My Blog List

Wednesday, December 17, 2008

ಇಂದಿನ ಇತಿಹಾಸ History Today ಡಿಸೆಂಬರ್ 17

ಇಂದಿನ ಇತಿಹಾಸ

ಡಿಸೆಂಬರ್ 17

ಪೋಪ್ 16ನೇ ಬೆನೆಡಿಕ್ಟ್ ಅವರು ಭಾರತದ ಬಾಹ್ಯಾಕಾಶ ವಿಜ್ಞಾನಿ, 2003ರವರೆಗೆ ಇಸ್ರೋ ಸಂಸ್ಥೆಯ ಮುಖ್ಯಸ್ಥರಾಗಿದ್ದ ಕೆ. ಕಸ್ತೂರಿ ರಂಗನ್ ಅವರನ್ನು ರೋಮ್ ಮೂಲದ ಪ್ರತಿಷ್ಠಿತ `ಪಾಂಟಿಫಿಕಲ್ ವಿಜ್ಞಾನ ಅಕಾಡೆಮಿ'ಯ ಸದಸ್ಯರನ್ನಾಗಿ ನೇಮಕ ಮಾಡಿದರು. 403 ವರ್ಷಗಳಷ್ಟು ಹಳೆಯದಾದ ಈ ಅಕಾಡೆಮಿಗೆ 89-90 ಮಂದಿ ಸದಸ್ಯರನ್ನು ವ್ಯಾಪಕ ಪರಿಶೀಲನೆಯ ಬಳಿಕ ನೇಮಿಸಲಾಗುತ್ತದೆ. 

2007:  ಬಿಜೆಪಿ ಧುರೀಣ ಪ್ರಮೋದ್ ಮಹಾಜನ್ ಅವರನ್ನು 2006ರಲ್ಲಿ ಕೊಲೆಗೈಯಲಾದ ಪ್ರಕರಣದಲ್ಲಿ ಅವರ ಸಹೋದರ ಪ್ರವೀಣ್ ಮಹಾಜನ್ ತಪ್ಪಿತಸ್ಥ ಎಂದು ಮುಂಬೈ ಸೆಷನ್ಸ್ ನ್ಯಾಯಾಲಯ ಘೋಷಿಸಿತು. ಪ್ರವೀಣ್ ಮಹಾಜನ್ ಗಂಭೀರ ಅಪರಾಧ ಎಸಗುವ ಉದ್ದೇಶದಿಂದಲೇ ಮನೆಯೊಳಕ್ಕೆ ಅತಿಕ್ರಮ ಪ್ರವೇಶ ಮಾಡಿ, ಕೊಲೆ ನಡೆಸಿದ ಅಪರಾಧಿ ಎಂದು ಎಂದು ಸೆಷನ್ಸ್ ನ್ಯಾಯಾಧೀಶ ಎಸ್.ಪಿ. ದಾವರೆ ತೀರ್ಪು ನೀಡಿದರು. 2006ರ ಏಪ್ರಿಲ್ 22ರಂದು ಪ್ರಮೋದ್  ಮಹಾಜನ್ ಅವರ ಮನೆಯಲ್ಲಿ ಪ್ರವೀಣ್ ಮಹಾಜನ್ ತನ್ನ ಹಿರಿಯ ಸಹೋದರನ ಮೇಲೆ ನಾಲ್ಕು ಸುತ್ತು ಗುಂಡು ಹಾರಿಸಿದ್ದರು. ಮುಂಬೈ ಆಸ್ಪತ್ರೆಯಲ್ಲಿ 12 ದಿನಗಳ  ಕಾಲ ಜೀವನ್ಮರಣ ಹೋರಾಟ ನಡೆಸಿದ ಬಳಿಕ ಪ್ರಮೋದ್ ಮಹಾಜನ್  ಅಸು ನೀಗಿದ್ದರು. ಹತ್ತೊಂಬತ್ತು ತಿಂಗಳ ಕಾಲ ವಿಚಾರಣೆ ನಡೆಸಿದ ನ್ಯಾಯಾಧೀಶ ಎಸ್.ಪಿ.ದಾವರೆ ಒಟ್ಟು 32 ಸಾಕ್ಷಿಗಳ ವಿಚಾರಣೆಯ ನಂತರ ಭಾರತೀಯ ದಂಡ ಸಂಹಿತೆ (ಐಪಿಸಿ) 302 ಮತ್ತು 449ರ ಅಡಿಯಲ್ಲಿ ಪ್ರವೀಣ್ ತಪ್ಪಿತಸ್ಥ ಎಂದು ತೀರ್ಪು ನೀಡಿದರು.

