಅಧಿಕೃತವಾಗಿ ಸೇರ್ಪಡೆ ಮಾಡಲಾಯಿತು. ಭಾರತೀಯ ನೌಕಾಪಡೆಯಲ್ಲಿ ಮೊದಲ ಬಾರಿ ಇಂತಹ ನೌಕೆ ಅಳವಡಿಸಲಾಗಿದ್ದು, ಅಮೆರಿಕದಿಂದ ಇದನ್ನು ಪಡೆಯಲಾಗಿದೆ. ಸೈನ್ಯ ತುಕಡಿಗಳು, ಟ್ಯಾಂಕರುಗಳು ಹಾಗೂ ಅಸ್ತ್ರಗಳನ್ನು ದೂರ ಪ್ರದೇಶಗಳಿಗೆ ಸಾಗಿಸುವಲ್ಲಿ ನೌಕಾಪಡೆಯ ಸಾಮರ್ಥ್ಯವನ್ನು ಇದು ಹೆಚ್ಚಿಸಿತು. ಈ ಮುನ್ನ ಅಮೆರಿಕ ನೌಕಾಪಡೆಯಲ್ಲಿ `ಟ್ರೆಂಟನ್' ಹೆಸರಿನಿಂದ ಪ್ರಸಿದ್ಧವಾದ ನೌಕೆ 2006ರಲ್ಲಿ ಲೆಬನಾನಿನಿಂದ ಅಮೆರಿಕ ಪ್ರಜೆಗಳನ್ನು ತಾಯ್ನಾಡಿಗೆ ಸಾಗಿಸಿತ್ತು. ವರ್ಷದ ಹಿಂದೆ ಜುಲೈ ತಿಂಗಳಲ್ಲಿ ಭಾರತ ಸರ್ಕಾರ `ಟ್ರೆಂಟನ್' ಖರೀದಿಸಲು ನಿರ್ಧರಿಸಿತ್ತು. ಆನಂತರ ನೌಕಾಪಡೆಯ 330 ಸಿಬ್ಬಂದಿಯನ್ನು ತರಬೇತಿಗಾಗಿ ಅಮೆರಿಕಕ್ಕೆ ಕಳುಹಿಸಲಾಯಿತು. ಜನವರಿ 17ರಂದು ಭಾರತೀಯ ಸೇನೆಗೆ ಯುದ್ಧ ನೌಕೆ ಹಸ್ತಾಂತರಿಸಲಾಯಿತು. ಭಾರತ- ಅಮೆರಿಕ ಬಾಂಧವ್ಯದಲ್ಲೂ ಇದು ಮಹತ್ವದ ಮೈಲಿಗಲ್ಲು ಎಂದು ಪರಿಗಣಿಸಲಾಯಿತು.

2007: ಭಾರತೀಯ ಮೂಲದ ಲೇಖಕ ಸಲ್ಮಾನ್ ರಶ್ದಿ ಅವರ ತಲೆ ತಂದುಕೊಟ್ಟರೆ 10 ದಶಲಕ್ಷ ರೂಪಾಯಿ ನೀಡುವುದಾಗಿ ಪಾಕಿಸ್ತಾನದ ವರ್ತಕರ ಸಂಘಟನೆ ಪ್ರಕಟಿಸಿತು. ಬ್ರಿಟನ್ ಸರ್ಕಾರ ರಶ್ದಿಗೆ ನೈಟ್ ಹುಡ್ ಪ್ರಶಸ್ತಿ ನೀಡಿರುವುದರಿಂದ ಮುಸ್ಲಿಂ ಜಗತ್ತು ಸಿಟ್ಟಿಗೆದ್ದಿತು. ಇದೇ ವೇಳೆಯಲ್ಲಿ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಮುಖ್ಯಮಂತ್ರಿ ಅರ್ಬಾಬ್ ಗುಲಾಂ ರಹೀಮ್ ಅವರು ತಮ್ಮ ಹಿರಿಯರಿಗೆ ನೀಡಿದ್ದ ನೈಟ್ ಹುಡ್ ಪ್ರಶಸ್ತಿಯನ್ನು ಹಿಂತಿರುಗಿಸಿದರು. ಬ್ರಿಟನ್ ಸರ್ಕಾರ ರಶ್ದಿಗೆ ನೈಟ್ಹುಡ್ ಪ್ರಶಸ್ತಿ ನೀಡಿರುವುದನ್ನು ವಿರೋಧಿಸುವ ಸಲುವಾಗಿ ತಮ್ಮ ತಾತ ಮತ್ತು ಚಿಕ್ಕಪ್ಪನಿಗೆ 1937ರಲ್ಲಿ ನೀಡಲಾಗಿದ್ದ ಪ್ರಶಸ್ತಿಯನ್ನು ಹಿಂತಿರುಗಿಸುವುದಾಗಿ ಅವರು ಪ್ರಕಟಿಸಿದರು.

2006: ಒಂಬತ್ತು ವರ್ಷಗಳ ಹಿಂದೆ ನಡೆದ ಅರಣ್ಯ ಸಿಬ್ಬಂದಿ ಅಪಹರಣ ಆರೋಪ ಎದುರಿಸುತ್ತಿದ್ದ ನರಹಂತಕ ವೀರಪ್ಪನ್ ನ ಐವರು ಸಹಚರರಿಗೆ ಚಾಮರಾಜನಗರದ ಶೀಘ್ರಗತಿ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತು. ಸತ್ಯಮಂಗಲ ತಾಲ್ಲೂಕಿನ ಕಲ್ಮಂಡಿಪುರ ತುಪಾಕಿ ಸಿದ್ದ, ಆತನ ಪತ್ನಿ ಕುಂಬಿ ಉರುಫ್ ಚಿಕ್ಕಮಾದಿ ಹಾಗೂ ಹಂದಿಯೂರಿನ ತಂಗರಾಜು, ಅನ್ಬುರಾಜು ಮತ್ತು ಅಪ್ಪುಸ್ವಾಮಿ ಅವರಿಗೆ ನ್ಯಾಯಾಧೀಶ ವಿ.ಜಿ. ಬೋಪಯ್ಯ ಜೀವಾವಧಿ ಶಿಕ್ಷೆ ವಿಧಿಸಿದರು.

2006: ಟಾಟಾ ಸಮೂಹ ಕಂಪೆನಿಗಳ ಅಧ್ಯಕ್ಷ ರತನ್ ಟಾಟಾ ಮತ್ತು ಹನಿವೆಲ್ ಸಂಸ್ಥೆಯ ಅಂತಾರಾಷ್ಟ್ರೀಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡೇವಿಡ್ ಎಂ. ಕಾಟೆ ಅವರಿಗೆ ವಾಷಿಂಗ್ಟನ್ನಿನಲ್ಲಿ ನಡೆದ ಅಮೆರಿಕ-ಭಾರತ ವ್ಯಾಪಾರ ಮಂಡಳಿ ಸಭೆಯಲ್ಲಿ `ನಾಯಕತ್ವ ಪ್ರಶಸ್ತಿ' ಪ್ರದಾನ ಮಾಡಲಾಯಿತು. ಭಾರತ-ಅಮೆರಿಕ ವಾಣಿಜ್ಯ ಸಂಬಂಧ ಬಲಪಡಿಸಲು ಅಮೆರಿಕ ಹನಿವೆಲ್ ಕಂಪನಿ ನೀಡಿದ ಕೊಡುಗೆಯನ್ನು ಪರಿಗಣಿಸಿ ಮತ್ತು ಬಹುರಾಷ್ಟ್ರೀಯ ವ್ಯಾಪಾರ ಸಂಘಟನೆಗೆ ಟಾಟಾ ಸಮೂಹ ಕಂಪನಿಗಳು ಸಲ್ಲಿಸಿರುವ ಸೇವೆಯನ್ನು ಗೌರವಿಸಿ ಈ ಪ್ರಶಸ್ತಿ ನೀಡಲಾಯಿತು.

1993: ಗ್ರಾಹಕ ಸಂರಕ್ಷಣಾ ಕಾಯ್ದೆ ತಿದ್ದುಪಡಿಗೆ ಸುಗ್ರೀವಾಜ್ಞೆ ಹೊರಡಿಸಲಾಯಿತು.

1982: ಮುಂಬೈಯ ಸಹಾರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈದಿನ ಏರ್ ಇಂಡಿಯಾ ಬೋಯಿಂಗ್ ವಿಮಾನವೊಂದು ಅಪಘಾತಕ್ಕೆ ಈಡಾಗಿ ಕನಿಷ್ಠ 19 ಜನ ಮೃತರಾದರು.

1981: ದೀರ್ಘ ವೃತ್ತಾಕಾರದಲ್ಲಿ ಭೂಮಿಯನ್ನು ಸುತ್ತುತ್ತಿದ್ದ ಆಪಲ್ ಉಪಗ್ರಹಕ್ಕೆ ಚಾಲನೆ ನೀಡುವ ಮೂಲಕ ಈದಿನ ಮುಂಜಾನೆ 5.30ಕ್ಕೆ ಅದನ್ನು ಭೂ ಸ್ಥಿರ ಕಕ್ಷೆಗೆ ವರ್ಗಾಯಿಸುವಲ್ಲಿ ಭಾರತೀಯ ವಿಜ್ಞಾನಿಗಳು ಯಶಸ್ವಿಯಾದರು.

1959: ಖ್ಯಾತ ಪತ್ರಿಕೋದ್ಯಮಿ ಕಸ್ತೂರಿ ಶ್ರೀನಿವಾಸ ಅಯ್ಯಂಗಾರ್ ನಿಧನ.

1953: ಸಾಹಿತಿ ಕೆ.ಆರ್. ಸಂಧ್ಯಾರೆಡ್ಡಿ ಜನನ.

1950: ಚುಕ್ಕಿ ಚಿತ್ರಕಲೆ ಮತ್ತು ಸಾಹಿತ್ಯ ಎರಡೂ ಪ್ರಕಾರಗಳಲ್ಲಿ ಪರಿಣತಿ ಹೊಂದಿರುವ ಮೋಹನ್ ವೆರ್ಣೇಕರ್ ಅವರು ವಾಸುದೇವ ಶೇಟ್- ತುಳಸೀಬಾಯಿ ದಂಪತಿಯ ಮಗನಾಗಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಹೊಸ ಪಟ್ಟಣದಲ್ಲಿ ಜನಿಸಿದರು.

1944: ಬ್ರಿಟಿಷರ 14ನೇ ಸೇನೆಯಿಂದ ಅಸ್ಸಾಂ ಮತ್ತು ಇಂಫಾಲ ಬಿಡುಗಡೆ ಪಡೆದವು.

1941: ಜರ್ಮನಿಯು `ಆಪರೇಷನ್ ಬಾರ್ಬರೋಸಾ' ಕಾರ್ಯಾಚರಣೆಯ ಅಂಗವಾಗಿ ರಷ್ಯದ ಮೇಲೆ ಆಕ್ರಮಣ ಮಾಡಿತು. 1941ರ ಡಿಸೆಂಬರ್ ವೇಳೆಗೆ ಜರ್ಮನ್ನರು ಮಾಸ್ಕೋದ ಸಮೀಪ ಬಂದಿದ್ದರು. ಆದರೆ ನೂರು ವರ್ಷಗಳಿಗೂ ಹಿಂದೆ ನೆಪೋಲಿಯನ್ ಪಡೆಗೆ ಆದಂತೆ ತೀವ್ರ ಚಳಿಯನ್ನು ಎದುರಿಸಲಾಗದೆ ಹಿಮ್ಮೆಟ್ಟಬೇಕಾಯಿತು. ಇದೇ ಸಂದರ್ಭವನ್ನು ಬಳಸಿಕೊಂಡ ರಷ್ಯನ್ನರು ಪ್ರತಿದಾಳಿ ನಡೆಸಿ 1942ರ ವೇಳೆಗೆ ಜರ್ಮನ್ನರನ್ನು ಪಶ್ಚಿಮದತ್ತ ಅಟ್ಟಿದರು.

1940: ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು ಈದಿನ ಫಾರ್ವರ್ಡ್ ಬ್ಲಾಕ್ ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿದರು. ಕಾಂಗ್ರೆಸ್ ಮುಖಂಡರ ಜೊತೆಗಿನ ಭಿನ್ನಾಭಿಪ್ರಾಯ ಅವರ ಈ ತೀರ್ಮಾನಕ್ಕೆ ಕಾರಣವಾಗಿತ್ತು. ಫಾರ್ವರ್ಡ್ ಬ್ಲಾಕಿನ ರೂಪುರೇಷೆಯನ್ನು ಅವರು 1939ರಲ್ಲೇ ಸಿದ್ಧಪಡಿಸಿದ್ದರು. ಸಂಘಟನೆಯ ಮೊದಲ ಸಮ್ಮೇಳನ ಮುಂಬೈಯಲ್ಲಿ ನಡೆಯಿತು.

1936: ತತ್ವಶಾಸ್ತ್ರ ವಿದ್ಯಾಂಸ, ಸಂಗೀತಾಸಕ್ತ, ಸಾಹಿತಿ ಡಾ. ಗೋವಿಂದರಾವ್ ಅ. ಜಾಲಿಹಾಳ ಅವರು ಅನಂತರಾವ್ ಜಾಲಿಹಾಳ- ರಾಧಾಬಾಯಿ ದಂಪತಿಯ ಪುತ್ರನಾಗಿ ಗದಗದಲ್ಲಿ ಜನಿಸಿದರು.

1898: ಹತ್ತೊಂಬತ್ತನೇ ಶತಮಾನದ ಕೊನೆಯ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸಿತು.

1897: ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ದಾಮೋದರ ಹರಿ ಚಾಪೇಕರ್ ಅವರು ಪೂನಾದಲ್ಲಿ (ಈಗಿನ ಪುಣೆ) ಬ್ರಿಟಿಷ್ ಅಧಿಕಾರಿಗಳಾದ ರ್ಯಾಂಡ್ ಮತ್ತು ಐರೆಸ್ಟ್ ಅವರನ್ನು ಗುಂಡಿಟ್ಟು ಕೊಂದರು. ಚಾಪೇಕರ್ ಮತ್ತು ಅವರ ಸಹೋದರ ಬಾಲಕೃಷ್ಣ ಅವರನ್ನು ಈ ಕೃತ್ಯಕ್ಕಾಗಿ ಯರವಾಡ ಸೆಂಟ್ರಲ್ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು. ಇನ್ನೊಬ್ಬ ಸಹೋದರ ವಾಸುದೇವ್ ಅವರನ್ನು ಅವರ ಬಗ್ಗೆ ಮಾಹಿತಿ ನೀಡಿದ ದ್ರೋಹಿಯನ್ನು ಕೊಂದ ಕಾರಣಕ್ಕಾಗಿ ಗಲ್ಲಿಗೇರಿಸಲಾಯಿತು.

1805: ಜೀಸೆಪ್ ಮ್ಯಾಝಿನಿ (1805-72) ಜನ್ಮದಿನ. ಇಟಲಿಯ ಕ್ರಾಂತಿಕಾರಿಯಾದ ಈತ ಇಟಲಿಯ ಏಕೀಕರಣಕ್ಕಾಗಿ ನಡೆದ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ.

1757: ಜಾರ್ಜ್ ವ್ಯಾಂಕೋವರ್ (1757-98) ಜನ್ಮದಿನ. ಇಂಗ್ಲಿಷ್ ನಾವಿಕನಾದ ಈತನ ಹೆಸರನ್ನೇ ಮುಂದೆ ವ್ಯಾಂಕೋವರ್ ದ್ವೀಪಕ್ಕೆ ಇಡಲಾಯಿತು.

1633: ಭೂಮಿಯ ಚಲನೆಗೆ ಸಂಬಂಧಿಸಿದಂತೆ ಕೊಪರ್ನಿಕನ್ ಸಿದ್ಧಾಂತದಲ್ಲಿದ್ದ ತನ್ನ ನಂಬಿಕೆಗಳನ್ನು ಬದಲಾಯಿಸಿಕೊಂಡು ರೋಮನ್ ಕ್ಯಾಥೋಲಿಕ್ ವಿಚಾರಣಾಧಿಕಾರಿಗಳ ಮುಂದೆ ತಪ್ಪೊಪ್ಪಿಕೊಳ್ಳುವಂತೆ ಗೆಲಿಲಿಯೋನನ್ನು ಬಲಾತ್ಕಾರಪಡಿಸಲಾಯಿತು. ನಂತರ ಆತನಿಗೆ ಜೀವಾವಧಿ ಶಿಕ್ಷೆ ನೀಡಿ ಗೃಹಬಂಧನದ್ಲಲಿ ಇರಿಸಲಾಯಿತು. 1992ರಲ್ಲಿ ಆತನ ಸಾವಿನ 350 ವರ್ಷಗಳ ಬಳಿಕ ಈ ದಿನ ಗೆಲಿಲಿಯೋ ಜೊತೆಗಿನ ತನ್ನ ವರ್ತನೆಯಲ್ಲಿ ತಪ್ಪಾಗಿತ್ತು ಎಂದು ರೋಮನ್ ಕ್ಯಾಥೋಲಿಕ್ ಚರ್ಚ್ ಅಧಿಕೃತವಾಗಿ ಒಪ್ಪಿಕೊಂಡಿತು.

ಇಂದಿನ ಇತಿಹಾಸ History Today ಜೂನ್ 21

ಇಂದಿನ ಇತಿಹಾಸ

ಜೂನ್ 21

ನಕಲಿ ಛಾಪಾ ಕಾಗದ ಹಗರಣದ ರೂವಾರಿ ಅಬ್ದುಲ್ ಕರೀಂ ಲಾಲಾ ತೆಲಗಿ ಹಾಗೂ ಆತನಿಗೆ ನಕಲಿ ವೈದ್ಯಕೀಯ ಪ್ರಮಾಣ ಪತ್ರ ನೀಡಲು ಸಹಕರಿಸಿದ ಬೆಂಗಳೂರು ನಗರದ ಇಬ್ಬರು ವೈದ್ಯರಿಗೆ ತಲಾ 7 ವರ್ಷಗಳ ಕಠಿಣ ಸಜೆ ವಿಧಿಸಿ, ನಗರ ವಿಶೇಷ ನ್ಯಾಯಾಲಯ ಆದೇಶಿಸಿತು.

2007: ನಕಲಿ ಛಾಪಾ ಕಾಗದ ಹಗರಣದ ರೂವಾರಿ ಅಬ್ದುಲ್ ಕರೀಂ ಲಾಲಾ ತೆಲಗಿ ಹಾಗೂ ಆತನಿಗೆ ನಕಲಿ ವೈದ್ಯಕೀಯ ಪ್ರಮಾಣ ಪತ್ರ ನೀಡಲು ಸಹಕರಿಸಿದ ಬೆಂಗಳೂರು ನಗರದ ಇಬ್ಬರು ವೈದ್ಯರಿಗೆ ತಲಾ 7 ವರ್ಷಗಳ ಕಠಿಣ ಸಜೆ ವಿಧಿಸಿ, ನಗರ ವಿಶೇಷ ನ್ಯಾಯಾಲಯ ಆದೇಶಿಸಿತು. ತೆಲಗಿಗೆ 25 ಲಕ್ಷ ರೂಪಾಯಿ ದಂಡ ಹಾಗೂ ನಗರದ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರಾದ ಡಾ. ಜ್ಞಾನೇಂದ್ರಪ್ಪ ಹಾಗೂ ಡಾ. ಕೆ.ಎಂ.ಚೆನ್ನಕೇಶವ ಅವರಿಗೆ ನ್ಯಾಯಾಧೀಶ ವಿಶ್ವನಾಥ ವಿರೂಪಾಕ್ಷ ಅಂಗಡಿ ಅವರು ತಲಾ 14 ಲಕ್ಷ ರೂ. ದಂಡ ವಿಧಿಸಿದರು. ದಂಡ ನೀಡಲು ತಪ್ಪಿದಲ್ಲಿ ಎರಡು ವರ್ಷಗಳ ಹೆಚ್ಚುವರಿ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದೂ ಅವರು ಹೇಳಿದರು. ತೆಲಗಿಗೆ ಈಗಾಗಲೇ 3 ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದು, ಭ್ರಷ್ಟಾಚಾರ ನಿರ್ಮೂಲನ ಕಾಯ್ದೆ ಅಡಿ ಶಿಕ್ಷೆಯಾಗಿರುವ ಪ್ರಕರಣ ಇದೇ ಮೊದಲನೆಯದು. ಈತ ಜೈಲಿನಲ್ಲಿದ್ದಾಗ ನಕಲಿ ವೈದ್ಯಕೀಯ ಪ್ರಮಾಣ ಪತ್ರ ನೀಡಿರುವ ತಪ್ಪಿಗಾಗಿ ವೈದ್ಯರಿಬ್ಬರೂ ಶಿಕ್ಷೆಗೆ ಒಳಗಾದರು. ಈ ಪ್ರಕರಣದಲ್ಲಿ ಪುಣೆಯ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ತೆಲಗಿಯ ವಿಚಾರಣೆ ನಡೆಸಲಾಗಿತ್ತು.

2007: ರಾಷ್ಟ್ರಪತಿ ಸ್ಥಾನಕ್ಕೆ ಯುಪಿಎಯ ಅಭ್ಯರ್ಥಿಯಾದ ಪ್ರತಿಭಾ ಪಾಟೀಲ್ ರಾಜಸ್ಥಾನದ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿದರು. ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿ ಭವನದಲ್ಲಿ ಈದಿನ ಮಧ್ಯಾಹ್ನ 3.45ಕ್ಕೆ ಭೇಟಿಯಾದ ಪ್ರತಿಭಾ ಅವರು ರಾಜೀನಾಮೆ ಪತ ಸಲ್ಲಿಸಿದರು. 73ರ ಹರೆಯದ ಪ್ರತಿಭಾ 2004 ರಿಂದ ರಾಜಸ್ಥಾನದ ರಾಜ್ಯಪಾಲರಾಗಿ ಅಧಿಕಾರದಲ್ಲಿದ್ದರು.

2007: ವಿಶ್ವದಾಖಲೆ ಸ್ಥಾಪಿಸುವ ನೆಪದಲ್ಲಿ 15ರ ಹರೆಯದ ಬಾಲಕನೊಬ್ಬ ಸಿಜೇರಿಯನ್ ಶಸ್ತ್ರಕ್ರಿಯೆ ನಡೆಸಿದ ಘಟನೆಯ ಬಗ್ಗೆ ತನಿಖೆ ನಡೆಸುವಂತೆ ತಿರುಚಿರಾಪಳ್ಳಿ ಜಿಲ್ಲಾಧಿಕಾರಿ ಅಶೀಶ್ ವಚಾನಿ ಆದೇಶಿಸಿದರು. ಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ವರದಿ ಒಪ್ಪಿಸುವಂತೆ ತಿರುಚ್ಚಿಯ ಕಂದಾಯ ವಿಭಾಗದ ಅಧಿಕಾರಿಗೆ ಜಿಲ್ಲಾಧಿಕಾರಿ ಆಜ್ಞಾಪಿಸಿದರು. `ಘಟನೆ ನಡೆದಿರುವುದು ನಿಜವೆಂದು ಸಾಬೀತಾದರೆ ಇದಕ್ಕೆ ಕಾರಣರಾದ ವೈದ್ಯ ದಂಪತಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ' ಎಂದು ವಚಾನಿ ತಮ್ಮ ಹೇಳಿಕೆಯಲ್ಲಿ ತಿಳಿಸಿದರು. ಗಿನ್ನೆಸ್ ದಾಖಲೆ ಸ್ಥಾಪಿಸುವ ಸಲುವಾಗಿ 10ನೇ ತರಗತಿಯ ವಿದ್ಯಾರ್ಥಿ 15ರ ಹರೆಯದ ಎಂ. ದಿಲೀಪನ್ ರಾಜ್ ತಿರುಚಿರಾಪಳ್ಳಿಯ ಮಥಿ ಹೆರಿಗೆ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರಿಗೆ ಸಿಜೇರಿಯನ್ ಶಸ್ತ್ರಕ್ರಿಯೆ ನಡೆಸಿದ್ದ. ಇದಕ್ಕೆ ವೈದ್ಯರಾಗಿರುವ ತಂದೆ ಮುರುಗೇಶನ್ ಮತ್ತು ಪ್ರಸೂತಿ ತಜ್ಞೆಯಾಗಿರುವ ತಾಯಿ ಎಂ. ಗಾಂಧಿಮತಿ ಮಾರ್ಗದರ್ಶನ ನೀಡಿದ್ದರು. ಭಾರತೀಯ ವೈದ್ಯಕೀಯ ಸಂಘದ (ಐಎಂಎ)ನ ತಮಿಳುನಾಡು ವಿಭಾಗ ಬಾಲಕನ ದುಸ್ಸಾಹಸವನ್ನು ಗಂಭೀರವಾಗಿ ಪರಿಗಣಿಸಿದ ಕಾರಣ ಈ ಘಟನೆ ಹೊರಲೋಕದ ಅರಿವಿಗೆ ಬಂದಿತು.

2007: 1993ರಲ್ಲಿ ಆರೆಸ್ಸೆಸ್ ಮುಖ್ಯ ಕಚೇರಿ ಮೇಲೆ ಬಾಂಬ್ ದಾಳಿ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಯೋಜಿತ ಕೋರ್ಟ್ ಟಾಡಾ ಕಾಯ್ದೆ ಅನ್ವಯ 11 ಮಂದಿಯನ್ನು ತಪ್ಪಿತಸ್ಥರು ಎಂದು ತೀರ್ಪು ನೀಡಿತು. ನಿಷೇಧಿತ ಅಲ್ ಉಮ್ಮಾ ಸಂಘಟನೆಯ ನಾಯಕ ಎಸ್. ಎ. ಪಾಶಾ ಸೇರಿದಂತೆ ನಾಲ್ವರನ್ನು ನ್ಯಾಯಲಯ ಆರೋಪ ಮುಕ್ತ ಗೊಳಿಸಿತು. ಈ ಬಾಂಬ್ ಸ್ಫೋಟ ಪ್ರಕರಣದಲ್ಲಿ 11 ಜನ ಮೃತರಾಗಿದ್ದರು. ನ್ಯಾಯಮೂರ್ತಿ ಟಿ.ರಾಮಸ್ವಾಮಿ ಅವರು ಈ ತೀರ್ಪು ನೀಡಿದರು. ಪ್ರಕರಣದಲ್ಲಿ ಭಾಗಿಯಾದ ಇನ್ನೂ ಏಳು ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಮುಸ್ತಾಕ್ ಅಹ್ಮದ್ ಎನ್ನುವ ವ್ಯಕ್ತಿ ತಲೆಮರೆಸಿಕೊಂಡಿದ್ದಾನೆ. ಘಟನೆಂಯಲ್ಲಿ ಭಾಗಿಯಾಗಿದ್ದ ಐಎಸ್ ಐ ಏಜೆಂಟ್ ಇಮಾಮ್ ಅಲಿ ಮತ್ತು ಜೆಹಾದ್ ಸಮಿತಿ ಸಂಸ್ಥಾಪಕ ಪಳನಿ ಬಾಬಾನನ್ನು ಬೇರೆ ಪ್ರಕರಣದಲ್ಲಿ ಹತ್ಯೆ ಮಾಡಲಾಗಿತ್ತು.

2007: ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ವಿಭಜಿಸಿ ಕ್ರಮವಾಗಿ ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳನ್ನಾಗಿ ರಚಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿತು.. ಹತ್ತು ವರ್ಷಗಳ ಹಿಂದೆ ಆಗಿನ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಏಳು ಹೊಸ ಜಿಲ್ಲೆಗಳನ್ನು ರಚಿಸಿದ್ದರು.

2007: ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಸೇರಿದಂತೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಏಳು ಗಗನಯಾತ್ರಿಗಳನ್ನು ಭೂಮಿಗೆ ಮರಳಿ ಕರೆತರುತ್ತಿದ್ದ ಬಾಹ್ಯಾಕಾಶ ನೌಕೆ ಅಟ್ಲಾಂಟಿಸ್ ನ ಭೂಸ್ಪರ್ಶವನ್ನು ಪ್ರತಿಕೂಲ ಹವಾಮಾನ ಕಾರಣ ಮುಂದೂಡಲಾಯಿತು. ನಿಗದಿತ ವೇಳಾಪಟ್ಟಿಯಂತೆ ಈದಿನ ರಾತ್ರಿ 11.24ರ ಸುಮಾರಿಗೆ (ಭಾರತೀಯ ಕಾಲಮಾನ) ಫ್ಲಾರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿ ಅಂತರಿಕ್ಷ ನೌಕೆ ಇಳಿಯಬೇಕಿತ್ತು. ಆದರೆ, ಫ್ಲಾರಿಡಾದಲ್ಲಿ ಮೋಡ ಕವಿದ ವಾತಾವರಣ, ಗುಡುಗು, ಮಿಂಚು ಹಾಗೂ ಬಿರುಗಾಳಿ ಕಾರಣದಿಂದ ರಾತ್ರಿ ಒಂದು ಗಂಟೆಗೆ ಮುಂದೂಡಲಾಯಿತು. ನಂತರ ಅಂತಿಮವಾಗಿ ಮುಂದೂಡಲಾಯಿತು.

2007: ಕಮ್ಯೂನಿಕೇಷನ್ ಫಾರ್ ಡೆವಲಪ್ ಮೆಂಟ್ ಅಂಡ್ ಲರ್ನಿಂಗ್ ಸಂಸ್ಥೆ ನೀಡುವ ಚರಕ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಗೆ 2006ನೇ ಸಾಲಿನಲ್ಲಿ ರವೀಂದ್ರ ಭಟ್ ಐನಕೈ, ರಾಜಶೇಖರ ಜೋಗಿಮನೆ ಹಾಗೂ ಅಭಿವೃದ್ಧಿ ಪತ್ರಿಕೋದ್ಯಮ ಪ್ರೋತ್ಸಾಹಕ ಪ್ರಶಸ್ತಿಗೆ ಶ್ರೀಪಡ್ರೆ ಆಯ್ಕೆಯಾದರು.

2007: ಸರ್ಕಾರಿ ಸ್ವಾಮ್ಯದ ಹಿಂದುಸ್ಥಾನ್ ಪೆಟ್ರೋಲಿಯಂ ಕಂಪೆನಿಯ ಭಟಿಂಡಾ ತೈಲ ಸಂಸ್ಕರಣೆ ಘಟಕದ ಶೇಕಡಾ 49ರಷ್ಟು ಷೇರನ್ನು ಖರೀದಿಸಲು ಉಕ್ಕು ಸಾಮ್ರಾಟ ಲಕ್ಷ್ಮಿ ಮಿತ್ತಲ್ ಅವರಿಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿತು.

2006: ಸಿಬ್ಬಂದಿ ಸೇರಿದಂತೆ ಸುಮಾರು 70 ಜನರಿದ್ದ ಹಡಗೊಂದು ಜಕಾರ್ತದ ಸುಮಾತ್ರಾ ದ್ವೀಪ ಸಮೀಪದಲ್ಲಿ ಸಮುದ್ರದಲ್ಲಿ ಮುಳುಗಿ ಎಲ್ಲರೂ ಸಾವನ್ನಪ್ಪಿದರು. ಸಿಬೊಲ್ಗಾ ಬಂದರಿನಿಂದ ಸುಮಾರು 64 ಕಿ.ಮೀ. ಅಂತರದಲ್ಲಿ ಈ ದುರಂತ ಸಂಭವಿಸಿತು. ಹವಾಮಾನದ ದುಷ್ಪರಿಣಾಮ ಮತ್ತು ಹಡಗಿನಲ್ಲಿ ಉಂಟಾಗಿದ್ದ ರಂಧ್ರದಿಂದ ಈ ದುರಂತ ಸಂಭವಿಸಿತು.

2006: ಒಟ್ಟಾವಾದಲ್ಲಿ 1985ರಲ್ಲಿ ಬಾಂಬ್ ಸ್ಫೋಟದಿಂದ 324 ಪ್ರಯಾಣಿಕರು ಹತರಾದ ಕನಿಷ್ಕ ಏರ್ ಇಂಡಿಯಾ ವಿಮಾನ ದುರಂತದ ನ್ಯಾಯಾಂಗ ತನಿಖೆಯನ್ನು ಕೆನಡಾದ ಮಾಜಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಜಾನ್ ಮೇಜರ್ ಟೊರಾಂಟೊದಲ್ಲಿ ಆರಂಭಿಸಿದರು. ಈ ಹಿಂದಿನ ಎರಡು ವಿಚಾರಣೆಗಳಲ್ಲೂನ್ಯಾಯಾಲಯ ಇಬ್ಬರು ಸಿಖ್ ಪ್ರತ್ಯೇಕತಾವಾದಿಗಳನ್ನು ಆರೋಪ ಮುಕ್ತಗೊಳಿಸಿದ ಕ್ರಮವನ್ನು ಪ್ರಶ್ನಿಸಿ ದುರಂತದಲ್ಲಿ ಮಡಿದವರ ಕುಟುಂಬದ ಸದಸ್ಯರು ಕೆನಡಾ ಸರ್ಕಾರಕ್ಕ್ಕೆ ಮನವಿ ಸಲ್ಲಿಸಿದ ಮೇರೆಗೆ ಹೊಸದಾಗಿ ಇನ್ನೊಮ್ಮೆ ನ್ಯಾಯಮೂರ್ತಿ ಜಾನ್ ಮೇಜರ್ ನೇತೃತ್ವದಲ್ಲಿ ಸಾರ್ವಜನಿಕ ತನಿಖೆಗೆ ಆದೇಶಿಸಲಾಗಿತ್ತು.

2006: ಭಾರತೀಯ ಮೂಲದ ಅಮೆರಿಕನ್ ಪ್ರಜೆ ರಾಜನ್ ಝೆಡ್ ಅವರನ್ನು ಅಂತಾರಾಷ್ಟ್ರೀಯ ವಾಣಿಜ್ಯ ಸಂಘಟನೆ ನೆವಾಡಾ ಜಾಗತಿಕ ವಾಣಿಜ್ಯ ಮಂಡಳಿಯ (ಎನ್ ಇಡಬ್ಲ್ಯೂಟಿಆರ್ ಎಸಿ) ನಿರ್ದೇಶಕರಲ್ಲಿ ಒಬ್ಬರನ್ನಾಗಿ ನೇಮಕ ಮಾಡಲಾಯಿತು. ನೆವಾಡಾದ ರೆನೋ ನಿವಾಸಿಯಾಗಿರುವ ರಾಜನ್ ಅವರು ಅಮೆರಿಕಕ್ಕೆ ವಲಸೆ ಹೋಗುವ ಮುನ್ನ ಭಾರತದಲ್ಲಿ ಪತ್ರಕರ್ತರಾಗಿದ್ದರು.

2006: ಈಶಾನ್ಯ ಚೀನಾದ ಜಿಲಿನ್ ಪ್ರಾಂತದಲ್ಲಿ ಕನಿಷ್ಠ 3000 ವರ್ಷಗಳಷ್ಟು ಹಳೆಯದಾದ ಪಿರಮಿಡ್ಡುಗಳನ್ನು ಚೀನೀ ಪ್ರಾಕ್ತನ ತಜ್ಞರು ಪತ್ತೆ ಹಚ್ಚಿದರು.

2006: ಕರ್ನಾಟಕದಾದ್ಯಂತ ಹರಡಿರುವ ಚಿಕುನ್ ಗುನ್ಯ ರೋಗಕ್ಕೆ ಹುಬ್ಬಳ್ಳಿಯ ಸರ್ಕಾರಿ ಆಯುರ್ವೇದ ಕಾಲೇಜಿನ ಸ್ನಾತಕೋತ್ತರ ವಿಭಾಗವು ಔಷಧ ಕಂಡು ಹಿಡಿದಿದ್ದು, ರೋಗಿಗಳಿಗೆ ಉಚಿತವಾಗಿ ಹಂಚಲು ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಾಚಾರ್ಯ ಡಾ. ಎಂ.ಎ. ಕುಂದಗೋಳ ಪ್ರಕಟಿಸಿದರು.

2006: ಇಂಡೋನೇಷ್ಯದ ಸುಲೇಸಿಯಾ ಪ್ರಾಂತ್ಯದಲ್ಲಿ ಎರಡು ದಿನಗಳಿಂದ ಸತತ ಮಳೆ ಸುರಿದ ಪರಿಣಾಮವಾಗಿ ಭೂಕುಸಿತಗಳು ಸಂಭವಿಸಿ 114 ಮಂದಿ ಮೃತರಾದರು.

1991: ಪಿ.ವಿ. ನರಸಿಂಹರಾವ್ ಅವರು ಭಾರತದ 9ನೇ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು.

1977: ಮೊನಾಚೆಮ್ ಬೆಗಿನ್ ಇಸ್ರೇಲಿನ 6ನೇ ಪ್ರಧಾನಮಂತ್ರಿಯಾದರು.

1970: ಮೆಕ್ಸಿಕೋ ನಗರದಲ್ಲಿ ಇಟಲಿಯನ್ನು ಸೋಲಿಸಿದ ಬ್ರೆಜಿಲ್ ಮೂರನೇ ಬಾರಿಗೆ ಸಾಕರ್ ವರ್ಲ್ಡ್ ಚಾಂಪಿಯನ್ ಎನಿಸಿಕೊಂಡು ದಾಖಲೆ ನಿರ್ಮಿಸಿತು. ಜೂಲ್ಸ್ ರಿಮೆಟ್ ಟ್ರೋಫಿಯನ್ನು ಕಾಯಂ ಆಗಿ ಇರಿಸಿಕೊಳ್ಳಲು ಬ್ರೆಜಿಲ್ ಗೆ ಅನುಮತಿ ನೀಡಲಾಯಿತು.

1963: ಕಾರ್ಡಿನಲ್ ಗಿಯಾವನ್ನಿ ಬಟ್ಟಿಸ್ಟ ಮೊಂಟಿನಿ ಅವರು ರೋಮನ್ ಕ್ಯಾಥೋಲಿಕ್ ಚರ್ಚಿನ ದಿವಂಗತ ಪೋಪ್ 23ನೇ ಜಾನ್ ಅವರ ಉತ್ತರಾಧಿಕಾರಿಯಾಗಿ ಆಯ್ಕೆಯಾದರು. ಅವರು 6ನೇ ಪೌಲ್ ಎಂಬ ಹೆಸರನ್ನು ಪಡೆದುಕೊಂಡರು.

1956: ಶಂಭುಗೌಡ ನೀ. ಪಾಟೀಲ ಜನನ.

1953: ಪಾಕಿಸ್ಥಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಜನ್ಮದಿನ. 1988ರಲ್ಲಿ ಪಾಕಿಸ್ತಾನದ ಪ್ರಧಾನಮಂತ್ರಿಯಾದ ಇವರು ಆಧುನಿಕ ಇತಿಹಾಸದಲ್ಲಿ ಮುಸ್ಲಿಂ ರಾಷ್ಟ್ರವೊಂದರಲ್ಲಿ ಮೊತ್ತ ಮೊದಲ ಬಾರಿಗೆ ಪ್ರಧಾನಿಯಾದ ನಾಯಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1948: ಚಕ್ರವರ್ತಿ ರಾಜಗೋಪಾಲಾಚಾರಿ (ರಾಜಾಜಿ) ಅವರು ಭಾರತದ ಮೊತ್ತ ಮೊದಲ ಹಾಗೂ ಏಕೈಕ ಗವರ್ನರ್ ಜನರಲ್ ಆಗಿ ನೇಮಕಗೊಂಡರು.

1947: ಸಾಹಿತಿ ಈಚನೂರು ಜಯಲಕ್ಷ್ಮಿ ಅವರು ಖ್ಯಾತ ಸೂತ್ರದ ಬೊಂಬೆಯಾಟಗಾರ ಸೀತಾರಾಮಯ್ಯ- ಸಾವಿತ್ರಮ್ಮ ದಂಪತಿಯ ಮಗಳಾಗಿ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಈಚನೂರು ಗ್ರಾಮದಲ್ಲಿ ಜನಿಸಿದರು.

1940: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕ ಕೇಶವ ಬಲಿರಾಮ ಹೆಡಗೇವಾರ್ ಈ ದಿನ ನಿಧನರಾದರು. 1889ರ ಏಪ್ರಿಲ್ 1ರಂದು ನಾಗಪುರದಲ್ಲಿ ಜನಿಸಿದ ಇವರು 1925ರಲ್ಲಿ ನಾಗಪುರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಸ್ಥಾಪಿಸಿದರು.

1932: ಭಾರತೀಯ ಚಲನಚಿತ್ರನಟ ಅಮರೇಶ್ ಪುರಿ ಜನ್ಮದಿನ.

1926: ಪುರುಷರಿಗೆ ಸರಿಸಮಾನವಾಗಿ ನಾಟಕ ಸಂಸ್ಥೆ ಕಟ್ಟಿ ಬೆಳೆಸಿ ಮಹಿಳೆಯರಿಂದಲೇ ನಾಟಕ ಮಾಡಿಸಿ, ಪುರುಷ ಪಾತ್ರಗಳನ್ನೂ ನಿರ್ವಹಿಸಿ ಪ್ರೇಕ್ಷಕರಿಂದ ಸೈ ಎನ್ನಿಸಿಕೊಂಡ ಕಲಾವಿದೆ ನಾಗರತ್ನಮ್ಮ ಕೃಷ್ಣ ಭಟ್ಟ- ರುಕ್ಮಿಣಿಯಮ್ಮ ದಂಪತಿಯ ಮಗಳಾಗಿ ಮೈಸೂರಿನಲ್ಲಿ ಜನಿಸಿದರು.

1907: ಕಲಾವಿದ ಕೆರೆಮನೆ ಶಿವರಾಮ ಹೆಗಡೆ ಜನನ.

1906: ಸಾಹಿತಿ ಕಾಮಾಕ್ಷಮ್ಮ ಆರ್. ಜನನ.

1906: ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಮೊದಲ ಅಧ್ಯಕ್ಷ ಉಮೇಶ ಚಂದ್ರ ಬ್ಯಾನರ್ಜಿ ನಿಧನರಾದರು.

1893: ಚಿಕಾಗೋದ ಕೊಲಂಬಿಯನ್ ಪ್ರದರ್ಸನದಲ್ಲಿ `ಫೆರ್ರಿಸ್ ವ್ಹೀಲ್' ಪ್ರದಶರ್ಿಸಲಾಯಿತು. ಪಿಟ್ಸ್ ಬರ್ಗ್ ಸೇತುವೆ ನಿರ್ಮಾಪಕ ಜಾರ್ಜ್ ಟಬ್ಲ್ಯೂ ಫೆರ್ರಿಸ್ ನ ಸಂಶೋಧನೆ ಇದು. ಪ್ಯಾರಿಸ್ಸಿನ ಐಫೆಲ್ ಗೋಪುರದಂತೆ ಜನರನ್ನು ಆಕರ್ಷಿಸುವ ಸಲುವಾಗಿ ನಿರ್ಮಿಸಲಾದ ಈ `ಫೆರ್ರಿಸ್ ವ್ಹೀಲ್' ನಲ್ಲಿ ಒಂದು ಸಲಕ್ಕೆ 60 ಪ್ರಯಾಣಿಕರನ್ನು ಸುತ್ತಿಸಬಲ್ಲ 36 ತೊಟ್ಟಿಲುಗಳಿದ್ದವು. ಈ ಸಂಶೋಧನೆಯ 4 ವರ್ಷಗಳ ಬಳಿಕ ತನ್ನ 38ನೇ ವಯಸ್ಸಿನಲ್ಲಿಫೆರ್ರಿಸ್ ಮೃತನಾದ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

ಇಂದಿನ ಇತಿಹಾಸ History Today ಜೂನ್ 20

ಇಂದಿನ ಇತಿಹಾಸ

ಜೂನ್ 20

ರಾಜ್ಯಸಭೆಯ ಮಾಜಿ ಉಪಸಭಾಪತಿ ನಜ್ಮಾ ಹೆಫ್ತುಲ್ಲಾ ಅವರಿಗೆ 2007ನೇ ಸಾಲಿನ `ವೀರಾಂಗನ ಸಮ್ಮಾನ್' ಪ್ರಶಸ್ತಿ ಲಭಿಸಿತು. ನಜ್ಮಾ ಅವರು ಸಾರ್ವಜನಿಕ ಕ್ಷೇತ್ರದಲ್ಲಿ ನೀಡಿರುವ ಕೊಡುಗೆಗಾಗಿ ಈ ಪ್ರಶಸ್ತಿ ನೀಡಲಾಯಿತು.

2007: ಕ್ರಿ.ಪೂ.1800ರಿಂದ 1500 ವರೆಗಿನ ಋಗ್ವೇದದ 30 ಹಸ್ತಪ್ರತಿಗಳು ಸೇರಿದಂತೆ ಒಟ್ಟು 38ಪುರಾತನ ವಿಷಯಗಳನ್ನು ಯುನೆಸ್ಕೊ ತನ್ನ ಪರಂಪರೆ ಪಟ್ಟಿಯಲ್ಲಿ ಹೊಸದಾಗಿ ಸೇರಿಸಿತು. ಭವಿಷ್ಯದ ಪೀಳಿಗೆಗೆ ಪುರಾತನ ಸಂಸ್ಕೃತಿಯನ್ನು ಪರಿಚಯಿಸುವ ಕಾರಣಕ್ಕಾಗಿ ಇವನ್ನು ಸಂರಕ್ಷಿಸಲಾಗುತ್ತಿದೆ ಎಂದು ಯುನೆಸ್ಕೊ ಪ್ರಕಟನೆ ತಿಳಿಸಿತು .ವಿಶ್ವದ ಮೊದಲ ಉದ್ದನೆಯ ಸಾಕ್ಷ್ಯಚಿತ್ರ ಸೇರಿದಂತೆ ಸ್ವೀಡಿಷ್ ಕೈಗಾರಿಕೋದ್ಯಮಿ ಆಲ್ಫ್ರೆಡ್ ನೊಬೆಲ್ ಕುಟುಂಬ ಒಡೆತನದ ಪತ್ರಾಗಾರ ಹಾಗೂ ದಕ್ಷಿಣ ಆಫ್ರಿಕಾದ ವರ್ಣನೀತಿ ವಿರೋಧಿ ನಾಯಕ ನೆಲ್ಸನ್ ಮಂಡೇಲಾ ಅವರ ಸಾಧನೆಯನ್ನು ಕೂಡಾ ಯುನೆಸ್ಕೊ ಪರಂಪರೆ ಪಟ್ಟಿಯಲ್ಲಿ ಸೇರಿಸಿತು. ವಿಶ್ವಸಂಸ್ಥೆಯ ವೈಜ್ಞಾನಿಕ ಶಿಕ್ಷಣ ಮತ್ತು ಸಂಸ್ಕೃತಿ ವಿಭಾಗ ತಯಾರಿಸಿರುವ ` ಮೆಮೋರಿ ಆಫ್ ದಿ ವರ್ಲ್ಡ್ ರಿಜಿಸ್ಟರ್' ಎನ್ನುವ ಯೋಜನಯಲ್ಲಿ ಈ ಪಾರಂಪರಿಕ ಪಟ್ಟಿ ಇದೆ. ಯುನೆಸ್ಕೊ ನಿರ್ದೇಶಕ ಕೂಚಿರೊ ಮತ್ ಸೂರಾ ಅವರು ಈ ಪಾರಂಪರಿಕ ಪಟ್ಟಿ ಕುರಿತು ಮಾಹಿತಿ ನೀಡಿದರು. ವಿಶ್ವದ ಪಾರಂಪರಿಕ ಹಾಗೂ ಪುರಾತನ ವಸ್ತುಗಳನ್ನು ಸಂರಕ್ಷಿಸುವ ಈ ಯೋಜನೆಯನ್ನು ವಿಶ್ವಸಂಸ್ಥೆಯು 1992ರಿಂದ ಆರಂಭಿಸಿತು. ಈ ಬಾರಿ ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ `ದಿ ಸ್ಟೋರಿ ಆಫ್ ಕೆಲ್ಲಿ ಗ್ಯಾಂಗ್' ಎಂಬ ವಿಶ್ವದ ಮೊದಲ ಸಾಕ್ಷ್ಯ ಚಿತ್ರ (1906), 1840ರಿಂದ 1900ರವರೆಗೆ ಇದ್ದ ನೊಬೆಲ್ ಕುಟುಂಬದ ಪುರಾತನ ಪತ್ರಾಗಾರ ಹಾಗೂ ಸ್ವೀಡಿಷ್ ಚಲನಚಿತ್ರ ನಿರ್ದೇಶಕ ಇನ್ಗ್ ಮರ್ ಬರ್ಗ್ ಮನ್ ಮತ್ತು 1914ರಿಂದ 1923ರವರೆಗಿನ ರೆಡ್ ಕ್ರಾಸ್ ಸಂಸ್ಥೆಯ ದಾಖಲೆಗಳನ್ನು ಸಂರಕ್ಷಿಸಿಡುವ ಕಾರ್ಯವನ್ನು ಹಮ್ಮಿಕೊಂಡಿತ್ತು. ದಕ್ಷಿಣ ಕೊರಿಯಾದ ಕಾಯಾ ಪರ್ವತದಲ್ಲಿ ಸಂರಕ್ಷಿಸಿರುವ 1237ರಿಂದ 1248ವರೆಗಿನ 81,258 ಮರದ ಕೆತ್ತನೆಗಳ ಸಂಗ್ರಹ ಕೂಡಾ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇದು ಬುದ್ಧನ ಕುರಿತಾದ ಸಂಪೂರ್ಣ ಪಠ್ಯವನ್ನು ಹೊಂದಿದೆ ಎಂಬ ನಂಬಿಕೆ ಇದೆ.. ಕೆನಡಾವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ 1670ರ ಹಡ್ಸನ್ನಿನ ಬೇ ಕಂಪನಿ, ಮಧ್ಯ ವಿಶ್ವದ ಅಪರೂಪದ ಭೂಪಟ ಕೂಡಾ ಯುನೆಸ್ಕೊ ಪರಂಪರೆಯ ಹೊಸ ಪಟ್ಟಿಯಲ್ಲಿ ಸ್ಥಾನ ಪಡೆದವು.

2007: ಆಂಧ್ರ ಪ್ರದೇಶದ ಸರ್ಕಾರ ಮುಸ್ಲಿಮರಿಗೆ ಜಾತಿ ಆಧಾರದ ಮೇಲೆ ಶಿಕ್ಷಣ ಹಾಗೂ ಸರ್ಕಾರಿನೌಕರಿಯಲ್ಲಿ ಮೀಸಲಾತಿ ನೀಡಲು ಉದ್ದೇಶಿಸಿರುವುದನ್ನು ವಿರೋಧಿಸಿ ಮುಸ್ಲಿಂ ಸಂಯುಕ್ತ ಕ್ರಿಯಾ ಸಮಿತಿ ಹಾಗೂ ಕೆಲ ಮುಸ್ಲಿಂ ಧಾರ್ಮಿಕ ಸಂಘಟನೆಗಳು `ಫತ್ವಾ' ಹೊರಡಿಸಿದವು. ತಮ್ಮ ಜನಾಂಗವನ್ನು ಮೇಲುಸ್ತರಕ್ಕೆ ತರಲು ಜಾತಿ ಆಧಾರದ ಮೇಲೆ ಮೀಸಲು ಕಲ್ಪಿಸುವುದರಿಂದ ಸಾದ್ಯ ಎನ್ನುವುದು ಹುಚ್ಚು ಸಾಹಸ. ಈ ರೀತಿ ಮೀಸಲಾತಿ ಪಡೆಯುವುದು ಇಸ್ಲಾಂ ಧರ್ಮಕ್ಕೆ ವಿರೋಧವಾದುದು ಎಂದು ಆಲ್ ಇಂಡಿಯಾ ಮಜ್ಲೀಸ್ - ಎ- ಇತ್ತೆಹಾದುಲ್ ಮುಸ್ಲಿಮೀನ್ ವಕ್ತಾರ ಹಾಗೂ ಸಂಸದ ಅಸಾದ್ದುದೀನ್ ಒವಾಸಿ ಸ್ಪಷ್ಟಪಡಿಸಿದರು.

2007: ರಾಜ್ಯಸಭೆಯ ಮಾಜಿ ಉಪಸಭಾಪತಿ ನಜ್ಮಾ ಹೆಫ್ತುಲ್ಲಾ ಅವರಿಗೆ 2007ನೇ ಸಾಲಿನ `ವೀರಾಂಗನ ಸಮ್ಮಾನ್' ಪ್ರಶಸ್ತಿ ಲಭಿಸಿತು. ನಜ್ಮಾ ಅವರು ಸಾರ್ವಜನಿಕ ಕ್ಷೇತ್ರದಲ್ಲಿ ನೀಡಿರುವ ಕೊಡುಗೆಗಾಗಿ ಈ ಪ್ರಶಸ್ತಿ ನೀಡಲಾಯಿತು. ಬಿಜೆಪಿಯ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ ಅವರು ಮಧ್ಯಪ್ರದೇಶದಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಲಕ್ಷ್ಮೀಬಾಯಿ ಸ್ಮರಣಾರ್ಥ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಜ್ಮಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಹುತಾತ್ಮ ಚಂದ್ರಶೇಖರ್ ಆಜಾದ್ ಸ್ಮರಣಾರ್ಥ ನೀಡಲಾಗುವ ಪ್ರಶಸ್ತಿಯನ್ನು ಛತ್ತೀಸಗಢದ ಅಖಿಲ ಭಾರತೀಯ ವನವಾಸಿ ಕಲ್ಯಾಣ ಆಶ್ರಮ ಕೇಂದ್ರಕ್ಕೆ ಪ್ರದಾನ ಮಾಡಲಾಯಿತು. ಬುಡಕಟ್ಟು ಜನರ ಶಿಕ್ಷಣ, ಆರೋಗ್ಯ, ಆರ್ಥಿಕ ಹಾಗೂ ಸಾಮಾಜಿಕ ಉನ್ನತೀಕರಣಕ್ಕೆ ಸಲ್ಲಿಸಿದ ಸೇವೆಗಾಗಿ ಅಖಿಲ ಭಾರತೀಯ ವನವಾಸಿ ಕಲ್ಯಾಣ ಆಶ್ರಮಕ್ಕೆ ಈ ಪ್ರಶಸ್ತಿ ದೊರಕಿತು. ಈ ಪ್ರಶಸ್ತಿಯು ಒಂದೂವರೆ ಲಕ್ಷ ರೂ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

2007: ಪತ್ನಿ ಮತ್ತು ತನ್ನ ಮೂವರು ಮಕ್ಕಳನ್ನು ಹತ್ಯೆ ಮಾಡಿದ್ದ ಮಧ್ಯ ಪ್ರದೇಶದ ವಿಜೇಂದ್ರ ಸಿಂಗ್ ಗೆ ದಿವಾಸ್ ಸೆಷನ್ಸ್ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿತು. ಈತ 2005ರ ಫೆಬ್ರುವರಿ 27ರಂದು ಹರಿತವಾದ ಆಯುಧ ಬಳಸಿ ಪತ್ನಿ ಹಾಗೂ ಮೂವರು ಮಕ್ಕಳನ್ನು ಹತ್ಯೆ ಮಾಡಿದ್ದ.

2007: 1975ರ ಹಿಟ್ ಚಿತ್ರ `ಜೈ ಸಂತೋಷಿ ಮಾ'ದಲ್ಲಿ ಸಂತೋಷಿ ಮಾ ಪಾತ್ರ ವಹಿಸಿದ್ದ ಅನಿತಾ ಗುಹಾ (70) ಅವರು ಹೃದಯಾಘಾತದಿಂದ ಮುಂಬೈಯಲ್ಲಿ ನಿಧನರಾದರು. ಪಶ್ಚಿಮ ಬಂಗಾಳದಿಂದ ಅವಕಾಶ ಅರಸಿ ಮುಂಬೈಗೆ ಬಂದ ಅನಿತಾ ಪೂರ್ಣಿಮಾ, ಪ್ಯಾರ್ ಕೀ ರಾಹೇ, ಗೇಟ್ ವೇ ಆಫ್ ಇಂಡಿಯಾ, ಸಂಜೋಗ್ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದರು. ಸಂಪೂರ್ಣ ರಾಮಾಯಣ ಚಿತ್ರದಲ್ಲಿ ಅವರು ಅನಿತಾ ಸೀತೆಯ ಪಾತ್ರ ನಿರ್ವಹಿಸಿದ್ದರು.

2007: ಬ್ರಿಟನ್ ಸಂಸತ್ತಿನ ಅತಿ ಹಿರಿಯ ಸದಸ್ಯ ಭಾರತೀಯ ಮೂಲದ ಪಿಯಾರ ಸಿಂಗ್ ಖಾಬ್ರಾ (82) ಅವರು ಅಲ್ಪಕಾಲದ ಅಸ್ವಸ್ಥತೆಯಿಂದ ನಿಧನರಾದರು. ಪಂಜಾಬಿನ ಕಹರ್ಪುರದಲ್ಲಿ ಜನಿಸಿದ್ದ ಖಾಬ್ರಾ 1959ರಲ್ಲಿ ಬ್ರಿಟನ್ನಿಗೆ ವಲಸೆ ಹೋಗಿದ್ದರು. ಅಲ್ಲಿ ಶಿಕ್ಷಕನಾಗಿ ಜೀವನ ಆರಂಬಿಸಿದ್ದ ಅವರು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು, 1992ರಲ್ಲಿ ಲೇಬರ್ ಪಕ್ಷದಿಂದ ಮೊದಲ ಬಾರಿಗೆ ಸಂಸತ್ತಿಗೆ ಆಯ್ಕೆಯಾಗಿದ್ದರು.

2007: ಮೂರು ತಿಂಗಳ ಹಿಂದೆ 10ನೇ ತರಗತಿಯಲ್ಲಿ ಓದುತ್ತಿರುವ 15 ವರ್ಷದ ತಮ್ಮ ಪುತ್ರ ಧಿಲೀಪನ್ ರಾಜ್ ಚೆನ್ನೈಗೆ ಸಮೀಪದ ಮನಪ್ಪರೈಯ ಖಾಸಗಿ `ಮತಿ ಸರ್ಜಿಕಲ್ ಹಾಗೂ ಮೆಟರ್ನಿಟಿ ಆಸ್ಪತೆ'ಯಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ವಿಶ್ವದಾಖಲೆ ಸ್ಥಾಪಿಸ್ದಿದನ್ನು ಬಹಿರಂಗ ಪಡಿಸಿದ ಆತನ ತಂದೆ ಡಾ. ಮುರುಗೇಶನ್ ಇದನ್ನು ಸಾಬೀತು ಪಡಿಸುವ ಸಿಡಿ ಪ್ರದರ್ಶಿಸಿ ಸಹೋದ್ಯೋಗಿಗಳನ್ನು ಅಚ್ಚರಿಯಲ್ಲಿ ಕೆಡವಿದರು. ತಂದೆ ಮುರುಗೇಶನ್ ಹಾಗೂ ತಾಯಿ ಗಾಂಧಿಮತಿ ಮೇಲ್ವಿಚಾರಣೆಯಲ್ಲಿ ಈ ಶಸ್ತ್ರಚಿಕಿತ್ಸೆ ನಡೆದಿತ್ತು.

2006: ಭಾರತ - ಪಾಕ್ ನಡುವಿನ ಸಂಬಂಧಗಳನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಪೂಂಚ್ ಮತ್ತು ಪಾಕಿಸ್ತಾನದ ರಾವಲ್ ಕೋಟ್ ನಡುವೆ ಮತ್ತೊಂದು ಬಸ್ ಸೇವೆಯನ್ನು ಈದಿನ ಆರಂಭಿಸಲಾಯಿತು.