2007:  ಜಾಗತಿಕ ಷೇರುಪೇಟೆಯ ಕುಸಿತವು ಮುಂಬೈ ಷೇರುಪೇಟೆ ಮೇಲೆ ಕರಾಳ ಛಾಯೆ ಬೀರಿತು. ಸಂವೇದಿ ಸೂಚ್ಯಂಕವು, ಅನಿರೀಕ್ಷಿತವಾಗಿ 769 ಅಂಶಗಳಷ್ಟು ಕುಸಿತ ದಾಖಲಿಸಿತು. ಈ ಮೂಲಕ 20 ಸಾವಿರ ಅಂಶಗಳ ಗಡಿಯಿಂದ ಸೂಚ್ಯಂಕವು ಹಠಾತ್ತಾಗಿ ಹಿನ್ನಡೆ ಕಂಡಿತು. ಷೇರುಪೇಟೆ ಇತಿಹಾಸದಲ್ಲಿ ಇದು ಎರಡನೇ ದೊಡ್ಡ ಕುಸಿತ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಗಮನಾರ್ಹ ಪ್ರಮಾಣದಲ್ಲಿ (ಎಫ್ ಐ ಐ) ಬಂಡವಾಳ ಹಿಂದೆ ತೆಗೆದುಕೊಂಡದ್ದೇ ಈ ಹಿನ್ನಡೆಗೆ ಮುಖ್ಯ ಕಾರಣ.

 2007:  ವಿದ್ಯುನ್ಮಾನ ಸಮಾಜ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುವ `ಕಂಪ್ಯೂಟಿಂಗ್ ಮತ್ತು ಇಂಟರ್ನೆಟ್ ತಾಂತ್ರಿಕತೆ' ಕುರಿತ ನಾಲ್ಕನೇ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ  ಬೆಂಗಳೂರಿನಲ್ಲಿ ಚಾಲನೆ ನೀಡಲಾಯಿತು. ಒರಿಸ್ಸಾದ ಕಳಿಂಗ ಕೈಗಾರಿಕಾ ತಂತ್ರಜ್ಞಾನ ಸಂಸ್ಥೆ ವಿಶ್ವವಿದ್ಯಾಲಯ ಹಾಗೂ ಮಕಾವೊದ ಸಂಯುಕ್ತ ಸಂಸ್ಥಾನ ವಿಶ್ವವಿದ್ಯಾಲಯಗಳ ಜಂಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ  ನಾಲ್ಕು ದಿನಗಳ ಸಮ್ಮೇಳನವನ್ನು ರಾಜ್ಯಪಾಲ ರಾಮೇಶ್ವರ ಠಾಕೂರ್ ಉದ್ಘಾಟಿಸಿದರು.

2007: ಭೂದಾಖಲೆ ನೀಡಲು ಲಂಚ ಪಡೆದ ಗ್ರಾಮ ಲೆಕ್ಕಿಗನಿಗೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದ ಕರ್ನಾಟಕ ರಾಜ್ಯ ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿಯಿತು. ಹಾಸನ ಜಿಲ್ಲೆಯ ಕೌಶಿಕ ವೃತ್ತದ ಗ್ರಾಮ ಲೆಕ್ಕಿಗನಾಗಿದ್ದ ಡಿ.ಕೆ. ರಾಮಸ್ವಾಮಿ ಭೂದಾಖಲೆ ನೀಡಲು ರಮೇಶ ಎಂಬುವವರಿಂದ 600 ರೂಪಾಯಿ ಲಂಚ  ಪಡೆಯುತ್ತಿರುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ವಿಚಾರಣೆ ನಡೆಸಿದ ಸ್ಥಳೀಯ ನ್ಯಾಯಾಲಯ ರಾಮಸ್ವಾಮಿ ಅವರನ್ನು ಆರೋಪಮುಕ್ತಗೊಳಿಸಿತ್ತು. ಆದರೆ ಸರ್ಕಾರದ ಮೇಲ್ಮನವಿ ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್ ಅವರಿಗೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು. ರಾಮಸ್ವಾಮಿ ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.