1996: `ವಿಶ್ವದಲ್ಲಿ ಪರಮಾಣು ಅಸ್ತ್ರ ಪರೀಕ್ಷೆ ನಿಷೇಧ' ಕುರಿತ ಜಿನೀವಾ ಸಮ್ಮೇಳನದಲ್ಲಿ ಸಿಟಿಬಿಟಿಗೆ ಸಹಿ ಹಾಕದೇ ಇರಲು ಭಾರತವು ತೀರ್ಮಾನಿಸಿತು.

1987: ಪ್ರಸಿದ್ಧ ಪಕ್ಷಿ ಶಾಸ್ತ್ರಜ್ಞ ಸಲೀಂ ಅಲಿ ನಿಧನರಾದರು.

1976: ಭಾರತೀಯ ಕ್ರಿಕೆಟಿಗ ದೇಬಸಿಸ್ ಮೊಹಂತಿ ಜನನ.

1960: ಫ್ಲಾಯ್ಡ್ ಪ್ಯಾಟರ್ಸನ್ ಅವರು ಇಂಗ್ಮಾರ್ ಜಾನ್ಸನ್ ಅವರನ್ನು ಸೋಲಿಸುವ ಮೂಲಕ ಜಾಗತಿಕ ಹೆವಿವೇಯ್ಟ್ ಬಾಕ್ಸಿಂಗ್ ಪ್ರಶಸ್ತಿಯನ್ನು ಮತ್ತೆ ಪಡೆದುಕೊಂಡ ಜಗತ್ತಿನ ಮೊತ್ತ ಮೊದಲ ಬಾಕ್ಸರ್ ಎನಿಸಿಕೊಂಡರು.

1954: ಸಾಹಿತಿ ಬಸವರಾಜ ಸಬರದ ಅವರು ಬಸಪ್ಪ ಸಬರದ- ಬಸಮ್ಮ ದಂಪತಿಯ ಮಗನಾಗಿ ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ಈ ದಿನ ಜನಿಸಿದರು.

1952: ಇಂಗ್ಲಿಷ್ ಸಾಹಿತ್ಯದಲ್ಲೇ ಬೃಹತ್ ಕಾದಂಬರಿ `ಎ ಸ್ಯುಟೇಬಲ್ ಬಾಯ್' ಎಂಬ ಕೃತಿ ನೀಡಿದ ಭಾರತೀಯ ಕಾದಂಬರಿಕಾರ ವಿಕ್ರಮ್ ಸೇಠ್ ಅವರು ಈದಿನ ಕೋಲ್ಕತ್ತಾದಲ್ಲಿ (ಅಂದಿನ ಕಲ್ಕತ್ತಾ) ಜನಿಸಿದರು.

1952: ಶಾಸ್ತ್ರೀಯ, ಸುಗಮ ಸಂಗೀತ ಎರಡರಲ್ಲೂ ಪ್ರಾವೀಣ್ಯ ಗಳಿಸಿದ್ದ ಪ್ರತಿಭಾನ್ವಿತ ಗಾಯಕ ಮತ್ತೂರು ಲಕ್ಷ್ಮೀ ಕೇಶವ ಅವರು ಕೆ. ಸೂರ್ಯ ನಾರಾಯಣ ಅವಧಾನಿ- ಸುಂದರಮ್ಮ ದಂಪತಿಯ ಮಗನಾಗಿ ಶಿವಮೊಗ್ಗ ಜಿಲ್ಲೆಯ ಮತ್ತೂರು ಗ್ರಾಮದಲ್ಲಿ ಜನಿಸಿದರು.

1926: ಕಲಾವಿದ ಮಲ್ಪೆ ರಾಮದಾಸ ಸಾಮಗ ಜನನ.

1897: ಮುಂಬೈಯಲ್ಲಿ ಗ್ರೇಟ್ ಇಂಡಿಯನ್ ಪೆನಿನ್ ಸ್ಯುಲರ್ ರೈಲ್ವೇ ಕೇಂದ್ರ ಕಚೇರಿಗೆ `ವಿಕ್ಟೋರಿಯಾ ಟರ್ಮಿನಸ್' ಎಂದು ಹೆಸರಿಡಲಾಯಿತು. ಇಂಗ್ಲೆಂಡಿನ ರಾಣಿ ವಿಕ್ಟೋರಿಯಾ ಅವರ ರಾಜ್ಯಭಾರದ ಸ್ವರ್ಣಮಹೋತ್ಸವದ ನೆನಪಿಗಾಗಿ ಈ ಕ್ರಮ ಕೈಗೊಳ್ಳಲಾಯಿತು. 99 ವರ್ಷಗಳ ಬಳಿಕ 1996ರಲ್ಲಿ ಈ ಟರ್ಮಿನಸ್ ಗೆ `ಛತ್ರಪತಿ ಶಿವಾಜಿ ಟರ್ಮಿನಸ್' ಎಂದು ಮರುನಾಮಕರಣ ಮಾಡಲಾಯಿತು.

1789: ಫ್ರೆಂಚ್ ಕ್ರಾಂತಿಯ ಮಹತ್ವದ ಘಟನೆಯಾಗಿ ನ್ಯಾಷನಲ್ ಅಸೆಂಬ್ಲಿ ತನ್ನ ಎಂದಿನ ಸಮಾವೇಶ ತಾಣಕ್ಕೆ ಬದಲಾಗಿ ಪ್ಯಾರಿಸಿನ ಟೆನಿಸ್ ಕೋರ್ಟ್ ಒಂದರಲ್ಲಿ ಸಮಾವೇಶಗೊಂಡಿತು. ಫ್ರಾನ್ಸಿಗೆ ಸಂವಿಧಾನ ನೀಡುವವರೆಗೆ ಅಲ್ಲಿಂದ ಕದಲುವುದಿಲ್ಲ ಎಂಬ ಪ್ರತಿಜ್ಞೆಯನ್ನೂ ಈ ಸಮಾವೇಶ ಮಾಡಿತು. ಈ ಪ್ರತಿಜ್ಞೆ `ಟೆನಿಸ್ ಕೋರ್ಟ್ ಪ್ರತಿಜ್ಞೆ' ಎಂದೇ ಖ್ಯಾತಿ ಪಡೆದಿದೆ.

1756: ಬಂಗಾಳದ ನವಾಬ ಸಿರಾಜ್- ಉದ್- ದೌಲನ ಆಜ್ಞೆಯಂತೆ ಸೆರೆಹಿಡಿಯಲಾದ 146 ಮಂದಿ ಬ್ರಿಟಿಷ್ ಕಾವಲುಪಡೆ ಸೈನಿಕರನ್ನು 18 ಅಡಿ ಉದ್ದ 15 ಅಡಿ ಅಗಲದ ಸುರಂಗದಲ್ಲಿ ಕೂಡಿ ಹಾಕಲಾಯಿತು. ಅವರಲ್ಲಿ 23 ಮಂದಿ ಮಾತ್ರ ಬದುಕಿ ಉಳಿದರು. ಈ ಘಟನೆ `ಬ್ಲ್ಯಾಕ್ ಹೋಲ್ ಆಫ್ ಕಲ್ಕತ್ತ ಅಟ್ರೋಸಿಟಿ' ಎಂದೇ ಖ್ಯಾತವಾಗಿದೆ. ನಂತರ ನಡೆದ ಸಂಶೋಧನೆಗಳಲ್ಲಿ ಈ ಸುರಂಗಕ್ಕೆ ತಳ್ಳಲಾದವರ ಸಂಖ್ಯೆ 64 ಮಾತ್ರ ಹಾಗೂ ಅವರಲ್ಲಿ ಬದುಕಿ ಉಳಿದವರ ಸಂಖ್ಯೆ 21 ಎಂದು ತಿಳಿದುಬಂತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Saturday, June 21, 2008

ಇಂದಿನ ಇತಿಹಾಸ History Today ಜೂನ್ 19

ಇಂದಿನ ಇತಿಹಾಸ

ಜೂನ್ 19

ಖ್ಯಾತ ವಿಜ್ಞಾನಿ ಪ್ರೊ. ಸಿ.ಎನ್. ಆರ್ ರಾವ್ ಅವರಿಗೆ ಆಕ್ಸ್ ಫರ್ಡ್ ವಿಶ್ವ ವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು. ಈ ಗೌರವಕ್ಕೆ ಪಾತ್ರರಾದ ಮೊತ್ತ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ರಾವ್ ಅವರದಾಯಿತು.

2007: ತನ್ನ ಅತ್ಯುನ್ನತ ಪ್ರಶಸ್ತಿ `ಆಫೀಸರ್ ಆಫ್ ದಿ ಆರ್ಡರ್ ಆಫ್ ಆರ್ಟ್ಸ್ ಅಂಡ್ ಲೆಟರ್ಸ್' ಗೆ ಹಿಂದಿ ನಟ ಶಾರುಖ್ ಖಾನ್ ಅವರನ್ನು ಫ್ರಾನ್ಸ್ ಆಯ್ಕೆ ಮಾಡಿತು. ಹಿಂದಿ ಸಿನಿಮಾ ರಂಗಕ್ಕೆ ಮತ್ತು ಭಾರತ- ಫ್ರಾನ್ಸ್ ಸಹಕಾರ ವರ್ಧನೆಗೆ ಶಾರುಖ್ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಯಿತು.

2007: ಅಟ್ಲಾಂಟಿಸ್ ಗಗನನೌಕೆಯು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ (ಐಎಸ್ಎಸ್) ಧಕ್ಕೆಯಿಂದ ಕಳಚಿಕೊಂಡು ಭೂಮಿಯತ್ತ ಪ್ರಯಾಣ ಬೆಳೆಸಿತು. `ಐಎಸ್ಎಸ್' ನಲ್ಲಿ ಆರು ತಿಂಗಳು ತಂಗಿದ್ದ ಭಾರತೀಯ ಸಂಜಾತೆ ಸುನೀತಾ ವಿಲಿಯಮ್ಸ್ ಸೇರಿದಂತೆ 7 ಗಗನ ಯಾತ್ರಿಗಳು ಅಟ್ಲಾಂಟಿಸ್ ನೌಕೆಯಲ್ಲಿ ಭೂಮಿಯತ್ತ ಹೊರಟರು. ಏಳು ಗಗನಯಾತ್ರಿಗಳನ್ನು ಹೊತ್ತು ಜೂನ್ 8ರಂದು ಅಂತರಿಕ್ಷದತ್ತ ಪ್ರಯಾಣ ಬೆಳೆಸಿದ್ದ ಅಟ್ಲಾಂಟಿಸ್ ಜೂನ್ 10ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿತ್ತು. `ಐಎಸ್ಎಸ್' ನಲ್ಲಿ ಸುನೀತಾ ಬದಲಿಗೆ ಕಾರ್ಯನಿರ್ವಹಿಸಲು ನಿಯೋಜಿತರಾಗಿದ್ದ ಕ್ಲೆಟನ್ ಅಂಡರ್ ಸನ್ ಸಹ ಇದರಲ್ಲಿ ಪಯಣಿಸಿದ್ದರು.

2007: ಯುದ್ಧಾ ನಂತರ ಇರಾಕಿನ `ಸುರಕ್ಷಿತ ವಲಯ'ದಲ್ಲಿ ಕಂಡು ಬರುತ್ತಿರುವ ದಿನ ನಿತ್ಯದ ಜನಜೀವನದ ಬಗ್ಗೆ ಅನಿವಾಸಿ ಭಾರತೀಯ ರಾಜೀವ್ ಚಂದ್ರಶೇಖರ್ ರಚಿಸಿರುವ `ಇಂಪೀರಿಯಲ್ ಲೈಫ್ ಇನ್ ದ ಎಮೆರಾಲ್ಡ್ ಸಿಟಿ' (ಹವಳದ ನಗರದಲ್ಲಿನ ಭವ್ಯ ಬದುಕು) ಕೃತಿ, ಕಥೆಯೇತರ ವಿಭಾಗದಲ್ಲಿ ಬ್ರಿಟನ್ನಿನ ಅತ್ಯುನ್ನತ ಪ್ರಶಸ್ತಿಯಾದ `ಬಿಬಿಸಿ ಫೋರ್ ಸ್ಯಾಮ್ಯುಯೆಲ್ ಜಾನ್ಸನ್ ಪ್ರಶಸ್ತಿಗೆ ಆಯ್ಕೆಯಾಯಿತು. `ವಾಷಿಂಗ್ಟನ್ ಪೋಸ್ಟ್' ಪತ್ರಿಕೆಯ ಬಾಗ್ದಾದ್ ಬ್ಯೂರೊದ ಮಾಜಿ ಮುಖ್ಯಸ್ಥ ಚಂದ್ರಶೇಖರ್, ರಕ್ಷಿತ ವಲಯದಲ್ಲಿ ಅಮೆರಿಕನ್ನರ ಗೂಡಿನೊಳಗಿನ ಬದುಕು ಮತ್ತು ರಕ್ಷಿತ ವಲಯದ ಆಚೆ ಇರಾಕ್ ಜನತೆಯ ಗೊಂದಲ, ಅರಾಜಕತೆಯ ಬದುಕನ್ನು ಇಲ್ಲಿ ಚಿತ್ರಿಸಿದ್ದಾರೆ. ಸದ್ದಾಂ ಹುಸೇನ್ ಅವರನ್ನು 2003ರಲ್ಲಿ ಅಧಿಕಾರದಿಂದ ಪದಚ್ಯುತಗೊಳಿಸಿದ ನಂತರ ಇರಾಕಿನಲ್ಲಿ ಆಡಳಿತ ನಡೆಸಿದ ಸರ್ಕಾರದ ವೈಫಲ್ಯಗಳನ್ನೂ ಈ ಕೃತಿಯಲ್ಲಿ ಪಟ್ಟಿ ಮಾಡಲಾಗಿದೆ. 18ನೇ ಶತಮಾನದ ನಿಘಂಟು ರಚನೆಕಾರ ಮತ್ತು ಪ್ರಬಂಧ ರಚನೆಕಾರ ಸ್ಯಾಮುಯೆಲ್ ಜಾನ್ಸನ್ ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿಯನ್ನು ಪ್ರಚಲಿತ ವಿದ್ಯಮಾನ, ಇತಿಹಾಸ, ರಾಜಕೀಯ, ವಿಜ್ಞಾನ, ಕ್ರೀಡೆ, ಪ್ರವಾಸ, ಜೀವನಚರಿತ್ರೆ ವಿಭಾಗದಲ್ಲಿನ ಅತ್ಯುತ್ತಮ ಸಾಹಿತ್ಯ ಕೃತಿಗಳಿಗೆ ನೀಡಲಾಗುತ್ತಿದೆ. ಪ್ರಶಸ್ತಿ 30 ಸಾವಿರ ಪೌಂಡ್ ನಗದು ಹೊಂದಿದೆ.

2007: ಸಿಂಗೂರು ಯೋಜನೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಆರ್ಥಿಕ ಪುನರ್ ವಸತಿ ಕಲ್ಪಿಸುವುದಾಗಿ ಪಶ್ಚಿಮ ಬಂಗಾಳ ಸರ್ಕಾರ ಘೋಷಿಸಿತು. ಇದೇ ವೇಳೆ, ಭೂಮಿ ನೀಡಲು ಇಚ್ಛಿಸದ ರೈತರ ಜಮೀನನ್ನು ಮರಳಿ ನೀಡಬೇಕೆನ್ನುವ ತೃಣಮೂಲ ಕಾಂಗ್ರೆಸ್ ಬೇಡಿಕೆಯನ್ನು ಸರ್ಕಾರ ತಿರಸ್ಕರಿಸಿತು. ಈಗ ನೀಡಲಾಗುವ ಆರ್ಥಿಕ ಪುನರ್ ವಸತಿ ಪ್ಯಾಕೇಜ್ನಡಿ ಯೋಜನೆಯ ನಿರಾಶ್ರಿತರಿಗೆ ಕೆಲವು ತರಬೇತಿಗಳನ್ನು ಆರಂಭಿಸಲಾಗುವುದು ಮತ್ತು ಟಾಟಾ ಮೋಟಾರ್ಸ್ ಯೋಜನೆಯಲ್ಲಿ ಉದ್ಯೋಗ ಕಲ್ಪಿಸಲಾಗುವುದು ಎಂದು ರಾಜ್ಯದ ಕೈಗಾರಿಕಾ ಸಚಿವ ನಿರುಪಮ್ ಸೇನ್ ವಿವರಿಸಿದರು.

2007: ವಿಚಾರವಾದಿ, ಪ್ರಗತಿಪರ ಚಿಂತಕ ಪ್ರೊ.ಕೆ.ರಾಮದಾಸ್ (66) ಈದಿನ ಬೆಳಿಗ್ಗೆ ಸುಮಾರು 5 ಗಂಟೆಗೆ ಮೈಸೂರಿನಲ್ಲಿ ನಿಧನರಾದರು. ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ಇರುವುದು 20 ದಿನಗಳ ಹಿಂದಷ್ಟೇ ಪತ್ತೆಯಾಗಿತ್ತು. ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಂದಿದ್ದ ಅವರು, ಈದಿನ ಬೆಳಗಿನ ಜಾವ ತೀವ್ರ ಸುಸ್ತಿನ ಬಳಿಕ ಕೊನೆಯುಸಿರೆಳೆದರು. ಲೇಖಕಿಯೂ ಆಗಿರುವ ಆರ್. ನಿರ್ಮಲಾ ಇವರು ಪ್ರೊ.ಕೆ. ರಾಮದಾಸ್ ಅವರ ಪತ್ನಿ. 1941ರ ಮಾರ್ಚ್ 26ರಂದು ಕಳಸದಲ್ಲಿ ಹುಟ್ಟ್ದಿದ ರಾಮದಾಸ್ ಬಾಲ್ಯದಲ್ಲೇ ತಂದೆ ಶಿವಯ್ಯ ಅವರನ್ನು ಕಳೆದುಕೊಂಡವರು. ತಾಯಿ ಮಂಜಮ್ಮ ದುಡಿದು ಅವರನ್ನು ಬೆಳೆಸಿ, ಓದಿಸಿದರು. ಹೊಸನಗರದಲ್ಲಿದ್ದ ರಾಮದಾಸ್ ಕಾಲೇಜು ಓದಲು ಮೈಸೂರಿಗೆ ಬಂದು ಮೈಸೂರಿನವರೇ ಆದರು. ಪ್ರೊ. ರಾಮದಾಸ್ ಅವರ ಅಂತ್ಯಸಂಸ್ಕಾರ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಅನಿಲ ಚಿತಾಗಾರದಲ್ಲಿ ಯಾವುದೇ ಧಾರ್ಮಿಕ ವಿಧಿ-ವಿಧಾನಗಳಿಲ್ಲದೆ ಸಂಜೆ 5.55ಕ್ಕೆ ನೆರವೇರಿತು. ಮೈಸೂರಿನಲ್ಲಿ ಯುವಜನ ಸಮಾಜವಾದಿ ಚಳವಳಿ, ಗೋಕಾಕ್ ಚಳವಳಿ, ಕನ್ನಡದ ಹೋರಾಟ, ದಲಿತ ಚಳವಳಿ ಮತ್ತು ಕಾವೇರಿ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಾಮದಾಸ್, ಲಂಕೇಶ್ ಅವರ ಸಾವಿನ ಬಳಿಕವೂ `ಕರ್ನಾಟಕ ಪ್ರಗತಿರಂಗದ ವಕ್ತಾರ'ರಾಗಿ ಉಳಿದವರು.

2007: ಖ್ಯಾತ ವಿಜ್ಞಾನಿ ಪ್ರೊ. ಸಿ.ಎನ್. ಆರ್ ರಾವ್ ಅವರಿಗೆ ಆಕ್ಸ್ ಫರ್ಡ್ ವಿಶ್ವ ವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು. ಈ ಗೌರವಕ್ಕೆ ಪಾತ್ರರಾದ ಮೊತ್ತ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ರಾವ್ ಅವರದಾಯಿತು.

2006: ಮುಖ್ಯಮಂತ್ರಿಯಾದ ನಾಲ್ಕು ತಿಂಗಳ ಬಳಿಕ ಎಚ್. ಡಿ. ಕುಮಾರಸ್ವಾಮಿ ಅವರು ಈದಿನ ರಾತ್ರಿ ತಮ್ಮ ಅಧಿಕೃತ ನಿವಾಸ `ಅನುಗ್ರಹ'ಕ್ಕೆ ಪ್ರವೇಶ ಮಾಡಿದರು. ಹೊಸನಗರದ ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಅವರು ನೀಡಿರುವ ಅಪರೂಪದ ದೇಶೀಯ `ಘಿರ್' ತಳಿಗೆ ಸೇರಿದ ಗೋವು ನಂದಿನಿ ಮತ್ತು ಕರು ರಾಮನನ್ನು ಮನೆಯೊಳಗೆ ತುಂಬಿಸಿಕೊಳ್ಳುವ ಮೂಲಕ ಮುಖ್ಯಮಂತ್ರಿ ಔಪಚಾರಿಕವಾಗಿ ಹೊಸ ಮನೆಗೆ ಕಾಲಿಟ್ಟರು. ಸ್ವಾಮೀಜಿ ಅವರು ಈ ಸಂದರ್ಭದ್ಲಲಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.

2006: ನಲ್ವತ್ತನಾಲ್ಕು ವರ್ಷಗಳಿಂದ ಮುಚ್ಚಲ್ಪಟ್ಟ್ದಿದ ಆಯಕಟ್ಟಿನ ನಾಥು ಲಾ ಪಾಸ್ ಮೂಲಕ ಜುಲೈ 6ರಿಂದ ಗಡಿ ವ್ಯಾಪಾರ ಪುನರಾರಂಭಿಸುವ ಐತಿಹಾಸಿಕ ಒಪ್ಪಂದಕ್ಕೆ ಭಾರತ ಮತ್ತು ಚೀನಾ ಬೀಜಿಂಗಿನಲ್ಲಿ ಸಮ್ಮತಿಸಿದವು.

1997: ಕಾರ್ಗೊ ಹಡಗು ಮುಂಬೈ ಬಳಿ ಸಮುದ್ರದಲ್ಲಿ ಮುಳುಗಿ ನಾಲ್ವರು ಮೃತರಾಗಿ 20 ಜನ ಕಣ್ಮರೆಯಾದರು.

1995: ಭಾರತ ಮತ್ತು ಅಮೆರಿಕ ವ್ಯಾಪಾರ ವ್ಯವಹಾರ ಒಪ್ಪಂದಕ್ಕೆ ಸಹಿ ಹಾಕಿದವು.

1981: ಭಾರತದ ಸಂಪರ್ಕ ಉಪಗ್ರಹ `ಆಪಲ್' ನ್ನು ಹೊತ್ತ ಯುರೋಪಿನ ಏರಿಯನ್ ರಾಕೆಟನ್ನು ಫ್ರೆಂಚ್ ಗಯಾನಾದ ಅಂತರಿಕ್ಷ ನೆಲೆ ಕೊವುರೋನಿಂದ ಯಶಸ್ವಿಯಾಗಿ ಹಾರಿಸಲಾಯಿತು.

1978: ಲಾರ್ಡ್ಸ್ ಮೈದಾನದಲ್ಲಿ ಪಾಕಿಸ್ಥಾನದ ವಿರುದ್ಧ ನಡೆದ ಪಂದ್ಯದಲ್ಲಿ ಒಂದೇ ಟೆಸ್ಟಿನಲ್ಲಿ ಸೆಂಚುರಿ (108 ರನ್) ಬಾರಿಸುವುದರ ಜೊತೆಗೆ 8 ವಿಕೆಟ್ಗಳನ್ನು ಬೀಳಿಸಿದ (8-34) ಮೊತ್ತ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಇಂಗ್ಲೆಂಡಿನ ಇಯಾನ್ ಬಾಥಮ್ ಪಾತ್ರರಾದರು.

1974: ಕಲಾವಿದ ರೂಪ ಡಿ. ಬಿಜೂರ್ ಜನನ.

1966: ಶಿವಸೇನೆ ಸ್ಥಾಪನೆ.

1956: ಕಲಾವಿದ ಎಲ್. ಬಸವರಾಜ್ ಜಾನೆ ಜನನ.

1953: ಗೂಢಚರ್ಯೆಗಾಗಿ ಅಮೆರಿಕದ ಇಬ್ಬರು ನಾಗರಿಕರಾದ ಜ್ಯೂಲಿಯಸ್ ಮತ್ತು ಈಥೆಲ್ ರೋಸೆನ್ ಬರ್ಗ್ ಅವರನ್ನು ಸಿಂಗ್ ಸಿಂಗ್ ಸೆರೆಮನೆಯಲ್ಲಿ ಮರಣದಂಡನೆಗೆ ಗುರಿಪಡಿಸಲಾಯಿತು. ಅಮೆರಿಕದಲ್ಲಿ ಗೂಢಚರ್ಯೆಗಾಗಿ ಮರಣದಂಡನೆಗೆ ಗುರಿಯಾದ ಮೊದಲ ಅಮೆರಿಕನ್ ಪ್ರಜೆಗಳು ಇವರು. ತಮ್ಮ ಕೈಗೆ ಬಂದಿದ್ದ ಸೋವಿಯತ್ ಸೇನಾ ರಹಸ್ಯಗಳನ್ನು ಸೋವಿಯತ್ ಒಕ್ಕೂಟಕ್ಕೆ ಹಿಂದಿರುಗಿಸಲು ಯತ್ನಿಸಿದರೆಂಬ ಆಪಾದನೆ ಅವರ ಮೇಲಿತ್ತು.

1953: ಕಲಾವಿದ ಅಶೋಕ ಅಕ್ಕಿ ಟಿ. ಜನನ.

1947: ಸಲ್ಮಾನ್ ರಷ್ದಿ ಜನ್ಮದಿನ. ಆಂಗ್ಲೋ ಇಂಡಿಯನ್ ಕಥೆಗಾರರಾದ ಇವರು ಇಸ್ಲಾಂಗೆ ಸಂಬಂಧಿಸಿದಂತೆ ಬರೆದ `ಸಟಾನಿಕ್ ವರ್ಸಸ್' ಕಥೆ 1989ರಲ್ಲಿ ಇರಾನಿನ ಮುಸ್ಲಿಮರ ಕೋಪಕ್ಕೆ ತುತ್ತಾಯಿತು. ಅವರು ರಷ್ದಿಗೆ `ಮರಣದಂಡನೆ' ವಿಧಿಸಿರುವುದಾಗಿ ಘೋಷಿಸಿದರು. ಇವರ `ಮಿಡ್ನೈಟ್ ಚಿಲ್ಡ್ರನ್ಸ್' ಕೃತಿಗೆ ಬೂಕರ್ ಪ್ರಶಸ್ತಿ ಲಭಿಸಿದೆ.

1940: ಸಂಗೀತಗಾರನ ಮನೆತನದಲ್ಲಿ ಬೆಳೆದ ಖ್ಯಾತ ಸಂಗೀತಗಾರ ಡಿ.ಎನ್. ಗುರುದತ್ ಅವರು ಡಿ.ಕೆ. ನಾಗಣ್ಣ- ಅಶ್ವತ್ಥ ಲಕ್ಷ್ಮಮ್ಮ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು.

1931: ರಾಜಕಾರಣಿ ನಂದಿನಿ ಸತ್ಪತಿ ಜನನ.

1901: ಖ್ಯಾತ ಗಣಿತ ಶಾಸ್ತ್ರಜ್ಞ ರಾಜ್ ಚಂದ್ರ ಬೋಸ್ ಜನನ.

1867: ಮೆಕ್ಸಿಕೊದ ದೊರೆ ಮ್ಯಾಕ್ಸಿಮಿಲಿಯನ್ ನ್ನು ಬೆನಿಟೋ ಜುವಾರೆಜ್ ನ ಪಡೆಗಳು ಗುಂಡಿಟ್ಟು ಕೊಂದವು. ಆತನ ಪುಟ್ಟ ಸೇನೆ 1867ರ ಮೇ 15ರಂದು ಸೋತ ಬಳಿಕ ಈ ಘಟನೆ ನಡೆಯಿತು. ವಿಕ್ಟರ್ ಹ್ಯೂಗೊ, ಜಿಸೆಪ್ ಗ್ಯಾರಿಬಾಲ್ಡಿ ಮತ್ತು ಯುರೋಪಿನ ಹಲವಾರು ದೊರೆಗಳು ಮ್ಯಾಕ್ಸಿಮಿಲಿಯನ್ ನ್ನು ಕ್ಷಮಿಸುವಂತೆ ಮನವಿ ಮಾಡಿದರೂ ಆತನ ಮರಣದಂಡನೆಗೆ ಆದೇಶ ನೀಡಿದ ಜುವಾರೆಜ್ ಮೇಲೆ ಅವು ಯಾವ ಪರಿಣಾಮವನ್ನೂ ಬೀರಲಿಲ್ಲ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Friday, June 20, 2008

ಇಂದಿನ ಇತಿಹಾಸ History Today ಜೂನ್ 18

ಇಂದಿನ ಇತಿಹಾಸ

ಜೂನ್ 18

ಅಮೆರಿಕದ ಪ್ರಜೆಯಾಗಿರುವ ಭಾರತೀಯ ಸಂಜಾತೆ ಬಾಲಾ ಕೃಷ್ಣಮೂರ್ತಿ ಅವರು ತಂತ್ರಜ್ಞಾನ ಅಭಿವೃದ್ಧಿಗೆ ನೀಡಲಾಗುವ ಎಂಜೆಲ್ ಬರ್ಗರ್ ರೊಬೋಟಿಕ್ಸ್ ನ (ಯಂತ್ರ ಮಾನವ ವಿಜ್ಞಾನ) ಪ್ರಶಸ್ತಿಗೆ ಭಾಜನರಾದ ಮೊದಲ ಮಹಿಳೆ ಎಂಬ ಗೌರವಕ್ಕೆ ಪಾತ್ರರಾದರು.