2007: ಬ್ರಿಟಿಷ್ ರಾಣಿ ದ್ವಿತೀಯ ಎಲಿಜಬೆತ್ ಅವರು ದೇಶದ ಇತಿಹಾಸದಲ್ಲೇ `ದೀರ್ಘಾವಧಿ ಬದುಕಿದ ಅತ್ಯಂತ ಹಿರಿಯ ರಾಣಿ' ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ ಎಂದು ಅರಮನೆ ಮೂಲಗಳು ತಿಳಿಸಿದವು. ಎಲಿಜಬೆತ್ ಅವರಿಗೆ 2008ರ ಏಪ್ರಿಲ್ 21ಕ್ಕೆ 82 ವರ್ಷ ತುಂಬಲಿದೆ. ಇವರು  1901ರ ಜನವರಿ 22ರಂದು ಮೃತರಾದ ತಮ್ಮ ಮುತ್ತಜ್ಜಿ ವಿಕ್ಟೋರಿಯಾ ಅವರ 81 ವರ್ಷ ಬದುಕಿದ ದಾಖಲೆಯನ್ನು ಮುರಿಯಲಿದ್ದಾರೆ. 81 ವರ್ಷ 239 ದಿನ ಬದುಕಿ, 1820ರಲ್ಲಿಮೃತರಾದ ತೃತೀಯ ಜಾರ್ಜ್ ಬ್ರಿಟನ್ನಿನ ಅತ್ಯಂತ ಹಿರಿಯ ರಾಜ ಎಂಬ ದಾಖಲೆ ಹೊಂದಿದ್ದಾರೆ. 

2006: ಪೋಪ್ 16ನೇ ಬೆನೆಡಿಕ್ಟ್ ಅವರು ಭಾರತದ ಬಾಹ್ಯಾಕಾಶ ವಿಜ್ಞಾನಿ, 2003ರವರೆಗೆ ಇಸ್ರೋ ಸಂಸ್ಥೆಯ ಮುಖ್ಯಸ್ಥರಾಗಿದ್ದ ಕೆ. ಕಸ್ತೂರಿ ರಂಗನ್ ಅವರನ್ನು ರೋಮ್ ಮೂಲದ ಪ್ರತಿಷ್ಠಿತ `ಪಾಂಟಿಫಿಕಲ್ ವಿಜ್ಞಾನ ಅಕಾಡೆಮಿ'ಯ ಸದಸ್ಯರನ್ನಾಗಿ ನೇಮಕ ಮಾಡಿದರು. 403 ವರ್ಷಗಳಷ್ಟು ಹಳೆಯದಾದ ಈ ಅಕಾಡೆಮಿಗೆ 89-90 ಮಂದಿ ಸದಸ್ಯರನ್ನು ವ್ಯಾಪಕ ಪರಿಶೀಲನೆಯ ಬಳಿಕ ನೇಮಿಸಲಾಗುತ್ತದೆ. ಗಣಿತ, ಭೌತ, ಸಹಜ ವಿಜ್ಞಾನಗಳ ಪ್ರಗತಿ ಸಾಧನೆಯ ಗುರಿ ಹೊಂದಿರುವ ಈ ಅಕಾಡೆಮಿಗೆ ಸ್ವತಃ ಪೋಪ್ ಅವರ ರಕ್ಷಣೆಯಲ್ಲೇ ಕಾರ್ಯ ಎಸಗುತ್ತದೆ. ಈ ಗೌರವ ಪ್ರಾಪ್ತಿಯಾದುದು ತಮಗೆ ಅತೀವ ಸಂತಸ ಉಂಟು ಮಾಡಿದೆ, ಸ್ವತಃ ಪೋಪ್ ಅವರಿಂದ ನೇಮಕಾತಿ ಪತ್ರ ಪಡೆಯುವುದು ಅತ್ಯಂತ ದೊಡ್ಡ ಗೌರವ ಎಂದು ಕಸ್ತೂರಿ ರಂಗನ್ ಹರ್ಷ ವ್ಯಕ್ತಪಡಿಸಿದರು.

2006: ಸಮುದ್ರ ಈಜಿನಲ್ಲಿ ಈ ಹಿಂದೆ ದಾಖಲೆ ಮಾಡಿದ್ದ ಉಡುಪಿ ತಾಲ್ಲೂಕಿನ ಬ್ರಹ್ಮಾವರ ಕೋಡಿ ಕನ್ಯಾನದ ನಿವಾಸಿ ಗೋಪಾಲ ಖಾರ್ವಿ ತನ್ನ ಕೈ ಕಾಲುಗಳಿಗೆ ಬೇಡಿ ತೊಟ್ಟು ಸಮುದ್ರದಲ್ಲಿ 10 ಕಿ.ಮೀ. ದೂರವನ್ನು ನಿರಂತರ 2 ಗಂಟೆ 20 ನಿಮಿಷದಲ್ಲಿ ಈಜಿ ಹೊಸ ದಾಖಲೆ ನಿರ್ಮಿಸಿದರು. ಬೆಳಗ್ಗೆ 6.55ಕ್ಕೆ ಸೈಂಟ್ ಮೇರೀಸ್ ದ್ವೀಪದಿಂದ ಕೈಗೆ ಕೋಳ ತೊಡಿಸಿಕೊಂಡು ಕಾಲುಗಳನ್ನು ಕಟ್ಟಿ ಸಮುದ್ರಕ್ಕೆ ಧುಮುಕಿದ ಅವರು ಬೆಳಗ್ಗೆ 9.15ಕ್ಕೆ ಮಲ್ಪೆ ಕರಾವಳಿಗೆ ತಲುಪಿ ನೂತನ ದಾಖಲೆ ಸೃಷ್ಟಿಸಿದರು.

2006: ಭಾರತೀಯ ಮೂಲದ ಗಗನಯಾನಿ ಸುನೀತಾ ವಿಲಿಯಮ್ಸ್ ಅವರು ಬಾಹ್ಯಾಕಾಶದಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಹೊರಬಂದು ಬಾಹ್ಯಾಕಾಶದಲ್ಲಿ ತಮ್ಮ ಚೊಚ್ಚಲ ನಡಿಗೆ ನಡೆಸಿದರು.

2006: ಶಿಯಾಗಳ ಪವಿತ್ರ ನಗರವಾದ ಕರ್ಬಾಲಾದಲ್ಲಿ 30 ಶವಗಳಿದ್ದ ಸದ್ದಾಂ ಹುಸೇನ್ ಕಾಲದ ಗೋರಿಯೊಂದು ಪತ್ತೆಯಾಯಿತು. ವ್ಯಕ್ತಿಯೊಬ್ಬ ಮನೆ ಕಟ್ಟಿಸಲು ಪಾಯ ತೋಡುವಾಗ ಮನುಷ್ಯರ ಮೂಳೆಗಳು ಹಾಗೂ ಜೀರ್ಣವಾದ ಬಟ್ಟೆಗಳು ದೊರಕಿದವು. ಇದು 1991ರ ಕೊಲ್ಲಿ ಯುದ್ಧದ ಸಮಯದಲ್ಲಿ ಬಂಡೆದ್ದ ಶಿಯಾಗಳನ್ನು ಸಾಮೂಹಿಕವಾಗಿ ಹತ್ಯೆ ನಡೆಸಿದ್ದಾಗಿರಬಹುದು ಎಂದು ನಂಬಲಾಗಿದೆ.

2005: ಆಸ್ಟ್ರೇಲಿಯಾ ತಂಡದ ಶೇನ್ ವಾರ್ನ್ ಅವರು ಪರ್ತ್ನಲ್ಲಿ ನಡೆದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಮೂರು ವಿಕೆಟ್ ಉರುಳಿಸುವ ಮೂಲಕ ವರ್ಷವೊಂದರಲ್ಲಿ ಅತಿ ಹೆಚ್ಚು ವಿಕೆಟ್ ಉರುಳಿಸಿದ ವಿಶ್ವದಾಖಲೆಯ ಸಾಧನೆ ಮಾಡಿದರು. ಆಸ್ಟ್ರೇಲಿಯಾ ಪರ ಉತ್ತಮ ದಾಳಿ ನಡೆಸಿದ ಶೇನ್ ವಾರ್ನ್ ಈ ವರ್ಷದಲ್ಲಿ ತಮ್ಮ ವಿಕೆಟ್ ಗಳಿಕೆಯನ್ನು 87ಕ್ಕೆ ಹೆಚ್ಚಿಸಿಕೊಂಡರು. ಇದರೊಂದಿಗೆ ಶೇನ್ ವಾರ್ನ್ 1981ರಲ್ಲಿ ಡೆನ್ನಿಸ್ ಲಿಲ್ಲಿ ಸ್ಥಾಪಿಸಿದ್ದ 85 ವಿಕೆಟುಗಳ ವಿಶ್ವದಾಖಲೆ ಬದಿಗೊತ್ತಿದರು.