2007: ಅಮೆರಿಕದ ಪ್ರಜೆಯಾಗಿರುವ ಭಾರತೀಯ ಸಂಜಾತೆ ಬಾಲಾ ಕೃಷ್ಣಮೂರ್ತಿ ಅವರು ತಂತ್ರಜ್ಞಾನ ಅಭಿವೃದ್ಧಿಗೆ ನೀಡಲಾಗುವ ಎಂಜೆಲ್ ಬರ್ಗರ್ ರೊಬೋಟಿಕ್ಸ್ ನ (ಯಂತ್ರ ಮಾನವ ವಿಜ್ಞಾನ) ಪ್ರಶಸ್ತಿಗೆ ಭಾಜನರಾದ ಮೊದಲ ಮಹಿಳೆ ಎಂಬ ಗೌರವಕ್ಕೆ ಪಾತ್ರರಾದರು. ಏವೋಲಿನ್ ಇಂಕ್ ಸ್ಥಾಪಕ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಾಲಾ ಕೃಷ್ಣಮೂರ್ತಿ ಅವರು ಕಳೆದ 25 ವರ್ಷಗಳಿಂದ ವಿವಿಧ ತಂತ್ರಾಂಶ, ಸಂಪರ್ಕಜಾಲ ಮತ್ತು ಯಂತ್ರ ಮಾನವ ವಿಜ್ಞಾನದ ಅಭಿವೃದ್ಧಿಗೆ ಪೂರಕವಾದ ಅನೇಕ ಸಾಫ್ಟ್ ವೇರ್ ಅಭಿವೃದ್ಧಿಗೊಳಿಸಿದ್ದು, ಈ ಸಾಧನೆಗಾಗಿ ಅವರನ್ನು ಈಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

2007: ಗಿನ್ನೆಸ್ ವಿಶ್ವ ದಾಖಲೆಗಳ ಪುಸ್ತಕದಿಂದ ಅಧಿಕೃತ ಪ್ರಮಾಣ ಪತ್ರ ಪಡೆಯುವುದರೊಂದಿಗೆ ಜಪಾನಿನ 111 ವರ್ಷದ ತೊಮೊಜಿ ತನಾಬೆ ಅವರು ಅಧಿಕೃತವಾಗಿ ವಿಶ್ವದ ಅತ್ಯಂತ ವೃದ್ಧ ಎಂಬ ಹೆಗ್ಗಳಿಕಗೆ ಪಾತ್ರರಾದರು.

2007: ಲಂಡನ್ನಿನಲ್ಲಿ ನಡೆದ ಬಿಗ್ ಬ್ರದರ್ ರಿಯಾಲಿಟಿ ಶೋ ಸಂದರ್ಭದಲ್ಲಿ ಜನಾಂಗೀಯ ನಿಂದನೆಗೆ ಒಳಗಾಗಿದ್ದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು ಅದೇ ಲಂಡನ್ ನಗರದಲ್ಲಿ ತನ್ನದೇ ಹೆಸರಿನ ಪರಿಮಳ ದ್ರವ್ಯ ಬಿಡುಗಡೆ ಮಾಡಿದರು. ಇದರಿಂದಾಗಿ ಶಿಲ್ಪಾ ಅವರು ಹಾಲಿವುಡ್ಡಿನ ಖ್ಯಾತ ತಾರೆಯರಾದ ಜೆನಿಫರ್ ಲೋಪೆಜ್, ಪ್ಯಾರಿಸ್ ಹಿಲ್ಟನ್ ಅವರಿಗೆ ಸರಿ ಸಮಾನವಾಗಿ ಕಾಣಿಸಿಕೊಂಡರು.

2007: ಅಟ್ಲಾಂಟಿಸ್ ಅಂತರಿಕ್ಷ ಯಾನದ ಅಂಗವಾಗಿ ಅಮೆರಿಕದ ಇಬ್ಬರು ಗಗನಯಾತ್ರಿಗಳು ಕೊನೆಯ ಬಾರಿ ಅಂತರಿಕ್ಷ ನಡಿಗೆ ಕೈಗೊಂಡರು. ಇದರೊಂದಿಗೆ ಅಟ್ಲಾಂಟಿಸ್ ನೌಕೆ ಭೂಮಿಗೆ ವಾಪಸಾಗಲು ಸಜ್ಜಾಯಿತು.

2007: ಬಾಂಗ್ಲಾದೇಶದ ಸ್ಥಾಪನೆಗೆ ಕಾರಣರಾದ ಷೇಕ್ ಮುಜಿಬುರ್ ರಹಮಾನ್ ಅವರನ್ನು ಕೊಂದು ತಲೆ ಮರೆಸಿಕೊಂಡು ಅಮೆರಿಕದಲ್ಲಿದ್ದ ನಿವೃತ್ತ ಸೇನಾ ಅಧಿಕಾರಿ ಮೇಜರ್ ಎ.ಕೆ. ಮೊಹಿಯ್ದುದೀನ್ ಭಾರಿ ಭದ್ರತೆಯ ಮಧ್ಯೆ ಬಾಂಗ್ಲಾದೇಶಕ್ಕೆ ವಾಪಸಾದ. ಆತನನ್ನು ಮ್ಯಾಜಿಸ್ಟ್ರೇಟರ ನ್ಯಾಯಾಲಯದಲ್ಲಿ ಹಾಜರು ಪಡಿಸಿದ ಬಳಿಕ ಢಾಕಾ ಸೆಂಟ್ರಲ್ ಜೈಲಿಗೆ ಕಳುಹಿಸಲಾಯಿತು.

2007: ತಾರಾ ಅಯ್ಯರ್ ಅವರು ಪೋರ್ಚುಗಲ್ಲಿನ ಮೊಂಟೆ ಮೋರ್- ಒ - ನೋವಾದಲ್ಲಿ ಮುಕ್ತಾಯವಾದ ಹತ್ತು ಸಾವಿರ ಅಮೆರಿಕನ್ ಡಾಲರ್ ಮೊತ್ತದ ಬಹುಮಾನ ಐಟಿ ಎಫ್ ಮಹಿಳಾ ಟೆನಿಸ್ ಟೂರ್ನಿಯ ಸಿಂಗಲ್ಸ್ ಪ್ರಶಸ್ತಿ ಪಡೆದುಕೊಂಡರು.

2007: ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯ ಶಕ್ತಿಯನ್ನು ಹುಟ್ಟು ಹಾಕುವ ನಿಟ್ಟಿನಲ್ಲಿ ಎಂಟು ಪ್ರಾದೇಶಿಕ ಪಕ್ಷಗಳು ಚೆನ್ನೈಯಲ್ಲಿ ಸಭೆ ಸೇರಿ `ಸಂಯುಕ್ತ ರಾಷ್ಟ್ರೀಯ ಪ್ರಗತಿಪರ ಮೈತ್ರಿಕೂಟ' (ಯುಎನ್ಪಿಎ) ಹೆಸರಿನಲ್ಲಿ ಹೊಸದಾಗಿ ತೃತೀಯ ರಂಗ ರಚಿಸಿಕೊಂಡವು. ಎಐಎಡಿಎಂಕೆ ನಾಯಕಿ ಜಯಲಲಿತಾ ಅವರ ನಿವಾಸದಲ್ಲಿ ಈ ಸಭೆ ನಡೆಯಿತು.

2006: ಕಳೆದ 44 ವರ್ಷಗಳಿಂದ ಮುಚ್ಚಲ್ಪಟ್ಟ್ದಿದ ಆಯಕಟ್ಟಿನ `ನಾಥು ಲಾ ಪಾಸ್' ಮೂಲಕ ಜುಲೈ 6ರಿಂದ ಗಡಿ ವ್ಯಾಪಾರ ಪುನರಾರಂಭಿಸುವ ಐತಿಹಾಸಿಕ ಒಪ್ಪಂದಕ್ಕೆ ಭಾರತ ಮತ್ತು ಚೀನಾ ಸಮ್ಮತಿಸಿದವು. ಈ ಮಾರ್ಗವನ್ನು ತೆರೆಯುವುದರಿಂದ ಗಡಿ ಮುಚ್ಚಿದ್ದ ಏಷ್ಯಾದ ಎರಡು ಬೃಹತ್ ರಾಷ್ಟ್ರಗಳ ಪರ್ವತ ಪ್ರಾಂತ್ಯಗಳ ಸ್ಥಳೀಯ ಆರ್ಥಿಕತೆ ಮತ್ತು ದ್ವಿಪಕ್ಷೀಯ ವ್ಯಾಪಾರ ವೃದ್ಧಿಗೆ ಹೆಚ್ಚಿನ ನೆರವಾಗಲಿದೆ. ಈ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಇದು ಎರಡೂ ರಾಷ್ಟ್ರಗಳ ಗಡಿಭಾಗದಲ್ಲಿ ವಾಸಿಸುವ ಜನರಿಗೆ 1991, 1992 ಹಾಗೂ 2003ರ ಗಡಿ ವ್ಯಾಪಾರ ಒಪ್ಪಂದದಲ್ಲಿ ಪ್ರಸ್ತಾಪಿಸಿರುವ ಸುಮಾರು 30 ವಸ್ತುಗಳನ್ನು ರಫ್ತು ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ.

2006: ಸತತ 30 ಗಂಟೆಗಳ ಕಾಲ ಮೃದಂಗ ನುಡಿಸುವ ಮೂಲಕ ಕೇರಳದ ಪಾಲಕ್ಕಾಡಿನ ಯುವ ಕಲಾವಿದ ವಿನೀತ್ (17) ಶಾರದಾ ಪೀಠ ಪ್ರವಚನ ಮಂದಿರದಲ್ಲಿ ವಿಶೇಷ ಸಾಧನೆ ಮೆರೆದರು.

1980: ಭಾರತದ ಶಕುಂತಲಾದೇವಿ ಅವರು ಲಂಡನ್ನಿನ ಇಂಪೀರಿಯಲ್ ಕಾಲೇಜಿನ ಕಂಪ್ಯೂಟರ್ ವಿಭಾಗದಲ್ಲಿ 13 ಅಂಕಿಗಳ ಎರಡು ಸಂಖ್ಯೆಯನ್ನು ತೆಗೆದುಕೊಂಡು ಕೇವಲ 28 ಸೆಕೆಂಡುಗಳಲ್ಲಿ ಅವುಗಳನ್ನು ಗುಣಿಸಿ ಉತ್ತರ ಹೇಳಿದರು. ಅವರು ತೆಗೆದುಕೊಂಡಿದ್ದ ಸಂಖ್ಯೆಗಳು: 7,686,369,774,870 ಮತ್ತು 2,465,099,745,779. ಈ ಎರಡು ಸಂಖ್ಯೆಗಳನ್ನು ಗುಣಿಸಿ ಆಕೆ ನೀಡಿದ ಸಮರ್ಪಕ ಉತ್ತರ: 18,947,668,177,995,426,462,773,730.

1968: ವೈವಿಧ್ಯಮಯ ಕಲಾಕೃತಿಗಳ ಮೂಲಕ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿರುವ ಎಸ್. ಮಂಜುನಾಥ ಆಚಾರ್ಯ ಅವರು ಎಸ್. ಶಂಕರನಾರಾಯಣಾಚಾರ್ಯ- ಸಿದ್ದಮ್ಮ ದಂಪತಿಯ ಮಗನಾಗಿ ಕೋಲಾರ ಜಿಲ್ಲೆ ಮುಳಬಾಗಲು ತಾಲ್ಲೂಕಿನ ಶಿವಾರ ಪಟ್ಟಣದಲ್ಲಿ ಜನಿಸಿದರು.

1942: ಶಂಶ ಐತಾಳ ಜನನ.

1939: ಚಂದ್ರಶೇಖರ ಪಾಟೀಲ (ಚಂಪಾ) ಜನನ.

1928: ಬಿ.ಎಸ್. ಅಣ್ಣಯ್ಯ ಜನನ.

1928: ವಿಮಾನಯಾನಿ ಅಮೇಲಿಯಾ ಈಯರ್ ಹಾರ್ಟ್ ಅಟ್ಲಾಂಟಿಕ್ ಸಾಗರದ ಮೇಲಿನಿಂದ ವಿಮಾನ ಮೂಲಕ ಕ್ರಮಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆಕೆ ನ್ಯೂಫೌಂಡ್ ಲ್ಯಾಂಡ್ ನಿಂದ ವೇಲ್ಸ್ ವರೆಗೆ ವಿಮಾನದಲ್ಲಿ ಪೈಲಟ್ ವಿಲ್ಮರ್ ಸ್ಟಲ್ಜ್ ಜೊತೆಗೆ ಪ್ರಯಾಣಿಕಳಾಗಿ 21 ಗಂಟೆಗಳ ಕಾಲ ಪಯಣಿಸಿದರು.

1918: ಸಾಹಿತಿ ಸಿದ್ಧಯ್ಯ ಪುರಾಣಿಕ ಜನನ.

1912: ವಿಶಿಷ್ಟ ನವೋದಯ ಕಥೆಗಾರರೆಂದು ಖ್ಯಾತಿ ಪಡೆದಿದ್ದ ಅಶ್ವತ್ಥ ನಾರಾಯಣ ರಾವ್ ಅವರು ಸೋಮಯ್ಯ- ಲಕ್ಷ್ಮಮ್ಮ ದಂಪತಿಯ ಪುತ್ರನಾಗಿ ಮೈಸೂರಿನಲ್ಲಿ ಜನಿಸಿದರು.

1817: ಜಂಗ್ ಬಹದ್ದೂರ್ (1817-1877) ಜನ್ಮದಿನ. 1846ರಿಂದ 1877ರವರೆಗೆ ನೇಪಾಳದ ಪ್ರಧಾನಮಂತ್ರಿ ಹಾಗೂ ಆಡಳಿತಗಾರನಾಗಿದ್ದ ಈತ ರಾಣಾ ವಂಶವನ್ನು ಪ್ರಧಾನಮಂತ್ರಿಗಳ ವಂಶವಾಗಿ ಪ್ರತಿಷ್ಠಾಪಿಸಿದ. 1951ರವರೆಗೂ ಪ್ರಧಾನಮಂತ್ರಿಗಳ ಹುದ್ದೆ ಈ ವಂಶದಲ್ಲೇ ಮುಂದುವರಿಯಿತು.

1815: ವೆಲ್ಲಿಂಗ್ಟನ್ನಿನ ಮೊದಲ ಡ್ಯೂಕ್ ಆರ್ಥರ್ ವೆಲ್ಲೆಸ್ಲ್ಲೆ ಮತ್ತು ಪ್ರಷಿಯಾದ ಜನರಲ್ ಗ್ಲೆಭರ್ಡ್ ಬ್ಲುಚರ್ ಒಟ್ಟಾಗಿ ಬ್ರಸೆಲ್ಸಿನಿಂದ ದಕ್ಷಿಣಕ್ಕೆ ನಾಲ್ಕು ಕಿ.ಮೀ. ದೂರದ ವಾಟರ್ಲೂನಲ್ಲಿ ನೆಪೋಲಿಯನ್ ಬೋನಪಾರ್ಟೆ ವಿರುದ್ಧ ಹೋರಾಡಿ ಆತನನ್ನು ಸೋಲಿಸಿದರು. ನಾಲ್ಕು ದಿನಗಳ ಬಳಿಕ ನೆಪೋಲಿಯನ್ ಎರಡನೇ ಬಾರಿಗೆ ಪದತ್ಯಾಗ ಮಾಡಿದ.

1769: ರಾಬರ್ಟ್ ಸ್ಟೀವರ್ಟ್ ವೈಕೌಂಟ್ ಕ್ಯಾಸೆಲ್ ರೀಗ್ (1769-1822) ಜನ್ಮದಿನ. ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಈತ ವಿಯೆನ್ನಾ ಕಾಂಗೆಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ವಿಯೆನ್ನಾ ಕಾಂಗ್ರೆಸ್ 1815ರಲ್ಲಿ ಯುರೋಪಿನ ನಕ್ಷೆಯನ್ನು ಬದಲಾಯಿಸಿತು.

1633: ಕೊಂಕಣಿ ಭಾಷಾ ನಿಘಂಟು ತಯಾರಕ ರೆವೈರು ಡಿಗೊ ನಿಧನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

ಇಂದಿನ ಇತಿಹಾಸ History Today ಜೂನ್ 17

ಇಂದಿನ ಇತಿಹಾಸ

ಜೂನ್ 17

ದುಬೈಯಲ್ಲಿ ನಡೆದ ಐಐಎಫ್ಐ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಂಜಯ ಲೀಲಾ ಬನ್ಸಾಲಿ ನಿರ್ದೇಶನದ ಹಿಂದಿ ಚಿತ್ರ `ಬ್ಲ್ಯಾಕ್' ಪ್ರಶಸ್ತಿಗಳನ್ನು ಕೊಳ್ಳೆ ಹೊಡೆಯಿತು.

2007: ತೆರೆ ಕಂಡ ಮೊದಲ ದಿನವೇ 60 ಲಕ್ಷ ರೂಪಾಯಿ (5,60,00 ರಿಂಗೆಟ್ಸ್) ಸಂಗ್ರಹಿಸುವ ಮೂಲಕ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ `ಶಿವಾಜಿ' ಮಲೇಷ್ಯಾದಲ್ಲೂ ಹಿಂದಿನ ದಾಖಲೆ ಮುರಿದು ಹೊಸ ದಾಖಲೆ ಸೃಷ್ಟಿಸಿತು.

2007: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರನ್ನು ಎಚ್ಐವಿ/ಏಡ್ಸ್ ಬಗ್ಗೆ ಜಾಗೃತಿ ಉಂಟುಮಾಡಲು ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ `ಸಿಲ್ವರ್ ಸ್ಟಾರ್' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಲಂಡನ್ನಿನ ಬ್ರಿಟನ್ ವಿದೇಶ ಮತ್ತು ಕಾಮನ್ ವೆಲ್ತ್ ಕಚೇರಿಯ ದರ್ಬಾರ್ ಕೋರ್ಟಿನಲ್ಲಿ ಈದಿನ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಬ್ರಿಟನ್ ಸಂಸತ್ತಿನ ಕೆಳಮನೆನಾಯಕ ಜಾಕ್ ಸ್ಟ್ರಾ 31ರ ಹರೆಯದ ಶಿಲ್ಪಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಲೇಬರ್ ಪಕ್ಷದ ಸಂಸದ ಕೀತ್ ವಾಜ್ ಅವರು ಚುನಾಯಿತಗೊಂಡ 20ನೇ ವರ್ಷಾಚರಣೆಯ ಪ್ರಯುಕ್ತ ಸಮಾರಂಭ ಏರ್ಪಡಿಸಲಾಗಿತ್ತು.

2007: ಸ್ಕಾಟ್ಲೆಂಡಿನ 22 ವರ್ಷ ವಯಸ್ಸಿನ ಹವ್ಯಾಸಿ ಫುಟ್ಬಾಲ್ ಆಟಗಾರ ಅಲೆಕ್ಸ್ ಮೆಕ್ ಗ್ರೆಗೊರ್ ಅವರು ಪಂದ್ಯದ ಆರಂಭದ ಮೂರೇ ನಿಮಿಷದ ಅವಧಿಯಲ್ಲಿ `ಹ್ಯಾಟ್ರಿಕ್' ಸಾಧನೆ ಮಾಡಿ, ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆಯಾದರು. ಲಂಡನ್ನಿನ ಫುಟ್ಬಾಲ್ ಲೀಗ್ ಪಂದ್ಯವೊಂದರಲ್ಲಿ ಕುಲ್ಲೆನ್ ಕ್ಲಬ್ ವಿರುದ್ಧ ಬಿಷಪ್ ಮಿಲ್ ವಿಲ್ಲಾ ಕ್ಲಬ್ ತಂಡದ ಪರವಾಗಿ ಆಡಿದ ಅಲೆಕ್ಸ್ ತೀರ ಕಡಿಮೆ ಅವಧಿಯಲ್ಲಿ ಮೂರು ಬಾರಿ ಚೆಂಡನ್ನು ಗುರಿ ಮುಟ್ಟಿಸಿ, ಗಮನ ಸೆಳೆದರು. ಶೌಚಾಲಯ ದುರಸ್ತಿ ಮಾಡುವ ಉದ್ಯೋಗದಲ್ಲಿರುವ ಅಲೆಕ್ಸ್ ಈ ಪಂದ್ಯದಲ್ಲಿ ಒಟ್ಟು ನಾಲ್ಕು ಗೋಲು ಗಳಿಸಿದರು. ವಿಜಯ ಸಾಧಿಸಿದ ಬಿಷಪ್ ಮಿಲ್ ಪರ ಹನ್ನೊಂದು ಗೋಲುಗಳು ದಾಖಲಾದವು. ಈ ಸಾಧನೆಯೊಂದಿಗೆ ಅಲೆಕ್ಸ್ ಹೆಸರು ಗಿನ್ನೆಸ್ ವಿಶ್ವ ದಾಖಲೆ ಪುಸ್ತಕ ಸೇರಿತು.

2007: ಮರಗಳನ್ನು ಸ್ಥಳಾಂತರಿಸುವ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್ಸಿಎಲ್)ದ ಯೋಜನೆ ಈಗ ಯಶಸ್ಸಿನತ್ತ ಸಾಗುವ ಸಾಧ್ಯತೆ ಕಂಡುಬಂದಿತು. ಎಂ.ಜಿ.ರಸ್ತೆಯಿಂದ ಪಕ್ಕದ ಮಾಣಿಕ್ ಷಾ ಪೆರೇಡ್ ಮೈದಾನಕ್ಕೆ ಸ್ಥಳಾಂತರಗೊಳಿಸಲಾದ ಐದು ಮರಗಳಲ್ಲಿ ಮೂರರಲ್ಲಿ ಹೊಸ ಚಿಗುರು ಮೂಡಿದ್ದು ಬೆಳಕಿಗೆ ಬಂದಿತು. ಮರಗಳ ಸ್ಥಳಾಂತರ ಕಾರ್ಯ ಮೇ 28ರಿಂದ ಪ್ರಾರಂಭವಾಗಿತ್ತು. ಮೊದಲ ದಿನ ಸತತ ಆರು ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಕ್ರೇನ್ಗಳ ಸಹಾಯದಿಂದ ತುಬುಯಿಯಾ ರೋಸಾ ಜಾತಿಯ ಒಂದು ಮರವನ್ನು ಸ್ಥಳಾಂತರ ಮಾಡಲಾಗಿತ್ತು. ಬಳಿಕ ಹಂತ ಹಂತವಾಗಿ ಎಂ.ಜಿ. ರಸ್ತೆಯಿಂದ ಈ ಮೈದಾನಕ್ಕೆ ಒಟ್ಟು ಐದು ಮರಗಳನ್ನು ಸ್ಥಳಾಂತರಿಸಲಾಗಿತ್ತು. ಚೆನ್ನೈನ `ಲ್ಯಾಂಡ್ ಸ್ಕೇಪ್ ಆರ್ಕಿಟೆಕ್ಟ್ಸ್' ಸಂಸ್ಥೆಯ ಸಿಬ್ಬಂದಿ ಈ ಕೆಲಸವನ್ನು ನಿರ್ವಹಿಸ್ದಿದರು. ಬೆಂಗಳೂರು ಪರಿಸರ ಸಂಘ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗಳು ಮರಗಳನ್ನು ಸ್ಥಳಾಂತರಿಸುವ ಕಾರ್ಯಕ್ಕೆ ಸಹಭಾಗಿತ್ವ ನೀಡಿದ್ದವು.

2007: ಪುಣೆಯ ಗ್ರಾಮವೊಂದರಲ್ಲಿ ಇಕ್ಕಟ್ಟಾದ ಕೊಳವೆಬಾವಿಯೊಳಗೆ ಬಿದ್ದ ಶಿರೂರ್ ತಾಲ್ಲೂಕಿನ ವಡಗಾಂವ್ ರಸಾಯಿ ಗ್ರಾಮದ ಬಾಲಕ ಸೋನು ಶಿವಾಜಿ ದೇಶಮುಖ್ ಎಂಬ ಐದು ವರ್ಷದ ಬಾಲಕನನ್ನು ಮೇಲಕ್ಕೆ ಕರೆತರಲಾಯಿತು. ಆದರೆ ಆತ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ. ಈತ 150 ಅಡಿ ಆಳದ ಕೊಳವೆಬಾವಿಯಲ್ಲಿ ಬಿದ್ದು, 20 ಅಡಿ ಅಂತರದಲ್ಲೇ ಸಿಕ್ಕಿಹಾಕಿಕೊಂಡ. ಏಳು ತಾಸುಗಳ ಹರಸಾಹಸದ ನಂತರ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕನನ್ನು ರಕ್ಷಿಸಿ ಮೇಲಕ್ಕೆ ಕರೆತಂದು ಆಸ್ಪತ್ರೆಗೆ ಸೇರಿಸಲಾಗಿತ್ತು.

2007: ಆಫ್ಘಾನಿಸ್ಥಾನದ ರಾಜಧಾನಿ ಕಾಬೂಲಿನಲ್ಲಿ ಸಂಭವಿಸಿದ ಮೂರು ಸ್ಫೋಟಗಳಲ್ಲಿ ಪೊಲೀಸರು ಸೇರಿ ಒಟ್ಟು 35 ಜನ ಬಲಿಯಾದರು. ಈ ಕೃತ್ಯಕ್ಕೆ ತಾನೇ ಕಾರಣ ಎಂದು ತಾಲಿಬಾನ್ ಉಗ್ರಗಾಮಿಗಳು ಘೋಷಿಸಿದರು.

2006: ದುಬೈಯಲ್ಲಿ ನಡೆದ ಐಐಎಫ್ಐ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಂಜಯ ಲೀಲಾ ಬನ್ಸಾಲಿ ನಿರ್ದೇಶನದ ಹಿಂದಿ ಚಿತ್ರ `ಬ್ಲ್ಯಾಕ್' ಪ್ರಶಸ್ತಿಗಳನ್ನು ಕೊಳ್ಳೆ ಹೊಡೆಯಿತು. ಉತ್ತಮ ಚಿತ್ರ, ಉತ್ತಮ ನಿರ್ದೇಶಕ, ಉತ್ತಮ ನಟ (ಅಮಿತಾಭ್ ಬಚ್ಚನ್), ಉತ್ತಮ ನಟಿ (ರಾಣಿ ಮುಖರ್ಜಿ), ಉತ್ತಮ ಪೋಷಕ ನಟಿ (ಆಯೇಷಾ ಕಪೂರ್), ಉತ್ತಮ ಛಾಯಾಗ್ರಹಣ, ಉತ್ತಮ ಸಂಕಲನ, ಉತ್ತಮ ಧ್ವನಿ ಗ್ರಹಣ ಮತ್ತು ಉತ್ತಮ ಹಿನ್ನೆಲೆ ಸಂಗೀತ ಪ್ರಶಸ್ತಿಗಳು `ಬ್ಲ್ಯಾಕ್'ಗೆ ಲಭಿಸಿದವು.

2006: ಮರಾಠಿಯ ಹೆಸರಾಂತ ಸಂಗೀತಗಾರ ಸ್ನೇಹಲ್ ಭಾಟ್ಕರ್ ಮತ್ತು ಹಿಂದಿಯ ಪ್ರಸಿದ್ಧ ಹಿನ್ನೆಲೆ ಗಾಯಕ ಮನ್ನಾ ಡೇ ಅವರನ್ನು 2004-05ನೇ ಸಾಲಿನ ಪ್ರತಿಷ್ಠಿತ ಲತಾ ಮಂಗೇಶ್ಕರ್ ಪ್ರಶಸ್ತಿಗೆ ಮಹಾರಾಷ್ಟ್ರ ಸರ್ಕಾರವು ಆಯ್ಕೆ ಮಾಡಿತು.

1980: ಅಮೆರಿಕದ ಟೆನಿಸ್ ಆಟಗಾರ್ತಿ ವೀನಸ್ ವಿಲಿಯಮ್ಸ್ ಜನನ.

1973: ಭಾರತದ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಜನ್ಮದಿನ. ಇವರು ಮಹೇಶ್ ಭೂಪತಿ ಅವರೊಂದಿಗೆ ಫ್ರೆಂಚ್ ಓಪನ್, ವಿಂಬಲ್ಡನ್ ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದುಕೊಂಡವರು.

1972: ವಾಟರ್ ಗೇಟ್ ಕಟ್ಟಡದಲ್ಲಿದ್ದ ಡೆಮಾಕ್ರಟಿಕ್ ಪಾರ್ಟಿ ನ್ಯಾಷನಲ್ ಕಮಿಟಿಯ ಕೇಂದ್ರ ಕಚೇರಿಗೆ ನುಗ್ಗಿದ್ದಕ್ಕಾಗಿ ಐವರನ್ನು ವಾಷಿಂಗ್ಟನ್ ಪೊಲೀಸರು ಬಂಧಿಸಿದರು. ಈ ಪ್ರಕರಣ ಉಲ್ಬಣಿಸುತ್ತಾ ಹೋಗಿ `ವಾಟರ್ಗೇಟ್ ಹಗರಣ' ಎಂದೇ ಖ್ಯಾತಿ ಪಡೆಯಿತು. ಅಷ್ಟೇ ಅಲ್ಲ 1974ರಲ್ಲಿ ಅಮೆರಿಕದ ಅಧ್ಯಕ್ಷ ರಿಚರ್ಡ್ ನಿಕ್ಸನ್ ರಾಜೀನಾಮೆಯೊಂದಿಗೆ ಪರ್ಯವಸಾನಗೊಂಡಿತು.

1958: ಗ್ವಾಲಿಯರ್ ಸಮೀಪದ ಕೊತಾಹ್-ಕಿ-ಸರಾಯ್ ರಣಾಂಗಣದಲ್ಲಿ ಅಶ್ವದಳ ಸೈನಿಕನಂತೆ ವೇಷ ಧರಿಸಿ ಹೋರಾಡುತ್ತಿದ್ದ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಬ್ರಿಟಿಷ್ ಸೈನಿಕ ಹುಸ್ಸಾರ್ನಿಂದ ಹತಳಾದಳು. ಹುಸ್ಸಾರ್ ಗೆ ತನ್ನಿಂದ ಹತಳಾದ ವ್ಯಕ್ತಿ ಯಾರೆಂದು ಗೊತ್ತಿರಲಿಲ್ಲ. ಆಕೆ ಲಕ್ಷ್ಮೀಬಾಯಿ ಎಂದು ಅರಿವಾಗುತ್ತಿದ್ದಂತೆಯೇ ಜನರಲ್ ಹ್ಯೂಗ್ ರೋಸ್ `ಇಲ್ಲಿ ಮಲಗಿರುವುದು ಬಂಡುಕೋರರ ನಡುವಿನ ಏಕೈಕ ಪುರುಷ' ಎಂದು ಹೇಳಿ ಆಕೆಗೆ ಗೌರವ ಸಲ್ಲಿಸಿದ.

1950: ಷಿಕಾಗೋದಲ್ಲಿ ಮೊದಲ ಬಾರಿಗೆ ಮೂತ್ರಪಿಂಡ ಕಸಿ ಚಿಕಿತ್ಸೆ.

1939: ವಿಚಾರವಾದಿ, ಚಿಂತಕ, ಸಾಹಿತಿ ಡಾ. ಜಿ. ರಾಮಕೃಷ್ಣ ಅವರು ಸುಬ್ರಹ್ಮಣ್ಯಂ- ನರಸಮ್ಮ ದಂಪತಿಯ ಪುತ್ರನಾಗಿ ಮಾಗಡಿ ಬಳಿಯ ಕೆಂಪಸಾಗರದಲ್ಲಿ ಜನಿಸಿದರು.

1933: ಭಾರತದಲ್ಲಿ ಅಸಹಕಾರ ಚಳವಳಿ ಮುಕ್ತಾಯ.

1929: ಟೈಗ್ರನ್ ವಿ. ಪೆಟ್ರೋಸಿಯನ್ (1924-84) ಜನ್ಮದಿನ. ಈ ಸೋವಿಯತ್ ಚೆಸ್ ಗ್ರ್ಯಾಂಡ್ ಮಾಸ್ಟರ್ 1963ರಲ್ಲಿ ಜಾಗತಿಕ ಚೆಸ್ ಚಾಂಪಿಯನ್ ಶಿಪ್ ಗೆದ್ದುಕೊಂಡರು. 1969ರಲ್ಲಿ ತನ್ನ ಜನ್ಮದಿನದಂದೇ ಬೋರಿಸ್ ಸ್ಪಾಸ್ಕಿ ಎದುರು ಸೋತು ವಿಶ್ವ ಚೆಸ್ ಚಾಂಪಿಯನ್ ಶಿಪ್ ಕಳೆದುಕೊಂಡರು.

1917: ಅಹಮದಾಬಾದಿನ ಸಬರಮತಿ ಆಶ್ರಮದ ಹೃದಯಕುಂಜದಲ್ಲಿ ಮಹಾತ್ಮ ಗಾಂಧಿ ಮತ್ತು ಕಸ್ತೂರಿಬಾ ವಾಸ ಆರಂಭ.

1867: ಗ್ಲಾಸ್ಗೋದಲ್ಲಿ ಜೋಸೆಫ್ ಲಿಸ್ಟರ್ ತನ್ನ ಸಹೋದರಿ ಇಸಬೆಲ್ಲಾಳಿಗೆ ಸೆಪ್ಟಿಕ್ (ನಂಜು) ನಿರೋಧಕ ನೀಡಿ ಮೊತ್ತ ಮೊದಲ ಶಸ್ತ್ರಚಿಕಿತ್ಸೆ ನಡೆಸಿದ.

1674: ಶಿವಾಜಿಯ ತಾಯಿ ಜೀಜಾಬಾಯಿ ನಿಧನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

ಇಂದಿನ ಇತಿಹಾಸ History Today ಜೂನ್ 16

ಇಂದಿನ ಇತಿಹಾಸ

ಜೂನ್ 16

ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಹೊಸ ಇತಿಹಾಸ ನಿರ್ಮಿಸಿದರು. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಅತಿಹೆಚ್ಚು ದಿನಗಳನ್ನು ಕಳೆದ ಮಹಿಳೆ ಎಂಬ ಗೌರವಕ್ಕೆ ಅವರು ಪಾತ್ರರಾದರು. ಭಾರತೀಯ ಕಾಲಮಾನ ಬೆಳಗ್ಗೆ 11.17ರ ವೇಳೆ ಸುನೀತಾ ಈ ದಾಖಲೆಗೆ ಭಾಜನರಾದರು.


2007: ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಹೊಸ ಇತಿಹಾಸ ನಿರ್ಮಿಸಿದರು. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಅತಿಹೆಚ್ಚು ದಿನಗಳನ್ನು ಕಳೆದ ಮಹಿಳೆ ಎಂಬ ಗೌರವಕ್ಕೆ ಅವರು ಪಾತ್ರರಾದರು. ಭಾರತೀಯ ಕಾಲಮಾನ ಬೆಳಗ್ಗೆ 11.17ರ ವೇಳೆ ಸುನೀತಾ ಈ ದಾಖಲೆಗೆ ಭಾಜನರಾದರು. ಅಮೆರಿಕದ ಗಗನಯಾತ್ರಿ ಶಾನನ್ ಲುಸಿದ್ 1996ರಲ್ಲಿ ಬಾಹ್ಯಾಕಾಶ ಕೇಂದ್ರದಲ್ಲಿ 188 ದಿನ ಮತ್ತು 4 ಗಂಟೆಗಳನ್ನು ಕಳೆದದ್ದು ಈವರೆಗಿನ ದಾಖಲೆಯಾಗಿತ್ತು. ಸುನೀತಾ ಅದನ್ನು ಈದಿನ ಮುರಿದರು. 2006ರ ಡಿಸೆಂಬರ್ 10ರಿಂದ ಬಾಹ್ಯಾಕಾಶ ಕೇಂದ್ರವಾಸಿಯಾದ ಸುನೀತಾ ದಾಖಲೆ ಮಾಡುತ್ತಿರುವುದು ಇದೇ ಮೊದಲಲ್ಲ. ಈ ವರ್ಷದ ಆರಂಭದಲ್ಲಿ 29 ಗಂಟೆ ಮತ್ತು 17 ನಿಮಿಷಗಳ ಕಾಲ ಬಾಹ್ಯಾಕಾಶ ನಡಿಗೆ ಕೈಗೊಂಡು ನೂತನ ದಾಖಲೆ ಮಾಡಿದ್ದರು. ಈ ಗೌರವ ಗಗನಯಾತ್ರಿ ಕ್ಯಾಥರಿನ್ ತಾರ್ನ್ ಟನ್ ಅವರ ಹೆಸರಲ್ಲಿ ಇತ್ತು. ಬಾಹ್ಯಾಕಾಶ ಕೇಂದ್ರದಲ್ಲಿ ಇದ್ದುಕೊಂಡೇ ಮ್ಯಾರಥಾನ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮೂಲಕ ಏಪ್ರಿಲ್ ತಿಂಗಳಲ್ಲಿ ಸುನೀತಾ ಮತ್ತೊಂದು ದಾಖಲೆ ಸ್ಥಾಪಿಸಿದ್ದರು.

2007: ಭಾರತೀಯ ಕ್ರಿಕೆಟ್ ಆಟಗಾರ ದೊಡ್ಡ ನರಸಯ್ಯ ಗಣೇಶ್ ಈದಿನ ಮುಸ್ಸಂಜೆ ಕ್ರಿಕೆಟ್ ಗೆ ವಿದಾಯ ಹೇಳಿದರು. ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಗಣೇಶ್ ಐದು ವಿಕೆಟ್ ಪಡೆದಿದ್ದರು. ಜಿಂಬಾಬ್ವೆ ವಿರುದ್ಧ ಆಡಿದ ಏಕೈಕ ಏಕದಿನ ಪಂದ್ಯದಲ್ಲಿ ಒಂದು ವಿಕೆಟ್ ಗಳಿಸಿದ್ದರು. 104 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ ಅವರು 29.42 ಸರಾಸರಿಯಲ್ಲಿ 365 ವಿಕೆಟ್ ಕಬಳಿಸಿದ್ದರು.

2007: ನೈಜೀರಿಯಾದ ಉಗ್ರಗಾಮಿಗಳು ತಾವು ಅಪಹರಿಸಿದ್ದ 10 ಮಂದಿ ಭಾರತೀಯರನ್ನು ಬಿಡುಗಡೆ ಮಾಡಿದ್ದಾರೆ ಎಂದು ಎಂದು ಭದ್ರತಾ ಮೂಲಗಳು ಪ್ರಕಟಿಸಿದವು. ಹದಿನೈದು ದಿನಗಳ ಹಿಂದೆ ಈ 10 ಮಂದಿಯನ್ನು ಅಪಹರಿಸಲಾಗಿತ್ತು.

2007: ಭಾರತೀಯ ಮೂಲದ ಬರಹಗಾರ ಸಲ್ಮಾನ್ ರಷ್ದಿ ಅವರನ್ನು ಇಂಗ್ಲೆಂಡಿನ ರಾಣಿ ಎರಡನೇ ಎಲಿಜಬೆತ್ ಅವರು ಪ್ರತಿಷ್ಠಿತ `ನೈಟ್ಹುಡ್' ಪದವಿಗೆ ಆಯ್ಕೆ ಮಾಡಿದರು. ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಈ ಗೌರವ ನೀಡಲಾಯಿತು.

2007: ಮುಸ್ಲಿಂ ಪ್ರತ್ಯೇಕವಾದಿಗಳು ಮತ್ತು ಫಿಲಿಪ್ಪೀನ್ಸ್ ಸರ್ಕಾರದ ಮಧ್ಯೆ ಸಂಧಾನಕಾರರಾಗಿ ಕಾರ್ಯ ನಿರ್ವಹಿಸುತ್ತ್ದಿದ ಸಿಲ್ವೆಸ್ಟರ್ ಅಘಬ್ಲೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದರಿಂದ ಶಾಂತಿ ಸ್ಥಾಪನೆಯ ಯತ್ನಕ್ಕೆ ಹಿನ್ನಡೆಯಾಯಿತು.

2006: ಭಾರತದ ಹೆಸರಾಂತ ಚಿತ್ರ ನಿರ್ದೇಶಕ ಅಡೂರು ಗೋಪಾಲಕೃಷ್ಣನ್ ಅವರಿಗೆ ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ `ಪ್ರತಿಷ್ಠಿತ ಕ್ರಿಸ್ಟಲ್ ಪಿರಮಿಡ್' ಪ್ರಶಸ್ತಿ ಲಭಿಸಿತು. ದಕ್ಷಿಣ ಏಷ್ಯ ಸಿನೆಮಾ ಪ್ರತಿಷ್ಠಾನವು ಸ್ಥಾಪಿಸಿರುವ ಈ ಪ್ರಶಸ್ತಿಯನ್ನು ಲಂಡನ್ನಿನ ನೆಹರೂ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಭಾರತೀಯ ಹೈಕಮೀಷನರ್ ಕಮಲೇಶ ಶರ್ಮಾ ಪ್ರಧಾನ ಮಾಡಿದರು.

2006: ಇಂಧನ ಕ್ಷೇತ್ರದ ಬ್ರಿಟನ್ನಿನ ಮುಂಚೂಣಿ ಸಂಸ್ಥೆ ಪವರ್ ಜೆನ್ ಭಾರತದಲ್ಲಿರುವ ತನ್ನ ಎಲ್ಲ ಕಾಲ್ ಸೆಂಟರ್ ಗಳನ್ನು ಮುಚ್ಚಲು ನಿರ್ಧರಿಸಿತು. ಹೊರಗುತ್ತಿಗೆಯಿಂದ ಗ್ರಾಹಕರಿಗೆ ಕಿರಿಕಿರಿ ಆಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದ್ದು ಇನ್ನು ಮುಂದೆ ಸಂಸ್ಥೆಯ ಎಲ್ಲ 60 ಲಕ್ಷ ಗ್ರಾಹಕರಿಗೂ ಬ್ರಿಟನ್ನಿನಲ್ಲೇ ಉತ್ತರಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಸಂಸ್ಥೆ ಪ್ರಕಟಿಸಿತು.
2006: ಭಾರಿ ವಾದ ವಿವಾದಕ್ಕೆ ಕಾರಣವಾದ ಬೆಂಗಳೂರು- ಮೈಸೂರು ಇನ್ ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆಯ (ಬಿಎಂಐಸಿ) ಭಾಗವಾದ ಕೆಂಗೇರಿ- ತಲಘಟ್ಟಪುರಕ್ಕೆ ಸಂಪರ್ಕ ಕಲ್ಪಿಸುವ ಹೊರ ವರ್ತುಲ ರಸ್ತೆ (ಫರಿಫೆರಲ್ ರಸ್ತೆ) ಸರ್ಕಾರದ ವಿರೋಧದ ಮಧ್ಯೆಯೇ ಈದಿನ ಸಾರ್ವಜನಿಕರ ಸೇವೆಗೆ ಮುಕ್ತವಾಯಿತು. 9 ಕಿ.ಮೀ. ಉದ್ದದ ಈ ರಸ್ತೆಯನ್ನು 58 ಪುಟಾಣಿಗಳು ಟೇಪು ಕತ್ತರಿಸಿ ಉದ್ಘಾಟಿಸಿದರು. 98 ವರ್ಷದ ರಾಮಕ್ಕ ಜ್ಯೋತಿ ಬೆಳಗಿ ಕಾರ್ಯಕಮಕ್ಕೆ ಚಾಲನೆ ನೀಡಿದರು.

2006: ವಿಶ್ವದ ಅತ್ಯಂತ ಕಿರಿಯ ಕಾರ್ಯ ನಿರ್ವಹಣಾ ಅಧಿಕಾರಿ (ಸಿಇಓ) ಸುಹಾಸ ಗೋಪಿನಾಥ ಅವರು ತಮ್ಮ `ಗ್ಲೋಬಲ್ ಇಂಕ್' ಕಂಪೆನಿಯ ಕೇಂದ್ರ ಕಚೇರಿಯನ್ನು ಕ್ಯಾಲಿಫೋರ್ನಿಯಾದಿಂದ ತಮ್ಮ ತಾಯ್ನೆಲವಾದ ಬೆಂಗಳೂರಿಗೆ ಸ್ಥಳಾಂತರಿಸುವುದಾಗಿ ಬೆಂಗಳೂರಿನಲ್ಲಿ ಈದಿನ ಪ್ರಕಟಿಸಿದರು. ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಕಚೇರಿಗೆ ಸ್ಥಳಾವಕಾಶ ಒದಗಿಸುವುದಾಗಿ ಭೇಟಿ ಕಾಲದಲ್ಲಿ ಭರವಸೆ ಕೊಟ್ಟದ್ದನ್ನು ಅನುಸರಿಸಿ ಗೋಪಿನಾಥ ಈ ನಿರ್ಧಾರ ಕೈಗೊಂಡರು. ಭಾರತದಲ್ಲಿ 18 ವರ್ಷವಾಗದ ವಿನಃ ಕಂಪೆನಿ ಆರಂಭಿಸಲು ಸಾಧ್ಯವಿಲ್ಲವಾದ ಕಾರಣ 2000 ದಲ್ಲಿ, 14ನೇ ವಯಸ್ಸಿನಲ್ಲಿ ಗೋಪಿನಾಥ ಅವರು ಕ್ಯಾಲಿಫೋರ್ನಿಯಾದಲ್ಲಿ ತಮ್ಮ `ಗ್ಲೋಬಲ್ ಇಂಕ್' ನ್ನು ಸ್ಥಾಪಿಸಿದ್ದರು. ಪ್ರಸ್ತುತ 13 ರಾಷ್ಟ್ರಗಳಲ್ಲಿ ತನ್ನ ಶಾಖೆಗಳನ್ನು ಹೊಂದಿರುವ ಈ ಕಂಪೆನಿಯಲ್ಲಿ 2006ರ ವೇಳೆಗೆ 600ಕ್ಕೂ ಹೆಚ್ಚು ಜನ ದುಡಿಯುತ್ತಿದ್ದರು.

1990: ಮುಂಬೈಯಲ್ಲಿ 42 ಸೆಂ.ಮೀ. ದಾಖಲೆ ಮಳೆ. 1986ರಲ್ಲಿ 41 ಸೆಂ.ಮೀ. ಮಳೆ ಒಂದೇ ದಿನ ಸುರಿದಿತ್ತು.

1977: ಲಿಯೋನಿದ್ ಬ್ರೆಜ್ನೇವ್ ಯುಎಸ್ಎಸ್ಆರ್ (ಸೋವಿಯತ್ ಒಕ್ಕೂಟ) ಅಧ್ಯಕ್ಷರಾದರು.

1974: ಸಾಹಿತಿ ಗವಿಸಿದ್ದ ಎನ್. ಬಳ್ಳಾರಿ ಜನನ.

1963: ಸೋವಿಯತ್ ಗಗನಯಾನಿ ವಾಲೆಂಟಿನಾ ತೆರೆಸ್ಕೋವಾ ಬಾಹ್ಯಾಕಾಶಕ್ಕೆ ತೆರಳಿದ ಮೊತ್ತ ಮೊದಲ ಮಹಿಳೆಯಾದರು. ಬಾಹ್ಯಾಕಾಶ ನೌಕೆ ವೊಸ್ತೋಕ್ 6 ಮೂಲಕ ಅವರು ಬಾಹ್ಯಾಕಾಶಕ್ಕೆ ಏರಿದರು.

1961: ಸೋವಿಯತ್ ಬ್ಯಾಲೆ ನೃತ್ಯಪಟು ರುಡೋಲ್ಫ್ ನ್ಯೂರೆಯೆವ್ ತಮ್ಮ ತಂಡವು ಪ್ಯಾರಿಸ್ಸಿನಲ್ಲಿ ಇದ್ದಾಗ ಪಶ್ಚಿಮಕ್ಕೆ ರಾಷ್ಟ್ರಾಂತರ ಮಾಡಿದರು.

1950: ಹಿಂದಿ ಚಿತ್ರನಟ ಮಿಥುನ್ ಚಕ್ರವರ್ತಿ ಜನನ.

1946: ಮಧ್ಯಂತರ ಸರ್ಕಾರ ರಚನೆಗೆ ಭಾರತೀಯ ನಾಯಕರನ್ನು ಬ್ರಿಟನ್ ಲಂಡನ್ನಿಗೆ ಆಹ್ವಾನಿಸಿತು.

1942: ರಂಗಭೂಮಿ, ಟಿವಿ, ಸಿನಿಮಾ ಕ್ಷೇತ್ರಗಳಲ್ಲಿ ಉತ್ತಮ ಕಲಾವಿದರೆಂದು ಹೆಸರು ಪಡೆದ ಸಿ.ಆರ್. ಸಿಂಹ ಅವರು ರಾಮಸ್ವಾಮಿ ಶಾಸ್ತ್ರಿ- ಲಲಿತಮ್ಮ ದಂಪತಿಯ ಮಗನಾಗಿ ಚನ್ನಪಟ್ಟಣದಲ್ಲಿ ಜನಿಸಿದರು.

1931: ಕಲಾವಿದ ಎಸ್. ವೆಂಕಟಸ್ವಾಮಿ ಜನನ.

1925: ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷ, ಬಂಗಾಳದಲ್ಲಿ ಬ್ರಿಟಿಷರ ವಿರುದ್ಧ ಕಟ್ಟಲಾದ ಸ್ವರಾಜ್ (ಸ್ವತಂತ್ರ) ಪಕ್ಷದ ಧುರೀಣರೂ ಆಗಿದ್ದ ವಕೀಲ ಚಿತ್ತರಂಜನ್ ದಾಸ್ ಅವರು ಡಾರ್ಜಿಲಿಂಗಿನಲ್ಲಿ ತಮ್ಮ 54ನೇ ವಯಸ್ಸಿನಲ್ಲಿ ಮೃತರಾದರು.

1924: ಸಾಹಿತಿ ಬಿ. ವಿರೂಪಾಕ್ಷಪ್ಪ ಜನನ.

1924: ಕಲಾವಿದ ಕಲಾವಿದ ಎಂ.ಎಸ್. ಚಂದ್ರಶೇಖರ್ ಜನನ.

1920: ಖ್ಯಾತ ಗಾಯಕ ಹೇಮಂತ್ ಚೌಧರಿ ಜನನ.

1917: ಅಮೆರಿಕದ ಪ್ರಸಿದ್ಧ ಪತ್ರಿಕೆ `ವಾಷಿಂಗ್ಟನ್ ಪೋಸ್ಟ್' ನ ಪ್ರಕಾಶಕಿ ಮತ್ತು ಅಮೆರಿಕದ 20ನೇ ಶತಮಾನದ ಪ್ರಭಾವಿ ಮಹಿಳೆ ಕ್ಯಾಥರಿನ್ ಗ್ರಾಹಂ ಈ ದಿನ ಜನಿಸಿದರು. ರಿಚರ್ಡ್ ನಿಕ್ಸನ್ ಅವರು ಅಮೆರಿಕದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವಂತೆ ಮಾಡುವಲ್ಲಿ ಇವರು ಮಹತ್ವದ ಪಾತ್ರ ವಹಿಸಿದ್ದರು. ಎರಡು ದಶಕಗಳ ಕಾಲ ಅಮೆರಿಕದ ಪತ್ರಿಕೋದ್ಯಮ ಇತಿಹಾಸದಲ್ಲಿ ಮಹತ್ವದ ಬದಲಾವಣೆಗಳಿಗೆ ವಾಷಿಂಗ್ಟನ್ ಪೋಸ್ಟ್ ಕಾರಣವಾಯಿತು.

1903: ಡೆಟ್ರಾಯಿಟ್ ಹೂಡಿಕೆದಾರರು ಫೋರ್ಡ್ ಕಂಪೆನಿಯನ್ನು ಕಟ್ಟಿದರು. ಈ ಸಂಸ್ಥೆಯ ಉಪಾಧ್ಯಕ್ಷರೂ, ಮುಖ್ಯ ಎಂಜಿನಿಯರರೂ ಆಗಿದ್ದ ಹೆನ್ರಿ ಫೋರ್ಡ್ ಕಂಪೆನಿಯಲ್ಲಿ ಶೇಕಡಾ 25 ಷೇರುಗಳನ್ನು ಹೊಂದಿದ್ದರು.

1900: ಖ್ಯಾತ ಸಾಹಿತಿ ಅಕ್ಕಿಹೆಬ್ಬಾಳು ನರಸಿಂಹ ಮೂರ್ತಿ ರಾವ್ (ಎ.ಎನ್. ಮೂರ್ತಿರಾವ್) (16-6-1900ರಿಂದ 23-8-2003) ಅವರು ಸುಬ್ಬರಾವ್- ಪುಟ್ಟಮ್ಮ ದಂಪತಿಯ ಮಗನಾಗಿ ಅಕ್ಕಿ ಹೆಬ್ಬಾಳಿನಲ್ಲಿ ಜನಿಸಿದರು.

1890: ಸ್ಟಾನ್ ಲಾರೆಲ್ ಎಂದೇ ಖ್ಯಾತರಾದ ಆರ್ಥರ್ ಸ್ಟ್ಯಾನ್ಲಿ ಜೆಫರ್ ಸನ್ (1890-1965) ಜನ್ಮದಿನ. ಒಲಿವರ್ ಹಾರ್ಡಿ ಅವರ ಪಾಲುದಾರಿಕೆಯೊಂದಿಗೆ ಮೊತ್ತ ಮೊದಲ ಹಾಲಿವುಡ್ ಚಲನಚಿತ್ರ ಹಾಸ್ಯ ತಂಡವನ್ನು ಇವರು ಕಟ್ಟಿದರು.

1873: ಲೇಡಿ ಒಟ್ಟೋಲಿನ್ ಮೊರ್ರೆಲ್(1873-1950) ಜನ್ಮದಿನ. ಕಲೆಗಳ ಪೋಷಕಿಯಾಗಿದ್ದ ಈಕೆ ತನ್ನ ಸಮಕಾಲೀನರಾದ ಹಲವಾರು ಬರಹಗಾರರು ಮತ್ತು ಕಲಾವಿದರನ್ನು ಒಟ್ಟುಗೂಡಿಸಿದವರು. ಆಕೆ ಹೀಗೆ ಒಟ್ಟುಗೂಡಿಸಿದವರಲ್ಲಿ ಡಿ.ಎಚ್. ಲಾರೆನ್ಸ್, ವರ್ಜೀನಿಯಾ ವೂಲ್ಫ್, ಆಲ್ಡವಸ್ ಹಕ್ಸ್ಲೆ, ಬರ್ಟ್ರೆಂಡ್ ರಸೆಲ್ ಮತ್ತಿತರರು ಸೇರಿದ್ದಾರೆ.

1605: ಮೊಘಲ್ ದೊರೆ ಅಕ್ಬರ್ ನಿಧನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

ಇಂದಿನ ಇತಿಹಾಸ History Today ಜೂನ್ 15

ಇಂದಿನ ಇತಿಹಾಸ

ಜೂನ್ 15

ದಕ್ಷಿಣ ಭಾರತದ ಸಿನಿಮಾ ಪ್ರಿಯರ ಆರಾಧ್ಯ ದೈವ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹು ನಿರೀಕ್ಷಿತ ಚಿತ್ರ `ಶಿವಾಜಿ- ದಿ ಬಾಸ್' ದೇಶ- ವಿದೇಶಗಳಲ್ಲಿ ಈದಿನ ಏಕಕಾಲದಲ್ಲಿ ಬಿಡುಗಡೆಯಾಯಿತು. ತಂಜಾವೂರಿನಲ್ಲಿ ಬೆಳಗಿನ ಜಾವ 3 ಗಂಟೆಗೇ ಈ ಚಿತ್ರ ಪ್ರದರ್ಶನ ಕಂಡಿತು.

2007: ಕನ್ನಡ ಚಲನಚಿತ್ರರಂಗದ ಹಿರಿಯ ನಿರ್ದೇಶಕ ಎ.ವಿ. ಶೇಷಗಿರಿರಾವ್ (80) ಅವರು ಚೆನ್ನೈಯಲ್ಲಿ ನಿಧನರಾದರು. ಕನ್ನಡ ಹಾಗೂ ತೆಲುಗಿನಲ್ಲಿ ಸುಮಾರು 30 ಚಿತ್ರಗಳನ್ನು ಅವರು ನಿರ್ದೇಶಿಸಿದ್ದರು. ಕನ್ನಡದ ಮೊದಲ ಸಿನಿಮಾಸ್ಕೋಪ್ ಚಿತ್ರ `ಸೊಸೆ ತಂದ ಸೌಭಾಗ್ಯ' ನಿರ್ದೇಶಿಸಿದ ಹೆಗ್ಗಳಿಕೆ ಇವರದು. ವರನಟ ರಾಜಕುಮಾರ್ ಅಭಿನಯದ `ಬೆಟ್ಟದ ಹುಲಿ' `ಸಂಪತ್ತಿಗೆ ಸವಾಲ್' `ಬಹದ್ದೂರ್ ಗಂಡು', `ರಾಜ ನನ್ನ ರಾಜ' ಇತ್ಯಾದಿ ಅವರು ನಿರ್ದೇಶಿಸಿದ ಕೆಲವು ಜನಪ್ರಿಯ ಸಿನಿಮಾಗಳು.

2007: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ನಂದಗುಡಿಯಲ್ಲಿ 12,350 ಎಕರೆ ಪ್ರದೇಶದಲ್ಲಿ ವಿಶೇಷ ಆರ್ಥಿಕ ವಲಯ (ಎಸ್ಇಜೆಡ್) ಸ್ಥಾಪನೆಗೆ ಕರ್ನಾಟಕ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿತು. ಹಿಂದುಳಿದ ವರ್ಗ ಮತ್ತು ಪರಿಶಿಷ್ಟ ಜಾತಿ, ವರ್ಗದ ಒಳ ಮೀಸಲಾತಿಗೆ ಸಚಿವ ಸಂಪುಟ ಉಪ ಸಮಿತಿ ರಚಿಸಲೂ ಸಂಪುಟ ಒಪ್ಪಿತು.

2007: ಅಂತಾರಾಷ್ಟ್ರೀಯ ಅಭಿವೃದ್ಧಿಗಾಗಿ ಇರುವ ಅಮೆರಿಕ ಏಜೆನ್ಸಿಯಲ್ಲಿ ಹಿರಿಯ ಇಂಧನ ಸಲಹೆಗಾರರಾದ ಶ್ರಿನಿವಾಸನ್ ಪದ್ಮನಾಭನ್ ಅವರಿಗೆ `ವರ್ಲ್ಡ್ ಕ್ಲೀನ್ ಎನರ್ಜಿ' ಪ್ರಶಸ್ತಿ ನೀಡಿ ಗೌರವಿಸಲಾಯಿತು. ನವದೆಹಲಿಯಲ್ಲಿ ವಾಸಿಸಿರುವ ಪದ್ಮನಾಭನ್ ಅವರಿಗೆ ಸ್ವಿಟ್ಜರ್ಲೆಂಡಿನ ಬೇಸಲ್ ನಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

2007: ದಕ್ಷಿಣ ಭಾರತದ ಸಿನಿಮಾ ಪ್ರಿಯರ ಆರಾಧ್ಯ ದೈವ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹು ನಿರೀಕ್ಷಿತ ಚಿತ್ರ `ಶಿವಾಜಿ- ದಿ ಬಾಸ್' ದೇಶ- ವಿದೇಶಗಳಲ್ಲಿ ಈದಿನ ಏಕಕಾಲದಲ್ಲಿ ಬಿಡುಗಡೆಯಾಯಿತು. ತಂಜಾವೂರಿನಲ್ಲಿ ಬೆಳಗಿನ ಜಾವ 3 ಗಂಟೆಗೇ ಈ ಚಿತ್ರ ಪ್ರದರ್ಶನ ಕಂಡಿತು.

2007: ಪ್ಯಾಲೆಸ್ಟೈನ್ ಮೇಲೆ ನಿಯಂತ್ರಣ ಸಾಧಿಸಿದ ಹಮಾಸ್ ಸಂಘಟನೆ ಸದಸ್ಯರು ಅಧ್ಯಕ್ಷ ಮೊಹಮ್ಮದ್ ಅಬ್ಬಾಸ್ ಅವರಿಗೆ ದಿಗ್ಬಂಧನ ವಿಧಿಸಿ ಇಡೀದಿನ ಅವರ ಕಚೇರಿಯಲ್ಲಿ ನಿರಾತಂಕವಾಗಿ ಕಾಲ ಕಳೆದರು.

2007: ಮಹಾತ್ಮ ಗಾಂಧಿ ಜನ್ಮದಿನವಾದ ಅಕ್ಟೋಬರ್ 2 ದಿನವನ್ನು `ಅಂತಾರಾಷ್ಟ್ರೀಯ ಅಹಿಂಸಾ ದಿನ'ವಾಗಿ ಘೋಷಿಸಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ನಿರ್ಧರಿಸಿತು. ವಿಶ್ವದಾದ್ಯಂತ ಶಾಂತಿಯ ಸಂದೇಶವನ್ನು ಸಾರಲು ಗಾಂಧೀಜಿ ವಹಿಸಿದ ಪಾತ್ರವನ್ನು ಪರಿಗಣಿಸಿ ಸಾಮಾನ್ಯ ಸಭೆ ಈ ತೀರ್ಮಾನ ಕೈಗೊಂಡಿತು.

2007: ಮುಂಬೈಯಲ್ಲಿ ಜನಿಸಿ ಸ್ವೀಡನ್ ನಿವಾಸಿಯಾಗಿರುವ ಭಾರತೀಯ ನಾವಿಕ ಭಾವಿಕ್ ಗಾಂಧಿ (30) ಅವರು ಯಾರ ನೆರವನ್ನೂ ಆಶ್ರಯಿಸದೆ ಅಟ್ಲಾಂಟಿಕ್ ಸಾಗರದುದ್ದಕ್ಕೂ ದೋಣಿ ಹುಟ್ಟು ಹಾಕಿ ಗುರಿ ಮುಟ್ಟುವ ಮೂಲಕ ದಾಖಲೆ ನಿರ್ಮಿಸಿದರು. ಹಾಯಿ, ಮೋಟಾರ್, ಸಹಾಯಕ ಹಡಗು ಇತ್ಯಾದಿ ಯಾವುದರ ನೆರವೂ ಇಲ್ಲದೆ ಕೇವಲ ದೋಣಿಯಲ್ಲಿ ಹುಟ್ಟು ಹಾಕುತ್ತಾ 106 ದಿನಗಳಲ್ಲಿ ಅವರು ತಮ್ಮ ಪಯಣ ಪೂರ್ಣಗೊಳಿಸಿದರು. ಕ್ರಿಸ್ಟೋಫರ್ ಕೊಲಂಬಸ್ ಸಾಗಿದ ಹಾದಿಯಲ್ಲಿ ದೋಣಿಗೆ ಹುಟ್ಟು ಹಾಕಿದ ಭಾವಿಕ್ ಗಾಂಧಿ ಈ ಮಹಾಸಾಗರದಲ್ಲಿ ಇಂತಹ ಸಾಧನೆಗೈದ 33ನೇ ವ್ಯಕ್ತಿ. ಇಂತಹ ಏಕವ್ಯಕ್ತಿ ಸಾಹಸ ಗೈದ ಏಷ್ಯಾದ ಮೊದಲಿಗ. ತಮ್ಮ ದೋಣಿ `ಮಿಸ್ ಒಲಿವ್' ನಲ್ಲಿ ಅಂಟಿಗುವಾದ ಕೆನರಿ ದ್ವೀಪದ ಲಾ ರೆಸ್ಟಿಂಗಾದಿಂದ ಸಾಗರ ಪ್ರಯಾಣ ಆರಂಭಿಸಿದ್ದರು.

2007: ಅಟ್ಲಾಂಟಿಸ್ ಬಾಹ್ಯಾಕಾಶ ನೌಕೆಯ ದುರಸ್ತಿಗಾಗಿ ಇಬ್ಬರು ತಂತ್ರಜ್ಞರು ಮೂರನೇ ಬಾಹ್ಯಾಕಾಶ ನಡಿಗೆ ಆರಂಭಿಸಿದರು.

2007: ನೈಜೀರಿಯಾದ ದಕ್ಷಿಣ ಭಾಗದ ತೈಲ ಕ್ಷೇತ್ರದಲ್ಲಿ ಬಂದೂಕುಧಾರಿಗಳು ಇಬ್ಬರು ಭಾರತೀಯರು ಸೇರಿದಂತೆ ಐವರು ವಿದೇಶಿ ಪ್ರಜೆಗಳನ್ನು ಅಪಹರಿಸಿದರು.

2006: ಕೇರಳದ ರಾಜಧಾನಿ ತಿರುವನಂತಪುರದಲ್ಲಿ ಭಿಕ್ಷಾಟನೆಯನ್ನು ತತ್ ಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಲಾಯಿತು.

2006: ಡಿಸೆಂಬರ್ 21ರಂದು ಕೋಫಿ ಅನ್ನಾನ್ ನಿವೃತ್ತಿಯಿಂದ ತೆರವಾಗುವ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಶಶಿ ತರೂರ್ ಅವರನ್ನು ಭಾರತದ ಅಭ್ಯರ್ಥಿ ಎಂದು ಸರ್ಕಾರ ಪ್ರಕಟಿಸಿತು. 1978ರಿಂದಲೇ ವಿಶ್ವಸಂಸ್ಥೆಯಲ್ಲಿ ಸೇವೆಯಲ್ಲಿರುವ ತರೂರ್ ಈ ವೇಳೆಯಲ್ಲಿ ಅಲ್ಲಿ ಸಂಪರ್ಕ ಮತ್ತು ಮಾಹಿತಿ ವಿಭಾಗದ ಆಧೀನ ಪ್ರಧಾನ ಕಾರ್ಯದರ್ಶಿಯಾಗಿದ್ದರು.

2006: ಶಂಕಿತ ತಮಿಳು ಉಗ್ರಗಾಮಿಗಳು ಅಡಗಿಸಿ ಇಟ್ಟ್ದಿದ ನೆಲಬಾಂಬ್ ಸ್ಫೋಟಕ್ಕೆ ಬಸ್ಸಿನಲ್ಲಿದ್ದ 64 ಪ್ರಯಾಣಿಕರು ಸತ್ತು 39 ಮಂದಿ ಗಾಯಗೊಂಡ ಘಟನೆ ಉತ್ತರ ಶ್ರೀಲಂಕಾದಲ್ಲಿ ಘಟಿಸಿತು. ಬೆನ್ನಲ್ಲೇ ಶ್ರೀಲಂಕಾ ಸೇನೆ ಎಲ್ಟಿಟಿಇ ಉಗ್ರರ ನೆಲೆಗಳ ಮೇಲೆ ವೈಮಾನಿಕ ದಾಳಿ ಪ್ರಾರಂಭಿಸಿತು.
2006: ವಿಜಯಾನಂದ ಪ್ರಿಂಟರ್ಸ್ ಲಿಮಿಟೆಡ್ ನ ವಿಜಯ ಕನರ್ಾಟಕ, ವಿಜಯ ಟೈಮ್ಸ್ ಮತ್ತು ಉಷಾಕಿರಣ ಪತ್ರಿಕೆಗಳ ಮಾಲೀಕತ್ವವನ್ನು ದಿ ಟೈಮ್ಸ್ ಆಫ್ ಇಂಡಿಯಾ ಗ್ರೂಪ್ ವಹಿಸಿಕೊಂಡಿತು.

2006: ಎನ್ ಸಿಪಿ, ಬಿಜೆಪಿ, ಮತ್ತು ಶಿವಸೇನೆಯ ಬೆಂಬಲದೊಂದಿಗೆ ಮಹಾರಾಷ್ಟ್ರದಿಂದ ಕಣಕ್ಕೆ ಇಳಿದಿದ್ದ ಉದ್ಯಮಿ ರಾಹುಲ್ ಬಜಾಜ್ ರಾಜ್ಯಸಭೆಗೆ ಆಯ್ಕೆಯಾದರು. ಕಾಂಗ್ರೆಸ್ಸಿನ ಅವಿನಾಶ ಪಾಂಡೆ ಅವರನ್ನು ರಾಹುಲ್ ಬಜಾಜ್ ಪರಾಭವಗೊಳಿಸಿದರು.

1993: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ್ಪ ಈದಿನ ನಿಧನರಾದರು.

1990: ಸ್ವರ್ಣಮಂದಿರದ ಮೇಲೆ 1984ರಲ್ಲಿ ನಡೆದ ಕಾರ್ಯಾಚರಣೆ ಕಾಲದಲ್ಲಿ ವಶಪಡಿಸಿಕೊಳ್ಳಲಾದ ಚಿನ್ನ ಮತ್ತು ಇತರ ಮೌಲ್ಯಯುಕ್ತ ವಸ್ತುಗಳನ್ನು ಪಂಜಾಬ್ ಸರ್ಕಾರ ಹಿಂದಕ್ಕೆ ನೀಡಿತು.

1986: ಕ್ರಿಕೆಟ್ ಪಟು ಕೆ.ಕೆ. ತಾರಾಪೂರ್ ಅವರು ಈದಿನ ನಿಧನರಾದರು.

1956: ಕಲಾವಿದೆ ಕನಕತಾರಾ ಜನನ.

1947: ಭಾರತವನ್ನು ವಿಭಜಿಸುವ ಬ್ರಿಟಿಷ್ ಇಂಡಿಯಾದ ಆಲೋಚನೆಯನ್ನು ಆಲ್ ಇಂಡಿಯಾ ಕಾಂಗ್ರೆಸ್ ಒಪ್ಪಿಕೊಂಡಿತು.

1942: ಸಾಹಿತಿ ಚಿದಾನಂದ ಗೌಡ ಜನನ.

1940: ಕಲಾವಿದ ಭೀಮಪ್ಪ ಸನದಿ ಜನನ.

1932: ಸಾಹಿತಿ ರಸಿಕ ಪುತ್ತಿಗೆ ಜನನ.

1931: ಗೀತಪ್ರಿಯ ಜನನ.

1929: ಕಲಾವಿದ ಸಿ.ಪಿ. ಪರಮೇಶ್ವರಪ್ಪ ಜನನ.

1928: ಕಲಾವಿದ ಪಿ.ಬಿ. ಧುತ್ತರಗಿ ಜನನ.

1924: ಸಾಹಿತಿ, ಪ್ರಾಧ್ಯಾಪಕ, ಸಂಶೋಧಕ ಗುರುರಾಜ ಭಟ್ (15-6-1924ರಿಂದ 27-8-1978) ಅವರು ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ತಾಲ್ಲೂಕಿನ ಪಾದೂರಿನಲ್ಲಿ ಈದಿನ ಜನಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 2000ಕ್ಕೂ ಹೆಚ್ಚು ದೇವಸ್ಥಾನಗಳ ಸಂಶೋಧನೆ, ಶಿಲಾಗೋರಿ, ತಾಮ್ರಶಾಸನಗಳು, ಅಪೂರ್ವ ಶಾಸನಗಳ ಸಂಶೋಧನೆ ನಡೆಸಿದ ಇವರು 700ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಒಳಗೊಂಡ `ತುಳುನಾಡು' ಗ್ರಂಥ ರಚಿಸಿದರು. ಅವರ ಈ ಮೊದಲ ಗ್ರಂಥಕ್ಕೇ ದೇವರಾಜ ಬಹದ್ದೂರ್ ಪ್ರಶಸ್ತಿ, ಎರಡನೆಯ ಕೃತಿ `ತುಳುನಾಡಿನ ಸ್ಥಾನಿಕರು' ಗ್ರಂಥಕ್ಕೆ ಉತ್ತಮ ಸಂಶೋಧನಾ ಕೃತಿ ಎಂಬ ಪ್ರಶಂಸೆ ಲಭಿಸಿತು.

1924: ಸಾಹಿತಿ ನಿರಂಜನ ಜನನ.

1920: ಸಾಹಿತಿ ಮಲ್ಲಿಕಾ ಕಡಿದಾಳ್ ಮಂಜಪ್ಪ ಜನನ.

1919: ಬ್ರಿಟಿಷ್ ವಿಮಾನ ಹಾರಾಟಗಾರರಾದ ಜಾನ್ ಅಲ್ ಕಾಕ್ ಮತ್ತು ಆರ್ಥರ್ ಬ್ರೌನ್ ನ್ಯೂ ಫೌಂಡ್ ಲ್ಯಾಂಡ್ ನಿಂದ ಐರ್ಲೆಂಡ್ ವರೆಗಿನ ಮೊತ್ತ ಮೊದಲ ನಿಲುಗಡೆ ರಹಿತ ಟ್ರಾನ್ಸ್ ಅಟ್ಲಾಂಟಿಕ್ ಹಾರಾಟವನ್ನು ಪೂರ್ಣಗೊಳಿಸಿದರು. 1890 ಮೈಲು ದೂರದ ಈ ಹಾರಾಟವನ್ನು ಅವರು ವಿಕರ್ಸ್ ವಿಮಿ ಬಾಂಬರ್ ವಿಮಾನದಲ್ಲಿ ಕೇವಲ 16 ಗಂಟೆಗಳಲ್ಲಿ ಮುಗಿಸಿದರು. ಈ ವಿಮಾನವನ್ನು ಲಂಡನ್ನಿನ ಸೈನ್ಸ್ ಮ್ಯೂಸಿಯಂಮ್ಮಿನಲ್ಲಿ ಇಡಲಾಗಿದೆ.

1915: ಅಮೆರಿಕದ ವೈದ್ಯ ಥಾಮಸ್ ಎಚ್. ವೆಲ್ಲರ್ ಜನ್ಮದಿನ. ಪೋಲಿಯೋ ವ್ಯಾಕ್ಸಿನ್ ಅಭಿವೃದ್ಧಿಯಲ್ಲಿ ಇವರು ಮಹತ್ವದ ಪಾತ್ರ ವಹಿಸಿದರು.

1911: ಖ್ಯಾತ ಚಿಂತನಶೀಲ ಕಲಾವಿದ ಕೆ. ಕೃಷ್ಣ ಹೆಬ್ಬಾರ (15-6-1911ರಿಂದ 26-3-1996) ಅವರು ನಾರಾಯಣ ಹೆಬ್ಬಾರ- ಸೀತಮ್ಮ ದಂಪತಿಯ ಮಗನಾಗಿ ಉಡುಪಿ ಬಳಿಯ ಕಟ್ಟಂಗೇರಿಯಲ್ಲಿ ಜನಿಸಿದರು.

1907: ಸ್ವಾತಂತ್ರ್ಯ ಹೋರಾಟಗಾರ ನಾರಾಯಣ ಗಣೇಶ ಗೋರೆ ನಿಧನ.

1869: ಅಮೆರಿಕನ್ ಸಂಶೋಧಕ ಜಾನ್ ವೆಸ್ಲೆ ಹ್ಯಾಟ್ ಸೆಲ್ಯುಲಾಯ್ಡ್ ನ್ನು (ತೆಳುವಾದ ಪಾರದರ್ಶಕ ಪ್ಲಾಸ್ಟಿಕ್ ವಸ್ತು) ಕಂಡುಹಿಡಿದ.

1762: ಮಿಂಚು ಅಂದರೆ ವಿದ್ಯುತ್ ಎಂಬುದಾಗಿ ಸಾಬೀತುಪಡಿಸುವಂತಹ ಪ್ರಯೋಗವನ್ನು ಬೆಂಜಮಿನ್ ಫ್ರಾಂಕ್ಲಿನ್ ಕೈಗೊಂಡ. ನಂತರ ಅದೇ ವರ್ಷ ಈತ ತನ್ನ ಮನೆಯಲ್ಲಿ ಮಿಂಚುವ ಸಲಾಕೆಯನ್ನು ಇರಿಸಿ ಅದಕ್ಕೆ ಗಂಟೆಯ ಸಂಪರ್ಕ ಕಲ್ಪಿಸಿದ. ಈ ಮಿಂಚುವ ಸಲಾಕೆಗೆ ವಿದ್ಯುತ್ ಸಂಪರ್ಕ ನೀಡಿದಾಗ ಅದು ಮಿಂಚುವುದರೊಂದಿಗೆ ಅದರ ಸಂಪರ್ಕದಲ್ಲಿದ್ದ ಗಂಟೆ ಸದ್ದು ಮಾಡಿತು. ಮುಂದೆ ಈತ ಅಮೆರಿಕದ ಅಧ್ಯಕ್ಷನಾಗಿ ಆಯ್ಕೆಯಾದ.

1659: ಮೊಘಲ್ ದೊರೆ ಔರಂಗಜೇಬ್ ಸಿಂಹಾಸನವನ್ನು ಏರಿದ. ಆತ 1659ರ ಮೇ ತಿಂಗಳಲ್ಲಿ ದೆಹಲಿ ಪ್ರವೇಶಿಸಿದ. ಆತನ ದೆಹಲಿ ಪ್ರವೇಶದ ಸಂಭ್ರಮಾಚರಣೆ ಮೇ 22ರಂದು ಆರಂಭವಾಗಿ ಆಗಸ್ಟ್ 29ರವರೆಗೆ 14 ವಾರಗಳ ಕಾಲ ನಡೆಯಿತು.

1215: ಸರ್ರೆಯ ರನ್ನಿಮೇಡ್ ನಲ್ಲಿ ದೊರೆ ಕಾನ್ `ಮ್ಯಾಗ್ನಕಾರ್ಟ'ಕ್ಕೆ ಸಹಿ ಮಾಡಿದ. ಇದು ರಾಜಕೀಯ ಹಕ್ಕುಗಳು ಹಾಗೂ ವೈಯಕ್ತಿಕ ಸ್ವಾತಂತ್ರ್ಯದ ಸ್ಥಾಪನೆಗೆ ನಾಂದಿ ಹಾಡಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Saturday, June 14, 2008

ಪಾಪ ಪರಿಮಾರ್ಜನೆಯ ಮೊದಲ ಹೆಜ್ಜೆ..!

ಪಾಪ ಪರಿಮಾರ್ಜನೆಯ

ಮೊದಲ ಹೆಜ್ಜೆ..!


ಭತ್ತದ ಕೃಷಿಕರಿಗೆ ಬಡ್ಡಿ ರಹಿತ ಸಾಲ ಮತ್ತು ಉಚಿತ ವಿಮೆ ಒದಗಿಸುವ ನಿರ್ಧಾರದ ಮೂಲಕ ಕೇರಳ ಸರ್ಕಾರ ಪಾಪ ಪರಿಮಾರ್ಜನೆಯ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದೆ. ಎಲ್ಲ ಸರ್ಕಾರಗಳೂ ಈ ನಿಟ್ಟಿನಲ್ಲಿ ಸಾಗಬೇಕಾದ ಅಗತ್ಯ ಇದೆ. ರಸಗೊಬ್ಬರಗಳಿಗೆ ಸುರಿಯಲಾಗುವ ಸಬ್ಸಿಡಿ ಹಣ ನೇರವಾಗಿ ಈ ರೀತಿ ರೈತರಿಗೆ ತಲುಪಿದರೆ ರೈತ ಉದ್ಧಾರವಾಗಬಲ್ಲ.

ನೆತ್ರಕೆರೆ ಉದಯಶಂಕರ

ಕೇರಳದಿಂದ ಒಂದು ಒಳ್ಳೆಯ ಸುದ್ದಿ ಬಂದಿದೆ. ಬಹುಶಃ ದೇಶದಲ್ಲಿ ಇದೇ ಮೊದಲನೆಯ ಬಾರಿಗೆ ಭತ್ತ ಬೆಳೆಯುವ ಕೃಷಿಕರಿಗೆ ಬಡ್ಡಿ ರಹಿತ ಸಾಲ ಮತ್ತು ಉಚಿತ ವಿಮೆ ನೀಡುವ ಮೂಲಕ ಕೇರಳದಲ್ಲಿ ಭತ್ತದ ಬೆಳೆಗೆ ಉತ್ತೇಜನ ನೀಡಲು ಕೇರಳ ಸರ್ಕಾರ ನಿರ್ಧರಿಸಿದೆ.

ಈ ಸಂಬಂಧ ಕೇರಳ ಸರ್ಕಾರ ನೂತನ ಯೋಜನೆಯೊಂದನ್ನು ರೂಪಿಸಿದೆ ಎಂದು ಕೃಷಿ ಸಚಿವ ಮುಲ್ಲಾಕರ ರತ್ನಾಕರನ್ 13 ಜೂನ್ 2008ರ ಶುಕ್ರವಾರ ತಿರುವನಂತಪುರದಲ್ಲಿ ಪ್ರಕಟಿಸಿದ್ದಾರೆ.

ಎಲ್ಡಿಎಫ್ ಸರ್ಕಾರದ ಎರಡನೇ ವಾರ್ಷಿಕೋತ್ಸವದ ಅಂಗವಾಗಿ ರಾಜ್ಯದ ಪ್ರಮುಖ ಆಹಾರ ಬೆಳೆಯಾದ ಭತ್ತದ ಕೃಷಿಗೆ ಹೆಚ್ಚಿನ ಉತ್ತೇಜನ ನೀಡುವ ಗುರಿ ಇಟ್ಟುಕೊಳ್ಳಲಾಗಿದೆ ಎಂಬುದು ಅವರ ಹೇಳಿಕೆ.

ಸಚಿವರ ಹೇಳಿಕೆ ಪ್ರಕಾರ ಪಾಲಕ್ಕಾಡ್, ಅಲಪ್ಪುಳ, ಕೊಟ್ಟಾಯಂ ಹಾಗೂ ತ್ರಿಶ್ಯೂರ್ ಜಿಲ್ಲೆಗಳ ಭತ್ತದ ಬೆಳೆಗಾರರಿಗೆ ಬಡ್ಡಿ ರಹಿತ ಸಾಲ ಸಿಗಲಿದೆ. ಅದಕ್ಕಾಗಿ ಸರ್ಕಾರ 100 ಕೋಟಿ ರೂಪಾಯಿ ವಿನಿಯೋಗಿಸಲಿದೆ.

ಕೇರಳ ರಾಜ್ಯದಲ್ಲಿ ಭತ್ತದ ವಾರ್ಷಿಕ ಇಳುವರಿ ಆರು ಲಕ್ಷ ಟನ್ಗಳಷ್ಟಿದೆ. ಅದನ್ನು 12 ಲಕ್ಷ ಟನ್ಗೆ ಹೆಚ್ಚಿಸುವುದು ಸರ್ಕಾರದ ಉದ್ದೇಶ. ಅದಕ್ಕಾಗಿ ಹೆಚ್ಚುವರಿ 50 ಸಾವಿರ ಹೆಕ್ಟೇರ್ ಭೂಮಿಯನ್ನು ಭತ್ತದ ಕೃಷಿಗೆ ಅಳವಡಿಸಲಾಗುತ್ತಿದೆ ಎಂದಿದ್ದಾರೆ ಸಚಿವರು.

ರೈತರಿಗೂ ನಿವೃತ್ತಿ ವೇತನ ನೀಡುವ ಯೋಜನೆ ಕೂಡಾ ಸರ್ಕಾರದ ಮುಂದಿದ್ದು, ವರ್ಷಾಂತ್ಯದ ಒಳಗೆ ಅದನ್ನು ಅನುಷ್ಠಾನಗೊಳಿಸಲಾಗುವುದು ಎಂಬ ಭರವಸೆ ಅವರಿಂದ ಹೊರಬಿದ್ದಿದೆ.

ಕೇಂದ್ರ ಸರ್ಕಾರವು ಭತ್ತದ ಕನಿಷ್ಠ ಬೆಂಬಲ ಬೆಲೆಯನ್ನು ಕ್ವಿಂಟಲ್ ಗೆ 850 ರೂಪಾಯಿಗಳಿಗೆ ಹೆಚ್ಚಿಸಿದ ಹೊತ್ತಿನಲ್ಲೇ ಕೇರಳ ಸರ್ಕಾರದ ಹೊಸ ಯೋಜನೆಗಳ ವಿವರ ಹೊರಬಿದ್ದಿದೆ.

ಬಹುಶಃ ದೇಶದಲ್ಲಿ ಮೊತ್ತ ಮೊದಲನೆಯ ಬಾರಿಗೆ ಕೇರಳ ಸರ್ಕಾರದಿಂದ ಪಾಪ ಪರಿಮಾರ್ಜನೆಯ ಯತ್ನ ನಡೆದಿದೆ ಎಂದರೆ ತಪ್ಪಾಗಲಾರದು ಎನಿಸುತ್ತಿದೆ.

ಕರ್ನಾಟಕದಲ್ಲಿ ಜನತಾದಳ- ಬಿಜೆಪಿ ಸಮ್ಮಿಶ್ರ ಸರ್ಕಾರ ರೈತರಿಗೆ ಶೇಕಡಾ 4ರ ದರದಲ್ಲಿ ಸಾಲ ನೀಡುವ ನಿರ್ಧಾರ ಕೈಗೊಂಡಾಗ ಹಲವೆಡೆಗಳಿಂದ ಟೀಕೆ ವ್ಯಕ್ತವಾಗಿತ್ತು. ಆದರೆ ಕ್ರಮೇಣ ಅದಕ್ಕೆ ಬೆಂಬಲ ಲಭಿಸಿತ್ತು.

ಈಗ ಕೇರಳ ಸರ್ಕಾರದ ಬಡ್ಡಿ ರಹಿತ ಸಾಲದ ಪ್ರಸ್ತಾವ, ಉಚಿತ ವಿಮೆಗಳ ಪ್ರಸ್ತಾವಕ್ಕೂ ಇಂತಹುದೇ ಟೀಕೆಗಳು ವ್ಯಕ್ತವಾಗಬಹುದು. ಇಂತಹ ಕ್ರಮದಿಂದ ಆರ್ಥಿಕತೆಯ ಮೇಲೆ ದುಷ್ಪರಿಣಾಮವಾಗಬಹುದು ಎಂಬ ಹುಯಿಲು ಏಳಬಹುದು.

ಆದರೆ ಸರ್ಕಾರಗಳು ಇಂತಹ ಉಪಕ್ರಮಗಳಿಗೆ ಮುಂದಾಗಲೇ ಬೇಕಾದ ಅಗತ್ಯ ಇಂದು ಇದೆ. ತನ್ಮೂಲಕವಾದರೂ ಸರ್ಕಾರಗಳು ಹಸಿರು ಕ್ರಾಂತಿಯ ಹೆಸರಿನಲ್ಲಿ ರೈತರನ್ನು ಹುಚ್ಚೆಬ್ಬಿಸಿ ರಸಗೊಬ್ಬರ ಬಳಕೆಯ ವಿಷವರ್ತುಲಕ್ಕೆ ತಳ್ಳಿ, ಕೃಷಿ ವೆಚ್ಚವನ್ನು ಅಗಾಧವಾಗಿ ಹೆಚ್ಚಿಸಿ, ಲಕ್ಷಾಂತರ ಕೃಷಿಕರನ್ನು ಆತ್ಮಹತ್ಯೆಯ ಉರುಳಿಗೆ ಕೊರಳೊಡ್ಡುವಂತೆ ಮಾಡಿದ ಪಾಪಕ್ಕೆ ಪರಿಮಾರ್ಜನೆ ಮಾಡಿಕೊಳ್ಳಬೇಕಾಗಿದೆ.

ಯೋಚನೆ ಮಾಡಲೇ ಬೇಕಾದ ವಿಚಾರ ಇದು. ಪತ್ರಿಕೆಗಳಲ್ಲಿ ಬಂದಿರುವ ವರದಿಗಳ ಪ್ರಕಾರ ಸಿಮ್ಲಾದಲ್ಲಿ ನಡೆದ ಆಹಾರ ವೈವಿಧ್ಯ ವಿಚಾರ ಸಂಕಿರಣ ಒಂದರಲ್ಲಿ ಮಂಡನೆಯಾದ ಅಂಕಿ ಅಂಶಗಳು ಇದಕ್ಕೆ ಹೇಗೆ ಒತ್ತು ಕೊಡುತ್ತವೆ, ಗಮನಿಸಿ:

1980ರಲ್ಲಿ ಮತ್ತು 1997ರಲ್ಲಿ ಕೃಷಿಯ ಉತ್ಪಾದನೆ ಶೇಕಡಾ 3.2ರಷ್ಟು ಇತ್ತು. ಆದರೆ 1997ರ ಬಳಿಕ ಇದು ಶೇಕಡಾ 1.5ಕ್ಕೆ ಕುಸಿದಿದೆ. ಭಾರತೀಯ ಕೃಷಿಕರ ಪೈಕಿ ಶೇಕಡಾ 40 ರಷ್ಟು ಮಂದಿ ಇಂತಹ ಪರಿಸ್ಥಿತಿಗೆ ಬೇಸತ್ತು ವ್ಯವಸಾಯ ವೃತ್ತಿಯನ್ನೇ ತೊರೆಯುವ ಆಸಕ್ತಿ ವ್ಯಕ್ತ ಪಡಿಸಿದ್ದಾರೆ.

ದೇಶಕ್ಕೆ ಸ್ವಾತಂತ್ರ್ಯ ಬಂದ ಹೊಸತರಲ್ಲಿ ಅಂದರೆ 1950-51ರ ವೇಳೆಯಲ್ಲಿ ಒಟ್ಟು ರಾಷ್ಟ್ರೀಯ ಆದಾಯದಲ್ಲಿ ಕೃಷಿಯ ಪಾಲುದಾರಿಕೆ ಶೇಕಡಾ 56ರಷ್ಟು ಇತ್ತು. ದೇಶದಲ್ಲಿ ಹಸಿರು ಕ್ರಾಂತಿ ನಡೆದು ಉತ್ಪಾದನೆ ಹೆಚ್ಚಿತೆಂಬ ಘೋಷಣೆಗಳೆಲ್ಲ ಮುಗಿದ ಬಳಿಕ ಈಗ ಅಂದರೆ 2006-07ರ ಹೊತ್ತಿಗೆ ರಾಷ್ಟ್ರೀಯ ಆದಾಯದಲ್ಲಿ ಕೃಷಿಯ ಪಾಲುದಾರಿಕೆ ಪ್ರಮಾಣ ಶೇಕಡಾ 18.6ಕ್ಕೆ ಕುಗ್ಗಿ ಹೋಗಿದೆ.

ಇಷ್ಟಾದರೂ ನೆನಪಿಡಬೇಕಾದ ಅಂಶ ಏನು ಗೊತ್ತೇ? ಇಂದಿಗೂ ದೇಶದ ಮೂರನೇ ಒಂದು ಭಾಗದಷ್ಟು ಜನ ಜೀವನೋಪಾಯಕ್ಕಾಗಿ ಕೃಷಿಯನ್ನೇ ನಂಬಿದ್ದಾರೆ. 1991ರಿಂದ 2001ರ ಅವಧಿಯಲ್ಲಿ ಕೃಷಿ ಕಾರ್ಮಿಕರ ಸಂಖ್ಯೆ 8.6 ಕೋಟಿಯಿಂದ 10.6 ಕೋಟಿಗೆ ಏರಿದೆ. ಜೊತೆಗೆ ಭೂಮಿಯ ಮೇಲಿನ ಒಡೆತನ ಹೆಚ್ಚಿದ್ದು ಗ್ರಾಮೀಣ ಮಂದಿಗೆ ಕೃಷಿಯೇತರ ಕೆಲಸಗಳು ಲಭಿಸುತ್ತಿಲ್ಲ.

ಕೃಷಿ ಕ್ಷೇತ್ರದ ದು:ಸ್ಥಿತಿಗೆ ಹಸಿರು ಕ್ರಾಂತಿಯ ಘೋಷಣೆ ಒಂದೇ ಕಾರಣ ಎನ್ನುವಂತಿಲ್ಲ. ಹಸಿರು ಕ್ರಾಂತಿಯ ಹೆಸರಿನಲ್ಲಿ ರೈತರನ್ನು ಸ್ವಾವಲಂಬನೆಯ ಗೋ ಆಧಾರಿತ ಸಾವಯವ ಕೃಷಿಯಿಂದ, ಕಂಪೆನಿ ಆಧಾರಿತ ಪರಾವಲಂಬಿ ರಸಗೊಬ್ಬರ ಬಳಕೆಯತ್ತ ತಿರುಗಿಸಿದ್ದು ಮೊದಲ ತಪ್ಪು.

ಪಂಚವಾರ್ಷಿಕ ಯೋಜನೆಗಳುದ್ದಕ್ಕೂ ಕೃಷಿಯನ್ನು ಮೂಲೆ ಪಾಲು ಮಾಡುತ್ತಾ ಕೈಗಾರಿಕೋದ್ಯಮಕ್ಕೆ ಮಾತ್ರವೇ ಬೆಂಬಲ ನೀಡುತ್ತಾ ಬಂದದ್ದು ಎರಡನೇ ತಪ್ಪು.

ಇವೆರಡಕ್ಕೂ ಹೆಚ್ಚಾಗಿ ಕೃಷಿ ಕ್ಷೇತ್ರಕ್ಕೆ ಕುಠಾರಪ್ರಾಯವಾಗಿ ಬಂದದ್ದು ವಿವೇಚನೆ ರಹಿತವಾದ ಆರ್ಥಿಕ ಉದಾರೀಕರಣ ಮತ್ತು ಜಾಗತೀಕರಣ.

1990ರ ಬಳಿಕ ಕೃಷಿ ಕ್ಷೇತ್ರ ಎಂದೂ ಇಲ್ಲದಂತೆ ಸೊರಗಿ ಹೋದದ್ದಕ್ಕೆ ಜೀವನ ದುರ್ಭರವಾಗಿ ಲಕ್ಷಾಂತರ ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡದ್ದೇ ಸಾಕ್ಷಿ.

ಇಂದು ದೇಶದ ಅರ್ಧಭಾಗಕ್ಕಿಂತ ಹೆಚ್ಚು ರೈತರ ಮನೆಗಳ ಮೇಲೆ ಕನಿಷ್ಠ 25,000 ರೂಗಳಿಗಿಂತ ಹೆಚ್ಚಿನ ಸಾಲದ ಹೊರೆ ಇದೆ. ಸಣ್ಣ ಮತ್ತು ಮಧ್ಯಮ ವರ್ಗದ ಬಹುತೇಕ ಮಂದಿಯ ಸಾಲ ಖಾಸಗಿ ವ್ಯಕ್ತಿಗಳಿಂದ ಪಡೆದುದಾಗಿದ್ದು ಅದಕ್ಕೆ ಅವರು ತೆರಬೇಕಾದ ಬಡ್ಡಿಯ ದರ ಶೇಕಡಾ 30ಕ್ಕಿಂತಲೂ ಹೆಚ್ಚು.

ರಫ್ತಿನ ಮೂಲಕ ಅಧಿಕ ಸಂಪಾದನೆ ಮಾಡಬಹುದು ಎಂಬುದಾಗಿ ಹೇಳುತ್ತಾ ಒತ್ತು ಕೊಡಲಾದ ಉನ್ನತ ತಂತ್ರಜ್ಞಾನದ ಪುಷ್ಪೋದ್ಯಮದಂತಹ ಯತ್ನಗಳಿಂದ ಸಾಮಾನ್ಯ ರೈತರಿಗೆ ಯಾವ ಪ್ರಯೋಜನವೂ ಆಗಲಿಲ್ಲ. ಆಹಾರ ಧಾನ್ಯ ಬೆಳೆಯುತ್ತಿದ್ದ ಕೃಷಿ ಭೂಮಿಯನ್ನು ಇಂತಹ 'ಲಾಭದ ಕೃಷಿ' ಆಕ್ರಮಿಸಿದ್ದು ಆಹಾರೋತ್ಪಾದನೆ ಕುಂಠಿತವಾಗಲು ಕಾಣಿಕೆ ನೀಡಿತು ಅಷ್ಟೆ.

ಸಾಲದ ಬಲೆಯಿಂದ ಹೊರಬೀಳಲು ರೈತನಿಗೆ ಕಾಣುವ ಸುಲಭ ದಾರಿ: ರಸಗೊಬ್ಬರದ ಬಳಕೆ. ಆದರೆ ಅದಕ್ಕಾಗಿ ಆತ ಮತ್ತೆ ಸಾಲ ಮಾಡಬೇಕು. ಅಷ್ಟೊಂದು ಒಳಸುರಿ ಸುರಿದು ಮಾಡಿದ ಕೃಷಿ ನೈಸರ್ಗಿಕ ಕಾರಣಕ್ಕೆ ವಿಫಲವಾದರೆ ಇಲ್ಲವೇ ಬೆಳೆ ಬರುವ ಹೊತ್ತಿಗೆ ಬೆಲೆಯೇ ಕುಸಿದು ಹೋದರೆ ಆತ ಮತ್ತೆ ಪ್ರಪಾತಕ್ಕೆ. ರಸಗೊಬ್ಬರ ಬಳಕೆಯಿಂದ ಭೂಮಿಯೇ ಬರಡಾಗುತ್ತಿದೆ ಎಂಬುದು ಪ್ರತ್ಯೇಕ ವಿಚಾರ.

ರಸಗೊಬ್ಬರ ಉದ್ಯಮಗಳಿಗೆ ಕೊಡುವ ಬೃಹತ್ ಪ್ರಮಾಣದ ಸಬ್ಸಿಡಿಯನ್ನು ನಿಲ್ಲಿಸಿ, ರೈತರನ್ನು ಸಹಜ, ಗೋ ಆಧಾರಿತ ಸಾವಯವ ಕೃಷಿಯತ್ತ ತಿರುಗಿಸಬೇಕಾದದ್ದು ಇಂದಿನ ಅನಿವಾರ್ಯ ಅಗತ್ಯ. ರಸಗೊಬ್ಬರಗಳಿಗೆ ಸಬ್ಸಿಡಿ ಸುರಿಯುವ ಬದಲು ಅದೇ ಹಣವನ್ನು ರೈತರಿಗೆ ಬಡ್ಡಿ ರಹಿತ ಸಾಲ ಒದಗಿಸಲು, ಬೆಳೆಗೆ ಉಚಿತ ವಿಮೆ ಒದಗಿಸಲು, ಕೃಷಿ ಆಧಾರಿತ ಸಣ್ಣ ಸಣ್ಣ ಗೃಹೋದ್ಯಮ ಸ್ಥಾಪನೆಗೆ ಬಳಸಿದರೆ ರೈತ ಮೇಲೇಳಲು ಅವಕಾಶವಿದೆ.

ಇಷ್ಟೇ ಸಾಕಾಗುವುದಿಲ್ಲ. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ದೊರಕಿಸುವುದು, ದುಬಾರಿ ನೀರಾವರಿಗಳನ್ನು ಕೈಬಿಟ್ಟು ಮಳೆಕೊಯ್ಲಿನಂತಹ ಸರಳ, ಸಹಜ ನೀರಾವರಿಗೆ ಒತ್ತು ನೀಡುವುದು, ಕೃಷಿ ಉತ್ಪನ್ನಗಳ ಮೌಲ್ಯ ವರ್ಧನೆಗಾಗಿ ಸಣ್ಣ ಸಣ್ಣ ಕೃಷಿ ಉತ್ಪನ್ನಗಳ ಮೌಲ್ಯ ವರ್ಧಿತ ಉತ್ಪನ್ನಗಳ ತಯಾರಿ ಘಟಕಗಳನ್ನು ಹಳ್ಳಿಗಳಲ್ಲೇ ಸ್ಥಾಪಿಸುವುದು - ತನ್ಮೂಲಕ ರೈತ, ಕೃಷಿ ಕಾರ್ಮಿಕ ಕುಟುಂಬಗಳ ಯುವಕರಿಗೆ ಹಳ್ಳಿಗಳಲ್ಲೇ ನೆಮ್ಮದಿಯ ಉದ್ಯೋಗ ಕಲ್ಪಿಸುವುದಕ್ಕೆ ವ್ಯವಸ್ಥೆ ಮಾಡುವ ಅಗತ್ಯವಿದೆ.

ಆಗ ಮಾತ್ರವೇ ಸರ್ಕಾರಗಳು ತಮ್ಮ ತಪ್ಪಿಗೆ ಪ್ರಾಯಶ್ಚಿತ ಮಾಡಿಕೊಂಡಂತಾಗುತ್ತದೆ. ಕೃಷಿ ಕ್ಷೇತ್ರವನ್ನು ಪ್ರಪಾತಕ್ಕೆ ತಳ್ಳಿದ ಪಾಪ ಪರಿಮಾರ್ಜನೆ ನಿಟ್ಟಿನಲ್ಲಿ ಸರ್ಕಾರಗಳು ಹೆಜ್ಜೆ ಮುಂದಿಟ್ಟಂತಾಗುತ್ತದೆ.

ಇಂದಿನ ಇತಿಹಾಸ History Today ಜೂನ್ 14

ಇಂದಿನ ಇತಿಹಾಸ

ಜೂನ್ 14

ಭಾರತದ ನಾರಾಯಣ್ ಕಾರ್ತಿಕೇಯನ್ ಇಂಗ್ಲೆಂಡಿನ ಸಿಲ್ವರ್ ಸ್ಟೋನ್ ಟ್ರ್ಯಾಕ್ಸಿನಲ್ಲಿ ಜಾಗ್ವಾರ್ ರೇಸಿಂಗ್ ತಂಡಕ್ಕಾಗಿ ಪರೀಕ್ಷಾರ್ಥವಾಗಿ ಫಾರ್ಮ್ಯುಲಾ ಒನ್ ಕಾರನ್ನು ಓಡಿಸುವ ಮೂಲಕ ಈ ಕಾರನ್ನು ಓಡಿಸಿದ ಪ್ರಪ್ರಥಮ ಭಾರತೀಯ ಹಾಗೂ ಮೊತ್ತ ಮೊದಲ ಜಪಾನೇತರ ಏಷಿಯನ್ ಎನಿಸಿಕೊಂಡರು.

2007: ರಾಷ್ಟ್ರಪತಿ ಸ್ಥಾನಕ್ಕೆ ಸಂಯಕ್ತ ಪ್ರಗತಿಪರ ಮೈತ್ರಿ ಕೂಟ (ಯುಪಿ ಎ) ಅಭ್ಯರ್ಥಿಯಾಗಿ ರಾಜಸ್ಥಾನದ ರಾಜ್ಯಪಾಲರಾದ ಪ್ರತಿಭಾ ದೇವಿಸಿಂಗ್ ಪಾಟೀಲ್ (72) ಆಯ್ಕೆಯಾದರು. ಹಲವು ಸುತ್ತಿನ ಕಸರತ್ತಿನ ಬಳಿಕ ಪ್ರತಿಭಾ ಪಾಟೀಲ್ ಅಚ್ಚರಿಯ ಅಭ್ಯರ್ಥಿಯಾಗಿ ಹೊರ ಹೊಮ್ಮಿದರು. ಯುಪಿ ಎ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಪ್ರತಿಭಾ ಆಯ್ಕೆ ವಿಚಾರವನ್ನು ಪ್ರಕಟಿಸಿದರು.

2007: ಒಟ್ಟು 5,608 ಕೋಟಿ ರೂಪಾಯಿ ವೆಚ್ಚದಲ್ಲಿ ಗಂಗಾನದಿಯ ಕೆಳಗೆ ಕೊಳವೆಯೊಳಗೆ ಸಾಗುವಂತಹ 13.7 ಕಿ.ಮೀ. ಉದ್ದದ (ಇದರಲ್ಲಿ ನದಿಯ ಕೆಳಗಿನ ದೂರ 8 ಕಿ.ಮೀ) ಪೂರ್ವ- ಪಶ್ಚಿಮ ಮೆಟ್ರೋ ಕಾರಿಡಾರ್ ಯೋಜನೆಗೆ ಬುದ್ಧದೇವ ಭಟ್ಟಾಚಾರ್ಯ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ ಹಸಿರು ನಿಶಾನೆ ತೋರಿಸಿತು. ದೇಶದಲ್ಲೇ ಮೊತ್ತ ಮೊದಲ ಬಾರಿಗೆ ನೀರಿನ ಅಡಿಯಲ್ಲಿ ಸಾಗುವ ಈ ರೈಲು ಮಾರ್ಗವು ಹೌರಾ ನಿಲ್ದಾಣ ಮತ್ತು ಸಾಲ್ಟ್ ಲೇಕ್ ನಡುವೆ ಸಂಪರ್ಕ ಕಲ್ಪಿಸುವುದು.

2007: ಮುಂಬೈಯಲ್ಲಿ 1993ರಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿದ್ದ ಮುಬೀನಾ ಭಿವಂಡಿವಾಲಾ ಮತ್ತು ಜೈಬುನ್ನೀಸಾ ಖಾಜಿ ಎಂಬ ಇಬ್ಬರು ಮಹಿಳೆಯರಿಗೆ ವಿಶೇಷ ಟಾಡಾ ನ್ಯಾಯಾಲಯವು ತಲಾ ಐದು ವರ್ಷಗಳ ಸೆರೆವಾಸದ ಶಿಕ್ಷೆಯನ್ನು ವಿಧಿಸಿತು.

2007: ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ `ಇಂಡಿಯನ್' ನ (ಹಿಂದಿನ ಇಂಡಿಯನ್ ಏರ್ ಲೈನ್ಸ್) ಸುಮಾರು 15,000 ಭೂ ಸೇವಾ ಸಿಬ್ಬಂದಿ ತಮ್ಮ ದೇಶವ್ಯಾಪಿ ಮುಷ್ಕರವನ್ನು ವಾಪಸ್ ಪಡೆದುಕೊಂಡರು. ವೇತನ ಬಾಕಿ ಹಾಗೂ ಬಡ್ತಿ ಸಂಬಂಧಿ ಬಿಕ್ಕಟ್ಟು ಬಗೆ ಹರಿಸುವುದಾಗಿ ಆಡಳಿತ ಮಂಡಳಿ ಹಾಗೂ ವಿಮಾನಯಾನ ಸಚಿವಾಲಯ ನೀಡಿದ ಭರವಸೆ ಅನುಸರಿಸಿ ಮುಷ್ಕರ ನಿರತರು ತಮ್ಮ ಮುಷ್ಕರವನ್ನು ಅಂತ್ಯಗೊಳಿಸಿದರು.

2006: ಖ್ಯಾತ ಹಿಂದಿ ಚಿತ್ರ ನಿರ್ದೇಶಕ ಮಹೇಶ ಭಟ್ ಅವರನ್ನು ಗುರಿಯಾಗಿಟ್ಟುಕೊಂಡು ಅವರ ಕಚೇರಿಗೆ ನುಗ್ಗಿದ ಇಬ್ಬರು ಅಪರಿಚಿತರು ಕಚೇರಿಯಲ್ಲಿ ಗುಂಡು ಹಾರಿಸಿ ಪರಾರಿಯಾದರು. ಈ ವೇಳೆಯಲ್ಲಿ ಮಹೇಶ ಭಟ್ ಕಚೇರಿಯಲ್ಲಿ ಇರಲಿಲ್ಲ. ಗುಂಡೇಟಿನಿಂದ ಯಾರೂ ಗಾಯಗೊಳ್ಳಲಿಲ್ಲ.

2006: ಹಂಪಿ ಕನ್ನಡ ವಿಶ್ವ ವಿದ್ಯಾಲಯದಲ್ಲಿ ದೇವರ ದಾಸಿಮಯ್ಯ ಅವರ ಸಾಧನೆ, ಬರವಣಿಗೆ ಬಗ್ಗೆ ಅಧ್ಯಯನ ನಡೆಸುವ ಸಲುವಾಗಿ ಪೀಠ ಸ್ಥಾಪನೆ. ಪೀಠಕ್ಕೆ 2006-07 ಸಾಲಿನಲ್ಲಿ ಸರ್ಕಾರ 10 ಲಕ್ಷ ರೂಪಾಯಿ ಬಿಡುಗಡೆ ಮಾಡಿತು.

2001: ಭಾರತದ ನಾರಾಯಣ್ ಕಾರ್ತಿಕೇಯನ್ ಇಂಗ್ಲೆಂಡಿನ ಸಿಲ್ವರ್ ಸ್ಟೋನ್ ಟ್ರ್ಯಾಕ್ಸಿನಲ್ಲಿ ಜಾಗ್ವಾರ್ ರೇಸಿಂಗ್ ತಂಡಕ್ಕಾಗಿ ಪರೀಕ್ಷಾರ್ಥವಾಗಿ ಫಾರ್ಮ್ಯುಲಾ ಒನ್ ಕಾರನ್ನು ಓಡಿಸುವ ಮೂಲಕ ಈ ಕಾರನ್ನು ಓಡಿಸಿದ ಪ್ರಪ್ರಥಮ ಭಾರತೀಯ ಹಾಗೂ ಮೊತ್ತ ಮೊದಲ ಜಪಾನೇತರ ಏಷಿಯನ್ ಎನಿಸಿಕೊಂಡರು.

1969: ಜರ್ಮನಿಯ ಟೆನಿಸ್ ಆಟಗಾರ್ತಿ ಸ್ಟೆಫಿ ಗ್ರಾಫ್ ಜನ್ಮದಿನ. 1988ರಲ್ಲಿ ಒಲಿಂಪಿಕ್ ಸ್ವರ್ಣ ಹಾಗೂ ಎಲ್ಲ ಪ್ರಮುಖ ಟೆನಿಸ್ ಸ್ಪರ್ಧೆಗಳನ್ನು ಗೆಲ್ಲುವ ಮೂಲಕ ಈಕೆ `ಗೋಲ್ಡನ್ ಗ್ರ್ಯಾಂಡ್ ಸ್ಲಾಮ್' ಪಡೆದುಕೊಂಡರು.

1960: ಕಲಾವಿದ ಜಿ. ಜೈಕುಮಾರ್ ಜನನ.

1958: ಅಮೆರಿಕದ ಸ್ಕೇಟರ್ ಎರಿಕ್ ಹೀಡನ್ ಜನ್ಮದಿನ. 1980ರ ಚಳಿಗಾಲದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಎಲ್ಲ ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದ ಮೊತ್ತ ಮೊದಲ ಅಮೆರಿಕನ್ ಸ್ಕೇಟರ್ ಈ ವ್ಯಕ್ತಿ.

1956: ಮೈಸೂರು ವಿಶ್ವವಿದ್ಯಾನಿಲಯದ ವೈಸ್ ಛಾನ್ಸಲರ್ (ಕುಲಪತಿ) ಆಗಿ ಮಹಾರಾಜಾ ಕಾಲೇಜು ಪ್ರಿನ್ಸಿಪಾಲ ಕೆ.ವಿ. ಪುಟ್ಟಪ್ಪ ಅವರನ್ನು ಸರ್ಕಾರ ನೇಮಿಸಿತು. ಹಾಲಿ ವೈಸ್ ಛಾನ್ಸಲರ್ ಪ್ರೊ. ವಿ.ಎಲ್. ಡಿಸೌಜಾ ಅವರ ಸ್ಥಾನಕ್ಕೆ ಪುಟ್ಟಪ್ಪ ಅವರು ನೇಮಕಗೊಂಡರು.

1953: ಕಲಾವಿದ ಬಾನಂದೂರು ಕೆಂಪಯ್ಯ ಜನನ.

1947: ಮೌಂಟ್ ಬ್ಯಾಟನ್ ಯೋಜನೆಯ ಭಾರತ ವಿಭಜನೆ ಕುರಿತು ಚರ್ಚಿಸಲು ಕಾಂಗ್ರೆಸ್ ಕಾರ್ಯಕಾರಿಣಿ ನವದೆಹಲಿಯಲ್ಲಿ ಈದಿನ ಸಭೆ ಸೇರಿತು.

1937: ಖ್ಯಾತ ವೀಣಾವಾದಕ ಆರ್. ಕೆ. ಸೂರ್ಯನಾರಾಯಣ (14-6-1937ರಿಂದ 25-12-2003) ಅವರು ಆರ್.ಎಸ್. ಕೇಶವಮೂರ್ತಿ- ವೆಂಕಟಲಕ್ಷ್ಮಮ್ಮ ದಂಪತಿಯ ಮಗನಾಗಿ ಮೈಸೂರಿನಲ್ಲಿ ಜನಿಸಿದರು.

1933: ಸಾಹಿತಿ, ಮನೋವಿಜ್ಞಾನ ಪ್ರಾಧ್ಯಾಪಕ, ಜೈನ ಸಿದ್ಧಾಂತಗಳಲ್ಲಿ ಪಾಂಡಿತ್ಯ ಗಳಿಸಿದ್ದ ಡಾ. ಎ.ಎಸ್. ಧರಣೇಂದ್ರಯ್ಯ (14-6-1933ರಿಂದ 8-4-2000) ಅವರು ಸಿಂದಪ್ಪ ಶೆಟ್ಟರು- ಪದ್ಮಾವತಮ್ಮ ದಂಪತಿಯ ಪುತ್ರನಾಗಿ ಹಾಸನ ಜಿಲ್ಲೆಯ ಅಡಗೂರು ಗ್ರಾಮದಲ್ಲಿ ಜನಿಸಿದರು.

1929: ಕಲಾವಿದ ಬಿ.ವಿ. ನಂಜುಂಡಯ್ಯ ಜನನ.

1909: ಇಎಂಎಸ್ ನಂಬೂದರಿಪಾಡ್ (1908-1998) ಜನ್ಮದಿನ. ಭಾರತದ ಕಮ್ಯೂನಿಸ್ಟ್ ನಾಯಕರಾದ ಇವರು 1957ರಲ್ಲಿ ಕೇರಳದ ಮುಖ್ಯಮಂತ್ರಿಯಾಗಿ, ಜಗತ್ತಿನಲ್ಲೇ ಮುಕ್ತ ಚುನಾವಣೆ ಮೂಲಕ ಅಧಿಕಾರಕ್ಕೆ ಏರಿದ ಮೊದಲ ಕಮ್ಯೂನಿಸ್ಟ್ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಗಳಿಸಿದರು.

1868: ವಿಜ್ಞಾನಿ ಕಾರ್ಲ್ ಲ್ಯಾಂಡ್ ಸ್ಟೇನರ್ ಜನನ. ರಕ್ತದ ಗುಂಪುಗಳನ್ನು ಕಂಡು ಹಿಡಿದುದಕ್ಕಾಗಿ ಇವರಿಗೆ ನೊಬೆಲ್ ಪ್ರಶಸ್ತಿ ಲಭಿಸಿತು.

1800: ಫ್ರೆಂಚ್ ಕ್ರಾಂತಿ ಸಂದರ್ಭದಲ್ಲಿ ಇಟಲಿಯ ಅಲೆಸ್ಸಾಂಡ್ರಿಯ ಸಮೀಪದ ಮರೆಂಗೋದಲ್ಲಿ ನಡೆದ ನಡೆದ ಸಮರದಲ್ಲಿ ಆಸ್ಟ್ರಿಯನ್ನರನ್ನು ನೆಪೋಲಿಯನ್ ಸೋಲಿಸಿದ. ಫ್ರೆಂಚ್ ಜನರಲ್ ಲೂಯಿ ಚಾರ್ಲ್ಸ್ ಡೆಸಾಯಿಕ್ಸ್ ಯುದ್ಧದಲ್ಲಿ ಹತನಾದ.

1777: ಅಮೆರಿಕನ್ ಕಾಂಗ್ರೆಸ್ `ನಕ್ಷತ್ರ ಮತ್ತು ಪಟ್ಟಿ'ಗಳಿರುವ (ಸ್ಟಾರ್ ಅಂಡ್ ಸ್ಟ್ರೈಪ್ಸ್) ಧ್ವಜವನ್ನು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ಧ್ವಜವಾಗಿ ಅಂಗೀಕರಿಸಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Friday, June 13, 2008

'ಸಮ್ಮರ್ ಆಫ್ 2007' ನೈಜ ಸಮಸ್ಯೆ ಬಿಚ್ಚಿಡುತ್ತದೆಯೇ?

'ಸಮ್ಮರ್ ಆಫ್ 2007' ನೈಜ

ಸಮಸ್ಯೆ ಬಿಚ್ಚಿಡುತ್ತದೆಯೇ?


ರೈತರ ಹೆಸರು ಬಳಸಿಕೊಂಡು ರಾಜಕೀಯ ಮಾಡುವವರು, ವ್ಯಾಪಾರ ಮಾಡಿ ಲಾಭ ಕೊಳ್ಳೆ ಹೊಡೆಯುವವರು ಕಮ್ಮಿ ಇಲ್ಲ. ರೈತರ ಆತ್ಮಹತ್ಯೆಯ ಹೆಸರಿನಲ್ಲಿ ಇಂದು ಬಿಡುಗಡೆ ಆಗುತ್ತಿರುವ ಸಿನೆಮಾ 'ಸಮ್ಮರ್ ಆಫ್ 2007' ನಿಜವಾಗಿಯೂ ರೈತರ ಸಂಕಷ್ಟದ ಹಿನ್ನೆಲೆಯನ್ನು ಅನಾವರಣಗೊಳಿಸುತ್ತದೆಯೇ?

ನೆತ್ರಕೆರೆ ಉದಯಶಂಕರ

ರೈತರ ಆತ್ಮಹತ್ಯೆ ಈಗ ನಿತ್ಯ ಸುದ್ದಿ. ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಸಂಖ್ಯೆ ಲಕ್ಷ ಮೀರಿದೆ. ರೈತರ ರಕ್ಷಣೆಗೆ ಟೊಂಕ ಕಟ್ಟಿರುವುದಾಗಿ ಹೇಳುವ ಸರ್ಕಾರಗಳು ರೈತರ ಸಲುವಾಗಿ ಪ್ಯಾಕೇಜುಗಳನ್ನು ಘೋಷಿಸಿವೆ. ಆದರೂ ರೈತರ ಆತ್ಮಹತ್ಯೆ ಸರಣಿ ನಿಂತಿಲ್ಲ.

ಯಾಕೆ ಹೀಗೆ? ರೈತರು ಏಕೆ ಸರಣಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ?

ಇಂತಹುದೊಂದು ಪ್ರಶ್ನೆ ಐವರು ವೈದ್ಯಕೀಯ ವಿದ್ಯಾರ್ಥಿಗಳನ್ನು ಕಾಡುತ್ತದೆ. ಅವರು ಉತ್ತರ ಕಂಡು ಹಿಡಿಯುವ ಯತ್ನದಲ್ಲಿ ತೊಡಗುತ್ತಾರೆ. ತಮ್ಮ ಸುತ್ತುಮತ್ತಲಿನ ಸಾಮಾಜಿಕ ವ್ಯವಸ್ಥೆಯ ಅಧ್ಯಯನಕ್ಕೆ ತೊಡಗುತ್ತಾರೆ. ಸುತ್ತಲಿನ ಸಾಮಾಜಿಕ ಬದುಕು ರೈತರ ಬಡತನ ಅದರ ಕರಾಳತೆಯ ಆಳ ಕಂಡು ಹಿಡಿಯಲು ಯತ್ನಿಸುತ್ತಾರೆ.

ಅವರಿಗೆ ರೈತರು ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬುದರ ಸುಳಿವು ಸಿಗುತ್ತದೆಯೇ?ಇದನ್ನು ಅರಿತುಕೊಳ್ಳಬೇಕಿದ್ದರೆ ನೀವು 'ಸಮ್ಮರ್ ಆಫ್ 2007' ಸಿನೆಮಾ ನೋಡಬೇಕು ಎನ್ನುತ್ತಾರೆ ಅದರ ನಿರ್ದೇಶಕ ಸುಹೇಲ್ ತತಾರಿ.

ಹೌದು, ಗ್ರಾಮೀಣ ಪ್ರದೇಶಗಳಲ್ಲಿನ ರೈತರ ಸರಣಿ ಆತ್ಮಹತ್ಯೆ ಘಟನೆ ಆಧರಿಸಿ ನಿರ್ಮಿಸಲಾಗಿರುವ ಚಿತ್ರ `ಸಮ್ಮರ್ ಆಫ್ 2007', ಇಂದು ಅಂದರೆ 13 ಜೂನ್ 2008ರ ಶುಕ್ರವಾರ ತೆರೆ ಕಾಣುತ್ತಿದೆ.

`ವುಡ್ ಸ್ಟೊಕ್ ವಿಲ್ಲಾ' ಚಿತ್ರದ ಮೂಲಕ ಜನಪ್ರಿಯತೆ ಪಡೆದಿರುವ ಸಿಕಂದರ್ ಖೇರ್ ಈ ಚಿತ್ರದಲ್ಲಿ ನಾಯಕ ನಟ. ಮಹಾರಾಷ್ಟ್ರದ ವಿದರ್ಭ ಪ್ರದೇಶದಲ್ಲಿ ಕಳೆದ ಹತ್ತು ವರ್ಷದ ಅವಧಿಯಲ್ಲಿ ನೂರಾರು ರೈತರು ಆರ್ಥಿಕ ಸಂಕಷ್ಟ ಎದುರಿಸಲಾಗದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಹಿನ್ನೆಲೆಯೇ `ಸಮ್ಮರ್ ಆಫ್ 2007' ಚಿತ್ರದ ಕಥೆಯ ಹಂದರ ಎನ್ನುತ್ತಾರೆ ಸುಹೇಲ್ ತತಾರಿ.

ತಮ್ಮ ಸುತ್ತುಮುತ್ತಲಿನ ಸಾಮಾಜಿಕ ಬದುಕು, ರೈತರ ಬಡತನದ ಕರಾಳತೆಯನ್ನು ಕಂಡು ಅದರ ಮೂಲ ಅರಿಯಲು ಹೊರಡುವ ವೈದ್ಯಕೀಯ ವಿದಾರ್ಥಿಗಳು ಗೇಣಿದಾರರು ಹಾಗೂ ಸಣ್ಣ ಹಿಡುವಳಿದಾರರ ಮೇಲೆ ಜಮೀನ್ದಾರರು ಯಾವ ರೀತಿ ದೌರ್ಜನ್ಯ ಮಾಡುತ್ತಾರೆ ಎಂಬುದನ್ನು ಬಯಲು ಮಾಡುತ್ತಾರೆ. ಈ ದೌರ್ಜನ್ಯದ ಚಿತ್ರಣವನ್ನು ನೈಜವಾಗಿ ಸೆರೆ ಹಿಡಿಯುವ ಯತ್ನ ಇಲ್ಲಿದೆ ಎಂಬುದು ತತಾರಿ ಅವರ ಹೇಳಿಕೆ.

ಜಮೀನ್ದಾರಿ ಪದ್ಧತಿ ಉಳುವವರನ್ನು ಹಣ್ಣುಗಾಯಿ ನೀರುಗಾಯಿ ಮಾಡಿದೆ ಎಂಬುದು ಶತಕಗಳಷ್ಟು ಹಿಂದಿನ ಕಥೆ. ಆಗ ರೈತರು ನಿರಂತರ ಶೋಷಣೆಗೆ ಒಳಗಾದದ್ದೂ ಸುಳ್ಳೇನಲ್ಲ.

ಆದರೆ ರೈತರ ಆತ್ಮಹತ್ಯೆಯ ಸರಣಿ ಶುರುವಾದದ್ದು ಹೆಚ್ಚು ಕಡಿಮೆ ಉದಾರ ಆರ್ಥಿಕ ನೀತಿ, ಜಾಗತೀಕರಣ ದೇಶದೊಳಕ್ಕೆ ಕಾಲಿರಿಸಿದ ಬಳಿಕ. ಹಸಿರು ಕ್ರಾಂತಿಯ ಹೆಸರಿನಲ್ಲಿ ರಸಗೊಬ್ಬರ, ಕೀಟನಾಶಕ ಆಧಾರಿತ ಆಧುನಿಕ ಕೃಷಿ ಪದ್ಧತಿಯನ್ನು ಅವಲಂಬಿಸಿ, ಪರಂಪರಾಗತ ಸ್ವಾವಲಂಬಿ ಗೋ ಆಧಾರಿತ ಕೃಷಿಗೆ ಎಳ್ಳುನೀರು ಬಿಟ್ಟ ನಂತರ ಎಂಬುದನ್ನು ಗಮನಿಸಬೇಕಾದ ಅಗತ್ಯವಿದೆ.

ಗೋ ಆಧಾರಿತ ಸಾವಯವ ಕೃಷಿ ನಡೆಸುತ್ತಿದ್ದಾಗ ಸೂಕ್ಷ್ಮ ಜೀವಿಗಳಿಂದ ಸಮೃದ್ಧವಾಗಿದ್ದ ಭೂಮಿ ರಸಗೊಬ್ಬರ ಪ್ರಯೋಗದ ಬಳಿಕ ಬರಡಾಗಿ ಉತ್ಪಾದನೆ ಕುಸಿದದ್ದು ಒಂದೆಡೆಯಾದರೆ, ಮನೆಯಲ್ಲೇ ತಯಾರಾಗುತ್ತಿದ್ದ ಗೊಬ್ಬರಕ್ಕೆ ಬದಲಾಗಿ ಕಂಪೆನಿಗಳು ಬಿಡುಗಡೆ ಮಾಡುವ ರಸಗೊಬ್ಬರಕ್ಕಾಗಿ, ಕೀಟನಾಶಕಕ್ಕಾಗಿ ಅಂಗಡಿಗಳ ಮುಂದೆ ಕ್ಯೂ ನಿಲ್ಲುವ ಪರಿಸ್ಥಿತಿಗೆ ರೈತ ಬಂದದ್ದು ಇನ್ನೊಂದೆಡೆ. ಪರಿಣಾಮವಾಗಿ ಕನಿಷ್ಠ ಪ್ರಮಾಣದಲ್ಲಿದ್ದ ಕೃಷಿ ವೆಚ್ಚ ಕೈ ಮೀರಿ ಬೆಳೆದದ್ದು ರೈತರ ಸಾಲ ವೃದ್ಧಿ- ತನ್ಮೂಲಕ ಸಂಕಟ ವೃದ್ಧಿಗೆ ಕಾರಣವಾದದ್ದು ಕಣ್ಣಿಗೆ ಕಾಣುವ ಸತ್ಯ.

ಜೊತೆಗೆ ರೈತರ ಬೆಳೆಗಳಿಗೆ ವೈಜ್ಞಾನಿಕವಾಗಿ ಬೆಲೆ ಸಿಗದಂತೆ ಮಾಡಿರುವ ನಮ್ಮ ಆರ್ಥಿಕ ಸಾಮಾಜಿಕ ವ್ಯವಸ್ಥೆ ಕೂಡಾ ರೈತರ ಜೀವನ ಅಸಹನೀಯವಾಗುವಂತೆ ಮಾಡಿದ್ದು ಪುಟ್ಟ ಮಕ್ಕಳಿಗೂ ಅರ್ಥವಾಗುವ ವಿಚಾರ.

ಮಳೆ ಬಂದೊಡನೆ ಸಾಲು ಸಾಲಾಗಿ ನೇಗಿಲು ಹಿಡಿದು ಎತ್ತುಗಳೊಂದಿಗೆ ಉಳುಮೆಗೆ ಸಾಗಿ ವ್ಯವಸಾಯ ಕೆಲಸ ಆರಂಭಿಸುತ್ತಿದ್ದ ರೈತರು ತಮ್ಮ ಮನೆಯಲ್ಲೇ ಕಾಪಿಡುತ್ತಿದ್ದ ಬೀಜ ಬಳಸುತ್ತಿದ್ದುದು, ಹಟ್ಟಿ ಗೊಬ್ಬರ ಹಾಕಿ ಬೆಳೆ ತೆಗೆಯುತ್ತಿದ್ದ ಆಗಿನ ನೆಮ್ಮದಿಯ ಕಾಲ ಎಲ್ಲಿ?

ಮಳೆ ಬಂದೊಡನೆ ಬೀಜ, ರಸಗೊಬ್ಬರ, ಕೀಟನಾಶಕಕ್ಕಾಗಿ ಅಂಗಡಿಗಳಲ್ಲಿ ಕ್ಯೂ ನಿಲ್ಲಬೇಕಾಗಿ ಬಂದಿರುವ, ಅದಕ್ಕಾಗಿ ಬೀದಿಗಳಲ್ಲಿ ಚಳವಳಿ ಮಾಡಬೇಕಾಗಿ ಬಂದಿರುವ, ಲಾಠಿ, ಗುಂಡಿಗೆ ಎದೆಯೊಡ್ಡಬೇಕಾಗಿ ಬಂದಿರುವ ಇಂದಿನ ಕಾಲ ಎಲ್ಲಿ?

ರೈತರ ಸಂಕಷ್ಟಗಳಿಗೆಲ್ಲ ಓಬೀರಾಯನ ಕಾಲದ ಜಮೀನ್ದಾರಿ ಪದ್ಧತಿ ಒಂದೇ ಕಾರಣ ಎಂಬುದಾಗಿ ಬಿಂಬಿಸುವ ಬದಲು ಆಧುನಿಕ ವ್ಯವಸ್ಥೆಯ ಅವ್ಯವಸ್ಥೆಗಳನ್ನು ಕೂಡಾ 'ಸಮ್ಮರ್ ಆಫ್ 2007' ಬಿಚ್ಚಿಟ್ಟರೆ, ಜನರ ಸಮಾಜದ ಕಣ್ಣು ತೆರೆಸಲು ಅದು ಸಮರ್ಥವಾಗಬಹುದು. ಇಲ್ಲದೇ ಇದ್ದರೆ ರೈತರ ಆತ್ಮಹತ್ಯೆಯ ಹೆಸರಿನಲ್ಲಿ ಮೋಜು ಮಾಡುವವರ ಪಾಲಿಗೆ ಅದು ಇನ್ನೊಂದು ಮೋಜಿನ- ಮನರಂಜನೆಯ ಚಿತ್ರವಾದೀತು ಅಷ್ಟೆ.

ಇದೆಲ್ಲಕ್ಕಿಂತ ಹೆಚ್ಚಾಗಿ, ರೈತರು ರಸಗೊಬ್ಬರ - ಕೀಟನಾಶಕದಿಂದ ಅಧಿಕ ಸಂಪತ್ತು ಎಂಬ ಭ್ರಮೆಯ ಮೊಟ್ಟೆಯನ್ನು ಒಡೆದುಕೊಂಡು ಹೊರಬರಬೇಕಾಗಿದೆ. ಮಳೆ ನೀರು ಕೊಯ್ಲು, ಸಹಜ ಕೃಷಿ, ಗೋ ಆಧಾರಿತ ಸಾವಯವ ಕೃಷಿಯೊಂದೇ ಭೂಮಿಯ ಫಲವತ್ತತೆ ಹೆಚ್ಚಳ, ಸಮೃದ್ಧ ಆಹಾರ ಧಾನ್ಯ ಉತ್ಪಾದನೆ, ಸುಖೀ ಸ್ವಾವಲಂಬಿ ಬದುಕಿಗೆ ಬುನಾದಿ ಎಂಬುದನ್ನು ಅರಿತುಕೊಳ್ಳಬೇಕಾಗಿದೆ.

ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ, ಆರ್ಟ್ ಆಫ್ ಲಿವಿಂಗ್ ನ ಶ್ರೀ ಶ್ರೀ ರವಿಶಂಕರ ಗುರೂಜಿ, ಬಾಲಗಂಗಾಧರ ನಾಥ ಸ್ವಾಮೀಜಿ ಸೇರಿದಂತೆ ಹಲವಾರು ಮಂದಿ ಸಂತರು ಹಿರಿಯರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ರೈತರು ಅಂತಹವರ ಮಾರ್ಗದರ್ಶನ ಪಡೆಯಲು ಮುಂದಾಗಬೇಕಾದ್ದು ಇಂದಿನ ಅಗತ್ಯ

ಇಂದಿನ ಇತಿಹಾಸ History Today ಜೂನ್ 13

ಇಂದಿನ ಇತಿಹಾಸ

ಜೂನ್ 13

ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ಸಂದರ್ಭದಲ್ಲಿ ಪಂಜಾಬ್ ಗವರ್ನರ್ ಆಗಿದ್ದ ಮೈಕೆಲ್ ಒ'ಡಾಯರ್ ನನ್ನು ಕೊಂದುದಕ್ಕಾಗಿ ಭಾರತದ ಕ್ರಾಂತಿಕಾರಿ ಹೋರಾಟಗಾರ ಊಧಮ್ ಸಿಂಗ್ ಅವರನ್ನು ಲಂಡನ್ನಿನಲ್ಲಿ ಗಲ್ಲಿಗೇರಿಸಲಾಯಿತು.

2007: ಮಹಾತ್ಮ ಗಾಂಧಿ ಮೊಮ್ಮಗ ರಾಮಚಂದ್ರ ಗಾಂಧಿ (70) ಅವರು ನವದೆಹಲಿಯ ಭಾರತೀಯ ಅಂತಾರಾಷ್ಟ್ರೀಯ ಕೇಂದ್ರದ (ಐಸಿಸಿ) ಕೊಠಡಿಯಲ್ಲಿ ಮೃತರಾದರು. ಪಶ್ಚಿಮ ಬಂಗಾಳದ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ಅವರ ಹಿರಿಯ ಸೋದರರಾದ ರಾಮಚಂದ್ರ ಗಾಂಧಿ ಜೂನ್ 10ರಂದಷ್ಟೇ ಇಲ್ಲಿಗೆ ಬಂದಿದ್ದರು. ಪ್ರಿನ್ಸ್ ಟನ್ ವಿವಿಯ ಮಾಜಿ ಪ್ರಾಧ್ಯಾಪಕ, ಮಹಾತ್ಮ ಗಾಂಧಿಯವರ ಕೊನೆಯ ಮಗ ದೇವದಾಸ್ ಗಾಂಧಿ ಅವರ ಪುತ್ರರಾದ ರಾಮಚಂದ್ರ ಗಾಂಧಿ ಹಲವಾರು ಪುಸ್ತಕ, ನಾಟಕಗಳನ್ನು ರಚಿಸಿದ್ದಲ್ಲದೆ ತಾತ ಮಹಾತ್ಮ ಗಾಂಧಿ ಬಗ್ಗೆ ಚಲನಚಿತ್ರವನ್ನೂ ನಿರಿರ್ಮಿಸಿದ್ದರು. ಇವರ ತಾಯಿ ಲಕ್ಷ್ಮಿ ಸ್ವಾತಂತ್ರ್ಯ ಹೋರಾಟಗಾರ ರಾಜಾಜಿಯವರ ಪುತ್ರಿ.

2007: ಆಫ್ರಿಕಾದ ಆಧುನಿಕ ಸಾಹಿತ್ಯದ ಪಿತಾಮಹ ಎಂದೇ ಗುರುತಿಸಲಾಗಿರುವ ನೈಜೀರಿಯಾ ಸಂಜಾತ ಚಿನುವಾ ಅಚಿಯೆ ಅವರು 2007ನೇ ಸಾಲಿನ ಮ್ಯಾನ್ ಬೂಕರ್ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾದರು. 60ಸಾವಿರ ಪೌಂಡ್ ಮೊತ್ತದ ಈ ಪ್ರಶಸ್ತಿಯನ್ನು ಕಾದಂಬರಿ ಕ್ಷೇತ್ರಕ್ಕೆ ನೀಡಿದ ಅಸಾಧಾರಣ ಕೊಡುಗೆಗಾಗಿ ಪ್ರತಿ ಎರಡು ವರ್ಷಕ್ಕೊಮ್ಮೆನೀಡಲಾಗುತ್ತದೆ. 2005ರಲ್ಲಿ ಮೊತ್ತ ಮೊದಲ ಬಾರಿಗೆ ಈ ಪ್ರಶಸ್ತಿಯನ್ನು ಇಸ್ಮಾಯಿಲ್ ಕದರೆ ಅವರಿಗೆ ನೀಡಲಾಗಿತ್ತು. ಅಚಿಬೆ ಅವರು 1958ರಲ್ಲಿ ಬರೆದ `ಥಿಂಗ್ಸ್ ಫಾಲ್ ಅಪಾರ್ಟ್' ಕಾದಂಬರಿ ವಿಶ್ವದಾದ್ಯಂತ ಖ್ಯಾತಿ ಗಳಿಸಿದ್ದು ಪ್ರಪಂಚದಾದ್ಯಂತ ಇದರ ಹತ್ತು ದಶಲಕ್ಷ ಪುಸ್ತಕಗಳು ಮಾರಾಟವಾಗಿವೆ.

2007: ಖ್ಯಾತ ಮುತ್ಸದ್ದಿ, ನೊಬೆಲ್ ಪ್ರಶಸ್ತಿ ವಿಜೇತ ಶಿಮನ್ ಪೆರೆಸ್ ಅವರು ಇಸ್ರೇಲಿನ ಅಧ್ಯಕ್ಷರಾಗಿ ಆಯ್ಕೆಯಾದರು.

2007: ಭೂಮಿಯಿಂದ ಸುಮಾರು 780 ಲಕ್ಷ ಜ್ಯೋತಿರ್ ವರ್ಷ ದೂರದಲ್ಲಿದ್ದ ಆಕಾಶಗಂಗೆಯ ಪ್ರಮುಖ ನಕ್ಷತ್ರವೊಂದು ಎರಡು ಬಾರಿ ಸ್ಫೋಟಗೊಂಡ ಪರಿಣಾಮವಾಗಿ ತನ್ನ ಅಸ್ತಿತ್ವ ಕಳೆದುಕೊಂಡಿದೆ ಎಂದು ಖಗೋಳ ಶಾಸ್ತ್ರಜ್ಞರು ವಾಷಿಂಗ್ಟನ್ನಿನಲ್ಲಿ ಬಹಿರಂಗಪಡಿಸಿದರು. 2004 ಮತ್ತು 2006ರಲ್ಲಿ ಈ ನಕ್ಷತ್ರ ಎರಡು ಸಲ ಭಾರಿ ಪ್ರಮಾಣದಲ್ಲಿ ಸ್ಫೋಟಗೊಂಡಿತ್ತು, ಇದು ಸೂರ್ಯನಿಗಿಂತ 50ರಿಂದ 100 ಪಟ್ಟು ದೊಡ್ಡದಾಗಿತ್ತು ಆಂತರಿಕ ಸ್ಫೋಟದ ಕಾರಣ ಇದು ಸಂಪೂರ್ಣವಾಗಿ ನಾಶವಾಗಿದೆ ಎಂದು ಖಗೋಳ ತಜ್ಞರು ನಿಯತಕಾಲಿಕವೊಂದರಲ್ಲಿ ತಿಳಿಸಿದರು.

2007: ಸಾಹಿತಿ ಎಚ್. ವಿ. ನಾಗರಾಜರಾವ್ ಅವರ ಅನುವಾದಿತ ಕೃತಿ `ಸಾರ್ಥ'ವು 2006ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಯಿತು. ಎಸ್.ಎಲ್. ಭೈರಪ್ಪ ಅವರ ಕಾದಂಬರಿ `ಸಾರ್ಥ'ವನ್ನು ನಾಗರಾಜರಾವ್ ಅವರು ಸಂಸ್ಕೃತಕ್ಕೆ ಅನುವಾದಿಸಿದ್ದಾರೆ.
2006: ಒರಿಸ್ಸಾದ ಭೈತರನಿಕಾ ವನ್ಯಪ್ರಾಣಿ ಮತ್ತು ಸಾಗರ ಜೀವಿಗಳ ಧಾಮದಲ್ಲಿನ ಮೊಸಳೆ ಸಂರಕ್ಷಣಾ ಕೇಂದ್ರದಲ್ಲಿ ವಿಶ್ವದಲ್ಲಿಯೇ ಅತಿ ದೊಡ್ಡದಾದ 23 ಅಡಿಗಳಷ್ಟು ಉದ್ದದ ಮೊಸಳೆ ಇರುವುದು ಬೆಳಕಿಗೆ ಬಂತು. ವಿಶ್ವ ವಿಖ್ಯಾತ ವನ್ಯ ಜೀವಿ ಧಾಮದಲ್ಲಿ ನಡೆಸಿದ ಪ್ರಾಣಿಗಳ ಗಣತಿ ಸಂದರ್ಭದಲ್ಲಿ ಇದು ಪತ್ತೆಯಾಗಿದ್ದು, 2006ರ ಸಾಲಿನ ಗಿನ್ನೆಸ್ ದಾಖಲೆಯಲ್ಲೂ ಸೇರ್ಪಡೆಯಾಗಿದೆ ಎಂದು ರಾಜ್ಯದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಸಿ. ಮೊಹಂತಿ ಈ ದಿನ ಪ್ರಕಟಿಸಿದರು.

2006: ಸುಪ್ರೀಂಕೋರ್ಟ್ ಆದೇಶದ ಮೇರೆಗೆ ದಂಡದ ರೂಪದಲ್ಲಿ ನೈಸ್ ಕಂಪೆನಿಗೆ ರಾಜ್ಯ ಸರ್ಕಾರ ನೀಡಿದ್ದ 5 ಲಕ್ಷ ರೂಪಾಯಿ ಮೊತ್ತದ ಚೆಕ್ ಬೌನ್ಸ್ ಆಯಿತು. ಚೆಕ್ಕನ್ನು ಕೆನರಾ ಬ್ಯಾಂಕಿಗೆ ಡೆಪಾಸಿಟ್ ಮಾಡಲಾಗಿತ್ತು.

2006: ಬಹುಮಹಡಿ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುವ ಸಲುವಾಗಿ ಲಾಹೋರ್ ನಗರದಲ್ಲಿದ್ದ ಏಕಮಾತ್ರ ಹಿಂದೂ ದೇವಾಲಯ `ಕೃಷ್ಣ ಮಂದಿರ'ವನ್ನು ಕೆಡವಿ ಹಾಕಲಾಗಿದೆ ಎಂದು ಇಸ್ಲಾಮಾಬಾದಿನ `ಡಾನ್' ವರದಿ ಮಾಡಿತು.

1996: ಜನತಾದಳ ಮುಖಂಡ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರನ್ನು ಆರು ವರ್ಷಗಳ ಅವಧಿಗೆ ಪಕ್ಷದಿಂದ ಉಚ್ಚಾಟಿಸಲಾಯಿತು. ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಅಧ್ಯಕ್ಷ ಲಾಲು ಪ್ರಸಾದ್ ಅವರು ಈ ಕ್ರಮ ಕೈಗೊಂಡರು.

1966: ಶಂಕಿತ ಅಪರಾಧಿಗಳ ಸಾಂವಿಧಾನಿಕ ಹಕ್ಕುಗಳಿಗೆ ಸಂಬಂಧಿಸಿದಂತೆ ಅಮೆರಿಕದ ಸುಪ್ರೀಂಕೋರ್ಟ್ ಮಿರಾಂಡ ವರ್ಸಸ್ ಅರಿಝೋನಾ ಪ್ರಕರಣದಲ್ಲಿ ಚಾರಿತ್ರಿಕ ತೀರ್ಪು ನೀಡಿತು. ಪೊಲೀಸರು ಪ್ರಶ್ನಿಸುವ ಮುನ್ನ ಶಂಕಿತ ಅಪರಾಧಿಗಳಿಗೆ ಅವರ ಸಾಂವಿಧಾನಿಕ ಹಕ್ಕುಗಳ ಬಗ್ಗೆ ತಿಳಿಸಬೇಕು ಎಂದು ಕೋರ್ಟ್ ಆದೇಶ ನೀಡಿತು. ಈ ತೀರ್ಪಿನ ಪ್ರಕಾರ ಬಂಧಿತ ಅಪರಾಧಿಗಳನ್ನು ಪ್ರಶ್ನಿಸುವ ಮುನ್ನ ಅವರಿಗೆ ಮೌನ ವಹಿಸುವ, ಅವರು ನೀಡುವ ಯಾವುದೇ ಹೇಳಿಕೆಯನ್ನು ಅವರ ವಿರುದ್ಧ ಬಳಸುವ ಸಾಧ್ಯತೆ ಇರುವ ಬಗ್ಗೆ ಹಾಗೂ ಅವರಿಗೆ ಅಟಾರ್ನಿಯೊಬ್ಬರ ಜತೆ ಸಮಾಲೋಚಿಸುವ ಹಕ್ಕು ಇದೆ ಎಂದು ಪೊಲೀಸರು ತಿಳಿಸಬೇಕು. ಈ ತೀರ್ಪು `ಮಿರಾಂಡಾ ವಾರ್ನಿಂಗ್ಸ್' ಎಂದೇ ಖ್ಯಾತಿ ಪಡೆದಿದೆ.

1965: ನಟ, ನಿರ್ದೇಶಕ, ನಾಟಕಕಾರ, ಹಾಸ್ಯ ನಾಟಕಗಳ ಮೂಲಕ ರಾಜ್ಯದಾದ್ಯಂತ ಮನೆ ಮಾತಾಗಿರುವ ಯಶವಂತ ಸರದೇಶಪಾಂಡೆ ಅವರು ಶ್ರೀಧರರಾವ್ ಗೋಪಾಲರಾವ ಸರದೇಶಪಾಂಡೆ- ಕಲ್ಪನಾದೇವಿ ದಂಪತಿಯ ಮಗನಾಗಿ ವಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿಯ ಉಕ್ಕಲಿಯಲ್ಲಿ ಜನಿಸಿದರು.

1963: ಕಲಾವಿದ ಎಂ. ಗುರುರಾಜ ಜನನ.

1962: ಸಾಹಿತಿ ಸುರೇಶ ಅಂಗಡಿ ಜನನ.

1960: ಕಲಾವಿದ ಶಿವಕುಮಾರ ಆರಾಧ್ಯ ಜನನ.

1959: ಕಲಾವಿದ ಆರ್. ಕೆ. ಪದ್ಮನಾಭ ಜನನ.

1958: ಸಾಹಿತಿ ಜಯರಾಮ ಕಾರಂತ ಜನನ.

1943: ಕಲಾವಿದೆ ಎಂ.ಜೆ. ಕಮಲಾಕ್ಷಿ ಜನನ.

1941: ಸಾಹಿತಿ ಜ.ಹೋ. ನಾರಾಯಣಸ್ವಾಮಿ ಜನನ.

1940: ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ಸಂದರ್ಭದಲ್ಲಿ ಪಂಜಾಬ್ ಗವರ್ನರ್ ಆಗಿದ್ದ ಮೈಕೆಲ್ ಒ'ಡಾಯರ್ ನನ್ನು ಕೊಂದುದಕ್ಕಾಗಿ ಭಾರತದ ಕ್ರಾಂತಿಕಾರಿ ಹೋರಾಟಗಾರ ಊಧಮ್ ಸಿಂಗ್ ಅವರನ್ನು ಲಂಡನ್ನಿನಲ್ಲಿ ಗಲ್ಲಿಗೇರಿಸಲಾಯಿತು.

1908: ಮುಜಾಫರ್ ಪುರ ಬಾಂಬ್ ಸ್ಫೋಟಕ್ಕಾಗಿ ಭಾರತೀಯ ಕ್ರಾಂತಿಕಾರಿ ಹೋರಾಟಗಾರ ಖುದೀರಾಮ್ ಬೋಸ್ ಅವರಿಗೆ ಮರಣದಂಡನೆ ವಿಧಿಸಲಾಯಿತು. ಈ ಬಾಂಬ್ ಸ್ಫೋಟದಲ್ಲಿ ಇಬ್ಬರು ಬ್ರಿಟಿಷ್ ಮಹಿಳೆಯರು ಮೃತರಾಗಿದ್ದರು.

1879: ಖ್ಯಾತ ಕ್ರಾಂತಿಕಾರಿ ಗಣೇಶ ದಾಮೋದರ ಸಾವರ್ಕರ್ ಜನನ.

1858: ಹದಿನೆಂಟನೆಯ ಶತಮಾನದ ಉತ್ತರಾರ್ಧದಲ್ಲಿ ಕನ್ನಡಕ್ಕಾಗಿ ದುಡಿಯವುದರೊಂದಿಗೆ ಸಮಾಜ ಸೇವೆಯನ್ನೂ ಕೈಂಕರ್ಯವನ್ನಾಗಿ ಮಾಡಿಕೊಂಡಿದ್ದ ಬುದ್ಧಯ್ಯ ಪುರಾಣಿಕ (13-6-1858ರಿಂದ 4-5-1959) (ಪೂರ್ಣ ಹೆಸರು ಶಿವಮೂರ್ತಿ ಬುದ್ಧಯ್ಯ ಸ್ವಾಮಿ ಮಗಿಪ್ರಭುದೇವ ಪುರಾಣಿಕ) ಅವರು ಮಗಿ ಪ್ರಭುದೇವರು-ಲಿಂಗಮ್ಮ ದಂಪತಿಯ ಪುತ್ರನಾಗಿ ವಿಜಾಪುರ ಜಿಲ್ಲೆಯ ತೇರದಾಳದಲ್ಲಿ ಈದಿನ ಜನಿಸಿದರು. ಕನ್ನಡ, ಮರಾಠಿ, ಇಂಗ್ಲಿಷ್, ಸಂಸ್ಕೃತದಲ್ಲಿವಿಶೇಷ ಪಾಂಡಿತ್ಯ ಹೊಂದಿದ್ದ ಪುರಾಣಿಕ ಕನ್ನಡ ಹಾಗೂ ಮರಾಠಿಯಲ್ಲಿ ಹಲವಾರು ಕೃತಿಗಳನ್ನು ರಚಿಸಿದರು.

1842: ರಾಣಿ ವಿಕ್ಟೋರಿಯಾ ಮತ್ತು ರಾಜಕುಮಾರ ಆಲ್ಬರ್ಟ್ ಸ್ಲೌಗ್ ನಿಂದ ಪ್ಯಾಡ್ಡಿಂಗ್ಟನ್ ವರೆಗೆ ಗ್ರೇಟ್ ವೆಸ್ಟರ್ನ್ ರೈಲ್ವೇಯಲ್ಲಿ ಪ್ರಯಾಣ ಮಾಡಿದರು. ಈ ರೀತಿ ಪ್ರಯಾಣಕ್ಕೆ ರೈಲುಗಾಡಿಯನ್ನು ಬಳಸಿದ ಮೊದಲ ಬ್ರಿಟಿಷ್ ರಾಣಿ ಇವರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Advertisement