2005: ಇಂದೋರಿನ ಉನ್ನತ ತಂತ್ರಜ್ಞಾನ ಕೇಂದ್ರಕ್ಕೆ (ಸಿಎಟಿ) ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಖ್ಯಾತ ಪರಮಾಣು ವಿಜ್ಞಾನಿ ದಿವಂಗತ ರಾಜಾರಾಮಣ್ಣ ಉನ್ನತ ತಂತ್ರಜ್ಞಾನ ಕೇಂದ್ರ ಎಂಬುದಾಗಿ ಮರುನಾಮಕರಣ ಮಾಡಿದರು.

1998: ಲೋಕಸಭೆಯ ಉಪಾಧ್ಯಕ್ಷರಾಗಿ ಕಾಂಗ್ರೆಸ್ಸಿನ ಪಿ.ಎಂ. ಸಯೀದ್ ಅವಿರೋಧ ಆಯ್ಕೆಯಾದರು.

1988: ನ್ಯೂಜಿಲ್ಯಾಂಡಿನ ವಿರುದ್ಧ ಬರೋಡದಲ್ಲಿ ನಡೆದ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಮಹಮ್ಮದ್ ಅಜರ್ದುದೀನ್ ಅವರು ಕೇವಲ 62 ಚೆಂಡೆಸೆತಗಳಿಗೆ 100 ರನ್ ಸೇರಿಸಿ ಭಾರತದ ಅತ್ಯಂತ ವೇಗದ ಶತಕ ಸಿಡಿಸಿದರು.

1931: ಪಿ.ಸಿ. ಮಹಾಲನಾವೊಬಿಸ್ ಅವರು ಭಾರತೀಯ ಸಾಂಸ್ಥಿಕ ಸಂಸ್ಥೆಯನ್ನು (ಇಂಡಿಯನ್ ಸ್ಟಾಟಿಸ್ಟಿಕಲ್ ಇನ್ಸ್ಟಿಟ್ಯೂಟ್) ಕಲ್ಕತ್ತಾದಲ್ಲಿ (ಈಗಿನ ಕೋಲ್ಕತ್ತ) ಸ್ಥಾಪಿಸಿದರು. 

1929: ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಬ್ರಿಟಿಷ್ ಪೊಲೀಸ್ ಅಧಿಕಾರಿ ಜೆ.ಪಿ. ಸ್ಯಾಂಡರ್ಸ್ ನನ್ನು ಗುಂಡಿಟ್ಟು ಕೊಲೆಗೈದರು. ಈ ಅಧಿಕಾರಿಯನ್ನು ಲಾಲಾ ಲಜಪತರಾಯ್ ಅವರ ಮೇಲೆ ಲಾಠಿ ಪ್ರಹಾರ ಮಾಡಲು ಆದೇಶಿಸಿದ ಸ್ಕಾಟ್ ಎಂಬುದಾಗಿ ಭಗತ್ಸಿಂಗ್ ತಪ್ಪಾಗಿ ಭಾವಿಸಿದ್ದರು.

1903: ಒರಿವಿಲ್ ರೈಟ್ ಅವರು ಇಂಧನ ಚಾಲಿತ ವಿಮಾನದ (ಏರ್ ಪ್ಲೇನ್) ಮೊದಲ ಹಾರಾಟವನ್ನು ದಾಖಲಿಸಿದರು. ಉತ್ತರ ಕರೋಲಿನಾದ ಕಿಟ್ಟಿ ಹಾಕ್ ಸಮೀಪ 12 ಸೆಕೆಂಡುಗಳ ಕಾಲ ಬಾನಿನಲ್ಲಿ ಹಾರಿದ ಈ ವಿಮಾನ 120 ಅಡಿಗಳಷ್ಟು ದೂರ ಚಲಿಸಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement